ಸಮಗ್ರ ಉಪನಗರ ಯೋಜನೆ; ಸಾಮಾಜಿಕ ಅಧ್ಯಯನ, ಪರಿಸರ ಅಧ್ಯಯನದಿಂದ ವಿನಾಯಿತಿ! ಪತ್ರ ಮುನ್ನೆಲೆಗೆ

ಬೆಂಗಳೂರು; ಗ್ರೇಟರ್‍‌ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 8,943 ಎಕರೆ ಪ್ರದೇಶದಲ್ಲಿ ಸಮಗ್ರ ಉಪ ನಗರ ಯೋಜನೆಯನ್ನು ಅನುಷ್ಠಾನಗೊಳಿಸಲು ಭೂ ಪ್ರಕ್ರಿಯೆಗೆ ಸಾಮಾಜಿಕ ಅಧ್ಯಯನ ಮತ್ತು ಪರಿಸರ ಅಧ್ಯಯನ ವರದಿ ತಯಾರಿಸಲು ವಿನಾಯಿತಿ ನೀಡಲು ಅವಕಾಶವಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದ್ದರೂ ಸಹ ಪ್ರಾಧಿಕಾರದ ಆಯುಕ್ತರು ಮತ್ತೆ ಪತ್ರ ಬರೆದಿರುವುದು ಇದೀಗ ಬಹಿರಂಗವಾಗಿದೆ.

 

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಧೇಯಕವನ್ನು ಪರಾಮರ್ಶಿಸಲು ಸದನ ಸಮಿತಿ ರಚನೆಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಒಪ್ಪಿಗೆ ನೀಡಿರುವ ಬೆನ್ನಲ್ಲೇ ಪ್ರಾಧಿಕಾರದ ಆಯುಕ್ತರು ಸಾಮಾಜಿಕ ಅಧ್ಯಯನ ಮತ್ತು ಪರಿಸರ ಅಧ್ಯಯನ ವರದಿ ತಯಾರಿಸಲು ವಿನಾಯಿತಿ ಕೋರಿ ಬರೆದಿದ್ದರು. ಸಮಗ್ರ ಉಪ ನಗರ  ಯೋಜನೆಗೆ ಒಪ್ಪಿಗೆ ಪಡೆಯಲು ಸಚಿವ ಸಂಪುಟದ ಮುಂದೆ ಇಂದು ಕಡತ ಮಂಡಿಸಿದೆ.

 

 

ಈ ಬೆಳವಣಿಗೆ ಬೆನ್ನಲ್ಲೇ ಪ್ರಾಧಿಕಾರದ ಆಯುಕ್ತರು ಬರೆದಿದ್ದ  ಪತ್ರವು ಮುನ್ನೆಲೆಗೆ ಬಂದಿದೆ.

 

ಅಲ್ಲದೇ ಬೃಹತ್ ಬೆಂಗಳೂರು ಆಡಳಿತ (ಜಿಬಿಜಿ) ಮಸೂದೆಯು 21ನೇ ಶತಮಾನದಲ್ಲಿ ಸ್ಪಂದನಾತ್ಮಕ ಮತ್ತು ಆಧುನಿಕ ಬೆಂಗಳೂರನ್ನು ನಿರ್ಮಿಸಲು ಅಗತ್ಯವಾದ ಆಡಳಿತದ ಅನೇಕ ಪ್ರಗತಿಪರ ಅಂಶಗಳನ್ನು ಒಳಗೊಂಡಿಲ್ಲ ಎಂದು ಸರ್ಕಾರೇತರ ಮತ್ತು ನಾಗರಿಕ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿರುವ ನಡುವೆಯೇ ಪ್ರಾಧಿಕಾರವು ಬರೆದಿರುವ ಈ ಪತ್ರವು ಚರ್ಚೆಗೆ ಗ್ರಾಸವಾಗಿದೆ.

 

ವಿಶೇಷವೆಂದರೇ ಪ್ರಾಧಿಕಾರವು ಕೋರಿದ್ದ ವಿನಾಯಿತಿಯನ್ನು ಕಂದಾಯ  ಇಲಾಖೆಯು ಒಪ್ಪಿರಲಿಲ್ಲ. ಈ ಕುರಿತು 2024ರ ಅಕ್ಟೋಬರ್‍‌ 5ರಂದು ಪತ್ರ ಬರೆದಿತ್ತು.

 

‘ಭೂ ಸ್ವಾಧೀನ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕುಕ, ಪುನರ್‍‌ ವಸತಿ ಹಕ್ಕು ಮತ್ತು ಪುನರ್‍‌ ನಿರ್ಮಾಣ ಕಾಯ್ದೆ 2013ರ ಕಲಂ 10(ಎ) ಅಡಿಯಲ್ಲಿ ಎಸ್‌ಐಎಯಿಂದ ವಿನಾಯಿತಿ ಪಡೆದ ನಂತರ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಕಲಂ 17, 18,19, 35 ಮತ್ತು 36ರ ಅಡಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಭೂ ಸ್ವಾಧೀನ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್‍‌ ವಸತಿ ಮತ್ತು ಪುನರ್‍‌ ನಿರ್ಮಾಣ ಕಾಯ್ದೆ 2013ರ ರಡಿ ಎಸ್‌ಐಎಯಿಂದ ವಿನಾಯಿತಿ ನೀಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ,’ ಎಂದು 2024ರ ಅಕ್ಟೋಬರ್‍‌ 5ರಂದು ಸ್ಪಷ್ಟಪಡಿಸಿತ್ತು.

 

 

ಆದರೂ ಗ್ರೇಟರ್‍‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪುನಃ ಅಕ್ಟೋಬರ್‍‌ 21ರಂದು ಕಂದಾಯ ಇಲಾಖೆಗೆ ಪತ್ರ ಬರೆದಿದೆ.

 

ಕಂದಾಯ ಇಲಾಖೆಗೆ ಬರೆದಿರುವ ಪತ್ರದಲ್ಲೇನಿದೆ?

 

ಗ್ರೇಟರ್‍‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಮಗ್ರ ಉಪ ನಗರ ಯೋಜನೆಗೆ ಸಂಬಂಧಿಸಿದಂತೆ ರಾಮನಗರ ತಾಲೂಕು, ಬಿಡದಿ ಹೋಬಳಿಯ ಬೈರಮಂಗಲ, ಬನ್ನಿಗೆರೆ, ಹೊಸೂರು, ಕೆ ಜಿ ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ತಾಲೂಕು ಹಾರೋಳ್ಳಿ ಹೋಬಳಿಯ ವಡೇರಹಳ್ಳಿ ಭಾಗಶಃ ಗ್ರಾಮಗಳ ಜಮೀನುಗಳ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಈ ಸಂಬಂಧ ಸಾಮಾಜಿಕ ಪರಿಣಾಮ ನಿರ್ಧರಣೆ ಕೈಗೊಳ್ಳುವುದರಿಂದ ವಿನಾಯಿತಿ ನೀಡಬೇಕು ಎಂದು 2024ರ ಸೆ.4ರಂದು ಪತ್ರ ಬರೆದಿತ್ತು.

 

 

‘ಭೂ ಸ್ವಾಧೀನ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ, ಪುನರ್‍‌ ನಿರ್ಮಾಣ ಕಾಯ್ದೆ 2013ರ ಅಡಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಗೊಳ್ಳುವುದಾದಲ್ಲಿ ಮಾತ್ರ ತಿದ್ದುಪಡಿ ಅಧಿನಿಯಮ 2019ರ ಕಲಂ 10(ಎ) ಅಡಿಯಲ್ಲಿ ಸಾರ್ವಜನಿಕ ಉದ್ದೇಶದ ಕೆಲವು ಯೋಜನೆಗಳಿಗೆ ಮಾತ್ರ ಎಸ್‌ಐಎಯಿಂದ ವಿನಾಯಿತಿ ನೀಡಲು ಅವಕಾಶವಿದೆ,’ ಎಂದು ಪ್ರಾಧಿಕಾರದ ಆಯುಕ್ತರು ಪತ್ರದಲ್ಲಿ ಪ್ರತಿಪಾದಿಸಿದ್ದರು.

 

 

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಜಾರಿ ಆದ ದಿನದಿಂದ ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳು ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಲ್ಲಿ ಕಾಯ್ದೆ ಕಲಂ 17, 18, 19.35 ಮತ್ತು 36ರ ಅವಕಾಶಗಳಡಿ ಹಾಗೂ ಪರಸ್ಪರ ಒಡಂಬಡಿಕೆಯಿರದೆ ಭೂ ಸ್ವಾಧೀನಗೊಳಿಸಲಾಗುವ ಎಲ್ಲಾ ಪ್ರಕರಣಗಳಲ್ಲಿಯೂ ಭೂ ಸ್ವಾಧೀನ ಕಾಯ್ದೆ 1894ರಲ್ಲಿನ ಅವಕಾಶ, ನಿರ್ದೇಶನಗಳನ್ನು ಅನ್ವಯಿಸಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತಿತ್ತು ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

‘ಬೆಂಗಳೂರು ಮಹಾನಗರ ಪ್ರದೇಶದ ವ್ಯಾಪ್ತಿಯಲ್ಲಿ ಜೀವನದ ಗುಣಮಟ್ಟವನ್ನು ಸಂರಕ್ಷಿಸಲು ಹಾಗೂ ಸುಧಾರಿಸಲು ಮತ್ತು ಈ ನಿಟ್ಟಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ಅಗತ್ಯತೆಗಳನ್ನು ಪೂರೈಸಲು ಬೆಂಗಳೂರು ಮಹಾನಗರ ಪ್ರದೇಶದಲ್ಲಿ ಹೊಸ ಸಮಗ್ರ ಜನರ ವಸಾಹತುಗಳ ಅಭಿವೃದ್ಧಿಯನ್ನು ಅಗತ್ಯವಾಗಿ ಕೈಗೊಳ್ಳಬೇಕಿದೆ. ಇದು ಬೆಂಗಳೂರು ಮಹಾನಗರದ ಮೇಲಿನ ಒತ್ತಡವನ್ನು ನಿವಾರಿಸುತ್ತದೆ ಮತ್ತು ಸಮತೋಲಿತ ನಗರ ಬೆಳವಣಿಗೆಯನ್ನು ಸುಗಮಗೊಳಿಸುತ್ತದೆ,’ ಎಂದು ಪ್ರಾಧಿಕಾರವು ಸಮರ್ಥಿಸಿಕೊಂಡಿದೆ.

 

ವಸತಿ ವಸಾಹುತು, ಕೈಗಾರಿಕಾ ಕಾರಿಡಾರ್‍‌ಗಳನ್ನು ಅನುಷ್ಠಾನಗೊಳಿಸುವಲ್ಲಿ ನಿಯಮಗಳ ಅನುಸಾರ ನಾಗರಿಕ ಸೌಲಭ್ಯ ನಿವೇಶನಗಳ ಮೂಲಕ ಶಿಕ್ಷಣ, ಆರೋಗ್ಯ, ಸರ್ಕಾರಿ ಕಚೇರಿಗಳು ಹಾಗೂ ಸಂಬಂಧಿಸಿದ ಇತರೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಿದೆ. ಈ ಹಿನ್ನೆಲೆಯಲ್ಲಿ ಉದ್ದೇಶಿತ ಸಮಗ್ರ ಉಪನಗರ ಯೋಜನೆಗೆ ಕೈಗೊಳ್ಳಲಾಗುವ ಭೂ ಸ್ವಾಧೀನ ಪ್ರಕ್ರಿಯೆಗೆ ಸಾಮಾಜಿಕ ಪರಿಣಾಮ ನಿರ್ಧರಣೆ ಕೈಗೊಳ್ಳುವುದರಿಂದ ವಿನಾಯಿತಿ ನೀಡಬೇಕು ಎಂದು ಕೋರಿರುವುದು ತಿಳಿದು ಬಂದಿದೆ.

 

ಬಿಡದಿ, ರಾಮನಗರ, ಸಾತನೂರು, ಸೋಲೂರು ಮತ್ತು ನಂದಗುಡಿಗಳಲ್ಲಿ 5 ಹೊಸ ಸಮಗ್ರ ಉಪ ನಗರಗಳನ್ನು ಅಭಿವೃದ್ದಿ ಪಡಿಸಲು ಸರ್ಕಾರವು ಈ ಹಿಂದೆಯೇ ಆದೇಶಿಸಿತ್ತು.

 

 

ಈ ಪೈಕಿ ಬಿಡದಿಯ ಬೈರಮಂಗಲ, ಬನ್ನಿಗೆರೆ, ಹೊಸೂರು, ಕೆ ಜಿ ಗೊಲ್ಲರಪಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನ ಪಾಳ್ಯ, ಕಂಚುಗಾರನಹಳ್ಳಿ ಕಾವಲು, ಮಂಡಳ್ಳಿ, ವಡೇರಹಳ್ಳಿ ಗ್ರಾಮಗಳಲ್ಲಿ 9,178 ಎಕರೆ 29 ಗುಂಟೆ ಪ್ರದೇಶಕ್ಕೆ ಉದ್ದೇಶಿತ ಬಿಡದಿ ಗ್ರಾಮಗಳನ್ನು ಗ್ರೇಟರ್‍‌ ಬೆಂಗಳೂರು-ಬಿಡದಿ ಸ್ಮಾರ್ಟ್‌ ಸಿಟಿ ಸ್ಥಳೀಯ ಯೋಜನಾ ಪ್ರದೇಶವೆಂದು 2007ರಲ್ಲೇ ಘೋಷಿಸಿತ್ತು.

 

 

ಇದನ್ನಾಧರಿಸಿ ಒಟ್ಟಾರೆ 8,943 ಎಕರೆ ಗುಂಟೆ ಪ್ರದೇಶದಲ್ಲಿ ಬಿಡದಿ ಸಮಗ್ರ ಉಪ ನಗರ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಪ್ರಾಥಮಿಕ ಪ್ರಕ್ರಿಯೆಗಳನ್ನು ಕೈಗೊಳ್ಳುವ ಪ್ರಸ್ತಾವನೆಗೆ 2024ರ ಸೆ.2ರಂದು ಸರ್ಕಾರವು ತಾತ್ವಿಕ ಅನುಮೋದನೆ ನೀಡಿತ್ತು.

 

 

ಈ ಯೋಜನೆಯಡಿಯಲ್ಲಿ ಮಾಲೀಕರಿಗೆ ಅಭಿವೃದ್ಧಿಪಡಿಸಿದ ಭೂಪರಿಹಾರ ಹಾಗೂ ಭೂ ಪರಿಹಾರ ಪಡೆಯಲಿಚ್ಛಿಸದ ಭೂ ಮಾಲೀಕರಿಗೆ ಹಣದ ರೂಪದಲ್ಲಿ ಸಹ ಪರಿಹಾರ ನೀಡುವ ಹೈಬ್ರಿಡ್‌ ಮಾದರಿ ರೂಪಿಸಿದೆ. ಹಣದ ರೂಪದಲ್ಲಿ ಪರಿಹಾರ ಕೋರುವವರಿಗೆ ಸ್ವಾಧೀನಪಡಿಸಿಕೊಳ್ಳುವ ಭೂಮಿ ಬಾಬ್ತು ಮತ್ತು ಎಲ್ಲಾ ಭೂ ಮಾಲೀಕರಿಗೆ ಬಾಬ್ತು ಅಂದಾಜು 3,000 ಕೋಟಿ ರು ವೆಚ್ಚವಾಗಲಿದೆ ಎಂದು ಅಂದಾಜಿಸಿದೆ.

 

 

ಜಿಬಿಜಿ ಮಸೂದೆಯು ನಗರ ಯೋಜನೆ ಮತ್ತು ವಿನ್ಯಾಸ, ನಗರ ಸಾಮರ್ಥ್ಯಗಳು ಮತ್ತು ಸಂಪನ್ಮೂಲಗಳು, ಅಧಿಕಾರ ಮತ್ತು ಕಾನೂನುಬದ್ಧ ರಾಜಕೀಯ ಪ್ರಾತಿನಿಧ್ಯ, ಮತ್ತು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಾಗರಿಕ ಭಾಗವಹಿಸುವಿಕೆ ಸೇರಿದಂತೆ ಎಲ್ಲಾ ನಾಲ್ಕು ನಗರ-ವ್ಯವಸ್ಥೆಗಳ ವರ್ಗಗಳಲ್ಲಿ ನಿರಾಶಾದಾಯಕ ಅಂಕಗಳನ್ನು ಗಳಿಸಿದೆ.

 

ಒಟ್ಟಾರೆಯಾಗಿ, ಜಿಬಿಜಿ ಮಸೂದೆಯು 10ರಲ್ಲಿ 3.35 ಅಂಕಗಳನ್ನು ಗಳಿಸಿದೆ. ಜಿಬಿಜಿ ಮಸೂದೆಯು ಬಿಬಿಸಿ-ಜಿಬಿಜಿ ಮಸೂದೆಗಿಂತ ಅರ್ಧದಷ್ಟು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನವು ಬಹಿರಂಗಪಡಿಸಿರುವುದನ್ನು ಸ್ಮರಿಸಬಹುದು.

 

ಈ ಕುರಿತು ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts