ಬರಪರಿಹಾರ; ಜಂಟಿ ಖಾತೆ ತೆರೆಯಲು ಕೇಂದ್ರದಿಂದ ನಿರ್ದೇಶನವೂ ಇಲ್ಲ, ಅನುದಾನವೂ ಇಲ್ಲ

ಬೆಂಗಳೂರು; ಬರ ಪರಿಹಾರದ ಮೊತ್ತವನ್ನು ಸ್ವೀಕರಿಸಲು ಕೇಂದ್ರ ಮತ್ತು ರಾಜ್ಯ ಜಂಟಿ ಖಾತೆ ತೆರೆಯುವ ಬಗ್ಗೆ ಇದುವರೆಗೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ನಿರ್ದೇಶನವಾಗಲೀ, ಪ್ರಸ್ತಾವವಾಗಲೀ ಬಂದಿಲ್ಲ.

 

ಅಲ್ಲದೇ ಕೇಂದ್ರ ಸರ್ಕಾರದ ಎಸ್‌ಡಿಆರ್‍‌ಎಫ್‌ ಮತ್ತು ಎನ್‌ಡಿಆರ್‍‌ಎಫ್‌ ಮಾರ್ಗಸೂಚಿ ಅನುಸಾರ ರಾಜ್ಯದ ಬರ ನಿರ್ವಹಣೆಗಾಗಿ 18,171.44 ಕೋಟಿ ರು ಆರ್ಥಿಕ ನೆರವು ಕೋರಿ ರಾಜ್ಯ ಸರ್ಕಾರವು ಸಲ್ಲಿಸಿದ್ದ ಮೆಮೊರಾಂಡಮ್‌ಗೆ ಕೇಂದ್ರ ಸರ್ಕಾರವು ಬಿಡಿಗಾಸನ್ನೂ ನೀಡಿಲ್ಲ!

 

ಬರ ಪರಿಹಾರದ ನೆರವು ಬೇಕಾದರೆ ರಾಜ್ಯ-ಕೇಂದ್ರ ಸರ್ಕಾರದ ಹೆಸರಿನಲ್ಲಿ ಜಂಟಿಯಾಗಿ ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ತಿಂಗಳ ಹಿಂದೆಯಷ್ಟೇ ಹೇಳಿಕೆ ನೀಡಿದ್ದರು.

 

ಆದರೆ ಇದುವರೆಗೂ ಇಂತಹ ಯಾವುದೇ ನಿರ್ದೇಶನವು ರಾಜ್ಯ ಸರ್ಕಾರಕ್ಕೆ ಬಂದಿಲ್ಲ ಎಂದು ಕಂದಾಯ ಇಲಾಖೆಯು ಉತ್ತರವೊಂದನ್ನು ಸಿದ್ಧಪಡಿಸಿದೆ ಎಂದು ಗೊತ್ತಾಗಿದೆ.

 

ಜಂಟಿ ಖಾತೆ ತೆರೆಯುವ ಸಂಬಂಧ ವಿಧಾನಪರಿಷತ್‌ ಸದಸ್ಯ ಡಾ ತಳವಾರ ಸಾಬಣ್ಣ ಮತ್ತು ಡಿ ಎಸ್‌ ಅರುಣ್‌ ಅವರು ವಿಧಾನಪರಿಷತ್‌ನಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ 2024ರ ಫೆ.14ರಂದು ಸಚಿವ ಕೃಷ್ಣ ಬೈರೇಗೌಡ ಅವರು ಬರ ಪರಿಹಾರ ಮೊತ್ತವನ್ನು ಸ್ವೀಕರಿಸಲು ಜಂಟಿ ಖಾತೆ ತೆರೆಯುವ ಬಗ್ಗೆ ಕೇಂದ್ರದಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಉತ್ತರಿಸಲಿದ್ದಾರೆ ಎಂದು ತಿಳಿದು ಬಂದಿದೆ.

 

ಡಿ ಎಸ್‌ ಅರುಣ್‌ ಕೇಳಿರುವ ಪ್ರಶ್ನೆ

 

ಕೇಂದ್ರ ಸರ್ಕಾರ ನೀಡಿರುವ ಬರಪರಿಹಾರ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಜಂಟಿ ಖಾತೆ ತೆರೆಯಬೇಕೆನ್ನುವ ಕೇಂದ್ರ ಸರ್ಕಾರದ ಪ್ರಸ್ತಾವದ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು?, ಜಂಟಿ ಖಾತೆಯನ್ನು ತೆರೆಯಲು ಸರ್ಕಾರ ಆಸಕ್ತಿ ವಹಿಸದಿರಲು ಕಾರಣಗಳೇನು, ಹೀಗಿದ್ದಾಗ್ಯೂ ಪದೇ ಪದೇ ಕೇಂದ್ರ ಸರ್ಕಾರದ ಮೇಲೆ ಒತ್ತಡವೇರುವುದು ಸರಿಯಾದ ಕ್ರಮವೇ ಎಂದು ಪ್ರಶ್ನೆ ಕೇಳಿರುವುದು ಗೊತ್ತಾಗಿದೆ.

 

ಇದಕ್ಕೆ ‘ ಬರಪರಿಹಾರ ಮೊತ್ತವನ್ನು ಸ್ವೀಕರಿಸಲು ಕೇಂದ್ರ ಮತ್ತು ರಾಜ್ಯ ಜಂಟಿ ಖಾತೆ ತೆರೆಯಲು ಕೇಂದ್ರ ಸರ್ಕಾರದಿಂದ ಯಾವುದೇ ನಿರ್ದೇಶನ ರಾಜ್ಯ ಸರ್ಕಾರಕ್ಕೆ ಬಂದಿಲ್ಲ,’ ಎಂದು ಸಚಿವ ಕೃಷ್ಣ ಬೈರೇಗೌಡ ಅವರು (ಸಂಖ್ಯೆ; ಕಂಇ ಟಿಎನ್‌ಆರ್‍‌ 2023) ಉತ್ತರಿಸಲಿದ್ದಾರೆ.

 

ಜಂಟಿ ಖಾತೆ ತೆರೆದ ತಕ್ಷಣವೇ ಕೇಂದ್ರದಿಂದ ಹಣ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ತುಮಕೂರಿನಲ್ಲಿ 2024ರ ಜನವರಿ 24ರಂದು ಹೇಳಿಕೆ ನೀಡಿದ್ದರು.

 

‘ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಯಾಗುತ್ತಿರುವ ಯಾವುದೇ ಯೋಜನೆಗಳಲ್ಲಿ ಅನುದಾನ ಸಿಗಬೇಕಾದರೆ ಇನ್ನು ಮುಂದೆ ಜಂಟಿ ಖಾತೆ ತೆರೆಯುವುದು ಕಡ್ಡಾಯ. ಈ ಬಗ್ಗೆ ನೀತಿ ಆಯೋಗ ಸ್ಪಷ್ಟವಾಗಿ ಸೂಚನೆ ನೀಡಿದೆ. ಕೆಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದರೂ ಸಾಕಷ್ಟು ಸಂದರ್ಭಗಳಲ್ಲಿ ರಾಜ್ಯ ಸರ್ಕಾರವು ಹಣ ನೀಡುವುದಿಲ್ಲ. ಕೇಂದ್ರದ ಹಣ ವೆಚ್ಚವಾಗಿದ್ದರೂ ಹಣ ಕೊಡದೇ ರಾಜ್ಯ ಸತಾಯಿಸುತ್ತದೆ. ಇದರಿಂದ ಯೋಜನೆ ಜಾರಿ ಮಾಡುವುದು ಕಷ್ಟಕರವಾಗುತ್ತದೆ. ಹಾಗಾಗಿ ಜಂಟಿ ಖಾತೆ ಕಡ್ಡಾಯ ಮಾಡಲಾಗಿದೆ,’ ಎಂದು ಸ್ಪಷ್ಟಪಡಿಸಿದ್ದರು.

 

ಅದೇ ರೀತಿ ರಾಜ್ಯದಲ್ಲಿರುವ ಭೀಕರ ಪರಿಸ್ಥಿತಿ ಅಧ್ಯಯನ ಮಾಡಲು ಕೇಂದ್ರ ಸರ್ಕಾರದ ಅಂತರ ಸಚಿವಾಲಯದ ಕೇಂದ್ರ ತಂಡ (ಐಎಂಸಿಟಿ)ಕ್ಕೆ ಎನ್‌ಡಿಆರ್‍‌ಎಫ್‌ ಮಾರ್ಗಸೂಚಿಯಂತೆ ವಿವಿಧ ಬರ ಪರಿಹಾರ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರವು ಮೆಮೋರಾಂಡಮ್‌ ಸಲ್ಲಿಸಿತ್ತು. ಕೇಂದ್ರದ ಅಧ್ಯಯನ ತಂಡದ ವರದಿ ಆಧರಿಸಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿರುವ ಆರ್ಥಿಕ ನೆರವು ಎಷ್ಟು ಎಂದು ಪರಿಷತ್‌ ಸದಸ್ಯ ಕೆ ಎ ತಿಪ್ಪೇಸ್ವಾಮಿ ಅವರು ಪ್ರಶ್ನೆ ಕೇಳಿದ್ದಾರೆ.

 

ಇದಕ್ಕೆ ‘ ಕೇಂದ್ರ ಸರ್ಕಾರದ ಎಸ್‌ಡಿಆರ್‍‌ಎಫ್‌, ಎನ್‌ಡಿಆರ್‍‌ಎಫ್‌ ಮಾರ್ಗಸೂಚಿ ಅನುಸಾರ ರಾಜ್ಯದ ಬರ ನಿರ್ವಹಣೆಗಾಗಿ 18,171.44 ಕೋಟಿ ರು. ಆರ್ಥಿಕ ನೆರವು ಕೋರಿ ಮೆಮೋರಾಂಡಮ್‌ ಸಲ್ಲಿಸಲಾಗಿದ್ದು ಕೇಂದ್ರದಿಂದ ಅನುದಾನ ನಿರೀಕ್ಷಿಸಲಾಗಿದೆ,’ ಎಂಬ ಉತ್ತರವನ್ನು ಸಿದ್ಧಪಡಿಸಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts