ಉದ್ಯಾನದಿಂದ ವಾಣಿಜ್ಯ ವಲಯಕ್ಕೆ ಮಾರ್ಪಾಡಿಗೆ ಕೋರಿಕೆ; ಸಿದ್ದಾರ್ಥ ವಿಹಾರ ಟ್ರಸ್ಟ್‌ ಸುತ್ತ ಮತ್ತೊಂದು ವಿವಾದ

ಬೆಂಗಳೂರು; ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸೇರಿದಂತೆ ಅವರ ಕುಟುಂಬ ಸದಸ್ಯರು  ಟ್ರಸ್ಟಿಯಾಗಿರುವ ಸಿದ್ದಾರ್ಥ ವಿಹಾರ ಟ್ರಸ್ಟ್‌, ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದೆ.

 

ಕಲ್ಬುರ್ಗಿಯ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಪರಿಷ್ಕೃತ ಮಹಾ ಯೋಜನೆಯಡಿಯಲ್ಲಿ ಉದ್ಯಾನಕ್ಕೆ ಮೀಸಲಿರಿಸಿದ್ದ ಜಮೀನುಗಳ ವ್ಯಾಪ್ತಿಯಲ್ಲಿರುವ ಸಿದ್ದಾರ್ಥ ವಿಹಾರ ಟ್ರಸ್ಟ್‌ನ  ಜಮೀನನ್ನು,  ವಾಣಿಜ್ಯ ಉಪಯೋಗಕ್ಕೆ ಬದಲಾಯಿಸಲು ಪ್ರಾಧಿಕಾರವು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

 

ಈಗಾಗಲೇ ಕೆಐಎಡಿಬಿ, ಬಿಡಿಎ ಮತ್ತು ಕಂದಾಯ ಇಲಾಖೆಯ ಮೂಲಕ ಜಮೀನು ಮತ್ತು ಸಿ ಎ ನಿವೇಶನಗಳ ವಿವಾದದಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್‌ ಸಿಲುಕಿದೆ. ಇದರ ಬೆನ್ನಲ್ಲೇ ಕಲ್ಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರವು 2025ರ ಫೆ.10ರಂದು ಹೊರಡಿಸಿರುವ ಪ್ರಕಟಣೆಯು ಟ್ರಸ್ಟ್‌ನ್ನು ಮತ್ತೊಂದು ವಿವಾದಕ್ಕೆ ತಳ್ಳಿದಂತಾಗಿದೆ.

 

ಪ್ರಕಟಣೆಯಲ್ಲೇನಿದೆ?

 

ಕಲ್ಬುರ್ಗಿ ಜಿಲ್ಲೆ ಕಲ್ಬುರ್ಗಿ ತಾಲೂಕಿನ ಕುಸನೂರ ಗ್ರಾಮದ ಸರ್ವೆ ನಂಬರ್‍‌ 82/3ರಲ್ಲಿ 02 ಎಕರೆ 07 ಗುಂಟೆಯ ಜಮೀನಿಗೆ ಉದ್ಯಾನ ವಲಯದಿಂದ ವಾಣಿಜ್ಯ ಉಪಯೋಗಕ್ಕೆ ನಿಗದಿಗೊಳಿಸಬೇಕು ಎಂದು ಸಿದ್ದಾರ್ಥ ವಿಹಾರ ಟ್ರಸ್ಟ್‌ನ ಕಾರ್ಯದರ್ಶಿಗಳು ಕೋರಿದ್ದಾರೆ. ಅನುಮೋದನೆಯಾಗಿರುವ ಪರಿಷ್ಕೃತ-2 ಮಹಾ ಯೋಜನೆಯಲ್ಲಿ ಉದ್ಯಾನ ಉದ್ದೇಶಕ್ಕಾಗಿ ಕಾಯ್ದಿರಿಸಿದೆ. ಕಲ್ಬುರ್ಗಿ ನಗರಕ್ಕೆ ಮಹಾ ಯೋಜನೆಯು ಅನುಮೋದನೆಯಾಗಿ ಸುಮಾರು 5 ವರ್ಷಗಳಾಗಿವೆ. ಕೆಟಿಸಿಪಿ ಕಾಯ್ದೆ 1961ರ ಕಲಂ 69(2)ರ ಅನ್ವಯ ಈ ಜಮೀನನ್ನು ಸ್ವಾಧೀನಪಡಿಸಿಕೊಂಡಿಲ್ಲ. ಹೀಗಾಗಿ ಹಾಲಿ ಭೂ ಉಪಯೋಗವು ರದ್ದಾಗಿರುತ್ತದೆ ಎಂದು ತಿಳಿಸಿದೆ.

 

 

ಅದೇ ರೀತಿ ಈ ಜಮೀನಿಗೆ ಹಾಲಿ ರಸ್ತೆಯಿಂದ ಸಂಪರ್ಕ ಹೊಂದಿದೆ. ಅರ್ಜಿದಾರರು ಈ ಭೂ ಉಪಯೋಗ ನಿಗದೀಕರಣದಿಂದ ನಗರ ಯೋಜನೆ ಬೆಳವಣಿಗೆ ಸಾಧ್ಯವಾಗಲಿದೆ ಎಂದಿದ್ದಾರೆ. ಹಾಗೆಯೇ ಈ ಜಮೀನಿಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಿದೆ. ನಿರುದ್ಯೋಗಿ ಜನರಿಗೆ ಉದ್ಯೋಗ ಸಿಗಲಿದೆ ಹಾಗೂ ನಿವೇಶನ ರಹಿತ ಜನರಿಗೆ ನಿವೇಶನಗಳನ್ನು ಒದಗಿಸಲಿದೆ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಎಂಬ ಅಂಶಗಳನ್ನು ಕೋರಿಕೆಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ವಿವರಿಸಿದೆ.

 

 

ಈ ಜಮೀನಿನ ಸುತ್ತಲೂ ವಾಣಿಜ್ಯ ಹಾಗೂ ಇತರೆ ಅಭಿವೃದ್ಧಿ ಬರುತ್ತಿದೆ. ಅವುಗಳಿಗೆ ಪೂರಕವಾಗಿ ತಮ್ಮ ಜಮೀನಿನ ಸುತ್ತಲೂ ವಾಣಿಜ್ಯ ವಿನ್ಯಾಸ ಅಭಿವೃದ್ದಿಪಡಿಸುವ ಸದುದ್ದೇಶ ಹೊಂದಿರುತ್ತದೆ. ಈ ಕಾರಣಗಳನ್ನು ಮುಂದಿರಿಸಿ ಭೂ ಉಪಯೋಗ ನಿಗದಿಗೊಳಿಸಬೇಕು ಎಂದು ಟ್ರಸ್ಟ್‌ ಕೋರಿರುವುದು ಪ್ರಕಟಣೆಯಿಂದ ಗೊತ್ತಾಗಿದೆ.

 

ಕಲ್ಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರವು ಹೊರಡಿಸಿರುವ ಈ ಪ್ರಕಟಣೆಗೆ ಆಂದೋಲಾ ಸಿದ್ದಲಿಂಗಸ್ವಾಮಿ ಎಂಬುವರು ಆಕ್ಷೇಪಣೆ ಸಲ್ಲಿಸಿದ್ದಾರೆ.

 

ಆಕ್ಷೇಪಣೆಯಲ್ಲೇನಿದೆ?

 

ಕಲ್ಬುರ್ಗಿ ತಾಲೂಕಿನ ಕುಸನೂರ ಗ್ರಾಮದ ಸರ್ವೆ ನಂಬರ್‍‌ 82/3ರಲ್ಲಿರುವ 2 ಎಕರೆ 07 ಗುಂಟೆ ಜಮೀನನ್ನು ಕಲ್ಬುರ್ಗಿ ನಗರದ ಪರಿಷ್ಕೃತ ಮಹಾ ಯೋಜನೆಯಲ್ಲಿ ಉದ್ಯಾನಕ್ಕೆ ಕಾಯ್ದಿರಿಸಿದೆ. ಈ ಜಮೀನಿನ ಪಕ್ಕದಲ್ಲಿರುವ ಸರ್ವೆ ನಂಬರ್‍‌ 83ರಲ್ಲಿ 33 ಎಕರೆ ಜಮೀನನ್ನು ಪ್ರಾಧಿಕಾರದಿಂದ ಎಕರೆಗೆ ಸುಮಾರು 50 ಲಕ್ಷ ರು. ನಂತೆ ಸಂದಾಯ ಮಾಡಿ ಖರೀದಿಸಿದೆ. ಖರೀದಿಸಿದ ಉದ್ದೇಶ ಉದ್ಯಾನ ನಿರ್ಮಾಣಕ್ಕೆ. ಸದ್ಯ ಈ ಜಮೀನಿನಲ್ಲಿ ಉದ್ಯಾನ ನಿರ್ಮಾಣ ಮಾಡಿಲ್ಲ. ಬದಲಿಗೆ ಕೇವಲ ಕಾಂಪೌಂಡ್‌ ಮಾತ್ರ ನಿರ್ಮಾಣ ಮಾಡಿ ಜಮೀನನ್ನು ಖಾಲಿ ಬಿಟ್ಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವುದು ಗೊತ್ತಾಗಿದೆ.

 

 

ಕೋಟ್ಯಂತರ ರುಪಾಯಿ ಸಾರ್ವಜನಿಕರ ತೆರಿಗೆ ಹಣದಿಂದ ಖರೀದಿಸಿದ ಉದ್ದೇಶ ಉದ್ಯಾನ ಮತ್ತು ಇದರ ಪಕ್ಕದಲ್ಲಿ ಇರುವ ಸರ್ವೆ ನಂಬರ್‍‌ 82 ಕೂಡ ಉದ್ಯಾನ ವಲಯದಿಂದ ಬದಲಾವಣೆ ಮಾಡಿ ವಾಣಿಜ್ಯ ಉಪಯೋಗಕ್ಕೆ ಮಾರ್ಪಾಡಿಸಲು ಸ್ವಹಿತಾಸಕ್ತಿ ಇದೆ. ಇದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ಆಕ್ಷೇಪಣೆಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಕೋಟ್ಯಂತರ ರುಪಾಯಿ ಖರ್ಚು ಮಾಡಿ ಖರೀದಿಸಿದ ಜಮೀನಿನ ಪಕ್ಕದಲ್ಲೇ ಈ ಜಮೀನು ಕೂಡ ಇರುವುದರಿಂದ ಉದ್ಯಾನಕ್ಕೆ ಮೀಸಲಿರಿಸಿದ್ದ ಪ್ರದೇಶವನ್ನು ಅಭಿವೃದ್ದಿಪಡಿಸಿ ಕಲ್ಬುರ್ಗಿಯ ಸಾರ್ವಜನಿಕರಿಗೆ ಅತ್ಯಾಧುನಿಕ ಉದ್ಯಾನ ನಿರ್ಮಾಣ ಮಾಡಬೇಕು. ಪಕ್ಕದಲ್ಲೇ ಇರುವ ಐತಿಹಾಸಿಕ ಬುದ್ಧ ವಿಹಾರಕ್ಕೆ ಭೇಟಿ ನೀಡುವ ಸಾವಿರಾರು ಜನರಿಗೆ ಉದ್ಯಾನ ಅನುಕೂಲವಾಗಲಿದೆ ಎಂದು ಕೋರಿದ್ದಾರೆ.

 

ವಾಣಿಜ್ಯ ಚಟುವಟಿಕೆಗಳನ್ನು ಮಾಡುವುದರಿಂದ ಐತಿಹಾಸಿಕ ಬುದ್ಧ ವಿಹಾರಕ್ಕೆ ಭೇಟಿ ನೀಡುವವರಿಗೆ ತೊಂದರೆಯಾಗುವ ಸಂಭವವಿದೆ. ಉದ್ಯಾನಕ್ಕೆ ಮೀಸಲಿರಿಸಿದ್ದ ಸರ್ವೆ ನಂಬರ್‍‌ 83, ಮತ್ತು 82ರಲ್ಲಿನ ಸಿದ್ದಾರ್ಥ ವಿಹಾರ ಟ್ರಸ್ಟ್‌ 2 ಎಕರೆ 07 ಗುಂಟೆ ಜಮೀನಿನಲ್ಲಿ ಉದ್ಯಾನ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

 

ಈ ಜಮೀನಿನ ಪಕ್ಕದಲ್ಲಿ ಶಾಲಾ ಕಾಲೇಜು ಮತ್ತು ಬುದ್ಧ ಮಂದಿರ ಇರುವುದರಿಂದ ವಾಣಿಜ್ಯ ಉಪಯೋಗಕ್ಕ ಯೋಗ್ಯವಾದ ಜಮೀನು ಇಲ್ಲದೇ ಇರುವುದರಿಂದ ಟ್ರಸ್ಟ್‌ನ ಪ್ರಸ್ತಾವನೆಯನ್ನು ಪ್ರಾಧಿಕಾರವು ತಿರಸ್ಕರಿಸಬೇಕು. ಮತ್ತು ಉದ್ಯಾನ ವಲಯದಿಂದ ವಾಣಿಜ್ಯ ಉಪಯೋಗಕ್ಕೆ ಬದಲಾಯಿಸಬಾರದು ಎಂದು ಆಂದೋಲಾದ ಸಿದ್ದಲಿಂಗಸ್ವಾಮಿ ಎಂಬುವರು ಆಕ್ಷೇಪಣೆ ಮೂಲಕ ಕೋರಿರುವುದು ಗೊತ್ತಾಗಿದೆ.

 

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು 14 ಬದಲಿ ನಿವೇಶನಗಳನ್ನು ಮುಡಾಕ್ಕೆ ಹಿಂದಿಗಿರುಗಿಸಿರುವ ಬೆನ್ನಲ್ಲೇ ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರು ಟ್ರಸ್ಟಿಗಳಾಗಿರುವ ಸಿದ್ದಾರ್ಥ ವಿಹಾರ ಟ್ರಸ್ಟ್‌ ಕೂಡ ವಿವಾದಿತ  ಸಿ ಎ ನಿವೇಶನವನ್ನು ಹಿಂದಿರುಗಿಸಿತ್ತು.

 

‘ದಿ ಫೈಲ್‌’ ಸರಣಿ ವರದಿಗಳ ಪರಿಣಾಮ; 5 ಎಕರೆ ವಿಸ್ತೀರ್ಣದ ಸಿ ಎ ನಿವೇಶನ ಹಿಂದಿರುಗಿಸಿದ ಸಿದ್ದಾರ್ಥ ವಿಹಾರ ಟ್ರಸ್ಟ್‌

 

ಸಿದ್ದಾರ್ಥ ವಿಹಾರ್‌ ಟ್ರಸ್ಟ್‌ಗೆ 5 ಎಕರೆ ವಿಸ್ತಿರ್ಣದ ಸಿ ಎ ನಿವೇಶನವನ್ನು ಹಂಚಿಕೆ ಮಾಡಿರುವುದನ್ನು ‘ದಿ ಫೈಲ್‌’, ಎಲ್ಲಾ ಮುಖ್ಯ ವಾಹಿನಿಗಳಿಗೂ ಮೊದಲೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.  ಈ ವರದಿ ಆಧರಿಸಿ ರಾಜ್ಯಸಭೆ ಸದಸ್ಯ ಲೆಹರ್‌ ಸಿಂಗ್‌ ಮತ್ತು ವಿದಾನ ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು.

 

 

 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬಸ್ಥರು ಟ್ರಸ್ಟಿಗಳಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಏರೋಸ್ಪೇಸ್‌ ಮತ್ತು ಹೈಟೆಕ್‌ ಡಿಫೆನ್ಸ್‌ ಪಾರ್ಕ್‌ನಲ್ಲಿ ಹಂಚಿಕೆ ಮಾಡಿರುವ ಸಿ ಎ ನಿವೇಶನಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿದ್ದ ಗಡುವು ಮೀರಿದ್ದರೂ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಯಾವುದೇ ವಿವರಣೆಯನ್ನು ನೀಡಿರಲಿಲ್ಲ.

 

ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ 5 ಎಕರೆ; ಗಡುವು ಮೀರಿದರೂ ರಾಜ್ಯಪಾಲರಿಗೆ ಸಲ್ಲಿಕೆಯಾಗದ ವರದಿ, ಸಚಿವರ ಒತ್ತಡ?

ರಾಜ್ಯಪಾಲರು ನೀಡಿದ್ದ ನಿರ್ದೇಶನವನ್ನು ಪಾಲಿಸುವ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದರು. ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿಯ ಸಿಇಒಗೆ ಪತ್ರವನ್ನೂ ಬರೆದಿದ್ದರು. ಆದರೆ ಈ ಪತ್ರಕ್ಕೆ ಕೆಐಎಡಿಬಿಯು ಇದುವರೆಗೂ ಯಾವುದೇ ವರದಿಯನ್ನು ನೀಡಿಲ್ಲ.

 

ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ 5 ಎಕರೆ; ಪ್ಯಾನ್‌ಕಾರ್ಡ್‌ ಸಲ್ಲಿಸದಿದ್ದರೂ ಪ್ರಸ್ತಾವನೆ ಪರಿಗಣಿಸಲು ಶಿಫಾರಸ್ಸು

 

 

 

 

ಸಿದ್ಧಾರ್ಥ ವಿಹಾರ್‍‌ ಟ್ರಸ್ಟ್‌ನ ಭಾಗವಾಗಿರುವ  ಅಂತರಾಷ್ಟ್ರೀಯ ಪಾಲಿ, ಸಂಸ್ಕೃತ,  ತೌಲನಿಕ ತತ್ವಶಾಸ್ತ್ರ ಟ್ರಸ್ಟ್‌ಗೆ 19 ಎಕರೆ ವಿಸ್ತೀರ್ಣದ ಜಮೀನನ್ನು ಉಚಿತವಾಗಿ ಮಂಜೂರು ಮಾಡಿರುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇರಲಿಲ್ಲ ಎಂದು ಇಂಡಿಯನ್‌ ಆಡಿಟ್‌ ಅಂಡ್‌ ಅಕೌಂಟೆಂಟ್‌ ಜನರಲ್‌  ಅಭಿಪ್ರಾಯಿಸಿದ್ದರು.

 

ಉಚಿತವಾಗಿ 19 ಎಕರೆ ಮಂಜೂರು; ಸಾರ್ವಜನಿಕ ಹಿತಾಸಕ್ತಿಯಿಲ್ಲ, ನಿಯಮ ಪಾಲನೆಯಾಗಿಲ್ಲವೆಂದ ಎಜಿ

 

 

ಸಿದ್ಧಾರ್ಥ ವಿಹಾರ್‍‌ನ ಟ್ರಸ್ಟ್‌ನ ಭಾಗವಾಗಿರುವ ಅಂತರರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೂ 2016-17ರಲ್ಲೇ ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ಗುತ್ತಿಗೆ ಆಧಾರದ ಮೇಲೆ 19 ಎಕರೆ ಜಮೀನು ಮಂಜೂರಾಗಿತ್ತು. ನಂತರ   ಅಂದಾಜು 40 ಕೋಟಿ ರು ಬೆಲೆಬಾಳುವ ಇದೇ ಜಮೀನನ್ನು  ಉಚಿತವಾಗಿ ಮಂಜೂರು ಮಾಡಿ ಆದೇಶ ಹೊರಡಿಸಿತ್ತು.

 

ಪಾಲಿ, ಸಂಸ್ಕೃತ, ತತ್ವಶಾಸ್ತ್ರದ ಟ್ರಸ್ಟ್‌ಗೂ 19 ಎಕರೆ; ಗುತ್ತಿಗೆ ಆದೇಶ ಮಾರ್ಪಾಡಿಸಿ ಉಚಿತವಾಗಿ ಮಂಜೂರು

ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಕೆಎಐಡಿಬಿಯಿಂದ ಮಂಜೂರಾಗಿದ್ದ   5 ಎಕರೆ ವಿಸ್ತೀರ್ಣದ ಸಿ ಎ ನಿವೇಶನದ   ಪ್ರಕರಣವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.  ರಾಷ್ಟ್ರೋತ್ಥಾನ ಪರಿಷತ್‌ಗೆ ಶೈಕ್ಷಣಿಕ ಉದ್ದೇಶಗಳಿಗಾಗಿ ರಿಯಾಯಿತಿ ದರದಲ್ಲಿ ಜಮೀನುಗಳನ್ನು ನೀಡಿರುವ ಬಗ್ಗೆ ಪ್ರಸ್ತಾಪಿಸಿದ್ದ  ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್‌ ಖರ್ಗೆ, ಎಂ ಬಿ ಪಾಟೀಲ್‌ ಅವರು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದರು ಮತ್ತು ಸಿ ಎ ನಿವೇಶನ ಹಂಚಿಕೆಯನ್ನು  ಸಮರ್ಥಿಸಿಕೊಂಡಿದ್ದರು.

 

ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ ಜಮೀನು; ಅಧಿಕಾರ ದುರುಪಯೋಗ, ಹಿತಾಸಕ್ತಿ ಸಂಘರ್ಷ?

ಇದರ ಪ್ರಕಾರ ಕುಸನೂರು ಗ್ರಾಮದ ಸರ್ವೆ ನಂಬರ್‍‌ 88/1ರಲ್ಲಿ ಪಾಲಿ ಮತ್ತು ಸಂಸ್ಕೃತ ಭಾಷೆಗಳ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಅಂತರರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೆ 16.00 ಎಕರೆ ಜಮೀನನ್ನು 30 ವರ್ಷಗಳ ಅವಧಿಗೆ ಪ್ರಚಲಿತ ಮಾರುಕಟ್ಟೆ ಬೆಲೆಯ ಶೇ.10ರಷ್ಟು ಗುತ್ತಿಗೆ ಮೊತ್ತ ನಿಗದಿಪಡಿಸಿತ್ತು. ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಗುತ್ತಿಗೆ ಮೊತ್ತವನ್ನು ಶೇ.10ಕ್ಕೆ ಹೆಚ್ಚಿಸುವ ಷರತ್ತಿಗೆ ಒಳಪಟ್ಟು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿತ್ತು.

 

ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ; ರಾಹುಲ್‌ಗಾಂಧಿ, ಸಿಎಂಗೆ 2 ತಿಂಗಳ ಹಿಂದೆಯೇ ಸಲ್ಲಿಕೆಯಾಗಿತ್ತು ದೂರು

ಇದಾದ ನಂತರ ಸಂಸ್ಥೆಯು 2016ರ ಮಾರ್ಚ್‌ಮತ್ತು ಆಗಸ್ಟ್‌ನಲ್ಲಿ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿತ್ತು.

 

ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ; ಹಿತಾಸಕ್ತಿ ಸಂಘರ್ಷದ ಕುರಿತು ಉಸಿರೆತ್ತದ ಕಾಂಗ್ರೆಸ್‌

ಈ ಕೋರಿಕೆಯನ್ನು ಅಂದಿನ ಕಾಂಗ್ರೆಸ್‌ ಸರ್ಕಾರವು ಪರಿಗಣಿಸಿತ್ತು. ಅದರಂತೆ 2017ರ ಮಾರ್ಚ್‌ 15ರಂದು ಆದೇಶ ಹೊರಡಿಸಿತ್ತು. ಇದರ ಪ್ರಕಾರ ಸರ್ವೆ ನಂಬರ್‍‌ 88/1ರಲ್ಲಿ ಕ್ರಮವಾಗಿ 16 ಎಕರೆ ಮತ್ತು 3 ಎಕರೆ ಸೇರಿ ಒಟ್ಟು 19 ಎಕರೆ ಜಮೀನನ್ನು ಪಾಲಿ ಮತ್ತು ಸಂಸ್ಕೃತ ಭಾಷೆಗಳ ಸಂಶೋಧನಾ ಕೇಂದ್ರ ಸ್ಥಾಪಿಸಲು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಜಮೀನು ಮಂಜೂರು ಮಾಡಿರುವುದನ್ನು ಮಾರ್ಪಡಿಸಿತ್ತು.

 

ಆಟೋಮೊಬೈಲ್‌ ವಲಯದಲ್ಲಿ ಹೂಡಿಕೆ; ಪೂರ್ವಾನುಭವ ದಾಖಲೆಯಿಲ್ಲ, ಪ್ರವರ್ತಕರ ವಿವರಗಳಿಲ್ಲ

ಅಲ್ಲದೇ  ನಿಯಮ 23ನ್ನು ಸಡಿಲಿಸಿ ಅಂತರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೆ ಉಚಿತವಾಗಿ ಮಂಜೂರು ಮಾಡಿ ಆದೇಶಿಸಿರುವುದನ್ನು ಸ್ಮರಿಸಬಹುದು. ಅಲ್ಲದೇ ಈ ಟ್ರಸ್ಟ್‌ಗೆ ರಿಯಾಯಿತಿ ದರದಲ್ಲಿ ನಿವೇಶನದ ಬೆಲೆ ಇಳಿಕೆ ಮಾಡಲು ಅವಕಾಶವಿಲ್ಲ ಎಂದು ಕಾನೂನು ಇಲಾಖೆಯೂ ಸಹ ಅಭಿಪ್ರಾಯ ನೀಡಿತ್ತು.

 

ಸಿ ಎ ನಿವೇಶನದ ಬೆಲೆ; ರಿಯಾಯಿತಿಗೆ ಸಿದ್ದಾರ್ಥ ವಿಹಾರ ಟ್ರಸ್ಟ್‌ ಅರ್ಹವಿಲ್ಲ, ಮುನ್ನೆಲೆಗೆ ಬಂದ ಕಾನೂನು ಅಭಿಪ್ರಾಯ

ಸಿದ್ದಾರ್ಥ ವಿಹಾರ ಟ್ರಸ್ಟ್‌ ಮೂಲಕ ಜಮೀನು ಹಂಚಿಕೆಯಲ್ಲಿ ಹಲವು ಲೋಪಗಳಾಗಿವೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಲೋಕಾಯುಕ್ತದಲ್ಲಿ ದೂರು ದಾಖಲಿಸಿದೆ.

ಖರ್ಗೆ ಕುಟುಂಬದಿಂದ ಜಮೀನು ಕಬಳಿಕೆ ಆರೋಪ; ಟ್ರಸ್ಟಿಗಳ ವಿರುದ್ಧ ದೂರು, ದಾಖಲಾಗದ ಎಫ್‌ಐಆರ್

ಇದುವರೆಗೂ ಸಹ ಲೋಕಾಯುಕ್ತ ಸಂಸ್ಥೆಯು ಎಫ್‌ಐಆರ್‍‌ ದಾಖಲಿಸಿಲ್ಲ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts