ದುಂದುವೆಚ್ಚಕ್ಕೆ ಕಡಿವಾಣ ಹಾಕದೇ ವಿದ್ಯಾರ್ಥಿ ವೇತನ ನೀಡಿಕೆಗೆ ಅನುದಾನ ಕೊರತೆ ನೆಪ ಒಡ್ಡಿದ ಸರ್ಕಾರ

ಬೆಂಗಳೂರು; ಹಕ್ಕುಪತ್ರ ವಿತರಣೆಯಂತಹ ಸಾರ್ವಜನಿಕ ಕಾರ್ಯಕ್ರಮಗಳ ಆಯೋಜನೆ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ದುಂದುವೆಚ್ಚ ಮಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರವು ಪ್ರಾಥಮಿಕ, ಮಾಧ್ಯಮಿಕ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನೀಡಲು ಮಾತ್ರ ಅನುದಾನದ ಕೊರತೆ ಎಂಬ ಕಾರಣವನ್ನು ಮುಂದೊಡ್ಡುತ್ತಿರುವುದು ಇದೀಗ ಬಹಿರಂಗವಾಗಿದೆ.

 

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ವಿವಾದಗಳಲ್ಲೇ ಮುಳುಗಿ ಹೋಗಿರುವ ರಾಜ್ಯ ಸರ್ಕಾರವು ವಿದ್ಯಾರ್ಥಿ ವೇತನ ಬಿಡುಗಡೆ ವಿಚಾರದಲ್ಲಿ ಮಾತ್ರ ಹಿಂದೆ ಬಿದ್ದಿರುವುದು ಗೊತ್ತಾಗಿದೆ.

 

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ವಿವಿಧ ಇಲಾಖೆಗಳು ಸಾಧಿಸಿರುವುದಕ್ಕೆ ಸಂಬಂಧಿಸಿದಂತೆ 2022ರ ಡಿಸೆಂಬರ್‌ 16ರಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಧ್ಯಕ್ಷತೆಯಲ್ಲಿ ನಡೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಒದಗಿಸಿರುವ ಇಲಾಖಾವಾರು ಮಾಹಿತಿಯಲ್ಲಿ ವಿದ್ಯಾರ್ಥಿ ವೇತನಕ್ಕೆ ಎದುರಾಗಿರುವ ಅನುದಾನದ ಕೊರತೆ ಕುರಿತಾದ ಅಂಶವಿದೆ.

 

‘ಅನುದಾನದ ಕೊರತೆಯಿಂದಾಗಿ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಲಭ್ಯವಿರುವ ಅನುದಾನವನ್ನು ಸ್ವೀಕೃತ ಅರ್ಜಿಗಳಿಗೆ ಅನುಗುಣವಾಗಿ ವಿದ್ಯಾರ್ಥಿ ವೇತನವನ್ನು ಹಂಚಲಾಗುವುದು,’ ಎಂದು ಅಧಿಕಾರಿಗಳು ಸಭೆಯಲ್ಲಿ ಹೇಳಿರುವುದು ನಡವಳಿಯಿಂದ ಗೊತ್ತಾಗಿದೆ.

 

ಅಲ್ಲದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಇಲಾಖೆಗಳು ಆದಷ್ಟು ಬೇಗ ಅನುದಾನ ಬಳಸಿಕೊಂಡು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದೂ ಮುಖ್ಯ ಕಾರ್ಯದರ್ಶಿಗಳು ಸೂಚಿಸಿರುವುದು ತಿಳಿದು ಬಂದಿದೆ.

 

ಪ್ರಸಕ್ತ ಸಾಲಿನ ಆರ್ಥಿಕ ವರ್ಷ (2022-23) ಪೂರ್ಣಗೊಳ್ಳಲು ಇನ್ನು ಕೇವಲ ಮೂರೇ ಮೂರು ತಿಂಗಳಿದ್ದರೂ ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಂಚಿಕೆ ಮಾಡಿದ್ದ ಒಟ್ಟು ಅನುದಾನದ ಪೈಕಿ ನವೆಂಬರ್‌ ಅಂತ್ಯದವರೆಗೆ 8,199 ಕೋಟಿ ರು. ಬಿಡುಗಡೆಗೆ ಬಾಕಿ ಉಳಿಸಿಕೊಂಡಿದೆ. ಅದೇ ರೀತಿ 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಒಟ್ಟು ಕಾರ್ಯಕ್ರಮಗಳ ಪೈಕಿ ಇನ್ನೂ 122 ಕಾರ್ಯಕ್ರಮಗಳಿಗೆ ಚಾಲನೆಯೇ ದೊರೆತಿಲ್ಲ.

 

ನಗರಾಭಿವೃದ್ಧಿ, ಕೃಷಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಎಲ್ಲಾ ಇಲಾಖೆಗಳು ಅಭಿವೃದ್ಧಿ ಪಥದಲ್ಲಿವೆ ಎಂದು ಭರ್ಜರಿ ಪ್ರಚಾರದಲ್ಲಿ ಮೇಳೈಸುತ್ತಿವೆ. ಆದರೆ ವಾಸ್ತವದಲ್ಲಿ 32 ಇಲಾಖೆಗಳು ಶೇ. 50ರ ಗಡಿಯನ್ನು ದಾಟಿಲ್ಲ. ಕೆಲ ಇಲಾಖೆಗಳು ಶೇ. 30ರ ಗಡಿಯನ್ನೂ ದಾಟಿ ಬಂದಿಲ್ಲ. ಬಹುತೇಕ ಇಲಾಖೆಗಳು ಕಳಪೆ ಪ್ರದರ್ಶನ ತೋರಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ವಿಧಾನಪರಿಷತ್‌ಗೆ ಪಟ್ಟಿಯನ್ನು ಒದಗಿಸಿದ್ದಾರೆ.

 

2022-23ರ ಸಾಲಿನ ಬಜೆಟ್‌ನಲ್ಲಿ ಒಟ್ಟು ಅನುದಾನದಲ್ಲಿಯೆ 15,460 ಕೋಟಿ ಬಾಕಿ ಉಳಿಸಿಕೊಂಡು ಕೇವಲ ಶೇ.47ರಷ್ಟು ಪ್ರಗತಿ ಸಾಧಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts