ಬೆಂಗಳೂರು; ಕೃಷಿಯೇತರ ಮಾರ್ಗಸೂಚಿ ಬೆಲೆ ಪ್ರಕಾರ 40 ಲಕ್ಷ., ಮಾರುಕಟ್ಟೆ ಮೌಲ್ಯದ ಪ್ರಕಾರ ಅಂದಾಜು 10 ಕೋಟಿ ರು. ಬೆಲೆ ಬಾಳುವ ಸರ್ಕಾರಿ ಬೀಳು ಜಮೀನನ್ನು ಖಾಸಗಿ ಸಂಸ್ಥೆಯಾಗಿರುವ ಕರ್ನಾಟಕ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್‌ಗೆ ಎಕರೆಗೆ ಕೇವಲ 20 ಲಕ್ಷ ರು.ನಂತೆ 5 ಎಕರೆಯನ್ನು ಮಂಜೂರು ಮಾಡಿದೆ. ಸರ್ಕಾರಿ ಮಾರ್ಗಸೂಚಿ ಬೆಲೆಯಂತೆಯೇ 5 ಎಕರೆಗೆ 1.80 ಕೋಟಿ ರು., ಮಾರುಕಟ್ಟೆಯಲ್ಲಿನ ದರಕ್ಕೆ ಹೋಲಿಸಿದರೆ ಅಂದಾಜು 9.80 ಕೋಟಿಗಳಷ್ಟು ನಷ್ಟದ ಹೊರೆ, ಸರ್ಕಾರದ ಬೊಕ್ಕಸದ ಮೇಲೆ ಬಿದ್ದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಅಧ್ಯಕ್ಷರಾಗಿರಾಗಿರುವ ಕರ್ನಾಟಕ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್‌ಗೆ ಸರ್ಕಾರಿ ಬೀಳು ಜಮೀನನ್ನು ಮಂಜೂರು ಮಾಡಲು ಕಾನೂನು ಮತ್ತು ಆರ್ಥಿಕ ಇಲಾಖೆ ಅಸಮ್ಮತಿ ವ್ಯಕ್ತಪಡಿಸಿತ್ತು.
ಇಲಾಖೆಗಳೆರಡು ನೀಡಿದ್ದ ಅಭಿಪ್ರಾಯವನ್ನು ಧಿಕ್ಕರಿಸಿ ಸಚಿವ ಸಂಪುಟದ ಒಪ್ಪಿಗೆ ಪಡೆದ ಕೆಲವೇ ಕೆಲವು ದಿನಗಳಲ್ಲೇ ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇ.10ರಷ್ಟು ಮಾತ್ರ ಶುಲ್ಕವನ್ನು ವಿಧಿಸಿ 2023ರ ಆಗಸ್ಟ್ 30ರಂದು ಹೊರಡಿಸಿರುವ ಆದೇಶವು ವಿವಾದಕ್ಕೆ ಕಾರಣವಾಗಿದೆ. ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಖಾಸಗಿ ಸಂಸ್ಥೆಯಾಗಿರುವ ಕರ್ನಾಟಕ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್‌ಗೆ ಸರ್ಕಾರಿ ಬೀಳು ಜಮೀನು ಮಂಜೂರು ಮಾಡಲು ಸಚಿವ ಸಂಪುಟದ ಹಿರಿಯ ಸದಸ್ಯರೊಬ್ಬರು ಬಲವಾಗಿ ವಿರೋಧಿಸಿದ್ದರೂ ಸಹ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಅತ್ಯಾಸಕ್ತಿಯಿಂದಾಗಿ 5 ಎಕರೆ ಮಂಜೂರಾಗಿತ್ತು. ಈ ಜಮೀನನ್ನು ಮಾರ್ಗಸೂಚಿ ಮೌಲ್ಯದ ಪ್ರಕಾರವೇ ಮಂಜೂರು ಮಾಡಲು ಕಂದಾಯ ಇಲಾಖೆಯು ಸಚಿವ ಸಂಪುಟದ ಮುಂದೆ ಪ್ರಸ್ತಾವಿಸಿತ್ತು.
ಒಂದೆಡೆ ಕಾನೂನು ಮತ್ತು ಆರ್ಥಿಕ ಇಲಾಖೆಯ ಅಸಮ್ಮತಿ ನಡುವೆಯೂ ಜಮೀನು ಮಂಜೂರು ಮಾಡಿದ್ದಲ್ಲದೇ ಬೊಕ್ಕಸಕ್ಕೆ ಸರ್ಕಾರಿ ಮಾರ್ಗಸೂಚಿ ಬೆಲೆ ಪ್ರಕಾರವೇ 1.80 ಕೋಟಿ ರು.ನಷ್ಟು ನಷ್ಟ ಉಂಟು ಮಾಡಿರುವುದು ಆಕ್ಷೇಪಣೆಗೆ ಒಳಗಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗಾಗಲೀ ಅಥವಾ ಇತರೆ ಖಾಸಗಿ ಸಂಸ್ಥೆಗಳಿಗಾಗಲೀ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲದಿದ್ದರೂ ಕ ಖಾಸಗಿ ಸಂಸ್ಥೆಗೆ ಅಂದಾಜು 10 ಕೋಟಿ ರು ಬೆಲೆ ಬಾಳುವ 5 ಎಕರೆ ಬೀಳು ಜಮೀನನ್ನು ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದಿಸಿರುವುದು ವಿವಾದಕ್ಕೆ ಕಾರಣವಾಗಿತ್ತು.
ಅಲ್ಲದೇ ಎಕರೆಗೆ ಮಾರ್ಗಸೂಚಿ ಬೆಲೆ ಪ್ರಕಾರವೇ ಎಕರೆಗೆ 40 ಲಕ್ಷ ರು ಇದೆ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಪ್ರಸ್ತಾವದಲ್ಲಿ ನಮೂದಿಸಿದ್ದರೂ ಸಹ ಇದೀಗ ಎಕರೆಗೆ ಕೇವಲ 4 ಲಕ್ಷ ರು.ನಂತೆ 5 ಎಕರೆಗೆ 20 ಲಕ್ಷ ರು. ನಂತೆ ಮಂಜೂರು ಮಾಡಿದೆ. ಇದರ ಪ್ರಕಾರ ಎಕರೆಗೆ 36 ಲಕ್ಷ ರು.ನಂತೆ ಒಟ್ಟಾರೆ 5 ಎಕರೆಗೆ 1.80 ಕೋಟಿ ರು. ನಷ್ಟವಾದಂತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಗೊಬ್ಬರಗುಂಟೆ ಗ್ರಾಮದ ಸರ್ವೆ ನಂಬರ್ 64ಲ್ಲಿನ ಒಟ್ಟು 19.34 ಎಕರೆ ವಿಸ್ತೀರ್ಣ ಪೈಕಿ 5 ಎಕರೆ ಬೀಳು ಜಮೀನನ್ನು ಮಂಜೂರು ಮಾಡಲು ಕಾನೂನು ಮತ್ತು ಆರ್ಥಿಕ ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿತ್ತು.
ಅಲ್ಲದೇ ಈ ಜಮೀನು ಸರ್ಕಾರದ ವಿವಿಧ ಯೋಜನೆಗಳಿಗೆ ಅವಶ್ಯಕವಾಗಿರುವ ಕಾರಣ ಈ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಸಚಿವ ಸಂಪುಟ ಟಿಪ್ಪಣಿ ಹಾಳೆಯಲ್ಲಿ ಸರ್ಕಾರದ ಗಮನಕ್ಕೆ ತಂದಿದ್ದರು ಎಂಬುದು ಗೊತ್ತಾಗಿದೆ.
ಆದರೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸಚಿವ ಸಂಪುಟದ ಮುಂದೆ ಕಡತ ಮಂಡಿಸಿ ಅನುಮೋದನೆ ಪಡೆದುಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಆರ್‌ಟಿಸಿಯೂ ಸೇರಿದಂತೆ ಇತರೆ ದಾಖಲೆಗಳು (RD 225 LGB 2021) ‘ದಿ ಫೈಲ್’ಗೆ ಲಭ್ಯವಾಗಿತ್ತು. ಇದನ್ನಾಧರಿಸಿ ‘ದಿ ಫೈಲ್’ 2023ರ ಆಗಸ್ಟ್ 28ರಂದು ವರದಿ ಪ್ರಕಟಿಸಿತ್ತು.
ಖಾಸಗಿ ಸಂಸ್ಥೆಗೆ 10 ಕೋಟಿ ರು ಮೌಲ್ಯದ ಸರ್ಕಾರಿ ಜಮೀನು; ಕಾನೂನು ಅಭಿಪ್ರಾಯ ಧಿಕ್ಕರಿಸಿದ ಸಚಿವ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಘ ಪರಿವಾರ ಹಿನ್ನೆಲೆಯ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್ ಸೇರಿದಂತೆ ಇನ್ನಿತರೆ ಖಾಸಗಿ ಸಂಘ ಸಂಸ್ಥೆಗಳಿಗೆ ನೂರಾರು ಎಕರೆ ಗೋಮಾಳ ಜಮೀನನ್ನು ಮಂಜೂರು ಮಾಡಿದ್ದನ್ನು ರದ್ದುಗೊಳಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿಕೆ ನೀಡಿದ್ದರ ಬೆನ್ನಲ್ಲೇ ಸರ್ಕಾರಿ ಬೀಳು ಜಮೀನನ್ನು ಖಾಸಗಿ ಸಂಸ್ಥೆಗೆ ಮಂಜೂರು ಮಾಡಲು ಅನುಮತಿ ನೀಡಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಸರ್ವೆ ನಂಬರ್‌ರಲ್ಲಿ ಒಟ್ಟು 19.34 ಎಕರೆ ಜಮೀನಿನಲ್ಲಿ 14 ಎಕರೆ ಆಶ್ರಯ ಯೋಜನೆಗೆಂದು ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಮಂಜೂರಾಗಿದೆ ಎಂಬುದು ಆರ್‌ಟಿಸಿ ದಾಖಲೆ ಮತ್ತು ಸಚಿವ ಸಂಪುಟ ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.
ಜಿಲ್ಲಾಧಿಕಾರಿ ಅವರ ವರದಿ ಪ್ರಕಾರ ಕರ್ನಾಟಕ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್‌ಗೆ ನೀಡಲು ಪ್ರಸ್ತಾಪಿಸಿದ್ದ ಜಮೀನಿನ ಮಾರ್ಗಸೂಚಿ ಮೌಲ್ಯವು ಎಕರೆಯೊಂದಕ್ಕೆ ಸುಮಾರು 40 ಲಕ್ಷ ರು. ಇದೆ. ಆದರೆ ಜಮೀನಿನ ಮಾರುಕಟ್ಟೆ ಮೌಲ್ಯವು ಮಾರ್ಗಸೂಚಿ ಮೌಲ್ಯಕ್ಕಿಂತ ಹೆಚ್ಚಾಗಿತ್ತು. ಮಾರುಕಟ್ಟೆಯಲ್ಲಿ ಎಕರೆಗೆ 2 ಕೋಟಿ ರು. ಬೆಲೆ ಇದೆ. ಇದರ ಪ್ರಕಾರ 5 ಎಕರೆಗೆ ಅಂದಾಜು 10 ಕೋಟಿ ರು. ಬೆಲೆ ಬಾಳಲಿದೆ ಎಂದು ಗೊತ್ತಾಗಿದೆ.
ಕರ್ನಾಟಕ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್‌ಗೆ 5 ಎಕರೆ ಜಮೀನು ಮಂಜೂರು ಮಾಡುವ ಸಂಬಂಧ ಕಂದಾಯ ಇಲಾಖೆಯು ಕಾನೂನು ಇಲಾಖೆಗೆ ಅಭಿಪ್ರಾಯ ಕೋರಿತ್ತು.
ಕಾನೂನು ಇಲಾಖೆ ಅಭಿಪ್ರಾಯದಲ್ಲೇನಿದೆ?
ಈ ಪ್ರಕರಣದಲ್ಲಿ ಕಲಂ 22(ಎ)ರಲ್ಲಿ ತಿಳಿಸಿರುವ ಯಾವುದೇ ಉದ್ದೇಶವನ್ನು ಈ ಪ್ರಸ್ತಾವನೆಯು ಹೊಂದಿರುವುದಿಲ್ಲ. ಮುಂದುವರೆದು ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗಾಗಲೀ ಅಥವಾ ಇತರೆ ಖಾಸಗಿ ಸಂಸ್ಥೆಗಳಿಗಾಗಲೀ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲವಾದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಕಸಬಾ ಹೋಬಳಿ ಗೊಬ್ಬರಗುಂಟೆ ಗ್ರಾಮದ ಸ. ನಂ 64ರಲ್ಲಿನ 5 ಎಕರೆ ಜಮೀನನ್ನು ಕರ್ನಾಟಕ ಸ್ಟೇಟ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್‌ಗೆ ಮಂಜೂರು ಮಾಡಲು ಅವಕಾಶವಿರುವುದಿಲ್ಲ ಎಂದು (ಟಿಪ್ಪಣಿ ಸಂಖ್ಯೆ; ಲಾ/ಅಭಿಪ್ರಾಯ/124/2023 ದಿನಾಂಕ 08-03-2023) ಅಭಿಪ್ರಾಯ ನೀಡಿತ್ತು.
ಅದೇ ರೀತಿ ಆರ್ಥಿಕ ಇಲಾಖೆಯು ಕಂದಾಯ ಇಲಾಖೆಯ ಪ್ರಸ್ತಾವನೆಗೆ ಅಸಮ್ಮತಿ ವ್ಯಕ್ತಪಡಿಸಿತ್ತು.
ಆರ್ಥಿಕ ಇಲಾಖೆ ಅಭಿಪ್ರಾಯವಿದು
ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ಪ್ರಸ್ತಾವನೆಗೆ ಸಂಬಂಧಿಸಿದಂತೆ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗಳಿಗಾಗಲೀ ಅಥವಾ ಇತರೆ ಖಾಸಗಿ ಖಾಸಗಿ ಸಂಸ್ಥೆಗಳಿಗಾಗಲೀ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲವಾದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಕಸಬಾ ಹೋಬಳಿ ಗೊಬ್ಬರ ಗುಂಟೆ ಗ್ರಾಮದ ಸರ್ವೆ ನಂಬರ್ 64ರಲ್ಲಿಲನ 5 ಎಕರೆ ಬಿ ಖರಾಬು ಜಮೀನನ್ನು ಕರ್ನಾಟಕ ಸ್ಟೇಟ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್‌ಗೆ ಮಂಜೂರು ಮಾಡಲು ಅವಕಾಶವಿರುವುದಿಲ್ಲವೆನ್ನುವುದು ಕಾನೂನು ಇಲಾಖೆಯು ನೀಡಿರುವ ಅಭಿಪ್ರಾಯದ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಯ ಸಹಮತಿ ಇಲ್ಲ (FD 372 Exp-7/2023, 18.03.2023) ಎಂದು ಕಂದಾಯ ಇಲಾಖೆಗೆ ತಿಳಿಸಿತ್ತು.
ಕಂದಾಯ ಇಲಾಖೆ ಪ್ರತಿಕ್ರಿಯೆಯೇನಾಗಿತ್ತು?
ಈ ಪ್ರಕರಣದಲ್ಲಿ ಕಾನೂನು ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಕಂದಾಯ ಇಲಾಖೆಯು ಒಪ್ಪಿತ್ತು. ಆದರೆ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಒಪ್ಪಿರಲಿಲ್ಲ. ‘ಆರ್ಥಿಕ ಇಲಾಖೆಯು ಸದರಿ ಜಮೀನನ್ನು ಬಿ ಖರಾಬು ಜಮೀನೆಂದು ಅಭಿಪ್ರಾಯದಲ್ಲಿ ತಿಳಿಸಿರುತ್ತದೆ. ಪ್ರಸ್ತುತ ಆರ್‌ಟಿಸಿಯಂತೆ ಈ ಜಮೀನು ಬಿ ಖರಾಬು ಅಂಕಣದಲ್ಲಿ ನಮೂದಾಗಿರುವುದಿಲ್ಲ. ಈ ಜಮೀನು ಸರ್ಕಾರಿ ಬೀಳು ಜಮೀನಾಗಿರುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಕಸಬಾ ಹೋಬಳಿ ಗೊಬ್ಬರಗುಂಟೆ ಗ್ರಾಮದ ಸ ನಂ 64ರ 5 ಎಕರೆ ಸರ್ಕಾರಿ ಬೀಳು ಜಮೀನನ್ನು ಬ್ಯಾಸ್ಕೆಟ್ ಬಾಲ್ ಅಕಾಡೆಮಿ ಸ್ಥಾಪಿಸಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 27ರ ಪ್ರಕಾರ ಜಮೀನಿನ ಕೃಷಿಯೇತರ ಪ್ರಚಲಿತ ಮಾರುಕಟ್ಟೆ ಮೌಲ್ಯ ಮತ್ತು ಇನ್ನಿತರೆ ಶಾಸನಬದ್ಧ ಶುಲ್ಕಗಳನ್ನು ವಿಧಿಸಿ ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಸೂಕ್ತ ನಿರ್ಣಯಕ್ಕೆ ಮಂಡಿಸಿತ್ತು ಎಂಬುದು ಸಚಿವ ಸಂಪುಟ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.