ಅನುಭವಮಂಟಪ ; ಸಿಎಂ ಭಾಷಣದ ನೇರಪ್ರಸಾರಕ್ಕೆ 42.26 ಲಕ್ಷ ರು. ವೆಚ್ಚ

ಬೆಂಗಳೂರು; ಬೀದರ್‌ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನಡೆದಿದ್ದ ನೂತನ ಅನುಭವ ಮಂಟಪ ನಿರ್ಮಾಣ ಮತ್ತು ಇನ್ನಿತರೆ ಪೂಜಾ ಕಾರ್ಯುಕ್ರಮಗಳಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳ ಭಾಷಣವನ್ನು 30 ನಿಮಿಷ ಅವಧಿಯ ನೇರ ಪ್ರಸಾರಕ್ಕೆ ಬಿಜೆಪಿ ಸರ್ಕಾರವು ಒಟ್ಟು 42.26 ಲಕ್ಷ ರು. ಖರ್ಚು ಮಾಡಿತ್ತು. ಮುಖ್ಯಮಂತ್ರಿಗಳ ಭಾಷಣದ ನೇರ ಪ್ರಸಾರಕ್ಕೂ ಜಾಹೀರಾತು ರೂಪದಲ್ಲಿ ಲಕ್ಷಾಂತರ ರುಪಾಯಿ ವೆಚ್ಚ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

2021ರ ಜನವರಿ 6ರಂದು ಬೀದರ್‌ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಮತ್ತು ಇನ್ನಿತರೆ ಭೂಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದೇ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಷಣವನ್ನು 30 ನಿಮಿಷಗಳ ಕಾಲ ಸುದ್ದಿ ವಾಹಿನಿಗಳು ನೇರ ಪ್ರಸಾರ ಮಾಡಿದ್ದವು. ಇದಕ್ಕಾಗಿ ಒಟ್ಟು 42.26 ಲಕ್ಷ ರು.ಗಳನ್ನು ಸುದ್ದಿವಾಹಿನಿಗಳಿಗೆ ಪಾವತಿಸಿರುವುದು ತಿಳಿದು ಬಂದಿದೆ.

ಸುದ್ದಿವಾಹಿನಿವಾರು ವೆಚ್ಚದ ವಿವರ

ಟಿ ವಿ 9 ಕನ್ನಡ – ( ಪ್ರತಿ ಸೆಕೆಂಡಿಗೆ 4,400 ) – 7, 92, 000 ರು.

ಸುವರ್ಣ ನ್ಯೂಸ್‌ ( 2,100 ) 3, 78, 000 ರು.

ಪಬ್ಲಿಕ್‌ ಟಿ ವಿ ( 3,250 ) 5, 85, 000 ರು.

ನ್ಯೂಸ್‌ 18 ( 2,300) – 4, 14, 000 ರು.

ಬಿ ಟಿ ವಿ ನ್ಯೂಸ್‌ ( 2,000 ) 3, 60, 000 ರು.

ಪ್ರಜಾ ಟಿ ವಿ ( 1,600 ) 2, 88, 000 ರು.

ಕಸ್ತೂರಿ ನ್ಯೂಸ್‌ ( 1,600 ) 2, 88, 000 ರು.

ರಾಜ್‌ ನ್ಯೂಸ್‌ ( 1,500) – 2, 70, 000 ರು.

ದಿಗ್ವಿಜಯ್‌ ಟಿ ವಿ ( 2,000 ) – 3, 60, 000 ರು.

ಟಿ ವಿ 5 ಕನ್ನಡ ( 1,500)- 2, 70, 000 ರು.

ಪವರ್‌ ಟಿ ವಿ ( 1,500- 15 ನಿಮಿಷ) – 1, 35, 000

ಜಿ ಎಸ್‌ ಟಿ ವೆಚ್ಚವೂ ಸೇರಿ ಒಟ್ಟು 48, 85, 200 ರು.ಗಳು ವೆಚ್ಚವಾಗಬಹುದೆಂದು ಅಂದಾಜಿಸಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕಡೆಯಲ್ಲಿ 42,26,760 ರು.ಗಳನ್ನು ಪಾವತಿಸಲು ಮಂಜೂರಾತಿ ನೀಡಿತ್ತು ಎಂದು ತಿಳಿದು ಬಂದಿದೆ.

ಅಲ್ಲದೆ ಜನ ಸಾಮಾನ್ಯರ ಕಲ್ಯಾಣಕ್ಕಾಗಿ ರೂಪಿಸಿದ್ದ ಯೋಜನೆಗಳ ಸಮಗ್ರ ಚಿತ್ರಣವನ್ನೊಳಗೊಂಡ ಮತ್ತು ಕೋವಿಡ್‌ ನಿಯಂತ್ರಣಕ್ಕೆ ಕೈಗೊಂಡಿದ್ದಕ್ರಮಗಳ ಕುರಿತು 15ರಿಂದ 30 ನಿಮಿಷದ ಕಾರ್ಯಕ್ರಮ ಪ್ರಸಾರ ಮಾಡಿರುವ ಟಿ ವಿ ಚಾನಲ್‌ಗಳಿಗೆ ರಾಜ್ಯ ಬಿಜೆಪಿ ಸರ್ಕಾರವು 57. 02 ಲಕ್ಷ ರು.ಗಳನ್ನು ವೆಚ್ಚ ಮಾಡಿತ್ತು.

ರಾಜ್ಯ ಬಿಜೆಪಿ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ಪತ್ರಿಕೆಗಳ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು.ಗಳನ್ನು ವೆಚ್ಚ ಮಾಡಿತ್ತು. ಅಮಿತ್‌ ಶಾ ಕಾರ್ಯಕ್ರಮಗಳ ಜಾಹೀರಾತಿಗೆ 89 ಲಕ್ಷ ರು. ಖರ್ಚು ಮಾಡಿದ್ದನ್ನು ಸ್ಮರಿಸಬಹುದು.

ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಹಮ್ಮಿಕೊಂಡಿರುವ ಯೋಜನೆ, ಕಾರ್ಯಕ್ರಮಗಳ ಸಮಗ್ರ ಚಿತ್ರಣವನ್ನು ಬಿಂಬಿಸುವ ನಾಲ್ಕು ಪುಟಗಳ ಪ್ರಾಯೋಜಿತ ಪುರವಣಿಗಾಗಿ 2020ರಲ್ಲಿ ಒಟ್ಟು 1.60 ಕೋಟಿ ರು.ಗಳನ್ನು ವೆಚ್ಚ ಮಾಡಿದೆ. ಈ ಪೈಕಿ ಹೊಸ ದಿಗಂತ ಪತ್ರಿಕೆ ಸಿಂಹಪಾಲು ಪಡೆದಿದ್ದು, ಉಳಿದೆಲ್ಲ ಪತ್ರಿಕೆಗಳಿಗಿಂತ ಅತಿ ಹೆಚ್ಚಿನ ಮೊತ್ತದ ಜಾಹೀರಾತು ನೀಡಿತ್ತು.

ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ, ಆಟೋ ಚಾಲಕರು, ತರಕಾರಿ, ಹೂ ಬೆಳೆಗಾರರು, ನೇಕಾರರು, ಸವಿತಾ ಸಮಾಜ, ವಲಸೆ ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡದ ಸರ್ಕಾರ ನೇರ ಪ್ರಸಾರದ ಹೆಸರಿನಲ್ಲಿ ಲಕ್ಷಾಂತರ ರುಪಾಯಿಗಳನ್ನು ವೆಚ್ಚ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

the fil favicon

SUPPORT THE FILE

Latest News

Related Posts