ಬೆಂಗಳೂರು; 2 ಬಿಯಲ್ಲಿದ್ದ ಮುಸ್ಲಿಂ ಸಮುದಾಯವನ್ನು ಶೇ.10ರಷ್ಟು ಮೀಸಲಾತಿ ಇರುವ ಆರ್ಥಿಕವಾಗಿ ಹಿಂದುಳಿದ ವರ್ಗ(EWS) ಕೋಟಾಕ್ಕೆ ಸ್ಥಳಾಂತರಿಸಲು ಘೋಷಿಸಿದ್ದ ರಾಜ್ಯ ಬಿಜೆಪಿ ಸರ್ಕಾರವು ಮಾದರಿ ನೀತಿ ಸಂಹಿತೆ ಜಾರಿಯಾದ ಕಾರಣ ಹಿಂದಿನ ದಿನಾಂಕವನ್ನು ನಮೂದಿಸಿ ತರಾತುರಿಯಲ್ಲಿ ಆದೇಶ ಹೊರಡಿಸಿರುವುದು ಇದೀಗ ಬಹಿರಂಗವಾಗಿದೆ.
ಅಲ್ಲದೇ 2023ರ ಮಾರ್ಚ್ 27ರಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರು ರಜೆ ಮೇಲೆ ತೆರಳಿದ್ದರು ಎಂದು ತಿಳಿದು ಬಂದಿದೆ. ಆದರೂ ಸಹ ಅದೇ ದಿನಾಂಕದಂದು ಆದೇಶ ಹೊರಡಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಹಿಂದಿನಿಂದ ಜಾರಿಯಲ್ಲಿರುವಂತೆ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿ ಮೀಸಲಾತಿ ಪಡೆಯದ ಜಾತಿಗಳು ಹಾಗೂ ಹಿಂದುಳಿದ ವರ್ಗಗಳ ಪಟ್ಟಿಯಿಂದ ಆರ್ಥಿಕ ದುರ್ಬಲ ವರ್ಗದ ಮೀಸಲಾತಿಗೆ ವರ್ಗಾವಣೆಗೊಂಡ 2 ಬಿ ಸಮುದಾಯಗಳು,’ ಎಂದು ಆದೇಶದಲ್ಲಿ ವಿವರಿಸಲಾಗಿದೆ.
2023ರ ಮಾರ್ಚ್ 27ರಂದು ಹೊರಡಿಸಿರುವ ಈ ಅದೇಶಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರು ಸಹಿ ಹಾಕಿದ್ದಾರೆ. ಆದರೆ ವಾಸ್ತವದಲ್ಲಿ ಅಂದು ತುಳಸಿ ಮದ್ದಿನೇನಿ ಅವರು ಕರ್ತವ್ಯದಲ್ಲಿ ಇರಲಿಲ್ಲ. ಬದಲಾಗಿ ಅವರು ಗೃಹ ಪ್ರವೇಶದಲ್ಲಿ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಹಲವಾರು ಐಎಎಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಗೃಹ ಪ್ರವೇಶ ಕಾರ್ಯಕ್ರಮದಲ್ಲಿದ್ದರು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೆಸರು ಹೇಳಲಿಚ್ಛಿಸದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ತಿಳಿಸಿದ್ದಾರೆ.
ಮೇಲಾಗಿ ಇಡಬ್ಲ್ಯೂಎಸ್ ಮೀಸಲಾತಿ ಸಂಬಂಧದ ಕಡತವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರ ಬಳಿ ಇತ್ತು ಎಂದು ವಿಶ್ವಸನೀಯ ಮೂಲಗಳು ‘ದಿ ಫೈಲ್’ಗೆ ತಿಳಿಸಿವೆ.
ವಿಧಾನಸಭೆಯ ಚುನಾವಣೆ ದಿನಾಂಕ ಪ್ರಕಟಣೆ ಮತ್ತು ಮಾದರಿ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸರ್ಕಾರವು ತಕ್ಷಣವೇ ಹಿಂದಿನ ದಿನಾಂಕವನ್ನು ನಮೂದಿಸಿ ಇಡಬ್ಲ್ಯೂಎಸ್ ಕುರಿತಾದ ಆದೇಶವನ್ನು ಹೊರಡಿಸಿದೆ ಎಂದು ಗೊತ್ತಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಜಾತಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಾತಿಗಳ ಅರ್ಹ ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಾತಿ ಹಾಗೂ ಉದ್ಯೋಗಕ್ಕಾಗಿ ಶೇ.10ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ.
ರಾಜ್ಯದ ನಾಗರಿಕ ಹುದ್ದೆಗಳು ಮತ್ತು ಸೇವೆಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಆರ್ಥಿಕ ದುರ್ಬಲ ವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಗುವುದು ಎಂದು ಸರ್ಕಾರ ಪ್ರಕಟಿಸಿತ್ತು. ವಾರ್ಷಿಕ ಆದಾಯ 8 ಲಕ್ಷಗಳಿಗಿಂತಲೂ ಕಡಿಮೆ ಇರುವ ವ್ಯಕ್ತಿಯು ಆರ್ಥಿಕವಾಗಿ ದುರ್ಬಲ ವರ್ಗಗಳ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹನಾಗಿರುತ್ತಾನೆ.
ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿತ್ತು. ಈ ಮೀಸಲಾತಿಯನ್ನು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ತಲಾ ಶೇ. 2ರಷ್ಟು ಹಂಚಿಕೆ ಮಾಡಲೂ ಸಂಪುಟ ಸಭೆ ತೀರ್ಮಾನಿಸಿತ್ತು. 2 ಬಿಯಲ್ಲಿದ್ದ ಮುಸ್ಲಿಂ ಸಮುದಾಯವನ್ನು ಶೇ.10ರಷ್ಟು ಮೀಸಲಾತಿ ಇರುವ EWS ಕೋಟಾಕ್ಕೆ ಸ್ಥಳಾಂತರಿಸುತ್ತಿರುವುದಾಗಿ ಘೋಷಣೆ ಮಾಡಿತ್ತು.
ಇದರಿಂದಾಗಿ 2ಬಿ ಪ್ರವರ್ಗದಲ್ಲಿ ಉಳಿಯುವ ಶೇ. 4 ಮೀಸಲಾತಿಯನ್ನು, ಒಕ್ಕಲಿಗ ಸಮುದಾಯಕ್ಕೆ(2ಸಿ) ಮತ್ತು ಶೇ. 2ರಷ್ಟು ಮತ್ತು ಲಿಂಗಾಯತ ಸಮುದಾಯಕ್ಕೆ (2ಡಿ) ಶೇ. 2ರಷ್ಟು ಹಂಚಿಕೆ ಮಾಡಲಾಗುವುದು ಎಂದು ಸಂಪುಟ ಸಭೆ ಸ್ಪಷ್ಟಪಡಿಸಿತ್ತು. ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ, 2ಸಿಯಲ್ಲಿರುವ ಒಕ್ಕಲಿಗರಿಗೆ ಶೇ. 4ರಿಂದ ಶೇ. 6ರಷ್ಟು ಹಾಗೂ 2ಡಿಯಲ್ಲಿರುವ ವೀರಶೈವ ಹಾಗೂ ಲಿಂಗಾಯತರಿಗೆ ಶೇ. 5ರಿಂದ ಶೇ. 7ರಷ್ಟು ಮೀಸಲಾತಿ ಹೆಚ್ಚಳವಾದಂತಾಗಿದೆ.