ಉಡುಗೊರೆ ವಿತರಣೆಗೆ ಸಿಎಂ ಮಾಧ್ಯಮ ಸಲಹೆಗಾರರ ಅಧಿಕೃತ ವಾಹನ ಬಳಕೆ; ದಾಖಲೆ ಬಹಿರಂಗ

ಬೆಂಗಳೂರು; ಸರ್ಕಾರಿ ರಜೆ ದಿನದಂದೇ (ಅ.24) ದೀಪಾವಳಿ ಉಡುಗೊರೆಯನ್ನು ಪತ್ರಕರ್ತರಿಗೆ ತಲುಪಿಸಲು ಬಳಕೆಯಾಗಿತ್ತು ಎಂದು ಹೇಳಲಾಗಿರುವ ವಾಹನವು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್‌ ಕೃಷ್ಣ ಅವರಿಗೆ ಅಧಿಕೃತವಾಗಿ ಹಂಚಿಕೆಯಾಗಿತ್ತು ಎಂಬ ಮಾಹಿತಿಯನ್ನು ‘ದಿ ಫೈಲ್‌’ ಇದೀಗ ದಾಖಲೆ ಸಮೇತ ಬಯಲಿಗೆಳೆದಿದೆ.

 

ಪತ್ರಕರ್ತರಿಗೆ ದೀಪಾವಳಿ ಉಡುಗೊರೆ ಹಂಚಿಕೆ ಮಾಡಲು ತಮ್ಮ ವಾಹನವನ್ನು (ಕೆಎ-01-ಜಿ-5898) ಕಳಿಸಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್‌ ಕೃಷ್ಣ ಅವರು ಪ್ರತಿಪಾದಿಸಿದ್ದರು. ಆದರೆ ದೀಪಾವಳಿ ಉಡುಗೊರೆ ತಲುಪಿಸಲು  ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಪೈಪ್‌ಲೈನ್‌ ರಸ್ತೆಯಲ್ಲಿ (ಅಕ್ಟೋಬರ್‌ 24ರಂದು)  ಕೆಎ-01- ಜಿ-5898 ಸಂಖ್ಯೆಯ ವಾಹನವು ಬಳಕೆಯಾಗಿತ್ತು  ಎಂಬುದನ್ನು ಪುಷ್ಠೀಕರಿಸಲು  ಪುರಾವೆಯೊಂದು ಲಭ್ಯವಾಗಿದೆ.

 

ಸರ್ಕಾರಿ ರಜೆ ದಿನವಾಗಿದ್ದ ಅಕ್ಟೋಬರ್‌ 24ರಂದು ಕುಮಾರಸ್ವಾಮಿ ಲೇಔಟ್‌ನ ಪೈಪ್‌ಲೈನ್‌ ರಸ್ತೆಯಲ್ಲಿ ನಿಂತಿದ್ದ ಕೆಎ-01-ಜಿ-5898 ಸಂಖ್ಯೆಯ ಸರ್ಕಾರಿ ವಾಹನದ ಚಾಲಕನನ್ನು  ಕರ್ನಾಟಕ ರಾಷ್ಟ್ರಸಮಿತಿಯ ಕಾರ್ಯಕರ್ತರೊಬ್ಬರು ಅನುಮಾನಗೊಂಡು  ಪ್ರಶ್ನಿಸಿದಾಗ ‘ಮುಖ್ಯಮಂತ್ರಿಯ ಕಾರ್ಯಾಲಯದಿಂದ ಕಳಿಸಲಾಗಿದೆ, ದೀಪಾವಳಿ ಗಿಫ್ಟ್‌ ಕೊಡಲು ಬಂದಿದ್ದೇನೆ’ ಎಂದು ಉತ್ತರಿಸಿದ್ದರು. ಆ ಕಾರಿನ ಸಂಖ್ಯೆಯೂ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್‌ ಕೃಷ್ಣ ಅವರಿಗೆ ಅಧಿಕೃತವಾಗಿ ಹಂಚಿಕೆಯಾದ ಇನ್ನೋವಾ ವಾಹನದ ಸಂಖ್ಯೆಯೂ ಒಂದೇ  ಆಗಿದೆ.   ಪತ್ರಕರ್ತರಿಗೆ  ಲಕ್ಷಗಟ್ಟಲೇ ನಗದು ಮತ್ತು ಉಡುಗೊರೆ ನೀಡಲು ಇದೇ ವಾಹನವನ್ನು  ಬಳಕೆ ಮಾಡಲಾಗಿತ್ತೇ ಎಂಬ ಅನುಮಾನಗಳಿಗೆ ಈಗ ಬಯಲಿಗೆ ಬಂದಿರುವ ವಾಹನ ಹಂಚಿಕೆಯ ಪತ್ರವು  ಮತ್ತಷ್ಟು ಬಲ ತಂದುಕೊಟ್ಟಂತಾಗಿದೆ.

 

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್‌ ಕೃಷ್ಣ ಅವರಿಗೆ ಈ ಹಿಂದೆ ಮುಖ್ಯಮಂತ್ರಿಯವರ ಮಾಧ್ಯಮ ಸಂಯೋಜಕರಿಗೆ ಒದಗಿಸಲಾದ ವಾಹನ ಸಂಖ್ಯೆ ಕೆಎ-01-ಜಿ-5898 ವಾಹನವನ್ನು ಒದಗಿಸಬೇಕು ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ (ರಾಜ್ಯ ಶಿಷ್ಟಾಚಾರ) ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಕುಮಾರಕೃಪ ಅತಿಥಿ ಗೃಹದ ವಿಶೇಷಾಧಿಕಾರಿಗಳಿಗೆ 2022ರ ಸೆ.29ರಂದು ನಿರ್ದೇಶಿಸಿದ್ದರು. ಅದರಂತೆ ಮೋಹನ್‌ ಕೃಷ್ಣ ಅವರಿಗೆ ಕೆಎ-01-ಜಿ-5898 ಸಂಖ್ಯೆಯ ವಾಹನವನ್ನು ಕುಮಾರಕೃಪಾ ಅತಿಥಿ ಗೃಹದ ವಿಶೇಷಾಧಿಕಾರಿಯವರು ಹಂಚಿಕೆ ಮಾಡಿದ್ದರು ಎಂಬುದು ಪತ್ರದಿಂದ ಗೊತ್ತಾಗಿದೆ.

 

ಸಿಎಂ ಮಾಧ್ಯಮ ಸಲಹೆಗಾರ ಮೋಹನ್‌ ಕೃಷ್ಣ ಅವರಿಗೆ ವಾಹನ ಹಂಚಿಕೆ ಕುರಿತು ನೀಡಿರುವ ನಿರ್ದೇಶನದ ಪತ್ರದ ಪ್ರತಿ

 

ಈ ಕುರಿತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್‌ ಕೃಷ್ಣ ಅವರಿಂದ ಪ್ರತಿಕ್ರಿಯೆ ಕೇಳಿ ‘ದಿ ಫೈಲ್‌’ 2022ರ ಅಕ್ಟೋಬರ್‌ 31ರ ರಾತ್ರಿ 8.29ಕ್ಕೆ ವಾಟ್ಸಾಪ್‌ ಮೂಲಕ ಸಂದೇಶವನ್ನು ಕಳಿಸಿತ್ತು.

 

‘ದಿ ಫೈಲ್‌’ ಕೇಳಿದ್ದ ಪ್ರಶ್ನೆಗಳಿವು

 

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪತ್ರಕರ್ತರಿಗೆ ಸ್ವೀಟ್‌ ಬಾಕ್ಸ್‌ ಮತ್ತು ಲಕ್ಷಾಂತರ ರುಪಾಯಿ ನಗದನ್ನು ಪತ್ರಕರ್ತರ ಕಚೇರಿ ಮತ್ತು ಪತ್ರಕರ್ತರ ನಿವಾಸಗಳಿಗೆ ತಲುಪಿಸಲು ತಮಗೆ ಹಂಚಿಕೆಯಾಗಿರುವ ಕೆಎ-01-ಜಿ-5898 ವಾಹನವನ್ನು ಬಳಕೆ ಮಾಡಲಾಗಿದೆ ಎಂಬ ಅರೋಪ ಸಂಬಂಧ ತಮ್ಮ ಪ್ರತಿಕ್ರಿಯೆ ಏನು?

 

ಕೆಎ-01-ಜಿ-5898 ಸಂಖ್ಯೆಯ ವಾಹನವು ಸರ್ಕಾರಿ ರಜೆ ದಿನವಾದ ಅಕ್ಟೋಬರ್‌ 24ರಂದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ಸಂಚರಿಸಿತ್ತು. ಈ ವಾಹನದ ಚಾಲಕ ದೀಪಾವಳಿ ಸ್ವೀಟ್‌ ಬಾಕ್ಸ್‌ನ್ನು ತಲುಪಿಸಲು ಬಂದಿದ್ದೇನೆ ಎಂದು ಕರ್ನಾಟಕ ರಾಷ್ಟ್ರಸಮಿತಿ ಕಾರ್ಯಕರ್ತರೊಬ್ಬರಿಗೆ ಹೇಳಿರುವುದು ಮೊಬೈಲ್‌ ವಿಡಿಯೋದಲ್ಲಿ ಸೆರೆಯಾಗಿದೆ. ನಿಮ್ಮ ನಿರ್ದೇಶನದ ಮೇರೆಗೆ ನಿಮಗೆ ಹಂಚಿಕೆಯಾದ ವಾಹನವನ್ನು ಇದಕ್ಕೆ ಬಳಕೆಯಾದಂತಲ್ಲವೇ? ಈ ಬಗ್ಗೆ ಪ್ರತಿಕ್ರಿಯೆ ನೀಡಬಹುದೇ?

 

ಈ ಪ್ರಶ್ನೆಗಳಿಗೆ ಮೋಹನ್‌ ಕೃಷ್ಣ ಅವರು ‘No it hasn’t been sent for that’ ಎಂದು ರಾತ್ರಿ 9.00ಕ್ಕೆ ವಾಟ್ಸಾಪ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೂ ಮೊದಲು ಮೋಹನ್‌ ಕೃಷ್ಣ ಅವರು ‘ದಿ ಫೈಲ್‌’ ಪ್ರತಿನಿಧಿ ಜೊತೆ ವಾಟ್ಸಾಪ್‌ ಮೂಲಕ ಮೂರ್ನಾಲ್ಕು ಬಾರಿ ಕರೆ ಮಾಡಿದರು. ಆದರೆ ಲಿಖಿತ ಉತ್ತರ ಬಯಸಿದ್ದರಿಂದ ಅವರ ಕರೆಯನ್ನು ಸ್ವೀಕರಿಸಲಿಲ್ಲ. ಇದಾದ ನಂತರ ಇನ್ನೂ ಒಂದಷ್ಟು ಪ್ರಶ್ನೆಗಳನ್ನು ಮೋಹನ್‌ ಕೃಷ್ಣ ಅವರಿಗೆ ಕೇಳಲಾಯಿತು.

 

ಹಾಗಾದರೇ ನಿಮಗೆ ಹಂಚಿಕೆಯಾಗಿದ್ದ ಕೆಎ-01-ಜಿ-5898 ವಾಹನವು ಅಕ್ಟೋಬರ್‌ 24ರಂದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ಇತ್ತು ಎಂಬುದು ವಿಡಿಯೋದಲ್ಲಿ ಸೆರೆಯಾಗಿದೆಯಲ್ಲ..

 

ಕರ್ನಾಟಕ ರಾಷ್ಟ್ರಸಮಿತಿಯ ಕಾರ್ಯಕರ್ತರ ಪ್ರಶ್ನೆಗಳಿಗೆ ನಿಮಗೆ ಹಂಚಿಕೆಯಾದ ವಾಹನದ ಚಾಲಕನು ದೀಪಾವಳಿ ಗಿಫ್ಟ್‌ ಕೊಡಲು ಬಂದಿದ್ದೇನೆ ಎಂದು ಹೇಳಿರುವುದು ವಿಡಿಯೋದಲ್ಲಿ ಇದೆಯಲ್ಲ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

 

ನೀವು ಸ್ವೀಟ್‌ ಬಾಕ್ಸ್‌ ತಲುಪಿಸಲು ಕಳಿಸಿಲ್ಲ ಎಂದಾದ ಮೇಲೆ ನಿಮ್ಮ ನಿರ್ದೇಶನವಿಲ್ಲದೇ ಆ ವಾಹನವು ಅಲ್ಲಿಗೆ ಹೋಗಿದ್ದಾದರೂ ಹೇಗೆ?

 

ಒಂದೊಮ್ಮೆ ನಿಮ್ಮ ನಿರ್ದೇಶನವಿಲ್ಲದೇ ಅನ್ಯರ ನಿರ್ದೇಶನದ ಮೇರೆಗೆ ವಾಹನ ಕೊಂಡೊಯ್ದಿರುವ ಚಾಲಕನ ಮೇಲೆ ನೀವು ಕ್ರಮ ಕೈಗೊಂಡಿದ್ದೀರಿಯೇ?

 

ಯಾವ ಉದ್ದೇಶಕ್ಕೆ ನಿಮಗೆ ಹಂಚಿಕೆಯಾಗಿದ್ದ ವಾಹನವನ್ನು ಕುಮಾರಸ್ವಾಮಿ ಲೇಔಟ್‌ಗೆ ಕಳಿಸಲಾಗಿತ್ತು?

 

ಈ ಮೇಲಿನ ಪ್ರಶ್ನೆಗಳಿಗೆ ಮೋಹನ್‌ ಕೃಷ್ಣ ಅವರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಅವರು ಪ್ರತಿಕ್ರಿಯೆ ನೀಡಿದ ನಂತರ ಇದೇ ವರದಿಯಲ್ಲಿ ಸೇರ್ಪಡೆಗೊಳಿಸಲಾಗುವುದು.

 

‘ಸರ್ಕಾರಿ ರಜೆ ದಿನವಾದ ಅಕ್ಟೋಬರ್‌ 24ರಂದು ಕುಮಾರಸ್ವಾಮಿ ಲೇಔಟ್‌ನಲ್ಲಿದ್ದ ವಾಹನದ ಚಾಲಕನನ್ನು ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಕಾರ್ಯಕರ್ತರು ಪ್ರಶ್ನಿಸಿದಾಗ ಆತ ನೀಡಿದ್ದ ಉತ್ತರ ಮತ್ತು ಈಗ ಆ ಕಾರು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಹಂಚಿಕೆಯಾಗಿದ್ದ ವಾಹನ ಎಂದು ಬಹಿರಂಗವಾಗಿರುವುದು ಒಂದಕ್ಕೊಂದು ಸಾಮ್ಯತೆ ಇದೆ. ಪತ್ರಕರ್ತರಿಗೆ ಲಂಚ ನೀಡಲಾಗಿತ್ತು ಎಂಬ ಆರೋಪಕ್ಕೆ ಇದೊಂದು ಪ್ರಬಲ ಸಾಕ್ಷ್ಯ. ಹೀಗಾಗಿ ಮಾಧ್ಯಮ ಸಲಹೆಗಾರ ಮೋಹನ್‌ ಕೃಷ್ಣ ಅವರನ್ನು ತಕ್ಷಣದಿಂದಲೇ ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ಅವರನ್ನು ತೀಕ್ಷ್ಣವಾಗಿ ವಿಚಾರಣೆಗೆ ಗುರಿಪಡಿಸಬೇಕು,’ ಎನ್ನುತ್ತಾರೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ಬಿ ಎಸ್‌ ಮಲ್ಲಿಕಾರ್ಜುನ್‌.

 

ಬೆಂಗಳೂರು ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ಟೋಬರ್‌ 24ರಂದು ಸರ್ಕಾರಿ ರಜೆ ದಿನದಂದು ಸಂಜೆ 5 ಗಂಟೆ ಸುಮಾರಿಗೆ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಹಂಚಿಕೆಯಾಗಿರುವ KA 01 G 5898 ಇನ್ನೋವಾ ವಾಹನದಲ್ಲಿ ಉಡುಗೊರೆ ತಲುಪಿಸುವ ಸಂದರ್ಭದಲ್ಲೇ ಕರ್ನಾಟಕ ರಾಷ್ಟ್ರಸಮಿತಿಯ ಪದಾಧಿಕಾರಿಗಳು ವಾಹನ ಚಾಲಕನನ್ನು ಪ್ರಶ್ನಿಸಿದ್ದರು. ಆ ವೇಳೆಯಲ್ಲಿ ವಾಹನದ ಚಾಲಕ ತಾನು ಮುಖ್ಯಮಂತ್ರಿಗಳ ಕಚೇರಿಯವನು, ದೀಪಾವಳಿ ಉಡುಗೊರೆ ತಲುಪಿಸಲು ಹೊರಟಿದ್ದೇನೆ ಎಂದು ಉತ್ತರ ನೀಡಿದ್ದ ಎಂಬುದು ವಿಡಿಯೋ ತುಣುಕನ್ನಾಧರಿಸಿ ‘ದಿ ಫೈಲ್‌’ 2022ರ ಅಕ್ಟೋಬರ್‌ 31ರಂದು ವರದಿ ಪ್ರಕಟಿಸಿತ್ತು.

ಲಂಚ; ಸಿಎಂ ಸಚಿವಾಲಯದ ವಾಹನದಲ್ಲೇ ಪತ್ರಕರ್ತರ ನಿವಾಸಕ್ಕೂ ನಗದು, ಉಡುಗೊರೆ ಸಾಗಿಸಲಾಗಿತ್ತೇ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿಯಿಂದ ಪತ್ರಕರ್ತರಿಗೆ ಲಂಚ ನೀಡಲಾಗಿದೆ ಎಂದು ಕೇಳಿಬಂದಿರುವ ಗಂಭೀರ ಆರೋಪದ ಕುರಿತು ತೀವ್ರ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಭ್ರಷ್ಟಾಚಾರದ ವಿರುದ್ದ ಕಾನೂನಾತ್ಮಕ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಜನಾಧಿಕಾರ ಸಂಘರ್ಷ ಪರಿಷತ್‌ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್‌ ಪಾಗೋಜಿ ಎಂಬುವರ ವಿರುದ್ಧ ಲೋಕಾಯುಕ್ತ ಮತ್ತು ಲೋಕಾಯುಕ್ತ ಪೊಲೀಸ್‌ ವಿಭಾಗದ ಎಡಿಜಿಪಿ ಅವರಿಗೆ ದೂರು ನೀಡಿರುವುದನ್ನು ಸ್ಮರಿಸಬಹುದು.

ಪತ್ರಕರ್ತರಿಗೆ ಲಂಚ; ಸಿಎಂ, ಮಾಧ್ಯಮ ಸಂಯೋಜಕರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ಜೆಎಸ್‌ಪಿ

‘ರಾಜ್ಯದ ಹಲವಾರು ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವರದಿಗಾರರಿಗೆ ಮುಖ್ಯಮಂತ್ರಿ ಕಚೇರಿಯು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ ಪಾಗೋಜಿ ಅವರ ಮೂಲಕ ನಗದು ಹಣವನ್ನು ನೀಡಲಾಗಿದೆ. ವಿಶ್ವಸನೀಯ ಮೂಲಗಳ ಪ್ರಕಾರ ಡೆಕ್ಕನ್‌ ಹೆರಾಲ್ಡ್‌ನ ಮುಖ್ಯ ವರದಿಗಾರ ಭರತ್‌ ಜೋಷಿ ಅವರಿಗೆ ತಲುಪಿಸಿದ್ದ ಸ್ವೀಟ್‌ ಬಾಕ್ಸ್‌ನಲ್ಲಿಯೇ 1 ಲಕ್ಷ ರು. ನಗದನ್ನು ತಲುಪಿಸಲಾಗಿತ್ತು. ಇದು ಅವರ ಗಮನಕ್ಕೆ ಬಂದ ನಂತರ ಡೆಕ್ಕನ್‌ ಹೆರಾಲ್ಡ್‌ನ ಸಂಪಾದಕರು ಮತ್ತು ಸಿಇಒ ಅವರ ಗಮನಕ್ಕೆ ತಂದು ಅವರ ಸೂಚನೆಯಂತೆ ಹಣವನ್ನು ಹಿಂದಿರುಗಿಸಿದ್ದಾರೆ,’ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ದೂರಿನಲ್ಲಿ ಪ್ರಸ್ತಾಪಿಸಿದೆ.

 

ಅಲ್ಲದೇ ‘ಪ್ರಜಾವಾಣಿಯ ಮುಖ್ಯ ವರದಿಗಾರ ವೈ ಜಿ ಜಗದೀಶ್‌ ಎಂಬುವರಿಗೂ ಹಣ ತಲುಪಿಸಲಾಗಿತ್ತು. ಈ ಬಗ್ಗೆ ಖುದ್ದು ವೈ ಜಿ ಜಗದೀಶ್‌ ಅವರೇ ಹಣ ಪಡೆದಿದ್ದನ್ನು ಖಚಿತಪಡಿಸಿ ವಾಟ್ಸಾಪ್‌ ಗ್ರೂಪ್‌ವೊಂದರಲ್ಲಿ ಖಚಿತಪಡಿಸಿದ್ದರು. ಇವರೂ ಸಹ ಸಂಸ್ಥೆಯ ಸಿಇಒ ಮತ್ತು ಸಂಪಾದಕರ ಗಮನಕ್ಕೆ ತಂದು ಹಣವನ್ನು ಹಿಂದಿರುಗಿಸಿದ್ದರು. ಅಲ್ಲದೇ ವೈ ಜಿ ಜಗದೀಶ್‌ ಅವರೇ ಹೇಳಿಕೊಂಡಂತೆ ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಸಂಸ್ಥೆಯಿಂದ ಖಂಡನಾ ಪತ್ರವನ್ನು ಬರೆಯಲಾಗಿದೆ. ಮತ್ತು ಇದಕ್ಕೆ ಮುಖ್ಯಮಂತ್ರಿ ಅವರು ಕ್ಷಮೆಯನ್ನೂ ಯಾಚಿಸಿದ್ದಾರೆ,’ ಎಂದೂ ದೂರಿನಲ್ಲಿ ಉಲ್ಲೇಖಿಸಿರುವುದನ್ನು ಸ್ಮರಿಸಬಹುದು.

 

‘ಈ ವಾಹನವು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ  ಮೋಹನ್ ಕೃಷ್ಣರವರಿಗೆ ಹಂಚಿಕೆ ಆಗಿರುವುದಾಗಿ  ಅಧಿಕೃತವಾಗಿ ತಿಳಿದು ಬಂದಿದೆ.  ಇದರಿಂದ ಮುಖ್ಯಮಂತ್ರಿಗಳ ಕಾರ್ಯಾಲಯವು ಪತ್ರಕರ್ತರಿಗೆ ದೀಪಾವಳಿ ಉಡುಗೊರೆ ಹೆಸರಿನಲ್ಲಿ ಹಣ ಹಂಚಿರುವ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವುದಕ್ಕೆ ತಾಳೆಯಾಗುತ್ತಿದೆ.  ಸರ್ಕಾರದ 40% ಲಂಚಗುಳಿತನವನ್ನು ಮುಚ್ಚಿ ಹಾಕಲು ಪತ್ರಕರ್ತರನ್ನು ಒಲಿಸಿಕೊಳ್ಳಲು ಮಾಡಿರುವ ಕೆಲಸವಾಗಿದೆ. ಇದು ಮುಖ್ಯಮಂತ್ರಿಗಳ ಸ್ಥಾನಕ್ಕೆ ಗೌರವ ತರುವ ಕೆಲಸವಲ್ಲ ಹಾಗೂ ನಾಡಿನ ಜನರಿಗೆ ಮತ್ತು ಪತ್ರಕರ್ತರಿಗೆ ಅವಮಾನ ಮಾಡುವ, ನಾಡಿನ ಗೌರವಕ್ಕೆ ಧಕ್ಕೆಯಾಗುವ ಕೆಲಸವನ್ನು ಮಾಡಿದ್ದಾರೆ. ಈ ಕೂಡಲೇ ತಮ್ಮ ಸ್ಥಾನವನ್ನು ತ್ಯಜಿಸಬೇಕು ಹಾಗೂ ಈ ನಿಟ್ಟಿನಲ್ಲಿ ಹಣದ ಮೂಲ ಮತ್ತು ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂದು ನ್ಯಾಯಾಂಗ ತನಿಖೆ ಮಾಡಲು ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಬೇಕು,’ ಎಂದು ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಕಾರ್ಯದರ್ಶಿ ವಿ ಆರ್‌ ಮರಾಠೆ ಅವರು ಆಗ್ರಹಿಸಿದ್ದಾರೆ.

the fil favicon

SUPPORT THE FILE

Latest News

Related Posts