ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಜಮೀನು ಮಂಜೂರು ಪ್ರಸ್ತಾವ ತಿರಸ್ಕಾರ; ಕಾಂಗ್ರೆಸ್‌ ಸರ್ಕಾರದ ತಾರತಮ್ಯ?

ಬೆಂಗಳೂರು; ಕರ್ನಾಟಕ ಬ್ಯಾಸ್ಕೆಟ್‌ ಬಾಲ್‌ ಸಂಸ್ಥೆಗೆ ನಿಯಮ ಮೀರಿ 5 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಗೋಮಾಳ ಜಮೀನು ಮಂಜೂರಾತಿ  ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ಇದೀಗ ಬಹಿರಂಗವಾಗಿದೆ.

 

ಈಚೆಗಷ್ಟೇ ಬಿಲ್ಲವ ಸಮಾಜವನ್ನೂ ಒಳಗೊಂಡಂತೆ ಇತರೆ ಹಿಂದುಳಿದ ವರ್ಗಗಳ ಸಮಾವೇಶ ನಡೆಸಿದ್ದ ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಅವರು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ನಡೆಸಿದ್ದ ವಾಗ್ದಾಳಿಯು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಗೋಮಾಳ ಜಮೀನು ಮಂಜೂರು ಮಾಡುವ ಪ್ರಸ್ತಾವನೆಯು ತಿರಸ್ಕೃತಗೊಂಡಿರುವುದು ಮುನ್ನೆಲೆಗೆ ಬಂದಿದೆ.

 

ಅಲ್ಲದೇ ಪ್ರಬಲ ಜಾತಿ, ಸಮಾಜಗಳಿಗೆ ಸರ್ಕಾರಿ ಜಮೀನು, ಗೋಮಾಳವನ್ನು ಮಂಜೂರು ಮಾಡುವ ಸರ್ಕಾರವು ಹಿಂದುಳಿದ ಜಾತಿ, ಸಮಾಜ, ಸೇವಾ ಸಂಘಗಳಿಗೆ ಜಮೀನು ಮಂಜೂರು ಮಾಡುವ ಪ್ರಸ್ತಾವನೆಯು ತಿರಸ್ಕರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಪ್ರಬಲ ಜಾತಿ, ಸಮಾಜ ಸಂಘಗಳಿಗೆ ಸರ್ಕಾರಿ ಜಮೀನು, ಗೋಮಾಳವನ್ನು ಮಂಜೂರು ಮಾಡಲು ಆರ್ಥಿಕ ಮತ್ತು ಕಾನೂನು ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿದ್ದರೂ ಅದನ್ನು ಬದಿಗೊತ್ತಿ ಮಂಜೂರು ಮಾಡಿರುವ ಸರ್ಕಾರವು, ಹಿಂದುಳಿದ ಜಾತಿ, ಸಮಾಜ ಸೇವಾ ಸಂಘಗಳಿಗೆ ನಿಯಮಗಳನ್ನು ಮುಂದೊಡ್ಡಿ ಮಂಜೂರಾತಿ ಪ್ರಸ್ತಾವನೆಗಳನ್ನು ತಿರಸ್ಕರಿಸಿರುವುದು ತಾರತಮ್ಯ ಧೋರಣೆ ಅನುಸರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಕೇಳಿದ್ದು 0. 20 ಗುಂಟೆ

 

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಾವಿನಕೆರೆ ಗ್ರಾಮದ ಸರ್ವೆ ನಂಬರ್‍‌ 434ರಲ್ಲಿ 0.20 ಗುಂಟೆ ಜಮೀನನ್ನು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಮಂಜೂರು ಮಾಡಲು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಕಂದಾಯ ಇಲಾಖೆಗೆ 2022ರ ಮಾರ್ಚ್‌ 4 ಮತ್ತು ಜುಲೈ 29ರಂದು ಪ್ರಸ್ತಾವನೆ ಸಲ್ಲಿಸಿದ್ದರು.

 

ಇದನ್ನು ಪರಿಶೀಲಿಸಿದ್ದ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರು 2023ರ ಆಗಸ್ಟ್‌ 30ರಂದು ತಿರಸ್ಕರಿಸಿ ಪತ್ರ ಬರೆದಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಗೋಮಾಳ ಜಮೀನುಗಳನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಮಾವಿನಕೆರೆ ಗ್ರಾಮದ ಸರ್ವೆ ನಂಬರ್‍‌ 0.20 ಗುಂಟೆ ಜಮೀನನ್ನು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಮಂಜೂರು ಮಾಡುವ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪ್ರಾದೇಶಿಕ ಆಯುಕ್ತರಿಗೆ (ಸಂಖ್ಯೆ ಕಂಇ 28 ಎಲ್‌ಜಿಯು 2022) ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಪ್ರಸ್ತಾವನೆ ತಿರಸ್ಕರಿಸಿರುವ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನಿರ್ಧಾರವನ್ನು ಸಚಿವ ಕೃಷ್ಣ ಬೈರೇಗೌಡ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

ಈ ಹಿಂದಿನ ಬಿಜೆಪಿ ಸರ್ಕಾರವು ಸಂಘ ಪರಿವಾರದ ಅಂಗ ಸಂಸ್ಥೆಗಳಾದ ರಾಷ್ಟ್ರೋತ್ಥಾನ ಪರಿಷತ್‌ , ಬಿಜೆಪಿ ಕಚೇರಿ ಸೇರಿದಂತೆ ಹಲವು ಖಾಸಗಿ ಸಂಘ ಸಂಸ್ಥೆಗಳಿಗೆ ಗೋಮಾಳ ಮಂಜೂರು ಮಾಡಿತ್ತು.

 

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

 

ಅದೇ ರೀತಿ ಜನಸೇವಾ ಟ್ರಸ್ಟ್‌ ಗೂ ಸಹ 35 ಎಕರೆ ಗೋಮಾಳವನ್ನು ಮಂಜೂರು ಮಾಡಿತ್ತು.

 

ಗೋಮಾಳ ಮಂಜೂರಿಗೆ ತಡೆ; ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಮಂಜೂರು ಸುತ್ತ ‘ದಿ ಫೈಲ್‌’ನ 11 ವರದಿಗಳು

 

ಇದಲ್ಲದೇ ರಾಜ್ಯದ ಹಲವು ಖಾಸಗಿ ಸಂಘ ಸಂಸ್ಥೆಗಳಿಗೆ ಗೋಮಾಳ, ಸರ್ಕಾರಿ ಬೀಳು ಜಮೀನುಗಳನ್ನು ಮಂಜೂರು ಮಾಡಿತ್ತು.

 

4 ವರ್ಷದಲ್ಲಿ 212.83 ಎಕರೆ ಗೋಮಾಳ ಹಂಚಿಕೆ; ರಾಷ್ಟ್ರೋತ್ಥಾನ, ಇಸ್ಕಾನ್‌, ಆದಿಚುಂಚನಗಿರಿ ಸಿಂಹಪಾಲು

 

ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನೂರೇ ನೂರು ದಿನದಲ್ಲಿ ಕರ್ನಾಟಕ ಬ್ಯಾಸ್ಕೆಟ್‌ ಬಾಲ್‌ ಅಸೋಸಿಯೇಷನ್‌ಗೆ 5 ಎಕರೆ ಸರ್ಕಾರಿ ಜಮೀನನ್ನು ಮಂಜೂರು ಮಾಡಿತ್ತು.

 

ಖಾಸಗಿ ಸಂಸ್ಥೆಗೆ 10 ಕೋಟಿ ರು ಮೌಲ್ಯದ ಸರ್ಕಾರಿ ಜಮೀನು; ಕಾನೂನು ಅಭಿಪ್ರಾಯ ಧಿಕ್ಕರಿಸಿದ ಸಚಿವ

 

ಮಂಜೂರಾದ ನಂತರವೂ ಮಾರುಕಟ್ಟೆ ದರಕ್ಕಿಂತಲೂ ಅತ್ಯಂತ ಕನಿಷ್ಠ ದರದಲ್ಲಿ ಸರ್ಕಾರಿ ಜಮೀನು ಮಂಜೂರು ಮಾಡಿತ್ತು.

 

ಖಾಸಗಿ ಸಂಸ್ಥೆಗೆ ಕನಿಷ್ಟ ದರದಲ್ಲಿ 5 ಎಕರೆ ಮಂಜೂರು; ಬೊಕ್ಕಸಕ್ಕೆ ಅಂದಾಜು 9.80 ಕೋಟಿ ರು.ನಷ್ಟ!

 

ಗೋಮಾಳ ಮತ್ತು ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳಲ್ಲಿ ಅವಕಾಶಗಳಿಲ್ಲ. ಕಾನೂನು ಮತ್ತು ಆರ್ಥಿಕ ಇಲಾಖೆಯು ಇಂತಹ ಪ್ರಸ್ತಾವನೆಗಳಿಗೆ ಅಸಮ್ಮತಿ ವ್ಯಕ್ತಪಡಿಸುತ್ತಲೇ ಬಂದಿವೆ. ಆದರೂ ರಾಜಕೀಯ ಪ್ರಭಾವಿಗಳ ಸಂಪರ್ಕ ಇರುವ ಖಾಸಗಿ ಸಂಘ ಸಂಸ್ಥೆಗಳು ಇಂತಹ ಪ್ರಸ್ತಾವನೆಗಳನ್ನು ಸಚಿವ ಸಂಪುಟದ ಮುಂದಿರಿಸಿ ಮಂಜೂರು ಮಾಡಿಸಿಕೊಳ್ಳುತ್ತಿವೆ.

SUPPORT THE FILE

Latest News

Related Posts