ಕಾಕಂಬಿ ಹಗರಣಕ್ಕೆ ಕಾಂಗ್ರೆಸ್‌ ಸರ್ಕಾರದಿಂದಲೇ ಕ್ಲೀನ್‌ ಚಿಟ್‌; ಅಬಕಾರಿ ಆಯುಕ್ತರ ವರದಿ ಬಹಿರಂಗ

ಬೆಂಗಳೂರು; ಅಂದಾಜು 260 ಕೋಟಿ ರು. ಮೌಲ್ಯದ 2 ಲಕ್ಷ ಮೆಟ್ರಿಕ್‌ ಟನ್‌ ಪ್ರಮಾಣದ ಕಾಕಂಬಿಯನ್ನು ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ ಕಂಪನಿಗೆ ರಫ್ತು ಪರವಾನಿಗೆ ನೀಡಿ ಅಕ್ರಮವೆಸಗಲಾಗಿದೆ ಎಂದು ಆರೋಪಿಸಿದ್ದ  ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟವುಂಟಾಗಿಲ್ಲ ಮತ್ತು ಕಾಕಂಬಿ ಎತ್ತುವಳಿ ಹಾಗೂ ರಫ್ತಿನ ವಿಚಾರದಲ್ಲಿ ಯಾವುದೇ ನಿಯಮಬಾಹಿರ ಚಟುವಟಿಕೆಗಳೂ ನಡೆದಿಲ್ಲ ಎಂದು ಈಗಿನ  ಕಾಂಗ್ರೆಸ್‌ ಸರ್ಕಾರ ಸಮರ್ಥಿಸಿಕೊಂಡಿದೆ.

 

ಕಾಕಂಬಿ ಎತ್ತುವಳಿ ಮತ್ತು ರಫ್ತು ಪರವಾನಿಗೆ ನೀಡಿರುವುದರಲ್ಲಿ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟವಾಗಿಲ್ಲ ಹಾಗೂ ಯಾವುದೇ ನಿಯಮಬಾಹಿರ ಚಟುವಟಿಕೆಗಳು ನಡೆದಿಲ್ಲ ಎಂದು ಈಗಿನ ಕಾಂಗ್ರೆಸ್‌ ಸರ್ಕಾರವೇ ಕ್ಲೀನ್‌ ಚಿಟ್‌ ಕೊಟ್ಟಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

 

ನ್ಯಾಯಾಲಯದಲ್ಲಿ  ವಿಚಾರಣೆ ನಡೆಯುತ್ತಿದ್ದರೂ  ಇದೀಗ ಕಾಂಗ್ರೆಸ್‌ ಸರ್ಕಾರವು ಅದೇ ಕೆ ಎನ್‌ ರಿಸೋರ್ಸ್‌ ಕಂಪನಿಗೆ ಅಂದಾಜು 11  ಕೋಟಿ ರು. ಮೌಲ್ಯದ  ಕಾಕಂಬಿ ಎತ್ತುವಳಿ ಮತ್ತು  ರಫ್ತಿಗೆ ಪರವಾನಿಗೆ ನೀಡಿರುವುದರ ಬೆನ್ನಲ್ಲೇ ಈ ಹಗರಣಕ್ಕೆ ಕ್ಲೀನ್‌ ಚಿಟ್‌ ನೀಡಿ ಸಲ್ಲಿಸಿರುವ ವರದಿಯು ಮುನ್ನೆಲೆಗೆ ಬಂದಿದೆ.

 

 

ಎಂ 2 ಲೈಸೆನ್ಸ್‌ ಹೊಂದದೆಯೇ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿ ಎತ್ತುವಳಿ ಮಾಡಿ ರಫ್ತು ಮಾಡಲು ಪರವಾನಿಗೆ ನೀಡಲಾಗಿತ್ತು ಎಂದು ಸರ್ಕಾರಕ್ಕೆ ದೂರುಗಳು ಸಲ್ಲಿಕೆಯಾಗಿದ್ದವು. ಅಲ್ಲದೇ ಇದೇ ಅಂಶವನ್ನು ಮುಂದಿರಿಸಿದ್ದ ಕಾಂಗ್ರೆಸ್‌ ಪಕ್ಷವೂ ಸಹ ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದಿತ್ತು.

 

ಆದರೀಗ  ಹಗರಣಕ್ಕೆ ಸಂಬಂಧಿಸಿದಂತೆ    9 ತಿಂಗಳ ನಂತರ ಅಬಕಾರಿ ಇಲಾಖೆಯ ಆಯುಕ್ತ ಡಾ ಜೆ ರವಿಶಂಕರ್‍‌ ಅವರು 2023ರ ಆಗಸ್ಟ್‌ 2ರಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ   ವರದಿ ನೀಡಿದ್ದಾರೆ.  ಇಡೀ ಪ್ರಕರಣದಲ್ಲಿ ಯಾವುದೇ ರೀತಿಯಲ್ಲೂ ಆರ್ಥಿಕ ನಷ್ಟವಾಗಿಲ್ಲ ಮತ್ತು ನಿಯಮಬಾಹಿರತೆಗಳೂ ನಡೆದಿಲ್ಲ ಎಂದು ವರದಿಯಲ್ಲಿ  ಹೇಳಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

 

ವಿಶೇಷವೆಂದರೇ   ಮುಂಬೈ ಮೂಲದ ಕೆ ಎನ್ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ ಎಂ 2 ಲೈಸೆನ್ಸ್‌ ಹೊಂದಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ  ಈ ನಾಲ್ಕು ಪುಟಗಳ ವರದಿಯಲ್ಲಿ  ಎಲ್ಲಿಯೂ ಉಲ್ಲೇಖ ಮಾಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ವರದಿ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಈ  ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ   ಪುತ್ರನ ಹೆಸರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪ್ರಭಾವವೂ ಇದೆ ಎಂದು  ಪ್ರಸ್ತಾಪಿಸಿದ್ದ ಆಡಿಯೋವೊಂದನ್ನು ಬಿಡುಗಡೆಗೊಳಿಸಿ  ಇದರಲ್ಲಿ  ನಿಯಮಬಾಹಿರ ಚಟುವಟಿಕೆಗಳು ನಡೆದಿವೆ ಎಂದು  ಪ್ರತಿಪಕ್ಷದಲ್ಲಿದ್ದಾಗ ಪ್ರಿಯಾಂಕ್‌ ಖರ್ಗೆ (ಹಾಲಿ ಸಚಿವರು) ಮತ್ತು ವಿಧಾನ ಪರಿಷತ್‌ನ ಮಾಜಿ ಸದಸ್ಯ ರಮೇಶ್‌ ಬಾಬು ಅವರು ಆರೋಪಿಸಿದ್ದರು. ಅಲ್ಲದೇ  ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೊಳಪಡಿಸಬೇಕು ಎಂದೂ ಆಗ್ರಹಿಸಿದ್ದರು.

 

 

ಈ ಪ್ರಕರಣದಲ್ಲಿ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟಾಗಿದೆ ಎಂದು ಲಂಚಮುಕ್ತ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ಬಿ ಎಸ್‌ ಮಲ್ಲಿಕಾರ್ಜುನಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದರಲ್ಲದೇ ನಷ್ಟಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದರು.

 

ಈ ಮನವಿಗೆ ಸಂಬಂಧಿಸಿದಂತೆ ಅಬಕಾರಿ ಆಯುಕ್ತರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡು 4 ಪುಟಗಳ ವರದಿಯನ್ನು 2023ರ ಆಗಸ್ಟ್‌ 2ರಂದು ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಸಚಿವ ಆರ್‍‌ ಬಿ ತಿಮ್ಮಾಪುರ ಅವರಿಗೆ ಸಲ್ಲಿಸಲಾಗಿದೆ ಎಂದು ಗೊತ್ತಾಗಿದೆ.

 

ವರದಿಯಲ್ಲೇನಿದೆ?

 

‘ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 2,00,000 ಮೆಟ್ರಿಕ್‌ ಟನ್‌ ಕಾಕಂಬಿಯನ್ನು ರಫ್ತು ಮಾಡಲು ರಾಜ್ಯ ಸರ್ಕಾರವು ಅನುಮತಿಸಿರುವುದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟವುಂಟಾಗಿರುವುದಿಲ್ಲ. ಬದಲಿಗೆ 2,00,000 ಮೆಟ್ರಿಕ್‌ ಟನ್‌ ಕಾಕಂಬಿ ರಫ್ತಿಗೆ ಅನುಮತಿ ನೀಡಿದಾಗಿಯೂ ಸಹ ರಾಜ್ಯದಲ್ಲಿ ಕಾಕಂಬಿ ಲಭ್ಯತೆ ಅನುಸಾರ ಮತ್ತು ಸ್ಥಳೀಯ ಉಪಯೋಗದ ಅವಶ್ಯಕತೆ/ಬೇಡಿಕೆ ಈಡೇರಿಸುವ ಬಗ್ಗೆ ದೃಢೀಕರಿಸಿಕೊಂಡ ನಂತರವಷ್ಟೇ ರಾಜ್ಯದಿಂದ ಕಾಕಂಬಿ ಎತ್ತುವಳಿ ನಿರಾಕ್ಷೇಪಣಾ ಪತ್ರವನ್ನು ನೀಡಲಾಗುತ್ತದೆ,’ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಅದೇ ರೀತಿ ಕೆ ಎನ್‌ ರಿಸೋರ್ಸ್‌  ಪ್ರೈವೈಟ್‌ ಲಿಮಿಟೆಡ್‌ಗೆ ರಾಜ್ಯದಲ್ಲಿ ಕಾಕಂಬಿ ಖರೀದಿಸಿ ಹೊರದೇಶಗಳಿಗೆ ರಫ್ತು ಮಾಡಲು ಅನುಮತಿಸಿರುವುದಿಲ್ಲ. ಕಾಕಂಬಿ ಹಂಚಿಕೆ ಮತ್ತು ಎತ್ತುವಳಿಯಲ್ಲಿ ನಿಯಂತ್ರಣಗೊಳಿಸಲಾಗುವುದರಿಂದ ಸ್ಥಳೀಯ ಹಿತಾಸಕ್ತಿಗಳಿಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಹಾಗೂ ರಾಜ್ಯ ಸರ್ಕಾರಕ್ಕೆ ಈ ಕ್ರಮದಿಂದ ಯಾವುದೇ ಆರ್ಥಿಕ ನಷ್ಟ ಉಂಟು ಮಾಡಿಲ್ಲ ಎಂದು ಅಬಕಾರಿ ಆಯುಕ್ತರು ವರದಿಯಲ್ಲಿ ಸಮರ್ಥನೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

 

‘ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌  2022ರ ಆಗಸ್ಟ್‌ 28ರಂದು ಅರ್ಜಿ ಸಲ್ಲಿಸಿದ್ದು ಈ ಸಂಸ್ಥೆಯು 3 ಸ್ಟಾರ್‍‌ ಎಕ್ಸ್‌ಪೋರ್ಟ್‌ ಹೌಸ್‌ ಎಂಬ ಮನ್ನಣೆಯನ್ನು ಭಾರತ ಸರ್ಕಾರದಿಂದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ, ವಿದೇಶ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕರಿಂದ ಮನ್ನಣೆ ಪಡೆದಿದ್ದಾರೆ. ಈ ರೀತಿಯ ಮನ್ನಣೆಯು ರಫ್ತಿಗೆ ಸಂಬಂಧಿಸಿದಂತೆ ಕೆಲವು ವಿಶೇಷ ಸವಲತ್ತುಗಳನ್ನು ನೀಡಿರುವುದಾಗಿ ತಿಳಿಸಿರುತ್ತಾರೆ. ಇದಲ್ಲದೇ ಕಾಕಂಬಿಯನ್ನು ರಫ್ತು ಮಾಡುವ ಪ್ರಮುಖ ಸಂಸ್ಥೆಯು ಇವರಾಗಿದ್ದು ಗುಜರಾತ್‌ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿರುವ ಬಂದರುಗಳಿಂದ ಕಾಕಂಬಿಯನ್ನು ರಫ್ತು ಮಾಡುತ್ತಿರುವುದಾಗಿಯೂ ತಿಳಿಸಿರುತ್ತಾರೆ,’ ಎಂದು ಕಂಪನಿಯು ನೀಡಿರುವ ಸಮರ್ಥನೆಯನ್ನೂ ವರದಿಯಲ್ಲಿ ಆಯುಕ್ತರು ಪ್ರಸ್ತಾವಿಸಿರುವುದು ಗೊತ್ತಾಗಿದೆ.

 

ಈ ಕಂಪನಿಯು ಮೊರ್ಮಗೋವಾ ಬಂದರು, ಗೋವಾದಲ್ಲಿರುವ ಗಣೇಶ್‌ ಬೆನ್ಜೋಪ್ಲಾಸ್ಟ್‌ ಲಿಮಿಟೆಡ್‌ ಅವರಿಂದ ಶೇಖರಣಾ ಸೌಲಭ್ಯ ಪಡೆದಿದೆ. ಅಲ್ಲದೇ ಗೋವಾ ರಾಜ್ಯದ ಅಬಕಾರಿ ಆಯುಕ್ತರು ಫಾರಂ ಎ-29 ಎ ರಲ್ಲಿ ಕಾಕಂಬಿ ಹೊಂದಲು ಮತ್ತು ಹೊರದೇಶಗಳಿಗೆ ರಫ್ತು ಮಾಡಲು ಸನ್ನದನ್ನು ಪಡೆದಿದೆ. ಇದರ ಅನ್ವಯ ಬೇರೆ ರಾಜ್ಯಗಳಿಂದ ಕಾಕಂಬಿ ಪಡೆದು ಶೇಖರಿಸಲು ಮತ್ತು ಹೊರದೇಶಗಳಿಗೆ ರಫ್ತು ಮಾಡಬಹುದಾಗಿದ್ದು ಕರ್ನಾಟಕ ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ಕಾಕಂಬಿ ಖರೀದಿಸಿ ರಫ್ತು ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಗೋವಾ ರಾಜ್ಯದ ಬಂದರಿನಲ್ಲಿ ಶೇಖರಣಾ ಟ್ಯಾಂಕ್‌ನ್ನು ಹೊಂದಿದ್ದು ಕರ್ನಾಟಕ ರಾಜ್ಯದಿಂದ ಕಾಕಂಬಿಯನ್ನು ಪಡೆದು ಗೋವಾ ಬಂದರಿನ ಮುಖಾಂತರ ಹೊರದೇಶಗಳಿಗೆ 2,00,000 ಮೆಟ್ರಿಕ್‌ ಟನ್‌ ಕಾಕಂಬಿಯನ್ನು ರಫ್ತು ಮಾಡಲು ಅವಶ್ಯ ದಾಖಲೆಗಳನ್ನು ನೀಡಿದೆ. ಗೋವಾ ರಾಜ್ಯ ಸರ್ಕಾರದಿಂದ (ಅಧಿಸೂಚನೆ ಸಂಖ್ಯೆ ಸಿಇ/11/2022-23/58-ಇಎಕ್ಸ್‌ಇ/1819 09.09.2022) ಸನ್ನದು ಪಡೆದಿದೆ. ಗಣೇಶ ಬೆನ್ಜೋಪ್ಲಾಸ್ಟ್‌ ಮೊರ್ಮಗೋವಾ ಬಂದರಿನಲ್ಲಿ ಹೊಂದಿರುವ ಶೇಖರಣಾ ಟ್ಯಾಂಕ್‌ಗಳಲ್ಲಿ ಕಾಕಂಬಿಯನ್ನು ಶೇಖರಿಸಿಕೊಂಡು ರಫ್ತು ಮಾಡಲು ಅನುಮತಿ ಹೊರಡಿಸಿರುವ ಅಧಿಸೂಚನೆಯ ದಾಖಲಾತಿಯನ್ನೂ ಸಲ್ಲಿಸಿದ್ದಾರೆ ಎಂದು ಆಯುಕ್ತರು ಸಮರ್ಥನೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

 

‘ಈ ಪ್ರಸ್ತಾವನೆ ಮತ್ತು ಸಲ್ಲಿಸಿರುವ ದಾಖಲಾತಿ ಹಾಗೂ ವರದಿಯನ್ನು ಪರಿಗಣಿಸಿ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ  2022-23 ಮತ್ತು 2023-24ನೇ ಸಾಲಿಗೆ 2,00,000 ಮೆಟ್ರಿಕ್‌ ಟನ್‌ ಕಾಕಂಬಿಯನ್ನು ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ಎತ್ತುವಳಿ ಮಾಡಿ ರಫ್ತು ಮಾಡಲು ಅನುಮತಿ ನೀಡಲಾಗಿದೆ ಎಂದು ವರದಿಯಲ್ಲಿ ವಿವರಿಸಿದೆ.

 

ನ್ಯಾಯಾಲಯದಲ್ಲಿ  ವಿಚಾರಣೆ ನಡೆಯುತ್ತಿದ್ದರೂ  ಇದೀಗ ಕಾಂಗ್ರೆಸ್‌ ಸರ್ಕಾರವು ಅದೇ ಕೆ ಎನ್‌ ರಿಸೋರ್ಸ್‌ ಕಂಪನಿಗೆ ಅಂದಾಜು 11  ಕೋಟಿ ರು. ಮೌಲ್ಯದ  ಕಾಕಂಬಿ ಎತ್ತುವಳಿ ಮತ್ತು  ರಫ್ತಿಗೆ ಪರವಾನಿಗೆ ನೀಡಿರುವುದನ್ನು ‘ದಿ ಫೈಲ್‌’ ಹೊರಗೆಡವಿತ್ತು.

 

ಕಾಂಗ್ರೆಸ್‌ ಸರ್ಕಾರಕ್ಕೂ ಸುತ್ತಿಕೊಂಡ ಕಾಕಂಬಿ ಹಗರಣ; ತನಿಖೆಯಲ್ಲಿರುವಾಗಲೇ ರಫ್ತು ಪರವಾನಿಗೆ

 

ಕೆ ಎನ್‌ ರಿಸೋರ್ಸ್‌ ಕಂಪನಿಗೆ ಕಾಕಂಬಿ ರಫ್ತು  ಪರವಾನಿಗೆ ನೀಡುವ ಪ್ರಕ್ರಿಯೆಯಲ್ಲಿ ಕಿಕ್‌ ಬ್ಯಾಕ್‌ ಪಡೆಯಲಾಗಿದೆ ಎಂದು ಪ್ರಿಯಾಂಕ್‌ ಖರ್ಗೆ, ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್‌ ಬಾಬು ಅವರು ಆಪಾದಿಸಿದ್ದರು. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋವೊಂದನ್ನು ವಿಧಾನಸಭೆ ಚುನಾವಣೆ ಮುನ್ನ ಬಿಡುಗಡೆ ಮಾಡಿದ್ದರು.

 

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಪ್ರಿಯಾಂಕ್‌ ಖರ್ಗೆ ಮತ್ತು ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಣಕಾಸು ಸಚಿವರ ಹೆಸರು ಪ್ರಸ್ತಾಪವಾಗಿರುವ ಆಡಿಯೋವನ್ನು ಬಹಿರಂಗಗೊಳಿಸಿದ್ದರು.

 

‘ಬಿಜೆಪಿಯವರು ಯಾವುದನ್ನು ಬಿಡದೇ ಲೂಟಿಗಿಳಿದಿದ್ದಾರೆ. ಅಬಕಾರಿ ಇಲಾಖೆಯಲ್ಲಿ  ಕಾಕಂಬಿಯಲ್ಲೂ ಹಗರಣ ನಡೆಯುತ್ತಿದೆ. ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಖಾಸಗಿ ಕಂಪನಿ ಬಳಿ ಯಾವುದೇ ದಾಖಲೆ ಇಲ್ಲದಿದ್ದರೂ ಎಂ 1 ಎಂ 2 ಪರವಾನಿಗೆ ಕೊಟ್ಟಿದ್ದಾರೆ. ಕೇವಲ 2 ತಿಂಗಳಲ್ಲಿ ಯಾವುದೇ ದಾಖಲೆ ಇಲ್ಲದಿದ್ದರೂ ಪರವಾನಿಗೆ ನೀಡಿದ್ದಾರೆ,’ ಎಂದು ಪ್ರಿಯಾಂಕ್‌ ಖರ್ಗೆ ಅವರು ಆರೋಪಿಸಿದ್ದರು.

 

ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಮಾತನಾಡಲು ಹೆದುರುತ್ತಿರುವುದೇಕೆ, ನಿಯಮ ಮೀರಿ ಕಾಕಂಬಿ ರಫ್ತು ಮಾಡಲು ಸಹಕರಿಸಿದ್ದೇಕೆ? ಯಥಾ ಪ್ರಕಾರ ದಾಖಲೆ ಕೊಡಿ, ಸಾಕ್ಷಿ ಕೊಡಿ ಎನ್ನುವಿರಾ ಅಥವಾ ಸೂಕ್ತ ತನಿಖೆಯ ಅಗ್ನಿಪರೀಕ್ಷೆಗೆ ಒಳಪಟ್ಟು ಪ್ರಾಮಾಣಿಕತೆ ಸಾಬೀತುಪಡಿಸುವಿರಾ ಎಂದು ಪ್ರಶ್ನಿಸಿದ್ದರು.

 

ಬಿಜೆಪಿ ಸಂಸದರು ನೇರವಾಗಿ ಸಿ ಎಂ ಬಳಿ ಈ ಡೀಲ್‌ ಮಾಡಿದ್ದಾರೆ. ಇದು ದೊಡ್ಡ ಮಟ್ಟದ ಡೀಲ್‌ ಎಂದು ಅವರು ದೂರವಾಣಿಯಲ್ಲಿ ಮಾತನಾಡುತ್ತಾರೆ. ಮುಖ್ಯಮಂತ್ರಿಗಳೇ ಅಬಕಾರಿ ಸಚಿವರು ಹಾಗೂ ಆಯುಕ್ತರನ್ನು ಕರೆಸಿ ಇದಕ್ಕೆ ಅನುಮತಿ ಕೊಡಿಸಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ನಷ್ಟವಾದರೂ ಸರಿ ಹೈಕಮಾಂಡ್‌ ಮನವೊಲಿಸಲು ಈ ಅನುಮತಿ ಕೊಟ್ಟರಾ ಎಂದೂ ಪ್ರಶ್ನಿಸಿದ್ದನ್ನು ಸ್ಮರಿಸಬಹುದು.

 

 

260 ಕೋಟಿ ಮೌಲ್ಯದ ಕಾಕಂಬಿ ಹಗರಣ; ‘ದಿ ಫೈಲ್‌’ ವರದಿ ಬೆನ್ನಲ್ಲೇ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್‌

 

 

ಅಗತ್ಯ ದಾಖಲೆಗಳನ್ನು ಹಾಜರುಪಡಿಸದಿದ್ದರೂ ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ವಿದೇಶಗಳಿಗೆ ರಫ್ತು ಮಾಡಲು ಅನುಮತಿ ನೀಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದ  ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಅವರು ಕಾಕಂಬಿ ರಫ್ತು ಹಗರಣದ ಸತ್ಯಾಸತ್ಯತೆಯನ್ನು ಹೊರತರಲು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.

 

ಅಬಕಾರಿ ಹಗರಣ; ‘ದಿ ಫೈಲ್‌’ ವರದಿ ಉಲ್ಲೇಖಿಸಿ ತನಿಖೆಗೆ ಆಗ್ರಹಿಸಿ ಹೇಳಿಕೆ ಬಿಡುಗಡೆ

 

ಈ ಪ್ರಕರಣದ ಕುರಿತು  ಆರಂಭದಲ್ಲಿ   ಮೌನ ವಹಿಸಿದ್ದ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನೂರೇ ನೂರು ದಿನದಲ್ಲಿ ವಿವಾದಿತ ಕಂಪನಿಗೇ 9,500 ಮೆಟ್ರಿಕ್‌ ಟನ್‌ ಪ್ರಮಾಣದ ಕಾಕಂಬಿ ಎತ್ತುವಳಿ ಮತ್ತು ರಫ್ತು ಮಾಡಲು ಪರವಾನಿಗೆ ನೀಡಿರುವುದು  ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ರಫ್ತು ಪರವಾನಿಗೆ ನೀಡುವುದಕ್ಕೆ ಅಬಕಾರಿ ಹಾಲಿ ಸಚಿವ ಆರ್‍‌ ಬಿ ತಿಮ್ಮಾಪೂರ ಅವರೂ ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

 

ಕಾಕಂಬಿ ರಫ್ತು ಮಾಡಲು ಅನುಮೋದನೆ ನೀಡಿರುವುದರ ಹಿಂದೆ ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರು 8 ಕೋಟಿ ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ‘ದಿ ಫೈಲ್‌’ 2022ರ ಅಕ್ಟೋಬರ್‌ 13ರಂದು ವರದಿ ಪ್ರಕಟಿಸಿತ್ತು.

 

ಅಬಕಾರಿ ಹಗರಣ; ಗೋವಾ ಬಂದರು ಮೂಲಕ ಕಾಕಂಬಿ ರಫ್ತಿನ ಅನುಮತಿಗೆ 8 ಕೋಟಿ ಕಿಕ್‌ಬ್ಯಾಕ್‌ ಆರೋಪ

 

ಕೆ ಎನ್ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಎಂ-2 ಲೈಸೆನ್ಸ್‌ ಇಲ್ಲದಿದ್ದರೂ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ರಫ್ತು ಮಾಡಲು ಅನುಮೋದನೆ ನೀಡಿದ್ದನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡ ದಾಖಲೆಗಳನ್ನಾಧರಿಸಿ 2022ರ ನವಂಬರ್‌ 30ರಂದು ವರದಿ ಪ್ರಕಟಿಸಿತ್ತು.

 

ಅಬಕಾರಿ ಹಗರಣ; ಪರವಾನಿಗೆ ಇಲ್ಲದಿದ್ದರೂ ಮರೆಮಾಚಿ ಮುಂಬೈ ಕಂಪನಿಗೆ ಕಾಕಂಬಿ ರಫ್ತಿಗೆ ಅನುಮತಿ

 

ಈ ಕುರಿತು ಲಂಚಮುಕ್ತ ಕರ್ನಾಟಕ ವೇದಿಕೆಯು ಪ್ರಧಾನಿಗೂ ದೂರು ಸಲ್ಲಿಸಿತ್ತು.

 

ಅಬಕಾರಿ ಹಗರಣ; ಸಚಿವ ಗೋಪಾಲಯ್ಯ ಸೇರಿ ಅಧಿಕಾರಿಗಳ ವಿರುದ್ಧ ಪ್ರಧಾನಿಗೆ ದೂರು

 

ಈ ಹಗರಣದಲ್ಲಿ ಪ್ರಭಾವಿ ರಾಜಕಾರಣಯೊಬ್ಬರ ಪುತ್ರನ ಹೆಸರು ಪ್ರಸ್ತಾಪವಾಗಿದ್ದ ಆಡಿಯೋವನ್ನಾಧರಿಸಿ ‘ದಿ ಫೈಲ್‌’ 2022ರ ಡಿಸೆಂಬರ್‌ 22ರಂದು ವರದಿ ಪ್ರಕಟಿಸಿತ್ತು.

 

ಅಬಕಾರಿ ಹಗರಣ; ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರನ ಹೆಸರು ಆಡಿಯೋದಲ್ಲಿ ಪ್ರಸ್ತಾಪ

 

ಅಲ್ಲದೇ ಈ ಹಗರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಉದ್ಯಮಿಗಳ ವಲಯದಲ್ಲಿ 25 ಪ್ರಶ್ನೆಗಳು ಕೇಳಿಬಂದಿದ್ದವು. ಈ ಕುರಿತು 2022ರ ಡಿಸೆಂಬರ್‌ 24ರಂದು ವರದಿ ಪ್ರಕಟಿಸಿತ್ತು.

 

ಅಬಕಾರಿ ಹಗರಣದಲ್ಲಿ ಪ್ರಭಾವಿ ಪುತ್ರನ ಹೆಸರು ಪ್ರಸ್ತಾಪ; ಮುನ್ನೆಲೆಗೆ ಬಂದ 25 ಪ್ರಶ್ನೆಗಳು

 

ನಿಯಮಬಾಹಿರವಾಗಿ ಹೊರ ರಾಜ್ಯದ ಕಂಪನಿಗೆ 2 ಲಕ್ಷ ಮೆಟ್ರಿಕ್‌ ಟನ್‌ ಪ್ರಮಾಣದ ಕಾಕಂಬಿಯನ್ನು ರಫ್ತುಮಾಡಲು ಅನುಮತಿ ನೀಡಿರುವುದು ರಾಜ್ಯದ ಉದ್ಯಮಿಗಳ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆರಂಭದಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಕಾಂಗ್ರೆಸ್‌ ಇದೀಗ ಮೌನಕ್ಕೆ ಜಾರಿರುವುದು ಮತ್ತು ರಾಜ್ಯ ಅಬಕಾರಿ ಇಲಾಖೆಯು ಪರವಾನಿಗೆಯನ್ನು ಮುಂದುವರೆಸಿರುವುದರ ಹಿಂದೆ  ಹಲವು ಅನುಮಾನಗಳು ವ್ಯಕ್ತವಾಗಿವೆ.

the fil favicon

SUPPORT THE FILE

Latest News

Related Posts