ಎಸ್‌ಎಲ್‌ಪಿ ದಾಖಲಿಸುವಲ್ಲಿ ವಿಳಂಬ; ನ್ಯಾಯಾಲಯಗಳ ಮುಂದೆ ಮುಜುಗರ, ಖಜಾನೆಗೆ ಭಾರೀ ನಷ್ಟ!

ಬೆಂಗಳೂರು; ಕೋಲ್ಕೊತ್ತಾ  ಮೂಲದ ಉತ್ತಮ್ ಗಾಲ್ವಾ ಫೆರ್‍ಹೋಸ್‌ ಕಂಪನಿಯ ಪ್ರಕರಣವೂ ಸೇರಿದಂತೆ ಒಟ್ಟಾರೆ 26 ಇಲಾಖೆಗಳಲ್ಲಿನ 459 ಪ್ರಕರಣಗಳಲ್ಲಿ ಸುಪ್ರೀಂ ಮತ್ತು ಹೈಕೋರ್ಟ್‌ ಹೊರಡಿಸಿರುವ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸುವಲ್ಲಿ ಅಧಿಕಾರಿ ವರ್ಗದ   ಬೇಜವಾಬ್ದಾರಿಯು ಬಹಿರಂಗವಾಗಿದೆ.

 

ಅಧಿಕಾರಿವರ್ಗದ ಈ ವಿಳಂಬ ಧೋರಣೆಯಿಂದಾಗಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನಲ್ಲಿ ಮುಜುಗರಕ್ಕೊಳಗಾಗಿದೆ. ಅಲ್ಲದೇ ವಿಳಂಬ ಮತ್ತು ನಿರ್ಲಕ್ಷ್ಯದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟವುಂಟಾಗುವ ಸಾಧ್ಯತೆಯೂ ಇದೆ.

 

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿರುವ ರಿಟ್‌ ಅರ್ಜಿ, ರಿಟ್‌ ಅಪೀಲು ಪ್ರಕರಣಗಳಲ್ಲಿ ಅಧಿಕಾರಿವರ್ಗದ ಬೇಜವಾಬ್ದಾರಿ, ನಿರ್ಲಕ್ಷ್ಯ ಮತ್ತು ವಿಳಂಬದ ಕುರಿತು ರಾಜ್ಯದ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಮತ್ತು ಅವರ ಕಚೇರಿಯು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪದೇ ಪದೇ ಪತ್ರ ಬರೆದು ಎಚ್ಚರಿಸುತ್ತಲೇ ಇದೆ. ಆದರೂ ಅಧಿಕಾರಿವರ್ಗ ಮಾತ್ರ ನಿದ್ದೆಯಿಂದ ಎದ್ದಿಲ್ಲ.

 

ಹೀಗಾಗಿ ರಾಜ್ಯದ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರಿಗೆ 2025ರ ಫೆ.12ರಂದು ಕಠಿಣವಾದ ಪತ್ರ ಬರೆದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಚರ್ಚೆ ನಡೆಸಿದ್ದಾರೆ. ಆದರೂ ಅಧಿಕಾರಿವರ್ಗವು ಮೇಲ್ಮನವಿ ಸಲ್ಲಿಸುವಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿದೆ.

 

ಅಡ್ವೋಕೇಟ್‌ ಜನರಲ್‌ ಅವರ ಪತ್ರವನ್ನಾಧರಿಸಿ ಶಾಲಿನಿ ರಜನೀಶ್‌ ಅವರು ಸರ್ಕಾರದ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಟಿಪ್ಪಣಿಯನ್ನು 2025ರ ಫೆ.18ರಂದು ಹೊರಡಿಸಿದ್ದಾರೆ.

 

ಈ ಎರಡೂ ಪತ್ರ, ಟಿಪ್ಪಣಿ ಮತ್ತು ಪ್ರಕರಣವಾರು ಮಾಹಿತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಡ್ವೋಕೇಟ್‌ ಜನರಲ್‌ ಪತ್ರದಲ್ಲೇನಿದೆ?

 

2024 ರಲ್ಲಿ ನಡೆದ ಕೊನೆಯ ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್ ರಾಜ್ಯದಿಂದ 92 ವಿಶೇಷ ಮೇಲ್ಮನವಿ ಸಲ್ಲಿಸಲಾಗಿತ್ತು. ಇವುಗಳನ್ನು ಈಗಾಗಲೇ ಸುಪ್ರೀಂ ಕೋರ್ಟ್‌ ವಿಲೇವಾರಿ ಮಾಡಿದೆ. 92 ಪ್ರಕರಣಗಳಲ್ಲಿ, 13 ವಿಶೇಷ ಮೇಲ್ಮನವಿ ಅರ್ಜಿಗಳನ್ನು ವಜಾಗೊಳಿಸಿದೆ. ಮೇಲ್ಮನವಿಗಳನ್ನು ಸಲ್ಲಿಸುವಲ್ಲಿನ ವಿಳಂಬವೇ ಇದಕ್ಕೆ ಕಾರಣ ಮತ್ತು ಹೆಚ್ಚಿನ ವಿಶೇಷ ಮೇಲ್ಮನವಿ ಅರ್ಜಿಗಳು ಅವಧಿಯನ್ನು ಮೀರಿವೆ ಎಂದು ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

 

ವಿಶೇಷ ಮೇಲ್ಮನವಿ ಅರ್ಜಿಗಳನ್ನು ವಜಾಗೊಳಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌, ಅರ್ಜಿ ಸಲ್ಲಿಸುವಲ್ಲಿ ಆಗಿರುವ ಅಗಾಧ ವಿಳಂಬವನ್ನು ಗಮನಿಸಿದೆ. ಹಾಗೆಯೇ ಇಂತಹ ವಿಳಂಬವನ್ನು ಕ್ಷಮಿಸಲಾಗದು ಮತ್ತು ಅಸಮರ್ಥನೀಯ ಎಂದೂ ವಿವರಿಸಿದೆ ಎಂಬ ಸಂಗತಿಯನ್ನು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

‘ವಿಶೇಷ ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸುವಲ್ಲಿ ಆಗಿರುವ ವಿಳಂಬವನ್ನು ನ್ಯಾಯಾಲಯವು ಕ್ಷಮಿಸುವುದಿಲ್ಲ. ವಿಳಂಬಕ್ಕೆ ಆಗಿರುವ ಸಮಂಜಸವಾಗಿರುವ ಮತ್ತು ವಿಶ್ವಾಸಾರ್ಹವಾಗಿರುವ ವಿವರಣೆಯನ್ನು ಸುಪ್ರೀಂ ಕೋರ್ಟ್‌ ಕಂಡುಕೊಂಡಿಲ್ಲ. ಅರ್ಜಿದಾರರ ಪರ ಹಿರಿಯ ವಕೀಲರು, ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರ ಸಂಬಂಧಿತ ನಿಯಮಗಳನ್ನು ಹಾಜರುಪಡಿಸಬೇಕು. ಮತ್ತು ಆಕ್ಷೇಪಾರ್ಹ ಆದೇಶದ ವಿರುದ್ಧ ಸುಮಾರು ಐದು ವರ್ಷಗಳ ಕಾಲ ವಿಶೇಷ ಮೇಲ್ಮನವಿ ಅರ್ಜಿಯನ್ನು ಸಲ್ಲಿಸದ ಅಧಿಕಾರಿಗಳ ವಿರುದ್ಧ ರಾಜ್ಯವು ಯಾವ ಕ್ರಮ ಕೈಗೊಂಡಿದೆ ಎಂಬುದರ ಕುರಿತು ನ್ಯಾಯಾಲಯಕ್ಕೆ ತಿಳಿಸಬೇಕು,’ ಎಂದು ಶಶಿಕಿರಣ್‌ ಶೆಟ್ಟಿ ಅವರು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಇದೇ ರೀತಿಯ ಸಂದರ್ಭಗಳಲ್ಲಿ, ವಿಶೇಷ ಮೇಲ್ಮವನಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗೆ ಸಲ್ಲಿಸುವಲ್ಲಿಯೂ ಹಲವು ಲೋಪಗಳಾಗಿವೆ. ವಿಶೇಷ ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಲು ಅಡ್ವೊಕೇಟ್ ಜನರಲ್ ಕಚೇರಿಗೆ ಅಧಿಕಾರ ನೀಡಿ ಸರ್ಕಾರಿ ಆದೇಶ ಹೊರಡಿಸಿದೆ. ಆದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅಡ್ವೋಕೇಟ್‌ ಜನರಲ್‌ ಕಚೇರಿಯನ್ನು ಸಂಪರ್ಕಿಸುತ್ತಿಲ್ಲ. ಕಾನೂನು ಅಧಿಕಾರಿಗಳಿಗೆ ಸಹಕರಿಸುತ್ತಿಲ್ಲ. ದಾಖಲೆಗಳನ್ನು ನೀಡುತ್ತಿಲ್ಲ ಎಂದು ಅಧಿಕಾರಿ ವರ್ಗದ ಬೇಜವಾಬ್ದಾರಿಯನ್ನು ಪತ್ರದಲ್ಲಿ ಪ್ರಸ್ತಾಪಿಸಿರುವುದು ಗೊತ್ತಾಗಿದೆ.

 

ಇದಲ್ಲದೆ, ವಿಶೇಷ ಮೇಲ್ಮನವಿ ಅರ್ಜಿಯನ್ನು ಸಲ್ಲಿಸುವಲ್ಲಿ ಯಾವುದೇ ವಿಳಂಬವಾಗಿದ್ದರೆ, ವಿಶೇಷ ಮೇಲ್ಮನವಿ ಅರ್ಜಿಯನ್ನು ಸಲ್ಲಿಸುವವರೆಗೆ ಆಗಿರುವ ಪ್ರತಿ ದಿನದ ವಿಳಂಬವನ್ನು ವಿವರಿಸುವ ವಿಳಂಬ ಟಿಪ್ಪಣಿಯನ್ನು ಸಲ್ಲಿಸಬೇಕು. ವಿಶೇಷ ಮೇಲ್ಮನವಿ ಅರ್ಜಿಯನ್ನು ಅಡ್ವೊಕೇಟ್ ಜನರಲ್ ಕಚೇರಿಗೆ ಸಲ್ಲಿಸಲು ಅಗತ್ಯವಾದ ದಾಖಲೆಗಳನ್ನು ಒದಗಿಸುವಲ್ಲಿ ವಿಳಂಬವಾಗುತ್ತಿದೆ ಎಂಬ ಮಾಹಿತಿಯನ್ನು ಪತ್ರದಲ್ಲಿ ಒದಗಿಸಿರುವುದು ತಿಳಿದು ಬಂದಿದೆ.

 

ಅಡ್ವೊಕೇಟ್ ಜನರಲ್ ಕಚೇರಿಗೆ ಇಲಾಖೆಗಳಿಂದ ಔಪಚಾರಿಕ ಸಂವಹನವನ್ನೂ ನಡೆಸುತ್ತಿಲ್ಲ. ವಿಶೇಷ ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸುವಲ್ಲಿ ಇಲಾಖೆಗಳು ಸಹಕರಿಸಬೇಕು ಎಂದು ಹಲವು ಬಾರಿ ಪತ್ರ, ನೆನಪೋಲೆಗಳನ್ನು ಬರೆಯಲಾಗಿದೆ. ಆದರೆ ಇದಕ್ಕೆ ಅಧಿಕಾರಿವರ್ಗದ ನಡೆಯು ಬೇಜವಾಬ್ದಾರಿತನದಿಂದ ಕೂಡಿದೆ ಎಂದು ವಿವರಿಸಿದೆ.

 

 

‘ಎಲ್ಲಾ ಇಲಾಖಾ ಮುಖ್ಯಸ್ಥರು ಅರ್ಜಿಗಳು/ಮೇಲ್ಮನವಿಗಳನ್ನು ಸಲ್ಲಿಸಲು ಸರ್ಕಾರಿ ಆದೇಶಗಳನ್ನು ಮಿತಿಯ ಅವಧಿಯೊಳಗೆ ಹೊರಡಿಸಬೇಕು. ಮತ್ತು ಸರ್ಕಾರಿ ಆದೇಶ ಹೊರಡಿಸಿದ ತಕ್ಷಣ ಅಡ್ವೊಕೇಟ್ ಜನರಲ್ ಕಚೇರಿಗೆ ವಿಳಂಬ ಟಿಪ್ಪಣಿಯೊಂದಿಗೆ ಅಗತ್ಯವಿರುವ ದಾಖಲೆಗಳನ್ನು ಒದಗಿಸಬೇಕು. ಇಲ್ಲದಿದ್ದಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್ ಮುಂದೆ ರಾಜ್ಯಕ್ಕೆ ಮುಜುಗರದ ಪರಿಸ್ಥಿತಿಯಾಗಿದೆ ಮತ್ತು ರಾಜ್ಯ ಖಜಾನೆಗೆ ಭಾರಿ ನಷ್ಟವನ್ನು ಉಂಟುಮಾಡಬಹುದು,’ ಎಂದು ಸರ್ಕಾರದ ಗಮನ ಸೆಳೆದಿರುವುದು ಗೊತ್ತಾಗಿದೆ.

 

ಈ ಪತ್ರವನ್ನಾಧರಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್‌ ಅವರು 2025ರ ಫೆ.18ರಂದು ಪತ್ರ ಬರೆದಿದ್ದಾರೆ.

 

ಶಾಲಿನಿ ಪತ್ರದಲ್ಲೇನಿದೆ?

 

ನ್ಯಾಯಾಲಯಗಳು ಹೊರಡಿಸಿದ ಆದೇಶದ ವಿರುದ್ಧ ಅರ್ಜಿ, ಮೇಲ್ಮನವಿ ಸಲ್ಲಿಸಲು ವಿಳಂಬವಾಗುತ್ತಿದೆ. ಸರ್ವೋಚ್ಛ ನ್ಯಾಯಾಲಯ ಮತ್ತು ಉಚ್ಛ ನ್ಯಾಯಾಲಯದ ಮುಂದೆ ರಾಜ್ಯಕ್ಕೆ ಮುಜುಗರದ ಪರಿಸ್ಥಿತಿ ಉಂಟಾಗಲಿದೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟವುಂಟಾಗುವ ಸಾಧ್ಯತೆ ಇದೆ. ಹೀಗಾಗಿ ಕಾಲಮಿತಿ ಅವಧಿಯೊಳಗೆ ಮೇಲ್ಮನವಿ ಸಲ್ಲಿಸಬೇಕು. ಅಡ್ವೋಕೇಟ್‌ ಜನರಲ್‌ ಕಚೇರಿಯಿಂದ ಕೋರುವ ಎಲ್ಲಾ ಮಾಹಿತಿ ಮತ್ತು ಅಗತ್ಯ ದಾಖಲಾತಿಗಳನ್ನು ಒದಗಿಸಬೇಕು ಎಂದು ಸೂಚಿಸಿದ್ದಾರೆ.

 

 

‘ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳ ಕಚೇರಿಯು 2024ರ ಅಕ್ಟೋಬರ್‍‌ 16, 2025ರ ಜನವರಿ 28ರಂದು ಸೂಕ್ತ ನಿರ್ದೇಶನ ನೀಡಿತ್ತು. ಆದರೂ ಇಲಾಖೆಗಳು ಕೆಲವು ಪ್ರಕರಣಗಳಲ್ಲಿ ಯಾವುದೇ ವೈಯಕ್ತಿಕ ಕ್ರಮವಹಿಸಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗಾಗಿ ವೈಯಕ್ತಿಕ ಗಮನಹರಿಸಬೇಕು,’ ಎಂದು ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್‌ ಅವರು ಅಧಿಕಾರಿಗಳಿಗೆ ಸೂಚಿಸಿರುವುದು ತಿಳಿದು ಬಂದಿದೆ.

 

ಅಡ್ವೋಕೇಟ್‌ ಜನರಲ್‌ ಕಚೇರಿಯಲ್ಲಿ ಬಾಕಿ ಉಳಿದಿರುವ ಸರ್ಕಾರಿ ಆದೇಶಗಳ ಇಲಾಖಾವಾರು ಪಟ್ಟಿಯನ್ನು ಪರಿಶೀಲಿಸಬೇಕು. ಈ ಪ್ರಕರಣಗಳ ಕುರಿತು ಸರ್ಕಾರಿ ವಕೀಲರನ್ನು ಕೂಡಲೇ ಸಂಪರ್ಕಿಸಬೇಕು. ಅಗತ್ಯ ದಾಖಲಾತಿ ಮತ್ತು ವಿಳಂಬಕ್ಕೆ ಆಗಿರುವ ಟಿಪ್ಪಣಿಯನ್ನು ಒದಗಿಸಬೇಕು. ಮತ್ತು ಇಲಾಖೆಯಲ್ಲಿ ಇಂತಹ ಯಾವುದೇ ಪ್ರಕರಣಗಳು ಬಾಕಿ ಇರದಂತೆ ಕ್ರಮವಹಿಸಬೇಕು ಎಂದೂ ಮುಖ್ಯ ಕಾರ್ಯದರ್ಶಿಗಳು ನಿರ್ದೇಶನ ನೀಡಿರುವುದು ಗೊತ್ತಾಗಿದೆ.

 

 

ಕೃಷಿ ಇಲಾಖೆಯಲ್ಲಿ 5 ರಿಟ್‌ ಅರ್ಜಿಗಳು ಬಾಕಿ ಇವೆ. ಪಶು ಸಂಗೋಪನೆ ಇಲಾಖೆಯಲ್ಲಿ 2, ಹಿಂದುಳಿದ ವರ್ಗದ ಇಲಾಖೇಯಲ್ಲಿ 1, ವಾಣಿಜ್ಯ ಕೈಗಾರಿಕೆಯಲ್ಲಿ 3, ಸಹಕಾರ ಇಲಾಖೆಯಲ್ಲಿ 5, ಡಿಪಿಎಆರ್‍‌ನಲ್ಲಿ 17, ಶಿಕ್ಷಣ ಇಲಾಖೆಯಲ್ಲಿ 46, ಇಂಧನದಲ್ಲಿ 1, ಆರ್ಥಿಕ/ಅಬಕಾರಿಯಲ್ಲಿ 9, ಅರಣ್ಯದಲ್ಲಿ 6, ಆರೋಗ್ಯ ಕುಟುಂಬ ಕಲ್ಯಾಣದಲ್ಲಿ 14, ಗೃಹ ಇಲಾಖೆಯಲ್ಲಿ 19, ತೋಟಗಾರಿಕೆಯಲ್ಲಿ 10, ವಾರ್ತಾ ಇಲಾಖೆಯಲ್ಲಿ 1, ಸಣ್ಣ ನೀರಾವರಿಯಲ್ಲಿ 3, ಅಭಿಯೋಜನೆ ಇಲಾಖೆಯಲ್ಲಿ 2, ಪಿಡಬ್ಲ್ಯೂಡಿಯಲ್ಲಿ 9, ಆರ್‍‌ಡಿಪಿಆರ್‍‌ನ್ಲಿ 14, ಕಂದಾಯದಲ್ಲಿ 96, ಕೌಶಲ್ಯಾಭಿವೃದ್ಧಿಯಲ್ಲಿ 3, ಸಾರಿಗೆಯಲ್ಲಿ 7, ನಗರಾಭಿವೃದ್ಧಿಯಲ್ಲಿ 5, ಜಲಸಂಪನ್ಮೂಲದಲ್ಲಿ 3 ಅರ್ಜಿ ಸೇರಿ ಒಟ್ಟಾರೆ 285 ರಿಟ್‌ ಅರ್ಜಿಗಳು ಬಾಕಿ ಇವೆ.

 

 

 

ಅದೇ ರೀತಿ ರಿಟ್‌ ಅಪೀಲ್‌ಗಳ ಪೈಕಿ ಶಿಕ್ಷಣ ಇಲಾಖೆಯಲ್ಲಿ ಅತೀ ಹೆಚ್ಚು ಎಂದರೇ 85 ಪ್ರಕರಣಗಳಲ್ಲಿ ಬಾಕಿ ಇವೆ. ತೋಟಗಾರಿಕೆಯಲ್ಲಿ 14, ಕಂದಾಯದಲ್ಲಿ ಉತ್ತಮ್‌ ಗಾಲ್ವಾ ಫೆರ್‍ಹೋಸ್‌ ಮೂರನೇ ಪ್ರತಿವಾದಿಯಾಗಿರುವುದು ಸೇರಿದಂತೆ 40 ಪ್ರಕರಣಗಳಿವೆ. ಒಟ್ಟಾರೆ 172, ಸಿವಿಲ್‌ ಪ್ರಕರಣಗಳಲ್ಲಿ 2 ಅರ್ಜಿಗಳು ಬಾಕಿ ಇವೆ ಎಂಬುದು ತಿಳಿದು ಬಂದಿದೆ.

SUPPORT THE FILE

Latest News

Related Posts