Wednesday | July 15, 2026 |

ತಿಂಗಳಿಗೆ 3 ಲಕ್ಷಕ್ಕೆ ಬೇಡಿಕೆ, ಹಣದ ಮೌಲ್ಯಕ್ಕೆ ‘ಕೆ ಜಿ’ ಕೋಡ್‌ವರ್ಡ್‌; ಅಧಿಕಾರಿಗಳ ಹೆಸರು ಬಾಯ್ಬಿಟ್ಟ ನಿಂಗಪ್ಪ

ಬೆಂಗಳೂರು;  ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಲು ಲೋಕಾಯುಕ್ತ ಎಸ್‌ ಪಿ ಶ್ರೀನಾಥ್‌ ಜೋಷಿ ಅವರೇ ನೇರವಾಗಿ ಆರೋಪಿ ನಿಂಗಪ್ಪನಿಗೆ ಪರಿಚಿತ ಅಧಿಕಾರಿಗಳ ಮೊಬೈಲ್‌ ನಂಬರ್‍‌ಗಳನ್ನೂ ಕಳಿಸಿದ್ದರು!

 

ಆರೋಪಿ ನಿಂಗಪ್ಪ,  ಸಿಎಲ್‌-7 ಲೈಸೆನ್ಸ್‌ಗಳನ್ನು ಕೊಡಿಸುವುದರಲ್ಲಿಯೂ ನಿಷ್ಣಾತನಾಗಿದ್ದ. ಇದಕ್ಕಾಗಿ ಅಬಕಾರಿ ಇಲಾಖೆಯ ಹಲವು ಡಿಸಿ ಮತ್ತು ಆಯುಕ್ತರುಗಳ ಸಂಪರ್ಕ ಹೊಂದಿದ್ದ. ಲೋಕಾಯುಕ್ತದಲ್ಲಿ ವಿಚಾರಣೆ ಎದುರಿಸುತ್ತಿದ್ದರು ಎನ್ನಲಾಗಿರುವ ಅಬಕಾರಿ ಆಯುಕ್ತರುಗಳಿಂದ ಲಕ್ಷಾಂತರ ರುಪಾಯಿಗಳನ್ನು ವಸೂಲಿ ಮಾಡಿದ್ದ!

 

ಹಾಗೆಯೇ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಂಗಳಿಗೆ 3 ಲಕ್ಷ ರು. ಹಣಕ್ಕಾಗಿ ಬೇಡಿಕೆ ಇರಿಸಿದ್ದ. 3 ಲಕ್ಷವನ್ನು 3 ಕೆ ಜಿ ರೈಸ್‌ ಎಂಬುದಾಗಿ ಕೋಡ್‌ ವರ್ಡ್‌ ಬಳಸಿದ್ದ. ಮತ್ತು ಆರೋಪಿ ನಿಂಗಪ್ಪನಿಗೆ ಲಕ್ಷಾಂತರ ರುಪಾಯಿಗಳನ್ನು ನೀಡಿದ್ದ ಅಬಕಾರಿ ಇಲಾಖೆಯ ಕೆಲವು ಆಯುಕ್ತರ ಹೆಸರುಗಳನ್ನೂ ‘ದಿ ಫೈಲ್‌’, ಇದೀಗ ಹೊರಗೆಡವುತ್ತಿದೆ.

 

ಆರೋಪಿ ನಿಂಗಪ್ಪ ಇರಿಸುತ್ತಿದ್ದ ಹಣದ ಬೇಡಿಕೆಯನ್ನು ಅಬಕಾರಿ ಆಯುಕ್ತರುಗಳು ಅಬಕಾರಿ ನಿರೀಕ್ಷಕರ ಮೂಲಕ ಹಣ ಸಂದಾಯ ಮಾಡುತ್ತಿದ್ದರು. ಹಣ ವಸೂಲಿ ಸೇರಿದಂತೆ ಮತ್ತಿತರೆ ಕುಕೃತ್ಯಗಳನ್ನು ಅಬಕಾರಿ ಇಲಾಖೆಯ ಉನ್ನತ ಮೂಲಗಳು ‘ದಿ ಫೈಲ್‌’ಗೆ ಖಚಿತಪಡಿಸಿವೆ.

 

ಬಿಗಿಯಾದ ಕ್ರಿಪ್ಟೋ ಹೂಡಿಕೆ ನಂಟು

 

ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಹಲವು ಅಧಿಕಾರಿಗಳನ್ನು ಹೂಡಿಕೆ ಮಾಡುವ ಮೂಲಕ ತೊಡಗಿಸಲು ಆರೋಪಿ ನಿಂಗಪ್ಪನು ಲೋಕಾಯುಕ್ತ ಎಸ್ಪಿ ಶ್ರೀನಾಥ್‌ ಜೋಷಿ ಅವರ ನೆರವನ್ನು ಕೇಳಿದ್ದ. 2025ರ ಜನವರಿ 18ರಂದು ಎಸ್‌ ಪಿ ಜೋಷಿ ಅವರು ಜಗದೀಶ್‌ ಎಂಬುವರ ಮೊಬೈಲ್‌ ನಂಬರ್‍‌ (9448353103) ನ್ನು ಕಳಿಸಿದ್ದರು. ಈ ಸಂಖ್ಯೆಯು ಜಗದೀಶ್‌ ನಾಯಕ್‌ ಎಂಬುವರಿಗೆ ಸೇರಿದೆ ಎಂದು ಗೊತ್ತಾಗಿದೆ. ಜಗದೀಶ್‌ ನಾಯಕ್‌ ಸರ್ಕಾರಿ ಅಧಿಕಾರಿಯೇ, ಖಾಸಗಿ ವ್ಯಕ್ತಿಯೇ ಅಥವಾ ಅಧಿಕಾರಿಗಳ ಮಧ್ಯವರ್ತಿಯೇ ಎಂಬುದು ತಿಳಿದು ಬಂದಿಲ್ಲ.

 

ಅಲ್ಲದೇ ಅಬಕಾರಿ ಆಯುಕ್ತರು ಎಂದು ಹೇಳಲಾಗಿರುವ ರಂಗಪ್ಪ ಎಂಬುವರನ್ನು ಆರೋಪಿ ನಿಂಗಪ್ಪನು ಬ್ಯಾಟರಾಯನಪುರದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಸಿ ಎಲ್‌ -7 ಪರವಾನಿಗೆ ವಿಚಾರದಲ್ಲಿ ವರ್ಷದ ಹಿಂದೆ ಭೇಟಿಯಾಗಿದ್ದ. ರಂಗಪ್ಪ ಅವರೊಂದಿಗೆ ಪರಿಚಯಿಸಿಕೊಳ್ಳುವಾಗಲೂ ಆರೋಪಿ ನಿಂಗಪ್ಪನು ಕಾಂಗ್ರೆಸ್‌ ಮುಖಂಡನೆಂದು ಹೇಳಿಕೊಂಡಿದ್ದ ಎಂದು ಗೊತ್ತಾಗಿದೆ.

 

ಅಲ್ಲದೇ ರಂಗಪ್ಪ ಎಂಬುವರೊಂದಿಗೆ ಭೇಟಿಯಾದ ಸಂದರ್ಭದಲ್ಲೇ ಲೋಕಾಯುಕ್ತದಲ್ಲಿ ಅವರ ವಿರುದ್ಧ ಪ್ರಕರಣಗಳು ಇವೆಯೇ ಎಂದು ಚರ್ಚಿಸಿದ್ದ. ಒಂದೊಮ್ಮೆ ಪ್ರಕರಣಗಳಿದ್ದರೇ ಲೋಕಾಯುಕ್ತದಲ್ಲಿ ಎಸ್‌ ಪಿ ತನಗೆ ಪರಿಚಿತರಿದ್ದಾರೆ, ಸಹಾಯ ಮಾಡಿಸಲಾಗುವುದು ಎಂದೂ ಭರವಸೆ ನೀಡಿದ್ದ ಎಂದು ತಿಳಿದು ಬಂದಿದೆ.

 

ರಂಗಪ್ಪ ಎಂಬುವರನ್ನು ಭೇಟಿಯಾದ ನಾಲ್ಕೈದು ತಿಂಗಳ ನಂತರ ಆನಂದ್‌ರಾವ್‌ ವೃತ್ತದ ಬಳಿ ಇರುವ ದೇವಸ್ಥಾನವೊಂದರ ಬಳಿ 25 ಲಕ್ಷ ರು.ಗಳನ್ನು ಪಡೆದಿದ್ದ. ಅಲ್ಲದೇ ತನ್ನ ಊರ ಜಾತ್ರೆಗೆ ಮದ್ಯದ ಬಾಟಲಿಗಳನ್ನೂ ಪಡೆದುಕೊಂಡಿದ್ದ ಎಂದು ಅಬಕಾರಿ ಇಲಾಖೆಯ ಉನ್ನತ ಮೂಲಗಳು ‘ದಿ ಫೈಲ್‌’ಗೆ ಖಚಿತಪಡಿಸಿವೆ.

 

ತಿಂಗಳಿಗೆ 3 ಲಕ್ಷ ಬೇಡಿಕೆ ಇರಿಸಿದ್ದನೇ ನಿಂಗಪ್ಪ?

 

ಆರೋಪಿ ನಿಂಗಪ್ಪನು ಅಬಕಾರಿ ಇಲಾಖೆ ಆಯುಕ್ತರಿಗೆ ತಿಂಗಳಿಗೆ 3 ಲಕ್ಷ ರುಗಳಿಗೆ ಬೇಡಿಕೆ ಇರಿಸಿದ್ದ. ಈ 3 ಲಕ್ಷ ರು.ಗಳನ್ನು 3 ಕೆ ಜಿ ರೈಸ್‌ ಎಂಬ ಕೋಡ್‌ ವರ್ಡ್‌ನಲ್ಲಿ ಮೆಸೇಜ್‌ ಕಳಿಸುತ್ತಿದ್ದ. ಅಬಕಾರಿ ಇಲಾಖೆಯಲ್ಲಿ ಬಿಯುಡಿ ಹೆಸರಿನಲ್ಲಿ ಹೊರಡುತ್ತಿದ್ದ ಮೆಸೇಜ್‌ ಹೆಚ್ಚು ಜನಪ್ರಿಯವಾಗಿತ್ತು ಎಂದು ಗೊತ್ತಾಗಿದೆ.

 

ಅಬಕಾರಿ ಇಲಾಖೆಯ ಮತ್ತೊಬ್ಬ ಆಯುಕ್ತ ಮೋಸಸ್ ಎಂಬುವರಿಂದಲೂ ಆರೋಪಿ ನಿಂಗಪ್ಪನು 15 ಲಕ್ಷ ರು ವಸೂಲು ಮಾಡಿದ್ದ. ಅಬಕಾರಿ ಇಲಾಖೆಯಲ್ಲಿ ಮೂರ್ನಾಲ್ಕು ವರ್ಷದಿಂದಲೂ ಮೋಸಸ್‌ ಎಂಬುವರು ಒಂದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ವರ್ಗಾವಣೆ ಮಾಡಿಸಲು ಮುಂಗಡವಾಗಿ 15 ಲಕ್ಷ ರು.ಗಳಿಗೆ ಬೇಡಿಕೆ ಇರಿಸಿದ್ದ. ಇವರಿಗೂ ತನ್ನನ್ನು ತಾನು ಕಾಂಗ್ರೆಸ್‌ ಮುಖಂಡ ಎಂದು ಪರಿಚಯಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

 

ಆರೋಪಿ ನಿಂಗಪ್ಪ ಇರಿಸಿದ್ದ 15 ಲಕ್ಷ ರು.ಗಳ ಮುಂಗಡ ಬೇಡಿಕೆಯನ್ನು ಈಡೇರಿಸಲು ಮೋಸಸ್ ಒಪ್ಪಿಕೊಂಡಿದ್ದರು ಎಂದು ಗೊತ್ತಾಗಿದೆ. 2025ರ ಮೇ 30ರಂದು ಅಬಕಾರಿ ನಿರೀಕ್ಷಕ ರವೀಂದ್ರ ಎಂಬುವರ ಮೂಲಕ ಆರೋಪಿ ನಿಂಗಪ್ಪನು ಎರಡು ಕಂತುಗಳಲ್ಲಿ 15 ಲಕ್ಷ ರು.ಗಳನ್ನು ವಿಜಯನಗರ ಮೆಟ್ರೋ ನಿಲ್ದಾಣ ಸಮೀಪ ಸ್ವೀಕರಿಸಿದ್ದ. ಮೊದಲ ಕಂತಿನಲ್ಲಿ 10 ಲಕ್ಷ ಮತ್ತು ಎರಡನೇ ಕಂತಿನಲ್ಲಿ 5 ಲಕ್ಷ ಸ್ವೀಕರಿಸಿದ್ದ. 10 ಲಕ್ಷ ರು.ಗಳು ಸ್ವೀಕರಿಸಿದ್ದ ಆರೋಪಿ ನಿಂಗಪ್ಪನು, ಇದನ್ನು 10 ಕೆ ಜಿ ಎಂದು ಮೆಸೇಜ್‌ ಕಳಿಸಿದ್ದ ಎಂದು ಅಬಕಾರಿ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.

 

ಅಬಕಾರಿ ಇಲಾಖೆಯ ಮತ್ತೊಬ್ಬ ಡಿ ಸಿ ಎಂದು ಹೇಳಲಾಗಿರುವ ಅಜಿತ್‌ ಎಂಬುವರಿಂದಲೂ ವರ್ಗಾವಣೆಗಾಗಿ 5 ಲಕ್ಷ ರು.ಗಳನ್ನು ಆರೋಪಿ ನಿಂಗಪ್ಪ ಪಡೆದಿದ್ದ ಎಂದು ಹೇಳಲಾಗುತ್ತಿದೆ. ಅಜಿತ್‌ ಅವರ ನಂಬರ್‍‌ನ್ನು ಇಲಾಖೆಯ ಮತ್ತೊಬಬ ಜಂಟಿ ಆಯುಕ್ತರು ಎಂದು ಹೇಳಲಾಗಿರುವ ನಾಗರಾಜಪ್ಪ ಎಂಬುವರಿಂದ ನಂಬರ್‍‌ ಪಡೆದುಕೊಂಡಿದ್ದ ಎಂದು ಗೊತ್ತಾಗಿದೆ.

 

ಮುರುಳಿ ಡಿ ಸಿ ಎಂಬುವರಿಂದ 5 ಲಕ್ಷ ಹಣವನ್ನು ನೇರವಾಗಿ ಆನಂದರಾವ್‌ ಸರ್ಕಲ್‌ ಬಳಿ ಇರುವ ಓಲ್ಡ್‌ ಜೆಡಿಎಸ್‌ ಕಚೇರಿ ಬಳಿ ಇರುವ ವಿಆರ್‍‌ಎಲ್‌ ಆಫೀಸ್‌ ಬಳಿ ನೇರವಾಗಿ ಪಡೆದುಕೊಂಡಿದ್ದ ಎಂದು ಗೊತ್ತಾಗಿದೆ.

 

ಜಂಟಿ ಆಯುಕ್ತರು ಎಂದು ಹೇಳಲಾಗಿರುವ ನಾಗರಾಜಪ್ಪ ಎಂಬುವರು ಆರೋಪಿ ನಿಂಗಪ್ಪನಿಗೆ ಬೆಂಗಳೂರು ನಗರ ಹಾಗೂ ಬೆಂಗಳೂರು ಜಿಲ್ಲೆಯ ಎಲ್ಲಾ ಅಬಕಾರಿ ಆಯುಕ್ತರುಗಳ ಹೆಸರು ಮತ್ತು ಮೊಬೈಲ್‌ ನಂಬರ್‍‌ಗಳನ್ನು ವಾಟ್ಸಾಪ್‌ ಮೂಲಕ ಕಳಿಸಿದ್ದರು ಎಂದು ತಿಳಿದು ಬಂದಿದೆ.

 

ಲೋಕಾಯುಕ್ತ ಹೆಸರು ಹೇಳಿ ಹಣ ವಸೂಲಿ ಮಾಡುತ್ತಿದ್ದ ಎಂಬ ಆರೋಪದ ಮೇರೆಗೆ ಬಂಧಿತನಾಗಿರುವ ಆರೋಪಿ ನಿಂಗಪ್ಪನ ಪ್ರಕರಣವು ಅಧಿಕಾರಿಗಳ ವರ್ಗದಲ್ಲಿ ಭಾರೀ ಸಂಚಲನ ಮೂಡಿಸಿರುವ ಹೊತ್ತಿನಲ್ಲೇ ಇದೀಗ ನೇರವಾಗಿ ಅಬಕಾರಿ ಸಚಿವ ಆರ್‍‌ ಬಿ ತಿಮ್ಮಾಪುರ ಅವರ ಹೆಸರು ತಳಕು ಹಾಕಿಕೊಂಡಿತ್ತು.

 

ಅಬಕಾರಿ ಆಯುಕ್ತರು, ಡಿ ಸಿ, ಡಿವೈಎಸ್ಪಿಗಳ ವರ್ಗಾವಣೆಗೆ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ಅಬಕಾರಿ ಸಚಿವ ತಿಮ್ಮಾಪುರ ಅವರ ವಿರುದ್ಧ ಈಗಾಗಲೇ ಆರೋಪ ಕೇಳಿ ಬಂದಿತ್ತು. ಪ್ರತಿಪಕ್ಷ ಬಿಜೆಪಿಯೂ ಸಹ ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಿತ್ತು. ಈ ಬೆಳವಣಿಗೆ ನಡುವೆಯೇ ಲೋಕಾಯುಕ್ತ ಎಸ್‌ ಪಿ ಶ್ರೀನಾಥ ಜೋಷಿ ಅವರನ್ನೂ ವರ್ಗಾವಣೆ ವಿಚಾರವಾಗಿಯೇ ಆರೋಪಿ ನಿಂಗಪ್ಪ, ಸಚಿವ ತಿಮ್ಮಾಪುರ ಅವರನ್ನು ಭೇಟಿ ಮಾಡಿಸಿದ್ದ ಎಂಬ ಸಂಗತಿಯು ಮುನ್ನೆಲೆಗೆ ಬಂದಿತ್ತು.

 

ಲೋಕಾ ಎಸ್ಪಿ ಜೋಷಿ, ನಿಂಗಪ್ಪನೊಂದಿಗೆ ಅಬಕಾರಿ ಸಚಿವ ತಿಮ್ಮಾಪುರ ನಂಟು; ಐಷಾರಾಮಿ ಹೋಟೆಲ್‌ನಲ್ಲಿ ಭೇಟಿ?

 

ಆರೋಪಿ ನಿಂಗಪ್ಪನು ಲೋಕಾಯುಕ್ತ ಎಸ್‌ ಪಿ ಶ್ರೀನಾಥ್ ಜೋಷಿ ಅವರನ್ನು ಬೆಂಗಳೂರಿನ ಐಷಾರಾಮಿ ಹೋಟೆಲ್‌ವೊಂದರಲ್ಲಿ ಅಬಕಾರಿ ಸಚಿವ ಆರ್‍‌ ಬಿ ತಿಮ್ಮಾಪುರ ಅವರನ್ನು ಭೇಟಿ ಮಾಡಿಸಿದ್ದ ಎಂದು ಗೊತ್ತಾಗಿದೆ. ಆರೋಪಿ ನಿಂಗಪ್ಪನಿಗೆ ಅಬಕಾರಿ ಸಚಿವ ಆರ್‍‌ ಬಿ ತಿಮ್ಮಾಪುರ ಅವರ ಆಪ್ತ ಸಹಾಯಕ ಎಂದು ಹೇಳಲಾಗಿರುವ ರಮೇಶ್‌ ಎಂಬಾತನೂ ಪರಿಚಯವಿದ್ದ ಎಂದು ಹೇಳಲಾಗಿದೆ.

 

ನಿಂಗಪ್ಪನಿಗೆ ಅಬಕಾರಿ, ಬಿಬಿಎಂಪಿ ಅಧಿಕಾರಿಗಳೇ ಗುರಿ; ಎಫ್‌ಐಆರ್‍‌ನಲ್ಲಿಲ್ಲ ಎಸ್ಪಿ ಜೋಷಿ ಹೆಸರು

 

ಲೋಕಾಯುಕ್ತ ಹೆಸರು ಹೇಳಿ ಸರ್ಕಾರಿ ಅಧಿಕಾರಿಗಳಿಂದ ಕೋಟ್ಯಂತರ ರುಪಾಯಿ ವಸೂಲು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ  ಆರೋಪಿ ನಿಂಗಪ್ಪ ಅಬಕಾರಿ ಇಲಾಖೆಯ ವಿವಿಧ ಅಧಿಕಾರಿಗಳಿಂದ ಕಳೆದ 6 ತಿಂಗಳಿನಿಂದಲೂ  ಹಣವನ್ನು ವಸೂಲಿ ಮಾಡಿರುವುದಾಗಿ ಒಪ್ಪಿಕೊಂಡಿದ್ದ ಎಂದು  ಲೋಕಾಯುಕ್ತ ಪೊಲೀಸ್‌ ವಿಭಾಗವು ಇದೀಗ ಅಧಿಕೃತವಾಗಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು.

 

ಹಣ ವಸೂಲಿ, ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ; ‘ದಿ ಫೈಲ್‌’ ವರದಿ ಬೆನ್ನಲ್ಲೇ ಬಿಡುಗಡೆಯಾದ ಪತ್ರಿಕಾ ಹೇಳಿಕೆ

ಅಲ್ಲದೇ ಆರೋಪಿ ನಿಂಗಪ್ಪ ಎಂಬಾತನು 6 ತಿಂಗಳಿನಿಂದಲೂ  ಅಧಿಕಾರಿಗಳಿಂದ ವಸೂಲಿ ಮಾಡಿದ್ದ ಹಣವನ್ನು ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ ಮಾಡಿದ್ದ ಎಂದು ‘ದಿ ಫೈಲ್‌’, ವರದಿ ಪ್ರಕಟಿಸಿತ್ತು. ಈ  ವರದಿಯು ಅಧಿಕಾರಿ ವರ್ಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

 

 

ಇದೀಗ ಲೋಕಾಯುಕ್ತ ಪೊಲೀಸ್‌ ವಿಭಾಗವು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿಯೂ ಕ್ರಿಪ್ಟೋ ಕರೆನ್ಸಿಯಲ್ಲಿ ಆರೋಪಿಯು ಹೂಡಿಕೆ ಮಾಡಿದ್ದಾನೆ ಎಂದು ಅಧಿಕೃತವಾಗಿ ಹೇಳಿತ್ತು.

 

 

ಇದು ‘ದಿ ಫೈಲ್‌’, ವರದಿಗೆ ಮತ್ತಷ್ಟು ಬಲ ಬಂದಂತಾಗಿದೆ.

 

ಲೋಕಾ ಹೆಸರಿನಲ್ಲಿ ವಸೂಲಿ; ಬಂಧಿತ ಆರೋಪಿಯೊಂದಿಗೆ ಮೂವರು ಸಚಿವರ ಆಪ್ತ ಕಾರ್ಯದರ್ಶಿಗಳ ನಂಟು?

 

ಪತ್ರಿಕಾ ಹೇಳಿಕೆಯಲ್ಲೇನಿತ್ತು?

 

ಆರೋಪಿ ನಿಂಗಪ್ಪ ಅಬಕಾರಿ ಇಲಾಖೆಯ ವಿವಿಧ ಅಧಿಕಾರಿಗಳಿಂದ ಕಳೆದ 6 ತಿಂಗಳಿನಿಂದ ಹಣವನ್ನು ವಸೂಲಿ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಈ ರೀತಿ ವಸೂಲಿ ಮಾಡಿದ ಹಣವನ್ನು ತನ್ನ ಹಾಗೂ ತನ್ನಸಂಬಂಧಿಕರುಗಳ ಹೆಸರಿನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿರುತ್ತೇನೆಂದು ಒಪ್ಪಿಕೊಂಡಿರುತ್ತಾನೆ ಎಂದು ಹೇಳಲಾಗಿದೆ.

 

ಹಣ ವಸೂಲಿ, ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ; ‘ದಿ ಫೈಲ್‌’ ವರದಿ ಬೆನ್ನಲ್ಲೇ ಬಿಡುಗಡೆಯಾದ ಪತ್ರಿಕಾ ಹೇಳಿಕೆ

 

‘ಆತನ ಮೊಬೈಲ್‌ನ್ನು ಪರಿಶೀಲಿಸಲಾಗಿ ಸುಮಾರು 13 ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿ ಹಣವನ್ನು ಹೂಡಿಕೆ ಮಾಡಿರುವುದು ಕಂಡು ಬಂದಿದೆ. ಹಣದ ಮೂಲ ಪತ್ತೆ ಹಚ್ಚುವ ಸಲುವಾಗಿ ಸದರಿ ವ್ಯಾಲೆಟ್‌ಗಳನ್ನು ಫ್ರೀಜ್‌ ಆಡಿ ತನಿಖೆ ಮುಂದುವರೆಸಲಾಗಿದೆ,’ ಎಂದು ವಿವರಿಸಿತ್ತು.

 

ಅಬಕಾರಿ ಇಲಾಖೆಯ ಯಾವ ಯಾವ ಅಧಿಕಾರಿಗಳು ಆರೋಪಿ ನಿಂಗಪ್ಪನಿಗೆ ಎಷ್ಟೆಷ್ಟು  ಹಣ ನೀಡುರುತ್ತಾರೆ ಎಂಬ ಬಗ್ಗೆ ತನಿಖೆಯನ್ನು ಮುಂದುವರೆಸಲಾಗಿದೆ. ಆರೋಪಿಯೊಂದಿಗೆ ಬೇರೆ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ವಾಟ್ಸ್‌ಪ್ ಸಂದೇಶಗಳು, ಕರೆಗಳ ವಿವರಗಳು ಮತ್ತು ವಾಟ್ಸ್‌ಪ್ ಕರೆಗಳ ವಿವರಗಳನ್ನು ಪರಿಶೀಲಿಸುತ್ತಿದ್ದು ಶಾಮೀಲಾಗಿರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿರುತ್ತದೆ ಎಂದು ತಿಳಿಸಿತ್ತು.

 

ವಜಾಗೊಂಡಿರುವ ಮುಖ್ಯ ಪೇದೆ ನಿಂಗಪ್ಪ ಎಂಬಾತನು  8ಕ್ಕೂ ಹೆಚ್ಚು ಕೆಎಎಸ್‌ ಅಧಿಕಾರಿಗಳಿಂದ ಹಣ ವಸೂಲು ಮಾಡಿದ್ದ ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಮುಂದೆ,  ಸಚಿವರುಗಳ ಆಪ್ತ ಕಾರ್ಯದರ್ಶಿಗಳ ಹೆಸರು ಸೇರಿದಂತೆ ಹಲವರ ಹೆಸರುಗಳನ್ನು ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗಿತ್ತು.

 

ಬಂಧಿತ ಆರೋಪಿ ಕೋಟ್ಯಂತರ ರೂ.ವಸೂಲಿ ಮಾಡಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಹಲವು ಪುರಾವೆ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ಅವರನ್ನು ಎತ್ತಂಗಡಿ ಮಾಡಲಾಗಿತ್ತು.

 

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ?

 

ಹಣ ವಸೂಲು ಮಾಡುತ್ತಿದ್ದ ಎಂದು ಹೇಳಲಾಗಿರುವ ಆರೋಪಿತ ನಿಂಗಪ್ಪ , ಲೋಕಾಯುಕ್ತದ ಕೆಲವು ಅಧಿಕಾರಿಗಳಿಂದ ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ ಮಾಡಿಸಿದ್ದ. ಬೆಂಗಳೂರು ನಗರ ಹೊರತುಪಡಿಸಿ ಉಳಿದ ಜಿಲ್ಲೆಗಳ ಲೋಕಾ ಎಸ್ಪಿಗಳಿಂದಲೂ ಕ್ರಿಪ್ಟೋ ಕರೆನ್ಸಿಯಲ್ಲಿ ಮಧ್ಯವರ್ತಿಗಳ ಮೂಲಕ ಹೂಡಿಕೆ ಮಾಡಿಸಿದ್ದ ಎಂಬ ಆಪಾದನೆ ಕೇಳಿ ಬಂದಿತ್ತು.

 

ಅಬಕಾರಿ ಡಿಸಿಗಳಿಂದ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ವಸೂಲಿ!

 

ಹಣಕ್ಕಾಗಿ ಬೇಡಿಕೆ ಮತ್ತು ಹಣ ನೀಡದೇ ಇದ್ದ ಹಲವು ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿತನಾಗಿರುವ ನಿಂಗಪ್ಪ, ಅಬಕಾರಿ ಡಿಸಿಗಳಿಂದ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ವಸೂಲು ಮಾಡಿದ್ದಾನೆ ಎಂಬ ಆಪಾದನೆ ಕೇಳಿ ಬಂದಿದೆ. ವಿಜಯನಗರ ಮೆಟ್ರೋ ಸ್ಟೇಷನ್‌, ಜೀವನ್‌ ಭೀಮಾ ನಗರ, ಎಂ ಜಿ ರಸ್ತೆ, ಜೆಡಿಎಸ್‌ನ ಹಳೇ ಕಚೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಣವನ್ನು ವಸೂಲು ಮಾಡಿದ್ದ ಎಂದು ಹೇಳಲಾಗಿತ್ತು.

 

ಅಬಕಾರಿ ಹಗರಣವೊಂದರಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿರುವ 100ಕ್ಕೂ ಹೆಚ್ಚು ಅಬಕಾರಿ ಅಧಿಕಾರಿಗಳಿಂದ ತಿಂಗಳಿಗೆ ತಲಾ 1 ಲಕ್ಷ ರು ನಂತೆ ವಸೂಲು ಮಾಡಲಾಗುತ್ತಿತ್ತು. ಈ ಮಧ್ಯೆ ಇದೇ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ಅಬಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸ್‌ ವಿಭಾಗದ ಮತ್ತೊಬ್ಬ ಎಸ್‌ಪಿಯೊಬ್ಬರು ಮೊಕದ್ದಮೆ ದಾಖಲಿಸಿದ್ದರು ಎಂದು ತಿಳಿದು ಬಂದಿತ್ತು.

 

ಕೋಟ್ಯಂತರ ರು. ಕಪ್ಪುಹಣ ವರ್ಗಾವಣೆ; ಅಶ್ವಿನ್‌ ಕುಕೃತ್ಯದ ಬಗ್ಗೆ ಸಾಕ್ಷ್ಯ ನುಡಿದ ಇ ಡಿ ಉಪ ನಿರ್ದೇಶಕ

 

ಪ್ರತಿ ತಿಂಗಳೂ ತಲಾ 1 ಲಕ್ಷ ರು ನೀಡುತ್ತಿದ್ದರೂ ಸಹ ಮೊಕದ್ದಮೆ ದಾಖಲಾಗಿದ್ದಕ್ಕೆ ಈಗಾಗಲೇ ಹಣ ಕೊಟ್ಟಿದ್ದ ಅಧಿಕಾರಿಗಳು ಆರೋಪಿತ ನಿಂಗಪ್ಪ ವಿರುದ್ಧ ತಿರುಗಿ ಬಿದ್ದಿದ್ದರು ಎಂದು ಗೊತ್ತಾಗಿದೆ.

 

ಕೆಲ ವರ್ಷಗಳ ಹಿಂದೆ ನಿಂಗಪ್ಪ, ಸೇವೆಯಿಂದ ವಜಾಗೊಂಡಿದ್ದ. ಬಳಿಕ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಸರಕಾರಿ ಅಧಿಕಾರಿಗಳನ್ನು ಬೆದರಿಸಿ ಸುಲಿಗೆಯನ್ನೇ ವೃತ್ತಿ ಮಾಡಿಕೊಂಡಿದ್ದ. ಈ ಸಂಬಂಧ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಜೈಲು ಸೇರಿದ್ದ ಎಂದು ತಿಳಿದು ಬಂದಿದೆ.

 

ಲೋಕಾ ಪೊಲೀಸರ ಶೋಧ; ಬರಿಗೈಯಲ್ಲಿ ಮರಳಿದ ಪೊಲೀಸರು, ತಲೆಮರೆಸಿಕೊಂಡಿದ್ದಾರೆಯೇ ಜೋಷಿ?

 

ವಿಶೇಷವೆಂದರೇ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೂ ಲೋಕಾಯುಕ್ತರಾಗಿದ್ದ ಭಾಸ್ಕರರಾವ್‌ ಅವರ ಪುತ್ರ ಮತ್ತು ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಹಲವರಿಂದ ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಆ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿಯಾಗಿದ್ದ ಸೋನಿಯಾ ನಾರಂಗ್ ಅವರು ಈ ಪ್ರಕರಣವನ್ನು ಬಹಿರಂಗಪಡಿಸಿದ್ದರು. ಅಲ್ಲದೇ ಲೋಕಾಯುಕ್ತ ಹುದ್ದೆಗೆ ಭಾಸ್ಕರರಾವ್‌ ಅವರು ರಾಜೀನಾಮೆ ನೀಡಿದ್ದರು. ಹಾಗೂ ಅವರ ಪುತ್ರ ಅಶ್ವಿನ್‌ ರಾವ್‌ ಸಹ ಪೊಲೀಸರ ಬಂಧನಕ್ಕೆ ಒಳಗಾಗಿದ್ದ.

 

ಈ ಪ್ರಕರಣದ ನಂತರ ಲೋಕಾಯುಕ್ತಕ್ಕಿದ್ದ ಪೊಲೀಸ್‌ ಅಧಿಕಾರವನ್ನು ಮೊಟಕುಗೊಳಿಸಿ, ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಲಾಗಿತ್ತು. ಆ ನಂತರ ಎಸಿಬಿಯನ್ನೂ ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಗೆ ಪುನಃ ಪೊಲೀಸ್‌ ಅಧಿಕಾರವನ್ನು ಮರು ಸ್ಥಾಪಿಸಲಾಗಿತ್ತು.  ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರ್ಣಗೊಳಿಸಿರುವ ಹೊತ್ತಿನಲ್ಲೇ  ಲೋಕಾಯುಕ್ತ ಹೆಸರಿನಲ್ಲಿ ನಿಂಗಪ್ಪ ಎಂಬಾತ ಹಣ ವಸೂಲಿ ಮಾಡಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ. ಅಲ್ಲದೇ  ಲೋಕಾಯುಕ್ತ ಸಂಸ್ಥೆಯ ವಿಶ್ವಾಸಾರ್ಹತೆಯ ಪ್ರಶ್ನೆಯೂ ಎದುರಾಗಿದೆ.

Hot this week

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

ಎಬಿ-ಎಆರ್‍‌ಕೆ ಯೋಜನೆಯಲ್ಲಿ ಅಕ್ರಮ; ಜಿಮ್ಸ್‌ ಸಿಬ್ಬಂದಿ, ಖಾಸಗಿ ಆಸ್ಪತ್ರೆ ಶಾಮೀಲು, ರಾಜೀನಾಮೆ ನೀಡಿದ್ದ ವೈದ್ಯರ ಹೆಸರಿನಲ್ಲೂ ನಕಲಿ ಓಆರ್‍‌ಎಸ್‌ ಸೃಜನೆ; ತನಿಖಾ ವರದಿ

ಬೆಂಗಳೂರು; ಆಯುಷ್ಮಾನ್‌ ಭಾರತ್ ಮತ್ತು  ಎಆರ್‍‌ಕೆ ಯೋಜನೆಯಡಿಯಲ್ಲಿ  ಕಲ್ಬುರ್ಗಿ ಜಿಲ್ಲಾ  ಆಸ್ಪತ್ರೆಯಿಂದ...
Please Scan to make Your Contribution

Topics

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

ಜಿಎಸ್‌ಡಿಪಿ 23,34,000 ಕೋಟಿ, ಉನ್ನತ ಶಿಕ್ಷಣಕ್ಕಾಗಿ ಕೇವಲ 5,646 ಕೋಟಿ ರು ಖರ್ಚು; ಇತರೆ ರಾಜ್ಯಗಳಿಗಿಂತ ಕೆಳಗಿಳಿದ ಕರ್ನಾಟಕ

ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಮೊದಲನೇ ಆರ್ಥಿಕ...

Related Articles

Popular Categories

error: Content is protected !!