ಕಡತ, ರಿಜಿಸ್ಟರ್‍‌ ಹೊತ್ತೊಯ್ದಿದ್ದ ಆರೋಪ; ಮಾಜಿ ಸಚಿವ ಆನಂದ್‌ಸಿಂಗ್‌ ಅಳಿಯ ಸೇರಿ 13 ಮಂದಿಗೆ ನೋಟೀಸ್‌

ಬೆಂಗಳೂರು; ನಗರಸಭೆ ದಾಖಲೆ ಕೊಠಡಿಯಲ್ಲಿದ್ದ ಡಿಮ್ಯಾಂಡ್‌ ರಿಜಿಸ್ಟ್ರರ್‍‌ಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು  ಹೊತ್ತೊಯ್ದಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಆನಂದ್‌ಸಿಂಗ್‌ ಅವರ ಅಳಿಯ ಸಂದೀಪ್‌ ಸಿಂಗ್‌, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಹಾಲಿ ಪೌರಾಯುಕ್ತ ವಿ ರಮೇಶ್‌ ಸೇರಿದಂತೆ ಒಟ್ಟು 13 ಮಂದಿಗೆ ಹೊಸಪೇಟೆ ನಗರಸಭೆಯ ಹಾಲಿ ಪೌರಾಯುಕ್ತರು ನೋಟೀಸ್‌ ಜಾರಿಗೊಳಿಸಿದ್ದಾರೆ.

 

ಹೊಸಪೇಟೆ ನಗರಸಭೆಯ ದ್ವಿತೀಯ ದರ್ಜೆ ಗುಮಾಸ್ತ ಸುರೇಶ್‌ಬಾಬು ಡಿ ಹೆಚ್‌ ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ , ಪೌರಾಡಳಿತ ಸಚಿವ ರಹೀಂ ಖಾನ್‌ ಅವರಿಗೆ ಸಲ್ಲಿಸಿದ್ದ ದೂರನ್ನಾಧರಿಸಿ   ‘ದಿ ಫೈಲ್‌’ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ  13 ಮಂದಿಗೆ ನೋಟೀಸ್‌ ಜಾರಿಗೊಳಿಸಿರುವುದು ಗೊತ್ತಾಗಿದೆ. ನೋಟೀಸ್‌ನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಪ್ರಕರಣದಲ್ಲಿ ಮಾಜಿ ಸಚಿವ ಆನಂದ್‌ ಸಿಂಗ್‌ ಅವರ ಅಳಿಯ ಸಂದೀಪ್‌ ಸಿಂಗ್‌, ಹೊಸಪೇಟೆಯ ಹಿಂದಿನ ಪೌರಾಯುಕ್ತ ಮನೋಹರ್‍‌, ಮನ್ಸೂರ್‍‌ ಅಹ್ಮದ್‌, ಕಂದಾಯ ಅಧಿಕಾರಿ ಅಜೀತ್‌ ಸಿಂಗ್‌, ಕಚೇರಿ ವ್ಯವಸ್ಥಾಪಕ ಸುಬ್ರಮಣ್ಯ ಶೆಟ್ಟಿ, ಯೋಜನಾ ನಿರ್ದೇಶಕರ ಕಾರ್ಯಾಲಯದ ಎಫ್‌ಡಿಎ ನೂರ್‍‌ ಅಹಮ್ಮದ್‌, ಸುರೇಶ್‌, ರಾಮಪ್ಪ, ಹೆಚ್‌ ಯಲ್ಲಪ್ಪ, ಹೆಚ್‌ ಶಂಕರ್‍‌  ಮತ್ತು ದೂರುದಾರ ಸುರೇಶ್‌ ಬಾಬು ಡಿ ಹೆಚ್‌ ಅವರಿಗೂ ನೋಟೀಸ್‌ ಜಾರಿಯಾಗಿದೆ.

 

ನೋಟೀಸ್‌ ತಲುಪಿದ 24 ಗಂಟೆಯೊಳಗೆ ಸೂಕ್ತ ಲಿಖಿತ ಸಮಜಾಯಿಷಿ ನೀಡಬೇಕು. ಇಲ್ಲದಿದ್ದಲ್ಲಿ ನಿಯಮಾನುಸಾರ ತಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದೂ ನೋಟೀಸ್‌ನಲ್ಲಿ ಎಚ್ಚರಿಕೆ ನೀಡಿರುವುದು ಗೊತ್ತಾಗಿದೆ.

 

ಪ್ರಕರಣದ ವಿವರ

 

 

‘ಮಾಜಿ ಸಚಿವ ಆನಂದ್‌ ಸಿಂಗ್‌ ಹಾಗೂ ಅವರ ಕುಟುಂಬ ಸದಸ್ಯರು ರಾಜಕೀಯ ದರ್ಪದಿಂದ ಅಕ್ರಮವಾಗಿ ನಗರಸಭೆ ದಾಖಲೆ ಕೊಠಡಿಯಲ್ಲಿದ್ದ ಡಿಮ್ಯಾಂಡ್‌ ರಿಜಿಸ್ಟರ್‍‌ಗಳು, ಕೆಎಂಎಫ್‌ 24 ರಿಜಿಸ್ಟರ್‍‌ಗಳು, ಎಂ ಆರ್‍‌ 19 ರಿಜಿಸ್ಟರ್‍‌ಗಳು ಹಾಗೂ ಇನ್ನಿತರೆ ಡಿಮ್ಯಾಂಡ್‌ ರಿಜಿಸ್ಟರ್‍‌ಗಳ ಕಡತಗಳನ್ನು ಪೌರಾಯುಕ್ತ ಮನೋಹರ್‍‌ ಅವರ ಸಮ್ಮುಖದಲ್ಲಿಯೇ ಹೊತ್ತೊಯ್ದಿದ್ದಾರೆ. ಸಿಸಿಟಿವಿ ಕ್ಯಾಮರಾಗಳನ್ನು ಬಂದ್‌ ಮಾಡಿಸಿ ತೆಗೆದುಕೊಂಡು ಹೋಗಿದ್ದಾರೆ,’ ಎಂದು ನಗರಸಭೆಯ ದ್ವಿತೀಯ ದರ್ಜೆ ಸಹಾಯಕ ಸುರೇಶ್‌ಬಾಬು ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಸಿದ್ದರು.

 

ಮಾಜಿ ಸಚಿವ ಆನಂದ್‌ ಸಿಂಗ್‌ ಅವರ ಅಳಿಯ ಸಂದೀಪ್‌ ಸಿಂಗ್‌, ನಗರಸಭೆಯ ಹಾಲಿ ಸದಸ್ಯರು ಮತ್ತು ಮಾಜಿ ಸದಸ್ಯ ವೇಣುಗೋಪಾಲ್‌ ಮತ್ತಿತರರು , ನಗರಸಭೆಯ ಈ ಹಿಂದಿನ ಪೌರಾಯುಕ್ತರಾದ ವಿ ರಮೇಶ್‌, ಮನ್ಸೂರ್‍‌ ಅಹ್ಮದ್‌, ಕಂದಾಯ ಅಧಿಕಾರಿಗಳಾದ ಸುಬ್ರಮಣ್ಯ ಶೆಟ್ಟಿ, ಅಜಿತ್‌ ಸಿಂಗ್‌, ದ್ವಿತೀಯ ದರ್ಜೆ ಸಹಾಯಕರಾದ ನೂರ್‍‌ ಅಹಮ್ಮದ್‌, ಸುರೇಶ್‌, ವ್ಯವಸ್ಥಾಪಕ ಕೃಷ್ಣಮೂರ್ತಿ, ಬಿಲ್ ಕಲೆಕ್ಟರ್‍‌ ಯಲ್ಲಪ್ಪ, ರಾಮಪ್ಪ, ಶಂಕರ್‍‌ ಮತ್ತಿತರರು ಆನಂದ್‌ ಸಿಂಗ್‌ ಅವರ ಅಳಿಯ ಸಂದೀಪ್‌ ಸಿಂಗ್‌ ಅವರಿಗೆ ಈ ಅಕ್ರಮಕ್ಕೆ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು.

 

‘ಕಡತಗಳನ್ನು ತೆಗೆದುಕೊಂಡು ಹೋಗಿದ್ದರೂ ಇದುವರೆಗೂ ಅವುಗಳನ್ನು ವಾಪಸ್‌ ತಂದುಕೊಟ್ಟಿಲ್ಲ. ಇದರ ಬಗ್ಗೆ ಸಾಕಷ್ಟು ಬಾರಿ ಪೌರಾಯುಕ್ತರ ಗಮನಕ್ಕೆ ತಂದರೂ ಸಹ ನನಗೆ ಬೈದು ನೀನು ಸುಮ್ಮನೆ ಇದ್ದುಬಿಡು. ಸಾರ್ವಜನಿಕರು ಏನು ಕೇಳಿದರೂ ನನ್ನಹತ್ತಿರ ಯಾವುದೇ ದಾಖಲೆಗಳು ಇಲ್ಲ ಎಂದು ಹೇಳು ಎಂದು ಪೌರಾಯುಕ್ತರು ಹೇಳಿದ್ದರು,’ ಎಂದು ದೂರಿನಲ್ಲಿ ಹೇಳಲಾಗಿತ್ತು.

 

ವಾರ್ಡ್‌ ನಂಬರ್‍‌ 35ರಲ್ಲಿ ಎಂ ಆರ್‍‌ 19, ವ್ಯಾಲಂ ನಂ -2, 03, 05, 06, ವಾರ್ಡ್‌ ನಂಬರ್‍‌ 35 ಜಂಬುನಾಥನಹಳ್ಳಿ ಎಂ ಆರ್‍‌ 26 ವ್ಯಾಲಂ ನಂ 05, ಕೆಎಂಎಫ್‌ ವ್ಅಲಂ ನಂ 32, 33, 34,35, 36, 38, 39, ವಾರ್ಡ್ ನಂಬರ್‍‌ 8ರಲ್ಲಿ ಎಂ ಆರ್‍‌ 26 ವ್ಯಾಲಂ ನಂ 03, 18, 21, 82, 93, ರೆಜ್ಯೂಲೇಷನ್‌ ರಿಜಿಸ್ಟರ್‍‌ 1990-91ರಿಂದ 1992-93, ಕಲ್ಲಹಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದ ಡಿಮ್ಯಾಂಡ್‌ ರಿಜಿಸ್ಟರ್‍‌ ವ್ಯಾಲಂ 01, 04, 02, ಸಂಕ್ಲಾಪುರ ರಿಜಿಸ್ಟರ್‍‌ ವ್ಯಾಲಂ ನಂ 02, ಅಮರಾವತಿ ಪುರಸಭೆ ಎಂ ಆರ್‍‌ ನಂ 19, ವ್ಯಾಲಂ ನಂ 01,02 ಹಳೇ ವಾರ್ಡ್‌ ನಂ 6, ವ್ಯಾಲಂ 01 ಸೇರಿದಂತೆ ಒಟ್ಟು 49 ಕಡತಗಳು, ರಿಜಿಸ್ಟರ್‍‌ಗಳನ್ನು ಅಕ್ರಮವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ಸುರೇಶ್‌ ಬಾಬು ಅವರು ದೂರಿನಲ್ಲಿ ವಿವರಿಸಿದ್ದರು.

ದರ್ಪ; ಪೌರಾಯುಕ್ತರ ಸಮ್ಮುಖದಲ್ಲೇ ರಿಜಿಸ್ಟರ್‍‌, ಕಡತ, ದಾಖಲೆಗಳ ಹೊತ್ತೊಯ್ದರೇ ಮಾಜಿ ಸಚಿವರ ಅಳೀಮಯ್ಯ?

ಆನಂದ್‌ ಸಿಂಗ್‌ ಅವರು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮೊದಲು ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಅವರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts