‘ದಿ ಫೈಲ್‌’ ಹತ್ತಿಕ್ಕುವ ಯತ್ನ; ಮಾಹಿತಿದಾರನ ವಿವರ ಒದಗಿಸಲು ಸೈಬರ್‌ ಪೊಲೀಸ್‌ ನೋಟಿಸ್‌ ಜಾರಿ

ಬೆಂಗಳೂರು; ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ಸೇರಿದಂತೆ ಮೂವರನ್ನು ಸೇವೆಗೆ ಪುನರ್‌ ಸ್ಥಾಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ದಾಖಲೆ ಸಹಿತ ಪ್ರಕಟಿಸಿದ್ದ ‘ದಿ ಫೈಲ್‌’ಗೆ ಸೈಬರ್‌ ಪೊಲೀಸ್‌ ಕೇಂದ್ರ ವಿಭಾಗವು ನೋಟೀಸ್‌ ಜಾರಿ ಮಾಡಿದೆ.

 

ಮಾದೇಗೌಡ ಸೇರಿದಂತೆ ಇತರೆ ಮೂವರು ಆರೋಪಿಗಳನ್ನು ಸೇವೆಯಲ್ಲಿ ಪುನರ್‌ ಸ್ಥಾಪಿಸುವ ಸಂಬಂಧ ಸಲ್ಲಿಕೆಯಾಗಿದ್ದ ಟಿಪ್ಪಣಿ ಹಾಳೆಗಳನ್ನು ‘ದಿ ಫೈಲ್‌’ಗೆ ಮಾಹಿತಿ ನೀಡಿದವರ ಹೆಸರು, ಫೋನ್‌ ನಂಬರ್‌, ಐ ಡಿ ಫ್ರೂಫ್‌, ವಿಳಾಸವನ್ನು ತನಿಖೆಗೆ ಒದಗಿಸಬೇಕು ಎಂದು ನೋಟೀಸ್‌ನಲ್ಲಿ ಸೂಚಿಸಿದೆ.

 

ಕಳೆದ ಮೂರು ವರ್ಷಗಳಿಂದಲೂ ‘ದಿ ಫೈಲ್‌’ ಸ್ವತಂತ್ರ ಸುದ್ದಿ ಜಾಲತಾಣವು ಸಾರ್ವಜನಿಕ ಆಡಳಿತ, ವಿವಿಧ ತನಿಖಾ ಸಂಸ್ಥೆಗಳ ತನಿಖಾ ವರದಿಗಳು, ಕೋವಿಡ್‌ ಅವಧಿಯಲ್ಲಿ ನಡೆದಿದ್ದ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿನ ಅಕ್ರಮಗಳು, ಹಿಂದಿನ ಅಬಕಾರಿ ಸಚಿವ ಎಚ್‌ ನಾಗೇಶ್‌ 1 ಕೋಟಿ ಲಂಚಕ್ಕೆ ಇರಿಸಿದ್ದ ಬೇಡಿಕೆ ಪ್ರಕರಣ ಮತ್ತು ಇತ್ತೀಚಿಗೆ ನಡೆದಿರುವ ಕಾಕಂಬಿ ರಫ್ತು ಹಗರಣ, ಸರ್ಕಾರದ ಕಾರ್ಯಕ್ಷಮತೆ, ಕರ್ತವ್ಯಲೋಪ ಎಸಗಿದ ಐಎಎಸ್‌ನಿಂದ ಕೆಳಗಿನ ಹಂತದ ಅಧಿಕಾರಿಗಳು, ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳೂ ಸೇರಿದಂತೆ ಹಲವು ವರದಿಗಳನ್ನು ದಾಖಲೆ ಸಹಿತ ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಕಟಿಸುತ್ತ ಬಂದಿದೆ.

 

ನವೆಂಬರ್‌ 10ರಂದು ‘ದಿ ಫೈಲ್‌’  ಪ್ರಕಟಿಸಿದ್ದ ವರದಿಯಲ್ಲಿ ಲಗತ್ತಿಸಿರುವ ಟಿಪ್ಪಣಿ ಹಾಳೆ ಒದಗಿಸಿದ ಮಾಹಿತಿದಾರನ ವಿಳಾಸ, ಫೋನ್‌ ನಂಬರ್, ಐ ಡಿ ಫ್ರೂಫ್‌ ಸಲ್ಲಿಸಬೇಕು ಎಂದು ಸೈಬರ್‌ ಅಪರಾಧ ಕೇಂದ್ರ ವಿಭಾಗವು  ಸೂಚಿಸಿರುವುದು ‘ದಿ ಫೈಲ್‌’ ಸ್ವತಂತ್ರ ಸುದ್ದಿಜಾಲತಾಣವನ್ನು ಹತ್ತಿಕ್ಕುವ ನಡೆಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಶಿಕ್ಷಕರ ಅಕ್ರಮ ನೇಮಕ; ಆರೋಪಿ ಮಾದೇಗೌಡ ಸೇರಿ ಮೂವರ ಸೇವೆಗೆ ಪುನರ್‌ ಸ್ಥಾಪಿಸಲು ಪ್ರಸ್ತಾವನೆ

 

‘ದಿ ಫೈಲ್‌’ಗೆ ನೋಟೀಸ್‌ ನೀಡಿರುವ ಸಂಬಂಧ ದಿ ವೈರ್‌, ದಿ ನ್ಯೂಸ್‌ ಮಿನಿಟ್‌, ಈ ದಿನ ಜಾಲತಾಣ, ಪ್ರಸ್ತುತ, ಪ್ರತಿಧ್ವನಿ,  ವಾರ್ತಾಭಾರತಿ   ಮತ್ತು ದ ಹಿಂದೂ ಆಂಗ್ಲ ದೈನಿಕ ಕೂಡ ವರದಿಯನ್ನು ಪ್ರಕಟಿಸಿವೆ.

 

 

ನೋಟೀಸ್‌ನಲ್ಲಿ ಏನಿದೆ?

 

ದಿನಾಂಕ 10/11/2022 ರಂದು ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಇ-ಆಫೀಸ್‌ ಕಡತ ಸಂಖ್ಯೆ 907255ಯ ಟಿಪ್ಪಣಿ ಹಾಳೆಗಳು ಸೋರಿಕೆಯಾಗಿ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಬಗ್ಗೆ ದೂರನ್ನು ಸ್ವೀಕರಿಸಿದ್ದು ಅದರಂತೆ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಮೊ ಸಂ 829/2022 ಐಟಿ ಆಕ್ಟ್‌ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿ 10/11/2022ರಂದು ಸಮಯ 10.09 ಗಂಟೆಗೆ https;the-file.in/2022/11/governance/14051/ ಯು ಆರ್‌ ಎಲ್‌ ಮೂಲಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಇ-ಆಫೀಸ್‌ ಕಡತ ಸಂಖ್ಯೆ 907255 ಟಿಪ್ಪಣಿ ಹಾಳೆಗಳು ತಮ್ಮ the file ಅಂತರ್ಜಾಲ ಮಾಧ್ಯಮದ ಮೂಲಕ ಪ್ರಸರಣಗೊಂಡಿದ್ದು ಆದ್ದರಿಂದ ಸದರಿ ಮಾಹಿತಿಯನ್ನು the file ಅಂತರ್ಜಾಲ ಮಾಧ್ಯಮಕ್ಕೆ ಸಲ್ಲಿಸಿರುವ ಅಥವಾ ನೀಡಿರುವ ವ್ಯಕ್ತಿಗಳ ಮಾಹಿತಿಯನ್ನು ಪ್ರಕರಣದಲ್ಲಿ ತನಿಖೆಯ ಸಲುವಾಗಿ ಈ ಕೆಳಗೆ ನಮೂದಿಸಿರುವ ಮಾಹಿತಿಯ ಹಾಗೂ ದಾಖಲೆಗಳೊಂದಿಗೆ ನೀಡುವಂತೆ ಈ ಮೂಲಕ ಸೂಚಿಸಲಾಗಿದೆ.

 

ಸೈಬರ್‌ ಪೊಲೀಸ್‌ನ ಕೇಂದ್ರ ವಿಭಾಗವು ಕಳಿಸಿರುವ ನೋಟೀಸ್‌ನ ಪ್ರತಿ

 

1. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಇ ಆಫೀಸ್‌ ಕಡತ ಸಂಖ್ಯೆ 907255ಯ ಟಿಪ್ಪಣಿ ಹಾಳೆಗಳನ್ನು the file ಅಂತರ್ಜಾಲ ಮಾಧ್ಯಮಕ್ಕೆ ಸಲ್ಲಿಸಿರುವ ವ್ಯಕ್ತಿಯ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಹಾಗೂ ಐ ಡಿ ಫ್ರೂಫ್‌

 

2. the file ಅಂತರ್ಜಾಲ ಮಾಧ್ಯಮದ ಕೆಲಸಗಾರನಾಗಿದ್ದಲ್ಲಿ ಆತನ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಹಾಗೂ ಆಫೀಸ್ ಐ ಡಿ ಕಾರ್ಡ್‌

 

ಸೈಬರ್‌ ಘಟಕದ ಪೊಲೀಸ್‌ ವಿಭಾಗವು ಕಳಿಸಿರುವ ನೋಟೀಸ್‌ಗೆ  ‘ದಿ ಫೈಲ್’  ಉತ್ತರವನ್ನು  ರವಾನಿಸಿದೆ.

 

ದಿನಾಂಕ 05-01-2023ರಂದು ನೀವು ಕಳಿಸಿದ ಇ-ಮೇಲ್ ನಮಗೆ ಸೇರಿರುತ್ತದೆ. ಪಾರದರ್ಶಕ ಮೀಡಿಯಾ ಫೌಂಡೇಷನ್ ದಿ ಫೈಲ್’ ಸ್ವತಂತ್ರ ಮಾಧ್ಯಮವನ್ನು ಮುನ್ನೆಡೆಸುತ್ತಿದೆ. ಅದು ತನ್ನ ಸುದ್ದಿಗಳನ್ನು ವೆಬ್‌ಸೈಟ್ ಮುಖಾಂತರ ವರದಿಯನ್ನು ಪ್ರಕಟಿಸುತ್ತದೆ.  ನೀವು ಉಲ್ಲೇಖಿಸಿದ ಪ್ರಕರಣದ ಮಾಹಿತಿಯು ಸರ್ಕಾರಿ ದಾಖಲೆಯ ವಿಷಯವಾಗಿದ್ದು ಅದು ಸಾರ್ವಜನಿಕ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯಾಗಿರುತ್ತದೆ. ಅದಲ್ಲದೇ ಸಂವಿಧಾನದ ವಿಧಿ 19(1)(ಎ) ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿರುತ್ತದೆ.

 

ಒಂದು ಮಾಧ್ಯಮ ಸಂಸ್ಥೆಯಾಗಿ ಸುದ್ದಿಯ ಮೂಲದ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಅದಲ್ಲದೇ ನೀವು ಕೇಳಿದ ಪ್ರಕರಣ ಮತ್ತುಅದರ ಮಾಹಿತಿಯು ಸರ್ಕಾರಿ ಗೌಪ್ಯತೆ ಕಾಯ್ದೆ 1923 ರ ಅಡಿಯಲ್ಲಿ ಬರುತ್ತದೆಯೋ ಎಂಬ ವಿಷಯವನ್ನು ತಿಳಿಸಿರುವುದಿಲ್ಲ.

 

ದಯವಿಟ್ಟು ನೀವು ಉಲ್ಲೇಖಿಸಿದ ಪ್ರಕರಣ ಸರ್ಕಾರಿ ಗೌಪ್ಯತಾ ಕಾಯ್ದೆ 1923ರ ಅಡಿಯಲ್ಲಿ ಬರುವ ವಿಷಯವಾಗಿದ್ದಲ್ಲಿ, ನಮಗೆ ತಿಳಿಸಿದಲ್ಲಿ, ನಾವು ತಾವು ಕೇಳಿದ ವಿವರಗಳನ್ನು ಕೊಡುವ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಮಗೆ ಸವಿನಯವಾಗಿ ತಿಳಿಯಬಯಸುತ್ತೇವೆ ಎಂದು ದಿ ಫೈಲ್‌ ಲಿಖಿತ ಉತ್ತರವನ್ನು ಸೈಬರ್‌ ಪೊಲೀಸ್‌ನ ಕೇಂದ್ರ ವಿಭಾಗದ ಅಧಿಕೃತ ಇ-ಮೈಲ್‌ಗೆ ರವಾನಿಸಿದೆ.

 

ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣವನ್ನು ತನಿಖೆಗೆ ಸಿಐಡಿಗೆ ಒಪ್ಪಿಸಿದ್ದ ಸಚಿವ ಬಿ ಸಿ ನಾಗೇಶ್‌ ಅವರು ಇದು ಕಾಂಗ್ರೆಸ್‌ ಅವಧಿಯಲ್ಲಿ ನಡೆದಿದ್ದ ಅಕ್ರಮ ಎಂದು ಆರೋಪಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts