ಶೌಚಾಲಯ, ಕುಡಿಯುವ ನೀರಿನ ಸೌಕರ್ಯ ಕೊರತೆ; ತಪ್ಪು ಅಂಕಿ ಅಂಶ ನೀಡಿ ಸದನವನ್ನೇ ದಾರಿತಪ್ಪಿಸಿದರೇ?

ಬೆಂಗಳೂರು; ರಾಜ್ಯದಲ್ಲಿ  2,732 ಶಾಲೆಗಳಲ್ಲಿ ಶೌಚಾಲಯ ಮತ್ತು 136 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಕರ್ಯವೇ ಇಲ್ಲ ಎಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಅಧಿಕಾರಿಗಳು ಅಂಕಿ ಅಂಶಗಳನ್ನು ಮಂಡಿಸಿದ್ದರೂ ಸಹ  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರೀಗ  ಪ್ರಸ್ತುತ ರಾಜ್ಯದ 23 ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇರುವುದಿಲ್ಲ ಮತ್ತು ರಾಜ್ಯದ ಎಲ್ಲಾ ಶಾಲೆಗಳಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಇದೆ  ಎಂದು ಸದನಕ್ಕೆ ಮಾಹಿತಿ ಒದಗಿಸಿದ್ದಾರೆ.

 

ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯ ಪ್ರಕಾರ, 464 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯದ ಕೊರತೆ ಮತ್ತು 87 ಕುಡಿಯುವ ನೀರಿನ ಸೌಲಭ್ಯದ ಕೊರತೆ ಕಂಡುಬಂದಿದೆ. ಸಮೀಕ್ಷೆಯ ನಂತರ, 87 ಶಾಲೆಗಳಲ್ಲಿ 55 ಶಾಲೆಗಳಲ್ಲಿ ಸಾಕಷ್ಟು ಕುಡಿಯುವ ನೀರು ಕಂಡುಬಂದಿದೆ, ಆದರೂ 32 ಶಾಲೆಗಳಲ್ಲಿ ಸಮಸ್ಯೆ ಉಳಿದಿತ್ತು.

 

ಆದರೀಗ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ 746 ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಮತ್ತು 1986 ಶಾಲೆಗಳಲ್ಲಿ ಗಂಡು ಮಕ್ಕಳಿಗೆ ಶೌಚಾಲಯವಿಲ್ಲ ಎಂದು ಅಧಿಕಾರಿಗಳು ಅಂಕಿ ಸಂಖ್ಯೆಗಳನ್ನು ಒದಗಿಸಿದ್ದರು. ಅಲ್ಲದೇ 136 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವೇ ಇಲ್ಲ ಎಂದು ಅಂಕಿ ಅಂಶಗಳನ್ನು ನೀಡಿದ್ದರು.  ಆದರೂ ಸಚಿವ ಮಧು ಬಂಗಾರಪ್ಪ ಅವರು ರಾಜ್ಯದಲ್ಲಿ ಕೇವಲ 23 ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇರುವುದಿಲ್ಲ ಮತ್ತು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕುಡಿಯುವ ನೀರಿನ ಸೌಕರ್ಯವಿದೆ  ಎಂದು ನೀಡಿರುವ ಉತ್ತರವು ಸದನವನ್ನು ದಾರಿ ತಪ್ಪಿಸಿದಂತಿದೆ.

 

ತನ್ವೀರ್‍‌ ಸೇಠ್‌ ಅವರು ಕೇಳಿದ್ದ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ಅವರು ಉತ್ತರಿಸಿರುವ ಮಾಹಿತಿಯು ಮುನ್ನೆಲೆಗೆ ಬಂದಿದೆ.

 

ಉತ್ತರದಲ್ಲೇನಿದೆ? 

ಪ್ರಸ್ತುತ ರಾಜ್ಯದ 23 ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇರುವುದಿಲ್ಲ ಉಳಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಸದರಿ ಶಾಲೆಗಳಿಗೆ ಮುಂದಿನ ದಿನಗಳಲ್ಲಿ ಆದ್ಯತೆ ಮೇರೆಗೆ ಪ್ರತ್ಯೇಕವಾಗಿ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಶೌಚಾಲಯ ಸೌಲಭ್ಯ ಕಲ್ಪಿಸಲು ಕ್ರಮವಹಿಸಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಇದೆ ಎಂದು ಉತ್ತರ ನೀಡಿದ್ದಾರೆ.

 

ವಿದ್ಯಾರ್ಥಿಗಳ ಶಿಕ್ಷಣ ಮತ್ತು ಆರೋಗ್ಯದ ದೃಷ್ಟಿಯಿಂದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕಡಿಮೆ ಶೌಚಾಲಯಗಳಿರುವ 5,775 ಶಾಲೆಗಳಲ್ಲಿ ಹಾಗೂ 150 ಕಾಲೇಜುಗಳಲ್ಲಿ ಶೌಚಾಲಯ ಘಟಕಗಳನ್ನು ನರೇಗಾ ಯೋಜನೆಯ ಸಂಯೋಜನೆಯೊಂದಿಗೆ 200 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ನೇ ಸಾಲಿನ ಪರಿಷ್ಕೃತ ಆಯವ್ಯಯ ಭಾಷಣದಲ್ಲಿ ಘೋಷಿಸಿದ್ದರು.

 

ಈ ಘೋಷಣೆ ಅನ್ವಯ 2022-23ನೇ ಸಾಲಿನಲ್ಲಿ ಅನುಮೋದನೆಯಾದ ಕಾಮಗಾರಿಗಳು ಸೇರಿದಂತೆ ಕಡಿಮೆ ಶೌಚಾಲಯಗಳಿರುವ 5,775 ಶಾಲೆಗಳಲ್ಲಿ 5,962 ಶೌಚಾಲಯ ಘಟಕಗಳ ಕ್ರಿಯಾ ಯೋಜನೆ ನರೇಗಾ ಯೋಜನೆಯ ಸಂಯೋಜನೆಯೊಂದಿಗೆ ನಿರ್ಮಾಣ ಮಾಡಲು 2023ರ ಡಿಸೆಂಬರ್‍‌ 1ರಂದು ಆದೇಶಿಸಲಾಗಿದೆ.

 

2023-24ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಗಳ ವಾರ್ಷಿಕ ನಿರ್ವಹಣೆಗಾಗ ಒಟ್ಟಾರೆ 120.33 ಕೋಟಿ ರು. ನಿಗದಿಪಡಿಸಲಾಗಿದೆ ಎಂದು ಮಾಹಿತಿ ಒದಗಿಸಿದ್ದಾರೆ.

 

ರಾಜ್ಯದ ಒಟ್ಟು ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳಿಗಾಗಿ ವಿವೇಕ, ನರೇಗಾ ಸೇರಿದಂತೆ ಇನ್ನಿತರೆ ಯೋಜನೆಗಳಲ್ಲಿ ಕಳೆದ 5 ವರ್ಷದಲ್ಲಿ 1,306.05 ಕೋಟಿ ರು.ಗಳನ್ನು ಒದಗಿಸಿದ್ದರೂ 2,732 ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ ಎಂಬ ಸಂಗತಿಯು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಬಹಿರಂಗಗೊಂಡಿತ್ತು.

 

464 ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ಕಾರ್ಯನಿರ್ವಹಿಸುತ್ತಿಲ್ಲ. 136 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವೇ ಇಲ್ಲ. 830 ಶಾಲೆಗಳಲ್ಲಿ ವಿದ್ಯುತ್‌ ಸೌಕರ್ಯವೂ ಇಲ್ಲ. 4,876 ಶಾಲೆಗಳಿಗೆ ಕೌಂಪೌಂಡ್‌ಗಳಿಲ್ಲ. 2,732 ಶಾಲೆಗಳಲ್ಲಿ ಶೌಚಾಲಯ ರಹಿತ ಶಾಲೆಗಳ ಪೈಕಿ ಕೇವಲ 38 ಶಾಲೆಗಳಲ್ಲಿ ಮಾತ್ರ ಶೌಚಾಲಯ ನಿರ್ಮಾಣ ಪ್ರಗತಿಯಲ್ಲಿತ್ತು.

 

2,732 ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ; ಸರ್ಕಾರಿ ಶಾಲೆಗಳ ದುಸ್ಥಿತಿ ಅನಾವರಣ

 

ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಆರ್ಥಿಕ, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಅಧಿಕಾರಿಗಳೊಂದಿಗೆ ಕಳೆದ ಎರಡು ದಿನದ ಹಿಂದೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಇಲಾಖೆಗಳು ಮಂಡಿಸಿದ್ದ ಅಂಕಿ ಸಂಖ್ಯೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ. ಸಭೆಯ ನಂತರ ಸಚಿವ ಮಧು ಬಂಗಾರಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯ ಕಾರ್ಯದರ್ಶಿಗಳು ಈ ಕುರಿತು ಮಾಹಿತಿ ಒದಗಿಸಿದ್ದರು.

 

ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯ ಪ್ರಕಾರ, 464 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯದ ಕೊರತೆ ಮತ್ತು 87 ಕುಡಿಯುವ ನೀರಿನ ಸೌಲಭ್ಯದ ಕೊರತೆ ಕಂಡುಬಂದಿದೆ. ಸಮೀಕ್ಷೆಯ ನಂತರ, 87 ಶಾಲೆಗಳಲ್ಲಿ 55 ಶಾಲೆಗಳಲ್ಲಿ ಸಾಕಷ್ಟು ಕುಡಿಯುವ ನೀರು ಕಂಡುಬಂದಿದೆ, ಆದರೂ 32 ಶಾಲೆಗಳಲ್ಲಿ ಸಮಸ್ಯೆ ಉಳಿದಿತ್ತು.

 

ಆದರೀಗ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ 746 ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಮತ್ತು 1986 ಶಾಲೆಗಳಲ್ಲಿ ಗಂಡು ಮಕ್ಕಳಿಗೆ ಶೌಚಾಲಯವಿಲ್ಲ ಎಂದು ಅಧಿಕಾರಿಗಳು ಅಂಕಿ ಸಂಖ್ಯೆಗಳನ್ನು ಒದಗಿಸಿರುವುದು ಮುನ್ನೆಲೆಗೆ ಬಂದಿದೆ.

 

ರಾಜ್ಯದಲ್ಲಿ 20,174 ಕಿರಿಯ ಪ್ರಾಥಮಿಕ, 21,739 ಮಾಧ್ಯಮಿಕ, 4,844 ಪ್ರೌಢಶಾಲೆಗಳಿವೆ. ಈ ಶಾಲೆಗಳ ಪೈಕಿ 2,732 ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ ಎಂದು ಅಧಿಕಾರಿಗಳು ಮಂಡಿಸಿದ್ದ ಅಂಕಿ ಸಂಖ್ಯೆಗಳಿಂದ ತಿಳಿದು ಬಂದಿದೆ.

 

2,732 ಶಾಲೆಗಳ ಪೈಕಿ 1,986 ಗಂಡು ಮಕ್ಕಳ ಶಾಲೆ ಮತ್ತು 746 ಹೆಣ್ಣು ಮಕ್ಕಳ ಶಾಲೆಯೂ ಸೇರಿವೆ. ಕುಡಿಯುವ ನೀರಿನ ಸೌಲಭ್ಯಕ್ಕೆ ಅಂಕಿ ಸಂಖ್ಯೆಗಳನ್ನು ಒದಗಿಸಿರುವ ಅಧಿಕಾರಿಗಳು 136 ಶಾಲೆಗಳಲ್ಲಿ ಕುಡಿಯುವ ನೀರು, 4,876 ಶಾಲೆಗಳಲ್ಲಿ ಕಾಂಪೌಂಡ್‌ ಸೌಲಭ್ಯವಿಲ್ಲ ಎಂದು ಸಭೆಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 1,215 ಗಂಡು ಮಕ್ಕಳು, 466 ಹೆಣ್ಣು ಮಕ್ಕಳು, ಮಾಧ್ಯಮಿಕ ಶಾಲೆಗಳಲ್ಲಿ 654 ಗಂಡು ಮಕ್ಕಳು, 242 ಹೆಣ್ಣು ಮಕ್ಕಳು, ಪ್ರೌಢಶಾಲೆಗಳಲ್ಲಿ 117 ಗಂಡು ಮಕ್ಕಳು, 38 ಹೆಣ್ಣು ಮಕ್ಕಳ ಶೌಚಾಲಯಗಳಿಲ್ಲ ಎಂದು ವರದಿ ಸಲ್ಲಿಸಿದ್ದರು.

 

40 ಗಂಡು ಮಕ್ಕಳಿಗೆ ಒಂದು ಶೌಚಾಲಯವೆಂಬಂತೆ ಒಟ್ಟು 18,090 ಶೌಚಾಲಯಗಳ ನಿರ್ಮಾಣ ಆಗಬೇಕಿದೆ. 35 ಹೆಣ್ಣು ಮಕ್ಕಳಿಗೆ ಒಂದು ಶೌಚಾಲಯವೆಂಬಂತೆ 26,454 ಶೌಚಾಲಯ ಕೊಠಡಿಗಳನ್ನು ಹೆಚ್ಚುವರಿಯಾಗಿ ನಿರ್ಮಿಸಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

 

ವಿವೇಕ, ವಿಶೇಷ ಅನುದಾನ, ಶಾಲೆಗಳ ಕೊಠಡಿಗಳ ದುರಸ್ತಿ, ನರೇಗಾ ಅಡಿಯಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ 2022-23ರಿಂದ 2023-24ರವರೆಗೆ 1,306.05 ಕೋಟಿ ರು. ಅನುದಾನದ ಪೈಕಿ ಇದುವರೆಗೆ 755.12 ಕೋಟಿ ರು. ಬಿಡುಗಡೆಯಾಗಿದೆ.

 

ಅದೇ ರೀತಿ ಕುಡಿಯುವ ನೀರು ಒದಗಿಸುವ ಸಂಬಂಧ 120.33 ಕೋಟಿ ರು. ಬಿಡುಗಡೆ ಮಾಡಿದೆ. ಆದರೂ ಇನ್ನೂ ಹೆಚ್ಚುವರಿಯಾಗಿ ಅನುದಾನಕ್ಕೆ ಅಧಿಕಾರಿಗಳು ಬೇಡಿಕೆ ಇರಿಸಿದ್ದರು.

 

ಕುಡಿಯುವ ನೀರು ಒದಗಿಸಲು 25 ಲಕ್ಷ, ಗಂಡು ಮಕ್ಕಳ ಶೌಚಾಲಯಕ್ಕೆ 3 ಲಕ್ಷ, ಹೆಣ್ಣು ಮಕ್ಕಳ ಶೌಚಾಲಯಕ್ಕೆ 3 ಲಕ್ಷ , ವಿದ್ಯುತ್‌ ಸೌಲಭ್ಯಕ್ಕೆ 10 ಲಕ್ಷ ರು., ಕಾಂಪೌಂಡ್‌ ನಿರ್ಮಾಣಕ್ಕೆ 5 ಲಕ್ಷ, ಸಣ್ಣ ಪುಟ್ಟ ರಿಪೇರಿಗಳಿಗೆ 1.5 ಲಕ್ಷ, ದೊಡ್ಡ ಮಟ್ಟದ ರಿಪೇರಿ ಮತ್ತು ದುರಸ್ತಿಗೆ 5 ಲಕ್ಷ, ಪ್ರೌಢಶಾಲೆಗಳ ಹೆಚ್ಚುವರಿ ಕೊಠಡಿಗಳಿಗೆ 16.4 ಲಕ್ಷ ರು., ಪ್ರಾಥಮಿಕ ಶಾಲೆಗಳಿಗೆ 13.9 ಲಕ್ಷ ರು. ಬೇಕಿದೆ ಎಂದು ಬೇಡಿಕೆ ಪಟ್ಟಿ ನೀಡಿದ್ದರು.

SUPPORT THE FILE

Latest News

Related Posts