ಬೆಂಗಳೂರು; ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಆಗಾಗ್ಗೆ ರಾಜಕೀಯ ಅಸ್ತ್ರದಂತೆ ಪ್ರಯೋಗಿಸುತ್ತಿದ್ದ ರಾಜ್ಯ ಬಿಜೆಪಿ ಸರ್ಕಾರವು ಇದೀಗ ಆರ್ಥಿಕ ಇಲಾಖೆ ನೀಡಿದ್ದ ಅಭಿಪ್ರಾಯವನ್ನೂ ಬದಿಗಿರಿಸಿ ನೆಹರೂ ಸಾಮೂಹಿಕ ವ್ಯವಸಾಯ ಸಹಕಾರ ಸಂಘ, ಮಲ್ಲಾಡಿಹಳ್ಳಿ ಅನಾಥಸೇವಾಶ್ರಮ ಸೇರಿದಂತೆ ಇನ್ನಿತರೆ ಸಾಮೂಹಿಕ ಬೇಸಾಯ ಸಹಕಾರ ಸಂಘಗಳ ಹೆಸರಿನಲ್ಲಿದ್ದ 3,092 ಎಕರೆ ವಿಸ್ತೀರ್ಣದ ಅಮೃತ್ ಮಹಲ್ ಕಾವಲ್ ಜಮೀನನ್ನು ಡಿ ನೋಟಿಫಿಕೇಷನ್ ಮಾಡಿ ಆದೇಶ ಹೊರಡಿಸಿದೆ.
ವಿಶೇಷವೆಂದರೆ ವಿಧಾನಸಭೆ ಚುನಾವಣೆ ನೀತಿ ಸಂಹಿತೆಯ ಅಧಿಸೂಚನೆ ಪ್ರಕಟಗೊಂಡ ದಿನದಂದೇ 3,092 ಎಕರೆ ವಿಸ್ತೀರ್ಣದ ಅಮೃತ್ ಮಹಲ್ ಕಾವಲ್‌ನನ್ನು ಡಿ ನೋಟಿಫಿಕೇಷನ್ ಮಾಡಿ ಹೊರಡಿಸಿರುವ ಆದೇಶವು ವಿವಾದಕ್ಕೆ ದಾರಿಮಾಡಿಕೊಡುವ ಸಾಧ್ಯತೆಗಳಿವೆ. ಈ ಆದೇಶದ ಪ್ರತಿ ಮತ್ತು ಇದಕ್ಕೆ ಸಂಬಂಧಿಸಿದಂತೆ ಸಮಗ್ರ ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಗಂಗಸಮುದ್ರ ಗ್ರಾಮದ ಅಮೃತ್ ಮಹಲ್ ಕಾವಲಿನ ಜಮೀನನ್ನು ಸಂರಕ್ಷಿಸಬೇಕು ಎಂದು ಹಾಗೂ ಯಾರಾದರೂ ಅಮೃತ್ ಮಹಲ್ ಕಾವಲು ಜಮೀನನ್ನು ಒತ್ತುವರಿ ಅತಿಕ್ರಮಣ ಮಾಡಿದರೆ ಅದನ್ನು ತೆರವುಗೊಳಿಸಬೇಕು ಎಂದು 2001ರ ಮಾರ್ಚ್ 20ರಂದು ತೀರ್ಪು ನೀಡಿತ್ತು.
ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 94-ಎ ರಂತೆ ಮತ್ತು ಕರ್ನಾಟಕ ಭೂ ಕಂದಾಯ ನಿಯಮ 107-ರ ಅನ್ವಯ ಅಮೃತ್ ಮಹಲ್ ಕಾವಲು ಜಮೀನು, ಕೆರೆ, ಅಂಗಳ, ಗುಂಡು ತೋಪು, ಸೇಂದಿವನ ಮುಂತಾದ ನಿರ್ದಿಷ್ಟ ಉದ್ದೇಶಗಳಿಗಾಗಿ ಕಾಯ್ದಿರಿಸಿರುವ ಜಮೀನುಗಳಲ್ಲಿ ಆಗಿರುವ ಅತಿಕ್ರಮಗಳನ್ನು ಸಕ್ರಮಗೊಳಿಸಲು ಅವಕಾಶವಿರುವುದಿಲ್ಲ. ಇಂತಹ ವಿಶೇಷ ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸಿರುವ ಜಮೀನುಗಳಲ್ಲಿ ಆಗಿರುವ ಅತಿಕ್ರಮಣಗಳನ್ನು ಸಕ್ರಮಗೊಳಿಸುವುದು ನಿಯಮಗಳಿಗೆ ವಿರುದ್ಧವಾಗಿರುತ್ತದೆ ಎಂದು ಹಿಂದಿನ ಸರ್ಕಾರವು ಆದೇಶ ಹೊರಡಿಸಿತ್ತು.
‘ಉಪ ವಿಭಾಗಾಧಿಕಾರಿಗಳು ಇಂತ ಪ್ರಕರಣಗಳನ್ನು ಕರ್ನಾಟಕ ಭೂ ಕಂದಾಯ ನಿಯಮ 108-ಕೆ ಅನ್ವಯ ನಿಯಮಗಳಿಗನುಸಾರವಾಗಿ ಸೂಕ್ತ ಕ್ರಮಕೈಗೊಂಡು ಒಂದು ವೇಳೆ ನಿಯಮಕ್ಕೆ ವಿರುದ್ಧವಾಗಿ ಅಮೃತ್ ಮಹಲ್ ಕಾವಲ್ ಜಮೀನುಗಳನ್ನು ಸಕ್ರಮಗೊಳಿಸಿದ್ದರೆ ಅಂತಹ ಪ್ರಕರಣಗಳನ್ನು ರದ್ದುಪಡಿಸಬೇಕು,’ ಎಂದು ಸೂಚಿಸಿತ್ತು.
ಆದರೀಗ ರಾಜ್ಯ ಬಿಜೆಪಿ ಸರ್ಕಾರವು ಹೈಕೋರ್ಟ್ ನೀಡಿದ್ದ ತೀರ್ಪು ಮತ್ತು ಹಿಂದಿನ ಆದೇಶಗಳನ್ನೂ ಉಲ್ಲಂಘಿಸಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ವ್ಯಾಪ್ತಿಯಲ್ಲಿರುವ ವಿವಿಧ ಸಾಮೂಹಿಕ ಬೇಸಾಯ ಸಹಕಾರ ಸಂಘಗಳ ಹೆಸರಿನಲ್ಲಿರುವ ಅಮೃತ್ ಮಹಲ್ ಕಾವಲು ಜಮೀನುಗಳಲ್ಲಿ ಹಲವಾರು ವರ್ಷಗಳಿಂದ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರಿಗೆ ಕರ್ನಾಟಕ ಭೂ ಭೂ ಕಂದಾಯ ಕಾಯ್ದೆ 1964ರ ಕಲಂ 94(4) ರಡಿ ಮಂಜೂರು ಮಾಡಿದೆ.
ಮೇಲ್ನೋಟಕ್ಕೆ ಅನಧಿಕೃತ ಸಾಗುವಳಿದಾರರಿಗೆ ಮಂಜೂರು ಮಾಡಲಾಗಿದೆ ಎಂದು ಆದೇಶದಲ್ಲಿ ನಮೂದಿಸಿದೆಯಾದರೂ ಇದೊಂದು ಡಿ ನೋಟಿಫಿಕೇಷನ್ ಎಂಬುದು ಎದ್ದು ಕಾಣುತ್ತಿದೆ. ಈ ಕುರಿತು ‘ದಿ ಫೈಲ್’ 2023ರ ಮಾರ್ಚ್ 8ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಅಮೃತ್ ಕಾವಲ್ ; 3,092.59 ಎಕರೆ ಡಿನೋಟಿಫಿಕೇಷನ್‌ಗೆ ಮುಂದಾದ ಸರ್ಕಾರ
ದೇಶಿ ಗೋ ತಳಿ ಸಂವರ್ಧನೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಭರ್ಜರಿ ಪ್ರಚಾರ ಪಡೆದುಕೊಂಡಿರುವ ಅಮೃತ್ ಮಹಲ್ ತಳಿಯ ರಾಸುಗಳ ಮೇವಿನ ಉದ್ದೇಶಕ್ಕಾಗಿ ಇರುವ ಜಮೀನುಗಳನ್ನು ಡಿ ನೋಟಿಫಿಕೇಷನ್ ಮಾಡುವ ಉದ್ದೇಶದಿಂದಲೇ ಈ ಜಮೀನುಗಳನ್ನು ಅಮೃತ್ ಮಹಲ್ ಕಾವಲು ಶೀರ್ಷಿಕೆಯಿಂದ ತಗ್ಗಿಸಿದೆ.
ಹೊಳಲ್ಕೆರೆ ತಾಲೂಕಿನ ಕಸಬಾ ಹೋಬಳಿಯ ಗುಂಡೇರಿ ಕಾವಲ್ ಸರ್ವೇ ನಂಬರ್ 27/1ರಲ್ಲಿ 400 ಎಕರೆ (ಮಹಾತ್ಮ ಗಾಂಧಿ ಕೋ ಆಪರೇಟೀವ್ ಕಲೆಕ್ಷನ್ ಫಾರ್ಮಿಂಗ್ ಸೊಸೈಟಿ ಲಿಮಿಟೆಡ್), ರಾಮಗಿರಿ ಹೋಬಳಿಯ ವನಕೆ ಮರಡಿ ಕಾವಲ್‌ನ ಸರ್ವೆ ನಂಬರ್ 1ರಲ್ಲಿನ 100 ಎಕರೆ (ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ), ಇದೇ ಸರ್ವೆ ನಂಬರ್‌ನಲ್ಲಿ ವನಕೆ ಮರಡಿ ಕಾವಲ್ ಸಾಮೂಹಿಕ ಸೇವಾ ಸಹಕಾರ ಸಂಘದದ ಹೆಸರಿನಲ್ಲಿದ್ದ 1,125.25 ಎಕರೆ, ರಾಮಗಿರಿ ಹೋಬಳಿಯಿ ತಾಳಿಕಟ್ಟೆ ಕಾವಲ್‌ನ ಸರ್ವೆ ನಂಬರ್ 41ರಲ್ಲಿನ 807.34 ಎಕರೆ (ಕಾರ್ಯವಲ್ಲಭ ಸೇವಾ ಬೇಸಾಯ ಸಹಕಾರಿ ಸಂಘ) ಕಸಬಾ ಹೋಬಳಿಯ ಅರೇಹಳ್ಳಿ ಕಾವಲ್‌ನ ಸರ್ವೆ ನಂಬರ್ 1ರಲ್ಲಿನ 325 ಎಕರೆ( ನೆಹರೂ ಸಾಮೂಹಿಕ ವ್ಯವಸಾಯ ಸಹಕಾರ ಸಂಘ), ರಾಮಗಿರಿ ಹೋಬಳಿಯ ಆರ್ ನುಲೇನೂರು ಗ್ರಾಮದ ಸರ್ವೆ ನಂಬರ್ 20ರಲ್ಲಿನ 255 ಎಕರೆ (ನೆಹರೂ ಸಾಮೂಹಿಕ ವ್ಯವಸಾಯ ಸಹಕಾರ ಸಂಘ), ಇದೇ ಗ್ರಾಮದ ಮತ್ತೊಂದು ಸರ್ವೆ ನಂಬರ್ 19ರಲ್ಲಿನ 80 ಎಕರೆ (ನೆಹರೂ ಸಾಮೂಹಿಕ ವ್ಯವಸಾಯ ಸಹಕಾರ ಸಂಘ) ಸೇರಿ ಒಟ್ಟಾರೆ 3,092 ಎಕರೆ ವಿಸ್ತೀರ್ಣದ ಅಮೃತ್ ಮಹಲ್ ಕಾವಲ್ ಜಮೀನು ಈಗ ಡಿ ನೋಟಿಫಿಕೇಷನ್ ಮಾಡಿರುವುದು ಆದೇಶದಿಂದ ತಿಳಿದು ಬಂದಿದೆ.
ಅಮೃತ ಮಹಲ್ ಕಾವಲ್ ಜಮೀನುಗಳನ್ನು ಡಿನೋಟಿಫೈ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲವಾದರೂ ಅಮೃತ್ ಮಹಲ್ ಕಾವಲು ಜಮೀನುಗಳು ಅರಣ್ಯ ಜಮೀನು ಎಂಬ ಪರಿಭಾಷೆಯ ವ್ಯಾಪ್ತಿಗೆ ಒಳಪಡುವುದಿಲ್ಲವೆಂದಾದಲ್ಲಿ ಮಾತ್ರ ಅತ್ಯಂತ ವಿಶೇಷ ಪ್ರಕರಣಗಳಲ್ಲಿ ಸರ್ಕಾರವು ತನಗಿರುವ ಅಧಿಕಾರವನ್ನು ಚಲಾಯಿಸಿ ಅಮೃತ್ ಮಹಲ್ ಕಾವಲು ಜಮೀನುಗಳನ್ನು ಡಿ ನೋಟಿಫೈ ಮಾಡಬಹುದು ಎಂದು ಕಾನೂನು ಇಲಾಖೆಯು ಅಭಿಪ್ರಾಯ ವ್ಯಕ್ತಪಡಿಸಿತ್ತು.
ಕಾನೂನು ಇಲಾಖೆಯು ನೀಡಿರುವ ಈ ಅಭಿಪ್ರಾಯವನ್ನಾಧರಿಸಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ವ್ಯಾಪ್ತಿಯಲ್ಲಿನ ವಿವಿಧ ಸಾಮೂಹಿಕ ಬೇಸಾಯ ಸಹಕಾರ ಸಂಘಗಳ ಹೆಸರಿನಲ್ಲಿರುವ ಜಮೀನುಗಳನ್ನು ಸರ್ಕಾರಕ್ಕೆ ಹಿಂಪಡೆದು ಅದನ್ನು ಸಾಗುವಳಿದಾರರಿಗೆ ಮಂಜೂರು ಮಾಡುವ ಪ್ರಸ್ತಾವನೆಗೆ ಕಂದಾಯ ಸಚಿವರ ಆದೇಶ ಕೋರಿ ಕಡತ ಸಲ್ಲಿಕೆಯಾಗಿತ್ತು. ಆದರೆ ಡಿ ನೋಟಿಫಿಕೇಷನ್ ಮಾಡುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ತಿರಸ್ಕರಿಸಿತ್ತು.
ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯದಲ್ಲೇನಿದೆ?
ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ಪ್ರಸ್ತಾವನೆಗೆ ಸಂಬಂಧಿಸಿದಂತೆ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ಹಾಗೂ ಉಚ್ಛ ನ್ಯಾಯಾಲಯದ ಆದೇಶದನ್ವಯ ಅಮೃತ್ ಮಹಲ್ ಕಾವಲ್/ಜಮೀನುಗಳೆಂದು ನಮೂದಾಗಿರುವ ಯಾವುದೇ ಜಮೀನುಗಳನ್ನು ಬೇರಾವುದೇ ಉದ್ದೇಶಕ್ಕಾಗಿ ಮಂಜೂರು ಮಾಡುವುದಕ್ಕಾಗಿ ಅವಕಾಶವಿರುವುದಿಲ್ಲವಾದ್ದರಿಂದ ಸದರಿ ಪ್ರಸ್ತಾವನೆಗೆ ಆರ್ಥಿಕ ಸಹಮತಿ ಇಲ್ಲ,’ ಎಂದು ಆಡಳಿತ ಇಲಾಖೆಗೆ 2023ರ ಫೆ.22ರಂದು ತನ್ನ ಅಭಿಪ್ರಾಯವನ್ನು ತಿಳಿಸಿತ್ತು. ಆದರೆ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಬದಿಗಿರಿಸಿ ಡಿ ನೋಟಿಫಿಕೇಷನ್ ಆದೇಶ ಹೊರಡಿಸಿದೆ. ಈ ಕುರಿತು ‘ದಿ ಫೈಲ್’ 2023ರ ಮಾರ್ಚ್ 23ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
3,092 ಎಕರೆ ಡಿನೋಟಿಫಿಕೇಷನ್; ಕಂದಾಯ ಇಲಾಖೆ ಪ್ರಸ್ತಾವನೆ ತಿರಸ್ಕರಿಸಿದ ಆರ್ಥಿಕ ಇಲಾಖೆ
ಅಮೃತ ಮಹಲ್ ಕಾವಲು ಜಮೀನುಗಳನ್ನು ಅರಣ್ಯ ಜಮೀನುಗಳೆಂದು ವರ್ಗೀಕರಿಸಬೇಕು. ಮತ್ತು ಗೋಮಾಳ ಜಮೀನುಗಳನ್ನು ಗೋಮಾಳ ಶೀರ್ಷಿಕೆಯಿಂದ ತಗ್ಗಿಸಲು ಅಳವಡಿಸಿಕೊಂಡಿರುವ ಮಾನದಂಡಗಳ ಮಾದರಿಯಲ್ಲೇ ಅಮೃತ ಮಹಲ್ ಕಾವಲು ಜಮೀನುಗಳನ್ನು ಅಮೃತ ಮಹಲ್ ಕಾವಲು ಶೀರ್ಷಿಕೆಯಿಂದ ತಗ್ಗಿಸಲು ಮಾನದಂಡವೆಂದು ಪರಿಗಣಿಸಿ ಕಂದಾಯ ಇಲಾಖೆಗೆ ವರ್ಗಾಯಿಸಲು ಅವಕಾಶವಿಲ್ಲ. ಈ ರೀತಿ ವರ್ಗಾಯಿಸಬೇಕಾದಲ್ಲಿ ಕೇಂದ್ರ ಸರ್ಕಾರದ ಪೂರ್ವಾನುಮತಿ ಅವಶ್ಯಕ.
ಅಲ್ಲದೇ ಅಮೃತ್ ಕಾವಲ್ ಜಮೀನುಗಳನ್ನು ಡಿನೋಟಿಫೈ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಪಶುಸಂಗೋಪನೆ ಇಲಾಖೆಯು ಉಚ್ಛ ನ್ಯಾಯಾಲಯವು ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿದೆ. ರಿಟ್ ಅರ್ಜಿ (ಸಂಖ್ಯೆ 17954/1997 ದಿನಾಂಕ 20/03/2001)ಯ ತೀರ್ಪು ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಪೀಠದ ಮುಂದಿದ್ದ ಅರ್ಜಿ (ಸಂಖ್ಯೆ 2013/06 ಮತ್ತು 12ರ 2013) (ಎಸ್‌ಝಡ್) ಆದೇಶಗಳನ್ನೂ ಪ್ರಸ್ತಾಪಿಸಿತ್ತು. ಈ ಕುರಿತು ‘ದಿ ಫೈಲ್’ 2023ರ ಮಾರ್ಚ್ 10ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
3,092 ಎಕರೆ ಡಿನೋಟಿಫಿಕೇಷನ್; ಕೇಂದ್ರ ಸರ್ಕಾರದ ಅನುಮತಿಯಿಲ್ಲ, ಹೈಕೋರ್ಟ್ ತೀರ್ಪು ಪಾಲನೆಯೂ ಇಲ್ಲ
‘ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅಮೃತ್ ಮಹಲ್ ಕಾವಲು ಜಮೀನುಗಳೂ ಸೇರಿದಂತೆ ರಾಜ್ಯದ ಇತರೆಡೆಯಲ್ಲಿ ಕಂದಾಯ ಇಲಾಖೆಯ ದಾಖಲೆಗಳಲ್ಲಿ (ಪಹಣಿ/ಆರ್‌ಟಿಸಿ) ಅಮೃತ್ ಮಹಲ್ ಕಾವಲು ಜಮೀನುಗಳೆಂದು ನಮೂದಾಗಿರುವ ಯಾವುದೇ ಜಮೀನುಗಳನ್ನು ಬೇರಾವುದೇ ಉದ್ದೇಶಕ್ಕಾಗಿ ಮಂಜೂರು ಮಾಡುವುದಕ್ಕೆ ಅವಕಾಶವಿರುವುದಿಲ್ಲ,’ ಎಂದು ಅಭಿಪ್ರಾಯ ನೀಡಿರುವುದು ಗೊತ್ತಾಗಿದೆ.
ಸಾಮೂಹಿಕ ಬೇಸಾಯ ಸಹಕಾರಿ ಸಂಘಗಳಿಗೆ ಮಂಜೂರಾದ ಜಮೀನುಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವವರಿಗೇ ಮಂಜೂರು ಮಾಲು ಕ್ರಮ ಕೈಗೊಳ್ಳಬೇಕು ಎಂದು ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ ಅವರು ಮೌಖಿಕವಾಗಿ ಅಧಿಕಾರಿಗಳಿಗೆ ಸೂಚಿಸಿದ್ದರು. ಇದನ್ನಾಧರಿಸಿ ಕಂದಾಯ ಸಚಿವ ಆರ್ ಅಶೋಕ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಅವರು ಸಚಿವ ಸಂಪುಟಕ್ಕೆ ಕಡತ ಮಂಡಿಸಲು ಕಂದಾಯ ಇಲಾಖೆಗೆ ನಿರ್ದೇಶಿಸಿದ್ದನ್ನು ಸ್ಮರಿಸಬಹುದು.