2 ವರ್ಷದ ಸಾಧನೆ ಬಿಂಬಿಸಲು 7.96 ಕೋಟಿ, ಜಾಹೀರಾತಿಗೆ 6.62 ಕೋಟಿ ವೆಚ್ಚ

ಬೆಂಗಳೂರು; ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಸರ್ಕಾರ ರಚಿಸಿದ್ದ ಬಿ ಎಸ್‌ ಯಡಿಯೂರಪ್ಪ ಅವರು ಮೊದಲ ಮತ್ತು ಎರಡನೇ ವರ್ಷ ಪೂರೈಸಿ ಸಂಭ್ರಮಿಸಿದ್ದಕ್ಕೆ ಒಟ್ಟು 7.96 ಕೋಟಿ ರು. ಖರ್ಚಾಗಿದೆ.

ವಿಧಾನಸೌಧದ ನೆಲಮಹಡಿಯಲ್ಲಿರುವ ಬ್ಯಾಂಕ್ವೆಂಟ್‌ ಹಾಲ್‌ನಲ್ಲಿ ನಡೆದಿದ್ದ ಸಂಭ್ರಮಾಚರಣೆಯ ಸಮಾರಂಭ, ಪುಸ್ತಕ ಮುದ್ರಣ, ಸಾಕ್ಷ್ಯ ಚಿತ್ರ ನಿರ್ಮಾಣ, ಪತ್ರಿಕೆ ಮತ್ತು ಟಿ ವಿ ಚಾನಲ್‌, ರೇಡಿಯೋಗಳಲ್ಲಿ ನೀಡಿದ್ದ ಜಾಹೀರಾತಿನ ವೆಚ್ಚವೂ ಇದರಲ್ಲಿ ಒಳಗೊಂಡಿದೆ.

ವಿಧಾನಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಸರ್ಕಾರದ ಎರಡು ವರ್ಷದ ಸಾಧನೆ ಕುರಿತು ಜಿಲ್ಲಾ, ಪ್ರಾದೇಶಿಕ ಮತ್ತು ರಾಜ್ಯಮಟ್ಟ ಕನ್ನಡ ಮತ್ತು ಆಂಗ್ಲ ದಿನಪತ್ರಿಕೆಗಳಿಗೆ ನೀಡಿರುವ ಪತ್ರಿಕಾ ಜಾಹೀರಾತಿಗೆ ಮಾಡಿರುವ ವೆಚ್ಚದ ವಿವರವನ್ನು ಬಹಿರಂಗಪಡಿಸಿದ್ದಾರೆ.

ಒಟ್ಟು ವೆಚ್ಚ 7.96 ಕೋಟಿ ರು.ನಲ್ಲಿ ರಾಜ್ಯ, ಪ್ರಾದೇಶಿಕ, ಜಿಲ್ಲಾ ಮತ್ತು ಟಿ ವಿ ಚಾನಲ್‌ಗಳಿಗೆ ನೀಡಿದ್ದ ಸರ್ಕಾರದ ಎರಡೂ ವರ್ಷದ ಸಾಧನೆ ಕುರಿತು ನೀಡಿದ್ದ ಪತ್ರಿಕೆಗಳ ಜಾಹೀರಾತಿಗೆ 6.62 ಕೋಟಿ ರು. ವೆಚ್ಚವಾಗಿರುವುದು ಬಸವರಾಜ ಬೊಮ್ಮಾಯಿ ಅವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.

ವಿವಿಧ ಬಾಬ್ತುಗಳಿಗೆ ಮಾಡಿರುವ ವೆಚ್ಚದ ವಿವರ

ಕಿಯೋನಿಕ್ಸ್‌ ಮೂಲಕ 2020-21ನೇ ಸಾಲಿನಲ್ಲಿ ಏರ್ಪಡಿಸಿದ್ದ ಮೊದಲ ವರ್ಷದ ಸಮಾರಂಭಕ್ಕೆ 46,01,357 ರು., 2021-22ರಲ್ಲಿ ಎರಡನೇ ವರ್ಷದ ಸಮಾರಂಭಕ್ಕೆ 54,19,836 ರು. (ಅನ್ವಯವಾಗುವ ತೆರಿಗೆ ಪ್ರತ್ಯೇಕ) ಸೇರಿ ಒಟ್ಟು 1.02 ಕೋಟಿ ವೆಚ್ಚವಾಗಿರುವುದು ಉತ್ತರದಿಂದ ತಿಳಿದು ಬಂದಿದೆ.

ಅದೇ ರೀತಿ ಬಿಜೆಪಿ ಸರ್ಕಾರವು ಒಂದು ವರ್ಷ ಪೂರೈಸಿದ್ದ (2020-21) ಸಂದರ್ಭದಲ್ಲಿ ಹೊರತಂದಿದ್ದ ಕನ್ನಡ ಪುಸ್ತಕದ ಮುದ್ರಣಕ್ಕೆ 89,000 ರು. ವೆಚ್ಚವಾಗಿದ್ದರೆ ಎರಡನೇ ವರ್ಷ ಪೂರೈಸಿದ್ದ ಸಂದರ್ಭದಲ್ಲಿ (2021-22) 24,76,800 ರು. ಖರ್ಚಾಗಿದೆ. ಇನ್ನು, ಸಾಕ್ಷ್ಯ ಚಿತ್ರ ನಿರ್ಮಾಣಕ್ಕೆಂದು 7,87,500 ರು. ವೆಚ್ಚವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಲು ಯಾವುದೇ ವೆಚ್ಚವನ್ನು ಮಾಡಿಲ್ಲ ಎಂದು ಉತ್ತರ ಒದಗಿಸಿದ್ದಾರೆ.

ಪತ್ರಿಕೆ-ಟಿವಿ ಚಾನಲ್‌ಗಳ ಜಾಹೀರಾತಿನ ವೆಚ್ಚ

ಸರ್ಕಾರದ ಒಂದು ವರ್ಷದ ಸಾಧನೆ (2020ರ ಜುಲೈ 27) ಕುರಿತು ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳಿಗೆ 1,85,80,451 ರು. ರಾಜ್ಯಮಟ್ಟದ ಕನ್ನಡ, ಆಂಗ್ಲ ದಿನಪತ್ರಿಕೆಗಳಿಗೆ ನೀಡಿದ್ದ ಜಾಹೀರಾತುಗಳಿಗೆ 61,93,484 ರು., ಖಾಸಗಿ ಎಫ್‌ಎಂ ರೇಡಿಯೋ ವಾಹಿನಿಗಳಲ್ಲಿ ಪ್ರಸಾರವಾದ ಜಾಹೀರಾತುಗಳಿಗೆ (60 ಸೆಕೆಂಡ್‌ ಅವಧಿಯ ಜಾಹೀರಾತು 2020ರ ಜುಲೈ 25ರಿಂದ 27ರವರೆಗೆ ಪ್ರಸಾರ) 8,07,332 ರು. , ಟಿ ವಿ ಚಾನಲ್‌ಗಳಲ್ಲಿ ಪ್ರಸಾರವಾಗಿದ್ದ ಜಾಹೀರಾತುಗಳಿಗೆ 62,97,660 ರು.ಗಳನ್ನು ಪಾವತಿಸಿರುವುದು ಬಸವರಾಜ ಬೊಮ್ಮಾಯಿ ಅವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.

ಸರ್ಕಾರದ ಎರಡು ವರ್ಷ ಸಾಧನೆ ಕುರಿತು ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳಿಗೆ 2,05,95,312 ರು., ರಾಜ್ಯಮಟ್ಟದ ಕನ್ನಡ, ಆಂಗ್ಲ ದಿನಪತ್ರಿಕೆಗಳಿಗೆ 68,65,104 ರು., ಎರಡು ವರ್ಷಗಳ ಅವಧಿಯಲ್ಲಿ ಇಲಾಖಾವಾರು, ಜಿಲ್ಲಾವಾರು ಸಾಧಿಸಿರುವ ಯೋಜನೆ, ಕಾರ್ಯಕ್ರಮಗಳ ಕುರಿತು ಟಿ ವಿ ಚಾನಲ್‌ಗಳಲ್ಲಿ ಪ್ರಸಾರವಾಗಿದ್ದ ಜಾಹೀರಾತುಗಳಿಗೆ 68,83,327 ರು., ರೇಡಿಯೋ ಸಿಟಿ, ಬಿಗ್‌ ಎಫ್‌ಎಂ, ರೆಡ್‌ ಎಫ್‌ಎಂಗಳಿಗೆ 91,920 ರು. ವೆಚ್ಚ ಮಾಡಿದೆ.

ಇಷ್ಟು ಮಾತ್ರವಲ್ಲದೆ ರಾಜ್ಯ ಬಿಜೆಪಿ ಸರ್ಕಾರವು ತಮಿಳುನಾಡಿನ ಪ್ರಸ್ತುತ ರಾಜಕೀಯ ಕುರಿತ ವಿಶ್ಲೇಷಣೆ, ನಿವೃತ್ತ ಐಎಎಸ್‌, ಐಪಿಎಸ್‌ ಅಧಿಕಾರಿಗಳು ರಾಜಕೀಯ ಸೇರ್ಪಡೆ ಸೇರಿದಂತೆ ಇನ್ನಿತರೆ ಖಾಸಗಿ ಕಾರ್ಯಕ್ರಮಗಳ ಸಮಾವೇಶಕ್ಕೆ 25 ಲಕ್ಷ, ಟಿ ವಿ ನೆಟವರ್ಕ್‌ 2021ರ ಮಾರ್ಚ್‌ನಲ್ಲಿ ನವದೆಹಲಿಯಲ್ಲಿ ಆಯೋಜಿಸಿದ್ದ ಇಂಡಿಯಾ ಬ್ಯುಸಿನೆಸ್‌ ಲೀಡ್‌ ಅವಾರ್ಡ್‌ ಕಾರ್ಯಕ್ರಮಕ್ಕೆ 45.18 ಲಕ್ಷ ರು.ಗಳ ವೆಚ್ಚ ಮಾಡಿದ್ದನ್ನು ಸ್ಮರಿಸಬಹುದು.

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ನೀಡಿದ್ದ ಪತ್ರಿಕೆಗಳ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ , ಪೊಲೀಸ್‌ ಗೃಹ 2025 ಯೋಜನೆಗೆ ಚಾಲನೆ, ಬಹುಮಹಡಿ ಪೊಲೀಸ್‌ ವಸತಿ ಗೃಹಗಳ ಉದ್ಘಾಟನೆ, ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್‌) ಆಡಳಿತ ಕಚೇರಿ ಸ್ಥಾಪನೆಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಒಟ್ಟು 89.46 ಲಕ್ಷ ರು.ಗಳನ್ನು ಜಾಹೀರಾತಿಗೆ ಖರ್ಚು ಮಾಡಿತ್ತು.

ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಹಮ್ಮಿಕೊಂಡಿರುವ ಯೋಜನೆ, ಕಾರ್ಯಕ್ರಮಗಳ ಸಮಗ್ರ ಚಿತ್ರಣವನ್ನು ಬಿಂಬಿಸುವ ನಾಲ್ಕು ಪುಟಗಳ ಪ್ರಾಯೋಜಿತ ಪುರವಣಿಗಾಗಿ 2020ರಲ್ಲಿ ಒಟ್ಟು 1.60 ಕೋಟಿ ರು.ಗಳನ್ನು ವೆಚ್ಚ ಮಾಡಿದೆ. ಹಾಗೆಯೇ ಜನ ಸಾಮಾನ್ಯರ ಕಲ್ಯಾಣಕ್ಕಾಗಿ ರೂಪಿಸಿದ್ದ ಯೋಜನೆಗಳ ಸಮಗ್ರ ಚಿತ್ರಣವನ್ನೊಳಗೊಂಡ ಮತ್ತು ಕೋವಿಡ್‌ ನಿಯಂತ್ರಣಕ್ಕೆ ಕೈಗೊಂಡಿದ್ದ ಕ್ರಮಗಳ ಕುರಿತು 15ರಿಂದ 30 ನಿಮಿಷದ ಕಾರ್ಯಕ್ರಮ ಪ್ರಸಾರ ಮಾಡಿರುವ ಟಿ ವಿ ಚಾನಲ್‌ಗಳಿಗೆ ರಾಜ್ಯ ಬಿಜೆಪಿ ಸರ್ಕಾರವು 57. 02 ಲಕ್ಷ ರು. ಪಾವತಿಸಿದೆ.

ಬೀದರ್‌ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನಡೆದಿದ್ದ ನೂತನ ಅನುಭವ ಮಂಟಪ ನಿರ್ಮಾಣ ಮತ್ತು ಇನ್ನಿತರೆ ಪೂಜಾ ಕಾರ್ಯುಕ್ರಮಗಳಲ್ಲಿ ಮುಖ್ಯಮಂತ್ರಿಗಳ ಭಾಷಣವನ್ನು 30 ನಿಮಿಷ ಅವಧಿಯ ನೇರ ಪ್ರಸಾರಕ್ಕೆ ಬಿಜೆಪಿ ಸರ್ಕಾರವು ಒಟ್ಟು 42.26 ಲಕ್ಷ ರು. ಖರ್ಚು ಮಾಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts