ಬಿಜೆಪಿ ಅಧಿಕಾರದಲ್ಲಿಲ್ಲದ ಅವಧಿಯಲ್ಲೇ ಅತೀ ಹೆಚ್ಚು ಕೋಮುಗಲಭೆ; 15 ವರ್ಷಗಳಲ್ಲಿ 1,402 ಪ್ರಕರಣ ವರದಿ

ಬೆಂಗಳೂರು; ರಾಜ್ಯದಲ್ಲಿ ಬಿಜೆಪಿ ಪಕ್ಷವು ಅಧಿಕಾರದಲ್ಲಿ ಇಲ್ಲದೇ ಇದ್ದ ವರ್ಷಗಳಲ್ಲಿ ಅತಿ ಹೆಚ್ಚು ಕೋಮುಗಲಭೆಗಳು ನಡೆದಿವೆ. ಕೋಮುಗಲಭೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳದ ಕಾರಣ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೇ ಅತಿ ಹೆಚ್ಚು ಕೋಮುಗಲಭೆ ಪ್ರಕರಣಗಳು ವರದಿಯಾಗಿವೆ.

 

ಕರ್ನಾಟಕ ವಿಧಾನಮಂಡಲವು 2022ರ ಸೆಪ್ಟಂಬರ್‌ನಲ್ಲಿ ನಡೆದಿದ್ದ ಅಧಿವೇಶನದಲ್ಲಿ ಗೃಹ ಇಲಾಖೆಯು ವಿಧಾನಪರಿಷತ್‌ಗೆ ಅಂಕಿ ಅಂಶಗಳನ್ನು ಒದಗಿಸಿದೆ. ಈ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಅತೀ ಹೆಚ್ಚು ಎಂದರೆ (2013-2018) 697 ಕೋಮುಗಲಭೆ ಪ್ರಕರಣಗಳು ನಡೆದಿವೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯೇ ಸಿಂಹಪಾಲು ಪಡೆದಿದೆ.

 

ಇನ್ನುಳಿದಂತೆ ರಾಜ್ಯದಲ್ಲಿ ಕಳೆದ 15 ವರ್ಷಗಳಲ್ಲಿ 1,402 ಕೋಮು ಗಲಭೆ ಪ್ರಕರಣಗಳು ವರದಿಯಾಗಿವೆ. ಕಳೆದ 3 ವರ್ಷಗಳಲ್ಲಿ 163 ಪ್ರಕರಣಗಳು ವರದಿಯಾಗಿವೆ. 2015ರ ವರ್ಷವೊಂದರಲ್ಲೇ 336 ಪ್ರಕರಣಗಳು ವರದಿಯಾಗಿವೆ.

 

 

2010ರಲ್ಲಿ ಶಿವಮೊಗ್ಗದಲ್ಲಿ 180, 2015ರಲ್ಲಿ 80 ಪ್ರಕರಣಗಳು ವರದಿಯಾಗಿವೆ. 2016ರಿಂದ 2019ರವರೆಗೆ ಒಂದೇ ಒಂದು ಕೋಮುಗಲಭೆ ಪ್ರಕರಣ ವರದಿಯಾಗಿಲ್ಲ. 2020ರಲ್ಲಿ 15, 2022ರಲ್ಲಿ 42 ಪ್ರಕರಣಗಳು ವರದಿಯಾಗಿವೆ.

 

ದಕ್ಷಿಣ ಕನ್ನಡದಲ್ಲಿ 2012ರಲ್ಲಿ 24, 2015ರಲ್ಲಿ 66, 2017ರಲ್ಲಿ 36, 2020ರಲ್ಲಿ 3, 2022ರಲ್ಲಿ 7 ಪ್ರಕರಣಗಳು ವರದಿಯಾಗಿವೆ. ಕೊಡಗಿನಲ್ಲಿ 2015ರಲ್ಲಿ 45, 2021ಮತ್ತು 2022ರಲ್ಲಿ ತಲಾ 5 ಪ್ರಕರಣಗಳು ವರದಿಯಾಗಿವೆ.

 

2013ರಿಂದ 2018ರವರೆಗಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಒಟ್ಟಾರೆ 697 ಕೋಮುಗಲಭೆಗಳು ನಡೆದಿವೆ. 2007ರಲ್ಲಿ 80, 2008ರಲ್ಲಿ 29, 2009ರಲ್ಲಿ 75, 2010ರಲ್ಲಿ 279, 2011ರಲ್ಲಿ 24, 2012ರಲ್ಲಿ 54, 2013ರಲ್ಲಿ 52, 2014ರಲ್ಲಿ 94, 2015ರಲ್ಲಿ 336, 2016ರಲ್ಲಿ 46, 2017ರಲ್ಲಿ 138, 2018ರಲ್ಲಿ 32, 2019ರಲ್ಲಿ 16, 2020ರಲ್ಲಿ 19, 2021ರಲ್ಲಿ 32, 2022ರಲ್ಲಿ 96 ಪ್ರಕರಣಗಳು ವರದಿಯಾಗಿವೆ.

 

 

ಕರ್ನಾಟಕದಲ್ಲಿ ಮೂರು ವರ್ಷಗಳಲ್ಲಿ ನಡೆದ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ 100 ಆರೋಪಪಟ್ಟಿಗಳ ಪೈಕಿ ಕೇವಲ ಐದು ಪ್ರಕರಣಗಳಲ್ಲಷ್ಟೇ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯುರೊ (ಎನ್‌ಸಿಆರ್‌ಬಿ) ಅಂಕಿ ಅಂಶ ಬಿಡುಗಡೆ ಮಾಡಿತ್ತು.

 

ಲೋಕಸಭೆಯಲ್ಲಿ ಮಂಡನೆಯಾದ ಅಂಕಿ ಅಂಶಗಳ ಪ್ರಕಾರ 2018ರಲ್ಲಿ 29 ಪ್ರಕರಣಗಳು ದಾಖಲಾಗಿ 224 ಮಂದಿಯನ್ನು ಬಂಧಿಸಲಾಗಿತ್ತು.62 ಆರೋಪ ಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಎರಡು ಪ್ರಕರಣಗಳಲ್ಲಿ 9 ಅಪರಾಧಿಗಳಿಗೆ ಶಿಕ್ಷೆ ಆಗಿದೆ. 2019ರಲ್ಲಿ 11 ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಾಗಿ, 77 ಮಂದಿಯನ್ನು ಬಂಧಿಸಲಾಗಿತ್ತು. 22 ಆರೋಪ ಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಒಂದು ಪ್ರಕರಣದಲ್ಲಿ ಆರೋಪಿಯೊಬ್ಬರಿಗೆ ಶಿಕ್ಷೆ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಉತ್ತರ ಒದಗಿಸಿತ್ತು.

 

2020ರಲ್ಲಿ 10 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿ, 16 ಆರೋಪ ಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. 63 ಮಂದಿಯನ್ನು ಬಂಧಿಸಲಾಗಿದ್ದು, 151 ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಿದ್ಧಪಡಿಸಲಾಗಿತ್ತು. ಎರಡು ಪ್ರಕರಣಗಳಲ್ಲಿ 54 ಮಂದಿಗೆ ಶಿಕ್ಷೆ ಆಗಿದೆ ಎಂದು ವಿವರ ನೀಡಿತ್ತು.

 

ಅನ್ಯ ರಾಜ್ಯದ ವ್ಯಕ್ತಿಗಳು ಕರ್ನಾಟಕಕ್ಕೆ ಬಂದು ಇಲ್ಲಿನ ಜನರನ್ನು ಬರ್ಬರವಾಗಿ ಹತ್ಯೆ ಮಾಡುತ್ತಿರುವ ಬಗ್ಗೆ ಇತ್ತೀಚಿಗೆ ಯಾವುದೇ ಘಟನೆಗಳು ಕಂಡು ಬಂದಿಲ್ಲ. ಕೋಮುಗಲಭೆಗಳಿಗೆ ಕಾರಣರಾದ ವ್ಯಕ್ತಿಗಳು ಹೊಂದಿರುವ ಅನಧಿಕೃತ ಅಕ್ರಮ ಆಸ್ತಿಗಳನ್ನು ಸರ್ಕಾರ ವಶಪಡಿಸಿಕೊಳ್ಳಲು ಮತ್ತು ಅನಧಿಕೃತ ಅಕ್ರಮ ಆಸ್ತಿಗಳನ್ನು ನೆಲಸಮ ಮಾಡುವ ಸಂಬಂಧ ಒಳಾಡಳಿತ ಇಲಾಖೆ ಮುಂದೆ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು 2022ರ ಸೆ.15ರಂದು ನಡೆದ ವಿಧಾನನಪರಿಷತ್‌ ಅಧಿವೇಶನದಲ್ಲಿ ಉತ್ತರ ಒದಗಿಸಿದ್ದಾರೆ.

SUPPORT THE FILE

Latest News

Related Posts