Saturday | July 18, 2026 |

ಕೆಡಿಪಿ ಪ್ರಕಾರ ಶೇ.35.41ರಷ್ಟೇ ಪ್ರಗತಿ, ಸಿಎಂ ಪ್ರಕಾರ ಶೇ.46ರಷ್ಟು ವೆಚ್ಚ; ವಾಸ್ತವ ಮರೆಮಾಚಲಾಗಿದೆಯೇ?

ಬೆಂಗಳೂರು; ಪ್ರಸಕ್ತ ಆರ್ಥಿಕ ಸಾಲಿನ ಬಜೆಟ್‌ ಅನುದಾನದಲ್ಲಿ ಅಕ್ಟೋಬರ್‌ ಅಂತ್ಯಕ್ಕೆ ಶೇ.35.41ರಷ್ಟೇ ಪ್ರಗತಿ ಆಗಿದೆ ಎಂದು  ಅಕ್ಟೋಬರ್‌ 21ರಂದೇ ನಡೆದಿದ್ದ ಕೆಡಿಪಿ ಸಭೆಯ ನಡವಳಿಯಲ್ಲೇ ದಾಖಲಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ  ಬಜೆಟ್‌ ಅನುದಾನದಲ್ಲಿ  ಶೇ.46ರಷ್ಟು ವೆಚ್ಚ ಮಾಡಲಾಗಿದೆ ಎಂದು   ಹೇಳಿದ್ದಾರೆ.

 

ಬಜೆಟ್‌ ಅನುದಾನದಲ್ಲಿ ಅಕ್ಟೋಬರ್‌ ಅಂತ್ಯಕ್ಕೆ ಆಗಿರುವ ವೆಚ್ಚದ ಕುರಿತು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಕೆಡಿಪಿ ಸಭೆ ನಡವಳಿ ಆಧರಿಸಿ   ‘ದಿ ಫೈಲ್‌’ ವರದಿ ಪ್ರಕಟಿಸಿತ್ತು. ಇದರಿಂದ ಸರ್ಕಾರವು ಮುಜುಗರಕ್ಕೆ ಒಳಗಾಗಿತ್ತು. ಇದರ  ಬೆನ್ನಲ್ಲೇ ಸಿದ್ದರಾಮಯ್ಯ ಅವರು ವೆಚ್ಚದ ಶೇಕಡವಾರು  ಪ್ರಮಾಣವನ್ನು ಏರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

2024-25ನೇ ಸಾಲಿನ ಬಜೆಟ್‌ ಅನುದಾನದಲ್ಲಿ ಅಕ್ಟೋಬರ್‍‌ 21ರ ಅಂತ್ಯಕ್ಕೆ  ಶೇ.35.41ರಷ್ಟೇ ಪ್ರಗತಿ ಆಗಿದೆ ಎಂದು ದಾಖಲಾಗಿದ್ದ ಕೆಡಿಪಿ ನಡವಳಿಗೆ ಖುದ್ದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರೇ ಸಹಿ ಮಾಡಿದ್ದಾರೆ. ಇದೇ ನಡವಳಿಯನ್ನು 2024ರ ಅಕ್ಟೋಬರ್‌ 29ರಂದು ಯೋಜನಾ ಇಲಾಖೆಯೇ ಸರ್ಕಾರದ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ರವಾನಿಸಿದ್ದಾರೆ.

 

ಹೀಗಿದ್ದರೂ ಬಜೆಟ್‌ ಅನುದಾನದಲ್ಲಿ ಅಕ್ಟೋಬರ್‍‌ ಅಂತ್ಯಕ್ಕೆ  ಶೇ.46ರಷ್ಟು ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇದು  ಮುಖ್ಯ ಕಾರ್ಯದರ್ಶಿಗಳ  ಅಧ್ಯಕ್ಷತೆಯಲ್ಲಿ ನಡೆದಿದ್ದ ಕೆಡಿಪಿ ಸಭೆ ನಡವಳಿಯಲ್ಲಿ ದಾಖಲಾಗಿರುವ ವೆಚ್ಚದ ಮಾಹಿತಿಯನ್ನೇ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅನುಮಾನ ವ್ಯಕ್ತಪಡಿಸಿದಂತಿದೆ.

 

ಸಿಎಂ ಹೇಳಿರುವುದೇನು?

 

‘ರಾಜ್ಯ ಅಕ್ಟೋಬರ್‌ ಅಂತ್ಯದ ವೇಳೆಗೆ ಬಜೆಟ್‌ ಅನುದಾನದ ಶೇ.46 ರಷ್ಟು ವೆಚ್ಚ ಮಾಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.42 ರಷ್ಟು ವೆಚ್ಚ ದಾಖಲಾಗಿತ್ತು. ಬಜೆಟ್‌ ಅಂದಾಜಿಗಿಂತ ಬಂಡವಾಳ ವೆಚ್ಚ ಸಹ ಶೇ.24.7ರಿಂದ ಶೇ.29 ಕ್ಕೆ ಏರಿಕೆಯಾಗಿದೆ. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ರಾಜ್ಯದ ಬದ್ಧತೆಯನ್ನು ಇದು ತೋರಿಸುತ್ತದೆ,’ ಎಂದು ಸಿದ್ದರಾಮಯ್ಯ ಅವರು ಅಧಿಕೃತ ಎಕ್ಸ್‌ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

 

ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಇಲಾಖೆಗಳಲ್ಲಿ ವಿದ್ಯಾರ್ಥಿ ವೇತನ ಹಾಗೂ ಶುಲ್ಕ ಮರುಪಾವತಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ವಿವಿಧ ಕಾರ್ಯಕ್ರಮಗಳಲ್ಲಿ ಮನೆ ನಿರ್ಮಾಣದಲ್ಲಿಯೂ ಪ್ರಗತಿ ಕುಂಠಿತವಾಗಿದೆ ಎಂದು ಸಭೆಯ ನಡವಳಿಯಲ್ಲಿ ದಾಖಲಾಗಿತ್ತು.

 

ಅದೇ ರೀತಿ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಇಂಟ್ರೆಸ್ಟ್‌ ಡಿಪಾಸಿಟ್‌ ಸರ್ಟಿಫಿಕೇಟ್‌ ನೀಡಿಲ್ಲ. ಹೀಗಾಗಿ  ಎರಡನೇ ಕಂತೂ ಬಿಡುಗಡೆ ಆಗುವುದಿಲ್ಲ ಎಂದು ಆರ್ಥಿಕ ಇಲಾಖೆಯು ಹೇಳಿತ್ತು.

 

ಕಳೆದ ವರ್ಷ ಇದೇ ಸಮಯಕ್ಕೆ (ಅಕ್ಟೋಬರ್‍‌ 21, 2023)   ಶೇ.36.98ರಷ್ಟು ಖರ್ಚು ಮಾಡಿತ್ತು. ಪ್ರಸಕ್ತ ಸಾಲಿನ ಈ ಸಮಯಕ್ಕೆ (ಅಕ್ಟೋಬರ್‍‌ 21,2024) ಹೋಲಿಸಿದರೆ ಕಳೆದ ವರ್ಷಕ್ಕಿಂತಲೂ ಶೇ.1ರಷ್ಟು ಕಡಿಮೆ ವೆಚ್ಚ ಮಾಡಿದೆ ಎಂದು ಸಭೆ ನಡವಳಿಯಲ್ಲೇ ದಾಖಲಾಗಿತ್ತು.

 

 

 

 

ನಡವಳಿಯಲ್ಲೇನಿದೆ?

 

 

2024-25ನೇ ಸಾಲಿನಲ್ಲಿ ಆಯವ್ಯಯ ಅಂದಾಜು 3,11,586, ಪ್ರಾಥಮಿಕ ಶಿಲ್ಕು 17,574 ಕೋಟಿ ಸೇರಿ  ಒಟ್ಟು 3,29,160 ಕೋಟಿ ರು. ಇದೆ. ಈ ಪೈಕಿ ಅಕ್ಟೋಬರ್‍‌ 21ರ ಅಂತ್ಯಕ್ಕೆ 1,50,834.97 ಕೋಟಿ ರು. ಬಿಡುಗಡೆ ಆಗಿದೆ. ಇದರಲ್ಲಿ 1,33,827.97 ಕೋಟಿ ರು. ಖರ್ಚಾಗಿದೆ. ಒಟ್ಟು ಅನುದಾನಕ್ಕೆ ಶೇ. 35.41ರಷ್ಟು ಪ್ರಗತಿಯಾಗಿರುವುದು ನಡವಳಿಯಿಂದ ಗೊತ್ತಾಗಿದೆ.

 

ಶೇ.35.41ರಷ್ಟು ವೆಚ್ಚ; ಹಗರಣಗಳಲ್ಲಿ ಉಸಿರು ಕಟ್ಟಿದ ಸರ್ಕಾರ, ಮೈಗಳ್ಳರಿಗೆ ಸ್ವರ್ಗಸೀಮೆಯಾಯಿತೇ?

‘ಕಳೆದ ಸಾಲಿನಲ್ಲಿ ಇದೇ ಸಮಯಕ್ಕೆ 1,25,115.63 ಕೋಟಿ ವೆಚ್ಚವಾಗಿದ್ದು ಒಟ್ಟಾರೆ ಅನುದಾನಕ್ಕೆ ಶೇ.36.98ರಷ್ಟು ವೆಚ್ಚವಾಗಿದೆ,’ ಎಂಬ ಅಂಶವನ್ನು ನಡವಳಿಯಲ್ಲಿ ಉಲ್ಲೇಖಿಸಿತ್ತು.

 

 

 

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಸಚಿವರಾಗಿರುವ ನಗರಾಭಿವೃದ್ಧಿ ಇಲಾಖೆಯಲ್ಲಿಯೂ ಕಡಿಮೆ ಪ್ರಗತಿ ಆಗಿದೆ. ಸ್ವಚ್ಛ ಭಾರತ (ನಗರ) ಕಾರ್ಯಕ್ರಮಗಳಡಿಯಲ್ಲಿ ಆರಂಭಿಕ ಶಿಲ್ಕಿನ ರೂಪದಲ್ಲಿ 1,012.00 ಕೋಟಿ ರು. ಇದೆ. ಆದರೆ ಬಹಳ ಕಡಿಮೆ ವೆಚ್ಚವಾಗಿತ್ತು.

 

 

 

ಅದೇ ರೀತಿ ಗೃಹಲಕ್ಷ್ಮಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ವೆಚ್ಚವು ಅಷ್ಟೇನೂ ಆಶಾದಾಯಕವಾಗಿಲ್ಲ. ಪೂರಕ ಪೌಷ್ಠಿಕಾಂಶ ಕಾರ್ಯಕ್ರಮದಲ್ಲಿ 419.72 ಕೋಟಿ ರು. ಪ್ರಾರಂಭಿಕ ಶಿಲ್ಕಿದೆ. ಇಷ್ಟೂ ಹಣವನ್ನೂ ಬಿಡುಗಡೆ ಮಾಡಲಾಗಿದೆ. ಆದರೆ ಇದರಲ್ಲಿ 232.30 ಕೋಟಿಯಷ್ಟು ಮಾತ್ರ ವೆಚ್ಚವಾಗಿತ್ತು.

 

ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಕಲ್ಯಾಣ, ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆಗಳಲ್ಲಿನ ವಿದ್ಯಾರ್ಥಿ ವೇತನ ಹಾಗೂ ಶುಲ್ಕ ಮರುಪಾವತಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ವಿದ್ಯಾರ್ಥಿಗಳ ಪ್ರವೇಶ ದಾಖಲಾತಿಯಾದ ನಂತರ ಮಾಹಿತಿಯನ್ನು ಸ್ಕಾಲರ್‍‌ ಶಿಪ್‌ ಪೋರ್ಟಲ್‌ನಲ್ಲಿ ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು.

 

‘ವಿದ್ಯಾರ್ಥಿಗಳ ಆಧಾರ್‍‌ನಲ್ಲಿನ ಪರಿಷ್ಕೃತ ಬಯೋಮೆಟ್ರಿಕ್‌ ಮಾಹಿತಿಯು ಇಂಡೀಕರಿಸದೇ ಇರುವುದು ಹಾಗೂ ಪರೀಕ್ಷಾ ಫಲಿತಾಂಶಗಳ ಮಾಹಿತಿಯು ಯುಯುಸಿಎಂಎಸ್‌ನಲ್ಲಿ ಇಂಡಿಕರಿಸಲಾಗುತ್ತಿದೆ. ಸ್ಕಾಲರ್‍‌ ಶಿಪ್‌ ಪೋರ್ಟಲ್‌ ಗೆ ಸಂಯೋಜನೆಯಾಗದಿರುವುದು ಪ್ರಮುಖ ಕಾರಣವಾಗಿದೆ,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಸಭೆಗೆ ತಿಳಿಸಿದ್ದರು.

 

 

ವಸತಿ ಇಲಾಖೆಯಡಿ ಅನುಷ್ಠಾನಗೊಳ್ಳತ್ತಿರುವ ವಿವಿಧ ಕಾರ್ಯಕ್ರಮಗಳೂ ಆಮೆ ವೇಗದಲ್ಲಿದೆ. ಫಲಾನುಭವಿಗಳಿಗೆ ಮನೆ ನಿರ್ಮಾಣದಲ್ಲಿ ಪ್ರಗತಿ ಕುಂಠಿತವಾಗಿತ್ತು.

 

 

ಅದೇ ರೀತಿ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಡಿಯಲ್ಲಿ ಕೆಲ ಇಲಾಖೆಗಳಿಗೆ ಕಡಿಮೆ ಅನುದಾನ ಬಿಡುಗಡೆ ಮಾಡಿದೆ. . ಶಾಲಾ ಶಿಕ್ಷಣ (ಶೇ.15.4), ಕೃಷಿ (ಶೇ.19.0), ಸಮಾಜ ಕಲ್ಯಾಣ ಶೇ.20.8ರಷ್ಟು ಬಿಡುಗಡೆ ಆಗಿದೆ. ಆದರೆ  ಸಣ್ಣ ನೀರಾವರಿ, ಮೀನುಗಾರಿಕೆ,  ಸಹಕಾರ ಮತ್ತು  ಮೂಲಸೌಲಭ್ಯ  ಇಲಾಖೆಗಳಿಗೆ ಬಿಡಿಗಾಸೂ ಬಂದಿಲ್ಲ.

 

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ಮೆಟ್ರಿಕ್‌ ಪೂವ್ ಮತ್ತು ಮೆಟ್ರಿಕ್‌ ನಂತರ  ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿಯೂ ಪ್ರಗತಿ ಉತ್ತಮವಾಗಿಲ್ಲ.   ಸಮಾಜ ಕಲ್ಯಾಣ ಇಲಾಖೆಯಡಿ ಮೆಟ್ರಿಕ್‌ ನಂತರ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ ಇಂಟ್ರೆಸ್ಟ್‌ ಡಿಪಾಸಿಟ್‌ ಸರ್ಟಿಫಿಕೇಟ್‌ನ್ನು ನೀಡಿಲ್ಲ. ಹೀಗಾಗಿ ಎರಡನೇ ಕಂತು ಬಿಡುಗಡೆ ಆಗುವುದಿಲ್ಲ ಎಂದು ಆರ್ಥಿಕ ಇಲಾಖೆಯು ಸಭೆಗೆ ತಿಳಿಸಿದ್ದರು.

 

ಪರಿಶಿಷ್ಟ ಜಾತಿ ಉಪ ಯೋಜನೆ, ಗಿರಿಜನ ಉಪ ಯೋಜನೆ ಕಾಯಕ್ರಮಗಳಡಿಯಲ್ಲಿ ಒಟ್ಟಾರೆ ಅನುದಾನಕ್ಕೆ ಶೇ. 35.41ರಷ್ಟು ಮಾತ್ರ ವೆಚ್ಚವಾಗಿದೆ. ಕಡಿಮೆ ಪ್ರಗತಿ ಸಾಧಿಸಿರುವ ಇಲಾಖೆಗಳಿಗೆ ಪ್ರಗತಿ ತ್ವರಿತಗೊಳಿಸಬೇಕು ಎಂದು  ಸಭೆಯು ಸೂಚಿಸಿತ್ತು.

 

 

2024ರ ಅಕ್ಟೋಬರ್‍‌ 1 ಅಂತ್ಯಕ್ಕೆ  32,250.02 ಕೋಟಿ ರು. ಖರ್ಚಾಗದೇ ಬಾಕಿ ಇತ್ತು.   22 ಇಲಾಖೆಗಳ ಪೈಕಿ ಒಂದು ಇಲಾಖೆಯೂ ಶೇ.50ರ ಗಡಿಯನ್ನೂ ದಾಟಿರಲಿಲ್ಲ.

 

ಸಣ್ಣ ನೀರಾವರಿ, ತೋಟಗಾರಿಕೆ, ಪಶು ಸಂಗೋಪನೆ, ಕರ್ನಾಟಕ ವಿಧಾನಸಭೆ, ಪರಿಷತ್‌, ವೈದ್ಯಕೀಯ ಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ, ಆಹಾರ, ಯುವ ಸಬಲೀಕರಣ, ಪ್ರವಾಸೋದ್ಯಮ, ರೇಷ್ಮೆ, ಮೀನುಗಾರಿಕೆ, ವಾರ್ತಾ, ವಾಣಿಜ್ಯ ಕೈಗಾರಿಕೆ, ಮೂಲಭೂತ ಸೌಕರ್ಯ, ಪರಿಶಿಷ್ಟ ಪಂಗಡ, ಇಂಧನ, ಕನ್ನಡ, ಸಂಸ್ಕೃತಿ, ಮಾಹಿತಿ ತಂತ್ರಜ್ಞಾನ, ಕಾರ್ಮಿಕ ಇಲಾಖೆಯಲ್ಲಿ  ಒಟ್ಟಾರೆಯಾಗಿ 2024ರ ಸೆ.21ರ ಅಂತ್ಯಕ್ಕೆ 32,250.02 ಕೋಟಿ ರು. ಖರ್ಚಾಗದೇ ಹಾಗೇ ಉಳಿದುಕೊಂಡಿತ್ತು.

 

ಅರ್ಧ ವರ್ಷ ಕಳೆದರೂ 22 ಇಲಾಖೆಗಳಲ್ಲಿ ಖರ್ಚೇ ಆಗದ 32,250.02 ಕೋಟಿ; ಕುಸಿದ ಆಡಳಿತ ಯಂತ್ರ?

2024-25ನೇ ಸಾಲಿನಲ್ಲಿ ಒಟ್ಟು 3.28 ಲಕ್ಷ ಕೋಟಿ ರು ಅನುದಾನವನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಸೆ.21ರ ಅಂತ್ಯಕ್ಕೆ 1.26 ಲಕ್ಷ ಕೋಟಿ ರು. ಬಿಡುಗಡೆ ಆಗಿತ್ತು. ಇದು ಒಟ್ಟು ಅನುದಾನಕ್ಕೆ ಶೇ. 40.67ರಷ್ಟಿತ್ತು ಈ ಪೈಕಿ 1.11 ಲಕ್ಷ ಕೋಟಿ ರು. ಒಟ್ಟು ವೆಚ್ಚವಾಗಿದೆ. ಇದು ಸಹ ಒಟ್ಟು ಅನುದಾನಕ್ಕೆ ಶೇ. 34.00 ರಷ್ಟಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಗೆ ಬಿಡುಗಡೆಯಾಗಿದ್ದ ಒಟ್ಟು ಅನುದಾನದ ಪೈಕಿ ಶೇ. 27.37ರಷ್ಟು ಮಾತ್ರ ವೆಚ್ಚವಾಗಿತ್ತು.

 

ಸಣ್ಣ ನೀರಾವರಿ ಇಲಾಖೆಗೆ ಹಂಚಿಕೆಯಾಗಿದ್ದ ಒಟ್ಟು 2,388.49 ಕೋಟಿ ರು. ಅನುದಾನದ ಪೈಕಿ 1,003.54 ಕೋಟಿ ರು (ಶೇ.42.02) ಬಿಡುಗಡೆಯಾಗಿದೆ. ಇದರಲ್ಲಿ ಸೆ.21ರ ಅಂತ್ಯಕ್ಕೆ 761.92 ಕೋಟಿ ರು. ಮಾತ್ರ ಖರ್ಚಾಗಿದೆ. ಖರ್ಚು ಮಾಡಲು ಇನ್ನೂ 241.63 ಕೋಟಿ ರು. ಬಾಕಿ ಇರುವುದು ಗೊತ್ತಾಗಿದೆ.

 

ವಿಲೇವಾರಿಗೆ ಬಾಕಿ ಇವೆ 1.69 ಲಕ್ಷ ಕಡತಗಳು; ಕುಂತಲ್ಲೇ ಕುಳಿತಿದೆ ಮೈಗಳ್ಳರ ಸರ್ಕಾರ!

 

2023-24ನೇ ಸಾಲಿಗೆ ಹೋಲಿಸಿದರೇ ಸೆಪ್ಟಂಬರ್‍‌ ಅಂತ್ಯಕ್ಕೆ ಶೇ. 31ರಷ್ಟು ಅನುದಾನ ಖರ್ಚು ಮಾಡಿತ್ತು. 2024-25ನೇ ಸಾಲಿನ ಸೆಪ್ಟಂಬರ್‍‌ ಅಂತ್ಯಕ್ಕೆ ಶೇ. 34.96ರಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಇದೇ ಅವಧಿಯಲ್ಲಿ ಶೇ.3ರಷ್ಟು ಮಾತ್ರ ಖರ್ಚಾಗಿದ್ದನ್ನು ಸ್ಮರಿಸಬಹುದು.

Hot this week

ಏಕಬಳಕೆ ಪ್ಲಾಸ್ಟಿಕ್‌ ಬಳಕೆಗಿಲ್ಲ ಕಡಿವಾಣ, ನಿಷೇಧದ ಕಾನೂನು ಕಾಗದದ ಮೇಲಷ್ಟೇ ಜಾರಿ; ಪಾಲಿಕೆ ಬಳಿ ಮಾಹಿತಿಯೇ ಇಲ್ಲ

ಮೈಸೂರು: ಏಕಬಳಕೆ ಪ್ಲಾಸ್ಟಿಕ್‌ನ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ...
Please Scan to make Your Contribution

Topics

ಏಕಬಳಕೆ ಪ್ಲಾಸ್ಟಿಕ್‌ ಬಳಕೆಗಿಲ್ಲ ಕಡಿವಾಣ, ನಿಷೇಧದ ಕಾನೂನು ಕಾಗದದ ಮೇಲಷ್ಟೇ ಜಾರಿ; ಪಾಲಿಕೆ ಬಳಿ ಮಾಹಿತಿಯೇ ಇಲ್ಲ

ಮೈಸೂರು: ಏಕಬಳಕೆ ಪ್ಲಾಸ್ಟಿಕ್‌ನ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ...

ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ; ಕನಿಷ್ಟ ಭೂಮಿ ಪ್ರಮಾಣ, ಜಂಟಿ ಸ್ಥಿರ ಠೇವಣಿ 25 ಕೋಟಿ ಬದಲಿಗೆ 20 ಕೋಟಿ ರು ಇಳಿಕೆಗೆ ಚಿಂತನೆ

ಬೆಂಗಳೂರು;  ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಇದ್ದ  ಕನಿಷ್ಠ ಭೂಮಿ ಅವಶ್ಯಕತೆ ತೆಗೆದುಹಾಕುವುದು...

35,280 ಚಾಲ್ತಿಯಲ್ಲಿಲ್ಲದ ಬ್ಯಾಂಕ್‌ ಖಾತೆಗಳಲ್ಲಿ 239.66 ಕೋಟಿ; ಅಭಿವೃದ್ಧಿ ಯೋಜನೆಗಳಿಗೆ ಬಳಸದೇ ನಿರ್ಲಕ್ಷ್ಯ, 14.37 ಕೋಟಿ ಬಡ್ಡಿ ನಷ್ಟ

ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳು  ಚಾಲ್ತಿಯಲ್ಲೇ ಇಲ್ಲದ 35,280  ಬ್ಯಾಂಕ್‌ ಖಾತೆಗಳಲ್ಲಿ ...

ಸರ್ಕಾರಿ ಲೆಕ್ಕಪತ್ರಗಳ ಮರು ಹೊಂದಾಣಿಕೆಯಲ್ಲಿ ಲೋಪ; ಆದಾಯ, ಸ್ವೀಕೃತಿ, ಬಂಡವಾಳ ವೆಚ್ಚದಲ್ಲಿ ವ್ಯತ್ಯಾಸ, ಕಳವಳ ವ್ಯಕ್ತಪಡಿಸಿದ ಲೆಕ್ಕಪರಿಶೋಧನಾ ಮಹಾನಿರ್ದೇಶಕ

ಬೆಂಗಳೂರು; ಸರ್ಕಾರಿ ಲೆಕ್ಕಪತ್ರಗಳಲ್ಲಿ ಸಂಪೂರ್ಣ ನಿಖರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಬೇಕಿದ್ದ...

Related Articles

Popular Categories

error: Content is protected !!