ಬೆಂಗಳೂರು: ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತ ಮತ್ತು ಮಾಹಿತಿ ಆಯುಕ್ತರ ನೇಮಕಾತಿಯನ್ನು ಪ್ರಶ್ನಿಸಿ ಸಲ್ಲಿಸಿರುವ ರಿಟ್ ಅರ್ಜಿಯು ರಾಜ್ಯ ಕಾಂಗ್ರೆಸ್ ಸರ್ಕಾರದ ಕುತ್ತಿಗೆಗೆ ಬಂದಂತಾಗಿದೆ.
ಶೋಧನಾ ಸಮಿತಿಯನ್ನು (ಸರ್ಚ್ ಕಮಿಟಿ) ರಚಿಸದೇ ಮುಖ್ಯಮಾಹಿತಿ ಆಯುಕ್ತ ಮತ್ತು ಮಾಹಿತಿ ಆಯುಕ್ತರ ನೇಮಕಾತಿ ಮಾಡಿರುವುದೇ ಇದಕ್ಕೆ ಮೂಲ ಕಾರಣ. ಮಾಹಿತಿ ಆಯುಕ್ತರ ನೇಮಕಾತಿಗೂ ಮುನ್ನ ಶೋಧನಾ ಸಮಿತಿ (ಸರ್ಚ್ ಕಮಿಟಿ) ರಚಿಸಬೇಕು ಎಂದು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪಾಲಿಸಿಲ್ಲ.
2019ರಿಂದಲೂ ಸರ್ಚ್ ಕಮಿಟಿ ರಚನೆ ಮಾಡದೆಯೇ ರಾಜ್ಯ ಮಾಹಿತಿ ಆಯೋಗಕ್ಕೆ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರನ್ನು ನೇಮಿಸಲಾಗುತ್ತಿದೆ. ಹಿಂದಿನ ಸರ್ಕಾರಗಳು ಅನುಸರಿಸಿದ್ದ ಪ್ರಕ್ರಿಯೆಯನ್ನೇ ಮುಂದುವರಿಸಿರುವ ಕಾರಣ ಕಾಂಗ್ರೆಸ್ ಸರ್ಕಾರವು ಹೈಕೋರ್ಟ್ ಕಟಕಟೆಯಲ್ಲಿ ನಿಲ್ಲುವಂತಾಗಿದೆ.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಶೋಧನಾ ಸಮಿತಿಯನ್ನು ರಚಿಸಲೇಬೇಕು ಎಂದು ನಿರ್ದೇಶಿಸಿಲ್ಲ. ಹೀಗಾಗಿ ಶೋಧನಾ ಸಮಿತಿ ರಚನೆ ಅಗತ್ಯವೇ ಇಲ್ಲ ಎಂದು ಈ ಮೊದಲು ವಾದಿಸುತ್ತಿದ್ದ ಸರ್ಕಾರವೀಗ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಮಾಹಿತಿ ಆಯೋಗದಲ್ಲಿನ ನೇಮಕ ಪ್ರಕ್ರಿಯೆಗಳನ್ನು ದಾಖಲೆ ಸಮೇತ ನೋಡಿದ ನಂತರ ತಲೆ ಮೇಲೆ ಕೈ ಹೊತ್ತು ಕುಳಿತಿದೆ.
ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪು, ಮತ್ತು ಇದನ್ನು ಪಾಲಿಸಿರುವ ತಮಿಳುನಾಡು ಸರ್ಕಾರ ಸೇರಿದಂತೆ ಇತರೆ ರಾಜ್ಯಗಳೊಂದಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಹಿರಿಯ ಅಧಿಕಾರಿಗಳು ಚರ್ಚಿಸಿದ್ದಾರೆ. ಅಲ್ಲಿನ ನೇಮಕಾತಿ ಪ್ರಕ್ರಿಯೆಗಳ ಕುರಿತು ಇಲಾಖಾ ಮಟ್ಟದಲ್ಲಿ ಅಧ್ಯಯನ ಮಾಡಿದ್ದಾರೆ.
ತಮಿಳುನಾಡು ರಾಜ್ಯ ಸರ್ಕಾರವು ಶೋಧನಾ ಸಮಿತಿ ರಚಿಸಿತ್ತಲ್ಲದೇ ಅದಕ್ಕೆ ಅಧಿಸೂಚನೆಯನ್ನೂ ಹೊರಡಿಸಿತ್ತು. ಇದನ್ನೇ ಮುಖ್ಯವಾಗಿರಿಸಿಕೊಂಡಿರುವ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅವರ ವಾದಕ್ಕೆ ಪ್ರಾಥಮಿಕ ಹಂತದಲ್ಲೇ ಬಲ ಬಂದಂತಿದೆ. ಅರ್ಜಿ ವಿಚಾರಣೆ ಮೊದಲ ಹಂತದಲ್ಲೇ ಶೋಧನಾ ಸಮಿತಿ ರಚಿಸಲಾಗಿದೆ ಎಂದು ಸರ್ಕಾರವು ನ್ಯಾಯಾಲಯಕ್ಕೆ ಹೇಳಿತ್ತಾದರೂ ಯಾವುದೇ ಆದೇಶ, ಅಧಿಸೂಚನೆಯ ಪ್ರತಿಯನ್ನು ಇದುವರೆಗೂ ನೀಡಿಲ್ಲ.
ಆರಂಭಿಕ ಹಂತದಲ್ಲಿ ಆಯ್ಕೆ ಸಮಿತಿಯೇ ಶೋಧನಾ ಸಮಿತಿ ಎಂದು ಸರ್ಕಾರವು ವಾದಿಸುತ್ತಿತ್ತು. ಆದರೀಗ ಆ ವಾದಕ್ಕೆ ಹೆಚ್ಚಿನ ಬಲ ಬಂದಂತಿಲ್ಲ. ಆಯ್ಕೆ ಸಮಿತಿಯೇ ಬೇರೆ, ಶೋಧನಾ ಸಮಿತಿಯೇ ಬೇರೆ. ತಮಿಳುನಾಡಿನಲ್ಲಿ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ ರಚನೆಯಾಗಿದೆ. ಈ ಶೋಧನಾ ಸಮಿತಿಯು ನೀಡಿದ್ದ ಶಿಫಾರಸ್ಸು ಪಟ್ಟಿಯು ಆಯ್ಕೆ ಸಮಿತಿ ಬಳಿ ಹೋಗಿತ್ತು.
ಆದರೆ ರಾಜ್ಯದಲ್ಲಿ ಶೋಧನಾ ಸಮಿತಿಯನ್ನೇ ರಚಿಸದೆಯೇ ನೇರವಾಗಿ ಆಯ್ಕೆ ಸಮಿತಿಯೇ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದೆ. ತಮಿಳುನಾಡಿನ ಅಧಿಸೂಚನೆ ಪ್ರತಿಯನ್ನು ಅವಗಾಹಿಸಿದ ನಂತರ ಈ ಪ್ರಕರಣದಲ್ಲಿ ಹೇಗೆ ಮತ್ತು ಯಾವ ಅಂಶಗಳನ್ನಿಡಿದು ಪ್ರತಿವಾದವನ್ನು ಮುಂದಿಡಬೇಕು ಎಂಬ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಕಾನೂನು ತಜ್ಞರ ಮೊರೆ ಹೊಕ್ಕಿದೆ.
ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗುವ ಮುನ್ನವೇ ‘ದಿ ಫೈಲ್’ ಸೇರಿದಂತೆ ಹಲವು ಮಂದಿ ಶೋಧನಾ ಸಮಿತಿ ರಚನೆ ಮಾಡಿರುವ ಆದೇಶ ಮತ್ತು ಕಡತವನ್ನು ಕೋರಿ ಸರ್ಕಾರಕ್ಕೆ ಆರ್‍ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿದೆ. ಈ ಯಾವ ಅರ್ಜಿಗಳಿಗೂ ಇದುವರೆಗೂ ಒಂದೇ ಒಂದು ಸಾಲಿನ ಮಾಹಿತಿ ನೀಡಿಲ್ಲ. ಒಂದೊಮ್ಮೆ ಶೋಧನಾ ಸಮಿತಿ ರಚಿಸಿದ್ದೇ ನಿಜವಾಗಿದ್ದಲ್ಲಿ ಅದರ ಪ್ರತಿಯನ್ನು ನೀಡಬಹುದಿತ್ತು.
ಆರ್‍ಟಿಐ ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳಿಗೆ ಮಾಹಿತಿ ನೀಡುವ ಕುರಿತಂತೆ ಡಿಪಿಎಆರ್ ಇಲಾಖೆಯು ಕಾನೂನು ಕೋಶವನ್ನು ಸಂಪರ್ಕಿಸಿದೆ. ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಕೆಯಾಗಿರುವ ಕಾರಣ ಇದು ಪ್ರಶ್ನಿತ ಅರ್ಜಿಯಾಗಿದೆ ಎಂಬ ಮಾಹಿತಿ ನೀಡಬೇಕು ಎಂದು ಮೇಲಾಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣದ ಕುರಿತಾದ ರಿಟ್ ಅರ್ಜಿಯು 2025ರ ಫೆ.13ರಂದು ವಿಚಾರಣೆಗೆ ಬಂದಿತ್ತು. ಈ ಅರ್ಜಿಯು ಫೆ.18ಕ್ಕೆ ಮುಂದೂಡಿಕೆಯಾಗಿದೆ.
ರಾಜ್ಯ ಮಾಹಿತಿ ಆಯುಕ್ತರ ಹುದ್ದೆ ಆಕಾಂಕ್ಷಿಯಾಗಿದ್ದ ಜೆ.ಪಿ.ನಗರದ ಕೆ.ಮಲ್ಲಿಕಾರ್ಜುನ ರಾಜು ಅವರು ರಾಜ್ಯ ಸರಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಮಾಹಿತಿ ಮುಖ್ಯ ಆಯುಕ್ತರಾಗಿ ಆಯ್ಕೆಯಾಗಿರುವ ಎ.ಎಂ. ಪ್ರಸಾದ್ ಹಾಗೂ ಎಲ್ಲಾ ಏಳು ಮಂದಿ ಆಯುಕ್ತರನ್ನು ಪ್ರತಿವಾದಿಗಳನ್ನಾಗಿಸಿದ್ದಾರೆ.
‘ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರು ಹಾಗೂ ಮಾಹಿತಿ ಆಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನೆಗೆ ಶೋಧನಾ ಸಮಿತಿ ರಚನೆ ಮಾಡಬೇಕು. ಬಳಿಕ ಆಯ್ಕೆಯಾದವರ ಪಟ್ಟಿಯನ್ನು ಆಯ್ಕೆ ಸಮಿತಿಯ ಮುಂದೆ ಮಂಡಿಸಬೇಕೆಂದು ಅಂಜಲಿ ಭಾರಾಧ್ವಾಜ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಸ್ಪಷ್ಟ ನಿರ್ದೇಶನವನ್ನು ಮುಂದಿರಿಸಿದ್ದಾರೆ.
‘ರಾಜ್ಯ ಸರಕಾರ ಶೋಧನಾ ಸಮಿತಿ ರಚನೆ ಮಾಡದೆಯೇ 2024ರ ಜೂ.11ರಂದು ಅರ್ಜಿಗಳನ್ನು ಆಹ್ವಾನ ಮಾಡಿದೆ. ಜತೆಗೆ, ಸಲ್ಲಿಕೆಯಾಗಿದ್ದ 184 ಅರ್ಜಿಗಳನ್ನು ಯಾವುದೇ ರೀತಿಯಲ್ಲಿ ಪರಿಶೀಲನೆ ನಡೆಸದೆ ಅವುಗಳ ಪೈಕಿ ಏಳು ಮಂದಿಯನ್ನು ನೇಮಕ ಮಾಡಿ 2025ರ ಜ.30ರಂದು ಆದೇಶ ಹೊರಡಿಸಿದೆ. ಇದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ,’ ಎಂದು ಅರ್ಜಿಯಲ್ಲಿ ವಿವರಿಸಿದೆ.
ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಸಚಿವ ಕೆ.ಜೆ. ಜಾರ್ಜ್ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ರಾಜ್ಯ ಮಾಹಿತಿ ಆಯುಕ್ತರ ಹುದ್ದೆಗೆ ಕೆ. ರಮಣ್, ಡಾ.ಹರೀಶ್‌ಕುಮಾರ್, ನಾರಾಯಣ್ ಜಿ. ಚನ್ನಾಳ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಆರ್. ಮಮತಾ, ಹಿರಿಯ ಪತ್ರಕರ್ತರಾದ ರುದ್ರಣ್ಣ ಹರ್ತಿಕೋಟೆ, ಕೆ. ಬದ್ರುದ್ದೀನ್, ಎಸ್. ರಾಜಶೇಖರ್ ಅವರನ್ನು ನೇಮಿಸಿರುವುದನ್ನು ಸ್ಮರಿಸಬಹುದು.