ಬೆಂಗಳೂರು: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ (ವಿಎಸ್‌ಕೆಯು) ಪ್ರಭಾರ ಕುಲಪತಿ ಅನಂತ್ ಝಂಡೇಕರ್ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಬೆನ್ನಲ್ಲೇ ಈ ಬಗ್ಗೆ ಉನ್ನತ ಮಟ್ಟದ ವಿಚಾರಣೆ ನಡೆಸುವಂತೆ ‘ಕರ್ನಾಟಕ ರಾಷ್ಟ್ರ ಸಮಿತಿ’ (ಕೆಆರ್‍ಎಸ್) ರಾಜ್ಯಪಾಲರನ್ನು ಒತ್ತಾಯಿಸಿದೆ.
ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರನ್ನು ಬದಲಿಸಬೇಕು ಎಂದು ಪ್ರಭಾರ ಕುಲಪತಿಯು ಇತ್ತೀಚೆಗಷ್ಟೇ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಬೆಳವಣಿಗೆ ನಡುವೆಯೇ ಪ್ರಭಾರ ಕುಲಪತಿ ವಿರುದ್ಧವೇ ಉನ್ನತ ಮಟ್ಟದ ವಿಚಾರಣೆ ನಡೆಸಬೇಕು ಎಂದು ಕೆಆರ್‍ಎಸ್ ಪಕ್ಷವು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.
ವಿಶೇಷವೆಂದರೇ ಕುಲಸಚಿವ (ಆಡಳಿತ) ಎಸ್.ಎನ್, ರುದ್ರೇಶ್ ವಿರುದ್ಧ ದುರ್ವತನೆ ಆರೋಪ ಮಾಡಿರುವ ಪ್ರಭಾರ ಕುಲಪತಿ ಅನಂತ ಎಲ್. ಝಂಡೇಕರ್, ಸ್ವತಃ ದುರ್ವರ್ತನೆ ಆರೋಪದ ಮೇಲೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್ಒಯು) ಕಾರವಾರ ಕೇಂದ್ರದ ತಾತ್ಕಾಲಿಕ ನಿರ್ದೇಶಕರ ಹುದ್ದೆಯಿಂದ ವಜಾಗೊಂಡಿದ್ದರು ಎಂಬ ಸಂಗತಿಯನ್ನು ಕರ್ನಾಟಕ ರಾಷ್ಟ್ರಸಮಿತಿಯು ರಾಜ್ಯಪಾಲರ ಗಮನಕ್ಕೆ ತಂದಿದೆ.
ಕೆಆರ್‍ಎಸ್ ಪಕ್ಷದ ಬಳ್ಳಾರಿ ಜಿಲ್ಲೆಯ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕೆ ಎಂಬುವರು ರಾಜ್ಯಪಾಲರಿಗೆ ಇ ಮೇಲ್ ಮೂಲಕ ದೂರು ರವಾನಿಸಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ದೂರಿನಲ್ಲೇನಿದೆ?
ಸದ್ಯ, ವಿಎಸ್‌ಕೆಯು ಪ್ರಭಾರ ಕುಲಪತಿಯಾಗಿರುವ ಅನಂತ ಝಂಡೇಕರ್ ತಮ್ಮ ಬಡ್ತಿಯೂ ಸೇರಿದಂತೆ ಯುಜಿಸಿ ಹಾಗೂ ಎಐಸಿಟಿಇ ಷರತ್ತುಗಳನ್ನು ಪೂರೈಸದ ಕೆಲವು ಸಹ ಪ್ರಾಧ್ಯಾಪಕರ ಬಡ್ತಿಗೆ ನಿಯಮ ಬಾಹಿರವಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಅತಿಥಿ ಉಪನ್ಯಾಸಕರನ್ನು ಶಿಷ್ಟಾಚಾರ ಮತ್ತು ನಿಯಮ ಉಲ್ಲಂಘಿಸಿ ನೇಮಕ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ವಿಎಸ್‌ಕೆಯುನ ಇಬ್ಬರೂ ಕುಲಸಚಿವರ ಬದಲಾವಣೆಗೆ ಒತ್ತಡ ಹೇರುತ್ತಿದ್ದಾರೆ. ತಮ್ಮ ತಾಳಕ್ಕೆ ಕುಣಿಯದ ಅಧಿಕಾರಿಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.
‘ವಿಎಸ್‌ಕೆಯು ಪ್ರಭಾರ ಕುಲಪತಿ ಅಗಿ ಅಧಿಕಾರ ದುರ್ಬಳಕೆ ಆರೋಪ ಎದುರಿಸುತ್ತಿರುವ ಅನಂತ ಝಂಡೇಕರ ವಿರುದ್ಧ ಉನ್ನತ ಮಟ್ಟದ ವಿಚಾರಣೆ ನಡೆಸಬೇಕು ಎಂದು ಹೇಳಿರುವ ಕೆಆರ್‌ಎಸ್, ಝಂಡೇಕರ್ ಕೆಎಸ್ಒಯು ಕಾರವಾರ ಕೇಂದ್ರದಲ್ಲಿದ್ದಾಗ ನಡೆಸಿದ್ದಾರೆನ್ನಲಾದ ದುರ್ವರ್ತನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು,’ ಎಂದು ಶ್ರೀನಿವಾಸ ರೆಡ್ಡಿ ಕೆ ಅವರು ರಾಜ್ಯಪಾಲರಿಗೆ ಕಳಿಸಿರುವ ಪತ್ರದಲ್ಲಿ ಒತ್ತಾಯಿಸಿರುವುದು ತಿಳಿದು ಬಂದಿದೆ.
ಅನಂತ ಎಲ್. ಝಂಡೇಕರ್ ಅವರನ್ನು ಕಾರವಾರ ಪ್ರಾದೇಶಿಕ ಕೇಂದ್ರದ ತಾತ್ಕಾಲಿಕ ನಿರ್ದೇಶಕರ ಹುದ್ದೆಯಿಂದ ವಜಾಗೊಳಿಸಿದ ಕೆಎಸ್ಒಯು ಕಚೇರಿ ಆದೇಶಕ್ಕೆ ಕುಲಸಚಿವರು 2017ರ ಸೆಪ್ಟೆಂಬರ್ 16ರಂದು ಸಹಿ ಹಾಕಿದ್ದಾರೆ. ಈ ಆದೇಶ ಪ್ರತಿಯನ್ನು ರಾಜ್ಯಪಾಲರಿಗೆ ಬರೆದಿರುವ ಪತ್ರದ ಜತೆ ರೆಡ್ಡಿ ಲಗತ್ತಿಸಿದ್ದಾರೆ.
ತಮ್ಮ ವಿರುದ್ಧ ನಡೆದ ಇಲಾಖೆ ವಿಚಾರಣೆ ಹಾಗೂ ವಜಾ ಆದೇಶವನ್ನು ಝಂಡೇಕರ್ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಈ ಪ್ರಕರಣ ಹೈಕೋರ್ಟ್ ಧಾರವಾಡ ಪೀಠದಲ್ಲಿ ವಿಚಾರಣೆಗೆ ಬಾಕಿ ಇದೆ ಎಂದು ಗೊತ್ತಾಗಿದೆ.
ಕಾರವಾರದಲ್ಲಿನ ಕರಾಮುವಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾಗಿದ್ದ ಅವಧಿಯಲ್ಲಿ ಇವರ ವಿರುದ್ಧ ದುರ್ವರ್ತನೆಗಳ ಆರೋಪ ಕೇಳಿ ಬಂದಿದ್ದವು. ಈ ಎಲ್ಲಾ ಆರೋಪಗಳ ವಿರುದ್ಧ ನಿವೃತ್ತ ನ್ಯಾಯಾಧೀಶರಿಂದ ಸಹಜ ನ್ಯಾಯದಡಿ ನಡೆದ ಇಲಾಖಾ ವಿಚಾರಣೆ ನಡೆದಿತ್ತು. ವಿಚಾರಣೆ ವೇಳೆಯಲ್ಲಿ ಇವರ ವಿರುದ್ಧ ಆರೋಪಗಳು ಸಾಬೀತಾಗಿದ್ದವು ಎಂದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ನಿರ್ದೇಶರನ್ನು ತಕ್ಷಣದಿಂದ ಜಾರಿಗೆ ಬಂದಂತೆ ತಾತ್ಕಾಲಿಕ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಕುಲಸಚಿವರು ಆದೇಶ (ವಿವಿ ಸಂಖ್ಯೆ: ಕರಾಮುವಿ/ಆವಿ/ಸಿಬ್ಬಂದಿ-2/909/2017-18 ಸಿನಂ:1749.ದಿನಾಂಕ16.09.2017)ಹೊರಡಿಸಿದ್ದರು.
ಝಂಡೇಕರ್ ವಿರುದ್ಧದ ಆರೋಪಗಳೇನು?
ಬೀದರ್ ಪ್ರಾದೇಶಿಕ ಕೇಂದ್ರದಲ್ಲಿ ಪ್ರಾದೇಶಿಕ ನಿರ್ದೇಶಕರಾಗಿದ್ದ ವೇಳೆ ಪರಿಶಿಷ್ಟ ಜಾತಿಗೆ ಸೇರಿದ ಕಪಿಲ್ ದೇವ್ ಎಂಬ ವಿದ್ಯಾರ್ಥಿಗೆ (2012-2013 ಮತ್ತು 2013-14ರಲ್ಲಿ) ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾಗಿದ್ದ ವಿದ್ಯಾರ್ಥಿ ವೇತನದ ದುರ್ಬಳಕೆಯಾಗಿತ್ತು.
2015-16 ಮತ್ತು 2016-17ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ತೆರಿಗೆ ವಿನಾಯಿತಿ ಪಡೆಯುವ ದೃಷ್ಟಿಯಿಂದ ತಮ್ಮ ಮಕ್ಕಳಾದ ಅರ್ಪಿತಾ ಝಂಡೇಕರ್ ಮತ್ತು ಅಭಿಷೇಕ್ ಝಂಡೇಕರ್ ಅವರು ವ್ಯಾಸಾಂಗ ಮಾಡುತ್ತಿರುವ ಧಾರವಾಡದ ಶಾಂತಿ ಸದನ ಹೈಸ್ಕೂಲ್‌ನ ಬೋಧನಾ ಶುಲ್ಕದ ರಶೀತಿ ತಿದ್ದಿ ವಿವಿ ಹಣಕಾಸು ವಿಭಾಗಕ್ಕೆ ಸಲ್ಲಿಸುವ ಮೂಲಕ ವಿವಿಗೆ ಹಾಗೂ ಸರ್ಕಾರದ ಆದಾಯ ತೆರಿಗೆ ಇಲಾಖೆಗೆ ವಂಚಿಸಿದ್ದರು ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಕೃಷ್ಣದೇವರಾಯ ವಿವಿಯಲ್ಲಿ ಕುಲಪತಿ ಕಾರುಬಾರು; ತಾಳಕ್ಕೆ ಕುಣಿಯದ ರಿಜಿಸ್ಟ್ರಾರ್ ಬದಲಿಗೆ ಪತ್ರ
2017ರ ಜೂನ್ 2ರಂದು ನೀಡಲಾದ ಷೋಕಾಸ್ ನೋಟಿಸ್ಗೆ ನೀಡಿದ ಉತ್ತರದಲ್ಲಿ ಝಂಡೇಕರ್, ಕುಲಸಚಿವರು ಪತ್ರ ವ್ಯವಹಾರ ಮಾಡುವುದೇ ಕಾನೂನು ಬಾಹಿರ, ಪುನಃ ಬರೆದರೆ ಕುಲಸಚಿವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.
ಕಚೇರಿ ಕಾರ್ಯವೈಖರಿ, ಕರ್ತವ್ಯಲೋಪ, ಬೇಜವಾಬ್ದಾರಿತನದ ವರ್ತನೆಗಳ ಕುರಿತು ಸ್ಪಷ್ಟನೆ ನೀಡಲು ತಿಳಿಸಿ ಜಾರಿ ಮಾಡಿದ ಯಾವುದೇ ನೋಟಿಸ್‌ಗಳಿಗೆ ಸಲ್ಲಿಸಿದ ಉತ್ತರಗಳು ವಸ್ತುನಿಷ್ಠವಾಗಿರದೆ ಅಸಂಬದ್ಧವಾಗಿರುವುದು.
‘ವಿವಿ ಕುಲಪತಿ ಹಾಗೂ ಕುಲಸಚಿವರಿಗೆ ಝಂಡೇಕರ್ ಅನಾವಶ್ಯಕ ವಿಷಯಗಳ ಕುರಿತು ಆಧಾರರಹಿತ ಆರೋಪಗಳೊಂದಿಗೆ ಮೊಬೈಲ್ ಮೂಲಕ ಬೆದರಿಕೆ ಹಾಕಿರುವುದು; ಪ್ರಾದೇಶಿಕ ಕೇಂದ್ರ ಕಚೇರಿಗೆ ಬೀಗ ಹಾಕಿಕೊಂಡು ಹೋಗಿರುವುದು, ಕಚೇರಿ ಸಿಬ್ಬಂದಿಯನ್ನು ಹೊರ ಹಾಕಿರುವುದು, ಕಚೇರಿಗೆ ಗೈರು ಹಾಜರಾಗಿದ್ದರೂ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿರುವುದು, ಕಚೇರಿಗೆ ಅನಧಿಕೃತವಾಗಿ ಗೈರು ಹಾಜರಾಗುವ ಪರಿಪಾಠ ಹೊಂದಿದ್ದು, ತಿಂಗಳಲ್ಲಿ ಒಂದು ಅಥವಾ ಎರಡು ಸಲ ಹಾಜರಾಗಿ ಅನಧಿಕೃತವಾಗಿ ಗೈರು ಹಾಜರಾದ ದಿನಗಳಿಗೆ ಹಾಜರಾತಿ ಪುಸ್ತಕದಲ್ಲಿ ನಿಯಮಬಾಹಿರವಾಗಿ ಒಂದೇ ದಿನ, ಒಟ್ಟಿಗೆ ಸಹಿ ಹಾಕಿದ್ದರು,’ ಎಂದು ಆದೇಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಅನಂತ ಝಂಡೇಕರ್ ವಿರುದ್ಧ ಮಾಡಲಾದ ಒಟ್ಟು 19 ಆರೋಪಗಳ ವಿಚಾರಣೆಗೆ 2017ರ ಮೇ 6ರಂದು ನಡೆದ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ 144ನೇ ಸಭೆಯಲ್ಲಿ ಸಹಜ ನ್ಯಾಯದಡಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ವಿಚಾರಣೆ ನಡೆಸಿ ಕ್ರಮ ವಹಿಸಲು ತೀರ್ಮಾನಿಸಲಾಗಿತ್ತು. ಅದರಂತೆ, ನಿವೃತ್ತ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಮತ್ತು ಮಾಜಿ ನಿಬಂಧಕರು, ಕರ್ನಾಟಕ ಲೋಕಾಯುಕ್ತ ಎ.ಸಿ. ವಿದ್ಯಾಧರ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದರು.
ಈ ವರದಿಯಲ್ಲಿ ಝಂಡೇಕರ್ ವಿರುದ್ಧ ಮಾಡಲಾದ 19 ಆರೋಪಗಳಲ್ಲಿ 18 ಆರೋಪಗಳು ಸಾಬೀತಾಗಿವೆ ಎಂದು ಹೇಳಿದ್ದಾರೆ. ಈ ಹಿಂದೆಯೂ ಅನಂತ ಝಂಡೇಕರ್ ಧಾರವಾಡ ಪ್ರಾದೇಶಿಕ ಕೇಂದ್ರದಲ್ಲಿ ತಾತ್ಕಾಲಿಕ ಪ್ರಾದೇಶಿಕ ನಿರ್ದೇಶಕರಾಗಿದ್ದ ಸಮಯದಲ್ಲೂ ಅಧ್ಯಯನ ಸಾಮಾಗ್ರಿಗಳ ದಾಸ್ತಾನಿನಲ್ಲಿ ವ್ಯತ್ಯಯ ಉಂಟಾಗಿ ರೂ. 94,604 ಅನ್ನು ವಿವಿ ಖಾತೆಗೆ ಜಮಾ ಮಾಡಿರುತ್ತಾರೆ ಎಂದೂ ಕುಲಸಚಿವರ ವಜಾ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.