ಬೆಂಗಳೂರು; ಹಾಲಿ ಬಿಜೆಪಿ ಶಾಸಕ ಕೆ ಗೋಪಾಲಯ್ಯ ಅವರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಬಕಾರಿ ಸಚಿವರಾಗಿದ್ದ ಅವಧಿಯಲ್ಲಿ 2 ಲಕ್ಷ ಮೆಟ್ರಿಕ್ ಟನ್‌ನಷ್ಟು ಕಾಕಂಬಿಯನ್ನು ನಿಯಮಬಾಹಿರವಾಗಿ ರಫ್ತು ಮಾಡಲು ಅನುಮತಿ ನೀಡಿದ್ದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತಿರಸ್ಕರಿಸಿದೆ.
ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯನ್ನು ಬದಿಗೆ ಸರಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಈ ಪ್ರಕರಣವನ್ನು ಕಾನೂನುಬದ್ಧವಾಗಿ ತನಿಖೆ ನಡೆಸಿ 3 ತಿಂಗಳ ಒಳಗೇ ವರದಿ ಸಲ್ಲಿಸಬೇಕು ಎಂದು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ನಿಯಮಬಾಹಿರವಾಗಿ 2 ಲಕ್ಷ ಮೆಟ್ರಿಕ್ ಟನ್ ಕಾಕಂಬಿ ರಫ್ತಿಗೆ ಆದೇಶ ನೀಡಿದ್ದ ಪ್ರಕರಣವನ್ನು ಸೂಕ್ತ ಮತ್ತು ಕ್ರಮಬದ್ಧವಾಗಿ ತನಿಖೆ ನಡೆಸದೆಯೇ ಮುಕ್ತಾಯಗೊಳಿಸಿದ್ದ ಲೋಕಾಯುಕ್ತ ಪೊಲೀಸರಿಗೀಗ ನ್ಯಾಯಾಲಯವು ನೀಡಿರುವ ಆದೇಶವು, ಈ ಪ್ರಕರಣಕ್ಕೆ ಮರು ಜೀವ ನೀಡಿದಂತಾಗಿದೆ. ಅಲ್ಲದೇ ಈ ಆದೇಶವು, ಲೋಕಾಯುಕ್ತ ಪೊಲೀಸರನ್ನು ತೀವ್ರ ಮುಖಭಂಗಕ್ಕೀಡು ಮಾಡಿದಂತಾಗಿದೆ.
ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ದೆಹಲಿಯಲ್ಲಿ ನಡೆದಿದೆ ಎನ್ನಲಾಗಿದ್ದ ಅಬಕಾರಿ ಹಗರಣದಲ್ಲಿ ಹಿಂದಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹಿತ ಮತ್ತಿತರರು ಜೈಲು ಸೇರಿದ್ದರು. ಇದರ ಬೆನ್ನಲ್ಲೆ ರಾಜ್ಯದಲ್ಲಿ ನಡೆದಿರುವ ಅಬಕಾರಿಗ ಹಗರಣವನ್ನು ತನಿಖೆ ನಡೆಸಬೇಕು ಎಂದು ನ್ಯಾಯಾಲಯವು ಹೊರಡಿಸಿರುವ ಆದೇಶವು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಪ್ರಕರಣದ ಕುರಿತು ಕರ್ನಾಟಕ ಲೋಕಾಯುಕ್ತ ಪೊಲೀಸರು ನಡೆಸಿರುವ ತನಿಖೆಯು ಕಾನೂನಿಗೆ ಅನುಗುಣವಾಗಿಲ್ಲ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಇದಲ್ಲದೆ, ಯಾವುದೇ ಅಪರಾಧ ನಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖಾ ಸಂಸ್ಥೆಯು ಪ್ರಕರಣದಲ್ಲಿ ಲಭ್ಯವಿರುವ ಸುಳಿವುಗಳನ್ನು ಸೇರಿಸಬೇಕಾಗಿತ್ತು. ಆದರೆ ಇದಾವುದನ್ನೂ ಈ ಪ್ರಕರಣದ ತನಿಖೆಯಲ್ಲಿ ಮಾಡಿಲ್ಲ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿರುವುದು ಲೋಕಾಯುಕ್ತ ಪೊಲೀಸರ ತನಿಖೆಯ ವಿಶ್ವಾಸರ್ಹತೆಯ ಬಗೆಗೆ ಹಲವು ಪ್ರಶ್ನೆಗಳು ಮತ್ತು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ, ತನಿಖಾ ಸಂಸ್ಥೆಯು ಈ ಪ್ರಕರಣವನ್ನು ಸರಿಯಾದ ದೃಷ್ಟಿಕೋನದಿಂದ ಗಮನಿಸದೇ ಇರುವುದನ್ನೂ ಸಹ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಅವಲೋಕಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನೀಡಿರುವ ಆದೇಶದಿಂದಾಗಿ ಬಿಜೆಪಿ ಶಾಸಕ ಕೆ ಗೋಪಾಲಯ್ಯ,
ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಐ ಎಸ್ ಎನ್ ಪ್ರಸಾದ್, ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಏಕರೂಪ್ ಕೌರ್, ಅಬಕಾರಿ ಇಲಾಖೆ ಆಯುಕ್ತ ಡಾ ಜೆ ರವಿಶಂಕರ್, ಇಲಾಖೆಯ ಅಧೀನ ಕಾರ್ಯದರ್ಶಿಯಾಗಿದ್ದ ಮಂಜುಳ ನಟರಾಜ್ ಅವರನ್ನೂ ಲೋಕಾಯುಕ್ತ ಪೊಲೀಸರು ತನಿಖೆಗೆ ಒಳಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಹಗರಣವನ್ನು ‘ದಿ ಫೈಲ್’, ದಾಖಲೆ ಸಹಿತ ಹೊರಗೆಳೆದಿತ್ತು.
ಅಬಕಾರಿ ಹಗರಣ; ಗೋವಾ ಬಂದರು ಮೂಲಕ ಕಾಕಂಬಿ ರಫ್ತಿನ ಅನುಮತಿಗೆ 8 ಕೋಟಿ ಕಿಕ್‌ಬ್ಯಾಕ್ ಆರೋಪ
‘ದಿ ಫೈಲ್’ ವರದಿ ಆಧರಿಸಿಯೇ ಈ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ದೂರು ಸಲ್ಲಿಸಿತ್ತು. ಆದರೆ ಲೋಕಾಯುಕ್ತ ಪೊಲೀಸರು ಕ್ರಮಬದ್ಧವಾಗಿ ವಿಚಾರಣೆ ನಡೆಸದೆಯೇ ದೂರರ್ಜಿಯನ್ನು ಮುಕ್ತಾಯಗೊಳಿಸಿದ್ದರು. ಇದನ್ನು ಪ್ರಶ್ನಿಸಿ ವೇದಿಕೆಯು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು (ಪಿಸಿಆರ್) ಸಲ್ಲಿಸಿತ್ತು.
ವೇದಿಕೆಯು ಸಲ್ಲಿಸಿದ್ದ ಅರ್ಜಿಯ ಕುರಿತಾಗಿ ನ್ಯಾಯಾಲಯದಲ್ಲಿ ಸತತ 2 ವರ್ಷಗಳ ಕಾಲ ವಿಚಾರಣೆ ನಡೆದಿತ್ತು. ಅರ್ಜಿದಾರರು ಸಲ್ಲಿಸಿದ್ದ ಮನವಿ ಮತ್ತು ದೂರರ್ಜಿಯನ್ನು ಮುಕ್ತಾಯಗೊಳಿಸಿದ್ದ ಲೋಕಾಯುಕ್ತ ಪೊಲೀಸರ ಕ್ರಮವನ್ನು ನ್ಯಾಯಾಲಯವು ಸುದೀರ್ಘವಾಗಿ ವಿಚಾರಣೆ ನಡೆಸಿದ ನಂತರ ಈ ಪ್ರಕರಣದ ಕುರಿತು ಕಾನೂನು ಪ್ರಕಾರ ತನಿಖೆ ನಡೆಸಬೇಕು ಎಂದು 2025ರ ಮೇ 5ರಂದು ಆದೇಶ ಹೊರಡಿಸಿದೆ.
ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಸಲ್ಲಿಸಿದ್ದ ದೂರರ್ಜಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು, ಅಬಕಾರಿ ಇಲಾಖೆ ನೀಡಿದ್ದ ಹೇಳಿಕೆಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡಿಲ್ಲ ಎಂದು ವಿಶೇಷ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಅವಲೋಕಿಸಿದೆ. ಹಾಗೆಯೇ ತನಿಖಾಧಿಕಾರಿಯ ಕರ್ತವ್ಯ ಲೋಪ, ತನಿಖೆಯ ಎಲ್ಲಾ ಹಂತಗಳಲ್ಲಿನ ಲೋಪಗಳನ್ನು ಪತ್ತೆ ಹಚ್ಚಿರುವ ವಿಶೇಷ ನ್ಯಾಯಾಲಯವು, ತನಿಖಾಧಿಕಾರಿಯ ವೈಫಲ್ಯವನ್ನು ಕಂಡುಹಿಡಿದಿರುವುದು ಆದೇಶದಿಂದ ಗೊತ್ತಾಗಿದೆ.
ಪರವಾನಿಗೆ ಇಲ್ಲದಿದ್ದರೂ ಸಹ ಕಾಕಂಬಿ ರಫ್ತು ಮಾಡಲು ನೀಡಿರುವ ಆದೇಶ ನೀಡಿರುವುದೇ ಮೊದಲ ಅಕ್ರಮ ಎಂದು ದೂರುದಾರರು ಮಾಡಿದ್ದ ನಿರ್ದಿಷ್ಟ ಆರೋಪಗಳಿಗೆ ತನಿಖಾಧಿಕಾರಿಯು ಉತ್ತರಿಸಿಲ್ಲ. ಹೀಗಾಗಿ ತನಿಖೆಯ ವಿಧಾನದ ಮೇಲೆ ಸ್ಪಷ್ಟವಾಗಿ ಸಂದೇಹ ಮೂಡಿದೆ ಎಂದು ತೀರ್ಪಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಇದರಲ್ಲಿ ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸಬೇಕಾಗುತ್ತದೆ. ಆದರೆ ತನಿಖಾಧಿಕಾರಿಯು ಮಾಡುತ್ತಿರುವ ಕ್ಲೈಮ್ ಕೂಡ ಸರಿಯಾಗಿಲ್ಲ. ಅಲ್ಲದೇ 1961ರಲ್ಲಿ ಹೊರಡಿಸಿದ್ದ ಮೊಲ್ಯಾಸಿಸ್ ನಿಯಂತ್ರಣ ಆದೇಶದ ಅಡಿಯಲ್ಲಿ ಸಾರಿಗೆ ಅನುಮತಿ ನೀಡಲಾಗಿದೆ ಎಂದು ಗಮನಿಸಬೇಕು. ಆದರೆ ರದ್ದಾಗಿರುವ ಕಾಯ್ದೆ ಅಡಿಯಲ್ಲಿ ಪರವಾನಿಗೆ ಹೇಗೆ ನೀಡಬಹುದು ಎಂಬುದರ ಕುರಿತು ತನಿಖಾಧಿಕಾರಿಯು ನೀಡಿರುವ ವರದಿಯು ಸಂಪೂರ್ಣವಾಗಿ ಮೌನವಾಗಿದೆ ಎಂದು ತೀರ್ಪಿನಲ್ಲಿ ಪ್ರಸ್ತಾವಿಸಿರುವುದು ಗೊತ್ತಾಗಿದೆ.
ಮೊಲ್ಯಾಸಿಸ್ ಸಾಗಣೆ ಮತ್ತು ರಫ್ತು ನಿಯಂತ್ರಿಸುವ ಬಗ್ಗೆ ಕರ್ನಾಟಕ ರಾಜ್ಯವು ಕ್ರಮಗಳನ್ನು ತೆಗೆದುಕೊಂಡಿದೆ. ಮತ್ತು 1961 ರ ಮೊಲಾಸಸ್ ನಿಯಂತ್ರಣ ಆದೇಶವನ್ನು ರದ್ದುಗೊಳಿಸಿದ ತಕ್ಷಣ ಅಗತ್ಯ ಕಾನೂನನ್ನು ಅಂಗೀಕರಿಸಿದೆ. ಇದನ್ನು ಭಾರತದ ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಲಾಗಿದೆ ಎಂಬುದನ್ನು ಸಹ ತನಿಖಾ ಸಂಸ್ಥೆ ಮರೆತಿದೆ.
ದೂರರ್ಜಿಯನ್ನು ಸಂಪೂರ್ಣ ಮುಕ್ತಾಯಗೊಳಿಸಿರುವ ಲೋಕಾಯುಕ್ತ ಪೊಲೀಸರ ವರದಿಯಲ್ಲಿ, ಕರ್ನಾಟಕ ಸರ್ಕಾರವು ಅಂತಹ ಯಾವುದೇ ಹೊಸ ಶಾಸನವನ್ನು ಅಂಗೀಕರಿಸಿದೆಯೇ ಅಥವಾ ಈ ನಿಟ್ಟಿನಲ್ಲಿ ಭಾರತದ ರಾಷ್ಟ್ರಪತಿಗಳಿಂದ ಯಾವುದೇ ಒಪ್ಪಿಗೆಯನ್ನು ಪಡೆದಿದೆಯೇ ಎಂದು ಖಚಿತಪಡಿಸಿಕೊಳ್ಳಲು ತನಿಖಾ ಸಂಸ್ಥೆ ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎಂದು ತನಿಖೆಯಲ್ಲಿನ ಲೋಪವನ್ನು ವಿವರಿಸಿರುವುದು ತಿಳಿದು ಬಂದಿದೆ.
ಆರಂಭಿಕ ಹಂತದಲ್ಲಿ ನೀಡಲಾದ ಕೆಲವು ಅಭಿಪ್ರಾಯದ ಆಧಾರದ ಮೇಲೆ, ಅಬಕಾರಿ ಅಧಿಕಾರಿಗಳು ಕಾಕಂಬಿ ಸಾಗಣೆಗೆ ಪರವಾನಗಿ ನೀಡಿದ್ದಾರೆ. ಆದರೆ ಈ ಪ್ರಕ್ರಿಯೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ವಹಿಸಿದ ಆತುರ ಮತ್ತು ವಿಧಾನದ ಬಗ್ಗೆ ತನಿಖಾ ಸಂಸ್ಥೆಯು ಖಚಿತಪಡಿಸಿಕೊಳ್ಳಬೇಕಾಗಿತ್ತು ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಆರನೇ ಪ್ರತಿವಾದಿಯಾಗಿರುವ ಕೆ ಎನ್ ರಿಸೋರ್ಸ್ ಪ್ರೈ ಲಿಮಿಟೆಡ್ ಕಂಪನಿಯು ಸಲ್ಲಿಸಿದ್ದ ಅರ್ಜಿಗಳಲ್ಲಿ ಪೂರಕ ದಾಖಲೆಗಳು ಇರಲಿಲ್ಲ. ಮೊಲ್ಯಾಸಿಸ್ ಸಂಗ್ರಹಣೆ, ಸ್ವಾಧೀನ, ಮಾರಾಟ ಅಥವಾ ಖರೀದಿ ಪರವಾನಿಗೆ ಇಲ್ಲದೆಯೇ ಸಂಗ್ರಹಣೆಗಾಗಿ ಗುತ್ತಿಗೆ ಒಪ್ಪಂದ ಮಾಡಿಕೊಳ್ಳುವ ಸಂಬಂಧದ ಪೂರಕ ದಾಖಲೆಗಳು ಇರದಿದ್ದರೂ ಅಬಕಾರಿ ಇಲಾಖೆಯು ಕಾಕಂಬಿ ಹಂಚಿಕೆಗಾಗಿ ಕೋರಿದ್ದ ಅರ್ಜಿಯನ್ನು ಸ್ವೀಕರಿಸಿತ್ತು. ಅಬಕಾರಿ ಇಲಾಖೆಯ ಈ ಕೃತ್ಯವು ಕರ್ನಾಟಕ ನಿಷೇಧ ಕಾಯ್ದೆ, 1961 ರ ಸೆಕ್ಷನ್ 44 ರ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯವು ಹೇಳಿದೆ.
ಅರ್ಜಿದಾರರು ಗೋವಾದಿಂದ ಕಾಕಂಬಿ ರಫ್ತು ಮಾಡುತ್ತಾರೆ ಅಥವಾ ಅವರು ಯಾವಾಗ ರಫ್ತು ಮಾಡುತ್ತಾರೆ ಎಂಬುದನ್ನು ಅಬಕಾರಿ ಇಲಾಖೆಯು ತಮ್ಮ ಶಿಫಾರಸಿನಲ್ಲಿ ಉಲ್ಲೇಖಿಸಿಲ್ಲ ಎಂದು ದಾಖಲೆಗಳು ಸೂಚಿಸುತ್ತವೆ. ಇಲ್ಲದಿದ್ದರೆ, ಹಣಕಾಸು ಇಲಾಖೆಯು ಅರ್ಜಿದಾರರ ಮೂಲ ವಿವರಗಳನ್ನು ಪರಿಶೀಲಿಸದೆ ಹಂಚಿಕೆಯನ್ನು ಅನುಮೋದಿಸಿದೆ. ಅಲ್ಲದೇ ಯಾವ ಬಂದರಿನಿಂದ ರಫ್ತು ಮಾಡಲಿದ್ದಾರೆ, ಅದು ದೇಶಿಯವಾಗಿರಲಿದೆಯೇ ಅಥವಾ ವಿದೇಶಿಯವಾಗಿರಲಿದೆಯೇ ಎಂಬುದನ್ನು ಸೂಚಿಸಬೇಕಿತ್ತು ಎಂದು ನ್ಯಾಯಾಲಯವು ಅವಲೋಕಿಸಿರುವುದು ಗೊತ್ತಾಗಿದೆ.
ಅದೇ ರೀತಿ ಅಬಕಾರಿ ಇಲಾಖೆಯು 2022ರ ಆಗಸ್ಟ್ ಅಥವಾ ಸೆಪ್ಟಂಬರ್‍ನಲ್ಲಿನ ದಾಸ್ತಾನನ್ನು ಅವಲಂಬಿಸುವ ಬದಲು ಮೇ 2022 ರಲ್ಲಿ ಲಭ್ಯವಿರುವ ದಾಸ್ತಾನಿನ ಮೇಲೆ ತನ್ನ ಶಿಫಾರಸನ್ನು ಆಧರಿಸಿತ್ತು. ಮತ್ತು ಲಭ್ಯವಿರುವ ದಾಸ್ತಾನನ್ನು ಅತಿಯಾಗಿ ತೋರಿಸಿರುವುದು ದಾಖಲೆಗಳಿಂದ ಗಮನಕ್ಕೆ ಬಂದಿದೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಉಚ್ಛರಿಸಿರುವುದು ತಿಳಿದು ಬಂದಿದೆ.
ಅಬಕಾರಿ ಇಲಾಖೆಯು ಮೇ-2022 ರಲ್ಲಿ ಲಭ್ಯವಿರುವ ದಾಸ್ತಾನಿನ ಮೇಲೆ ಅವಲಂಬಿತವಾಗಿದೆ ಎಂದು ವಾದಿಸಿರುವುಕ್ಕೂ ನ್ಯಾಯಾಲಯವು ಆಕ್ಷೇಪಿಸಿದೆ. ರಾಜ್ಯದಲ್ಲಿ ಲಭ್ಯವಿರುವ ದಾಸ್ತಾನಿನ ಪ್ರಮಾಣವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂಬ ಕಾರಣಕ್ಕೆ ನೀಡಿರುವ ವಿವರಣೆಯು ಸಮರ್ಥನೀಯವಲ್ಲ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ. ಹಾಗೆಯೇ ಈ ಹೇಳಿಕೆ, ವಿವರಣೆಯ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವುದು ತನಿಖಾಧಿಕಾರಿಯ ಕರ್ತವ್ಯವಾಗಿತ್ತು. ಆದರೆ ತನಿಖೆ ವರದಿಯು ಈ ವಿಷಯದಲ್ಲಿ ಮೌನವಾಗಿದೆ ಎಂದು ನ್ಯಾಯಾಲಯವು ಹೇಳಿರುವುದು ಗೊತ್ತಾಗಿದೆ.
ಇದಲ್ಲದೆ, ಕಾರವಾರದ ಉಪ ಆಯುಕ್ತರು (ದಿನಾಂಕ 7.11.2020 ರಂದು DCB/MAG/1/Cr/9/2018-19 ರಲ್ಲಿ) ಹೊರಡಿಸಿದ ಆದೇಶದ ಪ್ರಕಾರ, ಭಾರೀ ವಾಹನಗಳ ಸಂಚಾರಕ್ಕೆ ಯಾವುದೇ ಅವಕಾಶವಿಲ್ಲದಿದ್ದಾಗ ಅಬಕಾರಿ ಇಲಾಖೆಯು ಮೊಲಾಸಸ್ ಸಾಗಣೆಗೆ ರಸ್ತೆ ಪರವಾನಗಿಯನ್ನು ನೀಡಿದೆ. ಇದಲ್ಲದೆ, ಸರ್ಕಾರಿ ಖಜಾನೆಗೆ ಯಾವುದೇ ನಷ್ಟ ಸಂಭವಿಸಿಲ್ಲ ಎಂದು ಮುಕ್ತಾಯ ವರದಿಯು ಸೂಚಿಸುತ್ತದೆ.
‘ಆದಾಗ್ಯೂ, ಈ ಅಂಶಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ, ಪ್ರತಿ ಮೆಟ್ರಿಕ್ ಟನ್ ರಫ್ತಿಗೆ 458 ರು.ಗಳನ್ನು ಪಾವತಿಸಬೇಕಾಗಿತ್ತು ಮತ್ತು ದೂರುದಾರರು ಲೆಕ್ಕಹಾಕಿದ ಅಂದಾಜು ನಷ್ಟ ರೂ.9,16,00,000/- (ಒಂಬತ್ತು ಕೋಟಿ ಹದಿನಾರು ಲಕ್ಷ) ಎಂದು ಗಮನಿಸಲಾಗಿದೆ. ಪರವಾನಗಿದಾರರು ರಾಜ್ಯ ಸರ್ಕಾರ ಅಥವಾ ಅಬಕಾರಿ ಆಯುಕ್ತರು ಹೊರಡಿಸಬಹುದಾದ ಆದೇಶಗಳಿಗೆ ಬದ್ಧರಾಗಿದ್ದರು ಎಂಬುದನ್ನು ಸಹ ಗಮನಿಸುವುದು ಪ್ರಸ್ತುತವಾಗಿದೆ. ಆದಾಗ್ಯೂ, ಮೂಲಭೂತ ತತ್ವಗಳನ್ನು ಪಾಲಿಸದೆಯೇ ಆಕ್ಷೇಪಾರ್ಹ ಕೃತ್ಯವನ್ನು ಎಸಗಲಾಗಿದೆ,’ ಎಂದು ನ್ಯಾಯಾಲಯವು ತೀರ್ಪಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಗೋವಾದ ಮರ್ಮಗೋವಾದ ಗಣೇಶ್ ಬೆಂಜೊಪ್ಲಾಸ್ಟ್ ಲಿಮಿಟೆಡ್ ಈ ರಫ್ತು ಮಾಡುತ್ತಿದೆ ಎಂದು ಆರೋಪಿಸಲಾಗಿದೆ.
ಇದರ ಮೇಲೆ ಕರ್ನಾಟಕ ಸರ್ಕಾರಕ್ಕೆ ಯಾವುದೇ ಅಧಿಕಾರವಿರಲಿಲ್ಲ. ಒಂದೇ ಬಾರಿಗೆ 2 ಲಕ್ಷ ಮೆಟ್ರಿಕ್ ಟನ್ ಮೊಲಾಸಸ್‌ನ ಸಂಪೂರ್ಣ ಪ್ರಮಾಣವನ್ನು ರಫ್ತು ಮಾಡಲಾಗಿಲ್ಲ ಎಂದು ತನಿಖಾಧಿಕಾರಿ ವರದಿ ಸಲ್ಲಿಸಿದ್ದಾರೆ. ಮೊದಲ ಹಂತದಲ್ಲಿ ಸಾಗಣೆಯನ್ನು ಸಂಪೂರ್ಣ ಪ್ರಮಾಣದಲ್ಲಿ ಮಾಡಲಾಗಿಲ್ಲ ಎಂದು ಸೂಚಿಸುವುದು ಆಕರ್ಷಕವಾಗಿ ತೋರುತ್ತದೆ. ಆದರೆ ಅಧಿಕಾರಿಗಳು ಕಾನೂನಿನ ತತ್ವಗಳನ್ನು ಏಕೆ ಪಾಲಿಸಲಿಲ್ಲ ಎಂಬ ಪ್ರಶ್ನೆಗೆ ತನಿಖಾಧಿಕಾರಿಯು ಉತ್ತರಿಸಿಲ್ಲ ಎಂದು ನ್ಯಾಯಾಲಯವು ಹೇಳಿದೆ.
ಎರಡನೇ ಪ್ರತಿವಾದಿ ಅಬಕಾರಿ ಆಯುಕ್ತ ಜೆ ರವಿಶಂಕರ್, ನಾಲ್ಕನೆ ಪ್ರತಿವಾದಿ ಡಾ ಏಕರೂಪ್ ಕೌರ್, ಐದನೇ ಪ್ರತಿವಾದಿ ಐ ಎಸ್ ಎನ್ ಪ್ರಸಾದ್ ಅವರಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಯು ದಾಖಲಿಸಿರುವ ಹೇಳಿಕೆಯನ್ನು ನ್ಯಾಯಾಲಯವು ಅವಲೋಕಿಸಿದೆ. ಎಂ2 ಪರವಾನಿಗೆ ಕಡ್ಡಾಯವಾಗಿ ಇರಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಕೆಲವು ಪರವಾನಿಗೆಗಳನ್ನು ಹಿಂದೆ ನೀಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಆ ಸಂದರ್ಭದಲ್ಲಿ ಅಧಿಕಾರಿಗಳು ಇಂತಹ ಅಕ್ರಮಗಳನ್ನು ಏಕೆ ಮುಂದುವರೆಸುತ್ತಿದ್ದಾರೆ ಎಂಬುದನ್ನೂ ಸಹ ತನಿಖಾಧಿಕಾರಿಯು ವಿವರಿಸಬೇಕಾಗುತ್ತದೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
‘ಕಾನೂನಿನ ಸ್ಥಿರ ತತ್ವಗಳ ಪ್ರಕಾರ ಕಾನೂನುಬಾಹಿರತೆಯನ್ನು ಶಾಶ್ವತಗೊಳಿಸಲು ಸಾಧ್ಯವಿಲ್ಲ ಈ ಸಂಬಂಧ ಸಂಪೂರ್ಣ ದಾಖಲೆಗಳನ್ನು ಮತ್ತು ದಾಖಲೆಯಲ್ಲಿ ಲಭ್ಯವಿರುವ ವಸ್ತುಗಳನ್ನು ಪರಿಶೀಲಿಸಿದಾಗ, ಕರ್ನಾಟಕ ಲೋಕಾಯುಕ್ತ ಪೊಲೀಸರು ರು ನಡೆಸಿದ ತನಿಖೆ ಕಾನೂನಿಗೆ ಅನುಗುಣವಾಗಿಲ್ಲ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ,’ ಎಂದು ನ್ಯಾಯಾಲಯವು ಹೇಳಿರುವುದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಆರೋಪಿಗಳು ಐಪಿಸಿ ಸೆಕ್ಷನ್ 477-ಎ ಅಡಿಯಲ್ಲಿ ಅಪರಾಧ ಎಸಗಿದ್ದಾರೆ ಎಂದು ದೂರುದಾರರು ಸೂಚಿಸಿದ್ದರು. ಆದರೆ ತನಿಖಾಧಿಕಾರಿಯು 477-ಎ ಅನ್ವಯ ತನಿಖೆ ನಡೆಸಲು ಮುಂದಾಗಿಲ್ಲ. ಅಲ್ಲದೇ ಈ ನಿಬಂಧನೆಯು ಪ್ರಸ್ತುತವಾಗಿಲ್ಲ ಎಂಬ ತೀರ್ಮಾನಕ್ಕೆ ತನಿಖಾಧಿಕಾರಿಯು ಬಂದಂತಿದೆ ಎಂದು ಹೇಳಿರುವ ನ್ಯಾಯಾಲಯವು, ಇದು ತನಿಖಾ ಪ್ರಕ್ರಿಯೆಯನ್ನು ನಡೆಸುವ ವಿಧಾನದಲ್ಲಿ ಅನುಮಾನದ ನೆರಳನ್ನು ಸೃಷ್ಟಿಸುತ್ತದೆ ಎಂದು ಅಭಿಪ್ರಾಯಿಸಿರುವುದು ಗೊತ್ತಾಗಿದೆ.
‘ಕ್ರಿಮಿನಲ್ ಕಾನೂನನ್ನು ಯಾರು ಬೇಕಾದರೂ ಜಾರಿಗೆ ತರಬಹುದು ಮತ್ತು ದೂರು ವಿಶ್ವಕೋಶವಾಗಬೇಕಾಗಿಲ್ಲ. ತನಿಖಾಧಿಕಾರಿ ಈ ಪ್ರಕರಣವನ್ನು ಎಲ್ಲಾ ಸಂಬಂಧಿತ ದೃಷ್ಟಿಕೋನಗಳಿಂದ ತನಿಖೆ ಮಾಡಬೇಕಾಗಿತ್ತು ಎಂದು ಆಗಾಗ್ಗೆ ಉಲ್ಲೇಖಿಸುವ ನುಡಿಗಟ್ಟು ಸಾಮಾನ್ಯವಾಗುತ್ತದೆ ಎಂಬುದನ್ನು ಗಮನಿಸುವುದು ಪ್ರಸ್ತುತವಾಗಿದೆ,’ ಎಂದು ನ್ಯಾಯಾಲಯವು ಹೇಳಿದೆ.
ತನಿಖೆ ಎಂದರೆ ಕೇವಲ ಸಾಮಾಗ್ರಿ ( ಅಂಶಗಳು-ಮಾಹಿತಿ-ದಾಖಲೆ) ಸಂಗ್ರಹಿಸಿ ನ್ಯಾಯಾಲಯದ ಮುಂದೆ ಸುರಿಯುವಂತದ್ದಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕದ ಹೈಕೋರ್ಟ್ ಪದೇ ಪದೇ ಹೇಳಿವೆ. ಆದಾಗ್ಯೂ, ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ, ತನಿಖಾ ಸಂಸ್ಥೆಯು ಇದನ್ನು ಸರಿಯಾದ ದೃಷ್ಟಿಕೋನದಿಂದ ಪರಿಗಣಿಸಬೇಕಾಗುತ್ತದೆ. ಆರ್ಥಿಕ ಅಪರಾಧಗಳನ್ನು ದೇಶದ ಆರ್ಥಿಕತೆಯನ್ನು ವೃದ್ಧಿಸುವ ವೈಟ್ ಕಾಲರ್ ಅಪರಾಧಗಳು ಎಂದು ಕರೆಯಲಾಗುತ್ತದೆ ಎಂದೂ ನ್ಯಾಯಾಲಯವು ವಿಶ್ಲೇಷಿಸಿದೆ.
ಐಪಿಸಿಯ ಸೆಕ್ಷನ್ 120-ಬಿ ನಿಬಂಧನೆಯು ಸ್ವೀಕಾರಾರ್ಹವಲ್ಲ ಎಂದು ಹೇಳುವ ಮೂಲಕ ತನಿಖಾ ಸಂಸ್ಥೆಯು ವಿವಿಧ ಕಾನೂನು ದೌರ್ಬಲ್ಯಗಳನ್ನು ಎತ್ತಿ ತೋರಿಸಿದೆ. ಐಪಿಸಿಯ ಸೆಕ್ಷನ್ 120-ಬಿ ಅಡಿಯಲ್ಲಿ ಅಪರಾಧ ಎಸಗುವುದಕ್ಕೆ ಸಂಬಂಧಿಸಿದಂತೆ ಯಾವುದೇ ನೇರ ಪುರಾವೆಗಳು ಇರಬಾರದು ಎಂದು ತನಿಖಾ ಸಂಸ್ಥೆಗೆ ನೆನಪಿಸುವುದು ಸೂಕ್ತವಾಗಿದೆ. ಯಾವಾಗಲೂ ಕ್ರಿಮಿನಲ್ ಪಿತೂರಿಯನ್ನು ಕತ್ತಲೆಯಲ್ಲಿ ರೂಪಿಸಲಾಗುತ್ತದೆ ಮತ್ತು ರಹಸ್ಯವಾಗಿ ಮಾಡಲಾಗುತ್ತದೆ ಎಂಬುದು ಕಾನೂನಿನ ಪ್ರಮುಖ ತತ್ವವಾಗಿದೆ ಎಂದು ನ್ಯಾಯಾಲಯವು ಹೇಳಿದೆ.
ಇದಲ್ಲದೆ, ಯಾವುದೇ ಅಪರಾಧ ನಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖಾ ಸಂಸ್ಥೆಯು ಪ್ರಕರಣದಲ್ಲಿ ಲಭ್ಯವಿರುವ ಸುಳಿವುಗಳನ್ನು ಸೇರಿಸಬೇಕಾಗಿತ್ತು. ಈ ಅಂಶಗಳನ್ನು ತನಿಖಾ ಸಂಸ್ಥೆಯು ಪರಿಶೀಲಿಸಿಲ್ಲ. ಆರೋಪಿಗಳು ಯಾವುದೇ ಅಪರಾಧಗಳನ್ನು ಮಾಡಿದ್ದಾರೆ ಎಂದು ಹೇಳಿಕೊಳ್ಳಲು ಯಾವುದೇ ಪುರಾವೆಗಳಿಲ್ಲ ಎಂಬ ತೀರ್ಮಾನಕ್ಕೆ ತನಿಖಾ ಸಂಸ್ಥೆಯು ಬಂದಿರುವಂತೆ ತೋರುತ್ತದೆ ಎಂದು ವಿವರಿಸಿದೆ.
ಪ್ರಸ್ತುತ ಪ್ರಕರಣದಲ್ಲಿ, ಮೇಲ್ಮನವಿದಾರರ ವಿರುದ್ಧದ ಆರೋಪಗಳು ಅಧಿಕೃತ ಸ್ಥಾನದ ದುರುಪಯೋಗ ಮತ್ತು ಸಾರ್ವಜನಿಕ ಹುದ್ದೆಯನ್ನು ಹೊಂದಿರುವಾಗ ಭ್ರಷ್ಟಾಚಾರಕ್ಕೆ ಸಂಬಂಧಿಸಿವೆ. ಅಂತಹ ಆರೋಪಗಳು ಸ್ಪಷ್ಟವಾಗಿ ಗುರುತಿಸಬಹುದಾದ ಅಪರಾಧಗಳ ವರ್ಗಕ್ಕೆ ಸೇರಿವೆ. ಮತ್ತು ಅಂತಹ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸುವ ಮೊದಲು ಪ್ರಾಥಮಿಕ ತನಿಖೆಗೆ ಯಾವುದೇ ಕಾನೂನು ಅವಶ್ಯಕತೆಯಿಲ್ಲ. ತನ್ನ ವಿರುದ್ಧ ಸತತ ಎಫ್‌ಐಆರ್‌ಗಳನ್ನು ದುರುದ್ದೇಶದಿಂದ ದಾಖಲಿಸಲಾಗಿದೆ ಎಂಬ ಮೇಲ್ಮನವಿದಾರರ ವಾದವು ತನಿಖೆ ಮತ್ತು ವಿಚಾರಣೆಯ ಸಮಯದಲ್ಲಿ ಪರಿಶೀಲಿಸಬಹುದಾದ ವಿಷಯವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಿಸಿದೆ.
ಕಾನೂನಿನಡಿಯಲ್ಲಿ ಮೇಲ್ಮನವಿದಾರರು ಸಾಕಷ್ಟು ಪರಿಹಾರಗಳನ್ನು ಹೊಂದಿದ್ದಾರೆ. ಇದರಲ್ಲಿ ಸೆಕ್ಷನ್ 482 CrPC ಅಡಿಯಲ್ಲಿ ಕ್ಷುಲ್ಲಕ ಎಫ್‌ಐಆರ್ ಗಳನ್ನು ರದ್ದುಗೊಳಿಸುವಂತೆ ಕೋರುವ ಹಕ್ಕು, ಜಾಮೀನು ಅರ್ಜಿ ಸಲ್ಲಿಸುವ ಹಕ್ಕು ಮತ್ತು ತನಿಖಾ ಅಧಿಕಾರಿಗಳ ಯಾವುದೇ ಕಾನೂನುಬಾಹಿರ ಕ್ರಮಗಳನ್ನು ಸೂಕ್ತ ವೇದಿಕೆಯ ಮುಂದೆ ಪ್ರಶ್ನಿಸುವ ಹಕ್ಕು ಸೇರಿವೆ ಎಂದೂ ನ್ಯಾಯಾಲಯವು ಹೇಳಿದೆ.
‘ಈ ಮೇಲಿನ ಕಾನೂನಿನ ತತ್ವಗಳನ್ನು ಗಮನದಲ್ಲಿಟ್ಟುಕೊಂಡು, ತನಿಖಾ ಸಂಸ್ಥೆಯು ತನಿಖೆಯನ್ನು ನಡೆಸಬೇಕಾಗುತ್ತದೆ. ಅದರಂತೆ, ತನಿಖಾ ಸಂಸ್ಥೆಯು ಸಲ್ಲಿಸಿದ ಮುಕ್ತಾಯ ವರದಿಯನ್ನು ಪಕ್ಕಕ್ಕೆ ಹಾಕಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ದಾಖಲೆಯಲ್ಲಿ ಲಭ್ಯವಿರುವ ಸಾಮಗ್ರಿಗಳನ್ನು ಪರಿಶೀಲಿಸುವುದು ಮತ್ತು ಸರಿಯಾದ ಸಾಮಗ್ರಿಗಳು ಲಭ್ಯವಿದ್ದರೆ, ಅಗತ್ಯ ಗಮನವನ್ನು ತೆಗೆದುಕೊಳ್ಳಬಹುದು,’ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಉದ್ಧರಿಸಿದೆ.
ಅಂದಾಜು 260 ಕೋಟಿ ರು. ಮೌಲ್ಯದ 2 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ಕಾಕಂಬಿಯನ್ನು ಮುಂಬೈ ಮೂಲದ ಕೆ ಎನ್ ರಿಸೋರ್ಸ್ ಪ್ರೈವೈಟ್ ಲಿಮಿಟೆಡ್ ಕಂಪನಿಗೆ ರಫ್ತು ಪರವಾನಿಗೆ ನೀಡಿ ಅಕ್ರಮವೆಸಗಲಾಗಿದೆ ಎಂದು ಆರೋಪಿಸಿದ್ದ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟವುಂಟಾಗಿಲ್ಲ ಮತ್ತು ಕಾಕಂಬಿ ಎತ್ತುವಳಿ ಹಾಗೂ ರಫ್ತಿನ ವಿಚಾರದಲ್ಲಿ ಯಾವುದೇ ನಿಯಮಬಾಹಿರ ಚಟುವಟಿಕೆಗಳೂ ನಡೆದಿಲ್ಲ ಎಂದು ಈಗಿನ ಕಾಂಗ್ರೆಸ್ ಸರ್ಕಾರ ಸಮರ್ಥಿಸಿಕೊಂಡಿತ್ತು.
ಕಾಕಂಬಿ ಹಗರಣಕ್ಕೆ ಕಾಂಗ್ರೆಸ್ ಸರ್ಕಾರದಿಂದಲೇ ಕ್ಲೀನ್ ಚಿಟ್; ಅಬಕಾರಿ ಆಯುಕ್ತರ ವರದಿ ಬಹಿರಂಗ
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಹೊತ್ತಿನಲ್ಲೇ ಕಾಂಗ್ರೆಸ್ ಸರ್ಕಾರವು ಅದೇ ಕೆ ಎನ್ ರಿಸೋರ್ಸ್ ಕಂಪನಿಗೆ ಅಂದಾಜು 11 ಕೋಟಿ ರು. ಮೌಲ್ಯದ ಕಾಕಂಬಿ ಎತ್ತುವಳಿ ಮತ್ತು ರಫ್ತಿಗೆ ಪರವಾನಿಗೆ ನೀಡಿರುವುದನ್ನು ‘ದಿ ಫೈಲ್’ ಹೊರಗೆಡವಿತ್ತು.
ಕಾಂಗ್ರೆಸ್ ಸರ್ಕಾರಕ್ಕೂ ಸುತ್ತಿಕೊಂಡ ಕಾಕಂಬಿ ಹಗರಣ; ತನಿಖೆಯಲ್ಲಿರುವಾಗಲೇ ರಫ್ತು ಪರವಾನಿಗೆ
ಕೆ ಎನ್ ರಿಸೋರ್ಸ್ ಕಂಪನಿಗೆ ಕಾಕಂಬಿ ರಫ್ತು ಪರವಾನಿಗೆ ನೀಡುವ ಪ್ರಕ್ರಿಯೆಯಲ್ಲಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಆಪಾದಿಸಿದ್ದರು. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋವೊಂದನ್ನು ವಿಧಾನಸಭೆ ಚುನಾವಣೆ ಮುನ್ನ ಬಿಡುಗಡೆ ಮಾಡಿದ್ದರು.
260 ಕೋಟಿ ಮೌಲ್ಯದ ಕಾಕಂಬಿ ಹಗರಣ; ‘ದಿ ಫೈಲ್’ ವರದಿ ಬೆನ್ನಲ್ಲೇ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್
ಅಗತ್ಯ ದಾಖಲೆಗಳನ್ನು ಹಾಜರುಪಡಿಸದಿದ್ದರೂ ಮುಂಬೈ ಮೂಲದ ಕೆ ಎನ್ ರಿಸೋರ್ಸ್ ಪ್ರೈವೈಟ್ ಲಿಮಿಟೆಡ್‌ಗೆ 2 ಲಕ್ಷ ಮೆಟ್ರಿಕ್ ಟನ್ ಕಾಕಂಬಿಯನ್ನು ವಿದೇಶಗಳಿಗೆ ರಫ್ತು ಮಾಡಲು ಅನುಮತಿ ನೀಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಅವರು ಕಾಕಂಬಿ ರಫ್ತು ಹಗರಣದ ಸತ್ಯಾಸತ್ಯತೆಯನ್ನು ಹೊರತರಲು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.
ಅಬಕಾರಿ ಹಗರಣ; ‘ದಿ ಫೈಲ್’ ವರದಿ ಉಲ್ಲೇಖಿಸಿ ತನಿಖೆಗೆ ಆಗ್ರಹಿಸಿ ಹೇಳಿಕೆ ಬಿಡುಗಡೆ
ಕೆ ಎನ್ ರಿಸೋರ್ಸ್ ಪ್ರೈವೈಟ್ ಲಿಮಿಟೆಡ್‌ಗೆ ಎಂ-2 ಲೈಸೆನ್ಸ್ ಇಲ್ಲದಿದ್ದರೂ 2 ಲಕ್ಷ ಮೆಟ್ರಿಕ್ ಟನ್ ಕಾಕಂಬಿಯನ್ನು ರಫ್ತು ಮಾಡಲು ಅನುಮೋದನೆ ನೀಡಿದ್ದನ್ನು ‘ದಿ ಫೈಲ್’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡ ದಾಖಲೆಗಳನ್ನಾಧರಿಸಿ 2022ರ ನವಂಬರ್ 30ರಂದು ವರದಿ ಪ್ರಕಟಿಸಿತ್ತು.
ಅಬಕಾರಿ ಹಗರಣ; ಪರವಾನಿಗೆ ಇಲ್ಲದಿದ್ದರೂ ಮರೆಮಾಚಿ ಮುಂಬೈ ಕಂಪನಿಗೆ ಕಾಕಂಬಿ ರಫ್ತಿಗೆ ಅನುಮತಿ
ಈ ಕುರಿತು ಲಂಚಮುಕ್ತ ಕರ್ನಾಟಕ ವೇದಿಕೆಯು ಪ್ರಧಾನಿಗೂ ದೂರು ಸಲ್ಲಿಸಿತ್ತು.
ಅಬಕಾರಿ ಹಗರಣ; ಸಚಿವ ಗೋಪಾಲಯ್ಯ ಸೇರಿ ಅಧಿಕಾರಿಗಳ ವಿರುದ್ಧ ಪ್ರಧಾನಿಗೆ ದೂರು
ಈ ಹಗರಣದಲ್ಲಿ ಪ್ರಭಾವಿ ರಾಜಕಾರಣಯೊಬ್ಬರ ಪುತ್ರನ ಹೆಸರು ಪ್ರಸ್ತಾಪವಾಗಿದ್ದ ಆಡಿಯೋವನ್ನಾಧರಿಸಿ ‘ದಿ ಫೈಲ್’ 2022ರ ಡಿಸೆಂಬರ್ 22ರಂದು ವರದಿ ಪ್ರಕಟಿಸಿತ್ತು.
ಅಬಕಾರಿ ಹಗರಣ; ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರನ ಹೆಸರು ಆಡಿಯೋದಲ್ಲಿ ಪ್ರಸ್ತಾಪ
ಅಲ್ಲದೇ ಈ ಹಗರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಉದ್ಯಮಿಗಳ ವಲಯದಲ್ಲಿ 25 ಪ್ರಶ್ನೆಗಳು ಕೇಳಿಬಂದಿದ್ದವು. ಈ ಕುರಿತು 2022ರ ಡಿಸೆಂಬರ್ 24ರಂದು ವರದಿ ಪ್ರಕಟಿಸಿತ್ತು.
ಅಬಕಾರಿ ಹಗರಣದಲ್ಲಿ ಪ್ರಭಾವಿ ಪುತ್ರನ ಹೆಸರು ಪ್ರಸ್ತಾಪ; ಮುನ್ನೆಲೆಗೆ ಬಂದ 25 ಪ್ರಶ್ನೆಗಳು
ನಿಯಮಬಾಹಿರವಾಗಿ ಹೊರ ರಾಜ್ಯದ ಕಂಪನಿಗೆ 2 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ಕಾಕಂಬಿಯನ್ನು ರಫ್ತುಮಾಡಲು ಅನುಮತಿ ನೀಡಿರುವುದು ರಾಜ್ಯದ ಉದ್ಯಮಿಗಳ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.