ಬಜೆಟ್‌; ಸಿ ಎಂ ಜತೆ ಸಂವಾದಕ್ಕೂ ಸುದ್ದಿವಾಹಿನಿಗಳಿಗೆ 38.97 ಲಕ್ಷ ರು ಪಾವತಿ

ಬೆಂಗಳೂರು; 2021-22ನೇ ಸಾಲಿನ ಆಯವ್ಯಯ ವಿಶ್ಲೇಷಣೆ ಕುರಿತು ಮುಖ್ಯಮಂತ್ರಿಯಾಗಿದ್ದ ಬಿ ಎಸ್‌ ಯಡಿಯೂರಪ್ಪ ಅವರೊಂದಿಗೆ ಸಂವಾದ ನಡೆಸಿದ್ದ ಸುದ್ದಿವಾಹಿನಿಗಳಿಗೆ 38.97 ಲಕ್ಷ ರು.ಗಳನ್ನು ಪಾವತಿಸಿರುವುದು ಇದೀಗ ಬಹಿರಂಗವಾಗಿದೆ.

ಬಜೆಟ್‌ ಮಂಡಿಸಿದ ನಂತರ ಸುದ್ದಿವಾಹಿನಿಗಳು ಮುಖ್ಯಮಂತ್ರಿಯೊಂದಿಗೆ ಸಂವಾದ ನಡೆಸುವುದು ವಾಡಿಕೆ. ಆದರೆ ಈ ಕಾರ್ಯಕ್ರಮಕ್ಕೆ ಬಿಜೆಪಿ ಸರ್ಕಾರವು 38.97 ಲಕ್ಷ ರು. ವೆಚ್ಚ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.

ಅಲ್ಲದೆ 2020-21ರನೇ ಸಾಲಿನ ಆಯವ್ಯಯ ಮಂಡಿಸಿದಾಗಲೂ ಜನಸಾಮಾನ್ಯರ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳ ಬಗ್ಗೆ ಮುಖ್ಯಮಂತ್ರಿಯೊಂದಿಗೆ 30 ನಿಮಿಷದ ವಿಶೇಷ ಸಂವಾದ ನಡಸಿದ್ದ ಸುದ್ದಿವಾಹಿನಿಗಳಿಗೆ 14, 86, 800 ರು.ಗಳನ್ನು ಎಂಸಿ ಅಂಡ್‌ ಎ ಮೂಲಕ ವೆಚ್ಚ ಮಾಡಿತ್ತು ಎಂದು ತಿಳಿದು ಬಂದಿದೆ.

ಆದರೆ ಒಂದೇ ವರ್ಷದ ಅಂತರದಲ್ಲಿ 2021-22ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ನಡೆಸಿದ್ದ ವಿಶೇಷ ಸಂವಾದಕ್ಕೆ ಮಾಡಿದ್ದ ವೆಚ್ಚದಲ್ಲಿ ಏರಿಕೆಯಾಗಿತ್ತು. ಆರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 44.34 ಲಕ್ಷ ರು. ವೆಚ್ಚವಾಗುವುದೆಂದು ಪ್ರಸ್ತಾಪಿಸಿತ್ತು.

ಬಜೆಟ್‌ ಪೂರ್ವಭಾವಿಯಾಗಿ ಸುದ್ದಿವಾಹಿನಿಗಳಲ್ಲಿ ‘ರಾಜಾಹುಲಿ’ ಬಜೆಟ್‌ ಲೆಕ್ಕ ವೀಕ್ಷಿಸಿ ಎಂಬ ಶೀರ್ಷಿಕೆಯೂ ಸೇರಿದಂತೆ ವಿವಿಧ ರೀತಿಯ ಶೀರ್ಷಿಕೆಗಳಲ್ಲಿ ಸುದ್ದಿವಾಹಿನಿಗಳು ವಿಶೇಷ ಸಂವಾದ ನಡೆಸಿದ್ದವು.

ವಾರ್ತಾ ಇಲಾಖೆಯು ಅಂದಾಜು ವೆಚ್ಚದ ವಿವರ

ಟಿ ವಿ 9 (10 ಸೆಕೆಂಡಿಗೆ 4,400)- 7,92,000 ರು.

ಪಬ್ಲಿಕ್‌ ಟಿ ವಿ (3,250)- 5,85,000 ರು.

ನ್ಯೂಸ್‌ 18 ( 2,300) – 4,14,000 ರು.

ಸುವರ್ಣ (2,100 ರು ) – 3,78,000 ರು

ದಿಗ್ವಿಜಯ ( 2,000) – 3,60,000 ರು.

ಬಿ ಟಿ ವಿ (2,000) – 3,60,000 ರು.

ಪ್ರಜಾ ಟಿ ವಿ ( 1,600)- 2,88,000 ರು

ರಾಜ್‌ ನ್ಯೂಸ್‌ ( 1,500)- 2,70,000 ರು.

ಟಿ ವಿ 5 (1,500) – 2,70,000 ರು.

ವಾರ್ತಾ ಇಲಾಖೆಯು ಪ್ರಸ್ತಾಪಿತ ವೆಚ್ಚದಲ್ಲಿ ಕಡಿಮೆ ಮಾಡಿತ್ತಲ್ಲದೆ ವೆಚ್ಚವನ್ನು 38.97 ಲಕ್ಷ ರು.ಗಳಿಗಿಳಿಸಿತ್ತು ಎಂಬುದು ಗೊತ್ತಾಗಿದೆ.

ಮುಖ್ಯಮಂತ್ರಿಗಳೊಂದಿಗೆ ನಡೆಸುವ ವಿಶೇಷ ಸಂವಾದ ಕಾರ್ಯಕ್ರಮವು ಸುದ್ದಿ ವಾಹಿನಿಗಳ ಕಾರ್ಯಕ್ರಮದ ಒಂದು ಭಾಗವಾಗಿದ್ದರೂ ಜಾಹೀರಾತು ರೂಪದಲ್ಲಿ ಸರ್ಕಾರದ ಬೊಕ್ಕಸದಿಂದ 38.97 ಲಕ್ಷ ರು. ಪಾವತಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಇದೊಂದು ಪೇಯ್ಡ್‌ ಇಂಟರ್‌ವ್ಯೂ ಎಂಬ ಅನುಮಾನವೂ ವ್ಯಕ್ತವಾಗಿದೆ.

ರಾಜ್ಯ ಬಿಜೆಪಿ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ಪತ್ರಿಕೆಗಳ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು.ಗಳನ್ನು ವೆಚ್ಚ ಮಾಡಿದ್ದನ್ನು ಸ್ಮರಿಸಬಹುದು.

ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ, ಆಟೋ ಚಾಲಕರು, ತರಕಾರಿ, ಹೂ ಬೆಳೆಗಾರರು, ನೇಕಾರರು, ಸವಿತಾ ಸಮಾಜ, ವಲಸೆ ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡದ ಸರ್ಕಾರ ಅಮಿತ್‌ ಶಾ ಕಾರ್ಯಕ್ರಮಗಳ ಜಾಹೀರಾತಿಗೆ 89 ಲಕ್ಷ ರು. ಖರ್ಚು ಮಾಡಿತ್ತು.

ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಹಮ್ಮಿಕೊಂಡಿರುವ ಯೋಜನೆ, ಕಾರ್ಯಕ್ರಮಗಳ ಸಮಗ್ರ ಚಿತ್ರಣವನ್ನು ಬಿಂಬಿಸುವ ನಾಲ್ಕು ಪುಟಗಳ ಪ್ರಾಯೋಜಿತ ಪುರವಣಿಗಾಗಿ 2020ರಲ್ಲಿ ಒಟ್ಟು 1.60 ಕೋಟಿ ರು.ಗಳನ್ನು ವೆಚ್ಚ ಮಾಡಿದೆ. ಈ ಪೈಕಿ ಹೊಸ ದಿಗಂತ ಪತ್ರಿಕೆ ಸಿಂಹಪಾಲು ಪಡೆದಿದ್ದು, ಉಳಿದೆಲ್ಲ ಪತ್ರಿಕೆಗಳಿಗಿಂತ ಅತಿ ಹೆಚ್ಚಿನ ಮೊತ್ತದ ಜಾಹೀರಾತು ನೀಡಿತ್ತು.

ಬೀದರ್‌ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನಡೆದಿದ್ದ ನೂತನ ಅನುಭವ ಮಂಟಪ ನಿರ್ಮಾಣ ಮತ್ತು ಇನ್ನಿತರೆ ಪೂಜಾ ಕಾರ್ಯುಕ್ರಮಗಳಲ್ಲಿ ಮುಖ್ಯಮಂತ್ರಿಗಳ ಭಾಷಣವನ್ನು 30 ನಿಮಿಷಗಳ ನೇರ ಪ್ರಸಾರಕ್ಕೆ ಬಿಜೆಪಿ ಸರ್ಕಾರವು ಒಟ್ಟು 42.26 ಲಕ್ಷ ರು. ಖರ್ಚು ಮಾಡಿತ್ತು.

the fil favicon

SUPPORT THE FILE

Latest News

Related Posts