ಬೆಂಗಳೂರು; ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆ ಯೋಜನೆಯನ್ನು ಇದೇ ವರ್ಷದಿಂದ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿ ಹಲವು ತಿಂಗಳುಗಳು ಕಳೆದಿದ್ದರೂ ಪ್ರಸಕ್ತ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್‌ಗಳು ಸಿಗುವ ಲಕ್ಷಣಗಳಿಲ್ಲ.
2023-24ನೇ ಸಾಲಿನಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬೈಸಿಕಲ್‌ಗಳನ್ನು ವಿತರಿಸಲು ಉದ್ದೇಶಿಸಿರುವ ಸರ್ಕಾರವು ಈ ಸಂಬಂಧ ಟೆಂಡರ್ ಪ್ರಕ್ರಿಯೆಗಳನ್ನು ನಡೆಸದಿರಲು ನಿರ್ಧಾರ ಮಾಡಿದೆ. ಈ ಯೋಜನೆಯನ್ನು ಟೆಂಡರ್ ಮೂಲಕ ಅನುಷ್ಠಾನಗೊಳಿಸದೇ ನೇರವಾಗಿ ಅರ್ಹ ಫಲಾನುಭವಿ ವಿದ್ಯಾರ್ಥಿಗಳ ಖಾತೆಗೆ ನೇರ ಹಣ ವರ್ಗಾವಣೆ (ಡಿಬಿಟಿ) ಮೂಲಕ ಅನುಷ್ಠಾನಗೊಳಿಸುವ ಬಗ್ಗೆ ಚಿಂತಿಸಿದೆ.
ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ 2022ರ ಅಕ್ಟೋಬರ್ 10ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಉಚಿತ ಬೈಸಿಕಲ್ ವಿತರಿಸುವ ಸಂಬಂಧ ಅನುಮತಿ ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು 2022ರ ಸೆಪ್ಟಂಬರ್ 7ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರವನ್ನು ಪರಿಶೀಲಿಸಿರುವ ಸರ್ಕಾರವು ‘ ಸರ್ಕಾರವು ಪ್ರಾಯೋಜಿಸುವ ಎಲ್ಲಾ ಯೋಜನೆಗಳಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲದೇ ಫಲಾನುಭವಿಗಳಿಗೆ ನೇರವಾಗಿ ತಲುಪಿಸಲು ಉದ್ದೇಶಿಸಲಾಗಿದೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ಡಿಬಿಟಿ ಮೂಲಕ ಅನುಷ್ಠಾನಗೊಳಿಸಬೇಕಿದೆ. ಈ ನಿಟ್ಟಿನಲ್ಲಿ 2023-24ನೇ ಸಾಲಿನಲ್ಲಿ ಉಚಿತ ಬೈಸಿಕಲ್ ವಿತರಣೆ ಯೋಜನೆಯನ್ನು ಟೆಂಡರ್ ಮೂಲಕ ಅನುಷ್ಠಾನಗೊಳಿಸದೇ ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ (ಡಿಬಿಟಿ) ಅನುಷ್ಠಾನಗೊಳಿಸಲು ಉಂಟಾಗುವ ಸಾಧಕಬಾಧಕಗಳ ಕುರಿತು ಪರಿಶೀಲಿಸಿ ನಿರ್ದಿಷ್ಟ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸಬೇಕು,’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಶಾಲಾ ವಿದ್ಯಾರ್ಥಿಗಳ ಕಲಿಕೆ ಮೇಲೆ ನೇರ ಪರಿಣಾಮ ಬೀರುವುದಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಬೈಸಿಕಲ್ ನೀಡುವ ಯೋಜನೆ ಪ್ರಸ್ತಾವನೆಯನ್ನೇ ಆರ್ಥಿಕ ಇಲಾಖೆಯು ಈಗಾಗಲೇ ತಿರಸ್ಕರಿಸಿದೆ. ವಿಶೇಷವೆಂದರೆ ಶಿಕ್ಷಣ ಇಲಾಖೆಯ ಪ್ರಸ್ತಾವನೆ ತಿರಸ್ಕರಿಸಿರುವ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲ ತಿಂಗಳ ಹಿಂದೆಯೇ ಅನುಮೋದಿಸಿದ್ದರು.
‘ಬೈಸಿಕಲ್‌ಗಳನ್ನು ನೀಡುವುದರಿಂದ ಕಲಿಕೆಯ ಫಲಿತಾಂಶಗಳ ಮೇಲೆ ಪ್ರಭಾವ ಬೀರಿದೆಯೇ ಎಂಬ ಬಗ್ಗೆ ಸ್ಪಷ್ಟ ಪುರಾವೆಗಳಿಲ್ಲ. ರಾಜ್ಯಮಟ್ಟದಲ್ಲಿ 8ನೇ ತರಗತಿಯ (ಶೇ.25) ದಾಖಲಾತಿಯಲ್ಲಿ ಲಿಂಗ ಅಂತರವು ಉಳಿದಿರುವುದು ಕಂಡುಬಂದಿದೆ. ಸೈಕಲ್ ವಿತರಣೆ ಮಾಡಿದರೂ ಹುಡುಗ ಮತ್ತು ಹುಡುಗಿಯರ ಮಾಧ್ಯಮಿಕ ಶಾಲೆ ದಾಖಲಾತಿಯನ್ನು ಸಮನಾಗಿ ತರಲು ಸಾಧ್ಯವಾಗಲಿಲ್ಲ ಎಂದು ಸೂಚಿಸುತ್ತದೆ. ಪರೀಕ್ಷೆಯ ಫಲಿತಾಂಶಗಳಲ್ಲಿ ಕೇವಲ ಶೇ. 3ರಷ್ಟು ಏರಿಕೆಯಾಗಿರುವದುರಿಂದ ಕಲಿಕೆಯ ಫಲಿತಾಂಶಗಳ ಮೇಲೆ ಯಾವುದೇ ಪರಿಣಾಮ ಬೀರಿರುವುದಿಲ್ಲ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು 2021ರ ನವೆಂಬರ್‌ನಲ್ಲಿ ವರದಿ ನೀಡಿತ್ತು. ಮೌಲ್ಯಮಾಪನ ವರದಿ ಆಧರಿಸಿ ಆರ್ಥಿಕ ಇಲಾಖೆಯು ಈ ಅಭಿಪ್ರಾಯವನ್ನು ನೀಡಿತ್ತು.
2022-23ನೇ ಸಾಲಿನಿಂದ ಮುಂದಿನ ಮೂರು ವರ್ಷಕ್ಕೆ ಬೈಸಿಕಲ್ ವಿತರಣೆ ಮಾಡುವ ಸಂಬಂಧ ತಲಾ ವರ್ಷದಲ್ಲಿ 6 ಲಕ್ಷ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 250 ಕೋಟಿ ರು.ನಂತೆ 750 ಕೋಟಿ ರು. ವೆಚ್ಚವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಅಂದಾಜಿಸಿತ್ತು. ಇದೇ ಪ್ರಸ್ತಾವನೆಯನ್ನು ಬಜೆಟ್‌ನಲ್ಲಿ ಘೋಷಿಸಲು ಸಲ್ಲಿಸಿತ್ತು. ಆದರೆ ಬಜೆಟ್‌ನಲ್ಲಿ ಈ ಯೋಜನೆ ಘೋಷಣೆಯಾಗಿರಲಿಲ್ಲ.
2006-07ರ ಆರಂಭದಿಂದ 2017-18ರವರೆಗೆ ಈ ಯೋಜನೆಯು ಸುಮಾರು 1,800 ಕೋಟಿ ರು.ಗಳ ವೆಚ್ಚದಲ್ಲಿ 62 ಲಕ್ಷ ಸೈಕಲ್‌ಗಳನ್ನು ವಿತರಿಸಿದೆ. ಈ ಯೋಜನೆಯು 2006-07ರಲ್ಲಿ 4.2 ಲಕ್ಷ ಬೈಸಿಕಲ್‌ಗಳಿಗೆ 85 ಕೋಟಿ ರು., 2014-15ರಲ್ಲಿ ಸುಮಾರು 5.5 ಲಕ್ಷ ಬೈಸಿಕಲ್‌ಗಳಿಗೆ 180 ಕೋಟಿ ರು. ವ್ಯಯಿಸಿದೆ. 2017-18ರಲ್ಲಿ 172 ಕೋಟಿ ರು. ವೆಚ್ಚದಲ್ಲಿ 5.5 ಲಕ್ಷ ಬೈಸಿಕಲ್ ತಲುಪಿಸಿದೆ ಎಂಬುದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ವರದಿಯಿಂದ ತಿಳಿದು ಬಂದಿದೆ.
ಕಳೆದ 5 ವರ್ಷಗಳಲ್ಲಿ ಕಲ್ಬುರ್ಗಿ ವಿಭಾಗದ ಯಾದಗಿರಿಯಲ್ಲಿ 69, 572, ಕಲ್ಬುರ್ಗಿಯಲ್ಲಿ 1,31,759, ಬೆಳಗಾವಿ ವಿಭಾಗದ ಉತ್ತರ ಕನ್ನಡದಲ್ಲಿ 36,344, ಬೆಳಗಾವಿಯಲ್ಲಿ 1,71, 128, ಮೈಸೂರು ವಿಭಾಗದ ಕೊಡಗಿನಲ್ಲಿ 23,328, ಮೈಸೂರಿನಲ್ಲಿ 1,03,548, , ಬೆಂಗಳೂರು ವಿಭಾಗದ ಬೆಂಗಳೂರಿನಲ್ಲಿ 32,655, ಚಿತ್ರದುರ್ಗ ಜಿಲ್ಲೆಯಲ್ಲಿ 92,466 ಬೈಸಿಕಲ್‌ಗಳನ್ನು ವಿತರಿಸಲಾಗಿದೆ.
ಪ್ರೌಢಶಾಲಾ ಮಟ್ಟದಲ್ಲಿ ಶಾಲಾ ಹಾಜರಾತಿಯನ್ನು ಸುಧಾರಿಸುವ ಉದ್ದೇಶದಿಂದ ಹಾಗೂ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಉಚಿತವಾಗಿ ಬೈಸಿಕಲ್ ಒದಗಿಸುವ ಯೋಜನೆಯನ್ನು 2006-07ರಿಂದ ಪರಿಚಯಿಸಲಾಗಿದೆ. ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶದ ಮಾಧ್ಯಮಿಕ ಶಾಲೆಯ ದಾಖಲಾತಿಯನ್ನು ಸುಧಾರಿಸುವುದು ಯೋಜನೆಯ ಮುಖ್ಯ ಉದ್ಧೇಶವಾಗಿದೆ.