ಬೆಂಗಳೂರು; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತಿತರರು ನಿರ್ದೇಶಕರಾಗಿರುವ ಕಂಪನಿಯು ಪ್ರಕಾಶಿಸುತ್ತಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸೇರಿದಂತೆ ಕರ್ನಾಟಕದ ರಾಜ್ಯ, ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳು ಮತ್ತು ಟಿ ವಿ ವಾಹಿನಿಗಳಿಗೆ 2023-24, 2024-25 ಮತ್ತು 2025-26ರ ಜುಲೈವರೆಗೆ ನೀಡಿದ್ದ ಜಾಹೀರಾತು ಮತ್ತು ಪ್ರಚಾರ ಸಂಬಂಧ ಅಂದಾಜು 1,076.27 ಕೋಟಿ ರು ವೆಚ್ಚ ಮಾಡಿದೆ.
ಸರ್ಕಾರಿ ಶಾಲೆಗಳಿಗೆ ಶೌಚಾಲಯ, ಕಂಪ್ಯೂಟರ್ ಲ್ಯಾಬ್, ಡಿಜಿಟಲ್ ಲೈಬ್ರರಿ, ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಗ್ರಂಥಾಲಯಗಳ ಮೇಲ್ವಿಚಾರಕರಿಗೆ ನಿಯಮಿತವಾಗಿ ವೇತನ ಮತ್ತು ಅನುದಾನ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರವು, ತನ್ನ ಸಾಧನೆ, ಕಾರ್ಯಕ್ರಮಗಳನ್ನು ದಿನಪತ್ರಿಕೆ, ಟಿ ವಿ ವಾಹಿನಿಗಳಲ್ಲಿ ಪ್ರಚಾರ ಮಾಡಲು ಅಂದಾಜು 1,076.27 ಕೋಟಿಯಷ್ಟು ವೆಚ್ಚ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಅಲ್ಲದೇ 2018-19ರಿಂದ 2022-23ರವರೆಗೆ ಜಾಹೀರಾತುಗಳಿಗೆ ಮಾಡಿದ್ದ ವೆಚ್ಚವನ್ನೂ ಕಾಂಗ್ರೆಸ್ ಸರ್ಕಾರವು ಮೀರಿಸಿದೆ.
2025ರ ಆಗಸ್ಟ್‌ನಲ್ಲಿ ನಡೆದಿದ್ದ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯರಾದ ಡಾ ಧನಂಜಯ ಸರ್ಜಿ, ವಿಧಾನಸಭೆ ಸದಸ್ಯ ಸಿ ಕೆ ರಾಮಮೂರ್ತಿ ಮತ್ತು ವಿಧಾನ ಪರಿಷತ್ ಸದಸ್ಯ ಡಿ ಎಸ್ ಅರುಣ್ ಅವರು ಕೇಳಿದ್ದ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಉತ್ತರದಲ್ಲಿ ಈ ವಿವರಗಳಿವೆ.
ವಿಶೇಷವೆಂದರೇ ಕರ್ನಾಟಕದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಸರಣ ಸಂಖ್ಯೆಯ ಬಗ್ಗೆ ನಿಖರವಾದ ಮಾಹಿತಿ ಇಲ್ಲದಿದ್ದರೂ ಸಹ ಈ ಪತ್ರಿಕೆಗೆ 2023-24 ಮತ್ತು 2024-25ನೇ ಸಾಲಿನಲ್ಲಿ ಹಲವು ಬಾರಿ ಜಾಹೀರಾತು ನೀಡಿದೆ. ಆದರೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಜಾಹೀರಾತು ವೆಚ್ಚ ಪಾವತಿಸಿರುವ ಮೊತ್ತದ ವಿವರಗಳನ್ನು ಬಹಿರಂಗಪಡಿಸಿಲ್ಲ.
ಮತ್ತೊಂದು ವಿಶೇಷವೆಂದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024ರ ಫೆ.7ರಂದು ದೆಹಲಿ ಪ್ರವಾಸ ಮಾಡಿದ್ದನ್ನೂ ಸಹ ಟಿ ವಿ ವಾಹಿನಿಗಳು ನೇರ ಪ್ರಸಾರ ಮಾಡಿದ್ದವು. ಇದಕ್ಕೂ ಸಹ ಜಾಹೀರಾತಿನ ರೂಪದಲ್ಲಿ ಹಣ ಪಾವತಿಸಿತ್ತು. ಆದರೆ ಯಾವ್ಯಾವ ಟಿ ವಿ ವಾಹಿನಿಗಳಿಗೆ ಎಷ್ಟೆಷ್ಟು ಮೊತ್ತವನ್ನು ಪಾವತಿಸಿದೆ ಎಂಬ ವಿವರಗಳನ್ನು ಸಿದ್ದರಾಮಯ್ಯ ಅವರು ಬಹಿರಂಗಪಡಿಸಿಲ್ಲ.
ದೇವರಾಜ ಅರಸು ಅವರಂತೆ ಇಂದು ಮುಖ್ಯಮಂತ್ರಿಗಳು ಜಾರಿಗೆ ತಂದಿರುವ ಯೋಜನೆಗಳ ಕುರಿತು ಟಿ ವಿ ವಾಹಿನಿಗಳಲ್ಲಿ ವಿಶೇಷ ಕಾರ್ಯಕ್ರಮವು ಜಾಹೀರಾತು ರೂಪದಲ್ಲಿ ಪ್ರಸಾರವಾಗಿತ್ತು. ಈ ವಿಶೇಷ ಕಾರ್ಯಕ್ರಮಕ್ಕೆ ಎಷ್ಟು ವೆಚ್ಚವಾಗಿದೆ ಮತ್ತು ಯಾವ್ಯಾವ ಟಿ ವಿ ವಾಹಿನಿಗಳಿಗೆ ಎಷ್ಟೆಷ್ಟು ಮೊತ್ತ ಪಾವತಿಸಲಾಗಿದೆ ಎಂಬ ವಿವರಗಳನ್ನು ಬಹಿರಂಗಪಡಿಸಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದ ಕಾರ್ಯಕ್ರಮಗಳ ಕುರಿತು ಪತ್ರಿಕೆಗಳಲ್ಲಿ ಪುರವಣಿ ತರಲಾಗಿತ್ತು. ಇದರ ವಿವರಗಳನ್ನೂ ಒದಗಿಸಿಲ್ಲ. ಹಾಗೆಯೇ ಬಜೆಟ್ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿದ್ದ ಟಿ ವಿ ವಾಹಿನಿಗಳಿಗೆ ಜಾಹೀರಾತು ರೂಪದಲ್ಲಿ ಹಣವನ್ನು ಪಾವತಿಸಿತ್ತು. ಇದರ ವಿವರಗಳನ್ನೂ ಉತ್ತರದಲ್ಲಿ ಒದಗಿಸಿಲ್ಲ.
ಕಳೆದ 2 ವರ್ಷಗಳಲ್ಲಿ ಸರ್ಕಾರವು ವಿವಿಧ ಇಲಾಖೆಗಳ ಮೂಲಕ ಜಾರಿಗೆ ತಂದಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ವಿವಿಧ ಸಮೂಹ ಮಾಧ್ಯಮಗಳ ಮೂಲಕ ಜಾಹೀರಾತು ಪ್ರಚಾರಕ್ಕೆ ಖರ್ಚು ಮಾಡಿರುವ ವಿವರವು ‘ದಿ ಫೈಲ್’ ಗೆ ಲಭ್ಯವಾಗಿವೆ.
2023-24ರಲ್ಲಿ 270 ಕೋಟಿ 64 ಲಕ್ಷ ರು ಖರ್ಚಾಗಿದ್ದರೇ 2024-25ನೇ ಸಾಲಿನಲ್ಲಿ 179 ಕೋಟಿ 45 ಲಕ್ಷ ರುಪಾಯಿ ವೆಚ್ಚವಾಗಿತ್ತು. 2025-26ರ ಜುಲೈವರೆಗೆ 83 ಕೋಟಿ 49 ಲಕ್ಷ ರು ಖರ್ಚಾಗಿತ್ತು.

ಒಟ್ಟಾರೆ ಕಳೆದ 3 ವರ್ಷಗಳಲ್ಲಿ 533 ಕೋಟಿ 58 ಲಕ್ಷ 95 ಸಾವಿರ ರು ಗಳನ್ನು ಜಾಹೀರಾತು ಮತ್ತು ಪ್ರಚಾರಕ್ಕೆ ಖರ್ಚು ಮಾಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಉತ್ತರದಿಂದ ಗೊತ್ತಾಗಿದೆ.
ಕಳೆದ 2 ಬಜೆಟ್‌ಗಳಲ್ಲಿ ಜಾಹೀರಾತು ಮತ್ತು ಪ್ರಚಾರ ಕಾರ್ಯಕ್ರಮಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ 2023-24ರಲ್ಲಿ 223.75 ಕೋಟಿ ರು ಬಿಡುಗಡೆ ಮಾಡಲಾಗಿತ್ತು. ಈ ಪೈಕಿ 221.11 ಕೋಟಿ ರು ವೆಚ್ಚವಾಗಿದೆ.

2024-25ನೇ ಸಾಲಿನಲ್ಲಿ 200.42 ಕೋಟಿ ರು ಬಿಡುಗಡೆಯಾಗಿತ್ತು. ಈ ಪೈಕಿ 200 ಕೋಟಿಯೂ ಖರ್ಚಾಗಿರುವುದು ತಿಳಿದು ಬಂದಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಕಳೆದ 2 ವರ್ಷಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಪ್ರಚಾರ ಕಾರ್ಯಕ್ರಮಗಳ ಮೂಲಕ ಮಾಹಿತಿ ಒದಗಿಸಲು ಹಾಗೂ ಇಲಾಖೆಯ ಇತರ ಕಾರ್ಯಕ್ರಮಗಳಿಗಾಗಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ಲೆಕ್ಕ ಶೀರ್ಷಿಕೆಗೆ ಅಡಿಯಲ್ಲಿ ಈ ಅನುದಾನ ಬಿಡುಗಡೆಯಾಗಿತ್ತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ 2023-24ರಲ್ಲಿ 197 ಕೋಟಿ 33 ಲಕ್ಷ 18 ಸಾವಿರ, 2024-25ರಲ್ಲಿ 129 ಕೋಟಿ 13 ಲಕ್ಷ 60 ಸಾವಿರ, 2025-26ರಲ್ಲಿ 41 ಕೋಟಿ 68 ಲಕ್ಷ 27 ಸಾವಿರ ರು ಸೇರಿ ಒಟ್ಟಾರೆ 368 ಕೋಟಿ 15 ಲಕ್ಷ 5 ಸಾವಿರ ರು ವೆಚ್ಚ ಮಾಡಿದೆ. ಅರಣ್ಯ ಮತ್ತು ಪರಿಸರ ಜೀವಿಶಾಸ್ತ್ರ ಇಲಾಖೆಯು 1.75 ಕೋಟಿ ರು., ಬೃಹತ್ ಬೆಂಗಳೂರು ಮಹಾನಗರಪಾಲಿಕೆ, 13.15 ಕೋಟಿ ರು ಖರ್ಚಾಗಿರುವುದು ಗೊತ್ತಾಗಿದೆ.
ಕಾರ್ಮಿಕ ಇಲಾಖೆ 3.72 ಕೋಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 6.10 ಕೋಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, 6.19 ಕೋಟಿ, ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ,1.18 ಕೋಟಿ 79 ಲಕ್ಷ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ, 3.77 ಕೋಟಿ, ಶಿಕ್ಷಣ ಇಲಾಖೆ, 3.00 ಲಕ್ಷ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, 19.40 ಕೋಟಿ,

ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ, 1.70 ಕೋಟಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, 26 ಲಕ್ಷ, ಇಂಧನ ಇಲಾಖೆ, 6.84 ಕೋಟಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, 1.57 ಕೋಟಿ, ಕರ್ನಾಟಕ ಗೃಹ ಮಂಡಳಿ, 1.03 ಕೋಟಿ, ಸಣ್ಣ ನೀರಾವರಿ ಇಲಾಖೆ, 1.88 ಕೋಟಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 1.51 ಕೋಟಿ ರು ವೆಚ್ಚ ಮಾಡಿದೆ.
ಸಮಾಜ ಕಲ್ಯಾಣ ಇಲಾಖೆ, 7.45 ಕೋಟಿ, ಸರ್ಕಾರಿ ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆ, 32 ಲಕ್ಷ, ಡಾ ಅಂಬೇಡ್ಕರ್ ಅಭಿವೃದ್ಧಿ ನಿಗಮ, 1.21 ಕೋಟಿ,

ರಾಜ್ಯ ಚುನಾವಣೆ ಆಯೋಗ, 28.57 ಲಕ್ಷ , ಬೆಂಗಳೂರು ಮೆಟ್ರೋ ರೈಲು ನಿಗಮ, 26.00 ಲಕ್ಷ, ಕರ್ನಾಟಕ ಒಕ್ಕಲಿಗರ ಅಭಿವೃದ್ದಿ ಮಂಡಳಿ 2.50 ಕೋಟಿ, ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮ, 1.76 ಕೋಟಿ, ಗೃಹ ಇಲಾಖೆ 18.37 ಲಕ್ಷ, ಕೇಂದ್ರ ಪರಿಹಾರ ಸಮಿತಿ 4.30 ಕೋಟಿ, ಪಶು ವೈದ್ಯಕೀಯ ಪಶುಪಾಲನಾ ಇಲಾಖೆ, 46.1 ಲಕ್ಷ ಪ್ರವಾಸೋದ್ಯಮ ಇಲಾಖೆ, 28.50 ಲಕ್ಷ, ಧಾರ್ಮಿಕ ಮತ್ತು ದತ್ತಿ ಇಲಾಖೆ 49.33 ಲಕ್ಷ, ಮಾನವ ಹಕ್ಕುಗಳ ಆಯೋಗ, 10.83 ಲಕ್ಷ ರು ಖರ್ಚಾಗಿದೆ.
ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ 1.01 ಕೋಟಿ, ರಾಜೀವ್ ಗಾಂಧಿ ವಸತಿ ನಿಗಮ 10.07 ಲಕ್ಷ, ಹಿರಿಯ ನಾಗರೀಕರ ಹಾಗೂ ಅಂಗವಿಕಲರ ಕಲ್ಯಾಣ ಇಲಾಖೆ 1.41 ಕೋಟಿ,

ಕರ್ನಾಟಕ ವಿಧಾನಸಭೆ, 18.39 ಲಕ್ಷ, ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿ, 47.87 ಲಕ್ಷ, ಕರ್ನಾಟಕ ಹಣಕಾಸು ನಿಗಮ, 3.32 ಲಕ್ಷ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2.14 ಕೋಟಿ, ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ನಿಗಮ, 3.93 ಕೋಟಿ, ಸಾರಿಗೆ ಇಲಾಖೆ, 47.29 ಕೋಟಿ, ಕರ್ನಾಟಕ ನಾವಿನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ, 48.02 ಲಕ್ಷ , ಕರ್ನಾಟಕ ಗ್ರಾಮೀಣ ಮೂಲ ಸೌಲಭ್ಯ ಅಭಿವೃದ್ದಿ ಇಲಾಖೆ ಯು 27 ಲಕ್ಷ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, 97.12 ಲಕ್ಷ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, 80.00 ಲಕ್ಷ, ಮರಾಠ ಸಮುದಾಯ ಅಭಿವೃದ್ಧಿ ಮಂಡಳಿ 3.8 ಲಕ್ಷ ವೆಚ್ಚ ಮಾಡಿದೆ.

ಕಾಲೇಜು ಶಿಕ್ಷಣ ಇಲಾಖೆ, 38 ಲಕ್ಷ, ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂವರ್ಧನೆ ಇಲಾಖೆ, 41 ಲಕ್ಷ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, 1.27 ಕೋಟಿ, ಕೈಮಗ್ಗ ಮತ್ತು ಜವಳಿ ನಿಗಮ, 10 ಲಕ್ಷ , ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, 95 ಲಕ್ಷ , ಕೃಷಿ ಇಲಾಖೆಯು 1.80 ಕೋಟಿ ರು ಖರ್ಚು ಮಾಡಿರುವುದು ತಿಳಿದು ಬಂದಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ, 85.65 ಲಕ್ಷ, ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್,1.92 ಕೋಟಿ, ಕಾವೇರಿ ಕರಕುಶಲ ಅಭಿವೃದ್ಧಿ ನಿಗಮ, 0.83 ಲಕ್ಷ, ಮೀನುಗಾರಿಕೆ ಇಲಾಖೆ 4.58 ಲಕ್ಷ ,

ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, 1.47 ಕೋಟಿ, ಡಾ ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ದಿ ನಿಗಮ, 9.17 ಲಕ್ಷ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, 6.62 ಲಕ್ಷ , ಕರ್ನಾಟಕ ನೀರಾವರಿ ನಿಗಮ, 64.3 ಲಕ್ಷ , ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, 28.48 ಲಕ್ಷ , ಕರ್ನಾಟಕ ಕೆರೆ ಅಭಿವೃದ್ಧಿ ಮತ್ತು ಸಂರಕ್ಷಣಾ ಪ್ರಾಧಿಕಾರ 20.77 ಲಕ್ಷ, ಕರ್ನಾಟಕ ಮಾನಸಿಕ ಆರೋಗ್ಯ ಕೇಂದ್ರ, 9.42 ಲಕ್ಷ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, 3.10 ಲಕ್ಷ, ನಗರಾಭಿವೃದ್ಧಿ ಇಲಾಖೆ 79.42 ಲಕ್ಷ ರು,ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ- 1.71 ಕೋಟಿ, ಆಯುಷ್ ಇಲಾಖೆ, 4.26 ಲಕ್ಷ ಖರ್ಚು ಮಾಡಿದೆ.

ಕಾವೇರಿ ನೀರಾವರಿ ನಿಗಮ, 49.35 ಲಕ್ಷ, ವೈದ್ಯಕೀಯ ಶಿಕ್ಷಣ ಇಲಾಖೆ, 82.78 ಲಕ್ಷ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, 22.91 ಲಕ್ಷ, ಕರ್ನಾಟಕ ವೀರಶೈವ ಅಭಿವೃದ್ಧಿ ಮಂಡಳಿ, 21 ಲಕ್ಷ, ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮ, 5 ಲಕ್ಷ, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮ, 2 ಕೋಟಿ, ಕಂದಾಯ ಇಲಾಖೆ 1.33 ಕೋಟಿ ರು ಮೊತ್ತದ ಜಾಹೀರಾತು ನೀಡಿದೆ.

2023-24ನೇ ಸಾಲಿನಲ್ಲಿ ರಾಜ್ಯಮಟ್ಟದ ಪತ್ರಿಕೆಗಳಿಗೆ 42 ಸಂಖ್ಯೆಯ ಜಾಹೀರಾತು ನೀಡಿತ್ತು. ಇದಕ್ಕಾಗಿ 25.78 ಕೋಟಿ ರು ಖರ್ಚಾಗಿತ್ತು. ಪ್ರಾದೇಶಿಕ ಪತ್ರಿಕೆಗಳಿಗೆ 31 ಸಂಖ್ಯೆಯ ಜಾಹೀರಾತು ನೀಡಿತ್ತು. ಇದಕ್ಕೆ 16.75 ಕೋಟಿ ರು, ಹಾಗೆಯೇ ಜಿಲ್ಲಾ ಪತ್ರಿಕೆಗಳಿಗೆ 31 ಸಂಖ್ಯೆಯ ಜಾಹೀರಾತುಗಳಿಗೆ 16.47 ಕೋಟಿ ರು ಸೇರಿ ಒಟ್ಟು 59 ಕೋಟಿ ರು ಖರ್ಚಾಗಿತ್ತು.

ಹಾಗೆಯೇ 2024-25ನೇ ಸಾಲಿನಲ್ಲಿ ರಾಜ್ಯಮಟ್ಟದ ಪತ್ರಿಕೆಗಳಿಗೆ 39 ಸಂಖ್ಯೆಯ ಜಾಹೀರಾತುಗಳಿಗೆ 10.28 ಕೋಟಿ ರು., ಪ್ರಾದೇಶಿಕ ಪತ್ರಿಕೆಗಳಿಗೆ 22 ಸಂಖ್ಯೆಯ ಜಾಹೀರಾತುಗಳಿಗೆ 8.10 ಕೋಟಿ ರು., ಜಿಲ್ಲಾ ಪತ್ರಿಕೆಗಳಿಗೆ 22 ಸಂಖ್ಯೆಯ ಜಾಹೀರಾತುಗಳಿಗೆ 8.71 ಕೋಟಿ ರುಪಾಯಿ ಸೇರಿದಂತೆ ಒಟ್ಟಾರೆ 27.09 ಕೋಟಿ ರು ವೆಚ್ಚ ಮಾಡಿತ್ತು.
ಈ ಎರಡೂ ವರ್ಷಗಳಲ್ಲಿ ರಾಜ್ಯ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ 187 ಸಂಖ್ಯೆಯ ಜಾಹೀರಾತುಗಳಿಗೆ 86.09 ಕೋಟಿ ರು ಖರ್ಚು ಮಾಡಿತ್ತು.
2023-24ನೇ ಸಾಲಿನಲ್ಲಿ 21 ಟಿ ವಿ ವಾಹಿನಿಗಳಲ್ಲಿ 33 ಸಂಖ್ಯೆಯಲ್ಲಿ ಜಾಹೀರಾತು ನೀಡಿತ್ತು, ಇದರಲ್ಲಿ ಸುದ್ದಿ ಮತ್ತು ಮನರಂಜನಾ ವಾಹಿನಿಗಳೂ ಇದ್ದವು. ಇದಕ್ಕಾಗಿ 20.25 ಕೋಟಿ ರು ವೆಚ್ಚವಾಗಿತ್ತು.

ಹಾಗೆಯೇ 2024-25ನೇ ಸಾಲಿನಲ್ಲಿ 14 ಟಿ ವಿ ವಾಹಿನಿಗಳಿಗೆ 24 ಸಂಖ್ಯೆಯ ಜಾಹೀರಾತು ನೀಡಲಾಗಿತ್ತು. ಇದಕ್ಕಾಗಿ 16.41 ಕೋಟಿ ರು ವೆಚ್ಚವಾಗಿದೆ ಎಂದು ಉತ್ತರದಿಂದ ತಿಳಿದು ಬಂದಿದೆ.
ಶಕ್ತಿ, ಅನ್ನಭಾಗ್ಯ ಮತ್ತು ಗೃಹ ಜ್ಯೋತಿ ಯೋಜನೆ ಪ್ರಚಾರವೂ ಇದರಲ್ಲಿ ಸೇರಿತ್ತು. ಅಲ್ಲದೇ ಸರ್ಕಾರದ 100 ದಿವಸಗಳ ಸಾಧನೆ ಕುರಿತು ಪತ್ರಿಕಾ ಜಾಹೀರಾತು ನೀಡಿತ್ತು. ಸರ್ಕಾರದ ಯೋಜನೆಗಳ ಕುರಿತು ವಿಜಯ ಕರ್ನಾಟಕದಲ್ಲಿ ವಿಶೇಷ ಪುರವಣಿ ಪ್ರಕಟಿಸಿತ್ತು. ಆದರೆ ಇದಕ್ಕೆ ಎಷ್ಟು ವೆಚ್ಚ ಮಾಡಿತ್ತು ಎಂದು ಪ್ರತ್ಯೇಕವಾಗಿ ಒದಗಿಸಿಲ್ಲ.

ಅದೇ ರೀತಿ ಸರ್ಕಾರದ ಪ್ರಮುಖ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹ ಜ್ಯೋತಿ ಗೃಹಲಕ್ಷ್ಮಿ ಯೋಜನೆಗಳ ಕುರಿತು ವಿಶೇಷ ಪುರವಣಿಯನ್ನು 60;40ರ ಅನುಪಾತದಲ್ಲಿ ಪ್ರಕಟಿಸಲಾಗಿತ್ತು. ಈ 60;40ರ ಅನುಪಾತವೇನು ಎಂಬುದರ ಬಗ್ಗೆ ವಿವರಗಳನ್ನು ನೀಡಿಲ್ಲ.
ರಾಜ್ಯಮಟ್ಟದ ಜನತಾದರ್ಶನ ಕಾರ್ಯಕ್ರಮ, ರಾಜ್ಯ ಸರ್ಕಾರದ ಯೋಜನೆಗಳ ಪ್ರಮುಖ ದಿನಪತ್ರಿಕೆಗಳಲ್ಲಿ ವಿಶೇಷ ಪುರವಣಿ ಪ್ರಕಟಿಸಿತ್ತು. ಆದರೆ ಪತ್ರಿಕೆಗಳ ವಿವರ ಮತ್ತು ಇದಕ್ಕಾಗಿ ಮಾಡಿರುವ ವೆಚ್ಚವನ್ನು ಪತ್ರಿಕಾವಾರು ಒದಗಿಸಿಲ್ಲ.
ನ್ಯಾಷನಲ್ ಹೆರಾಲ್ಡ್‌ನಲ್ಲಿ ಜಾಹೀರಾತು- ಬಹಿರಂಗವಾದ ಮೊತ್ತದ ವಿವರ
ವಿಶೇಷವೆಂದರೇ ನ್ಯಾಷನಲ್ ಹೆರಾಲ್ಡ್ ಪತ್ರಿಕೆಲ್ಲಿ ಸರ್ಕಾರದ ಯೋಜನೆಗಳ ಕುರಿತು ಜಾಹೀರಾತು ನೀಡಿತ್ತು.

ಈ ಪತ್ರಿಕೆಗೆ ನೀಡಿದ್ದ ಜಾಹೀರಾತಿಗೆ ಆಗಿದ್ದ ವೆಚ್ಚದ ವಿವರಗಳನ್ನು ಒದಗಿಸಿಲ್ಲ. ಮತ್ತೊಂದು ವಿಶೇಷವೆಂದರೇ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಕನ್ನಡ ರಾಜ್ಯೋತ್ಸವ ಕುರಿತು ಜಾಹೀರಾತು ನೀಡಲಾಗಿತ್ತು. ಇದಕ್ಕೂ ಸಹ ಎಷ್ಟು ಮೊತ್ತ ಖರ್ಚಾಗಿದೆ ಎಂಬ ವಿವರಗಳನ್ನು ನೀಡಿಲ್ಲ.

ಔಟ್‌ಲುಕ್ ಪತ್ರಿಕೆಯಲ್ಲಿ ಸರ್ಕಾರದ ಯೋಜನೆಗಳ ಕುರಿತು ಪ್ರಕಟಣೆ ಹೊರಡಿಸಿತ್ತು. ಇದಕ್ಕೂ ಸಹ ವೆಚ್ಚದ ಮೊತ್ತವನ್ನು ಪ್ರತ್ಯೇಕವಾಗಿ ನೀಡಿಲ್ಲ. ಸರ್ಕಾರದ 6 ತಿಂಗಳ ಸಾಧನೆ, ಯೋಜನೆಗಳ ಕುರಿತು ಜಾಹೀರಾತನ್ನು ಪತ್ರಿಕೆಗಳಲ್ಲಿ ಬಿಡುಗಡೆ ಮಾಡಿತ್ತು. ಯಾವ್ಯಾವ ಪತ್ರಿಕೆಗಳಿಗೆ ಎಷ್ಟೆಷ್ಟು ಮೊತ್ತದ ಜಾಹೀರಾತುಗಳನ್ನು ನೀಡಲಾಗಿದೆ ಎಂಬ ವಿವರಗಳಿಲ್ಲ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಸರ್ಕಾರದ ಯೋಜನೆಗಳ ಕುರಿತು ವಿಶೇಷ ಪುರವಣಿ ಮತ್ತು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಇಂದಿರಾ ಗಾಂಧಿ ಜನ್ಮದಿನಾಚರಣೆ ಕುರಿತು ಜಾಹೀರಾತು ನೀಡಲಾಗಿತ್ತು. ಯುವ ನಿಧಿ ಯೋಜನೆ ಕುರಿತು ನ್ಯಾಷನಲ್ ಹೆರಾಲ್ಡ್ ಪತ್ರಿಕೆಗಳಲ್ಲಿ ಜಾಹೀರಾತು ನೀಡಿತ್ತು. ಗಣ ರಾಜ್ಯೋತ್ಸವ ಸಂವಿಧಾನ ಕುರಿತು ಮತ್ತು ಸರ್ಕಾರದ ಯೋಜನೆಗಳ ಕುರಿತು ವಿಶೇಷ ಪುರವಣಿಯನ್ನೂ ನ್ಯಾಷನಲ್ ಹೆರಾಲ್ಡ್ ಹೊರತಂದಿತ್ತು. ಅದರೆ ಎಷ್ಟು ಮೊತ್ತ ಎಂದು ಬಹಿರಂಗಪಡಿಸಿಲ್ಲ.
ಹಾಗೆಯೇ ಇದೇ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಕೃಷಿ ಇಲಾಖೆ ಸಾಧನೆಗಳ ಕುರಿತು ಜಾಹೀರಾತು ನೀಡಲಾಗಿದೆ. ಇದಕ್ಕಾಗಿ ಎಷ್ಟು ಮೊತ್ತ ವ್ಯಯಿಸಲಾಗಿದೆ ಎಂಬ ವಿವರಗಳನ್ನು ಬಹಿರಂಗಪಡಿಸಿಲ್ಲ.

ನನ್ನ ತೆರಿಗೆ ನನ್ನ ಹಕ್ಕು ಕುರಿತು, ಚಲೋ ದಿಲ್ಲಿ ಕುರಿತು ಪತ್ರಿಕಾ ಜಾಹೀರಾತು ನೀಡಲಾಗಿತ್ತು. ಇದರ ಮೊತ್ತವನ್ನೂ ಸಹ ಒದಗಿಸಿಲ್ಲ.
2024-25ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದ ಕಾರ್ಯಕ್ರಮಗಳ ಕುರಿತು ಪತ್ರಿಕೆಗಳಲ್ಲಿ ಪುರವಣಿ ತರಲಾಗಿತ್ತು. ಇದರಲ್ಲೂ ಸಹ ಎಷ್ಟು ಮೊತ್ತ ಯಾವ್ಯಾವ ಪತ್ರಿಕೆಗಳಿಗೆ ನೀಡಲಾಗಿದೆ ಎಂಬ ಪ್ರತ್ಯೇಕ ವಿವರಗಳಿಲ್ಲ. 2024-25ನೇ ಸಾಲಿನಲ್ಲಿಯೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸರ್ಕಾರದ ಯೋಜನೆಗಳ ಕಾರ್ಯಕ್ರಮಗಳ ಕುರಿತು ಪುರವಣಿ ತರಲಾಗಿತ್ತು. ಇದರ ವೆಚ್ಚವನ್ನೂ ನೀಡಿಲ್ಲ.
ಟಿ ವಿ ವಾಹಿನಿಗಳಲ್ಲೂ ಜಾಹೀರಾತು ನೀಡಿತ್ತು. ಗೃಹಲಕ್ಷ್ಮಿ ಯೋಜನೆ ಚಾಲನೆ ಕಾರ್ಯಕ್ರಮ ನೇರ ಪ್ರಸಾರಕ್ಕೆ ಜಾಹೀರಾತು ನೀಡಿತ್ತು. ಆದರೆ ಯಾವ್ಯಾವ ಟಿ ವಿ ವಾಹಿನಿಗಳಿಗೆ ಎಷ್ಟೆಷು ಮೊತ್ತವನ್ನು ನೀಡಲಾಗಿದೆ ಎಂಬ ವಿವರಗಳನ್ನು ಬಹಿರಂಗಪಡಿಸಿಲ್ಲ. ನ್ಯೂಸ್ ಫಸ್ಟ್, ನ್ಯೂಸ್ 18 ಕನ್ನಡ ವಾಹಿನಿಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ಹಬ್ಬ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ಮತ್ತು ರೈಸಿಂಗ್ ಕರ್ನಾಟಕಕ್ಕೆ ಪ್ರಾಯೋಜನೆ ನೀಡಿತ್ತು. ಸುವರ್ಣ ನ್ಯೂಸ್ ವಾಹಿನಿಯಲ್ಲಿ ಸರ್ಕಾರದ ಯೋಜನೆಗಳ ಕುರಿತು ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿತ್ತು. ಇದರ ವೆಚ್ಚವನ್ನು ನೀಡಿಲ್ಲ.

ಮತ್ತೊಂದು ವಿಶೇಷವೆಂದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024ರ ಫೆ.7ರಂದು ದೆಹಲಿ ಪ್ರವಾಸ ಕೈಗೊಂಡಿದ್ದನ್ನೂ ನೇರ ಪ್ರಸಾರ ಮಾಡಿತ್ತು. ಇದಕ್ಕೂ ಎಷ್ಟು ವೆಚ್ಚವಾಗಿದೆ ಎಂಬ ಇವವಿವರಗಳನ್ನು ಬಹಿರಂಗಪಡಿಸಿಲ್ಲ.

ರಿಪಬ್ಲಿಕ್ ಟಿ ವಿ ಯಲ್ಲಿ ನಿಸಾರ್ ಅಹ್ಮದ್ ಅವರ ಸಂದರ್ಶನ ಪ್ರಸಾರವಾಗಿತ್ತು. ಇದಕ್ಕೂ ಸಹ ಸರ್ಕಾರವೇ ಜಾಹೀರಾತು ರೂಪದಲ್ಲಿ ಹಣ ಪಾವತಿಸಿತ್ತು. ಆದರೆ ವೆಚ್ಚದ ವವಿರಗಳನ್ನು ನೀಡಿಲ್ಲ. ಆದರೆ ನಿಸಾರ್ ಅಹ್ಮದ್ ಅವರು ಯಾರು ಎಂಬ ವಿವರಗಳನ್ನೂ ನೀಡಿಲ್ಲ. 2024ರ ಫೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್ ಕುರಿತು 30 ನಿಮಿಷದ ಅವಧಿಯ ಎರಡು ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗಿದ್ದವು. ಇದಕ್ಕೂ ಸಹ ಹಣ ಪಾವತಿಸಿದ್ದರ ವಿವರಗಳಿಲ್ಲ.

2024-25ನೇ ಸಾಲಿನಲ್ಲಿ ಸರ್ಕಾರದ ಯೋಜನೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 30 ನಿಮಿಷ ಅವಧಿಯ ವಿಶೇಷ ಸಂದರ್ಶನವೂ ಜಾಹೀರಾತಿನ ರೂಪದಲ್ಲಿ ಪ್ರಸಾರವಾಗಿತ್ತು.

ವಿಶೇಷವೆಂದರೇ ಅಂದು ದೇವರಾಜ ಅರಸು ಅವರಂತೆ ಇಂದು ಮುಖ್ಯಮಂತ್ರಿಗಳು ಜಾರಿಗೆ ತಂದಿರುವ ಯೋಜನೆಗಳ ಕುರಿತು ಟಿ ವಿ ವಾಹಿನಿಗಳಲ್ಲಿ ವಿಶೇಷ ಕಾರ್ಯಕ್ರಮವು ಪ್ರಸಾರವಾಗಿತ್ತು. ಈ ವಿಶೇಷ ಕಾರ್ಯಕ್ರಮಕ್ಕೆ ಎಷ್ಟು ವೆಚ್ಚವಾಗಿದೆ ಮತ್ತು ಯಾವ್ಯಾವ ಟಿ ವಿ ವಾಹಿನಿಗಳಿಗೆ ಎಷ್ಟೆಷ್ಟು ಮೊತ್ತ ಪಾವತಿಸಲಾಗಿದೆ ಎಂಬ ವಿವರಗಳನ್ನು ಬಹಿರಂಗಪಡಿಸಿಲ್ಲ.
2018-19 ರಿಂದ 2022-23ನೇ ಸಾಲಿನವರೆಗೆ ನೀಡಿದ್ದ ಜಾಹೀರಾತುಗಳಿಗೆ ಸರ್ಕಾರವು ಒಟ್ಟಾರೆ 404.35 ಕೋಟಿ ರು ಖರ್ಚು ಮಾಡಿತ್ತು.
2018-19ರಲ್ಲಿ 37 ಕೋಟಿ, 2019-20ರಲ್ಲಿ 36 ಕೋಟಿ, 2020-21ರಲ್ಲಿ 111.15 ಕೋಟಿ ರು, 2022-23ರಲ್ಲಿ 134.35 ಕೋಟಿ ರು ವೆಚ್ಚವಾಗಿತ್ತು ಎಂದು ಸಿದ್ದರಾಮಯ್ಯ ಅವರು 2025ರ ಮಾರ್ಚ್‌ನಲ್ಲಿ ನಡೆದಿದ್ದ ವಿಧಾನ ಮಂಡಲ ಅಧಿವೇಶನದಲ್ಲಿ ಉತ್ತರ ನೀಡಿದ್ದರು.

2022-23ರಲ್ಲಿ 140, 2023-24ರಲ್ಲಿ 67 ಸಂಖ್ಯೆಯಲ್ಲಿ ಸಂಖ್ಯೆಯಲ್ಲಿ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಜಾಹೀರಾತು ನೀಡಿತ್ತು. 2022-23ರಲ್ಲಿ 69.40 ಕೋಟಿ, 2023-24ರಲ್ಲಿ 50.25 ಕೋಟಿ ರು ವೆಚ್ಚವಾಗಿತ್ತು ಎಂದು ಸಿದ್ದರಾಮಯ್ಯ ಅವರು 2025ರ ಮಾರ್ಚ್‌ನಲ್ಲಿ ವಿಧಾನ ಪರಿಷತ್‌ಗೆ ಉತ್ತರ ಒದಗಿಸಿದ್ದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಜಾಹೀರಾತಿಗಾಗಿ ಅಪಾರ ಪ್ರಮಾಣದಲ್ಲಿ ಖರ್ಚು ಮಾಡಿತ್ತು. ಕೋವಿಡ್ ಸಂದರ್ಭದಲ್ಲೂ 11 ಕೋಟಿ ರು ವೆಚ್ಚ ಮಾಡಿತ್ತು.
ಕೋವಿಡ್ ಸಂಬಂಧ ಹಿಂದಿನ ಬಿಜೆಪಿ ಸರ್ಕಾರವು ನೀಡಿದ್ದ ಜಾಹೀರಾತಿನಲ್ಲಿ ಸಂಘ ಪರಿವಾರದ ಮುಖವಾಣಿ ಎಂಬಂತಿರುವ ಹೊಸದಿಗಂತ ಪತ್ರಿಕೆಗೆ ಸಿಂಹಪಾಲಿತ್ತು.
ಕೋವಿಡ್ ಜಾಹೀರಾತು; 1. 60 ಕೋಟಿ ವೆಚ್ಚದಲ್ಲಿ ಹೊಸದಿಗಂತಕ್ಕೆ ಸಿಂಹಪಾಲು
ಮೋದಿ ಹುಟ್ಟು ಹಬ್ಬಕ್ಕೂ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾಹೀರಾತು ನೀಡಿತ್ತು. ಅಲ್ಲದೇ ವೆಚ್ಚದ ಮಾಹಿತಿಯನ್ನು ಮುಚ್ಚಿಟ್ಟಿತ್ತು.
ಮೋದಿ ಹುಟ್ಟುಹಬ್ಬದ ಪ್ರಾಯೋಜಿತ ಪುರವಣಿಯ 44.85 ಲಕ್ಷ ರು .ವೆಚ್ಚ ಮಾಹಿತಿ ಮುಚ್ಚಿಟ್ಟರೇಕೆ?
ಕೋವಿಡ್ ಪರಿಹಾರ ನೀಡಲು ಚೌಕಾಸಿ ಮಾಡಿದ್ದ ಬಿಜೆಪಿ ಸರ್ಕಾರವು ತಮಿಳುನಾಡಿನ ರಾಜಕೀಯ ವಿಶ್ಲೇಷಣೆಗೆ 25 ಲಕ್ಷ ರುಪಾಯಿಗಳನ್ನು ಖರ್ಚು ಮಾಡಿತ್ತು.
ಕೋವಿಡ್ ಪರಿಹಾರ ನೀಡಲು ಚೌಕಾಸಿ, ತಮಿಳುನಾಡಿನ ರಾಜಕೀಯ ವಿಶ್ಲೇಷಣೆಗೆ 25 ಲಕ್ಷ
2 ವರ್ಷದ ಸಾಧನೆ ಬಿಂಬಿಸಲು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 7.96 ಕೋಟಿ ರುಪಾಯಿ ಮತ್ತು ಜಾಹೀರಾತಿಗೆ 6.62 ಕೋಟಿ ರು ವೆಚ್ಚ ಮಾಡಿತ್ತು.
2 ವರ್ಷದ ಸಾಧನೆ ಬಿಂಬಿಸಲು 7.96 ಕೋಟಿ, ಜಾಹೀರಾತಿಗೆ 6.62 ಕೋಟಿ ವೆಚ್ಚ
ಯಡಿಯೂರಪ್ಪ ಅವರ ನಂತರ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಆರೇ ಆರು ತಿಂಗಳಲ್ಲಿ ಸರ್ಕಾರದ ಸಾಧನೆ ಬಿಂಬಿಸಲು 26.84 ಕೋಟಿ ರು ವೆಚ್ಚ ಮಾಡಿದ್ದರು.
ಸರ್ಕಾರದ ಸಾಧನೆ ಬಿಂಬಿಸಲು ಆರೇ ಆರು ತಿಂಗಳಲ್ಲಿ ಜಾಹೀರಾತಿಗೆ 26.84 ಕೋಟಿ ವೆಚ್ಚ
ಅನುಭವ ಮಂಟಪದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ಭಾಷಣ ಮಾಡಿದ್ದನ್ನು ನೇರಪ್ರಸಾರ ಮಾಡಿದ್ದಕ್ಕೂ 42.26 ಲಕ್ಷ ರು ಖರ್ಚು ಮಾಡಿತ್ತು.
ಬಜೆಟ್ ಕುರಿತು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಸಂವಾದ ನಡೆಸಿದ್ದ ಸುದ್ದಿ ವಾಹಿನಿಗಳಿಗೂ 38.97 ಲಕ್ಷ ರು ಪಾವತಿಸಿತ್ತು.
ಬಜೆಟ್; ಸಿ ಎಂ ಜತೆ ಸಂವಾದಕ್ಕೂ ಸುದ್ದಿವಾಹಿನಿಗಳಿಗೆ 38.97 ಲಕ್ಷ ರು ಪಾವತಿ
ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಆರಂಭದಲ್ಲಿ ಬರಗಾಲ ಎದುರಾಗಿತ್ತು. ಅಂತಹ ಸಂದರ್ಭದಲ್ಲೂ 18.50 ಕೋಟಿ ರು.ಗಳನ್ನು ಜಾಹೀರಾತಿನ ರೂಪದಲ್ಲಿ ಖರ್ಚು ಮಾಡಿದ್ದರು.
ಹಿಂದಿನ ಬಿಜೆಪಿ ಮತ್ತು ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾಹೀರಾತುಗಳಿಗಾಗಿ ಮಾಡಿದ್ದ ವೆಚ್ಚದ ಕುರಿತು ‘ದಿ ಫೈಲ್’ ಸರಣಿ ವರದಿಗಳನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.





