Saturday | August 8, 2026 |

ಪಿಎಸ್‌ಐ ನೇಮಕ ಹಗರಣ; ಡಿವೈಎಸ್ಪಿ ಶಾಂತಕುಮಾರ್ ಸೇರಿ ನಾಲ್ವರ ಅಮಾನತು ತೆರವುಗೊಳಿಸಿದ ಕಾಂಗ್ರೆಸ್‌ ಸರ್ಕಾರ

ಬೆಂಗಳೂರು; ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ 31ನೇ ಆರೋಪಿಯಾಗಿರುವ ಡಿವೈಎಸ್ಪಿ ಶಾಂತಕುಮಾರ್ ಸೇರಿದಂತೆ ನಾಲ್ವರು ಪೊಲೀಸ್‌ ಅಧಿಕಾರಿಗಳ ವಿರುದ್ಧದ ಇಲಾಖೆ ವಿಚಾರಣೆ ಬಾಕಿ ಇರಿಸಿ ಅಮಾನತಿನಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿರುವುದು ಇದೀಗ ಬಹಿರಂಗವಾಗಿದೆ.

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಪಿಎಸ್‌ಐ ಹಗರಣದ ಕುರಿತು ಪ್ರತಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್‌,  ಇದನ್ನು  ಸರ್ಕಾರದ ವಿರುದ್ಧ ದೊಡ್ಡ ಅಸ್ತ್ರದಂತೆ ಬಳಸಿಕೊಂಡಿತ್ತು. ಆದರೀಗ ಅದೇ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಇಲಾಖೆ ವಿಚಾರಣೆ ಬಾಕಿ ಇರಿಸಿ ಅಮಾನತಿನಿಂದ ಬಿಡುಗಡೆಗೊಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ವಿಶೇಷವೆಂದರೇ   31ನೇ ಆರೋಪಿ ಡಿವೈಎಸ್ಪಿ ಶಾಂತಕುಮಾರ್‌ ಅವರು  ಬೆಂಗಳೂರಿನ  ಕೃಷಿ ಭವನದ ಮುಂದಿರುವ ಫುಟ್‌ಪಾತ್‌ ರಸ್ತೆಯಲ್ಲೇ 1 ಕೋಟಿ ರು.ಗಳನ್ನು ಪಡೆದಿದ್ದರು ಎಂದು ಆರೋಪಿಸಲಾಗಿತ್ತು. ಅಮಾನತಿನಿಂದ ಕೈಬಿಟ್ಟಿರುವ ಆರೋಪಿಗಳ ಪೈಕಿ ಡಿವೈಎಸ್ಪಿ ಶಾಂತಕುಮಾರ್ ಸಹ ಇರುವುದು ಅಚ್ಚರಿಗೆ ಕಾರಣವಾಗಿದೆ.

 

ಈ ಕುರಿತು 2025ರ ಜೂನ್‌ 13ರಂದು ಡಿಐಜಿಪಿ ಕಾರ್ತಿಕ್ ರೆಡ್ಡಿ ಅವರು ಹಿಂಬರಹ ನೀಡಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮಲ್ಲಿಕಾರ್ಜುನ ಸಾಲಿ (ಡಿವೈಎಸ್ಪಿ), ಶಾಂತಕುಮಾರ್ (ಡಿವೈಎಸ್ಪಿ, ಸಶಸ್ತ್ರ), ವೈಜ್ಯನಾಥ ಕಲ್ಯಾಣಿ ರೇವೂರ (ಸಹಾಯಕ ಕಮಾಂಡೆಂಟ್‌, ಪೊಲೀಸ್‌ ಇನ್ಸ್‌ಪೆಕ್ಟರ್‍‌ ಆನಂದ ಮೇತ್ರಿ ಇವರ ವಿರುದ್ಧದ ಇಲಾಖೆ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತಿನಲ್ಲಿರಿಸಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ತೆರವುಗೊಳಿಸಿ ಅಧಿಕಾರಿಯವರನ್ನು ಕಾರ್ಯಕಾರ್ಯೇತೇರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ 2025ರ ಜೂನ್‌ 6ರಂದೇ ಆದೇಶ ಹೊರಡಿಸಿದೆ.

 

 

ಈ ಕುರಿತು 2025ರ ಜೂನ್‌ 13ರಂದು ಕಾರ್ತಿಕ್ ರೆಡ್ಡಿ ಅವರು ಹಿಂಬರಹ ನೀಡಿರುವುದು ಗೊತ್ತಾಗಿದೆ.

 

ಈ ಸಂಬಂಧ ಅಧಿಕಾರಿಗಳು ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಶಾಂತಕುಮಾರ್, ಸಹಾಯಕ ಕಮಾಂಡೆಂಟ್‌ ವೈಜ್ಯನಾಥ ಕಲ್ಯಾಣಿ ರೇವೂರ ಮತ್ತು ಪೊಲೀಸ್‌ ಇನ್ಸ್‌ಪೆಕ್ಟರ್‍‌ ಆನಂದ ಮೇತ್ರಿ ಅವರು ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಕರ್ತವ್ಯ ಲೋಪ ಎಸಗಿದ್ದರು. ಇವರನ್ನು ಹಿಂದಿನ ಬಿಜೆಪಿ ಸರ್ಕಾರವು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು.

 

ರಾಯಚೂರು ಜಿಲ್ಲೆ ಲಿಂಗಸೂಗೂರು ಡಿವೈ‌ಎಸ್‌ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರೆ ಅವರು ಬಂಧನಕ್ಕಗೊಳಾಗಿದ್ದರು.  ಡಿವೈಎಎಸ್​ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಸಿಪಿಐ ಆನಂದ್ ಮೇತ್ರೆ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದರು.

 

ಶಾಂತಕುಮಾರ್  ಅವರು ಬೆಂಗಳೂರಿನ ಕೃಷಿ ಭವನದ ಮುಂದಿರುವ ಫುಟ್‌ಪಾತ್‌ ರಸ್ತೆಯಲ್ಲೇ 1 ಕೋಟಿ ರು.ಗಳನ್ನು ಪಡೆದಿದ್ದರು. ಒಎಂಆರ್‌ ಉತ್ತರ ಪತ್ರಿಕೆಗಳ ಅಂಕವನ್ನು ಸ್ಕ್ಯಾನಿಂಗ್‌ ಮಾಡಿದ್ದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬ ತನ್ನ ಸಹದ್ಯೋಗಿಗೆ ಅಂಕಗಳ ಮಾಹಿತಿಯನ್ನು ಮೇಲ್‌ ಮೂಲಕ ರವಾನಿಸಿದ್ದ ಎಂಬ ಅಂಶವನ್ನು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

 

ಪಿಎಸ್‌ಐ ಹಗರಣ; ಫುಟ್‌ಪಾತ್‌ನಲ್ಲೇ 1.35 ಕೋಟಿ ಪಡೆದಿದ್ದ ಆರೋಪಿ ಡಿವೈಎಸ್ಪಿ ಶಾಂತಕುಮಾರ್‌

 

ಒಎಂಆರ್‌ ಶೀಟ್‌ಗಳಲ್ಲಿನ ಕಾಲಂ 4ನ್ನು ತಿದ್ದಿ ಆಯ್ಕೆಯಾದ ಅನರ್ಹ ಅಭ್ಯರ್ಥಿಗಳು ನೀಡಿದ್ದ ಪೆನ್‌, ಒನ್‌ಟೈಂ ಲಾಕ್‌, ಡಬಲ್‌ ಸೈಡ್‌ ಗಮ್ಮಿಂಗ್‌ ಟೇಪನ್ನು ನಾಶಪಡಿಸಿ ತಿದ್ದಿರುವ ಒಎಂಆರ್‌ ಶೀಟ್‌ಗಳನ್ನೇ ಅಭ್ಯರ್ಥಿಯ ನೈಜ ಪ್ರತಿ ಎಂದು ಬಿಂಬಿಸಿದ್ದರು ಎಂಬುದು ಸೇರಿದಂತೆ ಅಕ್ರಮದ ಹಲವು ಮುಖಗಳನ್ನು ಮಾಹಿತಿಯಲ್ಲಿ ಅನಾವರಣಗೊಳಿಸಿದ್ದವು.

 

’29ನೇ ಆರೋಪಿ ಹರ್ಷ ಡಿ ಎಂಬಾತ ಡಿವೈಎಸ್ಪಿ ಶಾಂತಕುಮಾರ್‌ಗೆ ಬೆಂಗಳೂರು  ನಗರದ ಹಡ್ಸನ್‌ ಸರ್ಕಲ್‌ ಬಳಿ ಇರುವ ಕೃಷಿ ಭವನದ ಮುಂದಿನ ಫುಟ್‌ಪಾತ್‌ ರಸ್ತೆಯಲ್ಲಿ 1,35,00,000 ರುಗ.ಳನ್ನು ನೀಡಿದ್ದ,’ ಎಂದು ಮಾಹಿತಿ ಒದಗಿಸಿದ್ದರು.

 

 

ಹಾಗೆಯೇ ಒಎಂಆರ್‌ ಉತ್ತರ ಪತ್ರಿಕೆಗಳ ಅಂಕವನ್ನು ಸ್ಕ್ಯಾನಿಂಗ್‌ ಮಾಡಿದ್ದ ಟಿಆರ್‌ಎಸ್‌ ಕಂಪನಿಯ ಶಶಿಧರ್‌ ಎಂಬುವರು ಒಎಂಆರ್‌ ಉತ್ತರ ಪತ್ರಿಕೆಗಳ ಅಂಕಗಳ ಮಾಹಿತಿಯನ್ನು ತಮ್ಮ ಮೇಲ್ ಮೂಲಕ ತಮ್ಮದೇ ಕಂಪನಿಯ ಉದ್ಯೋಗಿಯಾದ ಶ್ಯಾಮ್‌ ಎಂಬಾತನಿಗೆ ಕಳಿಸಿದ್ದ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಲಾಗಿತ್ತು.

 

 

31ನೇ ಆರೋಪಿ ಡಿವೈಎಸ್ಪಿ ಶಾಂತಕುಮಾರ್‌, ಶ್ರೀಧರ್‌ ಹೆಚ್‌ (ಆರೋಪಿ 28), ಹರ್ಷ ಡಿ (ಆರೋಪಿ 29) ಇವರ ಸೇವಾ ವಿವರಗಳನ್ನು ದೋಷಾರೋಪಣೆ ಪಟ್ಟಿಯಲ್ಲಿ ಲಗತ್ತಿಸಿರುವ ಸಿಐಡಿ ತನಿಖಾಧಿಕಾರಿಗಳು ಸರ್ಕಾರಿ ನೌಕರರಾದ ಆರೋಪಿ ಟಿ ಸಿ ಶ್ರೀನಿವಾಸ, ಲೋಕೇಶಪ್ಪ, ಆರ್‌ ಮಂಜುನಾಥ್‌, ಗುರುವ ಬಸವರಾಜು, ಮಧು ಎಸ್‌ ವಿ, ಹರೀಶ್‌ ಕೆ ಅವರ ಸೇವಾ ವಿವರಗಳನ್ನು ದೋಷಾರೋಪಣೆ ಪಟ್ಟಿಯಲ್ಲಿ ಲಗತ್ತಿಸಿಲ್ಲ ಎಂಬುದು ಕಾನೂನು ಇಲಾಖೆಗೆ ಮಾಹಿತಿ ಸಲ್ಲಿಕೆಯಾಗಿತ್ತು.

 

ಬೆಳ್ಳಂದೂರಿನ ನ್ಯೂ ಹಾರಿಝನ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ ಕಾಲೇಜ್‌ನ ಕಿಟ್‌ ಬಾಕ್ಸ್‌ನ್ನು 35ನೇ ಆರೋಪಿ ಎಡಿಜಿಪಿ ಅಮೃತ್‌ಪೌಲ್‌ 31ನೇ ಆರೋಪಿ ಡಿವೈಎಸ್ಪಿ ಶಾಂತಕುಮಾರ್‌ಗೆ ನೀಡಿದ್ದರು. ಕೀ ಬಳಸಿ ಬಾಕ್ಸ್‌ ಓಪನ್‌ ಮಾಡಿದ್ದ ಆರೋಪಿಗಳು ಮಧ್ಯವರ್ತಿಗಳ ಮೂಲಕ 29ನೇ ಆರೋಪಿ ಪ್ರಥಮದರ್ಜೆ ಸಹಾಯಕ ಹರ್ಷ ಡಿ ಎಂಬಾತನಿಗೆ ನೀಡಿದ್ದರು. ಒಎಂಆರ್‌ ಕಾರ್ಬನ್‌ ಕಾಪಿ ಹಾಗೂ ಪೆನ್‌ ಬಳಸಿಕೊಂಡು ಆರೋಪಿಗಳು ಉತ್ತರಿಸದೇ ಖಾಲಿ ಬಿಟ್ಟಿದ್ದ ಪ್ರಶ್ನೆಗಳನ್ನು ತುಂಬಿದ್ದರು. ಅಲ್ಲದೇ ಆರೋಪಿಗಳು ಉತ್ತರಿಸದೇ ಖಾಲಿ ಬಿಟ್ಟಿದ್ದ ಪ್ರಶ್ನೆಗಳನ್ನು ತುಂಬಿದ್ದರಲ್ಲದೇ ಒಎಂಆರ್‌ ಶೀಟ್‌ನ ನಂ 4ರಲ್ಲಿ (ಪ್ರಯತ್ನಿಸಿದ್ದ ಪ್ರಶ್ನೆಗಳ ಸಂಖ್ಯೆ) ಸಂಖ್ಯೆಗಳನ್ನು ತಿದ್ದಿದ್ದರು ಎಂಬುದನ್ನು ಕಾನೂನು ಇಲಾಖೆಗೆ ಮಾಹಿತಿ ಒದಗಿಸಿದ್ದರು.

 

 

ಅದೇ ರೀತಿ ಕೆ ಆರ್‌ ಪುರಂನ ಕೇಂಬ್ರಿಡ್ಜ್‌ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜು ಮತ್ತು ಕೋರಮಂಗಲದ ಕರ್ನಾಟಕ ರೆಡ್ಡಿ ಜನಸಮಘ ಕಾಲೇಜಿನ ಕಿಟ್‌ ಬಾಕ್ಸ್‌ನ್ನು ಅಮೃತ್‌ಪೌಲ್‌ ಸೂಚನೆ ಮೇರೆಗೆ ಡಿವೈಎಸ್ಪಿ ಶಾಂತಕುಮಾರ್‌ ಮೂಲಕ ಕಿಟ್‌ ಬಾಕ್ಸ್‌ನ್ನು ಲಾಕ್‌ ಬಳಸಿ ತೆರೆಯಲಾಗಿತ್ತು. ಮಧ್ಯವರ್ತಿಗಳ ಮೂಲಕ ಆರೋಪಿಗೆ ನೀಡಿದ್ದ ಒಎಂಆರ್ ಕಾರ್ಬನ್‌ ಕಾಪಿ ಬಳಸಿಕೊಂಡು ಆರೋಪಿ ಉತ್ತರಿಸದೇ ಖಾಲಿ ಬಿಟ್ಟಿದ್ದ ಪ್ರಶ್ನೆಗಳನ್ನು ಭರ್ತಿ ಮಾಡಲಾಗಿತ್ತು.

 

ಒಎಂಆರ್‌ ಶೀಟ್‌ನ ಕಾಲಂ 4ರಲ್ಲಿ ದಶಕದ ಸ್ಥಾನದಲ್ಲಿ ಇದ್ದ ‘1’ ಸಂಖ್ಯೆಯನ್ನು ‘9’ ಎಂದು ತಿದ್ದಿ ಬಿಡಿ ಸ್ಥಾನದಲ್ಲಿ ಇರುವ ಸಂಖ್ಯೆಯನ್ನು ತಿದ್ದಿ ಅಕ್ರಮ ಮಾರ್ಗದಲ್ಲಿ ಆಯ್ಕೆಯಾಗಲು ಸಹಕರಿಸಿದ್ದರು ಎಂಬುದನ್ನು ವಿವರಿಸಲಾಗಿತ್ತು.

 

 

ಪೊಲೀಸ್ ಇಲಾಖೆಯ ಲಿಪಿಕ ಸಿಬ್ಬಂದಿ ಆರ್‌ ಮಂಜುನಾಥ್‌ (ಆರೋಪಿ 30-ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ಕಚೇರಿಯ ಶಾಖಾಧೀಕ್ಷಕರಗಿ ವರ್ಗಾವಣೆ ಆದೇಶದಲ್ಲಿದ್ದಾರೆ) ತನ್ನ ಪರಿಚಯಸ್ಥ ಹನುಮಂತಪ್ಪ, ಯಶವಂತಗೌಡ ಎಂಬಾತನಿಗೆ ಪಿಎಸ್‌ಐ ಹುದ್ದೆ ಕೊಡಿಸುವ ಸಂಬಂಧ ಎಫ್‌ಡಿಎ ಹರ್ಷ ಎಂಬಾತನಿಗೆ ಪರಿಚಯಿಸಿ 50.00 ಲಕ್ಷ ರು.ಗೆ ಒಪ್ಪಂದ ಮಾಡಿಕೊಂಡಿದ್ದರು. ಈ ಪೈಕಿ 45.00 ಲಕ್ಷ ರುಗಳನ್ನು ಪಡೆದು ಅಕ್ರಮವಾಗಿ ಲಾಭ ಮಾಡಿಕೊಂಡಿದ್ದರು ಎಂಬುದು ಕಾನೂನು ಇಲಾಖೆಗೆ ಮಾಹಿತಿ  ಸಲ್ಲಿಸಿದ್ದರು.

 

ಆರೋಪಿ ಡಿವೈಎಸ್ಪಿ ಶಾಂತಕುಮಾರ್‌, ಎಫ್‌ಡಿಎ ಹರ್ಷ, ಟಿ ಸಿ ಶ್ರೀನಿವಾಸ, ಶ್ರೀಧರ್‌, ಲೋಕೇಶಪ್ಪ, ಮಂಜುನಾಥ, ಗುರುವ ಬಸವರಾಜು, ಮಧು ಎಸ್‌ ವಿ, ಹರೀಶ್‌ ಕೆ ಇವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಕಲಂ 7(3)(ಸಿ)ಮತ್ತು ಕಲಂ 13(1)(3) ಅಡಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಿಲು ಸರ್ಕಾರವು ಪೂರ್ವಾನುಮತಿ ನೀಡಬಹುದಾಗಿದೆ ಎಂದು ಒಳಾಡಳಿತ ಇಲಾಖೆಯ ಹಿರಿಯ ಕಾನೂನು ಅಧಿಕಾರಿ ಸಿ ಕೆ ಸರೋಜ ಅವರು ಅಭಿಪ್ರಾಯ ನೀಡಿದ್ದರು.

Hot this week

‘ಅಕ್ರಮ ಗಣಿಗಾರಿಕೆ ಮಾಡಿರುವುದು ಗಮನಕ್ಕೆ ಬಂದಿರಲಿಲ್ಲವೇ?; ಅದಾನಿ ಎಸಿಸಿ ಸಿಮೆಂಟ್ ಪ್ರಕರಣದಲ್ಲಿ ಮಾಹಿತಿ ಕೋರಿದ ಆರ್ಥಿಕ ಇಲಾಖೆ

ಬೆಂಗಳೂರು; ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ನ ಗಣಿ ಗುತ್ತಿಗೆ ಅವಧಿ...

15ನೇ ಹಣಕಾಸು ಆಯೋಗ;1,764.83 ಕೋಟಿ ಬಳಕೆ ಮಾಡದ ಪಂಚಾಯ್ತಿಗಳು, ನರೇಗಾ ಅನುದಾನವೂ ಅನ್ಯ ಉದ್ದೇಶಕ್ಕೆ ಬಳಕೆ

ಬೆಂಗಳೂರು; ಪ್ರಿಯಾಂಕ್‌ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌  ಸಚಿವರಾಗಿದ್ದ ಸಂದರ್ಭದಲ್ಲೇ ಅದೂ...
Please Scan to make Your Contribution

Topics

15ನೇ ಹಣಕಾಸು ಆಯೋಗ;1,764.83 ಕೋಟಿ ಬಳಕೆ ಮಾಡದ ಪಂಚಾಯ್ತಿಗಳು, ನರೇಗಾ ಅನುದಾನವೂ ಅನ್ಯ ಉದ್ದೇಶಕ್ಕೆ ಬಳಕೆ

ಬೆಂಗಳೂರು; ಪ್ರಿಯಾಂಕ್‌ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌  ಸಚಿವರಾಗಿದ್ದ ಸಂದರ್ಭದಲ್ಲೇ ಅದೂ...

ಐಎಎಸ್‌ ಅಧಿಕಾರಿಗಳ ಸಂಘಕ್ಕೆ ಕೋಟಿ ಕೋಟಿ ಅನುದಾನ; ನಿಯಮಬಾಹಿರ ಬಳಕೆ, 9.50 ಕೋಟಿ ವೆಚ್ಚಕ್ಕೆ ದಾಖಲೆಗಳೇ ಇಲ್ಲವೆಂದ ಎಜಿ

ಬೆಂಗಳೂರು; ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಎಸ್‌ ಅಧಿಕಾರಿಗಳ ಸಂಘಕ್ಕೆ ನೀಡಲಾಗಿದ್ದ ಅನುದಾನವನ್ನು ನಿಯಮಬಾಹಿರವಾಗಿ...

54 ತಾಲೂಕುಗಳಲ್ಲಿ ತೀವ್ರ, 40 ತಾಲೂಕುಗಳಲ್ಲಿ ಮಧ್ಯಮ ಬರ; ಇನ್ನೂ ರಚನೆಯಾಗದ ನೈಸರ್ಗಿಕ ವಿಕೋಪಗಳ ಸಚಿವ ಸಂಪುಟ ಉಪ ಸಮಿತಿ

ಬೆಂಗಳೂರು; ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಕುರಿತು ಪ್ರತಿಪಕ್ಷಗಳು ಜಿಲ್ಲಾವಾರು, ಪ್ರದೇಶವಾರು...

Related Articles

Popular Categories

error: Content is protected !!