ಕಾಮಗಾರಿಗಳಲ್ಲಿ ಭಾರೀ ಭ್ರಷ್ಟಾಚಾರ; ಹೆಚ್ಚಿನ ಲಂಚಕ್ಕೆ ಬೇಡಿಕೆ, ಗುತ್ತಿಗೆದಾರರಿಂದಲೇ ದೂರು, ನಡೆಯದ ತನಿಖೆ

ಬೆಂಗಳೂರು;  ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೂಲಕ  ನಡೆಯುತ್ತಿರುವ ಕಾಮಗಾರಿಗಳಲ್ಲಿ ಭಾರೀ ಅಕ್ರಮ ಮತ್ತು ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಸರ್ಕಾರಕ್ಕೂ ಹಲವು ದೂರುಗಳು ದಾಖಲಾಗಿವೆ. ಆದರೂ ಸಹ ಇದುವರೆಗೂ ಇಂತಹ ಪ್ರಕರಣಗಳತ್ತ ಕ್ರೈಸ್‌ ಕಣ್ಣೆತ್ತಿಯೂ ನೋಡಿಲ್ಲ. ಒಂದೂವರೆ ವರ್ಷಗಳಾದರೂ ಯಾವುದೇ ಕ್ರಮವನ್ನೂ ವಹಿಸಿಲ್ಲ. ಸರ್ಕಾರದ ನಿರ್ದೇಶನಗಳನ್ನೂ ಪಾಲಿಸಿಲ್ಲ.

 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಹೊರಗುತ್ತಿಗೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಇಂಜಿನಿಯರ್‍‌ಗಳು ಬಿಲ್‌ ಮಾಡಿಸಲು ಗುತ್ತಿಗೆದಾರರ ಬಳಿ ಕಮಿಷನ್‌ಗೆ ಬೇಡಿಕೆ ಇಡುತ್ತಿದ್ದಾರೆ ಎಂಬ ದೂರಿನ ನಡುವೆಯೇ ಕ್ರೈಸ್‌ನಲ್ಲಿನ ಈ ಇಂಜಿನಿಯರ್‍‌ಗಳ ವಿರುದ್ಧವೇ ಹತ್ತಾರು ದೂರುಗಳು ದಾಖಲಾಗಿರುವುದು ಮುನ್ನೆಲೆಗೆ ಬಂದಿವೆ.

 

ಈ ದೂರುಗಳ ಕುರಿತು ಎರಡು ವಾರಗಳ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಸರ್ಕಾರವೇ ಸೂಚಿಸಿದೆ. ಆದರೆ ಇದುವರೆಗೂ ಕ್ರೈಸ್‌ನಿಂದ ಯಾವುದೇ ವರದಿಯೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಮತ್ತು ಆರೋಪಿತ ಇಂಜನಿಯರ್‍‌ಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿಲ್ಲ.

 

ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್‌ ಅವರು ಕ್ರೈಸ್‌ನ ವ್ಯವಸ್ಥಾಪಕ ನಿರ್ದೇಶಕರಿಗೂ ಹಲವು ಪತ್ರಗಳನ್ನು ಬರೆದಿದ್ದಾರೆ. ಈ ಪತ್ರಗಳ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

‘ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಮಘದ ಕೇಂದ್ರ ಕಚೇರಿಯಲ್ಲಿ ಹೊರ ಸಂಪನ್ಮೂಲದಿಂದ ಕಿರಿಯ ಇಂಜಿನಿಯರ್‍‌ ಆಗಿ ಸೇವೆ ಸಲ್ಲಿಸುತ್ತಿರುವ ಗಿರೀಶ್‌ ತೊನ್‌ಶ್ಯಾಳ್ ಅವರು ಕಾಮಗಾರಿಗಳಲ್ಲಿ ಭಾರೀ ಅಕ್ರಮ, ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಹಲವಾರು ದೂರುಗಳು ಸ್ವೀಕೃತವಾಗಿವೆ. ಅದರಂತೆ ಪರಿಶೀಲಿಸಿ ಅಗತ್ಯ ಕ್ರಮವಹಿಸಿ, ಕ್ರಮ ವಹಿಸಿರುವ ಬಗ್ಗೆ ವರದಿ ಸಲ್ಲಿಸಬೇಕು ಎಂದು ಹಲವಾರು ಪತ್ರಗಳನ್ನು ಬರೆಯಲಾಗಿದೆ. ಹಾಗೂ ಈ ಕುರಿತು ತನಿಖೆ ನಡೆಸಿ ಸೂಕ್ತ, ದಾಖಲಾತಿ, ಸ್ಪಷ್ಟ ಅಭಿಪ್ರಾಯದೊಂದಿಗೆ ಎರಡು ವಾರದೊಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ವಹಿಸಿರುವ ಬಗ್ಗೆ ಸರ್ಕಾರಕ್ಕೆ ವರದಿ ಸ್ವೀಕೃತವಾಗಿಲ್ಲ,’ ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಬರೆದಿರುವ ಪತ್ರದಲ್ಲಿ ವಿವರಿಸಲಾಗಿದೆ.

 

ಅಲ್ಲದೇ ಇಂತಹ ದೂರುಗಳನ್ನಾಧರಿಸಿ ತನಿಖೆ ನಡೆಸುವ ಸಂಬಂಧ ಒಂದೂವರೆ ವರ್ಷದಿಂದಲೂ ಸರ್ಕಾರವು ನಿರ್ದೇಶನ ನೀಡುತ್ತಿದೆ. ಆದರೆ ಕ್ರೈಸ್ ಮಾತ್ರ ಯಾವುದೇ ವರದಿಯನ್ನೂ ಸಲ್ಲಿಸಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

ಅದೇ ರೀತಿ ‘ಹೊರ ಗುತ್ತಿಗೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಜನಿಯರ್‍‌   ಗಿರೀಶ್‌  ತೊನ್‌ಶ್ಯಾಳ್‌ ಅವರು  ಇವರ ಮೇಲೆ ಮಾಡಿರುವ ಆರೋಪಗಳು ಸುಳ್ಳಾಗಿರುವುದರಿಂದ ಇವರನ್ನು ಸೇವೆಯಲ್ಲಿ ಮುಂದುವರೆಸಲಾಗಿದೆ ಅಥವಾ ಇವರ ಮೇಲೆ ಆರೋಪಗಳು ಸತ್ಯವಾಗಿರುವುದರಿಂದ ಇವರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಲಿಖಿತವಾಗಿ 2024ರ ನವೆಂಬರ್‍‌ 25ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು,’ ಎಂದು ಸೂಚಿಸಿದ್ದರು.

 

ಹಾಗೆಯೇ ಇತರೆ ಸಹಾಯಕ, ಕಿರಿಯ ಇಂಜಿನಿಯರ್‍‌ಗಳಾದ ದತ್ತು ವಿ ನಾಯಕ್‌, ಕಿರಣ್‌ ಕುಮಾರ್‍‌ ವಿರುದ್ಧವೂ ದೂರುಗಳು ಸಲ್ಲಿಕೆಯಾಗಿವೆ. ಇವರ ವಿರುದ್ಧದ ದೂರುಗಳ ಕುರಿತಾಗಿಯೂ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿರುವುದು ತಿಳಿದು ಬಂದಿದೆ.

 

ಬಿಲ್‌ ಮಾಡಿಸಲು ಗುತ್ತಿಗೆದಾರರಿಗೆ 5ರಿಂದ 6 ಪರ್ಸೆಂಟ್‌ನಷ್ಟು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.

 

ಈ ಕುರಿತು ನಂಜೇಗೌಡ ಮತ್ತಿತರರು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಮತ್ತು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್‌ ಅವರಿಗೆ 2024ರ ಆಗಸ್ಟ್‌ 31ರಂದೇ ಲಿಖಿತ ದೂರು ಸಲ್ಲಿಸಿದ್ದಾರೆ. ಈ ದೂರನ್ನಾಧರಿಸಿ ಕ್ರಮ ವಹಿಸಿ ಎಂದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್‌ ಅವರು ಷರಾ ಬರೆದಿದ್ದರು.

 

 

 

ಬಿಲ್‌ ಮಾಡಿಸಲು ಗುತ್ತಿಗೆದಾರರಿಂದ 6 ಪರ್ಸೆಂಟ್‌ ಕಮಿಷನ್‌ ವಸೂಲಿ; ಕ್ರೈಸ್‌ನಲ್ಲಿ ಲಂಚಾವತಾರ ಆರೋಪ

 

ದೂರಿನಲ್ಲೇನಿತ್ತು?

 

ಗಿರೀಶ್‌ ತೋನ್ಸಾಳ್‌ ಅವರು ಸುಮಾರು 15 ವರ್ಷಗಳಿಂದಲೂ ಹೊರ ಸಂಪನ್ಮೂಲ ಅಡಿಯಲ್ಲಿ ಸಹಾಯಕ ಇಂಜಿನಿಯರ್‍‌ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಂಘದ ಅಧೀನದಲ್ಲಿ ನಡೆಯುವ ಕಾಮಗಾರಿಗಳ ಗುತ್ತಿಗೆದಾರರಿಗೆ ವರ್ಕ್ ಆರ್ಡರ್‍‌, ಬಿಲ್‌, ಇಐಆರ್‍ಎಲ್‌ ವರ್ಕ್‌ ಸ್ಲಿಪ್‌, ಬಿಲ್‌ಗಳಿಗೆ ಸಹಿ ಮಾಡಿಸಲು ಪ್ರತಿ ಗುತ್ತಿಗೆದಾರರ ಬಳಿ 5ರಿಂದ 6 ಪರ್ಸೆಂಟ್‌ ನಂತೆ ಹಣ ಪಡೆಯುತ್ತಿದ್ದಾರೆ. 2010ರಿಂದ 2022ರವರೆಗೆ ಹಣ ವಸೂಲು ಮಾಡಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿರುವುದು ತಿಳಿದು ಬಂದಿದೆ.

 

‘ಸರ್ಕಾರದ ಹಂತದಲ್ಲಿ ಗುತ್ತಿಗೆದಾರರ ಕಡತಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಹೊರಡಿಸಲು ಒಂದುಕಡತಕ್ಕೆ ಗುತ್ತಿಗೆದಾರರ ಬಳಿ 20,000 ರು ಪಡೆಯುತ್ತಾರೆ. ಕಾರ್ಯನಿರ್ವಾಹಕ ಅಧಿಕಾರಿಯವರಿಂದ ಕಡತಕ್ಕೆ ಸಹಿ ಮಾಡಿಸಲು ಗುತ್ತಿಗೆದಾರರ ಬಳಿ 5ರಿಂದ 6 ಪರ್ಸೆಂಟ್‌ನಂತೆ ಹಣ ವಸೂಲು ಮಾಡುತ್ತಾರೆ,’ ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.

 

ಗುತ್ತಿಗೆದಾರರು ಹಣ ನೀಡಿದರೆ ಮಾತ್ರ ಕಡತಗಳಿಗೆ ಸಹಿ ಬೀಳಲಿದೆ. ಹಣ ಕೊಡದಿದ್ದರೇ ಕಡತ, ಎಂಬಿ ಬುಕ್‌, ನೋಟ್‌ ಶೀಟ್‌ಗಳು ಕಾಣೆಯಾಗುತ್ತವೆ. ಕ್ರೈಸ್‌ನಲ್ಲಿ 2010ರಿಂದ ನಡೆದಿರುವ ಯಾವುದೇ ಟೆಂಡರ್‍‌ಗಳು ಪಾರದರ್ಶಕವಾಗಿಲ್ಲ. ಎಲ್‌-2 ಆದವರಿಗೆ ಕಾರ್ಯಾದೇಶ ನೀಡಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ದೂರಿನಲ್ಲಿ ಮಾರಣ್ಣ ಎಂಬುವರು ಆಪಾದಿಸಿದ್ದಾರೆ.

 

ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರ ಮುಂದೆಯೂ ಕೆಲ ಗುತ್ತಿಗೆದಾರರು ಲಂಚಾವತಾರವನ್ನು ಅನಾವರಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

ರಾಜ್ಯದ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರಕ್ಕೆ ಸದಸ್ಯರ ನಾಮನಿರ್ದೇಶನ ಮಾಡಲೂ  ಕೆಲ  ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರಿಗಳು  40 ಪರ್ಸೆಂಟ್‌ ಲಂಚದ ಹಣಕ್ಕೆ ಬೇಡಿಕೆ ಇರಿಸುತ್ತಿದ್ದಾರೆ ಎಂಬ ಗುರುತರವಾದ ಆರೋಪವು ಕೇಳಿ ಬಂದಿತ್ತು.

 

ಪುಸ್ತಕ ಖರೀದಿ, ಪ್ರಾಧಿಕಾರದ ನಾಮನಿರ್ದೇಶನ ಪ್ರಸ್ತಾವಕ್ಕೂ 40 ಪರ್ಸೆಂಟ್‌ ಲಂಚಕ್ಕೆ ಬೇಡಿಕೆ; ಸಚಿವ, ಡಿ ಸಿ ಗೆ ದೂರರ್ಜಿ

 

ದೂರಿನಲ್ಲೇನಿತ್ತು?

 

ಬೀದರ್ ಜಿಲ್ಲಾ ಕೇಂದ್ರ ಮುಖ್ಯ ಗ್ರಂಥಾಲಯದ ಪ್ರಭಾರಿ ಅಧಿಕಾರಿಯಾದ ಸಿದ್ಧಾರ್ಥ ಬಾವಿಕಟ್ಟಿ ಅವರು ಕಳೆದ 10 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಏನೇ ಮಾಡಿದರೂ ನನಗೆ ಇಲ್ಲಿಂದ ಯಾರೂ ಕೂಡ ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಮನೋಧೋರಣೆ ಹೊಂದಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ, ಲಂಚ ಪಡೆಯುವ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ ನಾನೇ ಸಾಕ್ಷಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

 

 

ಸಿಎಸ್‌ಆರ್‍‌ ಫಂಡ್‌ಗೂ ಶೇ.50ರಷ್ಟು ಲಂಚ!; ಶಿಕ್ಷಣ ಸಚಿವರ ಪಿಎ ವಿರುದ್ಧವೇ ಆರೋಪ

 

2,000 ಗ್ರಾಮ ಪಂಚಾಯ್ತಿಗಳಲ್ಲಿ ಸಿಎಸ್‌ಆರ್‍‌ ಫಂಡ್‌ ಅಡಿ ಮಾದರಿ ಶಾಲೆ ನಿರ್ಮಾಣ ಮಾಡಲು 03 ಪಂಚಾಯ್ತಿಗಳಿಗೆ ಒಂದು ಮಾದರಿ ಶಾಲೆಯಂತೆ 1,000 ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಸರ್ಕಾರವು ಉದ್ದೇಶಿಸಿದೆ. ಇದಕ್ಕೆ ಬೇಕಾಗಿರುವ ಅನುದಾನವನ್ನು ಕಾರ್ಪೋರೇಟ್‌ ಕಂಪನಿಗಳ ಮೂಲಕ ಒದಗಿಸಲು ಕಾರ್ಯ ಯೋಜನೆ ರೂಪಿಸಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts