ಅಬಕಾರಿ ಹಗರಣದಲ್ಲಿ ಪ್ರಭಾವಿ ಪುತ್ರನ ಹೆಸರು ಪ್ರಸ್ತಾಪ; ಮುನ್ನೆಲೆಗೆ ಬಂದ 25 ಪ್ರಶ್ನೆಗಳು

photo credit;thenewindianexpress

ಬೆಂಗಳೂರು; ನಿಯಮಬಾಹಿರವಾಗಿ ಹೊರ ರಾಜ್ಯದ ಕಂಪನಿಗೆ 2 ಲಕ್ಷ ಮೆಟ್ರಿಕ್‌ ಟನ್‌ ಪ್ರಮಾಣದ ಕಾಕಂಬಿಯನ್ನು ರಫ್ತುಮಾಡಲು ಅನುಮತಿ ನೀಡಿರುವ ರಾಜ್ಯ ಅಬಕಾರಿ ಇಲಾಖೆಯ ನಡೆಯು ರಾಜ್ಯದ ಉದ್ಯಮಿಗಳ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

ಅಲ್ಲದೇ ಈ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರನ ಹೆಸರನ್ನು ಏಜೆಂಟ್‌ ಒಬ್ಬ ಪ್ರಸ್ತಾಪಿಸಿರುವ ಆಡಿಯೋವೊಂದು ಸೋರಿಕೆಯಾಗಿದೆ. ಹೀಗಾಗಿ ಇಡೀ ಪ್ರಕರಣದ ಹಿಂದೆ ಕಿಕ್‌ ಬ್ಯಾಕ್‌ ವ್ಯವಹಾರ ನಡೆದಿದೆ ಎಂದು ಕೇಳಿ ಬಂದಿರುವ ಗುರುತರವಾದ ಆರೋಪಗಳಿಗೆ ಈ ಬೆಳವಣಿಗೆಗಳು ಪುರಾವೆಯನ್ನು ಒದಗಿಸಿದಂತಾಗಿದೆ.

 

ಈ ಪ್ರಕರಣದ ಸುತ್ತ ಎದ್ದಿರುವ ಅನುಮಾನ ಮತ್ತು ಕೇಳಿ ಬಂದಿರುವ ಗಂಭೀರ ಆರೋಪಗಳ ಸುತ್ತ ರಾಜ್ಯದ  ಒಟ್ಟು 25 ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

 

1. ಇಲಾಖೆಯ ವೆಬ್‌ಸೈಟ್‌ ಎಂ-2 ಪರವಾನಗಿಯನ್ನು ಪಡೆಯುವ ವಿಧಾನವನ್ನು ಸ್ಪಷ್ಟವಾಗಿ ಪ್ರಕಟಿಸಿದ್ದರೂ ಕೆ ಎನ್‌ ರಿಸೋರ್ಸ್‌ ಪ್ರಕರಣದಲ್ಲಿ ಅಬಕಾರಿ ಆಯುಕ್ತರು ನಿರ್ಲಕ್ಷ್ಯ ವಹಿಸಿದ್ದೇಕೆ? ಉದ್ದೇಶಪೂರ್ವಕವಾಗಿ ಪರಿಗಣಿಸಲಿಲ್ಲವೇ? ಮೇಲಾಧಿಕಾರಿಗಳ ಒತ್ತಡವೇನಾದರೂ ಇದೆಯೇ?

 

2. ಕಂಪನಿಯು ಗೋವಾ ಅಥವಾ ಕರ್ನಾಟಕದಲ್ಲಿ ಎಂ-2 ಪರವಾನಿಗೆ ಪಡೆದಿಲ್ಲ ಎಂದು ಸ್ವತಃ ಘೋಷಿಸಿರುವಾಗ ಅಬಕಾರಿ ಆಯುಕ್ತರು ಈ ಪ್ರಕರಣಕ್ಕೆ ಮಿಂಚಿನ ವೇಗ ನೀಡಿದ್ದೇಕೆ?

 

3. ಅಬಕಾರಿ ಆಯುಕ್ತರು ಸರ್ಕಾರಕ್ಕೆ ನೀಡಿದ ವರದಿಯಲ್ಲಿ ರಫ್ತು ಬಂದರನ್ನು ಗೋವಾ ಎಂದು ದಾಖಲಿಸದೇ ಏಕೆ ಮರೆಮಾಚಿದ್ದಾರೆ?

 

4. ಅಬಕಾರಿ ಆಯುಕ್ತರು ಸೆಪ್ಟಂಬರ್‌ 2022ರ ಕಾಕಂಬಿ ಸ್ಟಾಕ್‌ ವರದಿಯನ್ನು ತಮ್ಮ ಕಚೇರಿಯಲ್ಲಿ ಪಡೆದಿರುವಾಗ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ (01-10-2022) ವರದಿಯೊಂದಿಗೆ ಹಿಂದಿನ ಮೇ,2022ರ ಸ್ಟಾಕ್‌ ವರದಿಯನ್ನೇಕೆ ಸರ್ಕಾರಕ್ಕೆ ಸಲ್ಲಿಸಿದ್ದಾರೆ?

 

5. ಸೆಪ್ಟಂಬರ್‌ 2022ರ ಕಾಕಂಬಿ ದಾಸ್ತಾನು ಅತೀ ಕಡಿಮೆ ಪ್ರಮಾಣದಲ್ಲಿದ್ದು ದೊಡ್ಡ ಪ್ರಮಾಣದ ದಾಸ್ತಾನು ಇದೆ ಎಂದು ಹಣಕಾಸು ಇಲಾಖೆಗೆ ಬಿಂಬಿಸಲಿಲ್ಲವೇ? ದೊಡ್ಡ ಪ್ರಮಾಣದ ಕಾಕಂಬಿ ದಾಸ್ತಾನು ತೋರಿಸಿ ಈ ಹಿಂದೆ ಮಂಜೂರು ಮಾಡಿದ್ದಕ್ಕಿಂತ ಹೆಚ್ಚಿನ ರಫ್ತು ಮಾಡಲು ಅನುಮತಿ ನೀಡಿರುವುದರ ಹಿಂದಿನ ಗುಟ್ಟೇನು?

 

6. ಕರ್ನಾಟಕ ಸರ್ಕಾರವು ಇಲ್ಲಿಯವರೆಗೂ 4 ಲಕ್ಷ ಮೆಟ್ರಿಕ್‌ ಟನ್‌ಗಳಿಗಿಂತ ಹೆಚ್ಚು ಕಾಕಂಬಿಯನ್ನು ವಿದೇಶಕ್ಕೆ ರಫ್ತು ಮಾಡಲು ಎಂದಿಗೂ ಅನುಮತಿಸಿಲ್ಲ ಎಂಬುದು ನಿಜವಲ್ಲವೇ?

 

7. ಡಿಸ್ಟಲರಿ ಮಾಲೀಕರ ಪ್ರತಿಭಟನೆ ಹೊರತಾಗಿಯೂ ಮತ್ತು ಸೆಪ್ಟಂಬರ್‌ 2022ರ ಕಡಿಮೆ ಪ್ರಮಾಣದ ಕಾಕಂಬಿ ದಾಸ್ತಾನು ಇರುವಾಗ ಅಬಕಾರಿ ಆಯುಕ್ತರು ಮುಂಬೈ ಮೂಲದ ಕಂಪನಿಗೆ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ವಿದೇಶಕ್ಕೆ ರಫ್ತು ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇಕೆ?

 

8. ಹೆಚ್ಚುವರಿ ರಫ್ತಿಗೆ ಅವಕಾಶ ನೀಡುವ ಮೂಲಕ ತಮ್ಮಕಚ್ಛಾವಸ್ತುಗಳ ಮೂಲವನ್ನು ಬಡವಾಗಿಸುವ ಮೂಲಕ ಕರ್ನಾಟಕ ಡಿಸ್ಟಲರಿ ಉದ್ಯಮಗಳ ಹಿತಾಸಕ್ತಿಗೆ ಧಕ್ಕೆಯಾಗುವುದಿಲ್ಲವೇ?

 

9. ಕರ್ನಾಟಕ ರಾಜ್ಯದ ಹೊರಗೆ ಕಾಕಂಬಿಯನ್ನು ಸಾಗಿಸಲು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಈ ಹಿಂದಿನ ಸರ್ಕಾರಗಳು ತಿರಸ್ಕರಿಸಿದ್ದರೂ ಈ ಪ್ರಕರಣದಲ್ಲಿ ಕರ್ನಾಟಕದಿಂದ ಗೋವಾ ಬಂದರಿಗೆ ಕಾಕಂಬಿ ಸರಕು ಕೊಂಡೊಯ್ಯಲು ಕೋರಿದ ಪ್ರಸ್ತಾವನೆ ಪುರಸ್ಕೃರಿಸಿದ್ದೇಕೆ?

 

10. ಕರ್ನಾಟಕ ಅಬಕಾರಿ ನೀತಿ ಪ್ರಕಾರ ಇಲಾಖೆಯ ಅಧಿಕಾರ ವ್ಯಾಪ್ತಿ ಕಚೇರಿ ಲಭ್ಯವಿಲ್ಲದ ಬಂದರು ಮೂಲಕ ಕಾಕಂಬಿಯನ್ನು ರಫ್ತು ಮಾಡಲು ಅವಕಾಶ ನೀಡುವಂತಿಲ್ಲ ಎಂಬ ನಿಬಂಧನೆ ಇರುವುದು ನಿಜವಲ್ಲವೇ?

 

11. ಹೊರ ರಾಜ್ಯಗಳ ಬಂದರುಗಳಲ್ಲಿ ಇಲಾಖೆಯು ಕಚೇರಿ ಹೊಂದಿದೆಯೇ? ರಫ್ತುಗಳನ್ನು ಮೇಲ್ವಿಚಾರಣೆ ಮಾಡಲು ಇಲಾಖೆಯು ಅಧಿಕಾರಿಗಳನ್ನು ನಿಯೋಜಿಸಿದ್ದಾರೆಯೇ? ಹೌದು ಎಂದಾದರೆ ಅಬಕಾರಿ ನೀತಿಯ ಪ್ರಕಾರ ರಫ್ತುದಾರರು ಈ ಎಲ್ಲಾ ವೆಚ್ಚಗಳನ್ನು ಇಲಾಖೆಗೆ ಪಾವತಿಸಿದ್ದಾರೆಯೇ?

 

12. ಕರ್ನಾಟಕದಿಂದ ಗೋವಾ ಬಂದರಿಗೆ ಕಾಕಂಬಿ ಸರಕು ಕೊಂಡ್ಯೊಯ್ಯುವಾಗ ಮಾರ್ಗ ಮಧ್ಯದಲ್ಲಿ ಅಥವಾ ಬಂದರು ಸರಕು ಸಂಗ್ರಹಗಾರಕ್ಕೆ ತಲಪಲುವ ಮುನ್ನ ಕಾಕಂಬಿ ಕಳ್ಳತನ ಅಥವಾ ನಕಲಿ ಬಳಕೆ, ಕಾಳಸಂತೆಕೋರರ ಕೈಗೆ ಸಿಗುವುದನ್ನು ತಡೆಯಲು ಕೈಗೊಂಡ ಕ್ರಮಗಳೇನು? ಅಬಕಾರಿ ನೀತಿ ಪ್ರಕಾರ ರಫ್ತುದಾರರು ಈ ಎಲ್ಲಾ ವೆಚ್ಚಗಳನ್ನು ಇಲಾಖೆಗೆ ಪಾವತಿಸಿದೆಯೇ?

 

13. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮುಂತಾದ ರಾಜ್ಯಗಳು ತಮ್ಮ ನೆರೆಯ ರಾಜ್ಯಗಳ ಬಂದರುಗಳ ಮೂಲಕ ಕಾಕಂಬಿ ರಫ್ತು ಮಾಡಲು ಅವಕಾಶ ನೀಡುತ್ತಿಲ್ಲ ಎಂಬುದು ಗೊತ್ತಿಲ್ಲವೇ?

 

14. ಇಷ್ಟೆಲ್ಲಾ ತೊಡಕು ಮತ್ತು ವಂಚನೆಗಳಾಗಿದ್ದರೂ ಆರ್ಥಿಕ ಇಲಾಖೆಯು ಪ್ರಸ್ತಾವನೆಗೆ ಸಹಿ ಹಾಕಿದ್ದೇಕೆ? ಅಬಕಾರಿ ಸಚಿವರಿಗೆ ಮಿಂಚಿನ ವೇಗದಲ್ಲಿ ಈ ಕಡತವನ್ನು ಏಕೆ ರವಾನಿಸಲಾಯಿತು? ಯೋಚನಾ ಸಾಮರ್ಥ್ಯವನ್ನು ಉಪಯೋಗಿಸದೇ ಈ ಪ್ರಕರಣಕ್ಕೆ ಒಪ್ಪಿಗೆ ಸೂಚಿಸಿವಂತೆ ಒತ್ತಡ ಹೇರಿದವರು ಯಾರು?

 

 

15. ಈ ಪ್ರಕರಣದಲ್ಲಿ ಮುಂಬೈ ಮೂಲದ ಕಂಪನಿಯು ಎಂ-2 ಲೈಸೆನ್ಸ್‌ ಇಲ್ಲದೇ ಸಲ್ಲಿಸಿರುವ ಅರ್ಜಿ, ಮತ್ತು ಇತರ ಮೂಲ ದಾಖಲೆ ಇತ್ಯಾದಿಗಳ ಪಿಕ್‌ ಅಂಡ್‌ ಹೋಲ್ಡಿಂಗ್‌ ಉಲ್ಲಂಘನೆಯಾಗಿರುವುದನ್ನು ಹಣಕಾಸು ಇಲಾಖೆ ಏಕೆ ಗಮನಿಸಲಿಲ್ಲ? ಅಥವಾ ಇಡೀ ಇಲಾಖೆಗೆ ಒತ್ತಡದಲ್ಲಿ ಸಿಲುಕಿದೆಯೇ? ಈ ಲೋಪಗಳನ್ನು ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರೇಕೆ ಗಮನಿಸಲಿಲ್ಲ?

 

16. ಈ ಪ್ರಕರಣದಲ್ಲಿ ಅಬಕಾರಿ ಆಯುಕ್ತರು ಯಾವ ಬಂದರು ಮೂಲಕ ಈ ಕಾಕಂಬಿ ಸರಕನ್ನು ವಿದೇಶಕ್ಕೆ ರಫ್ತು ಮಾಡಲಾಗುವುದು ಎನ್ನುವುದನ್ನು ನಿರ್ದಿಷ್ಟವಾಗಿ ದಾಖಲು ಮಾಡದಿದ್ದರೂ ಕೂಡ ಹೇಗೆ ಮತ್ತು ಹಣಕಾಸು ಇಲಾಖೆ ಅನುಮೋದನೆ ನೀಡಿದೆ?

 

17. ಅರ್ಜಿದಾರ ಕಂಪನಿಗೆ ಕಾಕಂಬಿ ಸರಕನ್ನು ಕರ್ನಾಟಕದಿಂದ ರಫ್ತು ಮಾಡಲು ಅಬಕಾರಿ ಆಯುಕ್ತರೇಕೆ ಅನುಮೋದನೆ ನೀಡಿದರು?

 

18. ಅರ್ಜಿದಾರ ಕಂಪನಿಯು ಕರ್ನಾಟಕ ಬಂದರು ಮೂಲಕ ಮಾತ್ರವೇ ಕಾಕಂಬಿ ಸರಕನ್ನು ರಫ್ತು ಮಾಡಲು ಒಪ್ಪಿಗೆಯನ್ನು ಪಡೆದಿರುವುದು ನಿಜವಲ್ಲವೇ?

 

19 . ಅರ್ಜಿದಾರ ಕಂಪನಿಗೆ ನೀಡಿರುವ ಆದೇಶದಲ್ಲಿ ಕಾಕಂಬಿ ಸರಕನ್ನು ಕರ್ನಾಟಕ ರಾಜ್ಯದಲ್ಲಿ ಖರೀದಿಸಿ ಖರೀದಿ ಸ್ಥಳದಿಂದ ಕರ್ನಾಟಕದಲ್ಲಿರುವ ಬಂದರುಗಳಿಗೆ ಮಾತ್ರ ಸಾಗಾಣಿಕೆ ಮಾಡಿ ವಿದೇಶಕ್ಕೆ ರಫ್ತು ಮಾಡಲು ಸೀಮಿತವಾಗಿ ನೀಡಿದೆ. ಈಗ ಆಯುಕ್ತರು ಕಾಕಂಬಿ ಸರಕನ್ನು ಗೋವಾ ರಾಜ್ಯಕ್ಕೆ ಕೊಂಡ್ಯೊಯ್ಯಲು ಅನುಮತಿ ನೀಡಿದ್ದಾದರೂ ಹೇಗೆ?

 

20. ಆಯುಕ್ತರು ಅರ್ಜಿದಾರ ಕಂಪನಿಗೆ ಎಂ-2 ಲೈಸೆನ್ಸ್‌ನ್ನು ಕರ್ನಾಟಕದಲ್ಲಿ ಪಡೆಯುವಂತೆ ಸೂಚಿಸಿ ಇಲ್ಲಿ ಮಾಡಿರುವ ತಪ್ಪನ್ನು ಏಕೆ ಸರಿಪಡಿಸಿಕೊಳ್ಳಲಿಲ್ಲ?

 

21. ಅಬಕಾರಿ ಆಯುಕ್ತರ ಈ ಒಂದು ನಡೆ ಕರ್ನಾಟಕ ಸರ್ಕಾರದ ಬಂದರು ಇಲಾಖೆ ಸುಮಾರು 2 ಕೋಟಿ ರುಪಾಯಿ ಆದಾಯ ಕಳೆದುಕೊಂಡಂತಾಗಿಲ್ಲವೇ?

 

22. ರಫ್ತು ಮತ್ತು ಇದಕ್ಕೆ ಸಂಬಂಧಪಟ್ಟ ವ್ಯವಹಾರವು ಕರ್ನಾಟಕ ರಾಜ್ಯದ ಹೊರಗೆ ನೋಂದಾಯಿಸಲ್ಪಟ್ಟ ಕಂಪನಿಗಳು ಮಾಡಿದಾಗ ಈ ಕಂಪನಿಗಳು ಪಾವತಿಸುವ ಶೇ.40ರಷ್ಟು ಆದಾಯ ತೆರಿಗೆ ಪಾಲು ಆಯಾ ರಾಜ್ಯದ ಖಜಾನೆಗೆ ಜಮಾ ಆದಂತಲ್ಲವೇ? ಅಬಕಾರಿ ಇಲಾಖೆಯ ಈ ನಡೆಯಿಂದಾಗಿ ಹೊರರಾಜ್ಯಗಳಿಗೆ ಲಾಭ ಮಾಡಿಕೊಟ್ಟಂತಾಗಿಲ್ಲವೇ?

 

23. ಕರ್ನಾಟಕ ರಾಜ್ಯದಲ್ಲಿ ನೋಂದಾಯಿಸಲ್ಪಟ್ಟ ಕಂಪನಿಗಳು ಕರ್ನಾಟಕ ರಾಜ್ಯದ ಕಾಕಂಬಿಯನ್ನು ಅಂತರಾಷ್ಟ್ರೀಯ ವ್ಯವಹಾರ ನಿಪುಣತೆಯೊಂದಿಗೆ ರಾಜ್ಯದ ಬಂದರುಗಳ ಮೂಲಕ ವಿದೇಶಕ್ಕೆ ಅತಿ ಯಶಸ್ವಿಯಾಗಿ ಮಾಡುತ್ತಿದ್ದರೂ ರಾಜ್ಯ ಅಬಕಾರಿ ಇಲಾಖೆಯು ಹೊರರಾಜ್ಯದ ಕಂಪನಿಗೆ ರಾಜ್ಯದ ಸಂಪತ್ತನ್ನು ಹಂಚಿಕೆ ಮಾಡಿರುವುದರ ಹಿಂದಿನ ಗುಟ್ಟೇನು?

 

24. ಅಬಕಾರಿ ಇಲಾಖೆಯ ಈ ತಪ್ಪು ನಡವಳಿಕೆಯಿಂದ ಕಾಕಂಬಿ ಸರಕನ್ನು ಇತರ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ ಒಟ್ಟಾರೆ ತೂಕಕ್ಕೆ ರಫ್ತು ಮಾಡಿದಂತೆ ತೊರಿಸಿ ಈ ಮಿಶ್ರಣದ ಉತ್ಪನ್ನದ ಭಾಗವನ್ನು ಕರ್ನಾಟಕದಲ್ಲಿ ಅಕ್ರಮ ಮದ್ಯ ತಯಾರು ಮಾಡಲು ಬಿಡುಗಡೆ ಮಾಡಿದರೆ ಯಾರು ಹೊಣೆ?

 

25. ಈ ಸರಕಿನಿಂದ ಕದ್ದ ಕಾಕಂಬಿಯನ್ನು ಕರ್ನಾಕಟದಲ್ಲಿ ಅಕ್ರಮ ಮದ್ಯ ತಯಾರಿಸಿ ಮಾರಾಟ ಮಾಡಿದರೆ ಅದು ರಾಜ್ಯದ ಅಬಕಾರಿ ಆದಾಯ ಮತ್ತು ಜಿಎಸ್‌ಟಿ ನಷ್ಟಕ್ಕೆ ಕಾರಣವಾದರೆ ಯಾರು ಹೊಣೆ?

the fil favicon

SUPPORT THE FILE

Latest News

Related Posts