ಬೆಂಗಳೂರು; ಅಲ್ಪಸಂಖ್ಯಾತರ ಇಲಾಖೆಯಡಿಯಲ್ಲಿ ಶಾಲೆಯ ವಿಜ್ಞಾನ ಶಿಕ್ಷಕಿಯೊಬ್ಬರಿಗೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ನೀಡಿದ್ದಾರೆ ಎಂಬ ಆರೋಪಕ್ಕೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರು ಗುರಿಯಾಗಿದ್ದಾರೆ.
2023ರ ನವೆಂಬರ್‌ನಲ್ಲಿಯೇ ಸರ್ಕಾರದ ಹಿಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ವಂದಿತಾ ಶರ್ಮಾ ಅವರಿಗೆ ನೊಂದ ಶಿಕ್ಷಕಿಯು ಲಿಖಿತ ದೂರನ್ನು ಸಲ್ಲಿಸಿದ್ದರು. ಈ ದೂರಿನ ಮೇಲೆ ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತುಆಡಳಿತ ಸುಧಾರಣೆ ಇಲಾಖೆಗೆ ರವಾನಿಸಿದ್ದರು. ಈ ದೂರಿನ ಪ್ರತಿಯ ಹಾಳೆಯೊಂದು ‘ದಿ ಫೈಲ್’ಗೆ ಲಭ್ಯವಾಗಿದೆ. ದೂರಿನ ಪೂರ್ಣ ಪ್ರತಿಯು ಲಭ್ಯವಾಗಿಲ್ಲ. ಲಭ್ಯವಾಗಿರುವ ದೂರನ್ನು ಗೌಪ್ಯತೆ ಕಾರಣಕ್ಕಾಗಿ ಇಲ್ಲಿ ಬಹಿರಂಗಪಡಿಸುತ್ತಿಲ್ಲ.
ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ಘೋಷ ವಾಕ್ಯ ಬದಲಾವಣೆ ಮಾಡಿರುವ ಸಂಬಂಧ ಮೇಜರ್ ಮಣಿವಣ್ಣನ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸುತ್ತಿರುವ ನಡುವೆಯೇ ಅವರ ವಿರುದ್ಧ ಸಲ್ಲಿಕೆಯಾಗಿದ್ದ ಈ ದೂರು ಮುನ್ನೆಲೆಗೆ ಬಂದಿದೆ.
ಈ ದೂರಿನ ಕುರಿತಾಗಿ ಸರ್ಕಾರದ ಹಂತದಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ‘ದಿ ಫೈಲ್’ ದೂರನ್ನು ಹಿಂಬಾಲಿಸಿತ್ತು. 2024ರ ಜನವರಿಯಲ್ಲಿ ಈ ದೂರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ ಅಜಯ್ ನಾಗಭೂಷಣ್ ಅವರ ಕಚೇರಿಯಿಂದ (ಕಂಪ್ಯೂಟರ್ ನಂಬರ್ 6844681) ಕೆಳಗಿನ ಅಧಿಕಾರಿ ಗೆ ರವಾನೆಯಾಗಿರುವುದು ಗೊತ್ತಾಗಿದೆ.
2024ರ ಜನವರಿ 22ರಂದು ಇಲಾಖೆಯ ಉಪ ಕಾರ್ಯದರ್ಶಿ ಉಕೇಶ್ ಕುಮಾರ್ ಬಳಿ ಈ ದೂರನ್ನು (11.47 am) ಪರಿಶೀಲಿಸಿದ್ದಾರೆ. ಅದೇ ದಿನ ಅಧೀನ ಕಾರ್ಯದರ್ಶಿ ಟಿ ಮಹಂತೇಶ್ (12.14 pm) ಅವರ ಬಳಿ ಹೋಗಿದೆ. ಅಂದೇ ಈ ದೂರು ಮುಕ್ತಾಯಗೊಂಡಿರುವುದು ಇ-ಆಫೀಸ್ ಕಡತದಿಂದ ತಿಳಿದು ಬಂದಿದೆ.
ಆದರೆ ಈ ದೂರನ್ನಾಧರಿಸಿ ಯಾವ ಕ್ರಮಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ‘ದಿ ಫೈಲ್’ ಉಕೇಶ್ ಕುಮಾರ್ ಅವರನ್ನು ಸಂಪರ್ಕಿಸಿತ್ತು. ಆದರೆ ಈ ಕುರಿತು ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬದಲಿಗೆ ಮೇಲಾಧಿಕಾರಿಯಾದ ಡಾ ಅಜಯ್ ನಾಗಭೂಷಣ್ ಅವರನ್ನು ಸಂಪರ್ಕಿಸಿ ಎಂದಷ್ಟೇ ಪ್ರತಿಕ್ರಿಯಿಸಿದರು. ಅದೇ ರೀತಿ ಈ ಆರೋಪವನ್ನು ಮೇಜರ್ ಮಣಿವಣ್ಣನ್ ಅವರು ಸಹ ತಳ್ಳಿ ಹಾಕಿದ್ದಾರೆ.
ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದ ದೂರಿನಲ್ಲೇನಿದೆ?
ಮೇಜರ್ ಪಿ ಮಣಿವಣ್ಣನ್ ಅವರು ಅಲ್ಪಸಂಖ್ಯಾತರ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ನನಗೆ ಆಗಿರುವ ನೋವನ್ನು ಹೇಳಿಕೊಳ್ಳಲು ಇಚ್ಛಿಸುತ್ತೇನೆ.
ನಾನು ಅಲ್ಪಸಂಖ್ಯಾತರ ಇಲಾಖೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಆಯ್ಕೆಯಾಗಿದ್ದು ಈಗ ನಾನು ಮೌಲಾನಾ ಅಬ್ದುಲ್ ಆಜಾದ್ ವಸತಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ಗಂಡ ಮತ್ತು ನನ್ನ ಇಬ್ಬರು ಮಕ್ಕಳು …….ದಲ್ಲಿ ವಾಸವಾಗಿದ್ದಾರೆ. ನಾನು ಸಹ ನನ್ನ ಸ್ವಸ್ಥಳಕ್ಕೆ ಕುಟುಂಬದ ಜತೆ ಇರಲು ಬಯಸಿ ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ್ದೆ.
ನಾನು 2022ರ ನವೆಂಬರ್‌ನಲ್ಲಿ ವರ್ಗಾವಣೆಗಾಗಿ ಕಾರ್ಯದರ್ಶಿಯವರನ್ನು ಭೇಟಿ ಮಾಡಲು ವಿಕಾಸ ಸೌಧಕ್ಕೆ ಹೋಗಿದ್ದೆ. ಅಲ್ಲಿ ಮೇಜರ್ ಮಣಿವಣ್ಣನ್ ಅವರನ್ನು ಭೇಟಿ ಮಾಡಿ ನನ್ನ ಎಲ್ಲ ಸಮಸ್ಯೆಗಳನ್ನು ಹೇಳಿಕೊಂಡೆ. ಸರ್ ಸಹ ನನ್ನ ಸಮಸ್ಯೆಗೆ ಸ್ಪಂದಿಸುತ್ತೇನೆಂದು ಭರವಸೆ ನೀಡಿ ನನ್ನ ಮೊಬೈಲ್ ಸಂಖ್ಯೆಯನ್ನು ಪಡೆದು ಆ ಸಮಯದಲ್ಲಿ ನನಗೆ ಕರೆ ಅಥವಾ ಮೆಸೇಜ್‌ಗಳನ್ನು ಕಳಿಸುವುದಾದರೆ ಟೆಲಿಗ್ರಾಂನಲ್ಲಿ ಮಾಡುವಂತೆ ತಿಳಿಸಿದರು.
ಆಯ್ತು ಸರ್ ಎಂದು ಹೇಳಿ ಬಂದೆ. ನಾನೇ ಒಂದುವಾರದ ಬಳಿಕ ಅವರಿಗೆ ಮೆಸೇಜ್ ಮಾಡಿದೆ. ಅವರು ತಕ್ಷಣಕ್ಕೆ ರಿಪ್ಲೈ ಮಾಡಲಿಲ್ಲ. ಸರಿ ಸುಮಾರು ರಾತ್ರಿ 8 ಗಂಟೆಗೆ ಅವರಿಂದ ರಿಪ್ಲೈ ಬಂತು. ನಾನು ನನ್ನ ವರ್ಗಾವಣೆಯ ಬಗ್ಗೆ ತಿಳಿಯಲು ಕಾಯುತ್ತಿದ್ದೆ. ಆದರೆ ಮೇಜರ್ ಮಣಿವಣ್ಣನ್ ಅವರು ಬೇರೆ ರೀತಿಯ ಮೆಸೇಜ್‌ಗಳನ್ನು ಕಳಿಸಲು ಪ್ರಾರಂಭಿಸಿದರು.
ನೀನು ತುಂಬಾ ಚೆನ್ನಾಗಿದ್ದೀಯಾ ನಾನು ನಿನಗೆ ಯಾವ ಸ್ಥಳಕ್ಕೆ ಬೇಕಿದ್ದರೂ ವರ್ಗಾವಣೆ ಮಾಡಿ ಕೊಡುತ್ತೇನೆ. ನೀನು ಒಂದು ಸಲ ನನ್ನ ಗೆಸ್ಟ್‌ಹೌಸ್ ಗೆ ಬಂದು ಹೋಗಿ ಎಂದು ಮೆಸೇಜ್ ಮಾಡಿದರು. ನಾನು ಈ ಎಲ್ಲಾ ವಿಷಯಗಳನ್ನು ನನ್ನ ಗಂಡನಿಗೆ ತಿಳಿಸಿದೆ.
ಈ ದೂರಿನ ಕುರಿತು ಪ್ರತಿಕ್ರಿಯಿಸಿರುವ ಖುದ್ದು ಮೇಜರ್ ಮಣಿವಣ್ಣನ್ ಅವರು ‘ಇದಕ್ಕೆ ನನಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ದೂರಿನ ಕುರಿತು ಪ್ರತಿಕ್ರಿಯೆಯನ್ನೂ ಕೇಳಿಲ್ಲ. ಅದೊಂದು ಆಧಾರವಿಲ್ಲದ ದೂರು. ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೇ ಅಜಯ್ ನಾಗಭೂಷಣ್ ಅವರನ್ನು ಸಂಪರ್ಕಿಸಿ. ಅನಾಮಧೇಯ ದೂರು ಅದು. ವಿಚಾರಣೆ ನಂತರ ಅದು ಮುಕ್ತಾಯಗೊಂಡಿದೆ,’ ಎಂದು ವಾಟ್ಸಾಪ್‌ನಲ್ಲಿ ಮೌಖಿಕ ಸಂದೇಶದ ಮೂಲಕ ‘ದಿ ಫೈಲ್’ಗೆ ಪ್ರತಿಕ್ರಿಯೆ ನೀಡಿದ್ದಾರೆ.