ಬೆಂಗಳೂರು; ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿನ ಕಾಲೇಜುಗಳ ಪರಿಣಾಮಕಾರಿ ಮೇಲ್ವಿಚಾರಣೆಗೆ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಯು ಪೂರಕವಾಗಿರುತ್ತದೆ ಎಂದು ಸಹಮತಿ ಸೂಚಿಸಿದ್ದ ಉನ್ನತ ಶಿಕ್ಷಣ ಇಲಾಖೆಯೂ ಸೇರಿದಂತೆ ಇನ್ನಿತರೆ ಇಲಾಖೆಗಳ ಅಧಿಕಾರಿಗಳೀಗ, ಇವೇ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಅಥವಾ ವಿಲೀನದ ಪ್ರಸ್ತಾವವನ್ನು ಸಿದ್ಧಪಡಿಸುವ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಏಳು ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮತ್ತು ಮಂಡ್ಯ ಏಕಾತ್ಮಕ ವಿಶ್ವವಿದ್ಯಾಲಯವನ್ನು ಸಂಯೋಜನೆಗೊಳಿಸುವ ವಿಶ್ವವಿದ್ಯಾಲಯವನ್ನಾಗಿ ಉನ್ನತೀಕರಿಸುವ ಪ್ರಸ್ತಾವವನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳು ಒಪ್ಪಿಗೆ ಸೂಚಿಸಿದ್ದವು.
ಮೈಸೂರು, ಗುಲ್ಬರ್ಗಾ, ಕರ್ನಾಟಕ, ಮಂಗಳೂರು, ಶ್ರೀ ವಿಜಯನಗರ ಕೃಷ್ಣದೇವರಾಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಗಳ ತೀವ್ರತರವಾದ ಕಾರ್ಯಭಾರವನ್ನು ಕಡಿಮೆ ಮಾಡುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆಯು ಅಭಿಪ್ರಾಯಿಸಿತ್ತು.
ಅಲ್ಲದೇ ಗ್ರಾಮೀಣ ಶಿಕ್ಷಣದ ಹಾಗೂ ಏಳಿಗೆಗೆ ಕಾರಣವಾಗುತ್ತದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯನ್ನು ಉತ್ತೇಜಿಸುತ್ತದೆ. ಈ ಪ್ರಸ್ತಾವನೆಯು ವಿಶ್ವವಿದ್ಯಾಲಯಗಳ ಆಡಳಿತ ಸುಧಾರಣೆಗಳಿಗೆ ಹಾಗೂ ಶೈಕ್ಷಣಿಕ ಗುಣಮಟ್ಟದ ವೃದ್ಧಿಗೆ ಅನುವು ಮಾಡಿಕೊಡುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆಯು ಸಮರ್ಥಿಸಿಕೊಂಡಿತ್ತು.
ಆರ್ಥಿಕ ಹೊರೆ ಮುಂದಿಟ್ಟಿರುವ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಾಪನೆಯಾಗಿದ್ದ ಹೊಸ ವಿಶ್ವವಿದ್ಯಾಲಯಗಳನ್ನು ವಿಲೀನ ಅಥವಾ ಮುಚ್ಚಲು ನಿರ್ಧರಿಸಿತ್ತು. ನಂತರ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಮುಚ್ಚುವುದಿಲ್ಲ ಮತ್ತು ವಿಲೀನಗೊಳಿಸುವುದಿಲ್ಲ ಎಂದು ಹೇಳಿದೆ. ಅಲ್ಲದೇ ಈ ಸಂಬಂಧ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿದೆ. ಹೀಗಾಗಿ ಅಧಿಕಾರಿವರ್ಗ ತಮ್ಮ ಹಿಂದಿನ ಸಮರ್ಥನೆ ಅಭಿಪ್ರಾಯವನ್ನೇ ಹಿಂಪಡೆದುಕೊಂಡು ಮುಚ್ಚುವ ಅಥವಾ ವಿಲೀನ ಪ್ರಸ್ತಾವವನ್ನು ಸಿದ್ಧಪಡಿಸುವ ಅನಿವಾರ್ಯತೆಯಲ್ಲಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಸಂಬಂಧ ಸಚಿವ ಸಂಪುಟದಲ್ಲಿ ಮಂಡಿಸಿದ್ದ ಕಡತವು ‘ದಿ ಫೈಲ್’ಗೆ ಲಭ್ಯವಾಗಿದೆ.
ಹೊಸ ವಿವಿಗಳಿಂದ ಆರ್ಥಿಕ ಪರಿಣಾಮಗಳಾಗಲಿದೆಯೇ?
07 ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಉನ್ನತ ಶಿಕ್ಷಣ ಇಲಾಖೆಯು ಪ್ರಸ್ತಾವಿಸಿತ್ತು. ಪ್ರತಿ ವಿಶ್ವವಿದ್ಯಾಲಯದ ವಾರ್ಷಿಕ ಆವರ್ತಕ ವೆಚ್ಚವಾಗಿ ತಲಾ 2.00 ಕೋಟಿಗಳಂತೆ ಒಟ್ಟು 14.00 ಕೋಟಿ ರು ಅರ್ಥಿಕ ಪರಿಣಾಮ ಹೊಂದಿದೆ ಎಂದು ಇಲಾಖೆಯು ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದಕ್ಕೆ ಅರ್ಥಿಕ ಇಲಾಖೆಯೂ ಸಹ 2022ರ ಏಪ್ರಿಲ್ 8ರಂದು ಸಮ್ಮತಿಸಿತ್ತು.
ಆರ್ಥಿಕ ಅಭಿಪ್ರಾಯದಲ್ಲೇನಿದೆ?
ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿದೆ. 2022-23ನೇ ಸಾಲಿನ ಆಯವ್ಯಯ ಘೋಷಣೆ ಕಂಡಿಕೆ 103ರಲ್ಲಿನ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಸಹಮತಿ ನೀಡಿದೆ. ಈ ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ ಯಾವುದೇ ಜಮೀನನ್ನಾಗಲೀ, ನೂತನ ವಾಹನಗಳನ್ನಾಗಲೀ ಖರೀದಿಸುವಂತಿಲ್ಲ. ಹಾಗೂ ಹೊಸ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಈಗಾಗಲೇ ಮಾತೃ ವಿಶ್ವವಿದ್ಯಾಲಯಗಳಿಗೆ ಮಂಜೂರಾಗಿರುವ ಹುದ್ದೆಗಳಲ್ಲಿ ಅವಶ್ಯವಿರುವ ಹುದ್ದೆಗಳನ್ನು ನಿಯೋಜನೆ ಮೇಲೆ ಬಳಸಿಕೊಳ್ಳಬೇಕು. ಈ ಉದ್ದೇಶಕ್ಕಾಗಿ ಯಾವುದೇ ಹೊಸ ಹುದ್ದೆಗಳನ್ನು ಸೃಜಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತಿಲ್ಲ ಎಂದು ತಿಳಿಸಿತ್ತು.
ಇದೇ ಅಭಿಪ್ರಾಯವನ್ನು ವಿಸ್ತರಿಸಿದ್ದ ಆರ್ಥಿಕ ಇಲಾಖೆಯು 2022ರ ಆಗಸ್ಟ್23 ರಂದು ಮತ್ತಷ್ಟು ವಿಸ್ತರಿಸಿತ್ತು.
ಇದಕ್ಕೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯೂ ಸಹ ಅಭಿಪ್ರಾಯಿಸಿತ್ತು.
ಯೋಜನೆ ಇಲಾಖೆಯ ಅಭಿಪ್ರಾಯದಲ್ಲೇನಿದೆ?
ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹೊಸದಾಗಿ 7 ವಿಶ್ವವಿದ್ಯಾಲಯಗಳನ್ನು ವಿನೂತನ ಮಾದರಿಯ್ಲಿ ಸ್ಥಾಪಿಸಲು ಉನ್ನತ ಶಿಕ್ಷಣ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ‘ತಜ್ಞರ ಸಮಿತಿ ಶಿಫಾರಸ್ಸುಗಳಂತೆ 7 ಹಿಂದುಳಿದ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಡಿಜಿಟಲ್ ಮತ್ತು ಕೌಶಲ್ಯಾಧಾರಿತ earn while you learn ಮಾದರಿಯಂತೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಬಗ್ಗೆ ಕ್ರಮ ವಹಿಸಬೇಕು ಎಂದು 2022ರ ಮಾರ್ಚ್ 25ರಂದು ಅಭಿಪ್ರಾಯ ನೀಡಿತ್ತು.
ಈ ಎಲ್ಲಾ ಇಲಾಖೆಗಳ ಅಭಿಪ್ರಾಯ ಮತ್ತು ಸಹಮತಿ ಪಡೆದುಕೊಂಡಿದ್ದ ಹಿಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟವು ಅನುಮೋದನೆ ನೀಡಿತ್ತು. ಮತ್ತು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕ 2022ನ್ನು ಅಧಿನಿಯಮಿತಗೊಳಿಸಲು ವಿಧಾನಮಂಡಲದ ಮುಂದೆ ಮಂಡಿಸಲು ಅನುಮೋದನೆಯನ್ನು ನೀಡಿತ್ತು ಎಂಬುದು ಸಚಿವ ಸಂಪುಟದ ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.
ಇಷ್ಟೆಲ್ಲಾ ಕಸರತ್ತುಗಳನ್ನು ನಡೆಸಿದ ನಂತರ ಹಿಂದಿನ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿತ್ತು. ಆದರೀಗ ಈ ವಿಶ್ವವಿದ್ಯಾಲಯಗಳಿಂದ ಆರ್ಥಿಕ ಹೊರೆಯಾಗುತ್ತಿದೆ ಎಂಬ ಕಾರಣವನ್ನು ಮುಂದಿಟ್ಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು, ಈ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿದೆ.
ಒಂದೊಮ್ಮೆ ಸರ್ಕಾರವು ಇದೇ ನಿರ್ಧಾರಕ್ಕೆ ಬದ್ಧವಾಗಿದ್ದೇ ಆದಲ್ಲಿ ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ಅಧಿಕಾರಿಗಳು, ಮುಚ್ಚುವ ಅಥವಾ ವಿಲೀನಕ್ಕೆ ಹೊಸತೊಂದು ಆರ್ಥಿಕ ಪರಿಣಾಮಗಳನ್ನು ಹುಡುಕಬೇಕು. ಮತ್ತು ಈ ಹಿಂದೆ ಇದೇ ವಿಷಯದಲ್ಲಿ ನೀಡಿದ್ದ ಅಭಿಪ್ರಾಯಕ್ಕೆ ವಿರುದ್ಧವಾಗಿ ಮತ್ತೊಂದು ಹೊಸ ಅಭಿಪ್ರಾಯ ನೀಡಬೇಕಿದೆ.