ಅಬಕಾರಿ ಹಗರಣ; ‘ದಿ ಫೈಲ್‌’ ವರದಿ ಉಲ್ಲೇಖಿಸಿ ತನಿಖೆಗೆ ಆಗ್ರಹಿಸಿ ಹೇಳಿಕೆ ಬಿಡುಗಡೆ

photo credit;deccahearald

ಬೆಂಗಳೂರು; ಅಗತ್ಯ ದಾಖಲೆಗಳನ್ನು ಹಾಜರುಪಡಿಸದಿದ್ದರೂ ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ವಿದೇಶಗಳಿಗೆ ರಫ್ತು ಮಾಡಲು ಅನುಮತಿ ನೀಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಆರೋಪಿಸಿರುವ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಅವರು ಕಾಕಂಬಿ ರಫ್ತು ಹಗರಣದ ಸತ್ಯಾಸತ್ಯತೆಯನ್ನು ಹೊರತರಲು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

 

ಈ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರನ ಹೆಸರು ಕೇಳಿಬಂದಿತ್ತಲ್ಲದೇ ಇದಕ್ಕೆ ಸಂಬಂಧಿಸಿದಂತೆ ಆಡಿಯೋದಲ್ಲಿಯೂ ಅವರ ಹೆಸರು ಪ್ರಸ್ತಾಪವಾಗಿತ್ತು. ಇದರ ಬೆನ್ನಲ್ಲೇ ಇಡೀ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರಲು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಹರಿಪ್ರಸಾದ್‌ ಅವರು ಒತ್ತಾಯಿಸಿರುವುದು ಪ್ರಕರಣಕ್ಕೆ ಮಹತ್ವ ತಂದುಕೊಟ್ಟಂತಾಗಿದೆ.

 

ಈ ಕುರಿತು ಬಿಡುಗಡೆ ಮಾಡಿರುವ ಎರಡು ಪುಟದ ಪತ್ರಿಕಾ ಹೇಳಿಕೆಯಲ್ಲಿ ‘ದಿ ಫೈಲ್‌’ ವರದಿಯನ್ನು ಉಲ್ಲೇಖಿಸಿರುವ ಬಿ ಕೆ ಹರಿಪ್ರಸಾದ್‌ ಅವರು ಅಬಕಾರಿ ಆಯುಕ್ತರ ನಡೆಯಿಂದ ಕರ್ನಾಟಕ ಸರ್ಕಾರದ ಬಂದರು ಇಲಾಖೆಗೆ ಸುಮಾರು 2 ಕೋಟಿ ರು. ಆದಾಯ ನಷ್ಟವಾಗಿದೆ ಎಂದೂ ಉಲ್ಲೇಖಿಸುವ ಮೂಲಕ ‘ದಿ ಫೈಲ್‌’ ಪ್ರಕಟಿಸಿರುವ ಸರಣಿ ವರದಿಗಳನ್ನು ವಿಸ್ತರಿಸಿದ್ದಾರೆ.

 

‘ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ ಮುಂತಾದ ರಾಜ್ಯಗಳು ತಮ್ಮ ನೆರೆಯ ರಾಜ್ಯಗಳ ಬಂದರುಗಳ ಮೂಲಕ ಕಾಕಂಬಿ ರಫ್ತು ಮಾಡಲು ಅನುಮತಿ ನೀಡುತ್ತಿಲ್ಲ. ಅರ್ಜಿದಾರ ಕಂಪನಿಯು ಎಂ 2 ಲೈಸೆನ್ಸ್‌ ಇಲ್ಲದೆಯೇ ಅರ್ಜಿ ಸಲ್ಲಿಸಿದ್ದು ಅಗತ್ಯ ದಾಖಲೆಗಳನ್ನು ಹಾಜರುಪಡಿಸದೇ ಅನುಮತಿ ನೀಡಿರುವುದು ಕಾನೂನಿನ ಉಲ್ಲಂಘನೆಯಾಗಿದೆ,’ ಎಂದೂ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

 

ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಅವರು ಬಿಡುಗಡೆಗೊಳಿಸಿರುವ ಪತ್ರಿಕಾ ಹೇಳಿಕೆ ಪ್ರತಿ

 

ಕನಾಟಕದ ಅಬಕಾರಿ ನೀತಿಯ ಪ್ರಕಾರ ಇಲಾಖೆಯ ಅಧಿಕಾರ ವ್ಯಾಪ್ತಿ, ಕಚೇರಿ ಲಭ್ಯವಿಲ್ಲದ ಬಂದರು ಮೂಲಕ ಕಾಕಂಬಿಯನ್ನು ರಫ್ತು ಮಾಡಲು ಅವಕಾಶ ನೀಡುವಂತಿಲ್ಲ. ಅಲ್ಲದೇ ಕರ್ನಾಟಕ ರಾಜ್ಯದ ಹೊರಗೆ ಕಾಕಂಬಿಯನ್ನು ಸಾಗಿಸಲು ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ಹಿಂದಿನ ಸರ್ಕಾರಗಳು ತಿರಸ್ಕರಿಸುತ್ತಿದ್ದವು. ಆದರೆ ಈ ಪ್ರಕರಣದಲ್ಲಿ ಅರ್ಜಿದಾರ ಕಂಪನಿಯು ಕರ್ನಾಟಕದಿಂದ ಗೋವಾ ರಾಜ್ಯದ ಬಂದರಿಗೆ ಕಾಕಂಬಿ ಸಾಗಾಣಿಕೆ ಮಾಡಲು ಮಾಡಿದ ಮನವಿಯನ್ನು ಅಬಕಾರಿ ಆಯುಕ್ತರು ಶಿಫಾರಸ್ಸು ಮಾಡಿದ್ದು ಕಾನೂನಿನ ಉಲ್ಲಂಘನೆಯಾಗಿದೆ ಎಂದೂ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

 

‘ಕರ್ನಾಟಕದಿಂದ ಗೋವಾಕ್ಕೆ ಸಾಗಾಣಿಕೆ ಮಾಡಿ ಅಲ್ಲಿಂದ ಹೊರದೇಶಗಳಿಗೆ ರಫ್ತು ಮಾಡಲು ಅನುಮತಿ ನೀಡಿರುವುದರಿಂದ ಕರ್ನಾಟಕಕ್ಕೆ ಹಲವು ರೀತಿಯಲ್ಲಿ ನಷ್ಟ ಉಂಟಾಗಿರುತ್ತದೆ. ಅಬಕಾರಿ ಆಯುಕ್ತರ ಈ ನಡೆಯಿಂದ ಕರ್ನಾಟಕ ಸರ್ಕಾರದ ಬಂದರು ಇಲಾಖೆಗೆ ಸುಮಾರು 2 ಕೋಟಿ ಆದಾಯ ನಷ್ಟವಾಗಿದೆ. ರಾಜ್ಯದ ಟ್ಯಾಂಕರ್‌ಗಳ ಮಾಲೀಕರು, ಪೆಟ್ರೋಲ್‌ ಬಂಕ್‌ಗಳು, ಕಸ್ಟಂ ಹೌಸ್‌ ಏಜೆಂಟರ್‌ಗಳು, ಸ್ಟೀಮರ್‌ ಏಜೆಂಟರ್‌ಗಳು, ಕರ್ನಾಟಕ ರಾಜ್ಯದ ಬಂದರು ಚಟುವಟಿಕೆಗಳಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಕೆಲಸ ಮಾಡುವ ಕರ್ನಾಟಕ ರಾಜ್ಯದ ಕೆಲಸಗಾರರು ಮುಂತಾದವರ ಜೀವನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ, ‘ ಎಂದು ವಿವರಿಸಿದ್ದಾರೆ.

 

ಈ ಕಂಪನಿಗೆ ಸೂಕ್ತವಾಗಿ ನಿಯಮಾನುಸಾರ ಪರಿಶೀಲಿಸದೇ ತರಾತುರಿಯಲ್ಲಿ ಕಾಕಂಬಿ ರಫ್ತಿಗೆ ಅನುಮೋದನೆ ನೀಡಿರುವುದರ ಹಿಂದೆ ಕಿಕ್‌ಬ್ಯಾಕ್‌ ಪಡೆಯಲಾಗಿದೆ ಎಂದು ‘ದಿ ಫೈಲ್‌’ ವರದಿಯಲ್ಲಿ ಆರೋಪ ಮಾಡಲಾಗಿತ್ತು. ಅದೇ ದಿನದಂದು ಅಬಕಾರಿ ಸಚಿವರು ಪತ್ರಿಕಾಗೋಷ್ಠಿ ಕರೆದು ತನಗೆ ಅಂತಹ ಕಡತದ ಬಗ್ಗೆ ತಿಳಿದಿಲ್ಲ ಮತ್ತು ಅದು ತನಗೆ ಬಂದೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಅದೇ ಕಂಪನಿಯು ಅಗತ್ಯ ದಾಖಲೆಗಳನ್ನು ಹಾಜರುಪಡಿಸದಿದ್ದರೂ ಅನುಮತಿ ನೀಡಿರುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

 

ರಾಜ್ಯದ ಸಕ್ಕರೆ ಉದ್ಯಮದ ಉಪ ಉತ್ಪನ್ನವಗಿರುವ ಕಾಕಂಬಿಯ ಉತ್ಪಾದನೆ, ಪೂರೈಕೆ, ಹಂಚಿಕೆ, ಆಮದು ಮತ್ತು ರಫ್ತಿನ ಮೇಲೆ ಸರ್ಕಾರವು ಸಂಪೂರ್ಣ ನಿಯಂತ್ರಣ ಹೊಂದಿದೆ. ಕಾಕಂಬಿ ಉತ್ಪಾದನೆಯ ಕುರಿತಂತೆ ಪ್ರತಿಯೊಂದು ಸಕ್ಕರೆ ಕಾರ್ಖಾನೆಗಳೂ ಕಬ್ಬು ಅರೆದ ಪ್ರಮಾಣಕ್ಕೆ ಅನುಸಾರವಾಗಿ ಕಾಕಂಬಿ ಉತ್ಪಾದನೆಯ ವಿವರರಗಳನ್ನು ಕಾಲಕಾಲಕ್ಕೆ ಸರ್ಕಾರಕ್ಕೆ ಸಲ್ಲಿಸಬೇಕು. ಅನುಮತಿ ಇಲ್ಲದೇ ಕಾಕಂಬಿ ಉತ್ಪಾದನೆ, ಸಂಗ್ರಹ, ಸಾಗಣೆ, ಸ್ವಾಧೀನತೆ, ಮಾರಾಟ, ವಿಲೇವಾರಿ ಮತ್ತು ಖರೀದಿ ಮಾಡುವುದರ ಮೇಲೆ ಸರ್ಕಾರವು ಪ್ರತಿಬಂಧ ಹೇರಿದೆ ಎಂಬ ಸಂಗತಿಯನ್ನೂ ಪತ್ರಿಕಾ ಹೇಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ.

 

ಅಬಕಾರಿ ಆಯುಕ್ತರು ಅರ್ಜಿಯ ಪರಿಶೀಲನೆಯಲ್ಲಿ ಕಟ್ಟುನಿಟ್ಟಿನ ಕಾರ್ಯವಿಧಾನವನ್ನು ಅನುಸರಿಸದೇ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸರ್ಕಾರದ ಮಟ್ಟದಲ್ಲಿಯೂ ಕೂಡ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸದೇ ಮತ್ತು ಯಾವ ಬಂದರು ಮೂಲಕ ಈ ಕಾಕಂಬಿಯನ್ನು ವಿದೇಶಕ್ಕೆ ರಫ್ತು ಮಾಡಲಾಗುವುದು ಎನ್ನುವದನ್ನು ನಿರ್ದಿಷ್ಟವಾಗಿ ಸೂಚಿಸದಿದ್ದರೂ 2022ರ ಅಕ್ಟೋಬರ್‌ 12ರಂದು ಅಬಕಾರಿ ಸಚಿವರ ಅನುಮೋದನೆಗೆ ಮಂಡಿಸಿದೆ. ಪ್ರಸ್ತಾವನೆಯ ಲೋಪದೋಷಗಳ ಬಗ್ಗೆ ಯಾವುದೇ ಸ್ಪಷ್ಟೀಕರಣ ಕೇಳದೇ ಪ್ರಸ್ತಾವನೆಗೆ ಅಬಕಾರಿ ಸಚಿವರು ಅನುಮೋದನೆ ನೀಡಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಲಾಗಿದೆ.

 

ಕಾಕಂಬಿ ರಫ್ತು ಮಾಡಲು ಅನುಮೋದನೆ ನೀಡಿರುವುದರ ಹಿಂದೆ ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರು 8 ಕೋಟಿ ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ‘ದಿ ಫೈಲ್‌’ 2022ರ ಅಕ್ಟೋಬರ್‌ 13ರಂದು ವರದಿ ಪ್ರಕಟಿಸಿತ್ತು.

ಅಬಕಾರಿ ಹಗರಣ; ಗೋವಾ ಬಂದರು ಮೂಲಕ ಕಾಕಂಬಿ ರಫ್ತಿನ ಅನುಮತಿಗೆ 8 ಕೋಟಿ ಕಿಕ್‌ಬ್ಯಾಕ್‌ ಆರೋಪ

ಕೆ ಎನ್ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಎಂ-2 ಲೈಸೆನ್ಸ್‌ ಇಲ್ಲದಿದ್ದರೂ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ರಫ್ತು ಮಾಡಲು ಅನುಮೋದನೆ ನೀಡಿದ್ದನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡ ದಾಖಲೆಗಳನ್ನಾಧರಿಸಿ 2022ರ ನವಂಬರ್‌ 30ರಂದು ವರದಿ ಪ್ರಕಟಿಸಿತ್ತು.

 

ಅಬಕಾರಿ ಹಗರಣ; ಪರವಾನಿಗೆ ಇಲ್ಲದಿದ್ದರೂ ಮರೆಮಾಚಿ ಮುಂಬೈ ಕಂಪನಿಗೆ ಕಾಕಂಬಿ ರಫ್ತಿಗೆ ಅನುಮತಿ

ಈ ಹಗರಣದಲ್ಲಿ ಪ್ರಭಾವಿ ರಾಜಕಾರಣಯೊಬ್ಬರ ಪುತ್ರನ ಹೆಸರು ಪ್ರಸ್ತಾಪವಾಗಿದ್ದ ಆಡಿಯೋವನ್ನಾಧರಿಸಿ ‘ದಿ ಫೈಲ್‌’ 2022ರ ಡಿಸೆಂಬರ್‌ 22ರಂದು ವರದಿ ಪ್ರಕಟಿಸಿತ್ತು.

ಅಬಕಾರಿ ಹಗರಣ; ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರನ ಹೆಸರು ಆಡಿಯೋದಲ್ಲಿ ಪ್ರಸ್ತಾಪ

ಅಲ್ಲದೇ ಈ ಹಗರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಉದ್ಯಮಿಗಳ ವಲಯದಲ್ಲಿ 25 ಪ್ರಶ್ನೆಗಳು ಕೇಳಿಬಂದಿದ್ದವು. ಈ ಕುರಿತು 2022ರ ಡಿಸೆಂಬರ್‌ 24ರಂದು ವರದಿ ಪ್ರಕಟಿಸಿತ್ತು.

ಅಬಕಾರಿ ಹಗರಣದಲ್ಲಿ ಪ್ರಭಾವಿ ಪುತ್ರನ ಹೆಸರು ಪ್ರಸ್ತಾಪ; ಮುನ್ನೆಲೆಗೆ ಬಂದ 25 ಪ್ರಶ್ನೆಗಳು

ನಿಯಮಬಾಹಿರವಾಗಿ ಹೊರ ರಾಜ್ಯದ ಕಂಪನಿಗೆ 2 ಲಕ್ಷ ಮೆಟ್ರಿಕ್‌ ಟನ್‌ ಪ್ರಮಾಣದ ಕಾಕಂಬಿಯನ್ನು ರಫ್ತುಮಾಡಲು ಅನುಮತಿ ನೀಡಿರುವುದು ರಾಜ್ಯದ ಉದ್ಯಮಿಗಳ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವುದಲ್ಲದೇ ರಾಜ್ಯ ಅಬಕಾರಿ ಇಲಾಖೆಯ ನಡೆಯ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ.

the fil favicon

SUPPORT THE FILE

Latest News

Related Posts