ಬೆಂಗಳೂರು; ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸಲು 2007-08ರಿಂದ 2024-25ನೇ ಸಾಲಿನವರೆಗೆ ಅಂದರೆ 24 ವರ್ಷಗಳಲ್ಲಿ ಬರೋಬ್ಬರಿ 48,791.49 ಕೋಟಿ ರು ಹಂಚಿಕೆಯಾಗಿದೆ. ಆದರೆ ಇದುವರೆಗೂ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಿಲ್ಲ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆ, ಅಭಿವೃದ್ಧಿ, ಅನುದಾನ ಹಂಚಿಕೆ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ 24 ವರ್ಷಗಳಲ್ಲಿ ಹಂಚಿಕೆಯಾಗಿರುವ ಅನುದಾನದ ವಿವರಗಳೂ ಮುನ್ನೆಲೆಗೆ ಬಂದಿವೆ. ಯೋಜನೆ ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿರುವ ಅಂಕಿ ಅಂಶಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡುವ ಉದ್ದೇಶದಿಂದ ಡಾ ಡಿ ಎಂ ನಂಜುಂಡಪ್ಪ ಅವರ ನೇತೃತ್ವದಲ್ಲಿ 2000ರಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿಯು 2002ರ ಜೂನ್ 25ರಲ್ಲಿ ಅಂತಿಮ ವರದಿ ಸಲ್ಲಿಸಿತ್ತು. ಇದರ ಪ್ರಕಾರ ರಾಜ್ಯದಲ್ಲಿ 175 ತಾಲೂಕುಗಳ ಅಭಿವೃದ್ಧಿ ಮಟ್ಟವನ್ನು 35 ಆರ್ಥಿಕ ಮತ್ತು ಸಾಮಾಜಿಕ ಸೂಚಿಗಳನ್ನಾಧರಿಸಿ ಅಭಿವೃದ್ಧಿ ಅಂತರವನ್ನು ಅಂದಾಜಿಸಿತ್ತು.
ಕೃಷಿ, ಕೈಗಾರಿಕೆ, ಆರ್ಥಿಕ, ಮೂಲಸೌಲಭ್ಯಗಳು, ಸಾಮಾಜಿಕ ಮೂಲಸೌಲಭ್ಯಗಳು, ಹಣಕಾಸಿನ ಹಾಗೂ ತಾಂತ್ರಿಕ ಮೂಲ ಸೌಕರ್ಯ ಸೇರಿದಂತೆ ಇನ್ನಿತರೆ ವಲಯಗಳಲ್ಲಿನ ಅಭಿವೃದ್ಧಿ ಅಂತರವನ್ನು ಸಮಿತಿಯು ವಿಶ್ಲೇಷಿಸಿತ್ತು. ಅಲ್ಲದೇ 114 ತಾಲೂಕುಗಳನ್ನು ಹಿಂದುಳಿದ ತಾಲೂಕುಗಳು ಎಂದು ಈ ಸಮಿತಿಯು ಗುರುತಿಸಿತ್ತು.
ಸಮಿತಿಯ ವಿಶ್ಲೇಷಣೆ ಪ್ರಕಾರ ಕಳೆದ 24 ವರ್ಷಗಳಲ್ಲಿ ಒಟ್ಟಾರೆ 48,791.49 ಕೋಟಿ ರು. ಹಂಚಿಕೆಯಾಗಿವೆ. ಆದರೂ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಿಲ್ಲ.
2007-08ರಿಂದ 2024-25 ಅಂದರೇ 24 ವರ್ಷಗಳಲ್ಲಿ ಸುಮಾರು 48,791.49 ಕೋಟಿ ರು ಹಂಚಿಕೆಯಾಗಿ ಶೇ 91.27ರಷ್ಟು ಅಭಿವೃದ್ಧಿ ಕಾರ್ಯಗಳಿಗೆ, ಯೋಜನೆಗಳಿಗೆ ವೆಚ್ಚ ಮಾಡಲಾದರೂ ಸಹ ಪ್ರಾದೇಶಿಕ ಅಸಮತೋಲನವನ್ನು ಡಾ ನಂಜುಂಡಪ್ಪ ವರದಿ ಶಿಫಾರಸ್ಸಿನಂತೆ ನಿವಾರಿಸಲು ಸಾಧ್ಯವಾಗಿಲ್ಲ. ಅಲ್ಲದೇ ಈ ವರದಿಯು 24 ವರ್ಷಗಳಷ್ಟು ಹಳೆಯದಾಗಿದೆ. ಕೆಲವು ಸೂಚ್ಯಂಕಗಳು ಮೌಲ್ಯ ಕಳೆದುಕೊಂಡಿದೆ.,’ ಎಂದು ಯೋಜನಾ ಇಲಾಖೆಯು ತನ್ನ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
2022-23ನೇ ಸಾಲಿನ ಜಿಲ್ಲಾವಾರು ಆಂತರಿಕ ಉತ್ಪನ್ನವನ್ನು ಪರಿಶೀಲಿಸಿದಾಗ ದಕ್ಷಿಣ ಕರ್ನಾಟಕದ ತಲಾ ಆದಾಯವು 4,02,182 ರು. ಅಗಿದೆ. ಉತ್ತರ ಕರ್ನಾಟಕದ ತಲಾ ಆದಾಯವು 1,75,295 ರು ಇದೆ. ಒಂದು ತಲಾ ವರಮಾನಗಳಲ್ಲಿ ವ್ಯತ್ಯಾಸವಿದ್ದಲ್ಲಿ ಅದನ್ನು ಸರಿದೂಗಿಸಲು ರಾಜ್ಯ ಸರ್ಕಾರವು ಉತ್ಪನ್ನವನ್ನು ವೃದ್ಧಿಸುವ ಸಲುವಾಗಿ ಹಲವು ನೀತಿ ನಿರೂಪಣೆಗಳನ್ನು ಕೈಗೆತ್ತಿಕೊಂಡಿದೆ.
ಕರ್ನಾಟಕ ಐಟಿ ಕಾರ್ಯನೀತಿ (2020-25), ಕರ್ನಾಟಕ ಸ್ಟಾರ್ಟ್ ಅಪ್ ನೀತಿ (2022-27), ಕರ್ನಾಟಕ ಕೈಗಾರಿಕೆ ನೀತಿ (2020-25), ಕರ್ನಾಟಕ ವಿದ್ಯುನ್ಮಾಮ ವ್ಯವಸ್ಥೆಗಳ ವಿನ್ಯಾಸ ಮತ್ತು ತಯಾರಿಕೆ ನೀತಿ (2017-22), ಕರ್ನಾಟಕ ಪ್ರವಾಸೋದ್ಯಮ ನೀತಿ (2020-26), ವಿಶೇಷ ಆರ್ಥಿಕ ವಲಯ ಕಾಯ್ದೆ (2005), ವಿದ್ಯುತ್ ವಾಹನ ನೀತಿ (2017), ಕರ್ನಾಟಕ ಸೌರ ನೀತಿ (2014-21) ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ (2022-27)ಜಾರಿಗೊಳಿಸಿವೆ.
ಕಲ್ಬುರ್ಗಿ ವಿಭಾಗದಲ್ಲಿ 22 ಅತ್ಯಂತ ಹಿಂದುಳಿದ ತಾಲೂಕುಗಳಿವೆ. 5 ತಾಲೂಕುಗಳು ಅತೀ ಹಿಂದುಳಿದಿವೆ. 02 ತಾಲೂಕುಗಳು ಹಿಂದುಳಿದಿವೆ. 03 ತಾಲೂಕುಗಳಷ್ಟೇ ಅಭಿವೃದ್ಧಿ ಹೊಂದಿವೆ. ಬೆಳಗಾವಿ ವಿಭಾಗದಲ್ಲಿ 05 ತಾಲೂಕುಗಳು ಅತ್ಯಂತ ಹಿಂದುಳಿದಿವೆ. 12 ತಾಲೂಕುಗಳು ಅತೀ ಹಿಂದುಳಿದಿವೆ. 14 ತಾಲೂಕುಗಳು ಹಿಂದುಳಿದಿವೆ. 26 ತಾಲೂಕುಗಳು ಮಾತ್ರ ಅಭಿವೃದ್ದಿ ಹೊಂದಿವೆ.
ಪ್ರಾದೇಶಿಕ ಅಸಮತೋಲನೆ ನಿವಾರಿಸಲು ರಚಿಸಿದ್ದ ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನಂತೆ ಒಟ್ಟು ಸಂಪನ್ಮೂಲಗಳನ್ನು ರಾಜ್ಯದ 4 ವಿಭಾಗಗಳಾದ ಗುಲ್ಬರ್ಗಾ, ಬೆಂಗಳೂರು, ಬೆಳಗಾವಿ ಮತ್ತು ಮೈಸೂರು ವಿಭಾಗಗಳಲ್ಲಿ 40;25;20;15ರ ಅನುಪಾತದಲ್ಲಿ ಸಂಚಿತ ದುಸ್ಥಿತಿ ಸೂಚ್ಯಂಕಗಳನ್ನಾಧರಿಸಿ ಹಂಚಿಕೆ ಮಾಡಲಾಗಿದೆ.
ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನಂತೆ ರಾಜ್ಯದ ನಾಲ್ಕು ಪ್ರದೇಶಗಳಿಗೆ ಅನುಗುಣವಾದ 4 ವಿಭಾಗಗಳ ನಡುವಿನ ವೆಚ್ಚಗಳ ಹಂಚಿಕೆಯನ್ನು ಬಹುಶಃ ಸಮಗ್ರ ಸಂಯೋಜಿತ ಅಭಿವೃದ್ಧಿ ಸೂಚ್ಯಂಕವನ್ನು ಮತ್ತಷ್ಟು ಬಳಸಿಕೊಳ್ಳಬಹುದು ಮತ್ತು ಅದರಿಂದ ಸಂಚಿತ ಅಭಾವ ಸೂಚ್ಯಂಕವನ್ನು ಪಡೆಯಬಹುದು. ಇದರ ಪ್ರಕಾರ ಉತ್ತರ ಕರ್ನಾಟಕಕ್ಕೆ ಸೇ. 60 ಮತ್ತು ದಕ್ಷಿಣ ಕರ್ನಾಟಕಕ್ಕೆ ಶೇ. 40ರಷ್ಟು ಸಂಪನ್ಮೂಲ ಹಂಚಿಕೆಯಾಗಲಿದೆ.
ಗುಲ್ಬರ್ಗಾ ವಿಭಾಗದಲ್ಲಿ 8.06ರಷ್ಟು ದುಸ್ಥಿತಿ ಸೂಚ್ಯಂಕವಿದೆ. ಅದೇ ರೀತಿ ಬೆಳಗಾವಿಯಲ್ಲಿ 4.12, ಬೆಂಗಳೂರು 5.32, ಮೈಸೂರು 2.76 ಸೇರಿ ಒಟ್ಟಾರೆ 20.26ರಷ್ಟು ದುಸ್ಥಿತಿ ಸೂಚ್ಯಂಕವಿದೆ.
ಕಲ್ಬುರ್ಗಿಯಲ್ಲಿ ಉಚ್ಛ ನ್ಯಾಯಾಲಯ ಪೀಠ, ವಿಜಯಪುರದಲ್ಲಿ ಮಹಿಳಾ ವಿಶ್ವವಿದ್ಯಾಲಯ, ಕಲ್ಬುರ್ಗಿ ಮತ್ತು ಹುಬ್ಬಳ್ಳಿಯಲ್ಲಿ ಐ ಟಿ ಪಾರ್ಕ್, ಫುಡ್ ಪಾರ್ಕ್, ಜವಳಿ ಪಾರ್ಕ್, ವಿಮಾನ ನಿಲ್ದಾಣ, ಬೀದರ್ ಜಿಲ್ಲೆಯಲ್ಲಿ ವಿಮಾನ ನಿಲ್ದಾಣಕ್ಕೆ 18.00 ಕೋಟಿ ರು ನೀಡಲಾಗಿದೆ. ರಾಯಚೂರು, ಬೆಳಗಾವಿ ಮತ್ತು ಬೀದರ್‍ನಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದೆ.
ಧಾರವಾಡದಲ್ಲಿ ಮಾನಸಿಕ ರೋಗಿಗಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಬೀದರ್‍ನಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ ಮಾಡಲಾಗಿದೆ. ಬೀದರ್‍ನಲ್ಲಿ ಕರ್ನಾಟಕ ಪಶು ವೈದ್ಯ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಕಲ್ಬುರ್ಗಿಯಲ್ಲಿ ಹೈನುಗಾರಿಕೆ ವಿಜ್ಞಾನ ಕಾಲೇಜು, ಎಲ್ಲಾ ಅತೀ ಹಿಂದುಳಿದ ತಾಲೂಕುಗಳಲ್ಲಿ ಕಸ್ತೂರ ಬಾ ಗಾಂಧಿ ಬಾಲಕಿಯರ ಶಾಲೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ವಾರ್ಡ್‌ಗಳನ್ನು ಸ್ಥಾಪಿಸಿದೆ.
ರಾಜ್ಯದಲ್ಲಿ 53 ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಹಾವೇರಿ, ಯಾದಗಿರಿ ಮತ್ತು ಬಾಲಕೋಟೆ ಜಿಲ್ಲೆಗಳಲ್ಲಿ ಖಾಸಗಿ ಅಥವಾ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಲ್ಲ. ಹೀಗಾಗಿ ಈ ಜಿಲ್ಲೆಗಳಲ್ಲಿ ಜಿಲ್ಲಾ ಆಸ್ಪತ್ರೆಗಳನ್ನು ಉನ್ನತೀಕರಿಸಲು ಭೂಮಿ ಗುರುತಿಸಿದೆ. ಆದ್ಯತೆ ಮೇರೆಗೆ ಈ ಜಿಲ್ಲೆಗಳಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜುಗಳನ್ನು ನಿರ್ಮಾಣ ಮಾಡುತ್ತಿದೆ.
ಬೀದರ್, ಗುಲ್ಬರ್ಗಾ, ಬಾಗಲಕೋಟೆ, ಬೆಳಗಾವಿ, ಹಾವೇರಿ, ಬಳ್ಳಾರಿ, ಕೊಪ್ಪಳ, ಗದಗ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹೊಸ ರೈಲು ಮಾರ್ಗಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮೇಲು ಸೇತುವೆ, ಕೆಳ ಸೇತುವೆ ಯೋಜನೆಗಳಿಗೆ ಅನುದಾನ ನೀಡಲಾಗಿದೆ.
ಧಾರವಾಡ, ಗದಗ್, ಬೆಳಗಾವಿ, ಹಾವೇರಿ, ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಕಾಮಗಾರಿಗಳಿಗೆ, ಸಿಸಿ ರಸ್ತೆ, ಡಾಂಬರೀಕರಣ ಮಾಡಿ ರಸ್ತೆಗಳನ್ನು ಅಭಿವೃದ್ದಿ ಪಡಿಸಿದೆ.
ಹೀಗಾಗಿ 240 ತಾಲೂಕುಗಳ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಿ ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕವನ್ನು ಪರಿಷ್ಕರಿಸಲು ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಪ್ರೊ ಗೋವಿಂದರಾವ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದೆ.