ಬೆಂಗಳೂರು; ಮೈಸೂರು ಸಕ್ಕರೆ ಕಾರ್ಖಾನೆ (ಮೈಷುಗರ್ಸ್) ಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಂಡು ಪುನರುಜ್ಜೀವನಗೊಳಿಸಲಾಗುವುದು ಎಂದು ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರವು ಇದೀಗ ಈ ಕಾರ್ಖಾನೆಯನ್ನು ಖಾಸಗಿಗೆ ವಹಿಸಲು ತರಾತುರಿ ನಡೆಸುತ್ತಿದೆ.
ವಿಶೇಷವೆಂದರೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಮೈ ಷುಗರ್ಸ್‌ನ್ನು ಎಲ್‌ಆರ್‌ಓಟಿ ಆಧಾರದ ಮೇಲೆ ಮುನ್ನೆಡೆಸಲು ಮುಂದಾಗಿತ್ತು. 2021-22ನೇ ಹಂಗಾಮಿನಿಂದಲೇ 40 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು 2020ರ ನವೆಂಬರ್ 18ರಂದು ಅನುಮತಿ ನೀಡಿತ್ತು. ಆ ವೇಳೆಯಲ್ಲಿ ಚೆಲುವರಾಯಸ್ವಾಮಿ ಅವರೂ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಆದರೀಗ ಅವರೂ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.
ಹಿಂದಿನ ಬಿಜೆಪಿ ಸರ್ಕಾರವು ಕೈಗೊಂಡಿದ್ದ ನಿರ್ಧಾರವನ್ನೇ ಕಾಂಗ್ರೆಸ್ ಸರ್ಕಾರವು ಮತ್ತೆ ಎತ್ತಿ ಹಿಡಿದಿದೆ. ಅದರಲ್ಲಿ ಎಲ್‌ಆರ್‍ಒಟಿ ಆಧಾರದ ಮೇಲೆ ಖಾಸಗಿಗೆ ವಹಿಸಲು ತರಾತುರಿ ನಡೆಸುತ್ತಿದೆ. ಒಂದೊಮ್ಮೆ ಕಾಂಗ್ರೆಸ್ ಸರ್ಕಾರವೂ ಖಾಸಗಿಗೆ ವಹಿಸಲು ಅಂತಿಮ ತೀರ್ಮಾನ ಪ್ರಕಟಿಸಿದಲ್ಲಿ ಕಬ್ಬು ಬೆಳೆಗಾರರ ಆಕ್ರೋಶಕ್ಕೆ ತುತ್ತಾಗಲಿದೆ ಎಂಬ ಮಾತುಗಳೂ ಕೇಳಿ ಬಂದಿವೆ.
ಮೈ ಷುಗರ್ಸ್‌ನ ಕಬ್ಬು ಅರೆಯುವ ಘಟಕವನ್ನು ಎಲ್‌ಆರ್‍ಒಟಿ ಮಾದರಿಯಲ್ಲಿ ನಡೆಸಲು ಟೆಂಡರ್ ಕರೆಯುವುದು ಮತ್ತು ಎಥನಾಲ್ ಘಟಕವನ್ನು ಪಿಪಿಪಿ ಮಾದರಿಯಲ್ಲಿ ನಡೆಸಬೇಕು ಎಂದು ಆರ್ಥಿಕ ಇಲಾಖೆಯು ಚಿಂತಿಸಿದೆ. ಇದಕ್ಕೆ ಅರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.
2024-25ನೇ ಸಾಲಿನಲ್ಲಿ ಆಯವ್ಯಯ ಘೋಷಣೆಗಳ ಕಂಡಿಕೆ 327 ರ ಮೇಲೆ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಸಿದ್ದ ಆರ್ಥಿಕ ಇಲಾಖೆಯು ಈ ಅಭಿಪ್ರಾಯವನ್ನು ಆಡಳಿತ ಇಲಾಖೆಗೆ (FD 493 EXP-1/2024) ನೀಡಿದೆ.
ಈ ಸಂಬಂಧ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ಖಚಿತಪಡಿಸಿದ್ದಾರೆ.
ಟೆಂಡರ್ ಪ್ರಕ್ರಿಯೆಯಲ್ಲಿ ಯಶಸ್ವಿಯಾಗುವ ಗುತ್ತಿಗೆದಾರರು 2021-22ನೇ ಹಂಗಾಮಿನಿಂದ ಕಬ್ಬು ನುರಿಸುವ ಕಾರ್ಯವನ್ನು ಪ್ರಾರಂಭಿಸಬೇಕು ಎಂಬ ಷರತ್ತನ್ನೂ ವಿಧಿಸಲಾಗಿತ್ತು. ಆದರೆ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದ ಮೇಲೆ ನೀಡುವ ಪ್ರಸ್ತಾವನೆಗೆ ಕಾರ್ಖಾನೆಯ ವ್ಯಾಪ್ತಿಯಲ್ಲಿ ಕಬ್ಬು ಬೆಳೆಯುವ ರೈತರು, ಕಂಪನಿಯ ಷೇರುದಾರರು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಹಿಂದಿನ ಬಿಜೆಪಿ ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು.
ದಿ ಮೈಸೂರು ಷುಗರ್ ಕಂಪನಿಯು ಬಾಕಿ ಉಳಿಸಿಕೊಂಡಿದ್ದ 53.05 ಕೋಟಿ ರು. ವಿದ್ಯುತ್ ಬಾಕಿಯನ್ನು ಮನ್ನಾ ಮಾಡಲು ಸಚಿವ ಸಂಪುಟವು ಈಚೆಗಷ್ಟೇ ಅನುಮೋದಿಸಿತ್ತು. ಇದರಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ 37,74,95,141 ರು. ಆರ್ಥಿಕ ಹೊರೆಯೂ ಬಿದ್ದಿತ್ತು. ಅಲ್ಲದೇ ವಿದ್ಯುಚ್ಚಕ್ತಿ ಬಾಕಿ ಮೊತ್ತದ ಮೇಲಿನ ಬಡ್ಡಿ ಮೊತ್ತವನ್ನೂ ಮನ್ನಾ ಮಾಡಲು ಇಂಧನ ಇಲಾಖೆಯೂ ಸಹಮತಿ ನೀಡಿತ್ತು.
ಹೀಗೆ ಮೈಷುಗರ್ಸ್ ಕಂಪನಿಗೆ ಸಂಬಂಧಿಸಿದಂತೆ ಸಕಾರಾತ್ಮಕ ನಿರ್ಧಾರಗಳನ್ನು ಕೈಗೊಂಡಿದ್ದ ಸರ್ಕಾರವೇ ಇದೀಗ ಈ ಕಾರ್ಖಾನೆಯನ್ನು ಖಾಸಗಿಗೆ ವಹಿಸಲು ಮುಂದಾಗಿದೆ. ಸರ್ಕಾರವು ದಿಢೀರ್ ಎಂದು ಕೈಗೊಂಡಿರುವ ಈ ನಿರ್ಧಾರದ ಹಿಂದೆ ಸಕ್ಕರೆ ಲಾಬಿಯೂ ಕೆಲಸ ಮಾಡಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಮೈಸೂರು ಷುಗರ್ಸ್ ಕಂಪನಿಯು ಸಾರ್ವಜನಿಕ ವಲಯದ ಉದ್ಯಮವಾಗಿದೆ. 1950-51ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಒಟ್ಟು 35 ಹಂಗಾಮುಗಳಲ್ಲಿ 34,738.90 ಲಕ್ಷ ರುಗಳಷ್ಟು ಕ್ರೋಢೀಕೃತ ನಷ್ಟ ಅನುಭವಿಸಿತ್ತು. ಅಲ್ಲದೇ ಪ್ರಸ್ತುತ 273.48 ಕೋಟಿ ರು. ಸಾಲವನ್ನೂ ಹೊಂದಿತ್ತು. ಆರ್ಥಿಕ ಸಂಕಷ್ಟದಲ್ಲಿರುವ ಈ ಕಾರ್ಖಾನೆಯು ಚೆಸ್ಕಾಂಗೆ ಬಾಕಿ ಉಳಿಸಿಕೊಂಡಿದ್ದ 53,46,34,707 ರು.ಗಳ ವಿದ್ಯುತ್ ಬಿಲ್‌ನ್ನೂ ಪಾವತಿಸಲು ಸಾಧ್ಯವಾಗಿರಲಿಲ್ಲ.
ಕಬ್ಬು ಮೀಸಲು ಕ್ಷೇತ್ರದಲ್ಲಿನ ರೈತರ ಹಿತದೃಷ್ಟಿಯಿಂದ ಕಾರ್ಖಾನೆಯಲ್ಲಿನ ಕಬ್ಬು ಅರೆಯುವ ಕಾರ್ಯವನ್ನು ಕೈಗೊಳ್ಳುವುದು ಮತ್ತು ಕಂಪನಿಯನ್ನು ಆರ್ಥಿಕ ಸಂಕಷ್ಟದಿಂದ ಹೊರ ತರುವ ಅವಶ್ಯಕತೆಯಿತ್ತು. ಈ ಹಿನ್ನೆಲೆಯಲ್ಲಿ ಮೈ ಷುಗರ್ಸ್, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಗೆ ಪಾವತಿಸಬೇಕಿದ್ದ 53.46 ಕೋಟಿ ರು.ಗಳ ವಿದ್ಯುತ್ ಬಿಲ್ ಮನ್ನಾ ಮಾಡಲು ಸಚಿವ ಸಂಪುಟವು ಅನುಮೋದಿಸಿತ್ತು ಎಂದು ತಿಳಿದು ಬಂದಿದೆ.
ಇದನ್ನು ಒಪ್ಪಿದ್ದಲ್ಲಿ ಆರ್ಥಿಕ ಪರಿಣಾಮಗಳು ಆಗಲಿವೆ ಎಂದು ಆರ್ಥಿಕ ಇಲಾಖೆಯು ಹೇಳಿತ್ತು. ‘ ವಿದ್ಯುತ್ ಬಿಲ್‌ನ ಬಡ್ಡಿಯನ್ನು ಮನ್ನಾ ಮಾಡಲು ಇಂಧನ ಇಲಾಖೆಯು ಒಪ್ಪಿರುವುದರಿಂದ ಈ ಪ್ರಸ್ತಾವನೆಯಿಂದ ರಾಜ್ಯ ಸರ್ಕಾರದ ಮೇಲೆ 37,74,95,141.00 ರು ಗಳ ಆರ್ಥಿಕ ಹೊರೆ ಬೀಳಲಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಅನುದಾನವನ್ನು ಕಾರ್ಖಾನೆಗೆ ನೀಡಲಾಗದು,’ ಎಂದು ಆರ್ಥಿಕ ಇಲಾಖೆಯು (FD 305 EXP-1/2024) ಹೇಳಿತ್ತು ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ಖಚಿತಪಡಿಸಿದ್ದಾರೆ.
ಆರ್ಥಿಕ ಸಹಾಯವನ್ನು ಮಾತ್ರ ಒದಗಿಸಿದೆ ಎಂದು ಹೇಳಿರುವ ಆರ್ಥಿಕ ಇಲಾಖೆಯು ಈ ಕಂಪನಿಯಲ್ಲಿ ಸರ್ಕಾರವು ಯಾವುದೇ ಹೂಡಿಕೆ ಮಾಡಿಲ್ಲವೆಂದು ಸಿಎಜಿಯನ್ನೇ ದಾರಿ ತಪ್ಪಿಸಿತ್ತು.
ಆರ್ಥಿಕ ಸಹಾಯ ಒದಗಿಸಿದೆಯೇ ವಿನಃ ಯಾವುದೇ ಹೂಡಿಕೆ ಮಾಡಿಲ್ಲ ಎಂದು ಆರ್ಥಿಕ ಇಲಾಖೆ ಹೇಳಿದೆಯಾದರೂ ವಾಸ್ತವದಲ್ಲಿ ಹಣಕಾಸು ಲೆಕ್ಕದಲ್ಲಿ 335.78 ಕೋಟಿ ರು.ಗಳನ್ನು ಸರ್ಕಾರವು ಹೂಡಿಕೆ ಮಾಡಿತ್ತು ಎಂಬ ಅಂಶವನ್ನು ಸಿಎಜಿ ವರದಿಯು ಹೊರಗೆಡವಿದೆ. ಕಂಪನಿಯಲ್ಲಿ ಸರ್ಕಾರವು ಮಾಡಿದ್ದ ಹೂಡಿಕೆಯನ್ನು ಮರೆಮಾಚಿತ್ತು.
ಮೈಸೂರು ಸಕ್ಕರೆ ಕಾರ್ಖಾನೆಯು 2016-17ರ ಅಂತ್ಯಕ್ಕೆ 416. 67 ಕೋಟಿ ಸಂಚಿತ ನಷ್ಟ ಅನುಭವಿಸಿತ್ತು. 2017-18ರಲ್ಲಿ 289.42 ಕೋಟಿ, 2018-19ರ ಅಂತ್ಯಕ್ಕೆ 460.89 ಕೋಟಿ ನಷ್ಟ ಅನುಭವಿಸಿತ್ತು. 2019-20ರಲ್ಲಿ ಸರ್ಕಾರವು 335.78 ಕೋಟಿಯಷ್ಟು ಹೂಡಿಕೆ ಮಾಡಿತ್ತು ಎಂಬುದು ಸಿಎಜಿ ವರದಿಯಲ್ಲಿ ವಿವರಿಸಲಾಗಿತ್ತು.
ಮೈಸೂರು ಸಕ್ಕರೆ ಕಾರ್ಖಾನೆ ನಿಯಮಿತಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು (ಸೆ.2020) ದುಡಿಯುವ ಬಂಡವಾಳದ ಕೊರತೆಯಿಂದಾಗಿ ಕಂಪನಿಯು ನಷ್ಟವನ್ನು ಅನುಭವಿಸುತ್ತಿದೆ ಎಂದು ಹೇಳಿತ್ತು. 2015-16 ಮತ್ತು 2016-17ರ ಅವಧಿಯಲ್ಲಿ ಕಬ್ಬು ಅರೆಯುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ಹೀಗಾಗಿ ರೈತರ ಹಿತಾಸಕ್ತಿ ಮತ್ತು ಈ ಪ್ರದೇಶದ ಇತರ ಪೂರಕ ಘಟಕಗಳನ್ನು ಪುನರುಜ್ಜೀವನಗೊಳಿಸುವುದು ಹಾಗೂ ನೌಕರರಿಗೆ ಸಂಬಳ, ವೇತನ, ಪಿಂಚಣಿಗಳನ್ನು ಪಾವತಿಸಲು ಸರ್ಕಾರವು 2017-18 ಮತ್ತು 2018-19ರಲ್ಲಿ 57 ಕೋಟಿಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ 17 ಕೋಟಿಯನ್ನು ಸಾಲವನ್ನಾಗಿ ಪರಿಗಣಿಸಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
ಮೈಸೂರು ಸಕ್ಕರೆ ಕಾರ್ಖಾನೆಯನ್ನು ಅಂದಾಜು 500 ಕೋಟಿ ರು. ವೆಚ್ಚದಲ್ಲಿ ಪುನಶ್ಚೇತನಗೊಳಿಸುವ ಪ್ರಸ್ತಾವನೆ ಕುರಿತು ಸರ್ಕಾರದ ಹಂತದಲ್ಲಿ ತೀರ್ಮಾನಿಸಿಲ್ಲ. ಅಲ್ಲದೆ ಈ ಸಂಬಂಧ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ವಿಧಾನಸಭೆಯಲ್ಲಿ ಸಕ್ಕರೆ ಸಚಿವರಾಗಿದ್ದ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಲಿಖಿತ ಉತ್ತರ ಒದಗಿಸಿದ್ದರು.
ಮೈಸೂರು ಸಕ್ಕರೆ ಕಾರ್ಖಾನೆ (ಮೈ ಷುಗರ್ಸ್) ಪುನರಾರಂಭಕ್ಕೆ ಸಂಬಂಧಿಸಿದಂತೆ ಹಿಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ‘ಈ ಹಿಂದೆ ಮೈ ಷುಗರ್ಸ್ ಪುನಶ್ಚೇತನಕ್ಕಾಗಿ ₹ 200 ಕೋಟಿ ಅನುದಾನವನ್ನು ನಾನೇ ಒದಗಿಸಿದ್ದೆ. ಆದರೆ, ಕಾರ್ಖಾನೆಯಲ್ಲಿನ ಗುಂಪುಗಾರಿಕೆಯಿಂದ ಮತ್ತೆ ನಷ್ಟ ಸಂಭವಿಸಿದೆ. ಈಗಲೂ ಕಾರ್ಖಾನೆ ನಡೆಸಲಾಗದ ಸ್ಥಿತಿ ಇದೆ. ಶೀಘ್ರದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತರಿಸಿದ್ದನ್ನು ಸ್ಮರಿಸಬಹುದು.
‘ಹೊಸ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ತಕ್ಷಣಕ್ಕೆ ₹ 15 ಕೋಟಿ ವೆಚ್ಚ ಮಾಡಿದರೆ ಕಾರ್ಖಾನೆಯಲ್ಲಿ ಕಬ್ಬು ನುರಿಯಲು ಆರಂಭಿಸಬಹುದು. ಆದರೆ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಹೊಂದಿರುವ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ 40 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲು ಸರ್ಕಾರ ಹೊರಟಿದೆ. ಈ ವಿಚಾರದಲ್ಲಿ ಖಾಸಗಿಯವರ ಒತ್ತಡಕ್ಕೆ ಮಣಿಯಲಾಗಿದೆಯೆ’ ಎಂದು ಶ್ರೀಕಂಠೇಗೌಡ ಅವರು ಸದನದಲ್ಲಿ ಪ್ರಶ್ನಿಸಿದ್ದರು.
ಸಕ್ಕರೆ ಕಾರ್ಖಾನೆಯಿಂದ ₹ 30 ಕೋಟಿ ಆದಾಯ ತೆರಿಗೆ ಮತ್ತು ₹ 27 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ. ಇತ್ತೀಚೆಗೆ ನಿವೃತ್ತರಾದ ನೌಕರರಿಗೆ ₹ 8 ಕೋಟಿ ಬಾಕಿ ಪಾವತಿಸಬೇಕಾಗಿದೆ. ಯಂತ್ರೋಪಕರಣಗಳ ದುರಸ್ತಿ, ಹೊಸ ಯಂತ್ರಗಳ ಅಳವಡಿಕೆಗೆ ತುರ್ತಾಗಿ ₹ 100 ಕೋಟಿ ಅಗತ್ಯವಿದೆ. ಈ ಎಲ್ಲವನ್ನು ಪರಿಗಣಿಸಿ ಕಾರ್ಖಾನೆಯನ್ನು ಗುತ್ತಿಗೆಗೆ ನೀಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ಸಚಿವ ಎಂ.ಟಿ.ಬಿ. ನಾಗರಾಜು ತಿಳಿಸಿದ್ದನ್ನು ಸ್ಮರಿಸಬಹುದು.