ಬೆಂಗಳೂರು; ರಾಜ್ಯದಾದ್ಯಂತ 100 ಕಾಂಗ್ರೆಸ್ ಭವನಗಳನ್ನು ನಿರ್ಮಿಸಲು ಪಣ ತೊಟ್ಟಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಭವನ ಟ್ರಸ್ಟ್ ಹೆಸರಿನಲ್ಲಿ ಮುನ್ಸಿಪಾಲಿಟಿ, ಪಟ್ಟಣ ಪಂಚಾಯತ್‌ಗಳಲ್ಲಿಯೂ 25 ನಿವೇಶನಗಳನ್ನು ಮಂಜೂರು ಮಾಡಿಕೊಡಲು ಪೌರಾಡಳಿತ ಇಲಾಖೆಯ ಕುತ್ತಿಗೆ ಮೇಲೆ ಕುಳಿತಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ನಿರ್ದೇಶನವನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಕೆಪಿಸಿಸಿಗೆ ಎದುರಾಗಿದೆ. ಕಂದಾಯ, ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿನ ಸರ್ಕಾರಿ ಜಾಗ, ನಗರಾಭಿವೃದ್ಧಿ ಪ್ರಾಧಿಕಾರಗಳು ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿನ ಸಿ ಎ ನಿವೇಶನಗಳನ್ನು ಮಂಜೂರಾಗುತ್ತಿವೆ.
ಆದರೆ ಪೌರಾಡಳಿತ ಇಲಾಖೆ ಅಧೀನದಲ್ಲಿರುವ ಪುರಸಭೆ, ನಗರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ನಿವೇಶನಗಳು ನಿಗದಿತ ಅವಧಿಯೊಳಗೆ ಮಂಜೂರಾಗುತ್ತಿಲ್ಲ. ಇಲಾಖೆ ಹಂತದಲ್ಲಿಯೇ ವಿಳಂಬ ಆಗುತ್ತಿರುವ ಕಾರಣ, ಇದೀಗ ಟ್ರಸ್ಟ್‌ನ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬಾಕಿ ಇರುವ 25 ನಿವೇಶನಗಳ ಮಂಜೂರಾತಿ ಪ್ರಸ್ತಾವಗಳಿಗೆ ಅನುಮೋದನೆ ಕೊಡಿಸಲು ಪೌರಾಡಳಿತ ಇಲಾಖೆ ಕುತ್ತಿಗೆ ಮೇಲೆ ಕುಳಿತಿದ್ದಾರೆ.
ಕಾಂಗ್ರೆಸ್ ಭವನ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಟ್ರಸ್ಟ್ ಹೆಸರಿಗೆ ನಿವೇಶನಗಳನ್ನು ಮಂಜೂರು ಮಾಡಲು ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ 2025ರ ಸೆ.1ರಂದು ಪತ್ರ ಬರೆದಿದ್ದಾರೆ.
ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪತ್ರದಲ್ಲೇನಿದೆ?
ಎಐಸಿಸಿ ನಿರ್ದೇಶನದ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಎಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿಗಳಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್‌ನಿಂದ ಸ್ವಂತ ನಿವೇಶನಗಳನ್ನು ಹೊಂದಬೇಕಿದೆ. ಆ ನಿವೇಶನಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ಟ್ರಸ್ಟ್‌ನಿಂದ ಪೌರಾಡಳಿತ ಇಲಾಖೆ ವ್ಯಾಪ್ತಿಗೆ ಬರುವ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದರೆ ಇಲಾಖೆ ವತಿಯಿಂದ ನಿವೇಶನಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯು ವಿಳಂಬವಾಗುತ್ತಿದೆ ಎಂದು ಡಿ ಕೆ ಶಿವಕುಮಾರ್ ಅವರು ಪತ್ರದಲ್ಲಿ ಸಚಿವ ರಹೀಂ ಖಾನ್ ಅವರ ಗಮನಸೆಳೆದಿರುವುದು ಗೊತ್ತಾಗಿದೆ.
‘ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಅನುಮತಿಗೆ ಸಲ್ಲಿಸಲಾಗಿರುವ 25 ನಿವೇಶನಗಳಿಗೆ ಕೂಡಲೇ ಮಂಜೂರು ಮಾಡಲು ಸಚಿವ ಸಂಪುಟದ ಮುಂದೆ ಮಂಡಿಸಬೇಕು,’ ಎಂದು ಸೂಚಿಸಿರುವ ಉಪ ಮುಖ್ಯಮಂತ್ರಿ ಹಾಗೂ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಡಿ ಕೆ ಶಿವಕುಮಾರ್ ಅವರು ಸೂಚಿಸಿರುವುದು ಗೊತ್ತಾಗಿದೆ.
ಡಿ ಕೆ ಶಿವಕುಮಾರ್ ಅವರು ಬರೆದಿದ್ದ ಪತ್ರದ ಮೇಲೆಯೇ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಕೂಡಲೇ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ನಿರ್ದೇಶಿಸಿ ಒಕ್ಕಣೆ ಹಾಕಿರುವುದು ತಿಳಿದು ಬಂದಿದೆ.
25 ನಿವೇಶನಗಳ ಪಟ್ಟಿ
ವಿಜಯಪುರ ಸಿಂಧಗಿಯಲ್ಲಿ 40/ 30 ಅಳತೆ, ಮತ್ತು ಇಂಡಿ ತಾಲೂಕಿನಲ್ಲಿ 13.01 ಗುಂಟೆ, ಉತ್ತರ ಕನ್ನಡದ ಹಳಿಯಾಳದಲ್ಲಿ 420 ಸ್ಕೈಯರ್ ಮಿಟರ್, ದಾವಣಗೆರೆಯ ಹೊನ್ನಾಳಿಯಲ್ಲಿ 36.60/15.25 ಸ್ಕೈಯರ್ ಮೀಟರ್, ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಮಾಚೇನಹಳ್ಳಿಯಲ್ಲಿ ಸಿ ಎ ನಿವೇಶನ 1308.21 ಸ್ಕೈಯರ್ ಮೀಟರ್, ರಾಯಚೂರಿನ ಸಿಂಧನೂರಿನಲ್ಲಿ 2,400 ಸ್ಕೈಯರ್ ಫೀಟ್, ಲಿಂಗಸುಗೂರಿನಲ್ಲಿ 100/100 ಸ್ಕೈಯರ್ ಫೀಟ್ ವಿಸ್ತೀರ್ಣದ ನಿವೇಶನವನ್ನು ಮಂಜೂರು ಮಾಡಲು ಸೂಚಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ 80/90 ಅಳತೆ ನಿವೇಶನ, ಹೊಸದುರ್ಗದಲ್ಲಿ ಸಿ ಎ ನಿವೇಶನ (12256/ಎ, 18/19 ಮೀಟರ್, ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ಸರ್ವೇ ನಂಬರ್ 8/16ರಲ್ಲಿ 30.01/13 ಮೀಟರ್, ಸೊರಬದಲ್ಲಿ ಸರ್ವೆ ನಂಬರ್ 113 ರಲ್ಲಿ 6 ಗುಂಟೆ, ಶಿರಾಳಕೊಪ್ಪದಲ್ಲಿ ಸರ್ವೆ ನಂಬರ್ 2454/1944 ರಲ್ಲಿ 182/78 ಸ್ಕೈಯರ್ ಫಿಟ್, ಚಿಕ್ಕಬಳ್ಳಾಪುರದಲ್ಲಿ ಗೌರಿಬಿದನೂರಿನಲ್ಲಿ ಸರ್ವೆ ನಂಬರ್ 62/1, 62/2, 62/3, 63/1, 63/2, 63/3ನಲ್ಲಿ 1816.38 ಸ್ಕೈಯರ್ ಮೀಟರ್, ಬೀದರ್‍ನ ಬಸವಕಲ್ಯಾಣದಲ್ಲಿ ಸರ್ವೆ ನಂಬರ್ 267/1 267/2 ರಲ್ಲಿ 700 ಸ್ಕೈಯರ್ ಮೀಟರ್, ಯಾದಗಿರಿಯ ಸುರಪುರದಲ್ಲಿನ 100/100 ಸ್ಕೈಯರ್ ಫೀಟ್‌ನ ಸಿ ಎ ನಿವೇಶನಕ್ಕೆ ಅರ್ಜಿ ಸಲ್ಲಿಸಿದೆ.
ಶಹಾಪುರದಲ್ಲಿ ಸರ್ವೇ ನಂಬರ್ 527/, 529/2, 527/1, 527/5ರಲ್ಲಿನ 2175.26 ಸ್ಕೈಯರ್ ಮೀಟರ್, ಗುಲ್ಬರ್ಗಾದ ಚಿಂಚೋಳಿಯಲ್ಲಿ ಸರ್ವೆ ನಂಬರ್ 143/2 ರಲ್ಲಿನ ಸಿ ಎ ನಿವೇಶನ (1086.50 ಸ್ಕೈಯರ್ ಮೀಟರ್), ಹಾಸನದ ಚನ್ನರಾಯಪಟ್ಟಣದ ಸರ್ವೇ ನಂಬರ್ 151, 152, 153ರಲ್ಲಿನ 60/40 ಅಳತೆಯ 2,400 ಸ್ಕೈಯರ್ ಫೀಟ್, ಹಾವೇರಿಯ ಹಿರೇಕೆರೂರಿನಲ್ಲಿ ಸಿ ಎ ನಿವೇಶನ (ಸಂಖ್ಯೆ 323/2ರಲ್ಲಿನ 24.05/05/27/60/36.97.36.19) ,
ಬೆಳಗಾವಿಯ ಅಥಣಿಯಲ್ಲಿ ಸಿ ಎ ನಿವೇಶನ (ಸಂಖ್ಯೆ 972), ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಲ್ಲಿ ಸಿ ಎ ನಿವೇಶನ (ಸಂಖ್ಯೆ 3224/49/2/51/52/2ರಲ್ಲಿನ 6841. 97 ಸ್ಕೈಯರ್ ಮೀಟರ್, ಧಾರವಾಡದ ನವಲಗುಂದದಲ್ಲಿ 15 ಗುಂಟೆ ವಿಸ್ತೀರ್ಣದ ಸಿ ಎ ನಿವೇಶನ (ಸಂಖ್ಯೆ 414/1), ಮೈಸೂರಿನ ಟಿ ನರಸೀಪುರದಲ್ಲಿ ಸರ್ವೇ ನಂಬರ್ 351/2ರಲ್ಲಿನ (351/7, 352/2) 743.82 ಸ್ಕೈಯರ್ ಮೀಟರ್ ವಿಸ್ತೀರ್ಣದ ನಿವೇಶನವನ್ನು ಮಂಜೂರು ಮಾಡಲು ನಿರ್ದೇಶನ ನೀಡಬೇಕು ಎಂದು ಡಿ ಕೆ ಶಿವಕುಮಾರ್ ಅವರು ಪಟ್ಟಿಯನ್ನು ಒದಗಿಸಿರುವುದು ಗೊತ್ತಾಗಿದೆ.
ಕೊಪ್ಪಳ ನಗರದಲ್ಲಿ ಸರ್ಕಾರಿ ಮಾರ್ಗಸೂಚಿ ದರದ ಪ್ರಕಾರ 1.31 ಕೋಟಿ ರು ಬೆಲೆಬಾಳುವ ಸಿ ಎ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಕೇವಲ 13.19 ಲಕ್ಷ ರುಪಾಯಿಗೆ ರಿಯಾಯಿತಿ ದರದಲ್ಲಿ ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದಿಸಿದೆ.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ನಿಯಮಗಳು) ನಿಯಮಗಳಲ್ಲಿ ರಿಯಾಯಿತಿ ದರ ಅಥವಾ ಉಚಿತವಾಗಿ ಮಂಜೂರು ಮಾಡುವುದು ಮತ್ತು ರಾಜಕೀಯ ಪಕ್ಷಗಳ ಕಚೇರಿ ಕಟ್ಟಡ ನಿರ್ಮಾಣಕ್ಕೆ ನಿಯಮಗಳಲ್ಲಿ ಅವಕಾಶವೇ ಇಲ್ಲ. ಅದರೂ ಅನುಮೋದಿಸಿತ್ತು.
ಅದಷ್ಟೇ ಅಲ್ಲ, ರಿಯಾಯಿತಿ ದರದಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನಾಗರಿಕ ಸೌಲಭ್ಯ ನಿವೇಶನವನ್ನು ಮಂಜೂರು ಮಾಡಿದಲ್ಲಿ ಪ್ರಾಧಿಕಾರಕ್ಕೆ 1.18 ಕೋಟಿಯಷ್ಟು ಆರ್ಥಿಕವಾಗಿ ನಷ್ಟವುಂಟಾಗಲಿದೆ ಎಂದು ಆರ್ಥಿಕ ಇಲಾಖೆಯು ಸ್ಪಷ್ಟವಾಗಿ ಅಭಿಪ್ರಾಯ ನೀಡಿತ್ತು. ಆದರೂ ನಗರಾಭಿವೃದ್ಧಿ ಇಲಾಖೆಯು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಸಿ ಎ ನಿವೇಶನವನ್ನು ಮಂಜೂರು ಮಾಡಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಕೊಪ್ಪಳದಲ್ಲೂ ನಿವೇಶನ; 1.18 ಕೋಟಿ ನಷ್ಟ, ನಿಯಮ ಉಲ್ಲಂಘಿಸಿದ ಸರ್ಕಾರ
ರಾಜ್ಯ ಕಾಂಗ್ರೆಸ್ ಸರ್ಕಾರವು ನಗರಾಭಿವೃದ್ಧಿ, ಪೌರಾಡಳಿತ, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ವಶ ಅಥವಾ ಸ್ವಾಧೀನದಲ್ಲಿರುವ ಸರ್ಕಾರಿ ಜಾಗಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡುತ್ತಿರುವ ಪ್ರಕರಣದಲ್ಲಿ ಹಿತಾಸಕ್ತಿ ಸಂಘರ್ಷ ಎದುರಾಗಿತ್ತು.
ತುಮಕೂರು ಮಹಾನಗರ ಪಾಲಿಕೆಯ ಸುಪರ್ದಿಯಲ್ಲಿರುವ ಬಹು ಕೋಟಿ ಬೆಲೆಬಾಳುವ ಒಟ್ಟು ಜಮೀನಿನ ಪೈಕಿ 2 ಎಕರೆ ಜಾಗವನ್ನು ಸಾರ್ವಜನಿಕ ಹರಾಜು ನಡೆಸದೇ ನೇರವಾಗಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ ಈ ಜಾಗವು ವ್ಯಾಜ್ಯದಿಂದ ಕೂಡಿದೆಯಲ್ಲದೇ ನ್ಯಾಯಾಲಯದಲ್ಲಿ ಅಸಲು ದಾವೆ ಅರ್ಜಿಯ ವಿಚಾರಣೆಯು ಇನ್ನೂ ಇತ್ಯರ್ಥಗೊಂಡಿಲ್ಲ. ಆದರೂ ಸಹ ಕಾಂಗ್ರೆಸ್ ಭವನ ಟ್ರಸ್ಟ್‌ಗೆ 2 ಎಕರೆ ಜಮೀನು ಮಂಜೂರು ಮಾಡಲು ಸಚಿವ ಸಂಪುಟವು ತೀರ್ಮಾನ ತೆಗೆದುಕೊಂಡಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಚಿಲ್ಲರೆ ದರದಲ್ಲಿ 2 ಎಕರೆ ಜಮೀನು; ಹರಾಜು ನಡೆಸದೇ ಮಂಜೂರು, ನಿಯಮ ಉಲ್ಲಂಘನೆ
ಹೀಗೆ ಬಹುಕೋಟಿಯಷ್ಟು ಬೆಲೆ ಬಾಳುವ ಈ ಜಮೀನನ್ನು ಮಾರ್ಗಸೂಚಿ ಮೌಲ್ಯದ ಕೇವಲ ಶೇ.5ರಷ್ಟು ಅಂದರೇ 90 ಲಕ್ಷ ರು ದರ ವಿಧಿಸಿ ಈಗ ಕಾಂಗ್ರೆಸ್ ಪಕ್ಷಕ್ಕೆ ಮಂಜೂರು ಮಾಡಲಾಗಿದೆ. ಸಚಿವ ಸಂಪುಟವು ಕೈಗೊಂಡಿರುವ ತೀರ್ಮಾನವು (ಸಂಖ್ಯೆ ಸಿ; 396/2025) ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನಿವೇಶನ; ಆರ್‍ಡಿಪಿಆರ್‍ನಿಂದ ಪ್ರಸ್ತಾವ ತಿರಸ್ಕೃತ, ಸರ್ಕಾರಕ್ಕೆ ಮುಖಭಂಗ?
ಬೆಳಗಾವಿಯಲ್ಲಿನ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು (ಕೆಪಿಸಿಸಿ) ರಾಜ್ಯಾದ್ಯಂತ 100 ಕಾಂಗ್ರೆಸ್ ಭವನಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಸಂಬಂಧ ಪಕ್ಷಕ್ಕೆ ಗುರಿ ನೀಡಿದ್ದರು. ಹೀಗಾಗಿ ಎಲ್ಲಾ ಸಚಿವರೂ ನಗರ ಮತ್ತು ಗ್ರಾಮೀಣ ಸ್ಥಳೀಯ ಸರ್ಕಾರಗಳ ಅಧೀನದಲ್ಲಿರುವ ಮತ್ತು ಅವುಗಳ ಹೆಸರಿನಲ್ಲಿರುವ ಜಮೀನು, ನಿವೇಶನಗಳನ್ನು ಮಂಜೂರು ಮಾಡಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.
ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣ; ಪಂಚಾಯ್ತಿಗಳ ಜಾಗದ ಮೇಲೂ ಕಣ್ಣು ಹಾಕಿದ ಕಾಂಗ್ರೆಸ್ ಭವನ ಟ್ರಸ್ಟ್
ಕಾಂಗ್ರೆಸ್ ಭವನ ಟ್ರಸ್ಟ್ ಯಾವ ಕಾಯ್ದೆ ಅಡಿ ನೋಂದಣಿಯಾಗಿದೆ ಎಂಬುದರ ಕುರಿತು ಇಲಾಖೆಯು ಪ್ರಶ್ನಿಸಿತ್ತು.
ಸರ್ಕಾರಿ ಜಾಗ ಮಂಜೂರು ಮಾಡಿಸಿಕೊಳ್ಳುತ್ತಿರುವ ಕಾಂಗ್ರೆಸ್ ಭವನ ಟ್ರಸ್ಟ್, ಯಾವ ಕಾಯ್ದೆಯಡಿ ನೋಂದಣಿಯಾಗಿದೆ?
ಹಿಂದುಳಿದ ಮತ್ತು ನಾಯಕ ಜನಾಂಗದವರ ಸ್ಮಶಾನಕ್ಕೆ ಮೀಸಲಿಟ್ಟಿರುವುದು ಮತ್ತು ಒಕ್ಕಲಿಗರ ಸಮುದಾಯ ಭವನ, ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳಿಗೆ ನಿವೇಶನ, ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಸ್ಥಾಪನೆ ಸೇರಿದಂತೆ ಇನ್ನಿತರೆ ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸಿದ್ದ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಲು ಸಚಿವ ಸಂಪುಟವು ಈಚೆಗಷ್ಟೇ ಅನುಮೋದನೆ ನೀಡಿತ್ತು.
ಹಿಂದುಳಿದ ಜಾತಿಗಳ ಜನರ ಸ್ಮಶಾನ, ನಿವೇಶನ ಉದ್ದೇಶದ ಸರ್ಕಾರಿ ಭೂಮಿ ಮೇಲೂ ಕಾಂಗ್ರೆಸ್ ಭವನ ಟ್ರಸ್ಟ್‌ನ ಕಣ್ಣು
ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿಯ ಅಗಲಕುರ್ಕಿ ಗ್ರಾಮದಲ್ಲಿ ಅನುಮೋದಿತ ಬಡಾವಣೆಯಲ್ಲಿ ನಿವೇಶನ ಕೋರಿದ್ದರು. ಆದರೀಗ ನಗರಾಭಿವೃದ್ದಿ ಇಲಾಖೆಯು ಸ್ಥಳವನ್ನು ಬದಲಾಯಿಸಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ‘ಪುಕ್ಕಟೆ’ಯಾಗಿ ಸಿ ಎ ನಿವೇಶನ; ಬೊಕ್ಕಸಕ್ಕೆ ನಷ್ಟವಾದರೂ ಸಚಿವ ಸಂಪುಟಕ್ಕೆ ಕಡತ ಮಂಡನೆ
ಚಿಕ್ಕಬಳ್ಳಾಪುರ ಜಿಲ್ಲೆಗೆ ಉಸ್ತುವಾರಿ ಸಚಿವ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಅವರ ಸೂಚನೆಯಂತೆ ನಗರಾಭಿವೃದ್ದಿ ಇಲಾಖೆಯು ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಭವನದ ಕಟ್ಟಡ ನಿರ್ಮಾಣಕ್ಕೆ ನಿವೇಶನವನ್ನು ಮಂಜೂರು ಮಾಡಲು ತಯಾರಿ ನಡೆಸಿತ್ತು. ಈ ಕುರಿತು ‘ದಿ ಫೈಲ್’, ಮೇ 5ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಕಾಂಗ್ರೆಸ್ ಭವನಗಳಿಗೆ ಸಿ ಎ ನಿವೇಶನ!; ಬಹುಕೋಟಿ ಬೆಲೆಯಿದ್ದರೂ ಉಚಿತ ಮಂಜೂರಿಗೆ ತರಾತುರಿ
ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವ್ಯಾಪ್ತಿ ಮತ್ತು ವಶದಲ್ಲಿರುವ ನಿವೇಶನವನ್ನು ಜಿಲ್ಲಾ ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದಿಸಿತ್ತು.
ಕಾಂಗ್ರೆಸ್ ಪಕ್ಷಕ್ಕೆ ನಗರ ಪಾಲಿಕೆ ಆಸ್ತಿ ಮಂಜೂರು; ಬಿಜೆಪಿ ಹಾದಿ ತುಳಿದ ಕಾಂಗ್ರೆಸ್, ಕಡಿಮೆ ಬೆಲೆ ನಿಗದಿಯೇಕೆ?
ಆದರೀಗ ಆರ್ಥಿಕ ಇಲಾಖೆಯು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಆಸ್ತಿಯನ್ನು ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಒಪ್ಪಿಗೆ ಸೂಚಿಸಿತ್ತು. ಇದರ ಅಭಿಪ್ರಾಯದ ಮೇರೆಗೆ ಸಚಿವ ಸಂಪುಟವೂ 2025ರ ಫೆ.20ರಂದು ನಡೆದ ಸಭೆಯಲ್ಲಿ ಮಂಜೂರು ಮಾಡಿತ್ತು.
ಕಚೇರಿ ನಿರ್ಮಾಣಕ್ಕೆ ಪಾಲಿಕೆ ಆಸ್ತಿ ಮೇಲೆ ಕಣ್ಣು ಹಾಕಿದ ಕೆಪಿಸಿಸಿ; ಕಡಿಮೆ ಬೆಲೆಯಲ್ಲಿ ಮಂಜೂರಾತಿಗೆ ಒತ್ತಡ
ಭಾರತೀಯ ಜನತಾ ಪಾರ್ಟಿಯು ತಾಲೂಕು ಪ್ರದೇಶಗಳಲ್ಲಿ ಸ್ವಂತ ಕಚೇರಿಗಾಗಿ ಕಟ್ಟಡ ನಿರ್ಮಾಣ ಮಾಡಲು ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿರುವ ನಿವೇಶನ, ಜಮೀನುಗಳ ಮೇಲೆ ಕಣ್ಣು ಹಾಕಿತ್ತು.
ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪರಿಶಿಷ್ಟರ ವಿದ್ಯಾರ್ಥಿ ನಿಲಯಕ್ಕೆ ಮೀಸಲಾದ ನಿವೇಶನ!; ಕಾರಜೋಳರ ಒತ್ತಡ?
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್ ಸೇರಿದಂತೆ ಸಂಘ ಪರಿವಾರದ ಇನ್ನಿತರೆ ಸಂಘ ಸಂಸ್ಥೆಗಳಿಗೂ ಗೋಮಾಳ, ಸರ್ಕಾರಿ ಜಮೀನು, ಬಿ ಖರಾಬು ಜಮೀನುಗಳನ್ನು ಚಿಲ್ಲರೆ ದರದಲ್ಲಿ ಮಂಜೂರು ಮಾಡಿತ್ತು.
ರಾಷ್ಟ್ರೋತ್ಥಾನ ಪರಿಷತ್, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್’ನ 13 ವರದಿಗಳು
ಇದೀಗ ಕಾಂಗ್ರೆಸ್ ಸರ್ಕಾರವು ಸಹ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಭವನಗಳಿಗೆ ಕಟ್ಟಡ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧೀನದಲ್ಲಿ ಮತ್ತು ನಾಗರಿಕ ಸೌಲಭ್ಯಗಳಿಗೆಂದು ಮೀಸಲಿರಿಸಿರುವ ನಿವೇಶನಗಳ ಮೇಲೆ ಕಣ್ಣು ಹಾಕಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.