ರಾಜ್ಯಪಾಲರಿಗೇ ಸೆಡ್ಡು; ಆದೇಶ ಧಿಕ್ಕರಿಸಿ ಹೊಸ ರಿಜಿಸ್ಟ್ರಾರ್‍‌ ನೇಮಕ, ಸಂಘರ್ಷಕ್ಕಿಳಿದರೇ ಪ್ರಭಾರ ಕುಲಪತಿ?

ಬೆಂಗಳೂರು: ಪೂರ್ಣಾವಧಿ ಕುಲಪತಿ ನೇಮಕ ಆಗುವವರೆಗೂ  ನೇಮಕಾತಿ, ಬಡ್ತಿ, ಯಾವುದೇ ನೀತಿ, ನಿರ್ಣಯಗಳನ್ನು ಕೈಗೊಳ್ಳಬಾರದು ಎಂದು  ತಿಂಗಳ ಹಿಂದೆಯಷ್ಟೇ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು  ಧಿಕ್ಕರಿಸಿರುವ ಗುರುತರವಾದ ಆರೋಪಕ್ಕೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ (ವಿಎಸ್‌ಕೆಯು) ಪ್ರಭಾರ ಕುಲಪತಿ ಅನಂತ ಝಂಡೇಕರ್ ಅವರು ಗುರಿಯಾಗಿದ್ದಾರೆ.

 

ಕುಲಸಚಿವ (ಆಡಳಿತ), ಕೆಎಎಸ್ ಅಧಿಕಾರಿ ಎಸ್ ಎನ್ ರುದ್ರೇಶ್ ಅವರನ್ನು ಬದಿಗೊತ್ತಿ ಗೌರಿ ಮಾಣಿಕ್ ಮಾನಸ ಅವರನ್ನು ರಿಜಿಸ್ಟ್ರಾರ್ ಹುದ್ದೆಗೆ ಗುರುವಾರ ನೇಮಕ ಮಾಡಿರುವುದು ರಾಜ್ಯಪಾಲರಿಗೇ ಸೆಡ್ಡು ಹೊಡೆದಂತಾಗಿದೆ.  ಪ್ರಭಾರ ಕುಲಪತಿ ಹೊರಡಿಸಿರುವ ನೇಮಕಾತಿ ಆದೇಶವು ವಿಶ್ವವಿದ್ಯಾಲಯದಲ್ಲಿ ಗೊಂದಲ ಸೃಷ್ಟಿಗೂ ಕಾರಣವಾಗಿದೆ.

 

ಅಲ್ಲದೇ ಪ್ರಭಾರ ಕುಲಪತಿಗಳ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಷ್ಟ್ರಸಮಿತಿಯು ದೂರು ನೀಡಿದ್ದರ  ಬೆನ್ನಲ್ಲೇ ರಾಜ್ಯಪಾಲರು ತಿಂಗಳ ಹಿಂದೆಯಷ್ಟೇ ನೀಡಿದ್ದ ನಿರ್ದೇಶನವನ್ನು ಉಲ್ಲಂಘಿಸಿ ರಿಜಿಸ್ಟ್ರಾರ್‍‌ ಹುದ್ದೆಗೆ ಹೊಸಬರನ್ನು  ನೇಮಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ರಾಜ್ಯಪಾಲರ ನಿರ್ದೇಶನ ಕಸದ ಬುಟ್ಟಿಗೆ ಎಸೆದರೇ?

 

ಪೂರ್ಣಾವಧಿ ಕುಲಪತಿ ನೇಮಕ ಆಗುವವರೆಗೆ ಬಡ್ತಿ, ವರ್ಗಾವಣೆ ಸೇರಿ ಯಾವುದೇ ನೀತಿ ನಿರೂಪಣೆಗೆ ಸಂಬಂಧಿಸಿದ ವಿಷಯಗಳಲ್ಲಿ ತೀರ್ಮಾನ ಕೈಗೊಳ್ಳದಂತೆ ಕರ್ನಾಟಕ ರಾಜ್ಯಪಾಲರ ಸಚಿವಾಲಯ ಜನವರಿ 11ರಂದು ಪ್ರಭಾರ ಕುಲಪತಿಗೆ ಪತ್ರ ಬರೆದು ಸೂಚಿಸಿತ್ತು. ರಾಜ್ಯಪಾಲರ ನಿರ್ದೇಶನದ ಮೇರೆಗೆ ರಾಜ್ಯಪಾಲರ ಸಚಿವಾಲಯವು ಪತ್ರವನ್ನು ಬರೆದಿತ್ತು.

 

ಆದರೆ ಪ್ರಭಾರ ಕುಲಪತಿಯು ಈ ಆದೇಶವನ್ನೇ ನೇರವಾಗಿ ಕಸದ ಬುಟ್ಟಿಗೆ ಎಸೆದು ಗೌರಿ ಮಾಣಿಕ್ ಮಾನಸ ಅವರನ್ನು ನೇಮಕ ಮಾಡಿರುವುದು ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆದ ರಾಜ್ಯಪಾಲರ ಆದೇಶ ಧಿಕ್ಕರಿಸಿದಂತಾಗಿದೆ. ಅಲ್ಲದೇ ನೇರವಾಗಿ ರಾಜ್ಯಪಾಲರೊಂದಿಗೆ ಸಂಘಷಕ್ಕೆ ಇಳಿದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಬಳ್ಳಾರಿ ಮಹಾನಗರ ಪಾಲಿಕೆಯ ಕಮಿಷನರ್ ಆಗಿದ್ದ ರುದ್ರೇಶ್ ಅವರನ್ನು ಸೆಪ್ಟೆಂಬರ್ 13ರಂದು ವಿಎಸ್‌ಕೆಯು ಕುಲಸಚಿವ (ಆಡಳಿತ) ಆಗಿ ರಾಜ್ಯ ಸರ್ಕಾರ ನೇಮಿಸಿತ್ತು. ಪ್ರಭಾರ ಕುಲಪತಿಗಳು  ಸರ್ಕಾರದ ವಿರುದ್ಧವೂ ತಿರುಗಿಬಿದ್ದಿದ್ದಾರೆ ಎಂದೂ ಶೈಕ್ಷಣಿಕ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

 

ಪ್ರಭಾರ ಕುಲಪತಿ ವಿರುದ್ಧ ರಾಜ್ಯಪಾಲರಿಗೆ ದೂರು; ಮುನ್ನೆಲೆಗೆ ಬಂದ ಕೆಎಸ್‌ಒಯು ಪ್ರಕರಣ

ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ ಸೆಕ್ಷನ್ 15(5) ಹಾಗೂ 17(4) ಅಡಿ ದತ್ತವಾಗಿರುವ ಅಧಿಕಾರ ಬಳಸಿ ಗೌರಿ ಮಾಣಿಕ್ ಅವರನ್ನು ನೇಮಕ ಮಾಡಿರುವುದಾಗಿ ಗುರುವಾರ ಹೊರಡಿಸಿದ ಆದೇಶದಲ್ಲಿ ಪ್ರಭಾರ ಕುಲಪತಿ ತಿಳಿಸಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಸುಗಮವಾಗಿ ನಡೆಯಬೇಕೆಂಬ ಉದ್ದೇಶದಿಂದ ಸದ್ಯ ಕುಲಸಚಿವರಾಗಿ ಕೆಲಸ ಮಾಡುತ್ತಿರುವ ರುದ್ರೇಶ್ ಅವರ ಅಧಿಕಾರವನ್ನು ಕರ್ನಾಟಕ ವಿಶ್ವವಿದ್ಯಾಲಯದ ಕಾಯ್ದೆ 2000ದ ಸೆಕ್ಷನ್ 17(2) (3)(ಐ) ಹಾಗೂ (4) ಅಡಿ ದತ್ತವಾಗಿರುವ ಅಧಿಕಾರ ಚಲಾಯಿಸಿ ವಾಪಸ್ ಪಡೆಯಲಾಗಿದೆ ಎಂದು ಪ್ರಭಾರ ಕುಲಪತಿ ಆದೇಶದಲ್ಲಿ  ತಿಳಿಸಿದ್ದಾರೆ.

 

ಕೃಷ್ಣದೇವರಾಯ ವಿವಿಯಲ್ಲಿ ಕುಲಪತಿ ಕಾರುಬಾರು; ತಾಳಕ್ಕೆ ಕುಣಿಯದ ರಿಜಿಸ್ಟ್ರಾರ್‌ ಬದಲಿಗೆ ಪತ್ರ

ಡಾ. ವಿಜಯ ಕುಮಾರ್ ಮಾಳಶೆಟ್ಟಿ, ಮೌಲ್ಯಮಾಪನ ಕುಲಸಚಿವ ರಮೇಶ್ ಓಂಕಾರಪ್ಪ ಓಲೇಕಾರ, ಪ್ರೊ. ತಿಪ್ಪೇರುದ್ರಪ್ಪ ಜೆ., ಪ್ರೊ. ಜಿ.ಪಿ. ದಿನೇಶ್ ಅವರು ಈ ಜವಾಬ್ದಾರಿ ನಿರ್ವಹಿಸಲು ನಿರಾಕರಿಸಿದ್ದರಿಂದ ಗೌರಿ ಮಾನಸ ಅವರನ್ನು ನೇಮಕ ಮಾಡಲಾಗಿದೆ ಎಂದು ಅನಂತ ಝಂಡೇಕರ್ ಆದೇಶದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

ಯುಜಿಸಿ ಹಾಗೂ ಎಐಸಿಟಿಇ ಷರತ್ತುಗಳನ್ನು ಪೂರೈಸದ ಕೆಲ ಸಹ ಪ್ರಾಧ್ಯಾಪಕರ ಬಡ್ತಿ (ಪ್ರಭಾರ ಕುಲಪತಿ ಬಡ್ತಿಯೂ ಸೇರಿ) ವಿಷಯದ ಅನುಮೋದನೆಗೆ ತುರ್ತು ಸಿಂಡಿಕೇಟ್ ಸಭೆ ಕರೆಯಲು ಒಪ್ಪದ ಮತ್ತು  ದಿವ್ಯಾ ಅವರನ್ನು ಇತಿಹಾಸ ಹಾಗೂ ಪುರಾತತ್ವ ಅಧ್ಯಯನ ವಿಭಾಗದ ನಂದಿಹಳ್ಳಿ ಕ್ಯಾಂಪಸ್‌ಗೆ  ಅತಿಥಿ ಉಪನ್ಯಾಸಕರಾಗಿ ನೇಮಿಸಲು ಆಕ್ಷೇಪಿಸಿದ್ದ ಕುಲಸಚಿವ ರುದ್ರೇಶ್ ಅವರನ್ನು ಬದಿಗೆ ಸರಿಸಿ ಗೌರಿ ಮಾನಸ  ಅವರನ್ನು ಪ್ರಭಾರ ಕುಲಪತಿ ನೇಮಕ ಮಾಡಿದ್ದಾರೆ ಎಂಬ ಆಪಾದನೆಯೂ ಕೇಳಿ ಬಂದಿದೆ.

 

 

ಪ್ರಭಾರ ಕುಲಪತಿ ಝಂಡೇಕರ್ ಮತ್ತು  ಕುಲಸಚಿವ ರುದ್ರೇಶ್ ಜತೆ ಡಿಸೆಂಬರ್ 19ರಿಂದಲೇ ಮುಸುಕಿನ ಗುದ್ದಾಟ ಶುರುವಾಗಿತ್ತು.  19ರಂದು 12 ಆರೋಪಗಳನ್ನು ಪಟ್ಟಿ ಮಾಡಿ ನೋಟಿಸ್ (ಅಫಿಷಿಯಲ್ ಮೆಮೊರಂಡಂ) ನೀಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ರಿಜಿಸ್ಟ್ರಾರ್ ಅವರಿಂದ ಅಧಿಕಾರ ಕಿತ್ತುಕೊಂಡು ವಿಜಯಕುಮಾರ್ ಬಿ. ಮಾಳಶೆಟ್ಟಿ ಅವರನ್ನು ಉಪ ಕುಲಸಚಿವರಾಗಿ ನೇಮಿಸಿ ಅವರಿಗೆ ವರ್ಗಾಯಿಸುವ ಆದೇಶ ಹೊರಡಿಸಿದ್ದರು. ಈ ಆದೇಶ ಹೊರ ಬೀಳುತ್ತಿದ್ದಂತೆ ಮಾಳಶೆಟ್ಟಿ ರಜೆಯ ಮೇಲೆ ತೆರಳಿದ್ದರು. ಇದಾದ ಬಳಿಕ ಅನೇಕರು ಜವಾಬ್ದಾರಿ ಒಪ್ಪಿಕೊಳ್ಳಲು ಮುಂದೆ ಬರಲಿಲ್ಲ ಎಂದು ಗೊತ್ತಾಗಿದೆ.

 

 

ಡಿಸೆಂಬರ್ 30 ರಂದು ರುದ್ರೇಶ್ ಅವರಿಂದ ಕಿತ್ತುಕೊಂಡಿದ್ದ ಅಧಿಕಾರವನ್ನು ಹಿಂತಿರುಗಿಸಿ ಪ್ರಭಾರ ಕುಲಪತಿ ಅಧಿಕೃತ ಟಿಪ್ಪಣಿ ಕಳಿಸಿದ್ದರು. ಈ ಬೆಳವಣಿಗೆ ನಡುವೆಯೇ ಕುಲಸಚಿವ ಮೌಲ್ಯಮಾಪನ ರಮೇಶ್ ಓಲೇಕಾರ ಅವರ ಬದಲಾವಣೆಗೂ ಝಂಡೇಕರ್ ಪ್ರಯತ್ನಿಸಿದ್ದರು. ಓಲೇಕಾರ ಅವರನ್ನು ಬದಲಾವಣೆ ಮಾಡಿ ಗೌರಿ ಮಾನಸ ಅವರನ್ನು ಆ ಹುದ್ದೆಗೆ ನೇಮಿಸುವಂತೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ  2024ರ ಜನವರಿ 17ರಂದು  ಪತ್ರ ಬರೆದಿದ್ದರು.

 

ರಾಜ್ಯ ಸರ್ಕಾರ ತಟಸ್ಥ

 

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇಷ್ಟೆಲ್ಲಾ ರಾದ್ದಾಂತ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ತಟಸ್ಥವಾಗಿರುವುದು ಅಚ್ಚರಿಗೆ ಕಾರಣವಾಗಿದೆ. ವಿಎಸ್‌ಕೆಯು ಬೆಳವಣಿಗೆ ಉನ್ನತ ಶಿಕ್ಷಣ ಸಚಿವರು, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಎಲ್ಲರ ಗಮನಕ್ಕೂ ಬಂದಿದ್ದರೂ ಇದುವರೆಗೆ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಏಕೆ ಎಂಬುದು ಕುತೂಹಲದ ಪ್ರಶ್ನೆ. ಅಲ್ಲದೆ, ಈ ಬಗ್ಗೆ ವಿಎಸ್‌ಕೆಯು ಶಿಕ್ಷಕರ ಸಂಘದ ಮೌನವೂ ಅಚ್ಚರಿ ಹುಟ್ಟಿಸಿದೆ.

SUPPORT THE FILE

Latest News

Related Posts