ನಗದು ಕೇಂದ್ರಗಳಲ್ಲಿ ಪಾವತಿಯಾಗದ ನೀರಿನ ಬಿಲ್‌; ಹೈಟೆಕ್‌ ವಂಚನೆ, ಬಹು ಕೋಟಿ ನಷ್ಟ, ಶಿಸ್ತುಕ್ರಮವೇ ಇಲ್ಲ!

ಬೆಂಗಳೂರು; ಬಳಕೆದಾರರು, ಗ್ರಾಹಕರಿಂದ ಸಂಗ್ರಹವಾಗುತ್ತಿರುವ ನೀರಿನ ಬಿಲ್‌ಗಳ ಮೊತ್ತವು ರಾಜ್ಯದ ಹಲವು ನಗರಪಾಲಿಕೆ, ಮಹಾನಗರಪಾಲಿಕೆ, ನಗರಸಭೆ, ಪುರಸಭೆಗಳಿಗೆ ಸರಿಯಾಗಿ ಪಾವತಿಯಾಗುತ್ತಿಲ್ಲ. ಇದರಿಂದ ಸ್ಥಳೀಯ ಸಂಸ್ಥೆಗಳ ಬೊಕ್ಕಸಕ್ಕೂ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗುತ್ತಿದೆ.

 

ಇದಕ್ಕೆ ಮೈಸೂರು ಮಹಾನಗರ ಪಾಲಿಕೆಯ ಪ್ರಕರಣವೇ ಜ್ವಲಂತ ನಿದರ್ಶನ.

 

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ  ಅವಧಿಯಿಂದಿಡಿದು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಯಲ್ಲಿಯೂ ಇಂತಹ ಅಕ್ರಮ ನಡೆಯುತ್ತಲೇ ಇದೆ.  ಮೈಸೂರು ಮಹಾನಗರ ಪಾಲಿಕೆ ಅಧೀನದಲ್ಲಿರುವ ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ಅಧಿಕಾರಿ, ಸಿಬ್ಬಂದಿ ವರ್ಗದವರು ಗ್ರಾಹಕರಿಂದ ಸಂಗ್ರಹಿಸಿದ್ದ ನೀರಿನ ಬಿಲ್‌ ಮೊತ್ತವನ್ನು

ಪಾಲಿಕೆಗೆ ಪಾವತಿಸಿರಲಿಲ್ಲ.

 

ಕೆಲ ಕಾರ್ಖಾನೆಗಳ ಜೊತೆಗೆ ಒಪ್ಪಂದ ಮಾಡಿಕೊಂಡು ನೀರಿನ ಬಿಲ್ ಮೊತ್ತದಲ್ಲಿ ಕಡಿತ ಮಾಡುವುದರೊಂದಿಗೆ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇಂತಹ ಅಧಿಕಾರಿಗಳು, ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿಲ್ಲ.

 

ಈ ಸಂಬಂಧ ಮೈಸೂರು ಶಾಸಕ ಶ್ರೀ ವತ್ಸ ಟಿ ಎಸ್‌ ಅವರು ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಗಮನಸೆಳೆದಿದ್ದರು.

 

ಮೈಸೂರು ಮಹಾನಗರಪಾಲಿಕೆ ಅಧಿಕಾರಿ, ನೌಕರರು ಗ್ರಾಹಕರಿಂದ ನಗದು ರೂಪದಲ್ಲಿ ಹಣ ಪಡೆದು ಇದನ್ನು ಪಾಲಿಕೆಯ ನಗದು ಕೇಂದ್ರಗಳಲ್ಲಿ ಪಾವತಿಸಿಲ್ಲ. ಸಾಫ್ಟ್‌ವೇರ್‍‌, ತಂತ್ರಜ್ಞಾನದ ನೆರವಿನೊಂದಿಗೆ ಈ ಹಣವನ್ನು ಲಪಟಾಯಿಸಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರು ಸದನಕ್ಕೆ ಲಿಖಿತ ಉತ್ತರ ಒದಗಿಸಿದ್ದಾರೆ.

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಿಂದ ಈಗಿನ ಕಾಂಗ್ರೆಸ್‌ ಸರ್ಕಾರದಲ್ಲೂ ಇಂತಹ ಅಧಿಕಾರಿ, ನೌಕರರ ಕೈ ಚಳಕ ನಡೆದಿರುವುದು, ಸಚಿವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

ಪ್ರಕರಣದ ವಿವರ

 

ನೀರಿನ ಸಂಪರ್ಕಗಳಿಗೆ ಪ್ರತಿ ತಿಂಗಳಿಗೆ ಬಿಲ್‌ನ್ನು ವಿತರಿಸಲು, ಬಿಲ್‌ ಮೊತ್ತವನ್ನು ಪಾವತಿಸಿಕೊಳ್ಳಲು, ನೀರಿನ ಸಂಪರ್ಕಗಳ ಮಾಹಿತಿ ನಿರ್ವಹಣೆ ಮಾಡಲು ಮೈಸೂರು ಮಹಾನಗರ ಪಾಲಿಕೆಯು 2021ರ ಆಗಸ್ಟ್‌ 3ರಂದು ನಡೆದಿದ್ದ ಸಾಮಾನ್ಯ ಸಭೆಯು ಒಪ್ಪಿಗೆ ನೀಡಿತ್ತು. ಇದರ ಪ್ರಕಾರ ಸಾಫ್ಟ್‌ವೇರ್‍‌ ಅಭಿವೃದ್ಧಿಪಡಿಸಲು ಕಿಯೋನಿಕ್ಸ್‌ ಮೂಲಕ ಸೆಮಿನಲ್ ಸಾಫ್ಟ್‌ವೇರ್‍‌ ಸಂಸ್ಥೆಗೆ ಕಾರ್ಯಾದೇಶ ನೀಡಲಾಗಿತ್ತು.

 

ಈ ಸಂಸ್ಥೆಯು ಅಭಿವೃದ್ದಿಪಡಿಸಿದ್ದ ಸಾಫ್ಟ್‌ವೇರ್‍‌ನ್ನು 2022ರ ಮೇ ತಿಂಗಳಿನಿಂದ ಪಾಲಿಕೆಯು ಬಳಸಿತ್ತು. ನೀರಿನ ಬಿಲ್ಲಿಂಗ್‌, ನೀರಿನ ಶುಲ್ಕ ಪಾವತಿಸಿಕೊಳ್ಳಲು ಈ ಸಾಫ್ಟ್‌ವೇರ್‍‌ ಬಳಕೆಯಾಗಿತ್ತು. ಈ ಸಾಫ್ಟ್‌ವೇರ್‍‌ ಪ್ಯಾಕೇಜ್‌ನಲ್ಲಿ 5 ವರ್ಷದವರೆಗೆ ಸಾಫ್ಟ್‌ವೇರನ್ನು ನಿರಂತರವಾಗಿ 24/7 ಆನ್‌ಲೈನ್‌ ನಿರ್ವಹಣೆ, ನುರಿತ ತಾಂತ್ರಿಕ ಬೆಂಬಲವನ್ನೂ ನೀಡಬೇಕಾಗಿತ್ತು.

 

 

ಈ ಕುರಿತು ಸಾಫ್ಟ್‌ವೇರ್‍‌ನ ಬ್ಯಾಕ್‌ ಎಂಡ್‌ ಕಾರ್ಯದಲ್ಲಿ ನಿರತರಾಗಿದ್ದ ಎಲ್ಲಾ ಸಿಬ್ಬಂದಿಗಳ ಲಾಗಿನ್ ವ್ಯವಹಾರಗಳನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರು ಪರಿಶೀಲಿಸಿದ್ದರು. ಈ ಸಂದರ್ಭದಲ್ಲಿ 450 ಸಂಖ್ಯೆಯಲ್ಲಿ ಅನಧಿಕೃತ ಮ್ಯಾನುಯಲ್‌ ರೆಸಿಪ್ಟ್‌ಗಳನ್ನು ದತ್ತಾಂಶಗಳಲ್ಲಿ ಕಾಲೋಚಿತಗೊಳಿಸಿದ್ದರು ಎಂಬ ಸಂಗತಿಯು ಪತ್ತೆಯಾಗಿತ್ತು. ಈ ಬಗ್ಗೆ ಪರಿಶೀಲಿಸಿ ವರದಿ ನೀಡಲು ಮೈಸೂರು ಮಹಾನಗರಪಾಲಿಕೆಯ ಆಯುಕ್ತರು ಉಪ ಆಯುಕ್ತರಿಗೆ ಸೂಚಿಸಿದ್ದರು ಎಂಬುದು ಸರ್ಕಾರವು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

ನೀರಿನ ಬಿಲ್ಲಿಂಗ್‌ ಸಾಫ್ಟ್‌ವೇರ್‍‌ನ ಸರ್ವರ್‍‌ ಡೌನ್‌ ಮತ್ತು ಇತರೆ ತಾಂತ್ರಿಕ ಸಮಸ್ಯೆಯಿಂದಾಗಿ ಕೆಲವು ಬಿಬಿಎಪಿಎಸ್‌ ವಹಿವಾಟುಗಳು ಪಾವತಿದಾರರ ಬ್ಯಾಂಕ್‌ ಖಾತೆಯಿಂದ ನೇರವಾಗಿ ಪಾಲಿಕೆಯ ಬ್ಯಾಂಕ್‌ ಖಾತೆಗೆ ಜಮಾ ಆಗಿತ್ತು. ಆದರೂ ಸಹ ಸಾಫ್ಟ್‌ವೇರ್‍‌ನಲ್ಲಿ ಬಳಕೆದಾರರ ಖಾತೆಯಲ್ಲಿ ಈ ಮೊತ್ತವು ನಮೂದಾಗಿರಲಿಲ್ಲ. ಇಂತಹ ಪ್ರಕರಣಗಳನ್ನು ನೆಫ್ಟ್‌ ಪಾವತಿ ಮೂಲಕ ಕಾಲೋಚಿತಗೊಳಿಸಲು ಬಿಲ್ಲಿಂಗ್‌ ಸಾಫ್ಟ್‌ವೇರ್‍‌ನಲ್ಲಿ ಮ್ಯಾನ್ಯುಯಲ್‌ ರೆಸಿಪ್ಟ್‌ ಮಾಡ್ಯೂಲ್‌ ಹೊಂದಿತ್ತು.

 

ಇದನ್ನು ಬಳಸಿಕೊಂಡಿದ್ದ ಭ್ರಷ್ಟರ ಕೂಟವು 2022ರ ಡಿಸೆಂಬರ್‍‌ನಿಂದ 2024ರ ಅಕ್ಟೋಬರ್‍‌ ಅವಧಿಯಲ್ಲಿ ನಕಲಿ ಬಿಬಿಪಿಎಸ್‌ ಟ್ರಾನ್ಸಾಕ್ಷನ್‌ ಐಡಿಗಳನ್ನು ನಮೂದಿಸಿತ್ತು. ಈ ಮೂಲಕ ಒಟ್ಟು 491 ಮ್ಯಾನುಯಲ್‌ ರೆಸಿಫ್ಟ್‌ಗಳನ್ನು ಮಾಡುವ ಮೂಲಕ ಒಟ್ಟು 1,28,38,61 ರು.ಗಳನ್ನು ದತ್ತಾಂಶದಲ್ಲಿ ಅನಧಿಕೃತವಾಗಿ ಕಾಲೋಚಿತಗೊಳಿಸಿದ್ದರು ಎಂದು ಸರ್ಕಾರವು ನೀಡಿರುವ ಉತ್ತರದಲ್ಲಿ ವಿವರಿಸಲಾಗಿದೆ.

 

ಈ ಕುರಿತು ಸಂಬಂಧಿಸಿದ ಅಧಿಕಾರಿವರ್ಗವನ್ನು ವಿಚಾರಣೆಗೊಳಪಡಿಸಿತ್ತು. ಜಲ ನಿರೀಕ್ಷಕರು ಮತ್ತು ಮಾಪಕ ಓದುಗರು ವಾರ್ಡ್‌ ವ್ಯಾಪ್ತಿಯಲ್ಲಿ ಬಳಕೆದಾರರಿಂದ ನಗದು ರೂಪದಲ್ಲಿ ಹಣ ಪಡೆದಿದ್ದರು. ಈ ಮೊತ್ತವನ್ನು ಪಾಲಿಕೆಯ ನಗದು ಕೇಂದ್ರಗಳಲ್ಲಿ ಪಾವತಿಸದೇ ಸಾಫ್ಟ್‌ವೇರ್‍‌ ತಾಂತ್ರಿಕ ತಂಡದ ನೆರವಿನೊಂದಿಗೆ ಇಂತಹ ಕಾರ್ಯ ಮಾಡಲಾಗಿದೆ ಎಂದು ವಿಚಾರಣೆ ವೇಳೆಯಲ್ಲಿ ಒಪ್ಪಿಕೊಂಡಿರುವುದು ತಿಳಿದು ಬಂದಿದೆ.

 

 

ಅಲ್ಲದೇ ಈ ಸಂಬಂಧ ನೋಟೀಸ್‌ಗಳನ್ನು ಜಾರಿಗೊಳಿಸಿತ್ತು. ನೀರು ಸರಬರಾಜಿಗೆ ಸಂಬಂಧಿಸಿದ ಒಟ್ಟು 21 ಮಂದಿ ತಪ್ಪೊಪ್ಪಿಗೆ ಪತ್ರವನ್ನೂ ಬರೆದುಕೊಟ್ಟಿದ್ದರು. ಅಲ್ಲದೇ ಅವರಿಂದ 1,32,18,923 ರು ಗಳನ್ನು ಪಾವತಿಸಿಕೊಂಡಿತ್ತು.

 

‘ಅನಧಿಕೃತ ಮ್ಯಾನ್ಯೂವಲ್‌ ರೆಸಿಫ್ಟ್‌ ಮೊತ್ತವನ್ನು ಜಲ ನಿರೀಕ್ಷಕರು ಮತ್ತು ಮಾಪಕ ಓದುಗರಿಂದ ಪಾವತಿಸಿಕೊಂಡಿರುವುದರಿಂದ ಈ ಹಂತದಲ್ಲಿ ಪಾಲಿಕೆಗೆ ಯಾವುದೇ ಆರ್ಥಿಕ ನಷ್ಟವುಂಟಾಗಿಲ್ಲ. ಇಂತಹ ಪ್ರಕರಣಗಳು ಮುಂದಿನ ದಿನಗಳಲ್ಲಿ ಮರುಕಳಿಸುವುದನ್ನು ತಡೆಗಟ್ಟಲು ಸಾಫ್ಟ್‌ವೇರ್‍‌ಗೆ ಹೆಚ್ಚಿನ ಭದ್ರತೆ ತ್ತು ಕಾರ್ಯಕ್ಷಮತೆ ಹೆಚ್ಚಿಸಲಾಗುತ್ತದೆ. ಅಲ್ಲದೇ ಮೂರನೇ ಸಂಸ್ಥೆಯಿಂದ ಸಾಫ್ಟ್‌ವೇರ್‍‌ ಆಡಿಟ್‌ ಮಾಡಿಸಲು ಕ್ರಮ ವಹಿಸಲಾಗುತ್ತಿದೆ,’ ಎಂದು ಸರ್ಕಾರವು ಉತ್ತರಿಸಿದೆ.

SUPPORT THE FILE

Latest News

Related Posts