ಕಾಕಂಬಿ ಹಗರಣ; ಡಿ ಸಿ ಆದೇಶ ಉಲ್ಲಂಘಿಸಿ ಮುಂಬೈ ಕಂಪನಿಗೆ ಗೋವಾ ಮಾರ್ಗದ ರಹದಾರಿ

photo credit; k gopalaiaha twitter account

ಬೆಂಗಳೂರು; ಕರ್ನಾಟಕದ ಸಕ್ಕರೆ ಕಾರ್ಖಾನೆಗಳಲ್ಲಿರುವ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಎತ್ತುವಳಿ ಮಾಡಿ ರಫ್ತು ಮಾಡಲು ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈ ಲಿಮಿಟೆಡ್‌ಗೆ ಅನುಮೋದನೆ ನೀಡಿರುವುದರ ಹಿಂದೆ ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರನ ಹೆಸರು ಕೇಳಿ ಬಂದಿರುವ ಬೆನ್ನಲ್ಲೇ ಇದೀಗ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಅಧಿಸೂಚನೆ ಉಲ್ಲಂಘಿಸಿ ಕೆ ಎನ್‌ ರಿಸೋರ್ಸ್‌ ಕಂಪನಿಗೆ ಬೆಳಗಾವಿ ಉಪ ಆಯುಕ್ತರು ಗೋವಾ ಮಾರ್ಗದ ರಹದಾರಿ ಪತ್ರ ನೀಡಿರುವುದು ಬಹಿರಂಗವಾಗಿದೆ.

 

ಉತ್ತರ ಕನ್ನಡ ಜಿಲ್ಲೆಯ ರಾಮನಗರ-ಅನಮೋಡ್ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಡಾ ಕೆ ಹರೀಶ್‌ಕುಮಾರ್‌ ಅವರು (ಅಧಿಸೂಚನೆ ಸಂಖ್ಯೆ: ಡಿ.ಸಿ.ಬಿ./ಎಂ.ಎ.ಜಿ-1/ಸಿ.ಆರ್-9/2018-19 ದಿನಾಂಕ 07-11-2020) ರಂದು ಆದೇಶ ಹೊರಡಿಸಿದ್ದರು. ಈ ಆದೇಶಕ್ಕೆ ವಿರುದ್ಧವಾಗಿ ಬೆಳಗಾವಿ ಉಪ ಆಯುಕ್ತರು ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ರಹದಾರಿ ಪತ್ರ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಎಂ-2 ಲೈಸೆನ್ಸ್‌ ಇಲ್ಲದಿದ್ದರೂ ನಿಯಮಬಾಹಿರವಾಗಿ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಎತ್ತುವಳಿ ಮಾಡಲು ಅನುಮೋದನೆ ನೀಡಿರುವುದು ಚರ್ಚೆಗೆ ಗ್ರಾಸವಾಗಿರುವ ಹೊತ್ತಿನಲ್ಲೇ ರಾಮನಗರ-ಅನಮೋಡ್‌-ಮೊಲ್ಲೇಮ್‌  ಮೂಲಕ ಗೋವಾಕ್ಕೆ ಸಂಚರಿಸಲು ಅಬಕಾರಿ ಇಲಾಖೆಯ ಬೆಳಗಾವಿ ಉಪ ಆಯುಕ್ತರು ಕಾನೂನುಬಾಹಿರವಾಗಿ ರಹದಾರಿ ಪತ್ರ ನೀಡಿದ್ದಾರೆ ಎಂಬ ಗುರುತರವಾದ ಆರೋಪಗಳು ವಿರುದ್ಧ ಕೇಳಿ ಬಂದಿವೆ.

 

ಉತ್ತರ ಕನ್ನಡ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶದಲ್ಲೇನಿದೆ?

 

ಅಗತ್ಯ ಸಾಮಗ್ರಿಗಳಾದ ಹಾಲು, ಆಹಾರ ಪದಾರ್ಥ, ಆಹಾರ ವರ್ಧಕ, ಬಾಕ್ಸೆಟ್, ಮ್ಯಾಂಗನೀಸ್, ಕಬ್ಬಿಣದ ಅದಿರು ಮುಂತಾದ ಖನಿಜಗಳ ರಫ್ತು, ಪೆಟ್ರೋಲಿಯಂ ಪದಾರ್ಥಗಳು, ಕಟ್ಟಡ ಮತ್ತು ಇತರ ನಿರ್ಮಾಣ ಸಾಮಗ್ರಿಗಳನ್ನು ಉತ್ತರ ಕರ್ನಾಟಕದಿಂದ ರಸ್ತೆ ಮಾರ್ಗದಲ್ಲಿ ರಾಮನಗರ-ಅನಮೋಡ್‌-ಮೊಲ್ಲೇಮ್‌  ಮೂಲಕ ಗೋವಾಕ್ಕೆ ಟ್ರಕ್‌ಗಳ ಮೂಲಕ ಸಾಗಣೆಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು. ಇದಕ್ಕೆ ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳ ಒಪ್ಪಿಗೆಯೂ ಇತ್ತು ಎಂಬುದು ಆದೇಶದಿಂದ ತಿಳಿದು ಬಂದಿದೆ.

 

ಈ ಎಲ್ಲಾ ಟ್ರಕ್‌ಗಳು ಉತ್ತರ ಕರ್ನಾಟಕದಿಂದ ಹೊರಟು ಧಾರವಾಡ-ಅಂಕೋಲಾ-ಕಾರವಾರ ಮೂಲಕ ಮಾತ್ರ ಗೋವಾ ತಲುಪಲು ಅವಕಾಶವಿದೆ.

 

ಉತ್ತರ ಕನ್ನಡ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶದ ಪ್ರತಿ

 

ಈ ಆದೇಶ 2022ರವರೆಗೂ ಚಾಲ್ತಿಯಲ್ಲಿತ್ತು. ಇತ್ತೀಚಿನವರೆಗೂ ಹಿಂಪಡೆದುಕೊಂಡಿರಲಿಲ್ಲ. ಆದರೆ ಕೆ ಎನ್‌ ರಿಸೋರ್ಸ್‌ ಕಂಪನಿಗೆ ಕಾಕಂಬಿ ರಫ್ತು ಮಾಡಲು ಅನುಮೋದನೆ ದೊರೆತ ಕೆಲವೇ ಕೆಲವು ದಿನಗಳಲ್ಲಿ ಇದೇ ಕಂಪನಿಗೆ 2022ರ ಡಿಸೆಂಬರ್‌ 23ರಂದು ರಹದಾರಿ ಪತ್ರವನ್ನು ಅಬಕಾರಿ ಇಲಾಖೆಯು ನೀಡಿದೆ. ಈ ರಹದಾರಿ ಪತ್ರವೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕೆ ಎನ್‌ ರಿಸೋರ್ಸ್‌ ಕಂಪನಿಯು ಲೈಲಾ ಷುಗರ್ಸ್‌ನಲ್ಲಿರುವ 5,000 ಮೆಟ್ರಿಕ್‌ ಟನ್‌ ಕಾಕಂಬಿಯನ್ನು ರಸ್ತೆ ಮಾರ್ಗದ ಮೂಲಕ 2023ರ ಜನವರಿ 21ರವರೆಗೆ ರಫ್ತು ಮಾಡಲು 2022ರ ಡಿಸೆಂಬರ್‌ 23ರಂದು ರಹದಾರಿ ಪತ್ರ ನೀಡಿರುವುದು ಗೊತ್ತಾಗಿದೆ.

 

‘ರಸ್ತೆ ಸಂಚಾರವನ್ನೇ ನಿರ್ಬಂಧಿಸಿದ್ದರೂ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗಾಗಿಯೇ ಉತ್ತರ ಕನ್ನಡ ಜಿಲ್ಲಾಧಿಕಾರಿ ಹೊರಡಿಸಿದ್ದ ಅಧಿಸೂಚನೆ ಉಲ್ಲಂಘಿಸಿ ರಹದಾರಿ ಪತ್ರ ನೀಡಿರುವ ಅಬಕಾರಿ ಇಲಾಖೆಯು ಕಾನೂನುಬಾಹಿರ ಕೃತ್ಯ ಎಸಗಿದೆ. ರಹದಾರಿ ಪತ್ರ ನೀಡಲು ಕಾರಣವೇನು, ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿರುವ ರಸ್ತೆಯಲ್ಲಿ 12 ಮತ್ತು 14 ಚಕ್ರಗಳ ಬೃಹತ್‌ ಟ್ರಕ್‌ ಕರ್ನಾಟಕದಿಂದ ಗೋವಾಕ್ಕೆ ಕಾಕಂಬಿ ಸಾಗಾಣಿಕೆ ಮಾಡಲು ರಹದಾರಿ ನೀಡಿರುವುದರ ಹಿಂದೆ ಇರಬಹುದಾದ ಪ್ರಭಾವಿಗಳ್ಯಾರು,’ ಎಂದು ಪ್ರಶ್ನಿಸುತ್ತಾರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಗೆ ದೂರು ನೀಡಿರುವ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ಬಿ ಎಸ್‌ ಮಲ್ಲಿಕಾರ್ಜುನ್‌.

 

ಗೋವಾ ಸರ್ಕಾರಕ್ಕೆ ಒಂದು ಟನ್ ಕಾಕಂಬಿಗೆ 300 ರು.ಗಳ ತೆರಿಗೆಯೊಂದಿಗೆ ರಫ್ತು ಮಾಡಬೇಕು ಎಂಬ ಷರತ್ತು ಇದೆ. ಆದರೆ ಕೆ ಎನ್‌ ರಿಸೋರ್ಸ್‌ ಕಂಪನಿಯು ಒಂದು ಟನ್‌ ಟನ್‌ ಕಾಕಂಬಿಗೆ ಕೇವಲ 20 ರು.  ಸುಂಕ  ಭರಿಸಿ  ಮಾರಾಟ ಮಾಡುತ್ತಿದೆ.  ಇದಕ್ಕೆ ಪೂರಕವಾಗಿ ಗೋವಾ ಸರ್ಕಾರದಿಂದಲೂ ಗೆಜೆಟ್‌ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಕಳೆದ 15 ವರ್ಷಗಳಿಂದಲೂ ಚಾಲ್ತಿಯಲ್ಲಿದ್ದ ಕಾನೂನನ್ನೇ ಬುಡಮೇಲು ಮಾಡಲಾಗಿದೆ ಎಂಬ ಆರೋಪಗಳೂ ಕೇಳಿ ಬಂದಿವೆ.

 

‘ಕರ್ನಾಟಕ ರಾಜ್ಯದ ಕಾಕಂಬಿ ಗೋವಾಕ್ಕೆ ರವಾನೆ ಮಾಡುವ ನೆಪದಲ್ಲಿ ಗೋವಾದ ಅಧಿಸೂಚನೆ ದಾಖಲೆ ತೋರಿಸಿ ಸರ್ಕಾರಕ್ಕೆ ಕೇವಲ 40  ಲಕ್ಷ ಮಾತ್ರ ಸುಂಕ ಪಾವತಿಸಲಿದೆ. ಗೋವಾ ಸರ್ಕಾರವೂ ಸಹ ಈ ಕಂಪನಿಗೆ ಪೂರಕವಾಗಿಯೇ ಕಾರ್ಯನಿರ್ವಹಿಸಿರುವುದಕ್ಕೆ ಇದೊಂದು ಉತ್ತಮ ನಿದರ್ಶನ. 300 ರು.ಗಳ ತೆರಿಗೆ ಪ್ರಕಾರ 6 ಕೋಟಿಯನ್ನು ಪಾವತಿಸಬೇಕಿತ್ತು. ಆದರೆ ಈ ಕಂಪನಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಕೇವಲ 40 ಲಕ್ಷ ರು ಮಾತ್ರ ತೆರಿಗೆ ಪಾವತಿಸಲು ಅನುಕೂಲ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ, ‘ಎಂದು ಬಿ ಎಸ್‌ ಮಲ್ಲಿಕಾರ್ಜುನ್‌ ಅವರು ವಿವರಿಸುತ್ತಾರೆ.

 

ಎಂ-2 ಲೈಸೆನ್ಸ್‌ ಇಲ್ಲದಿದ್ದರೂ ನಿಯಮ ಉಲ್ಲಂಘಿಸಿ ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿ ರಫ್ತು ಮಾಡಲು ಅನುಮತಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಕೆಯಾಗಿದೆ. ಪ್ರಧಾನಿ ಕಚೇರಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಕುರಿತು ವಿಚಾರಣೆ ನಡೆಸಬೇಕು ಎಂದು ಸಂಬಂಧಿಸಿದ ಇಲಾಖೆಗೆ ದೂರನ್ನು ರವಾನಿಸಿದ್ದಾರೆ ಎಂದು ಗೊತ್ತಾಗಿದೆ.

 

2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಎತ್ತುವಳಿ ಮಾಡಲು ಅನುಮೋದನೆ ನೀಡುವ ಕಡತವೇ ತಮ್ಮ ಬಳಿ ಬಂದಿಲ್ಲ ಎಂದು ಸಚಿವ ಕೆ ಗೋಪಾಲಯ್ಯ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆ ಹೊರಬಿದ್ದ ಕೆಲವೇ ಕೆಲವೇ ದಿನಗಳಲ್ಲಿ ಈ ಕಡತಕ್ಕೆ ಅನುಮೋದನೆಯನ್ನೂ ನೀಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts