ಲಂಚ; ಸಿಎಂ ಸಚಿವಾಲಯದ ವಾಹನದಲ್ಲೇ ಪತ್ರಕರ್ತರ ನಿವಾಸಕ್ಕೂ ನಗದು, ಉಡುಗೊರೆ ಸಾಗಿಸಲಾಗಿತ್ತೇ?

ಬೆಂಗಳೂರು; ದೀಪಾವಳಿ ಹಬ್ಬದ ಸೋಗಿನಲ್ಲಿ ಪತ್ರಿಕಾ ಕಚೇರಿಗಳಿಗಷ್ಟೇ ಅಲ್ಲದೇ  ಲಕ್ಷಾಂತರ ರುಪಾಯಿ ನಗದನ್ನು ಇರಿಸಿದ್ದ ಕವರ್‌ನೊಂದಿಗೇ  ಉಡುಗೊರೆಯನ್ನು ಕೆಲವು  ಪತ್ರಕರ್ತರ  ಮನೆಗಳಿಗೂ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ  ಹಂಚಿಕೆಯಾದ ಇನ್ನೋವಾ ವಾಹನದಲ್ಲೇ  ನೇರವಾಗಿ ತಲುಪಿಸಿದ್ದರು ಎಂಬ ಮತ್ತೊಂದು ಮಾಹಿತಿ  ಹೊರಬಿದ್ದಿದೆ.

 

ಸರ್ಕಾರಿ ವಾಹನಗಳ ದುರ್ಬಳಕೆ ವಿರುದ್ಧ ಅಭಿಯಾನ ನಡೆಸುತ್ತಿರುವ ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಕಾರ್ಯಕರ್ತರೊಬ್ಬರು  ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಪೊಲೀಸ್‌ ಠಾಣೆ ಬಳಿ ಇರುವ ಪೈಪ್‌ಲೈನ್‌ ರಸ್ತೆಯಲ್ಲಿ ನಿಲ್ಲಿಸಿದ್ದ  ಸರ್ಕಾರಿ ವಾಹನ ಚಾಲಕನನ್ನು  ಪ್ರಶ್ನಿಸಿದ್ದರು.  ಆ  ಸಂದರ್ಭದಲ್ಲಿ ‘ಇದು ಸಿಎಂ ಕಚೇರಿ ಕಾರು,  ದೀಪಾವಳಿ ಗಿಫ್ಟ್‌ ವಿತರಿಸಲು  ಹೋಗುತ್ತಿದ್ದೇನೆ,’  ಎಂದು ವಾಹನ  ಚಾಲಕ ನೀಡಿದ್ದ ಉತ್ತರವು ಈ ಪ್ರಕರಣದ ಮತ್ತೊಂದು ಆಯಾಮವನ್ನು ತೆರೆದಿಟ್ಟಂತಾಗಿದೆ.

 

ಪತ್ರಕರ್ತರಿಗೆ ಲಂಚ ನೀಡಿರುವ ಪ್ರಕರಣವು ರಾಜ್ಯ ಬಿಜೆಪಿ ಸರ್ಕಾರವು ಇಕ್ಕಟ್ಟಿಗೆ ಸಿಲುಕಿರುವುದು ಮತ್ತು ಈ ಕುರಿತು ಆಡಳಿತ ಮತ್ತು ಪ್ರತಿಪಕ್ಷ ನಡುವೆ ಪ್ರತ್ಯಾರೋಪಗಳು ಕೇಳಿ ಬಂದಿರುವ ನಡುವೆಯೇ ಪತ್ರಕರ್ತರಿಗೆ ಉಡುಗೊರೆ ನೀಡಲು ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಹಂಚಿಕೆಯಾಗಿರುವ ಸರ್ಕಾರಿ ಕಾರನ್ನು ಅಧಿಕೃತವಾಗಿ ಬಳಕೆ ಮಾಡಲಾಗಿತ್ತು ಎಂಬ ಮಾಹಿತಿಯು ಮುನ್ನೆಲೆಗೆ ಬಂದಿದೆ.  ಈ ಸಂಬಂಧ ವಿಡಿಯೋ ತುಣುಕೊಂದು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮುಖ್ಯಮಂತ್ರಿಗಳ ಸಚಿವಾಲಯವು ಪತ್ರಿಕಾ ಕಚೇರಿಗಳಿಗೆ ನೇರವಾಗಿ ದೀಪಾವಳಿ ಉಡುಗೊರೆ ಸೋಗಿನಲ್ಲಿ ನಗದು ಹಣ  ತಲುಪಿಸಿತ್ತು ಎಂದು ಈಗಾಗಲೇ ಹಲವು ಪತ್ರಿಕೆಗಳ ಸಂಪಾದಕರು ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಹೊತ್ತಿನಲ್ಲೇ ಕೆಲವು  ಪತ್ರಕರ್ತರ ಮನೆಗಳಿಗೂ ನೇರವಾಗಿ ಉಡುಗೊರೆ ತಲುಪಿಸಲಾಗಿತ್ತೇ ಎಂಬುದಕ್ಕೆ ದೀಪಾವಳಿ ಗಿಫ್ಟ್‌  ವಿತರಣೆ ಮಾಡಲು ಹೋಗುತ್ತಿದ್ದೇನೆ ಎಂದು ಚಾಲಕ ನೀಡಿರುವ ಉತ್ತರವು ಸಾಕ್ಷ್ಯೀಕರಿಸಿದಂತಾಗಿದೆ.

 

ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಹಂಚಿಕೆಯಾಗಿರುವ KA 01 G 5898 ಸಂಖ್ಯೆಯ ಇನ್ನೋವಾ ವಾಹನದಲ್ಲಿ ಉಡುಗೊರೆಯನ್ನು ಸರ್ಕಾರಿ ರಜೆ ದಿನವಾದ  ಅಕ್ಟೋಬರ್‌ 24ರಂದು  ಸಂಜೆ 5 ಗಂಟೆ ಸುಮಾರಿಗೆ ತಲುಪಿಸುವ ಸಂದರ್ಭದಲ್ಲೇ ಕರ್ನಾಟಕ ರಾಷ್ಟ್ರಸಮಿತಿಯ ಕಾರ್ಯಕರ್ತರು  ಬೆಂಗಳೂರು ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ  ವಾಹನ ಚಾಲಕನನ್ನು ಪ್ರಶ್ನಿಸಿದ್ದರು. ಆ ವೇಳೆಯಲ್ಲಿ ವಾಹನದ ಚಾಲಕ ತಾನು ಮುಖ್ಯಮಂತ್ರಿಗಳ ಕಚೇರಿಯವನು, ದೀಪಾವಳಿ ಉಡುಗೊರೆ ತಲುಪಿಸಲು ಹೊರಟಿದ್ದೇನೆ ಎಂದು ಉತ್ತರ ನೀಡಿದ್ದ ಎಂಬುದು ವಿಡಿಯೋ ತುಣುಕಿನಿಂದ ಗೊತ್ತಾಗಿದೆ.

 

 

 

ಕುಮಾರಸ್ವಾಮಿ ಲೇಔಟ್‌ನಲ್ಲಿ ಸಂಚರಿಸಿದ್ದ ಇನ್ನೋವಾ ವಾಹನವನ್ನು ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾಗಿದ್ದ ಗುರುಲಿಂಗಸ್ವಾಮಿ ಹೊಳೀಮಠ ಎಂಬುವರಿಗೆ ಹಂಚಿಕೆಯಾಗಿತ್ತು. ಇವರ ನಿಧನಾ ನಂತರ ಈ ವಾಹನವನ್ನು ಮುಖ್ಯಮಂತ್ರಿಗಳ ಕಚೇರಿಗೆ ಹಿಂದಿರುಗಿಸಲಾಗಿತ್ತು ಎಂದು ತಿಳಿದು ಬಂದಿದೆ.

 

‘ನಾವು ಸುಮಾರು ಐದಾರು ವಾರಗಳಿಂದ ಸರ್ಕಾರಿ ವಾಹನಗಳ ದುರ್ಬಳಕೆ ಕುರಿತು ಅಭಿಯಾನವನ್ನು ಮಾಡುತ್ತಿದ್ದೇವೆ. ಇದರ ಮುಂದುವರೆದ ಭಾಗವಾಗಿ ಅಕ್ಟೋಬರ್ 24ರಂದು ಸಾಯಂಕಾಲ ನಮ್ಮ ಪಕ್ಷದ ಒಬ್ಬ ಕಾರ್ಯಕರ್ತರೊಬ್ಬರು  ನಮ್ಮ ಮನೆಗೆ ಬರುತ್ತಿರಬೇಕಾದರೆ ಕುಮಾರಸ್ವಾಮಿ ಬಡಾವಣೆಯ ಪೈಪ್ಲೈನ್ ರಸ್ತೆಯಲ್ಲಿ ಈ ಸರ್ಕಾರಿ ವಾಹನವು ಕಂಡುಬಂದಿತ್ತು. ಅದರಲ್ಲಿ ಚಾಲಕರೊಬ್ಬರೇ ಇದ್ದ ಕಾರಣ ಅವರನ್ನು ಪ್ರಶ್ನಿಸಿದಾಗ ಅವರು ಈ ವಾಹನವು ದೀಪಾವಳಿಯ ಸಿಹಿ ತಿಂಡಿಯನ್ನು ಹಂಚಲು ಬಂದಿದ್ದು ಇದು ಮುಖ್ಯಮಂತ್ರಿಯ ಕಾರ್ಯಾಲಯದಿಂದ ಕಳಿಸಲಾಗಿದೆ ಎಂದು ತಿಳಿಸಿದ್ದರು,’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ  ಕಾರ್ಯದರ್ಶಿ ವಿ ಆರ್ ಮರಾಠೆ ಅವರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದ್ದಾರೆ.

 

‘ಮುಖ್ಶಮಂತ್ರಿ ಕಛೇರಿಯೇ ದೀಪಾವಳಿ ಉಡುಗೊರೆಯಾಗಿ ಪತ್ರಕರ್ತರಿಗೆ ಲಕ್ಷಾಂತರ ರೂಗಳನ್ನು ತಲುಪಿಸಿರುವುದು ಚರ್ಚೆಯಾಗುತ್ತಿದೆ. ಇಂತಹ ಕುಕೃತ್ಯಕ್ಕೆ  ಸರ್ಕಾರಿ ವಾಹನವನ್ನು ಬಳಸಿಕೊಂಡಿರುವುದು ಆಡಳಿತ ವ್ಶವಸ್ಥೆಯ ದುರ್ನಡತೆಗೆ ಹಿಡಿದ ಕೈಗನ್ನಡಿ,’ ಎನ್ನುತ್ತಾರೆ ಲಂಚಮುಕ್ತ ನಿರ್ಮಾಣ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ಬಿ ಎಸ್‌ ಮಲ್ಲಿಕಾರ್ಜುನ್‌.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿಯಿಂದ ಪತ್ರಕರ್ತರಿಗೆ ಲಂಚ ನೀಡಲಾಗಿದೆ ಎಂದು ಕೇಳಿಬಂದಿರುವ ಗಂಭೀರ ಆರೋಪದ ಕುರಿತು ತೀವ್ರ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಭ್ರಷ್ಟಾಚಾರದ ವಿರುದ್ದ ಕಾನೂನಾತ್ಮಕ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಜನಾಧಿಕಾರ ಸಂಘರ್ಷ ಪರಿಷತ್‌  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್‌ ಪಾಗೋಜಿ ಎಂಬುವರ ವಿರುದ್ಧ ಲೋಕಾಯುಕ್ತ ಮತ್ತು ಲೋಕಾಯುಕ್ತ ಪೊಲೀಸ್‌ ವಿಭಾಗದ ಎಡಿಜಿಪಿ ಅವರಿಗೆ ಈಗಾಗಲೇ ದೂರು ನೀಡಿದೆ.

 

‘ರಾಜ್ಯದ ಹಲವಾರು ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವರದಿಗಾರರಿಗೆ ಮುಖ್ಯಮಂತ್ರಿ ಕಚೇರಿಯು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ ಪಾಗೋಜಿ ಅವರ ಮೂಲಕ ನಗದು ಹಣವನ್ನು ನೀಡಲಾಗಿದೆ. ವಿಶ್ವಸನೀಯ ಮೂಲಗಳ ಪ್ರಕಾರ ಡೆಕ್ಕನ್‌ ಹೆರಾಲ್ಡ್‌ನ ಮುಖ್ಯ ವರದಿಗಾರ ಭರತ್‌ ಜೋಷಿ ಅವರಿಗೆ ತಲುಪಿಸಿದ್ದ ಸ್ವೀಟ್‌ ಬಾಕ್ಸ್‌ನಲ್ಲಿಯೇ 1 ಲಕ್ಷ ರು. ನಗದನ್ನು ತಲುಪಿಸಲಾಗಿತ್ತು. ಇದು ಅವರ ಗಮನಕ್ಕೆ ಬಂದ ನಂತರ ಡೆಕ್ಕನ್‌ ಹೆರಾಲ್ಡ್‌ನ ಸಂಪಾದಕರು ಮತ್ತು ಸಿಇಒ ಅವರ ಗಮನಕ್ಕೆ ತಂದು ಅವರ ಸೂಚನೆಯಂತೆ ಹಣವನ್ನು ಹಿಂದಿರುಗಿಸಿದ್ದಾರೆ,’ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ದೂರಿನಲ್ಲಿ ಪ್ರಸ್ತಾಪಿಸಿದೆ.

 

ಅಲ್ಲದೇ ‘ಪ್ರಜಾವಾಣಿಯ ಮುಖ್ಯ ವರದಿಗಾರ ವೈ ಜಿ ಜಗದೀಶ್‌ ಎಂಬುವರಿಗೂ ಹಣ ತಲುಪಿಸಲಾಗಿತ್ತು. ಈ ಬಗ್ಗೆ ಖುದ್ದು ವೈ ಜಿ ಜಗದೀಶ್‌ ಅವರೇ ಹಣ ಪಡೆದಿದ್ದನ್ನು ಖಚಿತಪಡಿಸಿ ವಾಟ್ಸಾಪ್‌ ಗ್ರೂಪ್‌ವೊಂದರಲ್ಲಿ ಖಚಿತಪಡಿಸಿದ್ದರು. ಇವರೂ ಸಹ ಸಂಸ್ಥೆಯ ಸಿಇಒ ಮತ್ತು ಸಂಪಾದಕರ ಗಮನಕ್ಕೆ ತಂದು ಹಣವನ್ನು ಹಿಂದಿರುಗಿಸಿದ್ದರು. ಅಲ್ಲದೇ ವೈ ಜಿ ಜಗದೀಶ್‌ ಅವರೇ ಹೇಳಿಕೊಂಡಂತೆ ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಸಂಸ್ಥೆಯಿಂದ ಖಂಡನಾ ಪತ್ರವನ್ನು ಬರೆಯಲಾಗಿದೆ. ಮತ್ತು ಇದಕ್ಕೆ ಮುಖ್ಯಮಂತ್ರಿ ಅವರು ಕ್ಷಮೆಯನ್ನೂ ಯಾಚಿಸಿದ್ದಾರೆ,’ ಎಂದೂ ದೂರಿನಲ್ಲಿ ಉಲ್ಲೇಖಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts