ಬೆಂಗಳೂರು; ಹೊಸಪೇಟೆ ನಗರಸಭೆಯ ಕೊಠಡಿಗಳಲ್ಲಿದ್ದ ಡಿಮ್ಯಾಂಡ್ ರಿಜಿಸ್ಟರ್‍ಗಳು, ಕೆಎಂಎಫ್ 24 ರಿಜಿಸ್ಟರ್‍ಗಳು, ಎಂ ಆರ್ 19 ರಿಜಿಸ್ಟರ್‍ಗಳು ಹಾಗೂ ಇನ್ನಿತರೆ ಡಿಮ್ಯಾಂಡ್ ರಿಜಿಸ್ಟರ್‍ಗಳ ಕಡತಗಳನ್ನು ಹಿಂದಿನ ಪೌರಾಯುಕ್ತ ಮನೋಹರ್ ಅವರ ಸಮ್ಮುಖದಲ್ಲಿಯೇ ಮಾಜಿ ಸಚಿವ ಆನಂದ್‌ಸಿಂಗ್ ಅಳಿಯ ಸಂದೀಪ್ ಸಿಂಗ್ ಮತ್ತಿತರರು ಹೊತ್ತೊಯ್ದಿದ್ದಾರೆ ಎಂದು ಮುಖ್ಯಮಂತ್ರಿಗೆ ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ 10 ಮಂದಿಗೆ ನೋಟೀಸ್ ಜಾರಿಗೊಳಿಸಿದ್ದ ಹಾಲಿ ಪೌರಾಯುಕ್ತರು ಇದೀಗ ರಾಗ ಬದಲಾಯಿಸಿದ್ದಾರೆ.
ಕಡತಗಳು ಕಣ್ಮರೆಯಾಗಿದೆ ಎಂದು ಮೂರು ದಿನದ ಹಿಂದೆಯೇ ಹೇಳಿದ್ದ ಹಾಲಿ ಆಯುಕ್ತ ಬಿ ಟಿ ಬಂಡಿವಡ್ಡರ್ ಅವರು ಇದೀಗ ಯಾವುದೇ ದಾಖಲೆಗಳು ನಾಪತ್ತೆಯಾಗಿಲ್ಲ. ಎಲ್ಲಾ ಕಡತಗಳೂ ಇವೆ ಎಂದು ಸಿಬ್ಬಂದಿ ಲಿಖಿತ ಮಾಹಿತಿ ನೀಡಿದ್ದಾರೆ ಎಂದು ಯೂ ಟರ್ನ್ ಹೊಡೆದಿದ್ದಾರೆ. ಆದರೆ ಆಯುಕ್ತರು ಕಡತಗಳು ಕೊಠಡಿಗಳಲ್ಲಿ ಇವೆಯೇ ಇಲ್ಲವೇ ಎಂಬ ಬಗ್ಗೆ ಖುದ್ದು ಪರಿಶೀಲಿಸಿಲ್ಲ. ಆದರೂ ಸಿಬ್ಬಂದಿ ನೀಡಿರುವ ಲಿಖಿತ ಮಾಹಿತಿಯನ್ನಾಧರಿಸಿಯೇ ಕಡತಗಳು ಕಣ್ಮರೆಯಾಗಿಲ್ಲ ಎಂದು ಹೇಳಿಕೆ ನೀಡಿರುವುದು ಮತ್ತು ಆನಂದ್ ಸಿಂಗ್ ಅವರ ಅಳಿಯ ಸಂದೀಪ್ ಸಿಂಗ್ ಅವರಿಗೆ ನೋಟೀಸ್ ಕೊಟ್ಟೇ ಇಲ್ಲ ಎಂದು ಹೇಳಿಕೆ ನೀಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ಪೌರಾಯುಕ್ತರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
ಕಡತ, ರಿಜಿಸ್ಟರ್ ಹೊತ್ತೊಯ್ದಿದ್ದ ಆರೋಪ; ಮಾಜಿ ಸಚಿವ ಆನಂದ್‌ಸಿಂಗ್ ಅಳಿಯ ಸೇರಿ 13 ಮಂದಿಗೆ ನೋಟೀಸ್
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ನಾಗರಿಕ ಸಂಘಟನೆಗಳು ಖುದ್ದು ಜಿಲ್ಲಾಧಿಕಾರಿ ದಿವಾಕರ್ ಅವರ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮತ್ತು ಕಡತಗಳನ್ನು ವಾಪಸ್ ತರಿಸುವ ಸಂಬಂಧ ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತು ಜಿಲ್ಲಾಧಿಕಾರಿ ದಿವಾಕರ್ ಅವರಿಗೆ ‘ದಿ ಫೈಲ್’ ಪ್ರತಿಕ್ರಿಯೆಗಾಗಿ ವಾಟ್ಸಾಪ್ ಮೂಲಕ ಕೋರಿದ್ದರೂ ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.
ಈ ಪ್ರಕರಣದಲ್ಲಿ ಮಾಜಿ ಸಚಿವ ಆನಂದ್ ಸಿಂಗ್ ಅವರ ಅಳಿಯ ಸಂದೀಪ್ ಸಿಂಗ್, ಹೊಸಪೇಟೆಯ ಹಿಂದಿನ ಪೌರಾಯುಕ್ತ ಮನೋಹರ್, ಮನ್ಸೂರ್ ಅಹ್ಮದ್, ಕಂದಾಯ ಅಧಿಕಾರಿ ಅಜೀತ್ ಸಿಂಗ್, ಕಚೇರಿ ವ್ಯವಸ್ಥಾಪಕ ಸುಬ್ರಮಣ್ಯ ಶೆಟ್ಟಿ, ಯೋಜನಾ ನಿರ್ದೇಶಕರ ಕಾರ್ಯಾಲಯದ ಎಫ್‌ಡಿಎ ನೂರ್ ಅಹಮ್ಮದ್, ಸುರೇಶ್, ರಾಮಪ್ಪ, ಹೆಚ್ ಯಲ್ಲಪ್ಪ, ಹೆಚ್ ಶಂಕರ್ ಮತ್ತು ದೂರುದಾರ ಸುರೇಶ್ ಬಾಬು ಡಿ ಹೆಚ್ ಅವರಿಗೂ ನೋಟೀಸ್ ಜಾರಿಯಾಗಿದೆ.
ನೋಟೀಸ್ ತಲುಪಿದ 24 ಗಂಟೆಯೊಳಗೆ ಸೂಕ್ತ ಲಿಖಿತ ಸಮಜಾಯಿಷಿ ನೀಡಬೇಕು. ಇಲ್ಲದಿದ್ದಲ್ಲಿ ನಿಯಮಾನುಸಾರ ತಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದೂ ನೋಟೀಸ್‌ನಲ್ಲಿ ಎಚ್ಚರಿಕೆ ನೀಡಿದ್ದರು.
ಪ್ರಕರಣದ ವಿವರ
‘ಮಾಜಿ ಸಚಿವ ಆನಂದ್ ಸಿಂಗ್ ಹಾಗೂ ಅವರ ಕುಟುಂಬ ಸದಸ್ಯರು ರಾಜಕೀಯ ದರ್ಪದಿಂದ ಅಕ್ರಮವಾಗಿ ನಗರಸಭೆ ದಾಖಲೆ ಕೊಠಡಿಯಲ್ಲಿದ್ದ ಡಿಮ್ಯಾಂಡ್ ರಿಜಿಸ್ಟರ್‍ಗಳು, ಕೆಎಂಎಫ್ 24 ರಿಜಿಸ್ಟರ್‍ಗಳು, ಎಂ ಆರ್ 19 ರಿಜಿಸ್ಟರ್‍ಗಳು ಹಾಗೂ ಇನ್ನಿತರೆ ಡಿಮ್ಯಾಂಡ್ ರಿಜಿಸ್ಟರ್‍ಗಳ ಕಡತಗಳನ್ನು ಪೌರಾಯುಕ್ತ ಮನೋಹರ್ ಅವರ ಸಮ್ಮುಖದಲ್ಲಿಯೇ ಹೊತ್ತೊಯ್ದಿದ್ದಾರೆ. ಸಿಸಿಟಿವಿ ಕ್ಯಾಮರಾಗಳನ್ನು ಬಂದ್ ಮಾಡಿಸಿ ತೆಗೆದುಕೊಂಡು ಹೋಗಿದ್ದಾರೆ,’ ಎಂದು ನಗರಸಭೆಯ ದ್ವಿತೀಯ ದರ್ಜೆ ಸಹಾಯಕ ಸುರೇಶ್‌ಬಾಬು ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಸಿದ್ದರು.
ಮಾಜಿ ಸಚಿವ ಆನಂದ್ ಸಿಂಗ್ ಅವರ ಅಳಿಯ ಸಂದೀಪ್ ಸಿಂಗ್, ನಗರಸಭೆಯ ಹಾಲಿ ಸದಸ್ಯರು ಮತ್ತು ಮಾಜಿ ಸದಸ್ಯ ವೇಣುಗೋಪಾಲ್ ಮತ್ತಿತರರು , ನಗರಸಭೆಯ ಈ ಹಿಂದಿನ ಪೌರಾಯುಕ್ತರಾದ ವಿ ರಮೇಶ್, ಮನ್ಸೂರ್ ಅಹ್ಮದ್, ಕಂದಾಯ ಅಧಿಕಾರಿಗಳಾದ ಸುಬ್ರಮಣ್ಯ ಶೆಟ್ಟಿ, ಅಜಿತ್ ಸಿಂಗ್, ದ್ವಿತೀಯ ದರ್ಜೆ ಸಹಾಯಕರಾದ ನೂರ್ ಅಹಮ್ಮದ್, ಸುರೇಶ್, ವ್ಯವಸ್ಥಾಪಕ ಕೃಷ್ಣಮೂರ್ತಿ, ಬಿಲ್ ಕಲೆಕ್ಟರ್ ಯಲ್ಲಪ್ಪ, ರಾಮಪ್ಪ, ಶಂಕರ್ ಮತ್ತಿತರರು ಆನಂದ್ ಸಿಂಗ್ ಅವರ ಅಳಿಯ ಸಂದೀಪ್ ಸಿಂಗ್ ಅವರಿಗೆ ಈ ಅಕ್ರಮಕ್ಕೆ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು. ಈ ಕುರಿತು ‘ದಿ ಫೈಲ್’ 2023ರ ಆಗಸ್ಟ್ 23ರಂದು ವರದಿ ಪ್ರಕಟಿಸಿತ್ತು.
ದರ್ಪ; ಪೌರಾಯುಕ್ತರ ಸಮ್ಮುಖದಲ್ಲೇ ರಿಜಿಸ್ಟರ್, ಕಡತ, ದಾಖಲೆಗಳ ಹೊತ್ತೊಯ್ದರೇ ಮಾಜಿ ಸಚಿವರ ಅಳೀಮಯ್ಯ?
ಆನಂದ್ ಸಿಂಗ್ ಅವರು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮೊದಲು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದನ್ನು ಸ್ಮರಿಸಬಹುದು.