ಬೆಂಗಳೂರು; ‘ಹಣ ಕೊಟ್ಟರೇ ಮಾತ್ರ ಕಡತವನ್ನು ಕೈಗೆತ್ತಿಕೊಳ್ಳುತ್ತಾರೆ, ಹಣ ಕೊಡದಿದ್ದರೇ ಕಡತವನ್ನು ಕೈಗೆತ್ತಿಕೊಳ್ಳುವುದಿಲ್ಲ, ಕೆಲಸವನ್ನೂ ಮಾಡುವುದಿಲ್ಲ,’.
ಹೀಗೆಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಎಂ ಎಸ್ ಜ್ಯೋತಿ ಅವರ ವಿರುದ್ಧ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಸಮಿತಿಯ ಸುರೇಶ್ ಎಂ ಪಾತ್ರೋಟಿ ಎಂಬುವರು ನೇರವಾಗಿ ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ.
ಫಲಾನುಭವಿಗಳ ಆಧರಿತ ಯೋಜನೆಗಳಿಗೆ ನೋಂದಣಿ, ಅನುದಾನ ಬಿಡುಗಡೆ, ವಿವಿಧ ವಸತಿ ಯೋಜನೆಗಳಡಿಯಲ್ಲಿ ಮನೆ ಹಂಚಿಕೆ, ಪುಸ್ತಕಗಳ ಆಯ್ಕೆ, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಾಖಲೆಗಳ ನೋಂದಣಿ ಹೀಗೆ ಹತ್ತಾರು ಕೆಲಸಗಳನ್ನು ಮಾಡಿಕೊಡಲು ಅಧಿಕಾರಿವರ್ಗವು ಲಂಚಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ಅನೇಕ ದೂರುಗಳು ಸರ್ಕಾರದ ವಿವಿಧ ಇಲಾಖೆಗಳಿಗೆ ಸಲ್ಲಿಕೆಯಾಗಿವೆ.
ಈ ದೂರುಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷವು, ಆಡಳಿತ ಪಕ್ಷವನ್ನು ಹಣಿಯುತ್ತಿದೆ. ಇದರ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾಗಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಉಪ ಕಾರ್ಯದರ್ಶಿ ವಿರುದ್ಧ ಕೇಳಿ ಬಂದಿರುವ ಗುರುತರ ಆರೋಪವು ಮುನ್ನೆಲೆಗೆ ಬಂದಿದೆ. ಅಲ್ಲದೇ ಪ್ರತಿಪಕ್ಷಗಳ ಕೈಗೆ ಇನ್ನೊಂದು ಅಸ್ತ್ರವನ್ನು ಕೊಟ್ಟಂತಾಗಿದೆ.
ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಸಮಿತಿಯ ಸುರೇಶ್ ಸಂ ಪಾತ್ರೋಟಿ ಎಂಬುವರು 2025ರ ಜುಲೈ 19ರಂದು ಡಿಪಿಎಆರ್‍ಗೆ ದೂರು ನೀಡಿದ್ದರು. ಈ ದೂರನ್ನಾಧರಿಸಿ ಸ್ಪಷ್ಟ ಅಭಿಪ್ರಾಯ, ವರದಿ, ದಾಖಲೆಗಳನ್ನುಒದಗಿಸಬೇಕು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಅನಧಿಕೃತ ಟಿಪ್ಪಣಿ ಹೊರಡಿಸಿದ್ದಾರೆ.
2025ರ ಜುಲೈ 24ರಂದು ಹೊರಡಿಸಿರುವ ಅನಧಿಕೃತ ಟಿಪ್ಪಣಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಟಿಪ್ಪಣಿಯಲ್ಲೇನಿದೆ?
ಪರಿಶಿಷ್ಟ ಪಂಗಡಳ ಕಲ್ಯಾಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಎಂ ಎಸ್ ಜ್ಯೋತಿ ಅವರು ಸಾರ್ವಜನಿಕರಿಗೆ ಸ್ಪಂದಿಸದೇ ಏಕ ವಚನದಲ್ಲಿ ನಿಂದನೆ ಮಾಡಿರುತ್ತಾರೆ. ಸಾಮಾನ್ಯ ಜನರ ಕೆಲಸ ಕಾರ್ಯಗಳನ್ನು ಹಣ ಕೊಟ್ಟರೇ ಮಾತ್ರ ಕಡತವನ್ನು ಕೈಗೆತ್ತಿಕೊಳ್ಳುತ್ತಾರೆ. ಹಣ ಕೊಡದಿದ್ದರೇ ಕೆಲಸ ಮಾಡುವುದಿಲ್ಲ ಹಾಗೂ ಪರಿಶಿಷ್ಟ ಪಂಗಡದ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ಹಾಗೂ ಯಾವುದೇ ಪ್ರಸ್ತಾವನೆಯ ಕಡತಗಳು ಹಿರಿಯ ಅಧಿಕಾರಿಗಳಿಂದ ಮತ್ತು ಜನಪ್ರತಿನಿಧಿಗಳಿಂದ ಬಂದಂತಹ ಪ್ರಸ್ತಾವನೆಗಳನ್ನು ವಿಳಂಬ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಇವರನ್ನು ಅಮಾನತುಗೊಳಿಸಬೇಕು ಇಲ್ಲವೇ ಬೇರೆ ಇಲಾಖೆಗೆ ವರ್ಗಾವಣೆ ಮಾಡಬೇಕು ಎಂದು ಸುರೇಶ್ ಸಂ ಪಾತ್ರೋಟಿ ಅವರು ದೂರಿರುತ್ತಾರೆ.
ಈ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರು ಸಲ್ಲಿಸಿರುವ ದೂರು ಅರ್ಜಿಯನ್ನು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಬೇಕು. ದೂರಿನ ಕುರಿತು ಆಡಳಿತ ಇಲಾಖೆಯಾದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸ್ಪಷ್ಟ ಅಭಿಪ್ರಾಯ, ವರದಿ ದಾಖಲೆಗಳನ್ನು ನೀಡಬೇಕು ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು ಸೂಚಿಸಿರುವುದು ಅನಧಿಕೃತ ಟಿಪ್ಪಣಿಯಿಂದ ತಿಳಿದು ಬಂದಿದೆ.
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಆರಂಭಿಕ ಹಂತದಲ್ಲೇ ಲಂಚ, ಹಣಕ್ಕಾಗಿ ಬೇಡಿಕೆ ಮತ್ತು ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿದ್ದವು. ಸರ್ಕಾರಿ ಕಚೇರಿಗಳಲ್ಲಿ ಮೇಲಾಧಿಕಾರಿಗಳೇ ಲಂಚಕ್ಕಾಗಿ ಬೇಡಿಕೆ ಇಟ್ಟಿರುವ ಕುರಿತು ಹತ್ತಾರು ದೂರರ್ಜಿಗಳು ಸಲ್ಲಿಕೆಯಾಗಿದ್ದವು.
ಬೆಳಗಾವಿ ಉತ್ತರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಖಲೆಗಳನ್ನು ನೋಂದಣಿ ಮಾಡಿಸಲು ದೊಡ್ಡ ಮೊತ್ತಕ್ಕೆ ಬೇಡಿಕೆ ಇರಿಸಲಾಗುತ್ತಿದೆ. ಅದರಲ್ಲೂ ಫಾರಂ-1ನ್ನು ನೋಂದಣಿ ಮಾಡಿಸಲು 50,000 ರು.ಗಳಿಗೆ ಬೇಡಿಕೆ ಇರಿಸಲಾಗುತ್ತಿದೆ ಎಂದು ಆರೋಪವು ಕೇಳಿ ಬಂದಿತ್ತು.
ಮಾರುಕಟ್ಟೆ ಮೌಲ್ಯಕ್ಕನುಗುಣವಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳನ್ನು ಆಕರಿಸದೇ ಅಪಮೌಲ್ಯಗೊಳಿಸುತ್ತಿರುವ ಪ್ರಕರಣಗಳು ಮತ್ತು ಸಬ್ ರಿಜಿಸ್ಟ್ರಾರ್‍ಗಳ ಕಚೇರಿಗಳಲ್ಲಿನ ಅಧಿಕಾರಿ, ಸಿಬ್ಬಂದಿಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿದೆ ಎಂಬ ಆಪಾದನೆಗಳು ಕೇಳಿ ಬರುತ್ತಿರುವ ನಡುವೆಯೇ ಬೆಳಗಾವಿ ಉತ್ತರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಖಲೆಗಳ ನೋಂದಣಿಗೆ ಅಧಿಕಾರಿ, ನೌಕರರು ದೊಡ್ಡ ಮೊತ್ತಕ್ಕೆ ಬೇಡಿಕೆ ಇರಿಸಲಾಗುತ್ತಿದೆ ಎಂದು ದೂರುದಾರ ವಕೀಲ ಬಾಲಗೌಡ ಅವರು ಆಪಾದಿಸಿದ್ದರು.
ಫಾರಂ-1 ನೋಂದಣಿಗೆ 50,000 ರು ಲಂಚಕ್ಕೆ ಬೇಡಿಕೆ; ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಲಂಚಾವತಾರ
ದೂರಿನಲ್ಲೇನಿತ್ತು?
ಬೆಳಗಾವಿ ಉತ್ತರ ಸಬ್ ರಿಜಿಸ್ಟ್ರಾರ್ ಕಚೇರಿಯ ಪ್ರಥಮದರ್ಜೆ ಸಹಾಯಕ ಶಿವಕುಮಾರ್ ಎಂಬುವರು ಸಾರ್ವಜನಿಕವಾಗಿ ಭ್ರಷ್ಟಾಚಾರ ಎಸಗುತ್ತಿದ್ದಾರೆ. ಮತ್ತು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು.
ಕಾರ್ಯಾದೇಶ ನೀಡಲು 60 ಪರ್ಸೆಂಟ್ ಲಂಚಕ್ಕೆ ಬೇಡಿಕೆ; ಸರ್ಕಾರಕ್ಕೆ ದೂರು ಸಲ್ಲಿಸಿದ ಖಾಸಗಿ ಕಂಪನಿ
‘ಸಬ್ ರಿಜಿಸ್ಟ್ರಾರ್ ಕಚೇರಿಗೆ ದಾಖಲೆಗಳ ನೋಂದಣಿಗೆ ಬರುವವರಲ್ಲಿನ ಅಮಾಯಕತೆ ಮತ್ತು ಮುಗ್ದತೆಯನ್ನು ಶಿವಕುಮಾರ್ ಎಂಬಾತ ಬಳಸಿಕೊಳ್ಳುತ್ತಿದ್ದಾನೆ. ನೇರವಾಗಿ ವ್ಯವಹಾರ ಕುದುರಿಸುತ್ತಿರುವ ಶಿವಕುಮಾರ್ ಎಂಬಾತ ಬ್ಲಾಕ್‌ಮೇಲ್ ಕೂಡ ಮಾಡುತ್ತಿದ್ದಾನೆ. ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಠೇವಣಿಯ ಟೈಟಲ್ ಡೀಡ್ ಮಾಡಿಸುವಲ್ಲಿ (NO.BEL-1-1523-2024-25 DATED 04/05/2024) ನೋಂದಣಿ ಶುಲ್ಕವೆಂದು 200 ರು ಮತ್ತು ಅಫಡವಿಟ್‌ಗೆಂದು 100 ರುಗ.ಳನ್ನು ಅನಗತ್ಯವಾಗಿ ಪಡೆಯುತ್ತಿದ್ದಾನೆ. ನೋಂದಣಿ ಕಾಯ್ದೆ ಪ್ರಕಾರ ಟೈಟಲ್ ಡೀಡ್ ಠೇವಣಿ ಮಾಡಿಸಲು ಇಂತಹ ಯಾವುದೇ ಶುಲ್ಕಗಳಿಗೆ ಅವಕಾಶವಿಲ್ಲ,’ ಎಂದು ದೂರುದಾರ ವಕೀಲ ಬಾಲಗೌಡ ಬಸಗೌಡ ಪಾಟೀಲ್ ಎಂಬುವರು ದೂರಿನಲ್ಲಿ ವಿವರಿಸಿದ್ದರು.
ದಾಖಲೆಗಳ ನೋಂದಣಿಗಾಗಿ ಶಿವಕುಮಾರ್ ಆರಂಭದಲ್ಲೇ 5,000 ರು.ಗಳಿಗೆ ಬೇಡಿಕೆ ಇರಿಸುತ್ತಿದ್ದಾರೆ. ಮಾರಾಟ ಪತ್ರದಲ್ಲಿ ಮೌಲ್ಯವನ್ನು ಕಡಿಮೆಗೊಳಿಸುವುದು, ನಿಗದಿಪಡಿಸಿರುವ ನೋಂದಣಿ ಶುಲ್ಕವನ್ನು ಮೀರಿ ಸಂಗ್ರಹಿಸಲು ತಮಗೆ ಅಧಿಕಾರ ಇದೆ ಎಂದು ಹೇಳಿಕೊಳ್ಳುತ್ತಾರೆ. ಅಲ್ಲದೇ ಮಾರುಕಟ್ಟೆ ಮೌಲ್ಯಕ್ಕಿಂತಲೂ ಹೆಚ್ಚಿನ ಶುಲ್ಕವನ್ನು ವಸೂಲು ಮಾಡುತ್ತಿದ್ದಾರೆ. ನೋಂದಣಿ ಶುಲ್ಕದಲ್ಲಿ ಪಾಲುದಾರಿಕೆ ಪಡೆಯುತ್ತಿದ್ದಾರೆ ಎಂದು ವಿವರಿಸಿದ್ದರು.
‘ಹೀಗಾಗಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಮ್ಮ ಗಮನಕ್ಕೆ ತರಲಾಗುತ್ತಿದೆ. ಕಚೇರಿಯ ಪ್ರಥಮದರ್ಜೆ ಗುಮಾಸ್ತರು ಕಾನೂನುಬಾಹಿರ ಮತ್ತು ತಪ್ಪು ಮಾಹಿತಿ ನೀಡುವುದು, ದಾಖಲೆಗಳ ನೋಂದಣಿಗೆ ಬ್ಲಾಕ್‌ಮೇಲ್ ಮಾಡುತ್ತಿರುವ ಸಂಗತಿಯನ್ನು ತಮ್ಮ ಗಮನಕ್ಕೆ ತರಲಾಗುತ್ತಿದೆ,’ ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗಮನ ಸೆಳೆದಿದ್ದರು.
ಕಾಮಗಾರಿಗಳಲ್ಲಿ ಭಾರೀ ಭ್ರಷ್ಟಾಚಾರ; ಹೆಚ್ಚಿನ ಲಂಚಕ್ಕೆ ಬೇಡಿಕೆ, ಗುತ್ತಿಗೆದಾರರಿಂದಲೇ ದೂರು, ನಡೆಯದ ತನಿಖೆ
ವಿಶೇಷವಾಗಿ ಫಾರಂ ನಂ-1 (Un-assessed Corporation Extract)ನ್ನು ನೋಂದಣಿ ಮಾಡಲು 50,000 ರು.ಗೆ ಬೇಡಿಕೆ ಇರಿಸುತ್ತಿದ್ದಾರೆ. ಇದಕ್ಕೆ ಸಹಕರಿಸದೇ ಇದ್ದರೆ ಈ ದಾಖಲೆಯನ್ನು ನೋಂದಣಿ ಮಾಡಲು ವಿಳಂಬ ಮಾಡುತ್ತಿದ್ದಾರೆ. ನಂತರ ಮಾರಾಟದಾರರಿಗೆ ಬ್ಲಾಕ್‌ಮೇಲ್ ಮಾಡುವುದು ಸಹ ನಡೆದಿದೆ ಎಂದು ದೂರಿನಲ್ಲಿ ಆಪಾದಿಸಲಾಗಿತ್ತು.
‘ಬೆಳಗಾವಿಯ ಸಬ್ ರಿಜಿಸ್ಟ್ರಾರ್ ಕಚೇರಿಯು ಜನಸ್ನೇಹಿಯನ್ನಾಗಿಸಬೇಕು. ಅಧಿಕಾರಿ, ಸಿಬ್ಬಂದಿಗಳ ವರ್ತನೆಯಿಂದಾಗಿ ನಾಗರೀಕರಿಗೆ ತೊಂದರೆಯಾಗುತ್ತಿದೆ ವಿಶೇಷವಾಗಿ ಸೇಲ್ ಡೀಡ್ ಸೇರಿದಂತೆ ಮತ್ತಿತರೆ ದಾಖಲೆಗಳ ನೋಂದಣಿಗಾಗಿ ಹೆಚ್ಚುವರಿ ಶುಲ್ಕಕ್ಕೆ ಬೇಡಿಕೆ ಇಡಲಾಗುತ್ತಿರುವುದನ್ನು ತಪ್ಪಿಸಬೇಕು. ಅಲ್ಲದೇ ವಾಸ್ತವಿಕವಾಗಿ ಸರ್ಕಾರಕ್ಕೆ ಬರಬೇಕಿದ್ದ ನೋಂದಣಿ ಶುಲ್ಕದ ಸಂಗ್ರಹಣೆಯಲ್ಲಿಯೂ ಕಡಿತ ಮಾಡಲಾಗುತ್ತಿದೆ. ಈ ಎಲ್ಲವನ್ನೂ ಗಮನಿಸಿ ಸಂಬಂಧಿಸಿದ ನೌಕರನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು,’ ಎಂದು ವಕೀಲ ಬಾಲಗೌಡ ಬಸಗೌಡ ಪಾಟೀಲ್ ಅವರು ದೂರಿನಲ್ಲಿ ಕೋರಿದ್ದನ್ನು ಸ್ಮರಿಸಬಹುದು.