ಶಿಕ್ಷಕರ ಅಕ್ರಮ ನೇಮಕ; ಆರೋಪಿ ಮಾದೇಗೌಡ ಸೇರಿ ಮೂವರ ಸೇವೆಗೆ ಪುನರ್‌ ಸ್ಥಾಪಿಸಲು ಪ್ರಸ್ತಾವನೆ

ಬೆಂಗಳೂರು; 2014–15ನೇ ಸಾಲಿನ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸದ್ಯ ಜಾಮೀನು ಪಡೆದು ಹೊರ ಬಂದಿರುವ ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕ ಎಂ.ಪಿ. ಮಾದೇಗೌಡ ಹಾಗೂ ಸಮಗ್ರ ಶಿಕ್ಷಣ ಅಭಿಯಾನ ನಿರ್ದೇಶಕಿ ಗೀತಾ ಸೇರಿದಂತೆ ಒಟ್ಟು ಮೂವರು ಅಧಿಕಾರಿಗಳನ್ನು ಅವರನ್ನು ಸಾರ್ವಜನಿಕ ಹಿತದೃಷ್ಟಿ ಹೆಸರಿನಲ್ಲಿ ಹಿಂದಿನ ಹುದ್ದೆಯ ಸೇವೆಯಲ್ಲಿ ಪುನರ್ ಸ್ಥಾಪಿಸುವ ಪ್ರಯತ್ನಗಳು ಶಿಕ್ಷಣ ಇಲಾಖೆಯಲ್ಲಿಯೇ ನಡೆದಿದ್ದವು ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

 

ಜಾಮೀನಿನ ಮೇಲೆ ಹೊರಬಂದಿರುವ ಆರೋಪಿತ ಅಧಿಕಾರಿಗಳನ್ನು ಸೇವೆಯಲ್ಲಿ ಪುನರ್‌ ಸ್ಥಾಪಿಸುವ ಸಂಬಂಧದ ಕಡತವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್‌ ಅವರ ನಿರ್ದೇಶನದಂತೆ ಸರ್ಕಾರಕ್ಕೆ ಮಂಡಿಸಲಾಗಿದೆ. ಈ ಸಂಬಂಧ 2022ರ ಅಕ್ಟೋಬರ್‌ 20ರಂದು ಸಚಿವ ಬಿ ಸಿ ನಾಗೇಶ್‌ ಅವರ ಕಚೇರಿಯಲ್ಲಿ ಚರ್ಚೆಯೂ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಮಹತ್ವದ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಅಧಿಕಾರ ದುರುಪಯೋಗಪಡಿಸಿಕೊಂಡು ಶಿಕ್ಷಕರ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದಡಿ ಮಾದೇಗೌಡ, ಗೀತಾ, ಬಿ ಕೆ ಎಸ್‌ ವರ್ಧನ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದ ಇಲಾಖೆಯು ಆರೋಪಿ ಅಧಿಕಾರಿಗಳು ಅತ್ಯಲ್ಪ ಅವಧಿಯಲ್ಲಿ ಜಾಮೀನು ಪಡೆದು ಹೊರಬರುತ್ತಿದ್ದಂತೆ ಅವರನ್ನು ಪುನಃ ಸೇವೆಗೆ ಸೇರಿಸಿಕೊಳ್ಳಲು ತೆರೆದಿರುವ ಕಡತಕ್ಕೆ ಬಿರುಸಿನ ಚಾಲನೆ ನೀಡಿತ್ತು.

 

ಈ ಪ್ರಕರಣದ ಕುರಿತು ಸಿಐಡಿಯು ತನ್ನ ತನಿಖೆಯನ್ನು ಮುಂದುವರೆಸಿದ್ದರೂ ಆರೋಪಿತ ಅಧಿಕಾರಿಗಳನ್ನು ಹಿಂದಿನ ಹುದ್ದೆಯಲ್ಲಿಯೇ ಮರುಸ್ಥಾಪಿಸಲು ಶಿಕ್ಷಣ ಇಲಾಖೆಯು ಮುಂದಾಗುವ ಮೂಲಕ ಸಾಕ್ಷ್ಯಗಳ ನಾಶಕ್ಕೆ ಪರೋಕ್ಷವಾಗಿ ಕಾರಣವಾಗಲಿದ್ದರೂ ಪ್ರಸ್ತಾವನೆ ಸಲ್ಲಿಸಿದ್ದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿತ್ತು.

 

ಈ ಕುರಿತು ಸಚಿವ ಬಿ ಸಿ ನಾಗೇಶ್‌ ಮತ್ತು ಪ್ರಧಾನ ಕಾರ್ಯದರ್ಶಿಗಳೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ. ಇವರನ್ನು ಸೇವೆಗೆ ಪುನರ್‌ ಸ್ಥಾಪಿಸಿದರೆ ‘ಇದು ವಿಚಾರಣೆಯ ಪ್ರಕ್ರಿಯೆಗೆ ಅಡ್ಡಿಯಾಗುವುದಿಲ್ಲ ಮತ್ತು ಇದು ಆಡಳಿತದ ಹಿತದೃಷ್ಟಿಯಿಂದ ಅಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಸಕಾಲಿಕ ಆಡಳಿತದ ಹಿತದೃಷ್ಟಿಯಿಂದ ಅಗತ್ಯ ಕ್ರಮಕೈಗೊಳ್ಳಬಹುದು. ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಮೇಲೆ ತಿಳಿಸಿದ ಸಿಬ್ಬಂದಿ ಯಾವುದೇ ಹಸ್ತಕ್ಷೇಪದ ಸಾಧ್ಯತೆಯಿಲ್ಲ,’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಅಧಿಕಾರಿಗಳು ಟಿಪ್ಪಣಿಯಲ್ಲಿ ಅಭಿಪ್ರಾಯಿಸಿದ್ದರು.

 

ಮಾದೇಗೌಡ ಅವರನ್ನು 2022ರ ಸೆ.26, ಬಿಕೆಎಸ್‌ ವರ್ಧನ್‌ ಅವರನ್ನು 2022ರ ಸೆ.19, ಗೀತಾ ಅವರನ್ನು 2022ರ ಅಕ್ಟೋಬರ್‌ 1ರಂದು ಅಮಾನತುಗೊಳಿಸಿ ಸರ್ಕಾರವು ಆದೇಶ ಹೊರಡಿಸಿತ್ತು. ಈ ಪೈಕಿ ಮಾದೇಗೌಡ ಅವರು 2022ರ ಅಕ್ಟೋಬರ್‌ 11ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

 

ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ಮಾದೇಗೌಡ ಅವರು ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ‘ಈ ಮೊಕದ್ದಮೆಯಲ್ಲಿ ನ್ಯಾಯಾಲಯದ ಮುಂದಿನ ತೀರ್ಪಿಗೆ ಬದ್ಧನಾಗಿರುತ್ತೇನೆ ಎಂದು ಪ್ರಮಾಣೀಕರಿಸುತ್ತೇನೆ,’ ಎಂದು ಮನವಿಯಲ್ಲಿ ತಿಳಿಸಿದ್ದರು ಎಂಬುದು ಲಭ್ಯವಿರುವ ದಾಖಲೆಯಿಂದ ಗೊತ್ತಾಗಿದೆ.

 

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್‌ ಅವರು ಮೌಖಿಕ ಸೂಚನೆ ಮೇರೆಗೆ ಅಧಿಕಾರಿಗಳು ಕಡತವನ್ನು ಮಂಡಿಸಿದ್ದಾರೆ. ಇದರಲ್ಲಿ ‘ ಸಾರ್ವಜನಿಕ ಹಿತದೃಷ್ಟಿಯಿಂದ ಮಾದೇಗೌಡ, ಬಿ ಕೆ ಎಸ್‌ ವರ್ಧನ್‌, ಗೀತಾ ಅವರು ಎ ವೃಂದದ ಹಿರಿಯ ಅಧಿಕಾರಿಗಳಾಗಿದ್ದು ಸಾರ್ವಜನಿಕ ಹಿತದೃಷ್ಟಿಯಿಂದ ಇವರನ್ನು ಸೇವೆಗೆ ಪುನರ್‌ ಸ್ಥಾಪಿಸುವುದು ಅವಶ್ಯಕವಾಗಿದೆ,’ ಎಂದು ಆಯುಕ್ತರ ಕಚೇರಿ ಅಧಿಕಾರಿಗಳು ಟಿಪ್ಪಣಿ ಹಾಕಿರುವುದು ತಿಳಿದು ಬಂದಿದೆ.

 

ಇಲಾಖಾಧಿಕಾರಿಗಳ ಮಧ್ಯೆ ನಡೆದಿರುವ ಆಂತರಿಕ ಟಿಪ್ಪಣಿ ಪ್ರತಿ

 

‘ಎಂ ಪಿ ಮಾದೇಗೌಡ ಅವರನ್ನು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ, ಗೀತಾ ಇವರನ್ನು ಆರ್‌ಐಇ ನಿರ್ದೇಶಕರ ಹುದ್ದೆ, ಸಿಸ್ಲಿಪ್‌ ಧಾರವಾಡದ ನಿರ್ದೇಶಕರನ್ನಾಗಿ ಬಿ ಕೆ ಎಸ್‌ ವರ್ಧನ್‌ ಅವರನ್ನು ಸೇವೆಯಲ್ಲಿ ಪುನರ್‌ ಸ್ಥಾಪಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ,’ ಎಂದೂ ಟಿಪ್ಪಣಿಯಲ್ಲಿ ಹೇಳಲಾಗಿದೆ.

 

ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದಡಿ ಮಾದೇಗೌಡ, ಗೀತಾ, ನಿವೃತ್ತ ಜಂಟಿ ನಿರ್ದೇಶಕರಾದ ಡಿ.ಕೆ. ಶಿವಕುಮಾರ್, ಕೆ. ರತ್ನಯ್ಯ, ಜಿ.ಆರ್. ಬಸವರಾಜ್ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್‌ ನರಸಿಂಹರಾವ್ ಅವರನ್ನು ಸಿಐಡಿಯು ಬಂಧಿಸಿದೆ. ರಾಜ್ಯದ ಬಹುತೇಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ನೇಮಕಾತಿಯಲ್ಲಿ ಅಕ್ರಮ ಕುರಿತು ವಿಧಾನಸೌಧ ಠಾಣೆಯಲ್ಲಿ ದಾಖಲಾಗಿದ್ದ ಮೂರು ಪ್ರತ್ಯೇಕ ಪ್ರಕರಣಗಳ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

 

ಕೋಲಾರ, ವಿಜಯಪುರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಹ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಜಿಲ್ಲಾವಾರು ಹೆಚ್ಚುವರಿ ಆಯ್ಕೆಪಟ್ಟಿ ಸಿದ್ಧಪಡಿಸಲಾಗಿತ್ತು. ಈ ಪಟ್ಟಿಯಲ್ಲಿದ್ದ ಬಹುತೇಕ ಅಭ್ಯರ್ಥಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಇವರೆಲ್ಲರಿಗೂ ನಿರ್ದೇಶಕರು ಹಾಗೂ ಇತರರು ನೇಮಕಾತಿ ಆದೇಶ ನೀಡಿದ್ದರು. ಈ ಕುರಿತು ಲಂಚಮುಕ್ತ ನಿರ್ಮಾಣ ಕರ್ನಾಟಕ ವೇದಿಕೆಯು ಸರ್ಕಾರಕ್ಕೆ ಒದಗಿಸಿದ್ದ ದಾಖಲೆ ಸಹಿತ ‘ದಿ ಫೈಲ್‌-ವಾರ್ತಾಭಾರತಿ’ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

 

‘ಈಗಾಗಲೇ ಈ ಅಕ್ರಮ ನೇಮಕಾತಿ ಸ್ವರೂಪವನ್ನು ಎಳೆ ಎಳೆಯಾಗಿ ದಾಖಲೆ ಸಹಿತ ವಿವರಿಸಿ ಸಿಬಿಐಗೆ ವಹಿಸುವಂತೆ 4 ಪತ್ರಗಳನ್ನು ಬರೆದಿದ್ದರೂ ಸಹ ಇಲ್ಲಿಯವರೆಗೆ ಯಾವುದೇ ಕ್ರಮವಹಿಸಿಲ್ಲ. ಬದಲಿಗೆ ಬಂಧಿಸಿ ಜೈಲಿಗಟ್ಟಿದ ಶಿಕ್ಷಕರು ಜಾಮೀನುಪಡೆದುಕೊಳ್ಳಲು ಸ್ವತಃ ಸಿಐಡಿಯೇ ಅನುಕೂಲ ಕಲ್ಪಿಸಿರುವಂತಿದೆ. ಅಲ್ಲದೇ ಇಲಾಖಾ ಮಟ್ಟದಲ್ಲಿ ಈ ಶಿಕ್ಷಕರು ಪುನಃ ಕರ್ತವ್ಶ ನಿರ್ವಹಿಸಲು ಅವಕಾಶ ನೀಡಿ ನ್ಶಾಯಾಲಯಕ್ಕೆ ಹೋಗಲು ಈ ಶಿಕ್ಷಕರಿಗೆ ಎಲ್ಲಾ ರೀತಿಯ ಅನುಕೂಲಕರ ಹಾದಿಗಳನ್ನು ಶಿಕ್ಷಣ ಇಲಾಖೆಯ ಕಮೀಷನರ್ ಸುಗಮಗೊಳಿಸುತ್ತಿದ್ದಾರೆ. ಇದೊಂದು ಅತ್ಶಂತ ದುಬಾರಿ ದಂಧೆಯಂತೆ ಗೋಚರಿಸುತ್ತಿದೆ,’ ಎನ್ನುತ್ತಾರೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ ಎಸ್‌.

the fil favicon

SUPPORT THE FILE

Latest News

Related Posts