2.25 ಕೋಟಿ ರು ಮೌಲ್ಯದ ಸರ್ಕಾರಿ ಜಮೀನು, ಕೇವಲ 22.25 ಲಕ್ಷಕ್ಕೆ ಮಂಜೂರು; ಬೊಕ್ಕಸಕ್ಕೆ ನಷ್ಟ

ಬೆಂಗಳೂರು; ಕೃಷಿಯೇತರ ಮಾರುಕಟ್ಟೆ ಮೌಲ್ಯ 2.25 ಕೋಟಿ ರು. ಬೆಲೆ ಬಾಳುವ ಸರ್ಕಾರಿ ಜಮೀನನ್ನು ಕೇವಲ 22.50 ಲಕ್ಷ ರು. ದರದಲ್ಲಿ ಕರ್ನಾಟಕ ಬ್ಯಾಸ್ಕೆಟ್‌ ಬಾಲ್‌ ಅಸೋಸಿಯೇಷನ್‌ಗೆ  5  ಎಕರೆ ಗೋಮಾಳ ಜಮೀನು ಹಂಚಿಕೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಈಗ ಸದನಕ್ಕೆ ಲಿಖಿತ ಉತ್ತರ ಒದಗಿಸಿದ್ದಾರೆ.

 

ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯರಾಗಿರುವ ಎನ್‌ ರವಿಕುಮಾರ್‍‌ ಅವರು ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ಒದಗಿಸಿರುವ ಕೃಷ್ಣಬೈರೇಗೌಡ ಅವರು ಕೃಷಿಯೇತರ ಮಾರುಕಟ್ಟೆ ಮೌಲ್ಯಕ್ಕೆ ಶೇ.10ರಷ್ಟು ದರದಲ್ಲಿ ಗೋಮಾಳ ಜಮೀನು ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಅತ್ಯಂತ ಕನಿಷ್ಠ ದರಕ್ಕೆ ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಜನಸೇವಾ ಟ್ರಸ್ಟ್‌ಗೂ ಗೋಮಾಳ ಜಮೀನು ಹಂಚಿಕೆ ಮಾಡಿತ್ತು. ಇದರಿಂದ ಸರ್ಕಾರಕ್ಕೆ ಬಹುಕೋಟಿಗಳಷ್ಟು ನಷ್ಟವುಂಟಾಗಿತ್ತು. ಈ ಬಗ್ಗೆ  ಪ್ರತಿಪಕ್ಷದಲ್ಲಿದ್ದ ಸಂದರ್ಭದಲ್ಲಿ ಕೃಷ್ಣಬೈರೇಗೌಡ ಆದಿಯಾಗಿ ಇಡೀ ಕಾಂಗ್ರೆಸ್‌ ಇದನ್ನು ಬಲವಾಗಿ ವಿರೋಧಿಸಿತ್ತು. ಅಲ್ಲದೇ ಅಧಿಕಾರಕ್ಕೆ ಬಂದ ಕೂಡಲೇ ಆ ಎಲ್ಲಾ ಜಮೀನುಗಳನ್ನು ಸರ್ಕಾರವು ವಾಪಸ್‌ ಪಡೆದುಕೊಳ್ಳಲಿದೆ ಎಂದು ಹೇಳಿಕೆ ನೀಡಿದ್ದರು.

 

ಆದರೆ ಕಾಂಗ್ರೆಸ್‌ ಸರ್ಕಾರವು 8 ತಿಂಗಳ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದರೂ ಇದುವರೆಗೂ ಹಿಂದಿನ ಸರ್ಕಾರದ ಅವಧಿಯಲ್ಲಿ ಅತ್ಯಂತ ಕನಿಷ್ಠ ದರಕ್ಕೆ ಮಂಜೂರಾಗಿದ್ದ ಗೋಮಾಳ ಜಮೀನುಗಳನ್ನು ತನ್ನ ವಶಕ್ಕೆ ಪಡೆದಿಲ್ಲ. ಈ ನಡುವೆಯೇ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಎರಡೇ ಎರಡು ತಿಂಗಳಲ್ಲಿ ಕೃಷಿಯೇತರ ಮಾರುಕಟ್ಟೆ ಮೌಲ್ಯಕ್ಕಿಂತಲೂ ಶೇ.10ರ ದರದಲ್ಲಿ 5 ಎಕರೆ ಜಮೀನನ್ನು ಹಂಚಿಕೆ ಮಾಡಿದೆ. ಈ ಸಂಬಂಧ  ಖುದ್ದು ಸಚಿವ ಕೃಷ್ಣಬೈರೇಗೌಡ ಅವರೇ ಸದನಕ್ಕೆ ಲಿಖಿತ ಉತ್ತರ ಒದಗಿಸಿದ್ದಾರೆ.

 

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಗೊಬ್ಬರಗುಂಟೆ  ಗ್ರಾಮದ ಸರ್ವೆ ನಂಬರ್‍‌ 64ರ ಜಮೀನಿಗೆ ಪ್ರತಿ ಎಕರೆ ಜಮೀನಿಗೆ 25,00,000 ರು. ನಿಗದಿಪಡಿಸಲಾಗಿದೆ. ಪ್ರತಿ ಎಕರೆ ಜಮೀನಿಗೆ ಕೃಷಿಯೇತರ ಮಾರುಕಟ್ಟೆ ಮೌಲ್ಯವು 45,00,000 ರು. ರು ಇದೆ. ಅದರಂತೆ ಕರ್ನಾಟಕ ಬಾಸ್ಕೆಟ್‌ ಬಾಲ್‌ ಅಸೋಸಿಯೇಷನ್‌ ಸಂಸ್ಥೆಗೆ ಮಂಜೂರು ಮಾಡಿರುವ ಜಮೀನಿಗೆ ಕೃಷಿಯೇತರ ಮಾರುಕಟ್ಟೆ ಮೌಲ್ಯ 45,00,000 ರು.ಗಳಿಗೆ ಶೇ. 10ರಷ್ಟು ಅಂದರೇ 4,50,000 ರುಳಂತೆ 22,50,000 ರು.ಗಳನ್ನು ಪೋಡಿ ಶುಲ್ಕ 2,300 ರು. ನಿಗದಿಪಡಿಸಲಾಗಿರುತ್ತದೆ,’ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಉತ್ತರದಲ್ಲಿ ಮಾಹಿತಿ ಒದಗಿಸಿದ್ದಾರೆ.

 

ಸರ್ಕಾರಿ ಜಮೀನುಗಳನ್ನು ಕರ್ನಾಟಕ ಭೂ  ಮಂಜೂರಾತಿ ನಿಯಮಗಳು 1969ರಡಿಯಲ್ಲಿ ಕೈಗಾರಿಕೆ, ಶಿಕ್ಷಣ, ಕಲ್ಅಣ ಚಟುವಟಿಕೆಗಳು, ಧಾರ್ಮಿಕ, ಬೇಸಾಯ, ಕೃಷಿಯೇತರ ಉದ್ದೇಶಗಳಿಗಾಗಿ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌  ಬಿ ದಯಾನಂದ ಅವರು ಅಧ್ಯಕ್ಷರಾಗಿರಾಗಿರುವ ಕರ್ನಾಟಕ ಬ್ಯಾಸ್ಕೆಟ್‌ ಬಾಲ್‌ ಅಸೋಸಿಯೇಷನ್‌ಗೆ ಸರ್ಕಾರಿ ಬೀಳು ಜಮೀನನ್ನು ಮಂಜೂರು ಮಾಡಲು ಕಾನೂನು ಮತ್ತು ಆರ್ಥಿಕ ಇಲಾಖೆ ಅಸಮ್ಮತಿ ವ್ಯಕ್ತಪಡಿಸಿತ್ತು.

 

ಇಲಾಖೆಗಳೆರಡು  ನೀಡಿದ್ದ ಅಭಿಪ್ರಾಯವನ್ನು ಧಿಕ್ಕರಿಸಿ ಸಚಿವ ಸಂಪುಟದ ಒಪ್ಪಿಗೆ ಪಡೆದ ಕೆಲವೇ ಕೆಲವು ದಿನಗಳಲ್ಲೇ ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇ.10ರಷ್ಟು ಮಾತ್ರ ಶುಲ್ಕವನ್ನು ವಿಧಿಸಿ  2023ರ ಆಗಸ್ಟ್‌ 30ರಂದು ಹೊರಡಿಸಿದ್ದ ಆದೇಶವು  ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ‘ದಿ ಫೈಲ್‌’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

ಖಾಸಗಿ ಸಂಸ್ಥೆಗೆ ಕನಿಷ್ಟ ದರದಲ್ಲಿ 5 ಎಕರೆ ಮಂಜೂರು; ಬೊಕ್ಕಸಕ್ಕೆ ಅಂದಾಜು 9.80 ಕೋಟಿ ರು.ನಷ್ಟ!

 

ಖಾಸಗಿ ಸಂಸ್ಥೆಯಾಗಿರುವ ಕರ್ನಾಟಕ ಬ್ಯಾಸ್ಕೆಟ್‌ ಬಾಲ್‌ ಅಸೋಸಿಯೇಷನ್‌ಗೆ ಸರ್ಕಾರಿ ಬೀಳು ಜಮೀನು ಮಂಜೂರು ಮಾಡಲು ಸಚಿವ ಸಂಪುಟದ ಹಿರಿಯ ಸದಸ್ಯರೊಬ್ಬರು ಬಲವಾಗಿ ವಿರೋಧಿಸಿದ್ದರೂ ಸಹ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಅತ್ಯಾಸಕ್ತಿಯಿಂದಾಗಿ 5 ಎಕರೆ ಮಂಜೂರಾಗಿತ್ತು. ಈ ಜಮೀನನ್ನು ಮಾರ್ಗಸೂಚಿ ಮೌಲ್ಯದ ಪ್ರಕಾರವೇ ಮಂಜೂರು ಮಾಡಲು ಕಂದಾಯ ಇಲಾಖೆಯು ಸಚಿವ ಸಂಪುಟದ ಮುಂದೆ ಪ್ರಸ್ತಾವಿಸಿತ್ತು.

 

ಅಲ್ಲದೇ ಎಕರೆಗೆ ಮಾರ್ಗಸೂಚಿ ಬೆಲೆ ಪ್ರಕಾರವೇ ಎಕರೆಗೆ 40 ಲಕ್ಷ ರು ಇದೆ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಪ್ರಸ್ತಾವದಲ್ಲಿ ನಮೂದಿಸಿದ್ದರೂ ಸಹ ಇದೀಗ ಎಕರೆಗೆ ಕೇವಲ 4 ಲಕ್ಷ ರು.ನಂತೆ 5 ಎಕರೆಗೆ 20 ಲಕ್ಷ ರು. ನಂತೆ ಮಂಜೂರು ಮಾಡಿದೆ. ಇದರ ಪ್ರಕಾರ ಎಕರೆಗೆ 36 ಲಕ್ಷ ರು.ನಂತೆ ಒಟ್ಟಾರೆ 5 ಎಕರೆಗೆ 1.80 ಕೋಟಿ ರು. ನಷ್ಟವಾದಂತಿದೆ.

 

 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಗೊಬ್ಬರಗುಂಟೆ ಗ್ರಾಮದ ಸರ್ವೆ ನಂಬರ್‌ 64ಲ್ಲಿನ ಒಟ್ಟು 19.34 ಎಕರೆ ವಿಸ್ತೀರ್ಣ ಪೈಕಿ 5 ಎಕರೆ ಬೀಳು ಜಮೀನನ್ನು ಮಂಜೂರು ಮಾಡಲು ಕಾನೂನು ಮತ್ತು ಆರ್ಥಿಕ ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿತ್ತು.

 

ಅಲ್ಲದೇ ಈ ಜಮೀನು ಸರ್ಕಾರದ ವಿವಿಧ ಯೋಜನೆಗಳಿಗೆ ಅವಶ್ಯಕವಾಗಿರುವ ಕಾರಣ ಈ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಅವರು ಸಚಿವ ಸಂಪುಟ ಟಿಪ್ಪಣಿ ಹಾಳೆಯಲ್ಲಿ ಸರ್ಕಾರದ ಗಮನಕ್ಕೆ ತಂದಿದ್ದರು.

 

ಆದರೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸಚಿವ ಸಂಪುಟದ ಮುಂದೆ ಕಡತ ಮಂಡಿಸಿ ಅನುಮೋದನೆ ಪಡೆದುಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಆರ್‌ಟಿಸಿಯೂ ಸೇರಿದಂತೆ ಇತರೆ ದಾಖಲೆಗಳು (RD 225 LGB 2021) ‘ದಿ ಫೈಲ್‌’ಗೆ ಲಭ್ಯವಾಗಿತ್ತು. ಇದನ್ನಾಧರಿಸಿ ‘ದಿ ಫೈಲ್‌’ 2023ರ ಆಗಸ್ಟ್‌ 28ರಂದು ವರದಿ ಪ್ರಕಟಿಸಿತ್ತು.

 

ಖಾಸಗಿ ಸಂಸ್ಥೆಗೆ 10 ಕೋಟಿ ರು ಮೌಲ್ಯದ ಸರ್ಕಾರಿ ಜಮೀನು; ಕಾನೂನು ಅಭಿಪ್ರಾಯ ಧಿಕ್ಕರಿಸಿದ ಸಚಿವ

 

ಸರ್ವೆ ನಂಬರ್‌ರಲ್ಲಿ ಒಟ್ಟು 19.34 ಎಕರೆ ಜಮೀನಿನಲ್ಲಿ 14 ಎಕರೆ ಆಶ್ರಯ ಯೋಜನೆಗೆಂದು ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಮಂಜೂರಾಗಿದೆ ಎಂಬುದು ಆರ್‌ಟಿಸಿ ದಾಖಲೆ ಮತ್ತು ಸಚಿವ ಸಂಪುಟ ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.

 

ಜಿಲ್ಲಾಧಿಕಾರಿ ಅವರ ವರದಿ ಪ್ರಕಾರ ಕರ್ನಾಟಕ ಬ್ಯಾಸ್ಕೆಟ್‌ ಬಾಲ್‌ ಅಸೋಸಿಯೇಷನ್‌ಗೆ ನೀಡಲು ಪ್ರಸ್ತಾಪಿಸಿದ್ದ ಜಮೀನಿನ ಮಾರ್ಗಸೂಚಿ ಮೌಲ್ಯವು ಎಕರೆಯೊಂದಕ್ಕೆ ಸುಮಾರು 40 ಲಕ್ಷ ರು. ಇದೆ. ಆದರೆ ಜಮೀನಿನ ಮಾರುಕಟ್ಟೆ ಮೌಲ್ಯವು ಮಾರ್ಗಸೂಚಿ ಮೌಲ್ಯಕ್ಕಿಂತ ಹೆಚ್ಚಾಗಿತ್ತು. ಮಾರುಕಟ್ಟೆಯಲ್ಲಿ ಎಕರೆಗೆ 2 ಕೋಟಿ ರು. ಬೆಲೆ ಇದೆ. ಇದರ ಪ್ರಕಾರ 5 ಎಕರೆಗೆ ಅಂದಾಜು 10 ಕೋಟಿ ರು. ಬೆಲೆ ಬಾಳಲಿದೆ ಎಂದು ಗೊತ್ತಾಗಿದೆ.

 

ಕಾನೂನು ಇಲಾಖೆ ಅಭಿಪ್ರಾಯದಲ್ಲೇನಿದೆ?

 

ಈ ಪ್ರಕರಣದಲ್ಲಿ ಕಲಂ 22(ಎ)ರಲ್ಲಿ ತಿಳಿಸಿರುವ ಯಾವುದೇ ಉದ್ದೇಶವನ್ನು ಈ ಪ್ರಸ್ತಾವನೆಯು ಹೊಂದಿರುವುದಿಲ್ಲ. ಮುಂದುವರೆದು ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗಾಗಲೀ ಅಥವಾ ಇತರೆ ಖಾಸಗಿ ಸಂಸ್ಥೆಗಳಿಗಾಗಲೀ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲವಾದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಕಸಬಾ ಹೋಬಳಿ ಗೊಬ್ಬರಗುಂಟೆ ಗ್ರಾಮದ ಸ. ನಂ 64ರಲ್ಲಿನ 5 ಎಕರೆ ಜಮೀನನ್ನು ಕರ್ನಾಟಕ ಸ್ಟೇಟ್‌ ಬ್ಯಾಸ್ಕೆಟ್‌ ಬಾಲ್‌ ಅಸೋಸಿಯೇಷನ್‌ಗೆ ಮಂಜೂರು ಮಾಡಲು ಅವಕಾಶವಿರುವುದಿಲ್ಲ ಎಂದು (ಟಿಪ್ಪಣಿ ಸಂಖ್ಯೆ; ಲಾ/ಅಭಿಪ್ರಾಯ/124/2023 ದಿನಾಂಕ 08-03-2023) ಅಭಿಪ್ರಾಯ ನೀಡಿತ್ತು.

 

ಅದೇ ರೀತಿ ಆರ್ಥಿಕ ಇಲಾಖೆಯು ಕಂದಾಯ ಇಲಾಖೆಯ ಪ್ರಸ್ತಾವನೆಗೆ ಅಸಮ್ಮತಿ ವ್ಯಕ್ತಪಡಿಸಿತ್ತು.

 

 

ಆರ್ಥಿಕ ಇಲಾಖೆ ಅಭಿಪ್ರಾಯವಿದು

 

ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ಪ್ರಸ್ತಾವನೆಗೆ ಸಂಬಂಧಿಸಿದಂತೆ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗಳಿಗಾಗಲೀ ಅಥವಾ ಇತರೆ ಖಾಸಗಿ ಖಾಸಗಿ ಸಂಸ್ಥೆಗಳಿಗಾಗಲೀ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲವಾದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಕಸಬಾ ಹೋಬಳಿ ಗೊಬ್ಬರ ಗುಂಟೆ ಗ್ರಾಮದ ಸರ್ವೆ ನಂಬರ್‌ 64ರಲ್ಲಿಲನ 5 ಎಕರೆ ಬಿ ಖರಾಬು ಜಮೀನನ್ನು ಕರ್ನಾಟಕ ಸ್ಟೇಟ್‌ ಬ್ಯಾಸ್ಕೆಟ್‌ ಬಾಲ್‌ ಅಸೋಸಿಯೇಷನ್‌ಗೆ ಮಂಜೂರು ಮಾಡಲು ಅವಕಾಶವಿರುವುದಿಲ್ಲವೆನ್ನುವುದು ಕಾನೂನು ಇಲಾಖೆಯು ನೀಡಿರುವ ಅಭಿಪ್ರಾಯದ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಯ ಸಹಮತಿ ಇಲ್ಲ (FD 372 Exp-7/2023, 18.03.2023) ಎಂದು ಕಂದಾಯ ಇಲಾಖೆಗೆ ತಿಳಿಸಿತ್ತು.

 

 

ಕಂದಾಯ ಇಲಾಖೆ ಪ್ರತಿಕ್ರಿಯೆಯೇನಾಗಿತ್ತು?

 

ಈ ಪ್ರಕರಣದಲ್ಲಿ ಕಾನೂನು ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಕಂದಾಯ ಇಲಾಖೆಯು ಒಪ್ಪಿತ್ತು. ಆದರೆ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಒಪ್ಪಿರಲಿಲ್ಲ. ‘ಆರ್ಥಿಕ ಇಲಾಖೆಯು ಸದರಿ ಜಮೀನನ್ನು ಬಿ ಖರಾಬು ಜಮೀನೆಂದು ಅಭಿಪ್ರಾಯದಲ್ಲಿ ತಿಳಿಸಿರುತ್ತದೆ. ಪ್ರಸ್ತುತ ಆರ್‌ಟಿಸಿಯಂತೆ ಈ ಜಮೀನು ಬಿ ಖರಾಬು ಅಂಕಣದಲ್ಲಿ ನಮೂದಾಗಿರುವುದಿಲ್ಲ. ಈ ಜಮೀನು ಸರ್ಕಾರಿ ಬೀಳು ಜಮೀನಾಗಿರುತ್ತದೆ.

 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಕಸಬಾ ಹೋಬಳಿ ಗೊಬ್ಬರಗುಂಟೆ ಗ್ರಾಮದ ಸ ನಂ 64ರ 5 ಎಕರೆ ಸರ್ಕಾರಿ ಬೀಳು ಜಮೀನನ್ನು ಬ್ಯಾಸ್ಕೆಟ್‌ ಬಾಲ್‌ ಅಕಾಡೆಮಿ ಸ್ಥಾಪಿಸಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 27ರ ಪ್ರಕಾರ ಜಮೀನಿನ ಕೃಷಿಯೇತರ ಪ್ರಚಲಿತ ಮಾರುಕಟ್ಟೆ ಮೌಲ್ಯ ಮತ್ತು ಇನ್ನಿತರೆ ಶಾಸನಬದ್ಧ ಶುಲ್ಕಗಳನ್ನು ವಿಧಿಸಿ ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಸೂಕ್ತ ನಿರ್ಣಯಕ್ಕೆ ಮಂಡಿಸಿತ್ತು.

the fil favicon

SUPPORT THE FILE

Latest News

Related Posts