ಬೆಂಗಳೂರು; ಎಂ-2 ಪರವಾನಿಗೆ ಹೊಂದದೇ ಇರುವ ಕಂಪನಿಗೆ ನಿಯಮಬಾಹಿರವಾಗಿ ಅಂದಾಜು 260 ಕೋಟಿ ರು. ಮೌಲ್ಯದ ಕಾಕಂಬಿ ರಫ್ತು ಮಾಡಲು ಅನುಮೋದನೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಮುಖ್ಯಮಂತ್ರಿ ಮತ್ತು ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರ, ಕೇಂದ್ರ ಸಚಿವರೊಬ್ಬರ ಪಾತ್ರ ಇರುವ ಬಗ್ಗೆ ಸಾಕ್ಷ್ಯ, ಪುರಾವೆ, ದಾಖಲೆಗಳಿದ್ದರೂ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗವು ಮುಕ್ತಾಯಗೊಳಿಸಿರುವುದು ಇದೀಗ ಬಹಿರಂಗವಾಗಿದೆ.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆ ನಡೆಸಲು ಹೊರಡಿಸಿದ್ದ ಆದೇಶವನ್ನು ಹಿಂಪಡೆದು ಲೋಕಾಯುಕ್ತ ಪೊಲೀಸರಿಗೆ ಪ್ರಕರಣವನ್ನು ಹಸ್ತಾಂತರಿಸಬೇಕು ಎಂದು ರಾಜ್ಯ ಅಡ್ವೋಕೇಟ್ ಜನರಲ್ ಅವರು ಅಭಿಪ್ರಾಯ ನೀಡಿರುವ ಬೆನ್ನಲ್ಲೇ ಕಾಕಂಬಿ ಪ್ರಕರಣದಲ್ಲಿ ಯಾರ ವಿರುದ್ಧವೂ ಎಫ್‌ಐಆರ್ ದಾಖಲಿಸದೆಯೇ ಪ್ರಾಥಮಿಕ ವಿಚಾರಣೆಯಲ್ಲಿಯೇ ಮುಕ್ತಾಯಗೊಳಿಸಿರುವುದು ಮುನ್ನೆಲೆಗೆ ಬಂದಿದೆ.
ಕಾಕಂಬಿ ರಫ್ತಿಗೆ ಸಂಬಂಧಿಸಿದಂತೆ ಯಾವುದೇ ನಿಯಮಬಾಹಿರ ಚಟುವಟಿಕೆಗಳು ನಡೆದಿಲ್ಲ ಮತ್ತು ಸರ್ಕಾರಕ್ಕೆ ಯಾವುದೇ ರೀತಿಯಲ್ಲಿಯೂ ಆರ್ಥಿಕ ನಷ್ಟವುಂಟಾಗಿಲ್ಲ ಅಬಕಾರಿ ಆಯುಕ್ತರು ವರದಿ ನೀಡಿದ್ದರ ಬೆನ್ನಲ್ಲೇ ಇದೀಗ ಲೋಕಾಯುಕ್ತ ಪೊಲೀಸರು ಸಹ ಈ ಪ್ರಕರಣವನ್ನು ಮುಕ್ತಾಯಗೊಳಿಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಂದ 2.50 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ಕಾಕಂಬಿ ಎತ್ತುವಳಿ ಮಾಡಿ ಹೊರರಾಜ್ಯಕ್ಕೆ ಸಾಗಾಣಿಕೆ ಮಾಡಲು ಅನುಮತಿ ನೀಡುವ ಪ್ರಕ್ರಿಯೆಗಳಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂದು ಲಂಚಮುಕ್ತ ಕರ್ನಾಟಕ ವೇದಿಕೆಯು ಸಾಕಷ್ಟು ಪುರಾವೆಗಳ ಸಮೇತ ದೂರು ಸಲ್ಲಿಸಿತ್ತು.
ಈ ದೂರರ್ಜಿ ಆಧರಿಸಿ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ಸೇರಿದಂತೆ ಯಾವುದೇ ಕ್ರಮವಹಿಸಿರಲಿಲ್ಲ. ಹೀಗಾಗಿ ಲಂಚ ಮುಕ್ತ ಕರ್ನಾಟಕ ವೇದಿಕೆಯು ಈ ಪ್ರಕರಣವನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕೊಂಡೊಯ್ದಿದಿತ್ತು. ಇದರ ಅರ್ಜಿ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲೇ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ಲೋಕಾಯುಕ್ತ ಪೊಲೀಸ್ ವಿಭಾಗದ ತನಿಖಾಧಿಕಾರಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ. ಈ ಸಂಬಂಧ ದೂರುದಾರರಿಗೆ ಹಿಂಬರಹವನ್ನೂ ನೀಡಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ ಲಭ್ಯವಾಗಿದೆ.
ಹಿಂಬರಹದಲ್ಲೇನಿದೆ?
ಅಬಕಾರಿ ಇಲಾಖೆ ಸಚಿವ ಕೆ ಗೋಪಾಲಯ್ಯ, ಆಯುಕ್ತ ರವಿಶಂಕರ್, ಅಧೀನ ಕಾರ್ಯದರ್ಶಿ ಮಂಜುಳ ನಟರಾಜ್, ಉಪ ಕಾರ್ಯದರ್ಶಿ ಅರುಳ್ ಕುಮಾರ್, ಡಾ ಏಕ್‌ರೂಪ್ ಕೌರ್, ಅಪರ ಮುಖ್ಯ ಕಾರ್ಯದರ್ಶಿ ಐ ಎಸ್ ಎನ್ ಪ್ರಸಾದ್, ಜಂಟಿ ಅಯುಕ್ತರಾದ ನಿರ್ಮಲಾ ನಾರಾಯಣಸ್ವಾಮಿ ಅವರು ಭ್ರಷ್ಟಾಚಾರ ಎಸಗಿ ಕರ್ನಾಟಕ ಸರ್ಕಾರಕ್ಕೆ ಆರ್ಥಿಕ ನಷ್ಟ ಮಾಡಿರುತ್ತಾರೆ ಇತ್ಯಾದಿಯಾಗಿ ಆರೋಪ ಮಾಡಿ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಅರ್ಜಿ ಸಲ್ಲಿಸಿರುತ್ತೀರಿ.
ಸದರಿ ದೂರು ಅರ್ಜಿಯ ಪ್ರಾಥಮಿಕ ವಿಚಾರಣೆ ಕಾಲದಲ್ಲಿ ಎದುರುದಾರರಗಳ ವಿರುದ್ಧ ಮಾಢಿರುವ ಆಪಾದನೆಗಳ ಬಗ್ಗೆ ಸಂಗ್ರಹಿಸಿದ ಮಾಹಿತಿ/ದಾಖಲಾತಿಗಳಿಂದ ಎದುರುದಾರರುಗಳು ಭ್ರಷ್ಟಾಚಾರವೆಸಗಿರುವ ಬಗ್ಗೆ ಹಾಗೂ ಇದರಿಂದ ಸರ್ಕಾರಕ್ಕೆ ಯಾವುದೇ ರೀತಿಯ ನಷ್ಟವಾಗಿರುವ ಬಗ್ಗೆ ಯಾವುದೇ ಸೂಕ್ತ ಸಾಕ್ಷ್ಯಧಾರಗಳು ಲಭ್ಯವಾಗಿರುವುದಿಲ್ಲ. ಅದ ಕಾರಣ ಸದರಿ ದೂರು ಅರ್ಜಿಯನ್ನು ಮುಕ್ತಾಯ ಮಾಡಲಾಗಿರುತ್ತದೆ ಎಂದು ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್ ಎನ್ ಬಾಲಾಜಿ ಬಾಬು ಅವರು 2023ರ ನವೆಂಬರ್ 18ರಂದು ಹಿಂಬರಹ ನೀಡಿದ್ದಾರೆ.
ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಂದ ಎತ್ತುವಳಿ ಮಾಡಿದ್ದ ಕಾಕಂಬಿಯಲ್ಲಿ ನೀರು ಮಿಶ್ರಣ ಮಾಡಿ ಹೊರ ರಾಜ್ಯಕ್ಕೆ ಸಾಗಾಣಿಕೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡಬೇಕು ಎಂದು ಅಬಕಾರಿ ಆಯುಕ್ತರು ನಿರ್ದೇಶನ ನೀಡಿದ್ದರು.
ರಾಜ್ಯದ ವಿಜಯಪುರದ ಬಸವೇಶ್ವರ ಶುಗರ್ಸ್ ಲಿಮಿಟೆಡ್‌ನಿಂದ ಮುಂಬೈ ಮೂಲದ ಕೆ ಎನ್ ರಿಸೋರ್ಸ್ ಪ್ರೈವೈಟ್ ಲಿಮಿಟೆಡ್ ಎತ್ತುವಳಿ ಮಾಡಿದ್ದ 691.430 ಮೆಟ್ರಿಕ್ ಟನ್ ಕಾಕಂಬಿಯನ್ನು ಗೋವಾ ರಾಜ್ಯದ ಅಬಕಾರಿ ಇಲಾಖೆಯು ತಿರಸ್ಕರಿಸಿತ್ತು. ಈ ಕುರಿತು ಅಬಕಾರಿ ಆಯುಕ್ತರು ವಿಜಯಪುರ ಜಿಲ್ಲೆಯ ಅಬಕಾರಿ ಉಪ ಆಯುಕ್ತರಿಂದ ವರದಿ ಕೇಳಿದ್ದರು.
ಕೆ ಎನ್ ರಿಸೋರ್ಸ್ ಲಿಮಿಟೆಡ್ ಸಾಗಾಣಿಕೆ ಮಾಡುತ್ತಿದ್ದ ಕಾಕಂಬಿಯಲ್ಲಿ ನೀರು ಮಿಶ್ರಣವಾಗಿ ಕಲಬೆರಕೆಯಾಗಿತ್ತು ಎಂದು ಗೋವಾ ರಾಜ್ಯದ ಅಬಕಾರಿ ಆಯುಕ್ತರೇ ಹೇಳಿದ್ದು ಚರ್ಚೆಗೆ ಕಾರಣವಾಗಿತ್ತು. ವಿಜಯಪುರದ ಬಸವೇಶ್ವರ ಶುಗರ್ಸ್ ಲಿಮಿಟೆಡ್‌ನಿಂದ 691.430 ಮೆಟ್ರಿಕ್ ಟನ್ ಪ್ರಮಾಣದಲ್ಲಿ ಕಾಕಂಬಿಯನ್ನು ಕೆ ಎನ್ ರಿಸೋರ್ಸ್ ಕಂಪನಿಯು ಎತ್ತುವಳಿ ಮಾಡಿತ್ತು. ಇದನ್ನು 23 ಟ್ರಕ್‌ಗಳ ಮೂಲಕ ಗೋವಾ ಬಂದರು ಮೂಲಕ ಸಾಗಣೆ ಮಾಡುತ್ತಿದ್ದ ವೇಳೆಯಲ್ಲಿ ಹಡಗಿನ ಸಿಬ್ಬಂದಿ ತಪಾಸಣೆ ನಡೆಸಿದ್ದರು. ಆ ವೇಳೆಯಲ್ಲಿ ಕಾಕಂಬಿಯಲ್ಲಿ ನೀರು ಮಿಶ್ರಣವಾಗಿದೆ ಎಂಬುದು ಪತ್ತೆಯಾಗಿತ್ತು.
ನೀರು ಮಿಶ್ರಣ, ಕಲಬೆರಕೆ; ಕೆ ಎನ್ ರಿಸೋರ್ಸ್ ಸಾಗಿಸುತ್ತಿದ್ದ ರಾಜ್ಯದ 691 ಮೆಟ್ರಿಕ್ ಟನ್ ಕಾಕಂಬಿ ತಿರಸ್ಕೃತ
ಕರ್ನಾಟಕ ರಾಜ್ಯದ ರಫ್ತು ಗುಣಮಟ್ಟದ ಕಾಕಂಬಿಯನ್ನು ಸಾಗಾಣಿಕೆ ಸಮಯದಲ್ಲಿ ಕಳವು ಮಾಡಿ ಅದನ್ನು ಬೇರೆ ಕಡೆ ನಿಗೂಢ ಸ್ಥಳಕ್ಕೆ ಅಕ್ರಮವಾಗಿ ಸಾಗಿಸಿ ಈ ಸರಕಿಗೆ ನೀರನ್ನು ಮಿಶ್ರಣ ಮಾಡಿರುವ ಬಗ್ಗೆ ದಟ್ಟ ಅನುಮಾನವಿದೆ. ಬಂದರು ಸಮೀಪದ ಸರಕು ಸಂಗ್ರಹಣೆ ಕೇಂದ್ರದಿಂದ ಬಂದ ಈ 23 ಟ್ಯಾಂಕರ್‍ಗಳನ್ನು ಹಡಗಿಗೆ ಸಾಗಾಣಿಕೆ ಮಾಡುವ ಸಮಯದಲ್ಲಿ ಹಡಗಿನ ಸಿಬ್ಬಂದಿ ಕಳಪೆ ಗುಣಮಟ್ಟದ ಕಾರಣ ಇವುಗಳನ್ನು ಖಾಲಿ ಮಾಡಲು ಒಪ್ಪದೇ ವಾಪಸ್ ಕಳಿಸಿದ್ದಾರೆ. ಇಲ್ಲಿ ಕಾಕಂಬಿ ಸರಕಿಗೆ ಸರಕು ಸಂಗ್ರಹಣೆ ಕೇಂದ್ರದಲ್ಲಿ ತುಂಬಿ ರಾತ್ರೋರಾತ್ರಿ ಸಾಗಾಣಿಕೆ ಮಾಡುವಾಗ ನೀರನ್ನು ಮಿಶ್ರಣ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಂದಾಜು 260 ಕೋಟಿ ರು. ಮೌಲ್ಯದ 2 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ಕಾಕಂಬಿಯನ್ನು ಮುಂಬೈ ಮೂಲದ ಕೆ ಎನ್ ರಿಸೋರ್ಸ್ ಪ್ರೈವೈಟ್ ಲಿಮಿಟೆಡ್ ಕಂಪನಿಗೆ ರಫ್ತು ಪರವಾನಿಗೆ ನೀಡಿ ಅಕ್ರಮವೆಸಗಲಾಗಿದೆ ಎಂದು ಆರೋಪಿಸಿದ್ದ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟವುಂಟಾಗಿಲ್ಲ ಮತ್ತು ಕಾಕಂಬಿ ಎತ್ತುವಳಿ ಹಾಗೂ ರಫ್ತಿನ ವಿಚಾರದಲ್ಲಿ ಯಾವುದೇ ನಿಯಮಬಾಹಿರ ಚಟುವಟಿಕೆಗಳೂ ನಡೆದಿಲ್ಲ ಎಂದು ಈಗಿನ ಕಾಂಗ್ರೆಸ್ ಸರ್ಕಾರ ಸಮರ್ಥಿಸಿಕೊಂಡಿತ್ತು.
ಕಾಕಂಬಿ ಎತ್ತುವಳಿ ಮತ್ತು ರಫ್ತು ಪರವಾನಿಗೆ ನೀಡಿರುವುದರಲ್ಲಿ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟವಾಗಿಲ್ಲ ಹಾಗೂ ಯಾವುದೇ ನಿಯಮಬಾಹಿರ ಚಟುವಟಿಕೆಗಳು ನಡೆದಿಲ್ಲ ಎಂದು ಈಗಿನ ಕಾಂಗ್ರೆಸ್ ಸರ್ಕಾರವೇ ಕ್ಲೀನ್ ಚಿಟ್ ಕೊಟ್ಟಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿತ್ತು.
ಕಾಕಂಬಿ ಹಗರಣಕ್ಕೆ ಕಾಂಗ್ರೆಸ್ ಸರ್ಕಾರದಿಂದಲೇ ಕ್ಲೀನ್ ಚಿಟ್; ಅಬಕಾರಿ ಆಯುಕ್ತರ ವರದಿ ಬಹಿರಂಗ
ಎಂ 2 ಲೈಸೆನ್ಸ್ ಹೊಂದದೆಯೇ 2 ಲಕ್ಷ ಮೆಟ್ರಿಕ್ ಟನ್ ಕಾಕಂಬಿ ಎತ್ತುವಳಿ ಮಾಡಿ ರಫ್ತು ಮಾಡಲು ಪರವಾನಿಗೆ ನೀಡಲಾಗಿತ್ತು ಎಂದು ಸರ್ಕಾರಕ್ಕೆ ದೂರುಗಳು ಸಲ್ಲಿಕೆಯಾಗಿದ್ದವು. ಅಲ್ಲದೇ ಇದೇ ಅಂಶವನ್ನು ಮುಂದಿರಿಸಿದ್ದ ಕಾಂಗ್ರೆಸ್ ಪಕ್ಷವೂ ಸಹ ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದಿತ್ತು. ಪ್ರತಿಪಕ್ಷದಲ್ಲಿದ್ದ ಸಿದ್ದರಾಮಯ್ಯ ಅವರೂ ಸಹ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ದನಿ ಎತ್ತಿದ್ದರು.
ಆದರೀಗ ಹಗರಣಕ್ಕೆ ಸಂಬಂಧಿಸಿದಂತೆ 9 ತಿಂಗಳ ನಂತರ ಅಬಕಾರಿ ಇಲಾಖೆಯ ಆಯುಕ್ತ ಡಾ ಜೆ ರವಿಶಂಕರ್ ಅವರು 2023ರ ಆಗಸ್ಟ್ 2ರಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡಿದ್ದಾರೆ. ಇಡೀ ಪ್ರಕರಣದಲ್ಲಿ ಯಾವುದೇ ರೀತಿಯಲ್ಲೂ ಆರ್ಥಿಕ ನಷ್ಟವಾಗಿಲ್ಲ ಮತ್ತು ನಿಯಮಬಾಹಿರತೆಗಳೂ ನಡೆದಿಲ್ಲ ಎಂದು ವರದಿಯಲ್ಲಿ ಹೇಳಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿತ್ತು.
ಈ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರನ ಹೆಸರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರಭಾವವೂ ಇದೆ ಎಂದು ಪ್ರಸ್ತಾಪಿಸಿದ್ದ ಆಡಿಯೋವೊಂದನ್ನು ಬಿಡುಗಡೆಗೊಳಿಸಿ ಇದರಲ್ಲಿ ನಿಯಮಬಾಹಿರ ಚಟುವಟಿಕೆಗಳು ನಡೆದಿವೆ ಎಂದು ಪ್ರತಿಪಕ್ಷದಲ್ಲಿದ್ದಾಗ ಪ್ರಿಯಾಂಕ್ ಖರ್ಗೆ (ಹಾಲಿ ಸಚಿವರು) ಮತ್ತು ವಿಧಾನ ಪರಿಷತ್‌ನ ಮಾಜಿ ಸದಸ್ಯ ರಮೇಶ್ ಬಾಬು ಅವರು ಆರೋಪಿಸಿದ್ದರು. ಅಲ್ಲದೇ ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೊಳಪಡಿಸಬೇಕು ಎಂದೂ ಆಗ್ರಹಿಸಿದ್ದರು.
ಈ ಪ್ರಕರಣದಲ್ಲಿ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟಾಗಿದೆ ಎಂದು ಲಂಚಮುಕ್ತ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ಬಿ ಎಸ್ ಮಲ್ಲಿಕಾರ್ಜುನಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದರಲ್ಲದೇ ನಷ್ಟಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದರು. ಈ ಮನವಿಗೆ ಸಂಬಂಧಿಸಿದಂತೆ ಅಬಕಾರಿ ಆಯುಕ್ತರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡು 4 ಪುಟಗಳ ವರದಿಯನ್ನು 2023ರ ಆಗಸ್ಟ್ 2ರಂದು ವರದಿ ಸಲ್ಲಿಸಿದ್ದರು.
‘ಈ ಪ್ರಸ್ತಾವನೆ ಮತ್ತು ಸಲ್ಲಿಸಿರುವ ದಾಖಲಾತಿ ಹಾಗೂ ವರದಿಯನ್ನು ಪರಿಗಣಿಸಿ ಕೆ ಎನ್ ರಿಸೋರ್ಸ್ ಪ್ರೈವೈಟ್ ಲಿಮಿಟೆಡ್‌ಗೆ 2022-23 ಮತ್ತು 2023-24ನೇ ಸಾಲಿಗೆ 2,00,000 ಮೆಟ್ರಿಕ್ ಟನ್ ಕಾಕಂಬಿಯನ್ನು ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ಎತ್ತುವಳಿ ಮಾಡಿ ರಫ್ತು ಮಾಡಲು ಅನುಮತಿ ನೀಡಲಾಗಿದೆ ಎಂದು ವರದಿಯಲ್ಲಿ ವಿವರಿಸಿತ್ತು.
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ ಇದೀಗ ಕಾಂಗ್ರೆಸ್ ಸರ್ಕಾರವು ಅದೇ ಕೆ ಎನ್ ರಿಸೋರ್ಸ್ ಕಂಪನಿಗೆ ಅಂದಾಜು 11 ಕೋಟಿ ರು. ಮೌಲ್ಯದ ಕಾಕಂಬಿ ಎತ್ತುವಳಿ ಮತ್ತು ರಫ್ತಿಗೆ ಪರವಾನಿಗೆ ನೀಡಿರುವುದನ್ನು ‘ದಿ ಫೈಲ್’ ಹೊರಗೆಡವಿತ್ತು.
ಕಾಂಗ್ರೆಸ್ ಸರ್ಕಾರಕ್ಕೂ ಸುತ್ತಿಕೊಂಡ ಕಾಕಂಬಿ ಹಗರಣ; ತನಿಖೆಯಲ್ಲಿರುವಾಗಲೇ ರಫ್ತು ಪರವಾನಿಗೆ
ಕೆ ಎನ್ ರಿಸೋರ್ಸ್ ಕಂಪನಿಗೆ ಕಾಕಂಬಿ ರಫ್ತು ಪರವಾನಿಗೆ ನೀಡುವ ಪ್ರಕ್ರಿಯೆಯಲ್ಲಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಆಪಾದಿಸಿದ್ದರು. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋವೊಂದನ್ನು ವಿಧಾನಸಭೆ ಚುನಾವಣೆ ಮುನ್ನ ಬಿಡುಗಡೆ ಮಾಡಿದ್ದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಪ್ರಿಯಾಂಕ್ ಖರ್ಗೆ ಮತ್ತು ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಣಕಾಸು ಸಚಿವರ ಹೆಸರು ಪ್ರಸ್ತಾಪವಾಗಿರುವ ಆಡಿಯೋವನ್ನು ಬಹಿರಂಗಗೊಳಿಸಿದ್ದರು.
‘ಬಿಜೆಪಿಯವರು ಯಾವುದನ್ನು ಬಿಡದೇ ಲೂಟಿಗಿಳಿದಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಕಾಕಂಬಿಯಲ್ಲೂ ಹಗರಣ ನಡೆಯುತ್ತಿದೆ. ಮುಂಬೈ ಮೂಲದ ಕೆ ಎನ್ ರಿಸೋರ್ಸ್ ಖಾಸಗಿ ಕಂಪನಿ ಬಳಿ ಯಾವುದೇ ದಾಖಲೆ ಇಲ್ಲದಿದ್ದರೂ ಎಂ 1 ಎಂ 2 ಪರವಾನಿಗೆ ಕೊಟ್ಟಿದ್ದಾರೆ. ಕೇವಲ 2 ತಿಂಗಳಲ್ಲಿ ಯಾವುದೇ ದಾಖಲೆ ಇಲ್ಲದಿದ್ದರೂ ಪರವಾನಿಗೆ ನೀಡಿದ್ದಾರೆ,’ ಎಂದು ಪ್ರಿಯಾಂಕ್ ಖರ್ಗೆ ಅವರು ಆರೋಪಿಸಿದ್ದರು.
ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಮಾತನಾಡಲು ಹೆದುರುತ್ತಿರುವುದೇಕೆ, ನಿಯಮ ಮೀರಿ ಕಾಕಂಬಿ ರಫ್ತು ಮಾಡಲು ಸಹಕರಿಸಿದ್ದೇಕೆ? ಯಥಾ ಪ್ರಕಾರ ದಾಖಲೆ ಕೊಡಿ, ಸಾಕ್ಷಿ ಕೊಡಿ ಎನ್ನುವಿರಾ ಅಥವಾ ಸೂಕ್ತ ತನಿಖೆಯ ಅಗ್ನಿಪರೀಕ್ಷೆಗೆ ಒಳಪಟ್ಟು ಪ್ರಾಮಾಣಿಕತೆ ಸಾಬೀತುಪಡಿಸುವಿರಾ ಎಂದು ಪ್ರಶ್ನಿಸಿದ್ದರು.
ಬಿಜೆಪಿ ಸಂಸದರು ನೇರವಾಗಿ ಸಿ ಎಂ ಬಳಿ ಈ ಡೀಲ್ ಮಾಡಿದ್ದಾರೆ. ಇದು ದೊಡ್ಡ ಮಟ್ಟದ ಡೀಲ್ ಎಂದು ಅವರು ದೂರವಾಣಿಯಲ್ಲಿ ಮಾತನಾಡುತ್ತಾರೆ. ಮುಖ್ಯಮಂತ್ರಿಗಳೇ ಅಬಕಾರಿ ಸಚಿವರು ಹಾಗೂ ಆಯುಕ್ತರನ್ನು ಕರೆಸಿ ಇದಕ್ಕೆ ಅನುಮತಿ ಕೊಡಿಸಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ನಷ್ಟವಾದರೂ ಸರಿ ಹೈಕಮಾಂಡ್ ಮನವೊಲಿಸಲು ಈ ಅನುಮತಿ ಕೊಟ್ಟರಾ ಎಂದೂ ಪ್ರಶ್ನಿಸಿದ್ದನ್ನು ಸ್ಮರಿಸಬಹುದು.
260 ಕೋಟಿ ಮೌಲ್ಯದ ಕಾಕಂಬಿ ಹಗರಣ; ‘ದಿ ಫೈಲ್’ ವರದಿ ಬೆನ್ನಲ್ಲೇ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್
ಅಗತ್ಯ ದಾಖಲೆಗಳನ್ನು ಹಾಜರುಪಡಿಸದಿದ್ದರೂ ಮುಂಬೈ ಮೂಲದ ಕೆ ಎನ್ ರಿಸೋರ್ಸ್ ಪ್ರೈವೈಟ್ ಲಿಮಿಟೆಡ್‌ಗೆ 2 ಲಕ್ಷ ಮೆಟ್ರಿಕ್ ಟನ್ ಕಾಕಂಬಿಯನ್ನು ವಿದೇಶಗಳಿಗೆ ರಫ್ತು ಮಾಡಲು ಅನುಮತಿ ನೀಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಅವರು ಕಾಕಂಬಿ ರಫ್ತು ಹಗರಣದ ಸತ್ಯಾಸತ್ಯತೆಯನ್ನು ಹೊರತರಲು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.
ಅಬಕಾರಿ ಹಗರಣ; ‘ದಿ ಫೈಲ್’ ವರದಿ ಉಲ್ಲೇಖಿಸಿ ತನಿಖೆಗೆ ಆಗ್ರಹಿಸಿ ಹೇಳಿಕೆ ಬಿಡುಗಡೆ
ಈ ಪ್ರಕರಣದ ಕುರಿತು ಆರಂಭದಲ್ಲಿ ಮೌನ ವಹಿಸಿದ್ದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನೂರೇ ನೂರು ದಿನದಲ್ಲಿ ವಿವಾದಿತ ಕಂಪನಿಗೇ 9,500 ಮೆಟ್ರಿಕ್ ಟನ್ ಪ್ರಮಾಣದ ಕಾಕಂಬಿ ಎತ್ತುವಳಿ ಮತ್ತು ರಫ್ತು ಮಾಡಲು ಪರವಾನಿಗೆ ನೀಡಿದ್ದು, ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿತ್ತು. ರಫ್ತು ಪರವಾನಿಗೆ ನೀಡುವುದಕ್ಕೆ ಅಬಕಾರಿ ಹಾಲಿ ಸಚಿವ ಆರ್ ಬಿ ತಿಮ್ಮಾಪೂರ ಅವರೂ ಅನುಮೋದಿಸಿದ್ದರು ಎಂದು ಗೊತ್ತಾಗಿದೆ.
ಕಾಕಂಬಿ ರಫ್ತು ಮಾಡಲು ಅನುಮೋದನೆ ನೀಡಿರುವುದರ ಹಿಂದೆ ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರು 8 ಕೋಟಿ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ‘ದಿ ಫೈಲ್’ 2022ರ ಅಕ್ಟೋಬರ್ 13ರಂದು ವರದಿ ಪ್ರಕಟಿಸಿತ್ತು.
ಅಬಕಾರಿ ಹಗರಣ; ಗೋವಾ ಬಂದರು ಮೂಲಕ ಕಾಕಂಬಿ ರಫ್ತಿನ ಅನುಮತಿಗೆ 8 ಕೋಟಿ ಕಿಕ್‌ಬ್ಯಾಕ್ ಆರೋಪ
ಕೆ ಎನ್ ರಿಸೋರ್ಸ್ ಪ್ರೈವೈಟ್ ಲಿಮಿಟೆಡ್‌ಗೆ ಎಂ-2 ಲೈಸೆನ್ಸ್ ಇಲ್ಲದಿದ್ದರೂ 2 ಲಕ್ಷ ಮೆಟ್ರಿಕ್ ಟನ್ ಕಾಕಂಬಿಯನ್ನು ರಫ್ತು ಮಾಡಲು ಅನುಮೋದನೆ ನೀಡಿದ್ದನ್ನು ‘ದಿ ಫೈಲ್’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡ ದಾಖಲೆಗಳನ್ನಾಧರಿಸಿ 2022ರ ನವಂಬರ್ 30ರಂದು ವರದಿ ಪ್ರಕಟಿಸಿತ್ತು.
ಅಬಕಾರಿ ಹಗರಣ; ಪರವಾನಿಗೆ ಇಲ್ಲದಿದ್ದರೂ ಮರೆಮಾಚಿ ಮುಂಬೈ ಕಂಪನಿಗೆ ಕಾಕಂಬಿ ರಫ್ತಿಗೆ ಅನುಮತಿ
ಈ ಕುರಿತು ಲಂಚಮುಕ್ತ ಕರ್ನಾಟಕ ವೇದಿಕೆಯು ಪ್ರಧಾನಿಗೂ ದೂರು ಸಲ್ಲಿಸಿತ್ತು.
ಅಬಕಾರಿ ಹಗರಣ; ಸಚಿವ ಗೋಪಾಲಯ್ಯ ಸೇರಿ ಅಧಿಕಾರಿಗಳ ವಿರುದ್ಧ ಪ್ರಧಾನಿಗೆ ದೂರು
ಈ ಹಗರಣದಲ್ಲಿ ಪ್ರಭಾವಿ ರಾಜಕಾರಣಯೊಬ್ಬರ ಪುತ್ರನ ಹೆಸರು ಪ್ರಸ್ತಾಪವಾಗಿದ್ದ ಆಡಿಯೋವನ್ನಾಧರಿಸಿ ‘ದಿ ಫೈಲ್’ 2022ರ ಡಿಸೆಂಬರ್ 22ರಂದು ವರದಿ ಪ್ರಕಟಿಸಿತ್ತು.
ಅಬಕಾರಿ ಹಗರಣ; ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರನ ಹೆಸರು ಆಡಿಯೋದಲ್ಲಿ ಪ್ರಸ್ತಾಪ
ಅಲ್ಲದೇ ಈ ಹಗರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಉದ್ಯಮಿಗಳ ವಲಯದಲ್ಲಿ 25 ಪ್ರಶ್ನೆಗಳು ಕೇಳಿಬಂದಿದ್ದವು. ಈ ಕುರಿತು 2022ರ ಡಿಸೆಂಬರ್ 24ರಂದು ವರದಿ ಪ್ರಕಟಿಸಿತ್ತು.
ಅಬಕಾರಿ ಹಗರಣದಲ್ಲಿ ಪ್ರಭಾವಿ ಪುತ್ರನ ಹೆಸರು ಪ್ರಸ್ತಾಪ; ಮುನ್ನೆಲೆಗೆ ಬಂದ 25 ಪ್ರಶ್ನೆಗಳು
ನಿಯಮಬಾಹಿರವಾಗಿ ಹೊರ ರಾಜ್ಯದ ಕಂಪನಿಗೆ 2 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ಕಾಕಂಬಿಯನ್ನು ರಫ್ತುಮಾಡಲು ಅನುಮತಿ ನೀಡಿರುವುದು ರಾಜ್ಯದ ಉದ್ಯಮಿಗಳ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆರಂಭದಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಕಾಂಗ್ರೆಸ್ ಇದೀಗ ಮೌನಕ್ಕೆ ಜಾರಿರುವುದು ಮತ್ತು ರಾಜ್ಯ ಅಬಕಾರಿ ಇಲಾಖೆಯು ಪರವಾನಿಗೆಯನ್ನು ಮುಂದುವರೆಸಿರುವುದರ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ.