Sunday | April 12, 2026 |

40 ಪರ್ಸೆಂಟ್‌ ಕಮಿಷನ್‌; ನಿವೃತ್ತ ನ್ಯಾ.ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ನಿರ್ಧಾರ?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ, ಬಿಬಿಎಂಪಿ, ಪಂಚಾಯತ್‌ ರಾಜ್‌  ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳಲ್ಲಿನ  ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಲಾಗಿತ್ತು ಎಂದು ಗುತ್ತಿಗೆದಾರರ ಸಂಘವು ಮಾಡಿದ್ದ ಆರೋಪವನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಂಡು ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಸರ್ಕಾರವು ಇದೀಗ ಈ ಬಹುದೊಡ್ಡ ಹಗರಣವನ್ನು ನಿವೃತ್ತ ನ್ಯಾ. ನಾಗಮೋಹನ್‌ ದಾಸ್‌ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಲು ನಿರ್ಧರಿಸಿದೆ ಎಂದು ಗೊತ್ತಾಗಿದೆ.

 

ನಾಗಮೋಹನ್‌ ದಾಸ್‌ ಅವರ ನೇತೃತ್ವದಲ್ಲಿಯೇ ತನಿಖಾ ಆಯೋಗವನ್ನು ರಚಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಸಮ್ಮತಿ ವ್ಯಕ್ತಪಡಿಸಿದ್ದು, ಈ ಸಂಬಂಧ ಮೂರ್ನಾಲ್ಕು ದಿನದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ ಎಂದು ತಿಳಿದು ಬಂದಿದ.

 

ಪಿಎಸ್‌ಐ ಹಗರಣದ ತನಿಖೆಯನ್ನು  ಹೈಕೋರ್ಟ್‌ ನಿವೃತ್ತ ನ್ಯಾ.ಬಿ.ವೀರಪ್ಪ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಿರುವ ಬೆನ್ನಲ್ಲೇ ನಾಗಮೋಹನ್‌ದಾಸ್‌ ಅವರ ನೇತೃತ್ವದ ತನಿಖಾ ಆಯೋಗ ರಚಿಸಲು ಮುಂದಾಗಿರುವುದು ಬಿಜೆಪಿಯನ್ನು ಮತ್ತಷ್ಟು ಸಿಟ್ಟಿಗೆಬ್ಬಿಸಲಿದೆ. ನ್ಯಾಯಾಂಗ ತನಿಖಾ ಆಯೋಗಗಳ ರಚನೆ  ಸಂಬಂಧ  ಬಿಜೆಪಿಯು ಇದೊಂದು ರಾಜಕೀಯ ದ್ವೇ‍ಷದ ಕ್ರಮ ಎಂದು ಈಗಾಗಲೇ  ಟೀಕಿಸಿದೆ.

 

 

ರಾಜ್ಯದಲ್ಲಿ ಪ್ರತಿ ಕಾಮಗಾರಿಯಲ್ಲಿ 40 ಪರ್ಸೆಂಟ್‌ ಕಮಿಷನ್‌ ಕೇಳಲಾಗುತ್ತಿದೆ ಎಂದು  ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಆರೋಪಿಸಿದ್ದರು. ಆಗ ಪ್ರಧಾನಮಂತ್ರಿ ಕಚೇರಿಯಿಂದ ಯಾವುದೇ ಕ್ರಮ ಆಗಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ   ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್‌ ಸರಣಿ ಪ್ರತಿಭಟನೆಗಳ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಯತ್ನಿಸಿತ್ತಲ್ಲದೇ ಅದರಲ್ಲಿ ಯಶಸ್ವಿಯೂ ಆಗಿತ್ತು.  ಇದಕ್ಕಾಗಿ 40% ಸರ್ಕಾರದ ಹೆಸರಿನಲ್ಲಿ ಸರಣಿ ಜಾಹೀರಾತು, ಭಿತ್ತಿಪತ್ರ ಪ್ರಕಟಿಸಿತ್ತು. ಜತೆಗೆ ಪೇ-ಸಿಎಂ ಹೆಸರಿನಲ್ಲಿ ಪೋಸ್ಟರ್‌ ಅಂಟಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಚರ್ಚೆಗೆ ಕಾರಣವಾಗಿತ್ತು.

 

 

ವಿಶೇಷವೆಂದರೆ  ಹತ್ತು ಕೋಟಿ ಅನುದಾನ ಮೀರಿದ ಎಲ್ಲಾ ಕಾಮಗಾರಿಗಳು, ಟೆಂಡರ್‌ ಪ್ರಕ್ರಿಯೆ ಅಥವಾ ಬಿಲ್‌ ಪಾವತಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ ಕುರಿತಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ತಮ್ಮ ಹಂತದಲ್ಲೇ ಕ್ಲೀನ್‌ ಚಿಟ್‌ ಕೊಟ್ಟುಕೊಂಡಿವೆ. ಅಲ್ಲದೆ ಶೇ. 40ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ಕುರಿತು ಒಂದೇ ಒಂದು ದೂರು ಬಂದಿಲ್ಲ ಎಂದು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್‌ ಅವರಿಗೆ ವರದಿ ನೀಡಿತ್ತು.

 

ಟೆಂಡರ್ ಪ್ರಕ್ರಿಯೆಯಲ್ಲಿ ಹಗರಣದ ಹಾಗೂ ಶೇ. 40ರಷ್ಟು ಕಮಿಷನ್‌ಗೆ ವಿಚಾರವಾಗಿ ಗುತ್ತಿಗೆದಾರರ ಸಂಘವು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ವಿಚಾರದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಅವರಿಗೆ ಸೂಚಿಸಿದ್ದರು.

 

ತನಿಖೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬರೆದಿರುವ ಪತ್ರದ ಪ್ರತಿ

 

ಈ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಅವರು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್‌ಗೆ ಸೂಚಿಸಿದ್ದರು.

 

ಮುಖ್ಯ ಕಾರ್ಯದರ್ಶಿ ರವಿಕುಮಾರ್‌, ರಾಕೇಶ್‌ಸಿಂಗ್‌ ಅವರಿಗೆ ಬರೆದಿರುವ ಪತ್ರ

 

 

ಈ ಸಂಬಂಧ ರಾಕೇಶ್‌ಸಿಂಗ್ ಅಧಿಕಾರಿಗಳೊಂದಿಗೆ 2021ರ ನವೆಂಬರ್‌ 29ರಂದು ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿದ್ದರು.

 

ರಾಕೇಶ್‌ಸಿಂಗ್ ಸಭೆ ನಡೆಸಿರುವ ಪತ್ರ

ಈ ಪ್ರಕರಣವು ಪ್ರಧಾನಿ ಕಚೇರಿ ಮೆಟ್ಟಿಲೇರಿದ್ದರೂ ಗಂಭೀರವಾಗಿ ಪರಿಗಣಿಸದ ರಾಕೇಶ್‌ಸಿಂಗ್‌ ಅವರು ನಿಗಮಗಳಿಂದಲೇ ವರದಿ ಪಡೆದಿದ್ದರು. ಹೀಗಾಗಿ ನಿಗಮಗಳು ತಮ್ಮ ವ್ಯಾಪ್ತಿಯಲ್ಲಿ ಬಿಲ್‌ ಪಾವತಿ ಹಂತ, ಟೆಂಡರ್‌ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ತಮ್ಮ ಹಂತದಲ್ಲಿಯೇ ಕ್ಲೀನ್‌ ಚಿಟ್‌ ಕೊಟ್ಟುಕೊಂಡಿದ್ದವು.

 

ಮುಖ್ಯ ಕಾರ್ಯದರ್ಶಿ ಸೂಚನೆ ಮೇರೆಗೆ ರಾಕೇಶ್‌ಸಿಂಗ್‌ ಅವರು ತನಿಖೆ ನಡೆಸಿರುವುದು ಮತ್ತು ಈ ಸಂಬಂಧ ನಿಗಮಗಳೊಂದಿಗೆ ನಡೆಸಿರುವ ಪತ್ರ ವ್ಯವಹಾರಗಳು ಕುರಿತಂತೆ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ದಾಖಲಾತಿಗಳನ್ನು ಪಡೆದುಕೊಂಡಿತ್ತು.

 

ಕರ್ನಾಟಕ ನೀರಾವರಿ ನಿಗಮ, ಕೃಷ್ಣಭಾಗ್ಯ ಜಲನಿಗಮ, ಕಾವೇರಿ ಜಲನಿಗಮ, ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರು ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ವರದಿ ಸಲ್ಲಿಸಿದ್ದಾರೆ. ಇದನ್ನಾಧರಿಸಿ ರಾಕೇಶ್‌ಸಿಂಗ್‌ ಅವರು 2021ರ ಡಿಸೆಂಬರ್‌ 01ರಂದೇ ವರದಿ ಸಲ್ಲಿಸಿದ್ದಾರೆ. ನಾಲ್ಕೂ ನಿಗಮಗಳೂ ಕೆಪಿಡಬ್ಲ್ಯೂಡಿ ಕೋಡ್‌ ಮತ್ತು ಕೆಟಿಪಿಪಿ ಕಾಯ್ದೆ ಮತ್ತು ರಾಜ್ಯ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ ಆದೇಶ ಮತ್ತು ಸುತ್ತೋಲೆಗಳನ್ನು ಪಾಲಿಸುತ್ತಿವೆ ಎಂದು ವರದಿಯಲ್ಲಿ ಪ್ರಸ್ತಾಪಿಸಿದ್ದರು.

 

 

‘ಹಾಲಿ ಮುಖ್ಯಮಂತ್ರಿ ಅವರು ಅಧಿಕಾರ ವಹಿಸಿಕೊಂಡ ನಂತರ 10 ಕೋಟಿ ರು.ಗೂ ಮೀರಿದ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ, ಬಿಲ್‌ ಪಾವತಿ, ಭೂ ಸ್ವಾಧೀನದ ಬಾಕಿ ಮೊತ್ತ, ಸಣ್ಣ ಗುತ್ತಿಗೆದಾರರಿಗೆ ಆದ್ಯತೆ ಮೇಲೆ ಹಣ ಪಾವತಿಸಲಾಗುತ್ತಿದೆ. ಯಾವುದೇ ಬಿಲ್‌ಗಳು ಪಾವತಿಗಾಗಿ ಬಾಕಿ ಉಳಿದಿಲ್ಲ. ಈ ಬಿಲ್‌ಗಳ ಪಾವತಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಸ್ವೀಕೃತವಾಗಿಲ್ಲ,’ ಎಂದು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಲಾಗಿತ್ತು.

 

ಕಾವೇರಿ ನೀರಾವರಿ ನಿಗಮದ ಉತ್ತರವೇನು?

 

2021ರ ಜುಲೈ 28ರಿಂದ ಇಲ್ಲಿಯವರೆಗೆ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ 10.00 ಕೋಟಿ ಮೀರಿದ ಯಾವುದೇ ಕಾಮಗಾರಿಯ ಟೆಂಡರ್‌ನ್ನು ಅನುಮೋದಿಸಿರುವುದಿಲ್ಲ. ಹಾಗೂ 10.00 ಕೋಟಿ ಮೀರಿದ ಬಿಲ್‌ ಪಾವತಿಯೂ ಸಹ ಮಾಡಿರುವುದಿಲ್ಲ ಎಂದು 2021ರ ನವೆಂಬರ್‌ 29ರಂದು ಮಾಹಿತಿ ಒದಗಿಸಿತ್ತು.

 

 

ಕೃಷ್ಣಾ ಭಾಗ್ಯ ಜಲನಿಗಮದ ಉತ್ತರ ಹೀಗಿದೆ.

 

ಹಾಲಿ ಮುಖ್ಯಮಂತ್ರಿಗಳು 2021ರ ಜುಲೈ 28ರಂದು ಅಧಿಕಾರ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗೂ 10.00 ಕೋಟಿ ರು.ಮೀರಿದ ಯಾವುದೇ ಕಾಮಗಾರಿಗಳಿಗೆ ಟೆಂಡರ್‌ಗಳನ್ನು ಅನುಮೋದಿಸಿಲ್ಲ. ಈ ಸಂಬಂಧ ಈ ಕಚೇರಿಯಲ್ಲಿ ಯಾವುದೇ ದೂರುಗಳು ಸ್ವೀಕೃತವಾಗಿಲ್ಲ. ಈ ಅವಧಿಯಲ್ಲಿ ನಿಗಮವು ಬಿಲ್‌ಗಳನ್ನು ಶೇ.80ರಷ್ಟು ಕಾಮಗಾರಿಗಳಿಗೆ ಆದ್ಯತೆ ಮೇರೆಗೆ , ಸಣ್ಣ ಗುತ್ತಿಗೆದಾರರಿಗೆ ಹಿರಿತನದ ಆಧಾರದ ಮೇಲೆ ಪಾವತಿ ಮಾಡಲಾಗುತ್ತದೆ. ಮತ್ತು ಬಾಕಿ ಉಳಿದಿರುವ ಶೇ.20ರಷ್ಟು ಅನುದಾನವನ್ನು ಕಾಮಗಾರಿಯ ತುರ್ತು ಅವಶ್ಯಕತೆಗಳಿಗನುಗುಣವಾಗಿ ಹಾಗೂ ಕಾಮಗಾರಿಯ ಪ್ರಗತಿಯ ದೃಷ್ಟಿಯಿಂದ ಬಿಲ್‌ಗಳನ್ನು ಪಾವತಿ ಮಾಡಲಾಗಿತ್ತು.

 

 

10.00 ಕೋಟಿ ಹಾಗೂ ಅದರ ಮೇಲ್ಪಟ್ಟಂಎ ಎಸ್‌ಡಿಪಿ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಸಾಕಷ್ಟು ಅನುದಾನ ಲಭ್ಯತೆ ಇದ್ದು ಆರ್ಥಿಕ ಪ್ರಗತಿ ಸಾಧಿಸಬೇಕಾಗಿದ್ದರಿಂದ ಪಾವತಿಸಲಾಗಿದೆ. ಈ ಬಿಲ್‌ನ್ನೂ ಹಿರಿತನದ ಆಧಾರದ ಮೇಲೆ ಪಾವತಿಸಲಾಗಿದೆ. ಪ್ರಸ್ತುತ ಎಸ್‌ಡಿಪಿ ಅಡಿಯಲ್ಲಿ 32.37 ಕೋಟಿ ಅನುದಾನ ಲಭ್ಯತೆ ಇದ್ದು ಯಾವುದೇ ಬಿಲ್‌ಗಳು ಪಾವತಿಗಾಗಿ ಬಾಕಿ ಉಳಿದಿಲ್ಲ. ಹಾಗೆಯೇ ಈ ಬಿಲ್‌ ಪಾವತಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಸ್ವೀಕೃತವಾಗಿಲ್ಲ ಎಂದು 2021ರ ನವೆಂಬರ್‌ 30ರಂದು ಬರೆದ ಪತ್ರದಲ್ಲಿ ವಿವರಿಸಿತ್ತು.

 

ಹಾಗೆಯೇ ಜೆಎನ್‌ಎಸ್‌ ಸುಪ್ರದ ಏಜೆನ್ಸಿ ನಿರ್ವಹಿಸುತ್ತಿರುವ ಕಾಮಗಾರಿ ಪ್ರಗತಿಯ ಹಿತದೃಷ್ಟಿಯಿಂದ ಮುಖ್ಯ ಅಭಿಯಂತರರ ಕೋರಿಕೆ ಮೇರೆಗೆ 34.13 ಕೋಟಿ ರು.ಗಳ ಪೈಕಿ ಭಾಗಶಃ ಬಿಲ್‌ನ್ನು ಮಾತ್ರ ಪಾವತಿಸಲಾಗಿದೆ. ಹಾಗೆಯೇ ಬಿಲ್‌ ಪಾವತಿ ಸಂಬಂಧ ಯಾವುದೇ ದೂರುಗಳು ಈ ಕಚೇರಿಯಲ್ಲಿ ಸ್ವೀಕೃತವಾಗಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ಒದಗಿಸಿದ್ದರು.

 

ಕರ್ನಾಟಕ ನೀರಾವರಿ ನಿಗಮದ ವಿವರಣೆ

 

ಕೃಷ್ಣಾ ವ್ಯಾಪ್ತಿ, ವಾರಾಹಿ, ಸೌಪರ್ಣಿಕಾ ಯೋಜನೆ, ಕಾರಂಜಾ ಮತ್ತು ಗೋದಾವರಿ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಆದರೆ 2021ರ ಜುಲೈ 27ರಿಂದ ಇಲ್ಲಿಯವರೆಗೆ ಯಾವುದೇ ಕಾಮಗಾರಿಯನ್ನು ನಿಗಮವು ಅನುಮೋದಿಸಿಲ್ಲ. ನಿಗಮವು ಪ್ರತಿ ತಿಂಗಳೂ ಬಾಕಿ ಬಿಲ್‌ಗಳನ್ನು ಪಾವತಿಸುತ್ತಿದೆ. 2021ರ ಜುಲೈ 27ರಿಂದ ಇಲ್ಲಿಯವರೆಗೆ ಒಟ್ಟಾರೆ 38,850.08 ಲಕ್ಷ ರುಗ.ಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 2021ರ ಜುಲೈ 30ರಿಂದ ನವೆಂಬರ್‌ 8ರವರೆಗೆ ಕಾಮಗಾರಿಗಳಿಗಾಗಿ 11,211.12 ಲಕ್ಷ ರು., ಮತ್ತು 2021ರ ನವೆಂಬರ್‌ 20ರಂದು 17,214.23 ಲಕ್ಷ ರು.ಗಳನ್ನು ಬಿಡುಗಡೆ ಮಾಡಿದೆ ಎಂದು ವಿವರ ಒದಗಿಸಿತ್ತು.

 

 

ಇನ್ನುಳಿದ ವಿಶ್ವೇಶ್ವರಯ್ಯ ಜಲನಿಗಮ ಸಹ 10.00 ಕೋಟಿ ರು.ಗೂ ಮೀರಿದ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮತ್ತು ಬಾಕಿ ಬಿಲ್‌ಗಳ ಪಾವತಿ ಸಂಬಂಧ ಯಾವುದೇ ದೂರುಗಳು ಸಲ್ಲಿಕೆಯಾಗಿಲ್ಲ ಎಂದು ತಿಳಿಸಿರುವುದು ವ್ಯವಸ್ಥಾಪಕ ನಿರ್ದೇಶಕರು ಬರೆದಿರುವ ಪತ್ರಗಳಿಂದ ಗೊತ್ತಾಗಿದೆ. ಈ ಕುರಿತು ‘ದಿ ಫೈಲ್‌’ 2022ರ ಮೇ 22ರಂದೇ ಆರ್‍‌ಟಿಐ ದಾಖಲೆಗಳ ಮೂಲಕ ವರದಿ ಪ್ರಕಟಿಸಿತ್ತು.

 

40 ಪರ್ಸೆಂಟ್‌ ಕಮಿಷನ್‌ ಹಗರಣಕ್ಕೆ ಕ್ಲೀನ್‌ ಚಿಟ್‌; ತನಿಖೆ ನಡೆಸದೆಯೇ ಮಣ್ಣೆಳೆದು ಮುಚ್ಚಿ ಹಾಕಿದ ಸರ್ಕಾರ

 

ಗುತ್ತಿಗೆದಾರರ ಪತ್ರದಲ್ಲಿ ಇರುವ ಅಂಶವನ್ನು ಪರಿಶೀಲನೆ ನಡೆಸಿ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದೇಶಿಸಿದ್ದರು.

 

‘ನಮ್ಮ ಸರ್ಕಾರದ ಅವಧಿಯಲ್ಲಿ ಅಂತಿಮವಾಗಿರುವ ಟೆಂಡರ್ ಪ್ರಕ್ರಿಯೆಗಳ ಬಗ್ಗೆಯೂ ವಿಶೇಷವಾಗಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ. ಹಿಂದಿನ ಸಂಪುಟ ಸಭೆಯಲ್ಲಿ ಟೆಂಡರ್ ಅಂದಾಜು ಹಾಗೂ ಪರಿಶೀಲನೆ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎರಡು ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಕೂಡಲೇ ಕಾರ್ಯಗತಗೊಳಿಸಬೇಕು,’ ಎಂದು ಸೂಚಿಸಿದ್ದನ್ನು ಸ್ಮರಿಸಬಹುದು.

Hot this week

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ; ಅಧಿಕಾರಿಗಳ ವಿರುದ್ಧ ದಾಖಲಾಗದ ಎಫ್‌ಐಆರ್, ವರದಿ ಸಲ್ಲಿಸಲು ಸೂಚನೆ

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ತವರು ಕ್ಷೇತ್ರದಲ್ಲಿ...

13 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ; ಗುತ್ತಿಗೆದಾರರ ಸಂಘದಿಂದ ಮತ್ತೊಂದು ಪತ್ರ, ಕೋರ್ಟ್‌ ಕದ ತಟ್ಟಿದ ಗುತ್ತಿಗೆದಾರರು

ಬೆಂಗಳೂರು;  ಮಹಾತ್ಮಗಾಂಂಧಿ ನಗರ ವಿಕಾಸ ಯೋಜನೆ -1 ರ ಅಡಿಯಲ್ಲಿ ಕಾಮಗಾರಿ...

Topics

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

13,646.51 ಕೋಟಿ ಹೆಚ್ಚುವರಿ ವೆಚ್ಚ; ಗೃಹ ಲಕ್ಷ್ಮಿಯದ್ದೇ ಸಿಂಹಪಾಲು, ಹೆಚ್ಚುವರಿ ಖರ್ಚಿಗೆ ಕಾರಣಗಳೇ ಇಲ್ಲ, ಸಿಎಜಿ ಆಕ್ಷೇಪ

ಬೆಂಗಳೂರು;  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು 2024-25ನೇ ಸಾಲಿನಲ್ಲಿ ...

Related Articles

Popular Categories

error: Content is protected !!