ಬೆಂಗಳೂರು; ರಾಜ್ಯ ಸರ್ಕಾರದ ಯೋಜನೆ, ಸಾಧನೆಗಳನ್ನು ಬಸ್ ಬ್ರ್ಯಾಂಡಿಂಗ್ ಮತ್ತು ಬಸ್ ಶೆಲ್ಟರ್‍ಗಳಲ್ಲಿ ಪ್ರಚಾರ ಮಾಡಲು ಆಟೋಮೊಬೈಲ್ ವಲಯದ ಬಿಡಿಭಾಗಗಳ ತಯಾರಿಕೆ ಕಂಪನಿಗೆ ಕಾರ್ಯಾದೇಶ ನೀಡಿರುವುದು ಇದೀಗ ಬಹಿರಂಗವಾಗಿದೆ.
ಕಾಂಗ್ರೆಸ್‌ನ ಪ್ರಭಾವಿ ಶಾಸಕರೊಬ್ಬರ ಪತ್ನಿ ನಿರ್ದೇಶಕರಾಗಿದ್ದಾರೆ ಎಂದು ಹೇಳಲಾಗಿರುವ ಆಟೋಮೊಬೈಲ್ ವಲಯದ ಬಿಡಿ ಭಾಗಗಳ ತಯಾರಿಕೆ ಕಂಪನಿ ಮೂಲಕ ಸರ್ಕಾರದ ಸಾಧನೆ, ಯೋಜನೆಗಳನ್ನು ಬಸ್ ಬ್ರ್ಯಾಂಡಿಂಗ್ ಮತ್ತು ಬಸ್ ಶೆಲ್ಟರ್‍ಗಳಲ್ಲಿ ಪ್ರಚಾರ ಮಾಡಲಾಗಿದೆ. ಇದಕ್ಕೆ ಅಕ್ಟೋಬರ್ ಅಂತ್ಯದವರೆಗೆ 1.00 ಕೋಟಿ ರು ನೀಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರು ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ್ದರು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಒದಗಿಸಿದ್ದಾರೆ.
2023-24ನೇ ಸಾಲಿನ ಇಲಾಖಾ ಕ್ರಿಯಾ ಯೋಜನೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಬ್ರಾಂಡಿಂಗ್ ಮೂಲಕ ಯೋಜನೆಗಳ ಬಗ್ಗೆ ಪ್ರಚಾರ ಪಡಿಸಲು ಕಾರ್ಯಕ್ರಮ ರೂಪಿಸಿಕೊಂಡಿದೆ. ಇದಕ್ಕಾಗಿ ಪ್ರತ್ಯೇಕ ನಿಗದಿತ ಅನುದಾನ ಮೀಸಲಿಟ್ಟಿಲ್ಲ. ಹಾಗೂ ಅವಶ್ಯಕವಾಗಿರುವ ಅನುದಾನ ಲಭ್ಯವಿರುವುದಿಲ್ಲ. ಆದರೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕವೇ 11 ಕೋಟಿ ರು. ವೆಚ್ಚ ಮಾಡಿರುವುದು ಮುನ್ನೆಲೆಗೆ ಬಂದಿದೆ.
2023-24ನೇ ಸಾಲಿನ ಇಲಾಖೆಯ ಕ್ರಿಯಾ ಯೋಜನೆಯ ಅನ್ವಯ ಲೆಕ್ಕ ಶೀರ್ಷಿಕೆ (2220-60-106-0-05-059) ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ ಮತ್ತು ಮಾಹಿತಿ ಶಿಕ್ಷಣ ಹಾಗೂ ಸಂವಹನೆ ಅಡಿಯಲ್ಲಿ ಐಇಸಿ ಚಟುವಟಿಕೆಗೆ ಇಲಾಖೆಗೆ ಒದಗಿಸಲಾದ ಒಟ್ಟು ಅನುದಾನದಲ್ಲಿ ಈ ವೆಚ್ಚವನ್ನು ಭರಿಸಿದೆ.
ಸಾಯಿ ಅಡ್ವರ್‍ಟೈಸರ್ಸ್ ,ಕರ್ನಾಟಕ ಸ್ಟೇಟ್ ಮಾರ್ಕೆಂಟಿಂಗ್ ಕಮ್ಯೂನಿಕೇಷನ್ ಅಡ್ವೋರ್ಟೈಸಿಂಗ್ ಲಿಮಿಟೆಡ್,ಶಿವ ಆಡ್ಸ್ ಪ್ರೈವೈಟ್ ಲಿಮಿಟೆಡ್, ಬೆನಕ ಆಟೋಮೇಷನ್ ಪ್ರೈವೈಟ್ ಲಿಮಿಟೆಡ್‌ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕಾರ್ಯದೇಶ ನೀಡಿದೆ.
ಬೆನಕ ಆಟೋಮೇಷನ್ ಪ್ರೈವೈಟ್ ಲಿಮಿಟೆಡ್ ಕಂಪನಿಯಲ್ಲಿ ಅನ್ಮೋಲ್ ಶ್ರೀನಿವಾಸ್, ವಿದ್ಯಾ ಧನರಾಜು, ಅನಿತಾ ಚಂದ್ರಪ್ಪ ದಾವಣಗೆರೆ, ಶಶಾಂಕ್ ಗೋಪಾಲ್ ಮತ್ತು ಶಶಿಕಲಾ ನಂಜುಂಡಸ್ವಾಮಿ ಹನವಾಡಿ ಎಂಬುವರು ನಿರ್ದೇಶಕರಾಗಿರುವುದು ಕಂಪನಿ ವ್ಯವಹಾರಗಳ ಸಚಿವಾಲಯದ ದಾಖಲೆಯಿಂದ ತಿಳಿದು ಬಂದಿದೆ. ಈ ಕಂಪನಿಯಲ್ಲಿ ಕಾಂಗ್ರೆಸ್ ಶಾಸಕರೊಬ್ಬರ ಪತ್ನಿಯೊಬ್ಬರು ನಿರ್ದೇಶಕರಾಗಿದ್ದಾರೆ ಎಂದು ಗೊತ್ತಾಗಿದೆ.
ಬೆನಕ ಆಟೋಮೇಷನ್ ಪ್ರೈವೈಟ್ ಲಿಮಿಟೆಡ್ 2008ರ ಸೆಪ್ಟಂಬರ್ 15ರಂದು ನೋಂದಾಯಿತವಾಗಿದೆ. 750,000 ಮೊತ್ತದ ಅಧಿಕೃತ ಷೇರು ಬಂಡವಾಳ, 150,000. ಮೊತ್ತದ ಪಾವತಿಸಿದ ಬಂಡವಾಳದೊಂದಿಗೆ ಈ ಕಂಪನಿಯು ಆರಂಭವಾಗಿದೆ ಎಂದು ಕಂಪನಿ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಮೂಲತಃ ಈ ಕಂಪನಿಯು ಮೋಟಾರ್ ವಾಹನಗಳ ಬಿಡಿ ಭಾಗಗಳು, ಇಂಜಿನ್, ಗೇರ್ ಬಾಕ್ಸ್, ಶಾಕ್ ಅಬ್ಸವರ್ಸ್, ರೇಡಿಯೇಟರ್ಸ್, ಸೈಲೆನ್ಸರ್, ಪೈಪ್ಸ್, ಸ್ಟೀರಿಂಗ್ ವೀಲ್ಸ್, ಸ್ಟೀರಿಂಗ್ ಕಾಲಮ್ಸ್, ಸೇರಿದಂತೆ ಆಟೋಮೊಬೈಲ್ ವಲಯದ ಬಿಡಿಭಾಗಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ ಎಂದು ಕಂಪನಿ ವ್ಯವಹಾರಗಳ ಸಚಿವಾಲಯದ ದಾಖಲೆಗಳಿಂದ ಗೊತ್ತಾಗಿದೆ.
ಬಸ್ ಬ್ರ್ಯಾಂಡಿಂಗ್‌ಗೆ 9.87 ಕೋಟಿ
ಬಸ್ ಬ್ರ್ಯಾಂಡಿಂಗ್ ಕಾರ್ಯಕ್ರಮಕ್ಕಾಗಿ ಒಟ್ಟಾರೆ 9.87 ಕೋಟಿ ರು. ಕಾರ್ಯಾದೇಶ ನೀಡಲಾಗಿದೆ. ಇದರಲ್ಲಿ 4.48 ಕೋಟಿ ರು. ಸಂಬಂಧಿಸಿದ ಕಂಪನಿಗಳಿಗೆ ಪಾವತಿಸಲಾಗಿದೆ.
ಸಾಯಿ ಅಡ್ವರ್‍ಟೈಸರ್ಸ್ ಗೆ 5.75 ಕೋಟಿ ರು. ಕಾರ್ಯಾದೇಶ ನೀಡಲಾಗಿದೆ. ಇದರಲ್ಲಿ 3.23 ಕೋಟಿ ರು. ಪಾವತಿಸಲಾಗಿದೆ. ಕರ್ನಾಟಕ ಸ್ಟೇಟ್ ಮಾರ್ಕೆಂಟಿಂಗ್ ಕಮ್ಯೂನಿಕೇಷನ್ ಅಡ್ವೋರ್ಟೈಸಿಂಗ್ ಲಿಮಿಟೆಡ್ ಗೆ 2.74 ಕೋಟಿ ರು. ಕಾರ್ಯಾದೇಶ ನೀಡಲಾಗಿದೆ. ಈ ಪೈಕಿ 74.97 ಲಕ್ಷ ರು. ಪಾವತಿಸಲಾಗಿದೆ.
ಶಿವ ಆಡ್ಸ್ ಪ್ರೈವೈಟ್ ಲಿಮಿಟೆಡ್‌ಗೆ 87.56 ಲಕ್ಷ ರು. ಕಾರ್ಯಾದೇಶ ನೀಡಲಾಗಿದ್ದು ಈ ಪೈಕಿ 49.98 ಲಕ್ಷ ರು. ಪಾವತಿಸಲಾಗಿದೆ. ಬೆನಕ ಆಟೋಮೇಷನ್ ಪ್ರೈವೈಟ್ ಲಿಮಿಟೆಡ್‌ಗೆ 50.00 ಲಕ್ಷ ರು. ಕಾರ್ಯಾದೇಶ ನೀಡಲಾಗಿದೆ. ಆದರೆ ಇದುವರೆಗೂ ಹಣ ಪಾವತಿಯಾಗಿಲ್ಲ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒದಗಿಸಿರುವುದು ಗೊತ್ತಾಗಿದೆ.
ಬಸ್ ಶೆಲ್ಟರ್‍ಗಳಲ್ಲಿ ಪ್ರಚಾರಕ್ಕೆ 2.52 ಕೋಟಿ
ಎಂಸಿ ಅಂಡ್ ಎ ಗೆ 50.00 ಲಕ್ಷ ರು., ಬೆನಕ ಆಟೋಮೇಷನ್ ಪ್ರೈವೈಟ್ ಲಿಮಿಟೆಡ್‌ಗೆ 51.84 ಲಕ್ಷ ರು., ಟೈಮ್ಸ್ ಇನ್ನೋವೇಟಿವ್ ಮೀಡಿಯಾ ಲಿಮಿಟೆಡ್‌ಗೆ 50.09 ಲಕ್ಷ ರು., ಸನೈನ್ ಪೋಸ್ಟ್ ಇಂಡಿಯಾ ಲಿಮಿಟೆಡ್‌ಗೆ 1.00 ಕೋಟಿ ರು. ಸೇರಿ ಒಟ್ಟಾರೆ 2.52 ಕೋಟಿ ರು. ವೆಚ್ಚ ಮಾಡಲಾಗಿದೆ.
ಪ್ರಸಕ್ತ ಆಯವ್ಯಯದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ 10,930.55 ಲಕ್ಷ ರು. ಅನುದಾನ ಒದಗಿಸಿದೆ. ಎಸ್‌ಸಿಎಸ್‌ಪಿ ಯೋಜನೆಯಡಿಯಲ್ಲಿ 857.00 ಲಕ್ಷ ರು., ಟಿಎಸ್‌ಪಿ ಯೋಜನೆಯಡಿಯಲ್ಲಿ 348.00 ಲಕ್ಷ ರು. ಅನುದಾನವನ್ನು ಇಲಾಖೆಗೆ ಒದಗಿಸಲಾಗಿದೆ.