ಬೆಂಗಳೂರು; ರಾಜ್ಯ ಅನಿಲ ವಿತರಣೆ ನೀತಿಯ ಪ್ರಕಾರ ಪೈಪ್‌ಲೈನ್ ಅಳವಡಿಕೆ ಶುಲ್ಕವನ್ನು ಕಿಲೋ ಮೀಟರ್‍ಗೆ 19.57 ಲಕ್ಷ ರು ಶುಲ್ಕದಿಂದ 1,000 ರು ಗೆ ಇಳಿಕೆ ಮಾಡಿ ಅಧಿಸೂಚನೆ ಹೊರಡಿಸಿದ ನಂತರ 15 ತಿಂಗಳಲ್ಲೇ ಬಿಬಿಎಂಪಿಯೂ ಸೇರಿದಂತೆ ರಾಜ್ಯದ ಇನ್ನಿತರೆ ಸ್ಥಳೀಯ ಸಂಸ್ಥೆ ಪ್ರಾಧಿಕಾರ, ಮಂಡಳಿಗಳಿಗೆ ಬರೋಬ್ಬರಿ 205.66 ಕೋಟಿ ರುಪಾಯಿ ಆರ್ಥಿಕ ನಷ್ಟವಾಗಿದೆ.
ಸ್ಥಳೀಯ ಸಂಸ್ಥೆಗಳಿಗೆ ಶುಲ್ಕದ ರೂಪದಲ್ಲಿ ಪಾವತಿಸಬೇಕಿದ್ದ ಈ 205.66 ಕೋಟಿ ರುಪಾಯಿಗಳನ್ನು, ಅದಾನಿ, ಮೇಘಾ ಸಿಜಿಡಿ ಪ್ರೈವೈಟ್ ಲಿಮಿಟೆಡ್ ಸೇರಿ ಒಟ್ಟಾರೆ 8 ಬೃಹತ್ ಅನಿಲ ಕಂಪನಿಗಳು ಉಳಿಕೆ ಮಾಡಿಕೊಂಡಿವೆ.
ರಾಜ್ಯ ಅನಿಲ ವಿತರಣೆ ನೀತಿಯಿಂದಾಗಿ ಸ್ಥಳೀಯ ಸಂಸ್ಥೆಗಳ ಬೊಕ್ಕಸಕ್ಕೆ ಎಳ್ಳಷ್ಟೂ ಆರ್ಥಿಕ ನಷ್ಟವಾಗಿಲ್ಲ ಎಂದು ವಿಧಾನ ಪರಿಷತ್‌ನಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಅವರು ಲಿಖಿತವಾಗಿ ಉತ್ತರ ನೀಡಿ ಸಮರ್ಥಿಸಿಕೊಂಡಿದ್ದರು. ಈ ಉತ್ತರ ನೀಡಿದ ಬೆನ್ನಲ್ಲೇ ಸ್ಥಳೀಯ ಸಂಸ್ಥೆಗಳಿಗೆ ಜಮೆಯಾಗಬೇಕಿದ್ದ ಆದಾಯ ಹೇಗೆ ಖೋತಾ ಆಗಿದೆ ಎಂಬ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.
ವಿಧಾನ ಪರಿಷತ್ ಸದಸ್ಯ ಡಿ ಎಸ್ ಅರುಣ್ ಅವರು ಕೇಳಿದ್ದ ಪ್ರಶ್ನೆಗೆ ಸಚಿವ ಎಂ ಬಿ ಪಾಟೀಲ್ ಅವರು ಉತ್ತರದಲ್ಲಿ ಒದಗಿಸಿದ್ದ ಅಂಕಿ ಅಂಶಗಳನ್ನು ‘ದಿ ಫೈಲ್’, ವಿಶ್ಲೇಷಿಸಿದೆ. ಇದರ ಪ್ರಕಾರ ಶುಲ್ಕ ಇಳಿಕೆಯಾದ 2023ರ ನವೆಂಬರ್ 7ರಿಂದ 2025ರ ಜನವರಿ 31ರವರೆಗೆ 205.66 ಕೊಟಿ ರು ವಾಸ್ತವಿಕ ನಷ್ಟವಾಗಿರುವುದು ಗೊತ್ತಾಗಿದೆ.
ಅನಿಲ ನೀತಿ ಜಾರಿಯಾದ ನಂತರ ಇದುವರೆಗೆ ಅಂದರೆ 15 ತಿಂಗಳಲ್ಲಿ 8 ಅನಿಲ ಕಂಪನಿಗಳು 1,136.94 ಕಿಲೋ ಮೀಟರ್‍ನಲ್ಲಿ ಪೈಪ್ ಲೈನ್ ಅಳವಡಿಸಲು ಅನುಮತಿ ಪಡೆದಿವೆ. ಕಿಲೋ ಮೀಟರ್‍ಗೆ 19.57 ಲಕ್ಷ ರು. ಶುಲ್ಕದಂತೆ ಲೆಕ್ಕ ಹಾಕಿದರೇ 1,136.94 ಕಿಲೋ ಮೀಟರ್‍ಗೆ 222.49 ಕೋಟಿ ರು ಸ್ಥಳೀಯ ಸಂಸ್ಥೆಗಳಿಗೆ ಪಾವತಿಸಬೇಕಿತ್ತು.
ಆದರೆ ಶುಲ್ಕವನ್ನು ಕಿಲೋ ಮೀಟರ್‍ಗೆ 1,000 ರು. ನಂತೆ ಇಳಿಕೆ ಮಾಡಿದ್ದರಿಂದಾಗಿ ಕೇವಲ 20,56,882 ರು ಮಾತ್ರ ಪಾವತಿಸಿದೆ. ಈ ಅಂಕಿ ಅಂಶದ ಪ್ರಕಾರ 205.66 ಕೋಟಿ ರು.ನಷ್ಟು ಆರ್ಥಿಕ ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಸ್ಥಳೀಯ ಸಂಸ್ಥೆಗಳಿಗೆ ಶುಲ್ಕದ ರೂಪದಲ್ಲಿ ಜಮೆಯಾಗಬೇಕಿದ್ದ 205.66 ಕೋಟಿ ರು.ನಷ್ಟು ಆರ್ಥಿಕ ನಷ್ಟ ಆಗಿರುವುದರ ಕುರಿತು ಸಚಿವ ಎಂ ಬಿ ಪಾಟೀಲ್ ಅವರು ಯಾವುದೇ ವಿವರಣೆಯನ್ನು ಸದನದಲ್ಲಿ ವಿವರಿಸಿಲ್ಲ. ಬದಲಿಗೆ ಈ ನೀತಿಯಿಂದ ಯಾವುದೇ ಆರ್ಥಿಕ ನಷ್ಟವಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಉತ್ತರಿಸುವ ಮೂಲಕ ಈಗಾಗಲೇ ಆಗಿರುವ ಆರ್ಥಿಕ ನಷ್ಟವನ್ನು ಮುಚ್ಚಿ ಹಾಕಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಅನಿಲ ನೀತಿಯಲ್ಲಿನ ಶುಲ್ಕ ಇಳಿಕೆ ಮಾಡುವ ಮುನ್ನ ಇವೇ 8 ಕಂಪನಿಗಳು ರಾಜ್ಯದ ಬೆಂಗಳೂರು, ದಕ್ಷಿಣ ಕನ್ನಡ, ಬೀದರ್, ಬಳ್ಳಾರಿ, ಗದಗ್, ರಾಮನಗರ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಕಲ್ಬುರ್ಗಿ, ವಿಜಯಪುರ, ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರದಲ್ಲಿ 2023ರ ನವೆಂಬರ್ 6ರ ಅಂತ್ಯಕ್ಕೆ ಒಟ್ಟು 4,630.92 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಸಲು ಅನುಮತಿ ಪಡೆದಿದ್ದವು.
ಮೊದಲಿದ್ದ ಶುಲ್ಕದ ಪ್ರಕಾರ 4,630.92 ಕಿಲೋ ಮೀಟರ್‍ಗೆ 906.27 ಕೋಟಿ ರು ಶುಲ್ಕವನ್ನು ಪಾವತಿಸಬೇಕಿತ್ತು. ಆದರೆ ಸರ್ಕಾರವು ಸದನಕ್ಕೆ ನೀಡಿರುವ ಅಂಕಿ ಅಂಶದ ಪ್ರಕಾರ ಈ ಕಂಪನಿಗಳು 281.68 ಕೋಟಿ ರು ಮೊತ್ತದ ಶುಲ್ಕವನ್ನು ಆಯಾ ಸ್ಥಳೀಯ ಸಂಸ್ಥೆಗಳಿಗೆ ಪಾವತಿಸಿರುವುದು ಗೊತ್ತಾಗಿದೆ.
ಉದಾಹರಣೆಗೆ ಗೈಲ್ ಕಂಪನಿಯು ಬೆಂಗಳೂರು ನಗರ, ಗ್ರಾಮೀಣ ಮತ್ತು ದಕ್ಷಿಣ ಕನ್ನಡದಲ್ಲಿ 2023ರ ನವೆಂಬರ್ 6ರವರೆಗೆ 2,189.09 ಕಿಲೋ ಮೀಟರ್‍ನಷ್ಟು ಪೈಪ್‌ಲೈನ್ ಅಳವಡಿಸಿದ್ದವು. ಮೊದಲಿದ್ದ ಶುಲ್ಕದ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳಿಗೆ 175.37 ಕೋಟಿ ರು., ಪಿಡಬ್ಲ್ಯೂಡಿಗೆ 1.11 ಕೋಟಿ ರು., ಪಂಚಾಯತ್‌ಗಳಿಗೆ 4.17 ಕೋಟಿ ರು., ಕೆಐಎಡಿಬಿಗೆ 6.71 ಕೋಟಿ ರು., ಕೆಆರ್‍ಡಿಸಿಎಲ್‌ಗೆ 3.37 ಕೋಟಿ ರು ಸೇರಿ ಒಟ್ಟಾರೆ 190.73 ಕೋಟಿ ರು.ಗಳನ್ನು ಶುಲ್ಕದ ರೂಪದಲ್ಲಿ ಭರಿಸಿವೆ.
ಗೈಲ್ ಕಂಪನಿಯು 80.64 ಕಿಲೋ ಮೀಟರ್‍ಗೆ ಪ್ರತಿ ಮೀಟರ್‍ಗೆ 871 ರು ಪಾವತಿಸಿದೆ. ಇದರ ಪ್ರಕಾರ 7,02,59,638 ರು ಆಗಿದ್ದರೇ ಶುಲ್ಕವನ್ನು ಪ್ರತಿ ಮೀಟರ್ ಗೆ 1 ರು.ನಂತೆ ಲೆಕ್ಕ ಹಾಕಿದರೇ 7,01,72,356.48 ರು ಅಗಲಿದೆ. ಅಂದರೇ ಇಷ್ಟೂ ಮೊತ್ತವು ಆರ್ಥಿಕ ನಷ್ಟವಾದಂತಾಗಿದೆ.
ಇದೇ ಕಂಪನಿಯು 2023ರ ನವೆಂಬರ್ 7ರಿಂದ 2025ರ ಜನವರಿ 31ರ ಅಂತ್ಯಕ್ಕೆ 80.64 ಕಿ ಮೀನಲ್ಲಿ ಪೈಪ್‌ಲೈನ್ ಅಳವಡಿಸಿದೆ. ಈ ಮೊದಲಿದ್ದ ಕಿಲೋ ಮೀಟರ್‍ಗೆ 19.57 ಲಕ್ಷ ರು. ನಂತೆ 15.78 ಕೋಟಿ ರು.ನಷ್ಟು ಶುಲ್ಕ ಸಂದಾಯವಾಗುತ್ತಿತ್ತು.
ಆದರೆ ಹೊಸ ನೀತಿಯ ಪ್ರಕಾರ ಕಿಲೋಮೀಟರ್‍ಗೆ 1,000 ರು.ನಂತೆ ಈ ಕಂಪನಿಯು ಕೇವಲ 87,282 ರು.ಗಳಷ್ಟೇ ಶುಲ್ಕ ಪಾವತಿಸಿದೆ.
ನಗರ ಸ್ಥಳೀಯ ಸಂಸ್ಥೆಗಳಿಗೆ 67,941 ರು., ಪಿಡಬ್ಲ್ಯೂಡಿಗೆ ಶೂನ್ಯ, ಪಂಚಾಯತ್‌ಗಳಿಗೆ 1,641 ರು., ಕೆಐಎಡಿಬಿಗೆ 3,700 ರು., ಕೆಆರ್‍ಡಿಸಿಎಲ್‌ಗೆ 14,000 ರು. ಶುಲ್ಕ ಒಳಗೊಂಡಿದೆ. ಒಟ್ಟಾರೆ 15. 77 ಕೋಟಿಯಷ್ಟು ಆದಾಯವು ಸ್ಥಳೀಯ ಸಂಸ್ಥೆಗಳಿಂದ ಕೈ ತಪ್ಪಿ ಹೋಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಬಿಪಿಸಿಎಲ್ ಕಂಪನಿಯು ಈ ನೀತಿ ಜಾರಿಗೆ ಬರುವ ಮುನ್ನ 265.79 ಕಿ ಮೀನಲ್ಲಿ ಅಳವಡಿಸಿದ್ದ ಪೈಪ್‌ಲೈನ್‌ಗೆ ಮೊದಲು ವಿಧಿಸಿದ್ದ ಶುಲ್ಕದಂತೆ ಒಟ್ಟಾರೆ 3,07,15,364 ರು.ಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಪಾವತಿಸಿತ್ತು.
ಹೊಸ ನೀತಿ ಜಾರಿಗೆ ಬಂದ ನಂತರ ಈ ಕಂಪನಿಯು 118.30 ಕಿ ಮೀನಲ್ಲಿ ಪೈಪ್‌ಲೈನ್ ಅಳವಡಿಸಲು ಅನುಮತಿ ಪಡೆದಿದೆ. ಮೊದಲಿದ್ದ ಶುಲ್ಕದ ಲೆಕ್ಕಾಚಾರದಂತೆ 118.30 ಕಿ ಮೀ ಗೆ 23.15 ಕೋಟಿ ರು ಶುಲ್ಕ ಭರಿಸಬೇಕಿತ್ತು. ಹೊಸ ನೀತಿಯಿಂದಾಗಿ ಕೇವಲ 9,58, 414 ರು.ಗಳನ್ನಷ್ಟೇ ಪಾವತಿಸಿದೆ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳಿಗೆ 23.05ಕೋಟಿ ರು ಆದಾಯಕ್ಕೆ ಕಲ್ಲು ಬಿದ್ದಂತಾಗಿದೆ.
ಎಂಎನ್‌ಜಿಎಲ್ ಕಂಪನಿಯು ಹೊಸ ನೀತಿ ಜಾರಿಗೆ ಬರುವ ಮುನ್ನ ಅಂದರೇ 2023ರ ನವೆಂಬರ್ 6ರವರೆಗೆ 118 ಕಿ ಮೀವರೆಗೆ ಪೈಪ್‌ಲೈನ್‌ಗೆ ಅಳವಡಿಕೆಗೆ 38,23,70,326 ರು.ಗಳನ್ನು ಶುಲ್ಕದ ರೂಪದಲ್ಲಿ ಪಾವತಿಸಿತ್ತು.
ಹೊಸ ನೀತಿ ಜಾರಿಗೆ ಬಂದ ನಂತರ ಅಂದರೇ 2023ರ ನವೆಂಬರ್ 7ರಿಂದ 2025 ಜನವರಿ 31ರ ಅಂತ್ಯದವರೆಗೆ 89.5 ಕಿ ಮೀ ವರೆಗೆ ಪೈಪ್‌ಲೈನ್ ಅಳವಡಿಕೆಗೆ 89,500 ರು ಮಾತ್ರ ಪಾವತಿಸಿದೆ. ಮೊದಲಿದ್ದ ಶುಲ್ಕವೇ ಜಾರಿಯಲ್ಲಿದ್ದರೇ 89.5 ಕಿ ಮೀ ಗೆ 17,51,51,500 ರು ಸ್ಥಳೀಯ ಸಂಸ್ಥೆಗಳ ಬೊಕ್ಕಸ ಸೇರುತ್ತಿತ್ತು. ಆದರೀಗ ಹೊಸ ನೀತಿಯಂತೆ ಶುಲ್ಕವನ್ನು ಇಳಿಕೆ ಮಾಡಿರುವ ಕಾರಣ 17,50,62,000 ರು.ಗಳಷ್ಟು ಆದಾಯವು ಕೈ ತಪ್ಪಿ ಹೋಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಎಜಿ ಅಂಡ್ ಪಿ ಸಿಟಿ ಗ್ಯಾಸ್ ಪ್ರೈವೈಟ್ ಲಿಮಿಟೆಡ್ ಹೊಸ ನೀತಿಗೂ ಮುನ್ನ 1052.315 ಕಿಲೋ ಮೀಟರ್‍ಗಳಿಗೆ ಪೈಪ್‌ಲೈನ್ ಅಳವಡಿಸಿದ್ದಕ್ಕೆ 22,79,48,411.59 ರು.ಗಳನ್ನು ಪಾವತಿಸಿತ್ತು.
ಹೊಸ ನೀತಿಯು ಜಾರಿಗೆ ಬಂದ ನಂತರ ಇದೇ ಕಂಪನಿಯು 2025ರ ಜನವರಿ 31ರ ಅಂತ್ಯಕ್ಕೆ 642 ಕಿಲೋ ಮೀಟರ್‍ಗಳಲ್ಲಿ ಪೈಪ್‌ಲೈನ್ ಅಳವಡಿಸಿತ್ತು. ಮೊದಲಿದ್ದ ಶುಲ್ಕವೇ ಚಾಲ್ತಿಯಲ್ಲಿದಿದ್ದರೇ 125,63,94,000 ರು ಪಾವತಿಸಬೇಕಿತ್ತು. ಹೊಸ ನೀತಿಯಲ್ಲಿನ ಶುಲ್ಕ ಇಳಿಕೆಯಿಂದಾಗಿ 6,80,392 ರು ಪಾವತಿಸಿದೆ. ಆದರೆ ಮೊದಲಿದ್ದ ಶುಲ್ಕದ ಮೊತ್ತಕ್ಕೂ ಮತ್ತು ಹೊಸ ನೀತಿಯಿಂದಾಗಿ ಇಳಿಕೆಯಾಗಿರುವ ಶುಲ್ಕಕ್ಕೆ ಹೋಲಿಸಿದರೆ 125.57 ಕೋಟಿಯಷ್ಟು ಆದಾಯ ಖೋತಾ ಆಗಿರುವುದು ಗೊತ್ತಾಗಿದೆ.
ಮೇಘಾ ಸಿಜಿಡಿ ಪ್ರೈವೈಟ್ ಲಿಮಿಟೆಡ್ 2023ರ ನವೆಂಬರ್ 6ರವರೆಗೆ 696.83 ಕಿಲೋಮೀಟರ್‍ನಲ್ಲಿ ಪೈಪ್‌ಲೈನ್ ಅಳವಡಿಸಿತ್ತು. ಶುಲ್ಕದ ರೂಪದಲ್ಲಿ 7,79,71,889 ರು.ಗಳನ್ನು ಭರಿಸಿತ್ತು.
ಹೊಸ ನೀತಿ ಜಾರಿಯಾದ ನಂತರ 2025ರ ಜನವರಿ 31ರ ಅಂತ್ಯದವರೆಗೆ 32.36 ಕಿ ಮೀ ವರೆಗೆ ಪೈಪ್‌ಲೈನ್ ಅಳವಡಿಸಿದೆ. ಶುಲ್ಕದ ಇಳಿಕೆಯಿಂದಾಗಿ ಈ ಕಂಪನಿಯು ಕೇವಲ 40,350 ರು ಮಾತ್ರ ಪಾವತಿಸಿದೆ. ಮೊದಲಿದ್ದ ಶುಲ್ಕದ ಪ್ರಕಾರ ಇದೇ 32.36 ಕಿ ಮೀ ಗೆ 6,33,28, 520 ರು ಪಾವತಿಸಿದೆ. ಮೊದಲಿದ್ದ ಶುಲ್ಕಕ್ಕೂ ಈಗ ಇಳಿಕೆಯಾಗಿರುವ ಶುಲ್ಕದ ಮೊತ್ತಕ್ಕೆ ಹೋಲಿಸಿದರೇ 6,32,88,170 ರು ಆದಾಯವು ಕೈ ತಪ್ಪಿ ಹೋಗಿರುವುದು ತಿಳಿದು ಬಂದಿದೆ.
ಯುನಿಸನ್ ಎನ್ವಿರೋ ಪ್ರೈವೈಟ್ ಲಿಮಿಟೆಡ್ ಕಂಪನಿಯು 2023ರ ನವೆಂಬರ್ 6ರವರೆಗೆ 103.29 ಕಿ ಮೀವರೆಗೆ ಪೈಪ್‌ಲೈನ್ ಅಳವಡಿಸಿದ್ದಕ್ಕೆ 5,62,54,618 ರು.ಗಳನ್ನು ಪಾವತಿಸಿತ್ತು.
ಹೊಸ ನೀತಿ ಜಾರಿಗೆ ಬಂದ ನಂತರ ಈ ಕಂಪನಿಯು 97.14 ಕಿ ಮೀ ವರೆಗೆ ಪೈಪ್‌ಲೈನ್ ಅಳವಡಿಸಿದೆ. ಹೊಸ ನೀತಿಯಂತೆ ಶುಲ್ಕದ ರೂಪದಲ್ಲಿ 97,144 ರು.ಗಳನ್ನು ಪಾವತಿಸಿದೆ. ಮೊದಲಿದ್ದ ಶುಲ್ಕದಂತೆ ಲೆಕ್ಕ ಹಾಕಿದರೇ 19.01 ಕೋಟಿಯಷ್ಟು ಪಾವತಿಸಬೇಕಿತ್ತು. ಹೊಸ ನೀತಿಯಂತೆ ಶುಲ್ಕ ಪಾವತಿಸಿರುವ ಕಾರಣ ಸ್ಥಳೀಯ ಸಂಸ್ಥೆಗಳಿಗೆ 19.00 ಕೋಟಿಯಷ್ಟು ಆದಾಯಕ್ಕೆ ಕಲ್ಲು ಬಿದ್ದಂತಾಗಿದೆ.
ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ 2023ರ ನವೆಂಬರ್ 6ರವರೆಗೆ ಪೈಪ್‌ಲೈನ್ ಅಳವಡಿಸಿಲ್ಲ.
ಹೊಸ ನೀತಿ ಜಾರಿಗೆ ಬಂದ ನಂತರ 77 ಕಿ ಮೀ ನಲ್ಲಿ ಪೈಪ್‌ಲೈನ್ ಅಳವಡಿಸಿದೆ. ಮೊದಲಿದ್ದ ಶುಲ್ಕದ ಲೆಕ್ಕಚಾರ ಪ್ರಕಾರ 15,06,89,000 ಶುಲ್ಕ ಪಾವತಿಸಬೇಕಿತ್ತು. ಹೊಸ ನೀತಿಯಲ್ಲಿನ ಶುಲ್ಕ ಇಳಿಕೆಯಿಂದಾಗಿ 1,01,000 ರು ಮಾತ್ರ ಪಾವತಿಸಿದೆ. ಅಂದರೆ ಸ್ಥಳೀಯ ಸಂಸ್ಥೆಗಳ ಪಾಲಾಗಬೇಕಿದ್ದ 15.05 ಕೋಟಿ ರು ಆದಾಯವು ಕೈ ತಪ್ಪಿದೆ.
ಇಂಡಿಯನ್ ಆಯಿಲ್ ಅದಾನಿ ಗ್ಯಾಸ್ ಪ್ರೈವೈಟ್ ಲಿಮಿಟೆಡ್ ಹೊಸ ನೀತಿ ಜಾರಿಗೆ ಬರುವ ಮುನ್ನ 205.6 ಕಿ ಮೀನಲ್ಲಿ ಪೈಪ್‌ಲೈನ್ ಅಳವಡಿಸಿತ್ತು. ಇದಕ್ಕಾಗಿ 13,42,79,000 ರು ಪಾವತಿಸಿತ್ತು.
ಹೊಸ ನೀತಿ ಜಾರಿಗೆ ಬಂದ ನಂತರ ಈ ಕಂಪನಿಯು ಪೈಪ್‌ಲೈನ್ ಅಳವಡಿಸಿಲ್ಲ. ಆದರೆ 2,800 ರು ಶುಲ್ಕ ಭರಿಸಿದೆ.
ಈ ಎಲ್ಲಾ 8 ಕಂಪನಿಗಳು 2025ರ ಜನವರಿ 31ರ ಅಂತ್ಯಕ್ಕೆ 5,880.52 ಕೋಟಿ ರು ಹೂಡಿಕೆ ಮಾಡಿವೆ.
ಅನಿಲ ನೀತಿಯ ಭಾಗವಾಗಿ ಶುಲ್ಕ ಇಳಿಕೆಯ ಪ್ರಸ್ತಾವವನ್ನು ಲೋಕೋಪಯೋಗಿ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ನೇರಾ ನೇರ ಧಿಕ್ಕರಿಸಿ ನೀತಿಯನ್ನು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸಿತ್ತು.
ನಗರಪಾಲಿಕೆ, ಪುರಸಭೆ ಸೇರಿದಂತೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಸಾವಿರಾರು ಕೋಟಿ ರುಪಾಯಿ ಮೊತ್ತದಷ್ಟು ಆದಾಯ ಖೋತಾಕ್ಕೆ ಕಾರಣವಾಗಲಿದ್ದರೂ ಸಹ ಈ ನೀತಿಯಿಂದ ಆರ್ಥಿಕ ನಷ್ಟದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವು ಪ್ರತಿಪಾದಿಸಿರುವುದನ್ನು ಸ್ಮರಿಸಬಹುದು.
ಆದರೂ ಸಹ ಯಾವುದೇ ಆರ್ಥಿಕ ನಷ್ಟದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಉತ್ತರ ಒದಗಿಸಿರುವ ಸರ್ಕಾರದ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ರಾಜ್ಯ ನಗರ ಅನಿಲ ವಿತರಣೆ (ಸಿಜಿಡಿ) ನೀತಿಯಿಂದಾಗಿ ಸರ್ಕಾರಕ್ಕೆ ಆಗಿರುವ ಭಾರೀ ಪ್ರಮಾಣದ ನಷ್ಟದ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ 90 ದಿನಗಳಾದರೂ ಆಡಳಿತ ಇಲಾಖೆಯು ಉತ್ತರವನ್ನೇ ಒದಗಿಸಿರಲಿಲ್ಲ.
ಅದಾನಿ, ಇತರ ಕಂಪನಿಗಳಿಗೆ ಭರ್ಜರಿ ಲಾಭ!, ಸರ್ಕಾರಕ್ಕೆ ಅಪಾರ ನಷ್ಟ; 90 ದಿನಗಳಾದರೂ ಮಾಹಿತಿ ನೀಡಿಲ್ಲವೇಕೆ?
ಮತ್ತೊಂದು ವಿಶೇಷವೆಂದರೇ ಈ ನೀತಿ ಕುರಿತು ಬಸನಗೌಡ ಪಾಟೀಲ ಯತ್ನಾಳ ಅವರು ಮೂಲಸೌಕರ್ಯ ಅಭಿವೃದ್ದಿ ಇಲಾಖೆಗೆ. ಆದರೆ ಇದನ್ನು ವಿಧಾನಸಭೆ ಸಚಿವಾಲಯ ಸಿಬ್ಬಂದಿ ಈ ಪ್ರಶ್ನೆಯನ್ನು ಆಹಾರ, ನಾಗರಿಕ ಸರಬರಾಜು ಇಲಾಖೆಗೆ ವರ್ಗಾಯಿಸಿದ್ದರು.
ಈ ನೀತಿಯನ್ನು ಹಿಂದಿನ ಬಿಜೆಪಿ ಸರ್ಕಾರವು ಜಾರಿಗೊಳಿಸಿರಲಿಲ್ಲ. ಎರಡು ಬಾರಿ ಸಂಪುಟಕ್ಕೆ ಪ್ರಸ್ತಾವನೆ ಮಂಡನೆಯಾಗಿತ್ತಾದರೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಈ ಕುರಿತು ನಿರ್ಧಾರ ಕೈಗೊಂಡಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ಈ ನೀತಿಯನ್ನು ಜಾರಿಗೊಳಿಸಿತ್ತು.
3,289 ಕೋಟಿ ರು ಅನಿಲ ಹಗರಣ; ಕಾಂಗ್ರೆಸ್ ಸರ್ಕಾರದ ನೂತನ ನೀತಿ, ಅದಾನಿ ಮತ್ತಿತರರಿಗೆ ಲಾಭವಾಯಿತೇ?
ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ ಆರ್‍ಟಿಐ ಅಡಿಯಲ್ಲಿ ಕಡತವನ್ನು ಕೋರಿತ್ತು. ಆದರೆ ಕಡತವನ್ನು ನೀಡಿರಲಿಲ್ಲ.
3,289 ಕೋಟಿ ರು ಹಗರಣ ಶಂಕೆ; ಅನಿಲ ವಿತರಣಾ ಜಾಲ ಅಭಿವೃದ್ದಿ ನೀತಿ ‘ಕಡತ’ಕ್ಕೆ ಸರ್ಪಗಾವಲು
‘ದಿ ಫೈಲ್’ ಪುನಃ ಆರ್‍ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಇಲಾಖೆ ಒದಗಿಸಿದ್ದ ದಾಖಲೆ ಪ್ರಕಾರ ನಗರ ಅನಿಲ ವಿತರಣೆ ಜಾಲ ನೀತಿಯ ಕುರಿತು ಆಡಳಿತ ಇಲಾಖೆಯು ಸಚಿವ ಸಂಪುಟವನ್ನು ದಾರಿತಪ್ಪಿಸಿತ್ತು.
ನಗರ ಅನಿಲ ವಿತರಣೆ ಜಾಲ ನೀತಿ; 5,000 ಕೋಟಿ ಆದಾಯ ಖೋತಾ, ಸಂಪುಟವನ್ನೂ ದಾರಿತಪ್ಪಿಸಿದ ಇಲಾಖೆ
‘ದಿ ಫೈಲ್’ ಪ್ರಕಟಿಸಿದ್ದ ಈ ವರದಿಗೆ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು ಸ್ಪಷ್ಟನೆ ನೀಡಿತ್ತು.
ಸಿಜಿಡಿ ನೀತಿ; ‘ದಿ ಫೈಲ್’ ವರದಿಗೆ ಸ್ಪಷ್ಟೀಕರಣ ನೀಡಿದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ
ಇದೇ ಸಿಜಿಡಿ ನೀತಿಯನ್ನು ಅನುಷ್ಠಾನಗೊಳಿಸಿದ್ದ ನೆರೆಯ ರಾಜ್ಯಗಳು ತಮ್ಮ ಸ್ಥಳೀಯ ಸಂಸ್ಥೆಗಳಿಗೆ ಆದಾಯ ತಂದುಕೊಂಡಿದ್ದವು. ಆದರೂ ಈ ರಾಜ್ಯಗಳನ್ನು ರಾಜ್ಯ ಸರ್ಕಾರವು ಮುಚ್ಚಿಟ್ಟಿದ್ದವು.
ಸಿಜಿಡಿ ಶುಲ್ಕ 1 ರು. ಸಾಕೇ?; ತಮಿಳುನಾಡು, ಪ.ಬಂಗಾಳ, ಹಿಮಾಚಲ, ಪಂಜಾಬ್ ಮಾದರಿ ಮುಚ್ಚಿಟ್ಟಿದ್ದೇಕೆ?
ಈ ನೀತಿಯಲ್ಲಿ ನಮೂದಿಸಿರುವ ಶುಲ್ಕವನ್ನು ಅನುಷ್ಠಾನಗೊಳಿಸಿದರೆ ರಾಜ್ಯ ಬೊಕ್ಕಸಕ್ಕೆ ಹಾನಿಯಾಗಲಿದೆ ಎಂದು ಲೋಕೋಪಯೋಗಿ ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಸ್ಪಷ್ಟವಾಗಿ ಹೇಳಿತ್ತು. ಆದರೂ ಪಿಡಬ್ಲ್ಯೂಡಿ ಅಭಿಪ್ರಾಯವನ್ನು ಮೂಲ ಸೌಕರ್ಯ ಇಲಾಖೆಯು ಬದಿಗೊತ್ತಿತ್ತು.
ಅನಿಲ ನೀತಿ ಶುಲ್ಕ; ಪಿಡಬ್ಲ್ಯೂಡಿಗೆ ಕಿಮ್ಮತ್ತಿಲ್ಲ, ನಗರಾಭಿವೃದ್ಧಿ ಅಭಿಪ್ರಾಯವೇ ಇಲ್ಲ, ತಿಪ್ಪೆ ಸಾರಿಸಿತು ಸಾರಿಗೆ
ಈ ನೀತಿಯಿಂದಾಗಿ ರಾಜ್ಯ ಸಂಚಿತ ನಿಧಿಗೆ ನಷ್ಟವಾಗಿತ್ತಲ್ಲದೇ ಖಾಸಗಿ ಏಜೆನ್ಸಿಗಳಿಗೆ ಬೇಷರತ್ ಲಾಭಾಂಶವಾಗಿತ್ತು.
ಅನಿಲ ನೀತಿ ಶುಲ್ಕದಲ್ಲಿ ಇಳಿಕೆ; ರಾಜ್ಯ ಸಂಚಿತ ನಿಧಿಗೆ ನಷ್ಟ, ಖಾಸಗಿ ಏಜೆನ್ಸಿಗಳಿಗೆ ಬೇಷರತ್ ಲಾಭಾಂಶ!
ಆದರೂ ಮೂಲಸೌಕರ್ಯ ಇಲಾಖೆಯು ಈ ನೀತಿ ಕುರಿತು ಅಸಮಂಜಸವಾಗಿ ಪ್ರತಿಪಾದನೆ ಮಾಡಿತ್ತು.
ಅನಿಲ ನೀತಿ; ಕಂಪನಿಗಳ ಲಾಭಾಂಶ ಮರೆಮಾಚಿದ ಸರ್ಕಾರದಿಂದ ಅಸಮಂಜಸ ಪ್ರತಿಪಾದನೆ
ಅಲ್ಲದೇ ಅನಿಲ ನೀತಿ ಶುಲ್ಕ ಇಳಿಕೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಹೇಗೆಲ್ಲಾ ಧಕ್ಕೆಯಾಗಲಿದೆ ಎಂದು ಪಿಡಬ್ಲ್ಯೂಡಿ ಇಲಾಖೆಯು ವಿವರಿಸಿತ್ತು.
ಅನಿಲ ನೀತಿ ಶುಲ್ಕ ಇಳಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಧಕ್ಕೆ; ಪಿಡಬ್ಲ್ಯೂಡಿ ಟಿಪ್ಪಣಿ ಹಾಳೆಗಳು ಬಹಿರಂಗ
ಈ ಎಲ್ಲಾ ಬೆಳವಣಿಗೆಗಳ ಕುರಿತು ವಿಧಾನಸಭೆಯಲ್ಲಿ ಶಾಸಕರು ಕೇಳಿದ್ದ ಪ್ರಶ್ನೆಗಳಿಗೂ ಸರ್ಕಾರವು ಉತ್ತರಿಸದೇ ಇರುವುದು ಸಂಶಯಗಳನ್ನು ಬಲಪಡಿಸಿದಂತಾಗಿದೆ.