Thursday | August 20, 2026 |

ಬೆಂಗಳೂರು ಉತ್ತರ ವಿವಿಯಲ್ಲಿಯೂ ಬೇಕಾಬಿಟ್ಟಿ ಖರ್ಚು; ಸಿಂಡಿಕೇಟ್‌ ಸದಸ್ಯರಿಂದಲೇ ರಾಜ್ಯಪಾಲರಿಗೆ ದೂರು

ಬೆಂಗಳೂರು; ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಕಾಮಗಾರಿಗಳು, ಸರಕು ಸಂಗ್ರಹಣೆ, ಖರೀದಿಯಲ್ಲಿ ಅಕ್ರಮ ನಡೆದಿವೆ. ಮತ್ತು ವಿಶ್ವವಿದ್ಯಾಲಯದ ಬೊಕ್ಕಸದಿಂದ ಬೇಕಾಬಿಟ್ಟಿಯಾಗಿ ಕೋಟ್ಯಂತರ ರುಪಾಯಿಗಳನ್ನು ವೆಚ್ಚ ಮಾಡಲಾಗಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿವೆ.

 

ಈ ಸಂಬಂಧ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ರವೀಶ್ ಎಂಬುವರು ರಾಜ್ಯಪಾಲರಿಗೆ ಲಿಖಿತ ದೂರು ನೀಡಿದ್ದಾರೆ.

 

ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಶ್ರೀಧರ್‍‌ ಸಿ ಎನ್‌ ಎಂಬುವರು ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಹಲವು ಅಕ್ರಮಗಳು ನಡೆದಿವೆ. ಈ ಕೃತ್ಯದಲ್ಲಿ ಕುಲಪತಿ ನಿರಂಜನ್‌ ವಾನಳ್ಳಿ ಅವರೂ ಸಹ ಭಾಗಿಯಾಗಿದ್ದಾರೆ ಎಂದು ದೂರಲಾಗಿದೆ. ರವೀಶ್‌ ಅವರು ಮಾಡಿರುವ ಆರೋಪವನ್ನು ಕುಲಪತಿ ಪ್ರೊ ನಿರಂಜನ ವಾನಳ್ಳಿ ಅವರು ತಳ್ಳಿ ಹಾಕಿದ್ದಾರೆ.

 

ಈ ಅಕ್ರಮಗಳ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ರವೀಶ್‌ ಎಂಬುವರು ದೂರಿನಲ್ಲಿ ಕೋರಿರುವುದು ತಿಳಿದು ಬಂದಿದೆ.

 

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಆಡಳಿತ ಕಚೇರಿ, ಸ್ನಾತಕೋತ್ತರ ಕೇಂದ್ರ ಮಂಗಸಂಸದ್ರ ಘಟಕ ಕಾಲೇಜು ಲಿಂಗರಾಜಪುರ ಹಾಗೂ ವಿಶ್ವಿವದ್ಯಾಲಯದ ಶಿಕ್ಷಣ ಕಾಲೇಜು ಶಚಿಕ್ಕಬಳ್ಳಾಪುರ ಸಂಸ್ಥೆಗಳಿಗೆ ಪೀಠೋಪಕರಣ ಖರೀದಿಯಲ್ಲಿಯೂ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.

 

 

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮಂಗಸಂದ್ರದ ಗ್ರಂಥಾಲಯದಲ್ಲಿ ಕೇವಲ 28,000 ಪುಸ್ತಕಗಳಿವೆ. ಲೈಬ್ರೇರಿ ಅಟೋಮೇಷನ್‌ ಸಾಫ್ಟ್‌ವೇರ್‍‌ ಅಳವಡಿಸಲು 1.5 ಕೋಟಿ ರು ಲೆಕ್ಕ ತೋರಿಸಿದ್ದಾರೆ ಎಂದು ಸಿಂಡಿಕೇಟ್‌ ಸದಸ್ಯ ರವೀಶ್‌ ಅವರು ದೂರಿರುವುದು ತಿಳಿದು ಬಂದಿದೆ.

 

ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮಂಗಸಂದ್ರ ಆವರಣದಲ್ಲಿ ವೈಫೈ ಸಂಪರ್ಕ ಕಲ್ಪಿಸಲು 2.5 ಕೋಟಿ ರೂಪಾಯಿಗಳನ್ನು ನೀಡಿರುವುದಾಗಿ ಸಿಂಡಿಕೇಟ್ ಸಭೆಗೆ ಮಾಹಿತಿ ನೀಡಿದ್ದಾರೆ. ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮಂಗಸಂದ್ರದಲ್ಲಿ 3 ಕೋಟಿ ವೆಚ್ಚದಲ್ಲಿ ಒಂದು ಮೆಗಾವ್ಯಾಟ್ ಸೋಲಾರ್ ಪ್ಯಾನಲ್ ಅಳವಡಿಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರು. ಆದರೆ ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಅದನ್ನು ಕೇವಲ 400 ಕಿ.ವ್ಯಾಟ್ ಗೆ ಇಳಿಸಿ ಅದಕ್ಕೆ 4.5 ಕೋಟಿ ರು ವೆಚ್ಚವಾಗಲಿದೆ ಎಂದು ತೋರಿಸಿದ್ದಾರೆ ಎಂದು ರವೀಶ್‌ ಅವರು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

‘ಈಗಾಗಲೇ ಮಂಗಸಂದ್ರ ಸ್ನಾತಕೋತ್ತರ ಕೇಂದ್ರಕ್ಕೆ ಕೇವಲ 8 ತಿಂಗಳ ಹಿಂದೆ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಪೀಠೋಪಕರಣಗಳನ್ನು ಖರೀದಿಸಿದ್ದರು. ಈಗ ಹಣ ಮಾಡುವ ಒಂದೇ ಕಾರಣಕ್ಕಾಗಿ ಮತ್ತೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ಪೀಠೋಪಕರಣಗಳನ್ನು ಖರೀದಿಸಲು ಮುಂದಾಗಿದ್ದಾರೆ,’ ಎಂದು ದೂರಿನಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ.

 

ವಿ ವಿ ಆವರಣದಲ್ಲಿ ಜೋಡಿಸಿರುವ ಪೀಠೋಪಕರಣಗಳು

 

ರಸಾಯನ ಶಾಸ್ತ್ರ, ಭೌತಶಾಸ್ತ್ರ ಮತ್ತು ಸಸ್ಯ ಶಾಸ್ತ್ರ ವಿಭಾಗಗಳಲ್ಲಿ ಈಗಾಗಲೇ ಎಲ್ಲಾ ರೀತಿಯ ಗಾಜಿನ ವಸ್ತುಗಳು ಮತ್ತು ಇತರೆ ಸಾಮಾಗ್ರಿಗಳಿವೆ. ಹಣ ಮಾಡುವ ಕಾರಣಕ್ಕಾಗಿ ಮತ್ತೆ 75 ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಗೆ ಮುಂದಾಗಿದ್ದಾರೆ ಎಂದು ದೂರಿರುವುದು ಗೊತ್ತಾಗಿದೆ.

 

ವಿಶ್ವವಿದ್ಯಾಲಯದ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ 363 ಲ್ಯಾಪ್‌ಟಾಪ್ ನೀಡಿದ್ದು ಅಧಿಕ ಮೊತ್ತ ನಮೂದಿಸಿ ಕಳಪೆ ಗುಣಮಟ್ಟದ ಲ್ಯಾಪ್‌ಟಾಪ್ ಗಳನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ವಿಶ್ವವಿದ್ಯಾಲಯದ ಬಳಿ ಎಲ್ಲಾ ರೀತಿಯ ಉಪಕರಣಗಳು ಇವೆ. ಆದರೂ ಸಹ ಅಧಿಕ ಮೊತ್ತ ನಮೂದಿಸಿ ಸುಮಾರು 1.5 ಕೋಟಿ ವೆಚ್ಚದಲ್ಲಿ ಐಸಿಟಿ ಉಪಕರಣಗಳನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ಆಪಾದಿಸಿರುವುದು ತಿಳಿದು ಬಂದಿದೆ.

 

ಈಗಾಗಲೇ ವಿಶ್ವವಿದ್ಯಾಲಯದ ಮಂಗಸಂದ್ರದಲ್ಲಿರುವ ಸ್ನಾತಕೋತ್ತರ ಕೇಂದ್ರದಲ್ಲಿ ಎಲ್ಲಾ ಕಛೇರಿಗಳು, ಗ್ರಂಥಾಲಯ, ತರಗತಿ ಕೋಣೆ ಮತ್ತು ಲ್ಯಾಬ್ ಗಳಲ್ಲಿ ಯುಪಿಎಸ್‌ಗಳಿವೆ. ನಾಲ್ಕು ತಿಂಗಳ ಹಿಂದೆಯೇ 21 ಲಕ್ಷ ರೂಪಾಯಿ ವೆಚ್ಚದಲ್ಲಿ ಜನರೇಟರ್ ಖರೀದಿಸಲಾಗಿದೆ. ಜೊತೆಗೆ 400 ಕಿ.ವ್ಯಾಟ್ ಸೋಲಾರ್ ಪ್ಯಾನಲ್ ಅಳವಡಿಸಲಾಗುತ್ತಿದೆ. ಆದರೂ ಮತ್ತೆ ಹೆಚ್ಚುವರಿಯಾಗಿ ಒಂದು ಕೋಟಿ ವೆಚ್ಚದಲ್ಲಿ ಯುಪಿಎಸ್‌ ಖರೀದಿಸುವ ಅವಶ್ಯಕತೆ ಏನಿದೆ ಎಂದು ರವೀಶ್‌ ಅವರು ದೂರಿನಲ್ಲಿ ಪ್ರಶ್ನಿಸಿದ್ದಾರೆ.

 

ವಿ ವಿ ಆವರಣದಲ್ಲಿ ಜೋಡಿಸಿಟ್ಟಿರುವ ಯುಪಿಎಸ್‌ ಉಪಕರಣಗಳು

 

ಲಿಂಗರಾಜಪುರ ಘಟಕ ಕಾಲೇಜು ಮತ್ತು ಚಿಕ್ಕಬಳ್ಳಾಪುರ ಶಿಕ್ಷಣ ಕಾಲೇಜಿನಲ್ಲಿ ಲ್ಯಾನ್ ಅಳವಡಿಸಲು 1.5 ಕೋಟಿ ನಿಗದಿ ಮಾಡಲಾಗಿದೆ. ಇದರಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಆಡಳಿತ ಕಛೇರಿ ಬಾಡಿಗೆಯ ಕಟ್ಟಡದಲ್ಲಿದೆ. ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮಾಡಲು ಈಗಿರುವ ವಸ್ತುಗಳೇ ಸಾಕು. ಅಲ್ಲದೆ ಮುಂದಿನ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯದ ಕಛೇರಿಯು ಅಮರಾವತಿ ಕ್ಯಾಂಪಸ್ ಗೆ ಸ್ಥಳಾಂತರಗೊಳ್ಳಲಿದೆ. ಪ್ರಸ್ತುತ ಬಾಡಿಗೆ ಕಟ್ಟಡವನ್ನು ನವೀಕರಿಸುವ ಅಗತ್ಯವಿಲ್ಲ. ಆದರ ಜೊತೆಗೆ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಮತ್ತೆ ವಿಡಿಯೋ ಕಾನ್ಫರೆನ್ಸ್ ಉಪಕರಣಗಳನ್ನು ಖರೀದಿಸಲಾಗುತ್ತಿದೆ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ವಿವಿ ಆವರಣದಲ್ಲಿರುವ ಪೀಠೋಪಕರಣಗಳು

 

ಗ್ರಂಥಾಲಯಗಳಿಗೆ 95 ಲಕ್ಷ ರೂಪಾಯಿಯಲ್ಲಿ ಪುಸ್ತಕ ಖರೀದಿ, ಇತರೆ ಖರೀದಿಗಳಲ್ಲಿ ಬಾರಿ ಅಕ್ರಮಗಳು ನಡೆದಿವೆ ಎಂದು ಆಪಾದಿಸಿರುವುದು ತಿಳಿದು ಬಂದಿದೆ.

 

ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮತ್ತು ಅಧೀನ ಸಂಸ್ಥೆಗಳಿಗೆ ಪೀಠೋಪಕರಣಗಳನ್ನು ಖರೀದಿಸಲು ಸಿಂಡಿಕೇಟ್‌ ಅನುಮೋದನೆಗೆ ಮಂಡನೆಯಾಗಿತ್ತು. ಇದಕ್ಕೆ ಸಿಂಡಿಕೇಟ್‌ ಸದಸ್ಯ ರವೀಶ್‌ ಮತ್ತು ಸಹನ ಎಸ್‌ ಆರ್‍‌ ಅವರು ಅನುಮೋದಿಸಿರಲಿಲ್ಲ. ಉಳಿದ ಸದಸ್ಯರು ಅನುಮೋದಿಸಿರುವುದು ಸಿಂಡಿಕೇಟ್‌ ಸಭೆ ನಡವಳಿಯಿಂದ ಗೊತ್ತಾಗಿದೆ.

 

 

 

ಅದೇ ರೀತಿ ಮಂಗಸಂದ್ರದ ಸ್ನಾತಕೋತ್ತರ ಕೇಂದ್ರದಲ್ಲಿ ಸಸ್ಯಶಾಸ್ತ್ರ, ರಸಾಯನ ಶಾಸ್ತ್ರ ಭೌತಶಾಸ್ತ್ರ ಪ್ರಯೋಗಾಲಯಕ್ಕೆ ರಾಸಾಯನಿಕ, ಗಾಜಿನ ವಸ್ತುಗಳು ಮತ್ತು ಇತರೆ ಸಾಮಗ್ರಿಗಳನ್ನು ಖರೀದಿಸಲು ಮುಂದಾಗಿತ್ತು. ಈ ಉಪಕರಣಗಳಿಗೆ ಅಂದಾಜು 75 ಲಕ್ಷ ರು ಅಗಲಿದೆ ಎಂದು ವಿಶ್ವವಿದ್ಯಾಲಯವು ಅಂದಾಜಿಸಿತ್ತು.  ರವೀಶ್‌ ಅವರು ಅನುಮೋದನೆ ನೀಡಿರಲಿಲ್ಲ.

 

 

ಅದೇ ರೀತಿ ಬ್ಯಾಟರಿ ಬ್ಯಾಕ್‌ ಅಪ್‌ ಮತ್ತು ಯುಪಿಎಸ್‌ ಖರೀದಿಸಲು ವಿಶ್ವವಿದ್ಯಾಲಯವು ಮುಂದಾಗಿತ್ತು. ಇದಕ್ಕೂ ರವೀಶ್‌ ಅವರು ಅನುಮೋದನೆ ನೀಡಿರಲಿಲ್ಲ.

 

 

ಹಾಗೂ ವಿಶ್ವವಿದ್ಯಾಲಯದ ಘಟಕ ಕಾಲೇಜು ಲಿಂಗರಾಜಪುರ ಮತ್ತು ಚಿಕ್ಕಳ್ಳಾಪುರದಲ್ಲಿರುವ ವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜಿಗೆ ಲ್ಯಾನ್‌ ಸಂಪರ್ಕ ಅಳವಡಿಸಲು ಟೆಂಡರ್‍‌ ಕರೆಯಲು ಮುಂದಾಗಿತ್ತು. ರವೀಶ್‌ ಅವರು ಇದನ್ನು ಅನುಮೋದಿಸಿರಲಿಲ್ಲ.

 

 

50.00 ಲಕ್ಷ ರು ಮೊತ್ತದಲ್ಲಿ ವಿಡಿಯೋ ಕಾನ್ಫ್‌ರೆನ್ಸ್‌ ಸಭೆಗಳನ್ನು ಮಾಡಲು ಉಪಕರಣ ಖರೀದಿಸಲು ಮುಂದಾಗಿತ್ತು.

 

 

ಸಿಂಡಿಕೇಟ್‌ ಸದಸ್ಯ ರವೀಶ್‌ ಅವರು ಅನುಮೋದನೆ ನೀಡಿರಲಿಲ್ಲ ಎಂಬುದು ನಡವಳಿಯಿಂದ ತಿಳಿದು ಬಂದಿದೆ.

 

ವಿಶ್ವವಿದ್ಯಾಲಯದ ಕುಲಪತಿ ಪ್ರೊ ನಿರಂಜನ ವಾನಳ್ಳಿ ಅವರು ಸಿಂಡಿಕೇಟ್‌ ಸದಸ್ಯ ರವೀಶ್‌ ಅವರು ಮಾಡಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ.

 

ಈ ಕುರಿತು ‘ದಿ ಫೈಲ್‌’ ಗೆ ಪ್ರತಿಕ್ರಿಯೆ ನೀಡಿರುವ ಅವರು ‘ರವೀಶ್ ಅವರಿಗೆ ಆರಂಭದಿಂದಲೂ ನನ್ನ ಮೇಲೆ ದ್ವೇಷ. ಬೇರೆ ಸಿಂಡಿಕೇಟ್‌ ಸದಸ್ಯರಿಗೆ ಇಲ್ಲದ ಆಕ್ಷೇಪ ಇವರಿಗೆ ಮಾತ್ರ ಏಕೆ ಎಂದು ಹುಡುಕಿದರೆ ದ್ವೇಷದ ಹಿಂದಿನ ಕಾರಣ ತಿಳಿಯುತ್ತದೆ. ಅವರು ಸಿಂಡಿಕೇಟ್‌ ಸದಸ್ಯರಾಗಿ ಎಲ್ಲ ನಿರ್ಣಯಗಳಿಗೆ ಸಹಿ ಮಾಡಿದ್ದಾರೆ. ಹೊರಗೆ ಬಂದು ನನ್ನ ವಿರುದ್ಧ ಪತ್ರಿಕಾಗೋಷ್ಠಿ ಮಾಡುತ್ತಾರೆ. ಅವರು ಹೇಳುವುದಕ್ಕೆ ಏನು ಆಧಾರವಿದೆ, ತನಿಖೆ ನಡೆಸಲಿ, ನಾನು ತಪ್ಪು ಮಾಡಿದ್ದರೇ ಶಿಕ್ಷೆಯಾಗಲಿ. ಅವರು ಹೇಳಿದ್ದು ಸುಳ್ಳು ಎಂದು ಸಾಬೀತಾದರೇ ಅವರು ಶಿಕ್ಷೆಗೆ ತಯಾರು ಇದ್ದಾರೆಯೇ,’ ಎಂದು ಪ್ರಶ್ನಿಸಿದ್ದಾರೆ.

 

ಅಲ್ಲದೇ ನಮ್ಮಲ್ಲಿ ಕೆಎಎಸ್‌ ಹಿರಿಯ ಅಧಿಕಾರಿ ಕುಲಸಚಿವರಿದ್ದಾರೆ. ನಿಯಮಾನುಸಾರವೇ ಕೆಲಸ ಕೈಗೊಳ್ಳಲಾಗಿದೆ. ರವೀಶ್‌ ಅವರು ವೈಯಕ್ತಿಕ ದ್ವೇಷದಿಂದ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

Hot this week

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...

ಹಿಂದುಳಿದ ಸಮುದಾಯ ಅಭಿವೃದ್ಧಿ ನಿಗಮಗಳಿಗೆ 473.41 ಕೋಟಿ ಅನುದಾನ ಹಂಚಿಕೆ; ನಾಲ್ಕೂವರೆ ತಿಂಗಳಾದರೂ ನಯಾಪೈಸೆಯೂ ಬಿಡುಗಡೆಯಾಗಿಲ್ಲ

ಬೆಂಗಳೂರು; ಆರ್ಥಿಕ ವರ್ಷ ಆರಂಭವಾಗಿ ನಾಲ್ಕೂವರೆ ತಿಂಗಳಾದರೂ ಸಹ ಹಿಂದುಳಿದ ವರ್ಗಗಳ...
Please Scan to make Your Contribution

Topics

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...

ಫ್ರೀಡಂ ಹಬ್ಬಕ್ಕೆ 6 ಕೋಟಿ ವೆಚ್ಚ!; ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕೆಲಸ ಆರಂಭಿಸಿದ ಕಂಪನಿ

ಬೆಂಗಳೂರು; ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಅನುಮೋದಿತ ಕಾಮಗಾರಿಗಳ ಕಾರ್ಯಭಾರಕ್ಕೆ ನಲುಗಿ...

3,206 ಪಂಚಾಯ್ತಿಗಳಲ್ಲಿ ಶಾಸನಬದ್ಧ ತೆರಿಗೆ ವಸೂಲು; ಸರ್ಕಾರಕ್ಕೆ ಪಾವತಿಯಾಗದ 17.28 ಕೋಟಿ ಎಲ್ಲಿದೆ?

ಬೆಂಗಳೂರು; ರಾಜ್ಯದ 27 ಜಿಲ್ಲೆಗಳ 3,206 ಪಂಚಾಯ್ತಿಗಳು ಸರಕು ಸೇವಾ ತೆರಿಗೆ,...

Related Articles

Popular Categories

error: Content is protected !!