ಸುತ್ತೋಲೆ ಬದಿಗಿರಿಸಿ 208 ಪಿಡಿಒಗಳ ವರ್ಗಾ, ಒಂದೇ ಪಂಚಾಯ್ತಿಗೆ ಇಬ್ಬರು ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳಿಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಆದೇಶದಲ್ಲಿ ಒಂದೇ ಪಂಚಾಯ್ತಿಗೆ ಇಬ್ಬರು ಪಿಡಿಒಗಳನ್ನು ವರ್ಗಾಯಿಸಿರುವುದು ಇದೀಗ ಬಹಿರಂಗವಾಗಿದೆ. ಈ ಪಂಚಾಯ್ತಿಗೆ ಯಾರು ಅಧಿಕಾರ ವಹಿಸಿಕೊಳ್ಳಬೇಕು ಎಂಬ ಬಗ್ಗೆ ಇಬ್ಬರು ಪಿಡಿಒಗಳ ನಡುವೆಯೇ ಪೈಪೋಟಿಗೆ ಸೃಷ್ಟಿಸಿದಂತಾಗಿದೆ.

 

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಲ್ಲಿದ್ದ ಲೆಕ್ಕಪರಿಶೋಧನಾಕಾರಿ ಒಂದು ಹುದ್ದೆಗೆ  ನಾಲ್ವರು ಅಧಿಕಾರಿಗಳಿಗೆ ಶಿಫಾರಸ್ಸು ಟಿಪ್ಪಣಿ ಹೊರಡಿಸಿದ್ದ ಪ್ರಕರಣವೂ ಸೇರಿದಂತೆ ಇತರೆ ಇಲಾಖೆಗಳಿಂದ ಹೊರಬೀಳುತ್ತಿರುವ ವರ್ಗಾವಣೆ ಆದೇಶಗಳು ವಿವಾದಕ್ಕೆ ಕಾರಣವಾಗುತ್ತಿರುವ ಬೆನ್ನಲ್ಲೇ ಒಂದೇ ಪಂಚಾಯ್ತಿಗೆ ಇಬ್ಬರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಅಲ್ಲದೇ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ನಡೆಸಲು ಜುಲೈ 3 ಕೊನೆ ದಿನಾಂಕ ಎಂದು ಹೊರಡಿಸಿದ್ದ ಸುತ್ತೋಲೆಯನ್ನು ಬದಿಗೊತ್ತಿರುವ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು 2023ರ ಜುಲೈ 5ರಂದು ಒಟ್ಟು 208 ಪಿಡಿಒಗಳನ್ನು ವರ್ಗಾಯಿಸಿ ಆದೇಶಿಸಿದೆ. ಈ ಆದೇಶಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಅನುಮೋದಿಸಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವರ್ಗಾವಣೆ ಆದೇಶದ 35ನೇ ಕ್ರಮಾಂಕದಲ್ಲಿರುವ ಪ್ರತಿಭಾ ಅವರನ್ನು ಕೋಲಾರ ತಾಲೂಕಿನ ಮಾರ್ಜೇನಹಳ್ಳಿ ಗ್ರಾಮ ಪಂಚಾಯ್ತಿಯಿಂದ ಕುಣಿಗಲ್‌ ಗ್ರಾಮಾಂತರ ತಾಲೂಕಿನ ಕಿತ್ತಾಮಂಗಲ ಗ್ರಾಮ ಪಂಚಾಯ್ತಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

 

ಇದೇ ಆದೇಶದಲ್ಲಿನ  155ನೇ ಕ್ರಮಾಂಕದಲ್ಲಿರುವ ಕೆ ಎಂ ವೆಂಕಟೇಶ್‌ (ಚಿಕ್ಕನಾಯಕನಹಳ್ಳಿ, ಹೊನ್ನೆಬಾಗಿ ಗ್ರಾ.ಪಂ) ಅವರನ್ನು ಕುಕಣಿಗಲ್‌ ತಾಲೂಕಿನ ಕಿತ್ನಾಮಂಗಲ ಗ್ರಾಮ ಪಂಚಾಯ್ತಿಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನಾಗಿ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.

 

 

 

 

 

‘ಅಧಿಕಾರಿಗಳ ತಾತ್ಸಾರ ಮನೋಭಾವದ ಬೇಜವಾಬ್ದಾರಿಯುತ ವರ್ತನೆಯಿಂದ ಮಾಡಿದ ವರ್ಗಾವಣೆ ಪಟ್ಟಿಗೆ  ಸಚಿವರು ಯಾವುದೇ ರೀತಿಯ ಪರಿಶೀಲನೆ ಮಾಡದೆ ಸಹಿ ಹಾಕಿರುವುದು ಕಂಡು ಬರುತ್ತದೆ.  ಸಂವಿಧಾನ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಮಾತನಾಡುವ ಪ್ರಿಯಾಂಕ ಖರ್ಗೆಯವರು ಈ ರೀತಿಯ ಬೇಜವಾಬ್ದಾರಿ ನಡೆಯಿಂದ ಸಚಿವರಾಗಿ ಮುಂದುವರೆಯುವುದು ಕಾನೂನು ಬದ್ಧವೇ,’ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಅಧ್ಯಕ್ಷ ರಮೇಶ್‌ ಕುಣಿಗಲ್‌ ಅವರು ಪ್ರಶ್ನಿಸಿದ್ದಾರೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯ ಒಂದೇ ಒಂದು ಹುದ್ದೆಗೆ ಇಬ್ಬರು ಅರಣ್ಯಾಧಿಕಾರಿಗಳಿಗೆ ಶಿಫಾರಸ್ಸು ಪತ್ರ ನೀಡುವ ಮೂಲಕ ಮತ್ತೊಮ್ಮೆ ಪ್ರತಿಪಕ್ಷಗಳ ಬಾಯಿಗೆ ಆಹಾರವಾಗಿದ್ದರು. ಅಲ್ಲದೇ  ಒಂದು ಹುದ್ದೆಗೆ ಎರಡು, ಮೂರು, ನಾಲ್ಕು ಅಧಿಕಾರಿಗಳನ್ನು ಏಕಕಾಲಕ್ಕೆ ವರ್ಗಾವಣೆ, ಸ್ಥಳ ನಿಯುಕ್ತಿಗೊಳಿಸಲು ಸೂಚಿಸಿ ಟಿಪ್ಪಣಿ ಹೊರಡಿಸುತ್ತಿರುವ ಸಿದ್ದರಾಮಯ್ಯ ಅವರೀಗ ಅವರ ಸಚಿವ ಸಂಪುಟದ ಸದಸ್ಯರಿಗೇ  ಬಿಸಿತುಪ್ಪವಾಗಿ ಪರಿಣಿಮಿಸಿದ್ದರು.

 

 

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರ ಹುದ್ದೆಗೆ ನೇಮಕವಾದ  ಮೂರೇ ಮೂರು ದಿನದಲ್ಲಿ ಇಬ್ಬರು ಅಧಿಕಾರಿಗಳನ್ನು ಕಾರಣಗಳಿಲ್ಲದೆಯೇ ವರ್ಗಾವಣೆ ಮಾಡಿ ಪುನಃ 20 ದಿನದಲ್ಲಿ ಅದೇ ಅಧಿಕಾರಿಯನ್ನು ಮರಳಿ ವರ್ಗಾವಣೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಬಿ ನಾಗೇಂದ್ರ ಅವರನ್ನು ಸಿಟ್ಟಿಗೆಬ್ಬಿಸಿದ್ದರ ಹೊತ್ತಿನಲ್ಲೇ  ಇದೀಗ ಒಂದೇ ವಲಯ ಅರಣ್ಯಾಧಿಕಾರಿ ಹುದ್ದೆಗೆ 15 ದಿನದಲ್ಲೇ ಇಬ್ಬರು ಅಧಿಕಾರಿಗಳಿಗೆ ಶಿಫಾರಸ್ಸಿನ ಟಿಪ್ಪಣಿ ಪತ್ರ ನೀಡುವ ಮೂಲಕ ಸಚಿವ ಈಶ್ವರ ಖಂಡ್ರೆ ಅವರನ್ನೂ ಇಕ್ಕಟ್ಟಿನಲ್ಲಿ ಸಿಲುಕಿಸಿದ್ದರು.

 

 

 

ಮೂಡಿಗೆರೆ ಪ್ರಾದೇಶಿಕ ವಲಯದಲ್ಲಿ ವಲಯ ಅರಣ್ಯಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿ ಜಿ ಮೋಹನ್‌ ಕುಮಾರ್‍‌ ಅವರನ್ನು ಬೆಳ್ತಂಗಡಿ ಪ್ರಾದೇಶಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತ್ಯಾಗರಾಜು ಅವರ ಜಾಗಕ್ಕೆ ವರ್ಗಾಯಿಸಲು ಕೋರಿದೆ ಎಂದು 2023ರ ಜೂನ್‌ 14ರಂದು ಸಿದ್ದರಾಮಯ್ಯ ಅವರು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವ ಈಶ್ವರ್‍‌ ಖಂಡ್ರೆ ಅವರಿಗೆ ಟಿಪ್ಪಣಿ ಹೊರಡಿಸಿದ್ದರು. ಈ ಟಿಪ್ಪಣಿ ಹೊರಡಿಸಿದ 15 ದಿನದೊಳಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಹುದ್ದೆಗೆ ಹೊನ್ನಾವರ ವಿಭಾಗ ಮತ್ತು ವಲಯದಲ್ಲಿ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿಕ್ರಮ್‌ ಆರ್‍‌ ಎಂ ಅವರನ್ನು ವರ್ಗಾಯಿಸಬೇಕು ಎಂದು ಅರಣ್ಯ ಸಚಿವರಿಗೆ 2023ರ ಜೂನ್‌ 30ರಂದು ಸೂಚಿಸಿದ್ದರು.

 

 

 

 

ಸಿಎಂ ಕಚೇರಿಯಲ್ಲಿ ನಿಲ್ಲದ ವರ್ಗಾವಣೆ ಭರಾಟೆ; ಅರಣ್ಯಾಧಿಕಾರಿಯ ಒಂದೇ ಹುದ್ದೆಗೆ ಇಬ್ಬರಿಗೆ ಶಿಫಾರಸ್ಸು

 

ಸರ್ಕಾರಿ ಅಧಿಕಾರಿ, ನೌಕರರ ವರ್ಗಾವಣೆ ಪ್ರಕ್ರಿಯೆಗಳಲ್ಲಿ ಕಮಿಷನ್‌, ಲಂಚ ಪಡೆದು ವರ್ಗಾವಣೆ ವ್ಯಾಪಾರ ನಡೆಸಿದ್ದರೇ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿಗೆ ಸದನದಲ್ಲಿಯೇ ಸವಾಲು ಎಸೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರ ಹುದ್ದೆಗೆ ಮೂರು ಬಾರಿ ವರ್ಗಾವಣೆ ಅಧಿಸೂಚನೆ ಹೊರಡಿಸಿದ್ದರು.  ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮನಸೋ ಇಚ್ಛೆ ಅಧಿಕಾರಿ, ನೌಕರರ ವರ್ಗಾವಣೆಗಳನ್ನು ಮಾಡುತ್ತಿರುವುದರ ಬಗ್ಗೆ ಅಧಿಕಾರಿಶಾಹಿಯೊಳಗೆ ಅಸಮಾಧಾನಕ್ಕೆ ಕಾರಣವಾಗಿತ್ತು.

 

ಎಸ್‌ ಟಿ ಕಲ್ಯಾಣ ಇಲಾಖೆ ನಿರ್ದೇಶಕರ ಹುದ್ದೆ; ಮೂರೇ ಮೂರು ದಿನದಲ್ಲಿ ಇಬ್ಬರು ಅಧಿಕಾರಿಗಳ ವರ್ಗಾವಣೆ

 

ಮಣಿಪುರ ಮೂಲದ ಕರ್ನಾಟಕ ಕೇಡರ್‍‌ನ (KN 2020) ಐಎಎಸ್‌ ಅಧಿಕಾರಿಯಾಗಿರುವ ನೋನ್‌ಜಾಯ್‌ ಮೊಹ್ಮದ್‌ ಅಲಿ ಅಕ್ರಮ್‌ ಶಾ ಅವರನ್ನು ಕಳೆದ 8 ತಿಂಗಳಲ್ಲಿ 6 ಬಾರಿ ವಿವಿಧ ಸ್ಥಳ-ಹುದ್ದೆಗಳಿಗೆ ವರ್ಗಾವಣೆ ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು.

 

8 ತಿಂಗಳಲ್ಲಿ 6 ಬಾರಿ ವರ್ಗಾವಣೆ; ಫುಟ್ಬಾಲ್‌ ಚೆಂಡಿನಂತಾದ ಮಣಿಪುರ ಮೂಲದ ಐಎಎಸ್‌ ಅಧಿಕಾರಿ ಅಕ್ರಮ್‌ ಶಾ

 

ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್‌ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಯಾವುದೇ ಸಕಾರಣವಿಲ್ಲದೇ ಮತ್ತು ಅತಿ ವಿಶೇಷ ಸಂದರ್ಭವಿಲ್ಲದಿದ್ದರೂ ಅವಧಿಪೂರ್ವ ವರ್ಗಾವಣೆ ಮಾಡಿ ವರ್ಗಾವಣೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರಿಯಾಗಿದ್ದರು.

 

 

 

 

ಸಕಾರಣಗಳಿಲ್ಲದಿದ್ದರೂ ನಾಲ್ವರು ಕೆಎಎಸ್‌ ಅಧಿಕಾರಿಗಳ ಅವಧಿಪೂರ್ವ ವರ್ಗಾವಣೆ; ಮಾರ್ಗಸೂಚಿ ಉಲ್ಲಂಘನೆ!

 

 

 

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಲ್ಲಿದ್ದ ಲೆಕ್ಕಪರಿಶೋಧನಾಕಾರಿ ಒಂದು ಹುದ್ದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಅಧಿಕಾರಿಗಳಿಗೆ ಶಿಫಾರಸ್ಸು ಟಿಪ್ಪಣಿ ಹೊರಡಿಸಿದ್ದರು.

ಒಂದೇ ಹುದ್ದೆಗೆ ನಾಲ್ವರ ವರ್ಗಾವಣೆಗೆ ಮುಖ್ಯಮಂತ್ರಿ ಶಿಫಾರಸ್ಸು; ಪೈಪೋಟಿ ಸೃಷ್ಟಿಸಿದ ‘ಕೃಷ್ಣಾ’ದ ಟಿಪ್ಪಣಿಗಳು

 

ಇದನ್ನು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಮತ್ತು ಬಿಜೆಪಿಯು ತೀವ್ರವಾಗಿ ಟೀಕಿಸಿದ್ದರು. ವರ್ಗಾವಣೆ ಹಿಂದೆ ಇರುವವರು ಯಾರು ಆ ಅತೀಂದ್ರ ಎಂದು ಟ್ವೀಟ್‌ ಕೂಡ ಮಾಡಿದ್ದರು.

‘ದಿ ಫೈಲ್‌’ ವರದಿ ಉಲ್ಲೇಖ; ‘ಕಾಸಿಗಾಗಿ ಪೋಸ್ಟಿಂಗ್‌ʼ ದಂಧೆ, 4 ಶಿಫಾರಸುಗಳ ಹಿಂದಿರುವ ಆ ʼಅತೀಂದ್ರʼ ಶಕ್ತಿ ಯಾವುದು?

 

ಸರ್ಕಾರಿ ಅಧಿಕಾರಿ, ನೌಕರರ ವರ್ಗಾವಣೆಗೆ ಜೂನ್‌ 30 ಕಡೇ ದಿನ ಎಂದು ಹೇಳಿದ್ದ ಸರ್ಕಾರವು ಕಡೇ ಗಳಿಗೆಯಲ್ಲಿ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಇದೇ ಜುಲೈ 3ರವರೆಗೂ ವಿಸ್ತರಿಸಿದ್ದರು.

ಸುತ್ತೋಲೆ ಉಲ್ಲಂಘಿಸಿ ಕೆಎಎಸ್‌, ಪಿಡಿಒ, ಅಬಕಾರಿ ನಿರೀಕ್ಷಕರು ಸೇರಿ 63 ಮಂದಿ ವರ್ಗಾವಣೆ

ಇದಾದ ನಂತರವೂ ವರ್ಗಾವಣೆ ಅಧಿಸೂಚನೆಗಳು ಹೊರಬಿದ್ದಿದ್ದವು. ವಿಶೇಷವೆಂದರೆ ಸರ್ಕಾರಿ ಜಮೀನನ್ನು ಮಾಜಿ ಸಚಿವ ಬಿ ಶ್ರೀರಾಮುಲು ಅವರಿಗೆ ಅಕ್ರಮವಾಗಿ ನೋಂದಣಿ ಮಾಡಿಕೊಡಲು ಸುಳ್ಳು ದಾಖಲೆಗಳನ್ನೇ ನೈಜವೆಂದು ನಂಬಿಸಿದ ಆರೋಪದ ಮೇರೆಗೆ ವಿಚಾರಣೆ ಎದುರಿಸಿದ್ದ ಶಶಿಧರ ಬಗಲಿ ಅವರನ್ನು ವಿಶೇಷ ಭೂಸ್ವಾಧೀನಾಧಿಕಾರಿಯನ್ನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ಗಾವಣೆಗೊಳಿಸಿ ಅಧಿಸೂಚನೆ ಹೊರಡಿಸಿದ್ದರು.

ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನನ್ನೂ ಸೇರಿಸಿ ನೋಂದಾಯಿಸಿದ್ದ ಅಧಿಕಾರಿಗೆ ಭೂಸ್ವಾಧೀನಾಧಿಕಾರಿ ಹುದ್ದೆ

ಇದಷ್ಟೇ ಅಲ್ಲ, ಎಪಿಪಿಗಳ ನೇಮಕದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ದೋಷಾರೋಪಣೆ ಪಟ್ಟಿಯಲ್ಲಿ  2ನೇ ಆರೋಪಿ ಎಂದು ಹೆಸರಿಸಿದ್ದ ನಾರಾಯಣಸ್ವಾಮಿ ಅವರನ್ನು ಅಭಿಯೋಜನಾ ಇಲಾಖೆಯ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು.

ಎಪಿಪಿಗಳ ಅಕ್ರಮ ನೇಮಕದಲ್ಲಿ ಭಾಗಿಯಾಗಿದ್ದ 2ನೇ ಆರೋಪಿ ಅಧಿಕಾರಿಗೆ ಆಡಳಿತಾಧಿಕಾರಿ ಹುದ್ದೆ

ಹಾಗೆಯೇ ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಗೆ ಅಭಿವೃದ್ಧಿಪಡಿಸಲಾಗಿದ್ದ ತಂತ್ರಾಂಶವನ್ನೇ ದುರುಪಯೋಗಪಡಿಸಿಕೊಂಡಿದ್ದ ಆರೋಪವೂ ಕೇಳಿ ಬಂದಿತ್ತು.

ಲಂಚ; ಆಯಕಟ್ಟಿನ ಹುದ್ದೆಗಳನ್ನೇ ಬ್ಲಾಕ್‌ ಮಾಡಿ ತಂತ್ರಾಂಶ ದುರುಪಯೋಗಪಡಿಸಿಕೊಂಡ ಅಧಿಕಾರಿಗಳು?

ಕಾಸಿಗಾಗಿ ಪೋಸ್ಟಿಂಗ್‌ ಎಂಬ ಆರೋಪ ಕೇಳಿ ಬಂದಿದ್ದರ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ ಎಸ್ ಪ್ರಹ್ಲಾದ್‌ ಎಂಬುವರನ್ನು ಬಿಬಿಎಂಪಿಯಲ್ಲಿನ ಮುಖ್ಯ ಇಂಜಿನಿಯರ್‌ ಹುದ್ದೆಗೆ ವರ್ಗಾವಣೆ ಮಾಡಲು ಟಿಪ್ಪಣಿ ಹೊರಡಿಸಿದ್ದರು.

ಕಾಸಿಗಾಗಿ ಪೋಸ್ಟಿಂಗ್‌ ಆರೋಪ ಬೆನ್ನಲ್ಲೇ ಎಸಿಬಿ ದಾಳಿಗೊಳಗಾಗಿದ್ದ ಮುಖ್ಯಇಂಜಿನಿಯರ್‍‌ಗೆ ಹೊಸ ಹುದ್ದೆ

ಇದಷ್ಟೇ ಅಲ್ಲ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಕೂಡ ಆಯಕಟ್ಟಿನ ಹುದ್ದೆಗೆ ಕೆ ಟಿ ನಾಗರಾಜ್‌ ಅವರನ್ನು ನೇಮಿಸಿದ್ದರ ಬಗ್ಗೆಯೂ ಆರೋಪಗಳು ಕೇಳಿ ಬಂದಿದ್ದವು.

ಆದಾಯಕ್ಕಿಂತ ಶೇ. 207.11ರಷ್ಟು ಹೆಚ್ಚು ಆಸ್ತಿ ಹೊಂದಿರುವ ಆರೋಪಿತ ಅಧಿಕಾರಿ, ಡಿಕೆಶಿಗೆ ತಾಂತ್ರಿಕ ಸಲಹೆಗಾರ

47 ಕೋಟಿ ರು. ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದ ಆರೋಪಿತ ಅಧಿಕಾರಿಗೆ ಸಾರ್ವಜನಿಕ ಆರೋಗ್ಯ ತರಬೇತಿ ಸಂಸ್ಥೆಯ ನಿರ್ದೇಶಕರ ಹುದ್ದೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ವರ್ಗಾಯಿಸಿದ್ದರು.

47 ಕೋಟಿ ನಷ್ಟ; ಆರೋಪಿತ ಅಧಿಕಾರಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ತರಬೇತಿ ಅಧಿಕಾರಿ ಹುದ್ದೆ

 

ವರ್ಗಾವಣೆ ಪ್ರಕ್ರಿಯೆಯಲ್ಲಿ ಯಾವುದೇ ವ್ಯಾಪಾರವಾಗಲೀ, ದಂಧೆಯನ್ನಾಗಲಿ ನಡೆದಿಲ್ಲ ಮತ್ತು ಇದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts