ಬೆಂಗಳೂರು; ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಹೊರಗುತ್ತಿಗೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಇಂಜಿನಿಯರ್‍ಗಳು ಬಿಲ್ ಮಾಡಿಸಲು ಗುತ್ತಿಗೆದಾರರಿಗೆ 5ರಿಂದ 6 ಪರ್ಸೆಂಟ್‌ನಷ್ಟು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.
ಈ ಕುರಿತು ನಂಜೇಗೌಡ ಮತ್ತಿತರರು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ ಹೆಚ್ ಸಿ ಮಹದೇವಪ್ಪ ಮತ್ತು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರಿಗೆ 2024ರ ಆಗಸ್ಟ್ 31ರಂದೇ ಲಿಖಿತ ದೂರು ಸಲ್ಲಿಸಿದ್ದಾರೆ. ಈ ದೂರನ್ನಾಧರಿಸಿ ಕ್ರಮ ವಹಿಸಿ ಎಂದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರು ಷರಾ ಬರೆದಿದ್ದಾರೆ.
ಗ್ರಂಥಾಲಯ ಇಲಾಖೆಯಲ್ಲಿ ಪುಸ್ತಕ ಖರೀದಿಗೂ ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ದೂರು ಸಲ್ಲಿಕೆಯಾಗಿರುವ ಬೆನ್ನಲ್ಲೇ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲೂ ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತಾದ ದೂರು ಮುನ್ನೆಲೆಗೆ ಬಂದಿದೆ.
ಇದೇ ದೂರನ್ನಾಧರಿಸಿ ಇಲಾಖೆಯಲ್ಲಿ ಕಡತವು (SWD/255/MDS/2024-05, Computer Number 1535011) ತೆರೆದಿದೆ. ಈ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕ್ರೈಸ್‌ನಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಇಂಜಿನಿಯರ್‍ಗಳಾಗಿ ಕೆಲಸ ಮಾಡುತ್ತಿರುವ ಕಿರಣ್ ಕುಮಾರ್, ದತ್ತು ವಿ ನಾಯಕ್ ಮತ್ತು ಗಿರೀಶ್ ತೋನ್ಸಾಳ್ ಅವರು ಗುತ್ತಿಗೆದಾರರಿಗೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.
ದೂರಿನಲ್ಲೇನಿದೆ?
ಗಿರೀಶ್ ತೋನ್ಸಾಳ್ ಅವರು ಸುಮಾರು 15 ವರ್ಷಗಳಿಂದಲೂ ಹೊರ ಸಂಪನ್ಮೂಲ ಅಡಿಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಂಘದ ಅಧೀನದಲ್ಲಿ ನಡೆಯುವ ಕಾಮಗಾರಿಗಳ ಗುತ್ತಿಗೆದಾರರಿಗೆ ವರ್ಕ್ ಆರ್ಡರ್, ಬಿಲ್, ಇಐಆರ್‍ಎಲ್ ವರ್ಕ್ ಸ್ಲಿಪ್, ಬಿಲ್‌ಗಳಿಗೆ ಸಹಿ ಮಾಡಿಸಲು ಪ್ರತಿ ಗುತ್ತಿಗೆದಾರರ ಬಳಿ 5ರಿಂದ 6 ಪರ್ಸೆಂಟ್ ನಂತೆ ಹಣ ಪಡೆಯುತ್ತಿದ್ದಾರೆ. 2010ರಿಂದ 2022ರವರೆಗೆ ಹಣ ವಸೂಲು ಮಾಡಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿರುವುದು ತಿಳಿದು ಬಂದಿದೆ.
‘ಸರ್ಕಾರದ ಹಂತದಲ್ಲಿ ಗುತ್ತಿಗೆದಾರರ ಕಡತಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಹೊರಡಿಸಲು ಒಂದುಕಡತಕ್ಕೆ ಗುತ್ತಿಗೆದಾರರ ಬಳಿ 20,000 ರು ಪಡೆಯುತ್ತಾರೆ. ಕಾರ್ಯನಿರ್ವಾಹಕ ಅಧಿಕಾರಿಯವರಿಂದ ಕಡತಕ್ಕೆ ಸಹಿ ಮಾಡಿಸಲು ಗುತ್ತಿಗೆದಾರರ ಬಳಿ 5ರಿಂದ 6 ಪರ್ಸೆಂಟ್‌ನಂತೆ ಹಣ ವಸೂಲು ಮಾಡುತ್ತಾರೆ,’ ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.
ಗುತ್ತಿಗೆದಾರರು ಹಣ ನೀಡಿದರೆ ಮಾತ್ರ ಕಡತಗಳಿಗೆ ಸಹಿ ಬೀಳಲಿದೆ. ಹಣ ಕೊಡದಿದ್ದರೇ ಕಡತ, ಎಂಬಿ ಬುಕ್, ನೋಟ್ ಶೀಟ್‌ಗಳು ಕಾಣೆಯಾಗುತ್ತವೆ. ಕ್ರೈಸ್‌ನಲ್ಲಿ 2010ರಿಂದ ನಡೆದಿರುವ ಯಾವುದೇ ಟೆಂಡರ್‍ಗಳು ಪಾರದರ್ಶಕವಾಗಿಲ್ಲ. ಎಲ್-2 ಆದವರಿಗೆ ಕಾರ್ಯಾದೇಶ ನೀಡಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ದೂರಿನಲ್ಲಿ ಮಾರಣ್ಣ ಎಂಬುವರು ಆಪಾದಿಸಿದ್ದಾರೆ.
ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರ ಮುಂದೆಯೂ ಕೆಲ ಗುತ್ತಿಗೆದಾರರು ಲಂಚಾವತಾರವನ್ನು ಅನಾವರಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರಕ್ಕೆ ಸದಸ್ಯರ ನಾಮನಿರ್ದೇಶನ ಮಾಡಲೂ ಕೆಲ ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರಿಗಳು 40 ಪರ್ಸೆಂಟ್ ಲಂಚದ ಹಣಕ್ಕೆ ಬೇಡಿಕೆ ಇರಿಸುತ್ತಿದ್ದಾರೆ ಎಂಬ ಗುರುತರವಾದ ಆರೋಪವು ಕೇಳಿ ಬಂದಿತ್ತು.
ಬಿಬಿಎಂಪಿಯಲ್ಲಿ ಮೇಲಾಧಿಕಾರಿಗಳಿಗೆ ಕಡತ ಮಂಡಿಸಲು 60 ಪರ್ಸೆಂಟ್ ಲಂಚಕ್ಕೆ ಬೇಡಿಕೆ ಇರಿಸಲಾಗಿತ್ತು ಎಂಬ ದೂರು ಸಲ್ಲಿಕೆಯಾಗಿತ್ತು. ಇದರ ಬೆನ್ನಲ್ಲೇ ಗ್ರಂಥಾಲಯಗಳಲ್ಲಿ ಪುಸ್ತಕ ಖರೀದಿಗೂ 40 ಪರ್ಸೆಂಟ್ ಲಂಚಕ್ಕೆ ಬೇಡಿಕೆ ಇರಿಸಲಾಗುತ್ತಿದೆ ಎಂದು ಪುಸ್ತಕ ಪ್ರಕಾಶಕ ಮತ್ತು ಮಾರಾಟಗಾರರೊಬ್ಬರು ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.
ಪುಸ್ತಕ ಖರೀದಿಸಲು 40 ಪರ್ಸೆಂಟ್ ಹಣ ನೀಡಬೇಕು ಎಂದು ಬೀದರ್ ಜಿಲ್ಲಾ ಕೇಂದ್ರ ಮುಖ್ಯ ಗ್ರಂಥಾಲಯದ ಅಧಿಕಾರಿ ಸಿದ್ದಾರ್ಥ ಬಾವಿಕಟ್ಟಿ ಎಂಬುವರು ಗುರಿಯಾಗಿದ್ದಾರೆ. ಈ ಸಂಬಂಧ ಲೇಖಕ, ಪ್ರಕಾಶಕ ಮತ್ತು ಮಾರಾಟಗಾರ ಕುಪೇಂದ್ರ ಎಸ್ ಹೊಸಮನಿ ಎಂಬುವರು 2024ರ ಅಕ್ಟೋಬರ್ 24ರಂದು ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಇದೇ ದೂರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೂ ಸಲ್ಲಿಸಿದ್ದರು.
ದೂರಿನಲ್ಲೇನಿದೆ?
ಬೀದರ್ ಜಿಲ್ಲಾ ಕೇಂದ್ರ ಮುಖ್ಯ ಗ್ರಂಥಾಲಯದ ಪ್ರಭಾರಿ ಅಧಿಕಾರಿಯಾದ ಸಿದ್ಧಾರ್ಥ ಬಾವಿಕಟ್ಟಿ ಅವರು ಕಳೆದ 10 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಏನೇ ಮಾಡಿದರೂ ನನಗೆ ಇಲ್ಲಿಂದ ಯಾರೂ ಕೂಡ ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಮನೋಧೋರಣೆ ಹೊಂದಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ, ಲಂಚ ಪಡೆಯುವ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ ನಾನೇ ಸಾಕ್ಷಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಸಿಎಸ್‌ಆರ್ ನಿಧಿ ಮಂಜೂರು ಮಾಡಿಸಲು ಸಚಿವ ಮಧು ಬಂಗಾರಪ್ಪ ಅವರ ಪಿಎ ಶೇ. 40ರಿಂದ 50ರಷ್ಟು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಆಪಾದನೆಯು ಕೇಳಿ ಬಂದಿತ್ತು.
ಸಿಎಸ್‌ಆರ್ ಫಂಡ್‌ಗೂ ಶೇ.50ರಷ್ಟು ಲಂಚ!; ಶಿಕ್ಷಣ ಸಚಿವರ ಪಿಎ ವಿರುದ್ಧವೇ ಆರೋಪ
2,000 ಗ್ರಾಮ ಪಂಚಾಯ್ತಿಗಳಲ್ಲಿ ಸಿಎಸ್‌ಆರ್ ಫಂಡ್ ಅಡಿ ಮಾದರಿ ಶಾಲೆ ನಿರ್ಮಾಣ ಮಾಡಲು 03 ಪಂಚಾಯ್ತಿಗಳಿಗೆ ಒಂದು ಮಾದರಿ ಶಾಲೆಯಂತೆ 1,000 ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಸರ್ಕಾರವು ಉದ್ದೇಶಿಸಿದೆ. ಇದಕ್ಕೆ ಬೇಕಾಗಿರುವ ಅನುದಾನವನ್ನು ಕಾರ್ಪೋರೇಟ್ ಕಂಪನಿಗಳ ಮೂಲಕ ಒದಗಿಸಲು ಕಾರ್ಯ ಯೋಜನೆ ರೂಪಿಸಿರುವುದನ್ನು ಸ್ಮರಿಸಬಹುದು.