ಬೆಂಗಳೂರು; ವಿಶೇಷ ಜ್ಞಾನ ಮತ್ತು ಕೌಶಲ್ಯಗಳ ಅಗತ್ಯವಿರುವ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತಿದೆ ಎಂಬ ಹೆಗ್ಗಳಿಕೆ ಹೊಂದಿರುವ ನೀತಿ ಆಯೋಗವು ಇದೀಗ ಮಾನವ ಸಂಪನ್ಮೂಲ ಸೇವೆಗಳಿಗೆ ಮೂರು ಖಾಸಗಿ ಕಂಪನಿಗಳಿಗೆ ಹೊರಗುತ್ತಿಗೆ ನೀಡಿರುವುದು ಆರ್‍ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.
ಸರಕಾರದ ಆಡಳಿತ ಯಂತ್ರದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಾರ್ವಜನಿಕ ಸೇವೆಗಳನ್ನು ಖಾಸಗಿಯವರಿಗೆ ಹೊರಗುತ್ತಿಗೆ ನೀಡುವಂತೆ ನೀತಿ ಆಯೋಗವು ನೀಡಿದ್ದ ಸಲಹೆ ಬೆನ್ನಲ್ಲೇ ಇದೀಗ ತನ್ನದೇ ಸಂಸ್ಥೆಯನ್ನು ಮಾನವ ಸಂಪನ್ಮೂಲ ಸೇವೆಗಳನ್ನು ಪಡೆಯಲು ಹೊರಗುತ್ತಿಗೆ ಕಂಪನಿಗಳ ಸೇವೆಯನ್ನು ಪಡೆದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
2015ರಿಂದ 2023ರ ಸೆಪ್ಟಂಬರ್‍ವರೆಗೆ ಹೊರಗುತ್ತಿಗೆ ಪಡೆದಿರುವ ನೀತಿ ಆಯೋಗವು ಈ ಸಂಬಂಧ 11.56 ಕೋಟಿ ರು.ಗಳನ್ನು ಪಾವತಿಸಿರುವುದು ಆರ್‍ಟಿಐ ದಾಖಲೆಗಳಿಂದ ಗೊತ್ತಾಗಿದೆ.
ಅಮರಾವತಿಯ ಅಜಯ್ ಬಸುದೇವ್ ಬೋಸ್ ಅವರು ಆರ್‍ಟಿಐ ಅಡಿಯಲ್ಲಿ ಮಾಹಿತಿ ಕೋರಿದ್ದರು. ಇದಕ್ಕೆ 2023ರ ನವೆಂಬರ್ 23ರಂದು ಉತ್ತರ ನೀಡಿರುವ ಕೇಂದ್ರ ಸರ್ಕಾರವು ನೀತಿ ಆಯೋಗವನ್ನು ಮುನ್ನೆಡೆಸಲು ಹೊರಗುತ್ತಿಗೆ ನೀಡಿರುವ ವಿಚಾರವನ್ನು ಬಹಿರಂಗಪಡಿಸಿದೆ.
ನೊಯ್ಡಾದ ಸುಲಭ್ ಇಂಟರ್ ನ್ಯಾಷನಲ್, ಒಯೊನಿಕ್ಸ್ ಮ್ಯಾನೇಜ್‌ಮೆಂಟ್ ಸರ್ವಿಸಸ್, ಫರಿದಾಬಾದ್‌ನ ಉತ್ಕರ್ಷ್ ಯುಟಿಲಿಟಿಸ್ ಗೆ ಒಟ್ಟು 11.56 ಕೋಟಿ ರು. ಮೊತ್ತದಲ್ಲಿ ಹೊರಗುತ್ಗಿಗೆ ಕಂಪನಿಗಳಿಗೆ 2015ರ ಜನವರಿಯಿಂದ 2023ರ ಸೆಪ್ಟಂಬರ್‍ವರೆಗೆ ಪಾವತಿಸಿರುವುದು ಗೊತ್ತಾಗಿದೆ.
ಸರಕಾರದ ಆಡಳಿತ ಯಂತ್ರದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಾರ್ವಜನಿಕ ಸೇವೆಗಳನ್ನು ಖಾಸಗಿಯವರಿಗೆ ಹೊರಗುತ್ತಿಗೆ ನೀಡುವಂತೆ ನೀತಿ ಚಿಂತಕರ ಚಾವಡಿ ನೀತಿ ಆಯೋಗ ಸಲಹೆ ನೀಡಿತ್ತು.
ಲ್ಯಾಟರಲ್ ಎಂಟ್ರಿಯ ಮೂಲಕ ಆಡಳಿತ ವ್ಯವಸ್ಥೆಗೆ ಪರಿಣಿತರನ್ನು ಒಳಗೊಳ್ಳುವಂತೆ ಶಿಫಾರಸು ಮಾಡಿತ್ತು. ಈ ಕ್ರಮವು “ಸ್ಥಾಪಿತ ವೃತ್ತಿ ಅಧಿಕಾರಶಾಹಿಗೆ ಸ್ಪರ್ಧೆಯೊಡ್ಡಲಿದೆ ಎಂದು ಹೇಳಲಾಗಿತ್ತು.
ನೀತಿ ಆಯೋಗವು ಆಡಳಿತ-ಸಂಬಂಧಿತ ಕಾರ್ಯಗಳ ಸಂಪೂರ್ಣ ಡಿಜಿಟಲೀಕರಣದ ಗುರಿಯನ್ನು ಹೊಂದಿತ್ತು. ಆರ್ಥಿಕತೆಯ ಹೆಚ್ಚುತ್ತಿರುವ ಸಂಕೀರ್ಣತೆಯು ನೀತಿ-ನಿರ್ಮಾಣವು ಒಂದು ವಿಶೇಷವಾದ ಚಟುವಟಿಕೆಯಾಗಿದೆ. ಆದ್ದರಿಂದ, ಲ್ಯಾಟರಲ್ ಎಂಟ್ರಿ ಮೂಲಕ ಪರಿಣಿತರನ್ನು ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಲು ಅತ್ಯಗತ್ಯ ಎಂದು ಪ್ರತಿಪಾದಿಸಿತ್ತು.
ಅಧಿಕಾರಿಗಳು ತಮ್ಮ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ನಿರ್ದಿಷ್ಟ ಕ್ಷೇತ್ರಗಳಲ್ಲಿ ಪರಿಣತಿಯನ್ನು ಪಡೆಯಲು ಪ್ರೋತ್ಸಾಹಿಸಲಿದೆ. ದೀರ್ಘಾವಧಿಯ ಪೋಸ್ಟಿಂಗ್ ವ್ಯವಸ್ಥೆಯಿಂದ ಬದಲಾಯಿಸಬಹುದು ಎಂದು ವರದಿ ಹೇಳಿತ್ತು.
ತೀವ್ರ ತರಬೇತಿಯ ಮೂಲಕ ವಿಶೇಷತೆಯ ಆಯ್ಕೆಯ ಕ್ಷೇತ್ರದಲ್ಲಿ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಅಧಿಕಾರಿಗಳನ್ನು ಪ್ರೋತ್ಸಾಹಿಸಬೇಕು. ಆಂತರಿಕ ಸಿಬ್ಬಂದಿಯ ಈ ವಿಶೇಷತೆಯು ಸ್ಥಿರ-ಅವಧಿಯ ಒಪ್ಪಂದಗಳಲ್ಲಿ ಹೆಚ್ಚು ಪರಿಣಿತ ಸಿಬ್ಬಂದಿಯ ಭಾಗಶಃ ಪ್ರವೇಶದಿಂದ ಪೂರಕವಾಗಿರಬೇಕು” ಎಂದು ಹೇಳಿತ್ತು.
ಈ ವ್ಯವಸ್ಥೆಯು ಉನ್ನತ ಪ್ರತಿಭೆ ಮತ್ತು ಶಕ್ತಿಯನ್ನು ಸರ್ಕಾರಿ ವ್ಯವಸ್ಥೆಯಲ್ಲಿ ತರುತ್ತದೆ. ಮತ್ತು ಸಚಿವಾಲಯಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ತಜ್ಞರನ್ನು ಮೂರರಿಂದ ಐದು ವರ್ಷಗಳ ಗುತ್ತಿಗೆ ಅವಧಿಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ಹೇಳಿದ್ದನ್ನು ಸ್ಮರಿಸಬಹುದು.